ಚುನಾವಣಾ ಬಾಂಡ್ | ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ 7 ಕಂಪನಿಗಳು ಬಾಂಡ್‌ ಖರೀದಿಸಿವೆ

Date:

‍ಔಭಾರತದಲ್ಲಿನ 35 ಔಷಧ ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಸುಮಾರು 1,000 ಕೋಟಿ ರೂ. ದೇಣಿಗೆ ನೀಡಿವೆ. ಇದು ಚುನಾವಣಾ ಆಯೋಗವು ಮಾರ್ಚ್ 14 ರಂದು ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ಬಹಿರಂಗವಾಗಿದೆ. ವಿಶೇಷ ಅಂದ್ರೆ, ಇವುಗಳಲ್ಲಿ ಕನಿಷ್ಠ 7 ಕಂಪನಿಗಳು ಕಳಪೆ ಗುಣಮಟ್ಟದ ಔಷಧ ತಯಾರಿಕೆಯಿಂದ ತನಿಖೆಗೆ ಗುರಿಯಾದ ಸಮಯದಲ್ಲಿ ಬಾಂಡ್‌ಗಳನ್ನು ಖರೀದಿಸಿವೆ.

ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯಿದೆ-1940ರ ಅಡಿಯಲ್ಲಿ ಔಷಧ ಕಂಪನಿಗಳನ್ನು ನಿಯಂತ್ರಿಸಲಾಗುತ್ತದೆ.  ಕಾಯ್ದೆಯು ಔಷಧ ಉತ್ಪಾದನಾ ಘಟಕಗಳು ಮತ್ತು ಮಾರುಕಟ್ಟೆಯಲ್ಲಿ ಮಾರಾಟವಾಗುವ ಔಷಧಿಗಳ ಗುಣಮಟ್ಟವನ್ನು ಪರೀಕ್ಷಿಸಲು ‘ಸ್ಟೇಟ್ ಕಂಟ್ರೋಲ್ಡ್‌ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ಸ್‌ಗೆ ಅಧಿಕಾರ ನೀಡುತ್ತದೆ.

ಯಾವುದೇ ಕಂಪನಿ ಔಷಧಗಳ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ, ಅವರಿಗೆ ಆಯಾ ರಾಜ್ಯಗಳ ಆಹಾರ ಮತ್ತು ಔಷಧ ಆಡಳಿತವು ನೋಟಿಸ್‌ ಕಳಿಸುತ್ತದೆ. ಆದರೆ, ಆದರೆ, ಕಂಪನಿಯ ಅಮಾನತು, ಪರವಾಗನಿ ರದ್ದುಗೊಳಿಸುವಂತಹ ಶಿಕ್ಷಾರ್ಹ ಕ್ರಮಗಳನ್ನು ಕಂಪನಿಯ ಕಾರ್ಖಾನೆ ಇರುವ ರಾಜ್ಯಗಳು ಮಾತ್ರ ತೆಗೆದುಕೊಳ್ಳಬಹುದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ರೀತಿಯಲ್ಲಿ ಔಷಧಗಳ ಪರೀಕ್ಷೆಯಲ್ಲಿ ವಿಫಲವಾದ ಕಂಪನಿಗಳು ಕೂಡ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ. ಇದು ಮೇಲ್ನೋಟಕ್ಕೆ ತಮ್ಮ ವಿರುದ್ಧದ ಕ್ರಮಗಳಿಂದ ತಪ್ಪಿಸಿಕೊಳ್ಳಲು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿವೆ ಎಂಬಂತೆ ಕಂಡುಬರುತ್ತವೆ.

