ವಿನೀತ ಮೋದಿಗೆ ಜಾಗತಿಕ ಒತ್ತಡ; ದುರ್ಬಲಗೊಳ್ಳುತ್ತಿದೆ ವಿದೇಶಾಂಗ ಸಂಬಂಧ

Date:

ಭಾರತದಲ್ಲಿ ದುರ್ಬಲರಾಗಿ, ವಿನೀತರಾಗಬೇಕಾದ ಒತ್ತಡ ಹೊಂದಿರುವ ಮೋದಿ, ತಮ್ಮ ಮೂರನೇ ಅವಧಿಯಲ್ಲಿ ಅಂತಾರಾಷ್ಟ್ರೀಯ ಒತ್ತಡಕ್ಕೆ ಹೆಚ್ಚು ಒಳಗಾಗುತ್ತಾರೆ. ಈ ಹಿಂದೆ, ಜಾಗತಿಕ ವೇದಿಕೆಗಳಲ್ಲಿ ಭಾರೀ ವಿಶ್ವಾಸದಿಂದ ನಡೆಯಲು ಮಾಡಿಕೊಂಡಿದ್ದ ಏರ್ಪಾಡುಗಳು ಕುಸಿದುಬೀಳಲಿವೆ

ಲೋಕಸಭಾ ಚುನಾವಣೆಯ ಪ್ರಚಾರದಲ್ಲಿದ್ದ ಪ್ರಧಾನಿ ಮೋದಿ, ಮೇ ತಿಂಗಳಿನಲ್ಲಿ ಉತ್ತರ ಪ್ರದೇಶದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದರು. ಆಗ ಅವರು, “ಭಾರತವು ಈಗ ಜಾಗತಿಕ ವೇದಿಕೆಗಳಲ್ಲಿ ಮಾತನಾಡುವಾಗ, ಇಡೀ ಜಗತ್ತು ತೀವ್ರವಾಗಿ ಗಮನ ಹರಿಸುತ್ತದೆ” ಎಂದು ಹರ್ಷ ವ್ಯಕ್ತಪಡಿಸಿದ್ದರು. ಅವರ ಮಾತಿಗೆ ಸಭಿಕರು ಅಬ್ಬರದ ಚಪ್ಪಾಳೆ ಹೊಡೆದರು. ಆ ಚಪ್ಪಾಳೆಗಳ ನಡುವೆ, ಅವರು ಮತ್ತಷ್ಟು ಧೈರ್ಯದೊಂದಿಗೆ, ”ಭಾರತವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಭಾರತದೊಂದಿಗೆ ಜಗತ್ತು ತನ್ನ ಹೆಜ್ಜೆಗಳನ್ನು ಜೋಡಿಸಲು ಪ್ರಯತ್ನಿಸುತ್ತದೆ” ಎಂದು ಅಬ್ಬರಿಸಿ, ಬೊಬ್ಬಿರಿದಿದ್ದರು.

2014 ಮತ್ತು 2019ರ ಚುನಾವಣೆಗಳಲ್ಲಿ, ಬಿಜೆಪಿ ಭ್ರಷ್ಟಾಚಾರ, ಹಿಂದು ರಾಷ್ಟ್ರೀಯತೆ, ದೇಶೀಯ ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದನೆಯ ಮೇಲೆ ತನ್ನ ಪ್ರಚಾರವನ್ನು ಕೇಂದ್ರೀಕರಿಸಿತ್ತು. ಆದರೆ, 2024ರ ಚುನಾವಣೆಗಳಲ್ಲಿ ಬಿಜೆಪಿ ವಿದೇಶಾಂಗ ನೀತಿಗಳ ಬಗ್ಗೆಯೂ ಮಾತನಾಡಲಾರಂಭಿಸಿತ್ತು. ಚುನಾವಣಾ ಪ್ರಚಾರದ ಭಾಷಣದಲ್ಲಿ ವಿದೇಶಾಂಗ ನೀತಿಯು ಪ್ರಮುಖವಾಗಿ ಕಾಣಿಸಿಕೊಂಡಿದ್ದು, ಭಾರತದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲು.