ಅದೇನೇ ಇರಲಿ, ಔಷಧ ಕಂಪನಿಗಳು ರಾಜಕೀಯ ಪಕ್ಷಗಳಿಗೆ ಹೆಚ್ಚಿನ ದೇಣಿಗೆ ನೀಡುತ್ತಿರುವುದು ಗಮನಾರ್ಹವಾಗಿದೆ ಎಂದು ತಜ್ಞರು ಹೇಳುತ್ತಾರೆ. “ಔಷಧ ಕಂಪನಿಗಳು ರಾಜಕೀಯ ಪಕ್ಷಗಳಿಗೆ ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ. ಆದರೆ, ಅವರು ಪ್ರಜಾಪ್ರಭುತ್ವ, ಚುನಾವಣೆ ಅಥವಾ ದಾನದ ಮೇಲಿನ ಪ್ರೀತಿಯಿಂದ ಇದನ್ನು ಮಾಡಿದ್ದಾರೆಂದು ಯಾರೂ ನಂಬುವುದಿಲ್ಲ ” ಎಂದು ಆಲ್ ಇಂಡಿಯಾ ಡ್ರಗ್ ಆಕ್ಷನ್ ನೆಟ್‌ವರ್ಕ್‌ನ ಭಾಗವಾಗಿರುವ ಕಾರ್ಯಕರ್ತ ಎಸ್ ಶ್ರೀನಿವಾಸನ್ ಹೇಳಿದ್ದಾರೆ.

ಬಾಂಡ್‌ಗಳನ್ನು ಖರೀದಿಸಿದ ವರ್ಷಗಳಲ್ಲಿ ರಾಜ್ಯ ಆಹಾರ ಮತ್ತು ಔಷಧ ಆಡಳಿತದಿಂದ ನೋಟಿಸ್‌ಗಳನ್ನು ಪಡೆದ ಏಳು ಕಂಪನಿಗಳ ಪಟ್ಟಿ ಇಲ್ಲಿದೆ.

ಹೆಟೆರೊ ಲ್ಯಾಬ್ಸ್ ಅಂಡ್‌ ಹೆಟೆರೊ ಹೆಲ್ತ್‌ಕೇರ್: ಹೈದರಾಬಾದ್‌ ಮೂಲದ ಈ ಕಂಪನಿ 2022ರ ಏಪ್ರಿಲ್‌ನಲ್ಲಿ 39 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಬಾಂಡ್‌ ಖರೀದಿಗೂ ಮುಂಚಿನ 10 ತಿಂಗಳುಗಳಲ್ಲಿ ಈ ಕಂಪನಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತವು ಆರು ನೋಟಿಸ್‌ಗಳನ್ನು ನೀಡಿತ್ತು ಎಂಬುದು ಗಮನಾರ್ಹ.

ಆರು ನೋಟಿಸ್‌ಗಳಲ್ಲಿ ಕನಿಷ್ಠ ಮೂರು ಕೋವಿಡ್ -19 ವಿರುದ್ಧ ನೀಡಲಾಗುತ್ತಿದ್ದ ರೆಮ್‌ಡೆಸಿವಿರ್ ಎಂಬ ಆಂಟಿವೈರಲ್ ಔಷಧಿಗೆ ಸಂಬಂಧಿಸಿವೆ. ಈ ಔಷಧಿಯು ಸಾಂಕ್ರಾಮಿಕ ಸಮಯದಲ್ಲಿ ಕಂಪನಿ ತನ್ನ ವ್ಯವಹಾರವನ್ನು ವಿಸ್ತರಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದೆ.

‘ಮಹಾರಾಷ್ಟ್ರ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್’ ನಡೆಸಿದ ಪ್ರಯೋಗಾಲಯ ಪರೀಕ್ಷೆಯಲ್ಲಿ ರೆಮೆಡಿಸಿವಿರ್ ಮಾದರಿಯಲ್ಲಿ ಸ್ಪಷ್ಟ ದ್ರವದ ಬದಲಿಗೆ ಹಳದಿ ಬಣ್ಣದ ದ್ರವ ಬಳಸಿರುವುದು ಕಂಡುಬಂದಿದೆ. ಈ ಬಗ್ಗೆ 2021ರ ಜುಲೈನಲ್ಲಿ ನೋಟಿಸ್‌ ನೀಡಲಾಗಿತ್ತು. ಎರಡನೇ ಮಾದರಿಯು ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ಔಷಧವನ್ನು ಹೊಂದಿತ್ತು ಎಂಬ ಕಾರಣಕ್ಕೆ 2021ರ ಅಕ್ಟೋಬರ್‌ನಲ್ಲಿ ಮತ್ತೊಂದು ನೋಟಿಸ್ ನೀಡಲಾಗಿತ್ತು. ರಿಮೆಡೆಸಿವಿರ್‌ನ ಮೂರನೇ ಮಾದರಿಯಲ್ಲಿ ‘ಪ್ರಮಾಣಿತ ಗುಣಮಟ್ಟ ಹೊಂದಿಲ್ಲ’ ಎಂಬುದು ಕಂಡುಬಂದಿತ್ತು. ಹೀಗಾಗಿ, 2021ರ ಡಿಸೆಂಬರ್‌ನಲ್ಲಿ ಮತ್ತೆ ನೋಟಿಸ್ ನೀಡಲಾಗಿತ್ತು.

ಔಷಧ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಕಂಪನಿಯ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಬಹುದು ಎಂದು ಮಹಾರಾಷ್ಟ್ರದ ಔಷಧಗಳ ಮಾಜಿ ಜಂಟಿ ಆಯುಕ್ತ ಓಂಪ್ರಕಾಶ್ ಸಾಧ್ವನಿ ಹೇಳಿದ್ದಾರೆ. ಆದರೆ, ‘ತೆಲಂಗಾಣ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌’ ಈ ಹೆಟೆರೊ ಕಂಪನಿ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ.

2021ರಲ್ಲಿ ಹೆಟೆರೊದ ಇತರ ಎರಡು ಉತ್ಪನ್ನಗಳು ಸಹ ಗುಣಮಟ್ಟ ಹೊಂದಿಲ್ಲ: ಆಂಟಿಫಂಗಲ್ ಔಷಧಿ, ಇಟ್ಬೋರ್ ಕ್ಯಾಪ್ಸುಲ್ ಮತ್ತು ಮೊನೊಸೆಫ್ ಇವುಗಳನ್ನು ಬ್ಯಾಕ್ಟೀರಿಯಾದ ಸೋಂಕಿಗೆ ಬಳಸಲಾಗುತ್ತದೆ.

ಇಷ್ಟೊಂದು ಉಲ್ಲಂಘನೆಗಳನ್ನು ಮಾಡಿದ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರೆ ಅರ್ಥವೇನು? ಅಂದಹಾಗೆ, ಈ ಕಂಪನಿ, 2022ರಲ್ಲಿ 39 ಕೋಟಿ ರೂ. ಮೌಲ್ಯದ ಬಾಂಡ್‌ ಖರೀದಿಸಿರುವ ಜೊತೆಗೆ, 2023ರ ಜುಲೈನಲ್ಲಿ 10 ಕೋಟಿ ರೂ. ಹಾಗೂ 2023ರ ಅಕ್ಟೋಬರ್‌ನಲ್ಲಿ 11 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. (ಒಟ್ಟು 60 ಕೋಟಿ ರೂ.)

ಟೊರೆಂಟ್ ಫಾರ್ಮಾ: ಗುಜರಾತ್ ಮೂಲದ ಈ ಕಂಪನಿ 2019ರ ಮೇನಿಂದ 2024ರ ಜನವರಿ ನಡುವೆ 77 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

ಈ ಕಂಪನಿಯು ತನ್ನ ‘ಆಂಟಿಪ್ಲೇಟ್‌ಲೆಟ್ ಮೆಡಿಸಿನ್ ಡಿಪ್ಲಾಟ್-150 ಸ್ಯಾಲಿಸಿಲಿಕ್ ಆಸಿಡ್’ ಪರೀಕ್ಷೆಯಲ್ಲಿ ವಿಫಲವಾಗಿದೆ. ಈ ಔಷಧಿಯು ಕಳಪೆ ಗುಣಮಟ್ಟದ್ದು ಎಂದು 2018ರಲ್ಲಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತವು ಘೋಷಿಸಿದೆ.

ಅಲ್ಲದೆ, ಈ ಕಂಪನಿಯ ಪುನರಾವರ್ತಿತ ಕಳಪೆ ಗುಣಮಟ್ಟದ ಔಷಧಿ ತಯಾರಿಕೆ ಕಾರಣಕ್ಕಾಗಿ 2019ರ ಅಕ್ಟೋಬರ್‌ನಲ್ಲಿ ಕಂಪನಿಗೆ ಯುನೈಟೆಡ್ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಎಚ್ಚರಿಕೆಯನ್ನೂ ನೀಡಿತ್ತು. ಇಂತಹ ಎಚ್ಚರಿಕೆಗಳು ಬಂದಾಗ ಭಾರತೀಯ ಅಧಿಕಾರಿಗಳು ಕಂಪನಿಯನ್ನು ತಪಾಸಣೆ ಮಾಡಿ, ಪರವಾನಗಿಯನ್ನು ಅಮಾನತು ಮಾಡಬಹುದು. ಆದರೆ, ಗುಜರಾತ್ ಸರ್ಕಾರ ಔಷಧ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

2019ರ ಸೆಪ್ಟೆಂಬರ್‌ನಲ್ಲಿ, ರಕ್ತದೊತ್ತಡವನ್ನು ಕಡಿಮೆ ಮಾಡಲು ಬಳಸಲಾಗುವ ಟೊರೆಂಟ್ ಫಾರ್ಮಾದ ಔಷಧ ‘ಲೋಸರ್ ಎಚ್’ ಕಳಪೆ ಗುಣಮಟ್ಟದ್ದಾಗಿದೆ ಎಂದು ಗುಜರಾತ್ ಆಹಾರ ಮತ್ತು ಔಷಧ ಆಡಳಿತವು ಘೋಷಿಸಿತ್ತು. ಅಲ್ಲದೆ, 2021ರ ಡಿಸೆಂಬರ್‌ನಲ್ಲಿ ಇದೇ ಕಂಪನಿಯ ಮತ್ತೊಂದು ಔಷಧಿ ‘ನಿಕೋರಾನ್ ಎಲ್ವಿ’ (ಹೃದ್ರೋಗಗಳ ಚಿಕಿತ್ಸೆಗೆ ಬಳಕೆ) ಕೂಡ ಕಳಪೆಯಾಗಿದೆ ಎಂದು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತವು ಹೇಳಿತ್ತು.

ಇನ್ನು, 2023ರ ಫೆಬ್ರವರಿಯಲ್ಲಿ, ಅತಿಸಾರಕ್ಕೆ ಚಿಕಿತ್ಸೆ ನೀಡಲು ಬಳಸಲಾಗುವ ಇದೇ ಕಂಪನಿಯ ‘ಲೋಪಮೈಡ್ ಔಷಧ’ವು ಪರೀಕ್ಷೆಯಲ್ಲಿ ವಿಫಲವಾಗಿತ್ತು. ಆ ಔಷಧ ಕೂಡ ಕಳಪೆ ಗುಣಮಟ್ಟದ್ದು ಎಂದು ಘೋಷಿಸಲಾಗಿತ್ತು.

ಈ ಕಂಪನಿಯು 2019ರ ಮೇ ಮತ್ತು ಅಕ್ಟೋಬರ್‌ನಲ್ಲಿ 12.5 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಅಲ್ಲದೆ, 2021ರ ಏಪ್ರಿಲ್‌ನಲ್ಲಿ 7.50 ಕೋಟಿ ರೂ., 2022ರ ಜನವರಿ ಮತ್ತು ಅಕ್ಟೋಬರ್‌ನಲ್ಲಿ 25 ಕೋಟಿ ರೂ., 2023ರ ಅಕ್ಟೋಬರ್‌ನಲ್ಲಿ 7 ಕೋಟಿ ರೂ. ಹಾಗೂ 2024ರ ಜನವರಿಯಲ್ಲಿ 25.5 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. (ಒಟ್ಟು 77.5 ಕೋಟಿ ರೂ.)

ಝೈಡಸ್ ಹೆಲ್ತ್‌ಕೇರ್: ಗುಜರಾತ್ ಮೂಲದ ಈ ಕಂಪನಿಯು 2022 ಮತ್ತು 2023ರ ನಡುವೆ 29 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

ಈ ಕಂಪನಿ ತಯಾರಿದ್ದ ‘ರೆಮ್‌ಡೆಸಿವಿರ್’ ಔಷಧಿಗಳ ಬ್ಯಾಚ್‌ನಲ್ಲಿ ಬ್ಯಾಕ್ಟೀರಿಯಾ ಎಂಡೋಟಾಕ್ಸಿನ್ ಕುರುಹುಗಳು ಕಂಡುಬಂದಿವೆ. ಈ ಔಷಧಿ ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂದು 2021ರಲ್ಲಿ ‘ಬಿಹಾರ ಡ್ರಗ್ ರೆಗ್ಯುಲೇಟರ್’ ಘೋಷಿಸಿತ್ತು. ಈ ಔಷಧಿ ಬಳಸಿದ ಹಲವಾರು ರೋಗಿಗಳು ಪ್ರತಿಕೂಲ ಪರಿಣಾಮ ಅನುಭವಿಸಿದ್ದಾರೆ ಎಂದು ವರದಿಯಾಗಿತ್ತು.

ಆದರೆ, ಗುಜರಾತ್ ಡ್ರಗ್ ರೆಗ್ಯುಲೇಟರ್ ಹೆಚ್ಚಿನ ಪರೀಕ್ಷೆಗಾಗಿ ಈ ಬ್ಯಾಚ್‌ಗಳ ಮಾದರಿಗಳನ್ನು ಸಂಗ್ರಹಿಸಲಿಲ್ಲ. ಮಾತ್ರವಲ್ಲದೆ, ಕಂಪನಿಯ ವಿರುದ್ಧ ಯಾವುದೇ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ.

ಗ್ಲೆನ್‌ಮಾರ್ಕ್: 2022 ಮತ್ತು 2023ರ ನಡುವೆ ಈ ಕಂಪನಿಯು ಕಳಪೆ ಗುಣಮಟ್ಟದ ಔಷಧಿಗಳ ಕಾರಣಕ್ಕಾಗಿ 5 ನೋಟಿಸ್‌ಗಳನ್ನು ಪಡೆದಿದೆ. ಇವುಗಳಲ್ಲಿ ನಾಲ್ಕನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧಗಳ ಆಡಳಿತವು ಕಂಪನಿಯ ಉತ್ಪಾದಿಸಿದ್ದ ರಕ್ತದೊತ್ತಡವನ್ನು ನಿಯಂತ್ರಿಸುವ ಔಷಧಿ ‘ಟೆಲ್ಮಾ’ವನ್ನು ಕಳಪೆ ಗುಣಮಟ್ಟದ್ದು ಎಂದು ಘೋಷಿಸಿ ನೋಟಿಸ್‌ ಕೊಟ್ಟಿದೆ.

ಈ ಕಂಪನಿಯು ಅದೇ ವರ್ಷದ (2022) ನವೆಂಬರ್‌ನಲ್ಲಿ 9.75 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.

ಸಿಪ್ಲಾ: 2018 ಮತ್ತು 2022ರ ನಡುವೆ ಸಿಪ್ಲಾ ತನ್ನ ಕಳಪೆ ಗುಣಮಟ್ಟದ ಔಷಧಿಗಳಿಗಾಗಿ ನಾಲ್ಕು ಶೋಕಾಸ್ ನೋಟಿಸ್‌ಗಳನ್ನು ಸ್ವೀಕರಿಸಿದೆ. ಅಲ್ಲದೆ, 2019 ರಿಂದ ಕಂಪನಿಯು ರೂ. 39.2 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.

2018ರ ಆಗಸ್ಟ್‌ನಲ್ಲಿ ಕಂಪನಿಯ ಉತ್ಪನ್ನ ‘ಆರ್‌ಸಿ’ ಕೆಮ್ಮು ಸಿರಪ್ ಕಳಪೆಯಾಗಿದೆ ಎಂದು ಘೋಷಿಸಲ್ಪಟ್ಟಿತ್ತು. ಅದರಮ ನಂತರದ ವರ್ಷವೇ (2019) 14 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿತ್ತು.

2021ರ ಜುಲೈನಲ್ಲಿ ಕಂಪನಿಯ ರೆಮೆಡಿಸಿವಿರ್ ಔಷಧಿ ‘ಸಿಪ್ರೇಮಿ’ ಕಳಪೆಯಾಗಿದೆ ಎಂದು ಎರಡು ಬಾರಿ ನೋಟಿಸ್‌ ಪಡೆದಿದೆ. ಹೆಟೆರೊದಂತೆಯೇ, ‘ಸಿಪ್ರೆಮಿ’ಯು ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ರೆಮೆಡಿಸಿವಿರ್ ಅನ್ನು ಹೊಂದಿದ್ದಾಗಿ ಕಂಡುಬಂದಿದೆ. 2022ರ ನವೆಂಬರ್‌ನಲ್ಲಿ ಸಿಪ್ಲಾ 25.2 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. (ಒಟ್ಟು 78.4 ಕೋಟಿ ರೂ.)

IPCA ಲ್ಯಾಬೊರೇಟರೀಸ್ ಲಿಮಿಟೆಡ್: ಡೆಹ್ರಾಡೂನ್ ಮೂಲದ ಈ ಕಂಪನಿ 2022ರ ನವೆಂಬರ್ ಮತ್ತು 2023 ಅಕ್ಟೋಬರ್ ನಡುವೆ 13.5 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.

2018ರ ಅಕ್ಟೋಬರ್‌ನಲ್ಲಿ ಕಂಪನಿಯ ಔಷಧ ‘ಲಾರಿಯಾಗೊ’ ಅಗತ್ಯಕ್ಕಿಂತ ಕಡಿಮೆ ಕ್ಲೋರೊಕ್ವಿನ್ ಫಾಸ್ಫೇಟ್ ಮಟ್ಟವನ್ನು ಹೊಂದಿತ್ತು ಮತ್ತು ಕಳಪೆ ಗುಣಮಟ್ಟದ್ದಾಗಿದೆ ಎಂದು ಕಂಡುಬಂದಿದೆ. ಕಂಪನಿಯ ಔಷಧವು ಬಳಕೆಗೆ ಯೋಗ್ಯವಲ್ಲ ಎಂದು ಮುಂಬೈ ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ಘೋಷಿಸಿತ್ತು. ಅಲ್ಲದೆ, 2020ರಲ್ಲಿ, ಕಂಪನಿಯ ‘Enapril-5’ ಟ್ಯಾಬ್ಲೆಟ್ ಕೂಡ ಕಳಪೆ ಮಟ್ಟದ್ದು ಎಂದು ಮಹಾರಾಷ್ಟ್ರ ಅಡ್ಮಿನಿಸ್ಟ್ರೇಷನ್ ಘೋಷಿಸಿತ್ತು.

ಈ ಕಂಪನಿ 2022ರ ಅಕ್ಟೋಬರ್‌ನಲ್ಲಿ 20 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ.

ನಾವು ಗಮನಿಸಬೇಕಾದ ಕೆಲ ಅಂಶಗಳು
ಇತ್ತೀಚಿನ ವರ್ಷಗಳಲ್ಲಿ, ಹಲವಾರು ದೇಶಗಳಲ್ಲಿ ಸಾವುಗಳು ಮತ್ತು ಸೋಂಕುಗಳಿಗೆ ಭಾರತದಲ್ಲಿ ಉತ್ಪಾದಿಸಿದ ಕೆಮ್ಮಿನ ಸಿರಪ್‌ಗಳು ಮತ್ತು ಕಣ್ಣಿನ ಮುಲಾಮುಗಳು ಕಾರಣವಾಗಿವೆ ಎಂಬುದು ಚರ್ಚೆಯಲ್ಲಿದೆ. ಹಲವು ದೇಶಗಳು ಭಾರತೀಯ ಮೂಲಕ ಕೆಲ ಔಷಧಿಗಳ ಖರೀದಿಯನ್ನು ಸ್ಥಗಿತಗೊಳಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯಂತಹ ಅಂತರರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಕೆಗಳನ್ನು ನೀಡಿವೆ. ಆದರೆ, ಭಾರತೀಯ ಅಧಿಕಾರಿಗಳ ಪ್ರತಿಕ್ರಿಯೆ ಮಾತ್ರ ನಿರ್ಲಕ್ಷ್ಯತನದಿಂದ ಕೂಡಿದೆ.

ಆದರೆ, ಔಷಧೀಯ ಉದ್ಯಮವು ರಾಜಕೀಯ ಪಕ್ಷಗಳಿಗೆ ಧನಸಹಾಯ ನೀಡುವ ಪರಿಣಾಮಗಳು ಔಷಧ ನಿಯಂತ್ರಣ ಕ್ರಮವನ್ನು ಮೀರಿವೆ.

ಭಾರತದಲ್ಲಿ ಔಷಧ ನಿಯಂತ್ರಕ ಕಾನೂನುಗಳನ್ನು ವ್ಯಾಪಕವಾಗಿ ಸಂಶೋಧಿಸಿರುವ ಪ್ರಶಾಂತ್ ರೆಡ್ಡಿ, “ಔಷಧೀಯ ವಲಯವು ರಾಜಕೀಯ ದೇಣಿಗೆ ನೀಡುವುದು ಕಾನೂನು ಚೌಕಟ್ಟಿನ ಮೇಲೆ ಪ್ರಭಾವ ಬೀರುತ್ತವೆ. ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕಾನೂನುಗಳು ಗುಣಮಟ್ಟವಿಲ್ಲದ ಔಷಧಗಳ ತಯಾರಕರ ವಿರುದ್ಧ ದಂಡನೆಯ ಕ್ರಮವನ್ನು ಕಡಿಮೆ ಮಾಡುತ್ತವೆ” ಎಂದು ಗಮನ ಸೆಳೆದಿದ್ದಾರೆ.

ಮೂಲ: ದಿ ಸ್ಕ್ರಾಲ್

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ | ಸಚಿವ ಬಿ.ನಾಗೇಂದ್ರ ವಜಾಗೊಳಿಸಿ: ಪ್ರಲ್ಹಾದ್‌ ಜೋಶಿ ಆಗ್ರಹ

ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ...

ಪಪುವಾ ನ್ಯೂಗಿನಿಗೆ 1 ಮಿಲಿಯನ್ ಡಾಲರ್ ನೆರವು ಘೋಷಿಸಿದ ಭಾರತ

ಬೃಹತ್‌ ಪ್ರಮಾಣದ ಭೂಕುಸಿತದಿಂದ ಅಪಾರ ಪ್ರಮಾಣದ ಸಾವು ನೋವಿನ ನಷ್ಟ ಅನುಭವಿಸಿರುವ...

ಪಠ್ಯಪುಸ್ತಕ ಪರಿಷ್ಕರಣೆ | ಕೆಲವು ಪದ ಮತ್ತು ವಾಕ್ಯಗಳಲ್ಲಷ್ಟೇ ಬದಲಾವಣೆ: ಸಚಿವ ಮಧು ಬಂಗಾರಪ್ಪ

"ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಕ್ಕಳು ಯಾವುದೇ ತೊಂದರೆ ಇಲ್ಲದಂತೆ ತೊಡಗಿಸಿಕೊಳ್ಳಲು...