ಉತ್ತರ ಪ್ರದೇಶದ ಭಾಷಣದ ನಂತರ, ಮೋದಿ ಪದೇ-ಪದೇ ವಿದೇಶಿ ಸಂಬಂಧಗಳು-ನೀತಿಗಳ ಬಗ್ಗೆ ಮಾತನಾಡಿದರು. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯ ರಾಷ್ಟ್ರಗಳಲ್ಲಿ ಭಾರತ ಸ್ಥಾನಮಾನದ ಬಗ್ಗೆ, ಐದನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಿ ರಾಷ್ಟ್ರವು ಬ್ರಿಟನ್ನನ್ನು ಹೇಗೆ ಹಿಂದಿಕ್ಕಿತು ಹಾಗೂ ಕಳೆದ ವರ್ಷ G20 ಶೃಂಗಸಭೆಯನ್ನು ಭಾರತವು ಹೇಗೆ ಯಶಸ್ವಿಯಾಗಿ ಆಯೋಜಿಸಿತು ಎಂಬುದರ ಬಗ್ಗೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಮಾತ್ರವಲ್ಲದೆ, ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ, ಅವರು ಶ್ರೀಲಂಕಾದ ಕಚ್ಚತೀವು ದ್ವೀಪದ ಮುಗಿದುಹೋಗಿದ್ದ ಸಮಸ್ಯೆಯನ್ನು ಮತ್ತೆ ಕೆದಕಿದರು. ಆದಾಗ್ಯೂ, ತಮಿಳರು ಮೋದಿಗೆ ಮಣೆ ಹಾಕಲಿಲ್ಲ ಎಂಬುದು ಬೇರೆಯೇ ಮಾತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇನ್ನು, ಜೂನ್ 4 ರಂದು ಫಲಿತಾಂಶಗಳು ಪ್ರಕಟವಾದಾಗ, ಮತದಾರರು ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತನವನ್ನೂ ಕೊಡಲಿಲ್ಲ ಎಂಬುದು ಮೋದಿಯ ಆಡಳಿತ ವೈಫಲ್ಯವನ್ನು ಸೂಚಿಸಿತು. ಈಗ, ಸಮ್ಮಿಶ್ರ ಆಡಳಿತದಲ್ಲಿ ಅವರ ಹೊಸ ರಾಜಕೀಯ ಯುಗ ಪ್ರಾರಂಭವಾಗಿದೆ. ಒಬ್ಬನೇ ನಾಯಕ ವಿರೋಧವನ್ನು, ವಿಪಕ್ಷವನ್ನು ಏಕಾಂಗಿಯಾಗಿ ಸೋಲಿಸುವ ಸಾಮರ್ಥ್ಯದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಮೋದಿ, ಈಗ ಮೈತ್ರಿಯ ಹಂಗಿನಲ್ಲಿದ್ದಾರೆ. ಮೈತ್ರಿ ಪಾಲುದಾರರ ಮೇಲಿನ ಅವಲಂಬನೆಯು ಮುಂದಿನ ಐದು ವರ್ಷಗಳಲ್ಲಿ ಭಾರತದ ವಿದೇಶಾಂಗ ನೀತಿಯ ದಿಕ್ಕಿನ ಮೇಲೆ ಪ್ರಭಾವ ಬೀರುವ ಹೊಸ ‘ಡೈನಮಿಕ್‌’ಅನ್ನು ಸೂಚಿಸುತ್ತಿದೆ.

ಈ ಹಿಂದೆ, ಮೋದಿ ಅವರು ತಮ್ಮ ಸಂಪುಟದಲ್ಲಿಯೂ ಸಮಾಲೋಚನೆ ನಡೆಸದೆ, ಹಲವಾರು ನಿರ್ಣಾಯಕ ವಿದೇಶಾಂಗ ನೀತಿ-ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಕಳೆದ ವರ್ಷ ಅಕ್ಟೋಬರ್ 7ರಂದು ಹಮಾಸ್ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಇಸ್ರೇಲ್‌ಗೆ ಬೆಂಬಲ ಘೋಷಿಸಿದರು. ಮುಜುಗರಕ್ಕೊಳಗಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಸಮತೋಲಿತ ಹೇಳಿಕೆಯನ್ನು ನೀಡಲು ಹಲವಾರು ದಿನಗಳನ್ನು ತೆಗೆದುಕೊಂಡಿತು.

ಜಾಗತಿಕ ನಾಯಕರ ಸ್ಥಾನದಲ್ಲಿ ಭಾರತದ ಸ್ಥಾನಮಾನವನ್ನು ಭದ್ರಪಡಿಸಲು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಪಡೆಯಲು ಮೋದಿ ಸರ್ಕಾರ ಆದ್ಯತೆ ನೀಡುವ ಸಾಧ್ಯತೆಗಳಿವೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ‘ಸಮ್ಮಿಟ್ ಆಫ್ ಫ್ಯೂಚರ್’ ಹೆಸರಿನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಹೇಗೆ ಒತ್ತಡ ತರುತ್ತದೆ ಎಂಬುದನ್ನು ದೇಶವು ಆಸಕ್ತಿಯಿಂದ ಎದುರು ನೋಡುತ್ತಿದೆ. ಆದಾಗ್ಯೂ, ಭಾರತಕ್ಕೆ ಖಾಯಂ ಸದಸ್ಯತ್ವ ನೀಡಲು P-5 ಸದಸ್ಯರಲ್ಲಿ ಒಂದಾದ ಚೀನಾದ ಪ್ರತಿರೋಧವೂ ಒಳಗೊಂಡಂತೆ ಭೌಗೋಳಿಕ ರಾಜಕೀಯ ವಾಸ್ತವತೆಗಳನ್ನು ಗಮನಿಸಿದರೆ, ಖಾಯಂ ಸದಸ್ಯತ್ವವು ದೂರದ ಗುರಿಯಂತೆ ಕಾಣುತ್ತದೆ. ತನ್ನನ್ನು ತಾನು ವಿಶ್ವಗುರುವೆಂದು ಕಳೆದುಕೊಂಡಿರುವ ಮೋದಿಯ ವ್ಯಾಪ್ತಿಯನ್ನು ಮೀರಿದೆ.

ಮೋದಿಯವರ ಮೂರನೇ ಅವಧಿಯಲ್ಲೂ ವಿದೇಶಾಂಗ ನೀತಿಯ ವಿಚಾರದಲ್ಲಿ ಚೀನಾ ಬೃಹತ್ ಆನೆಯಾಗಿ ಅಡ್ಡಿಯಾಗುತ್ತದೆ. ಹಲವು ವಿಶ್ವ ನಾಯಕರೊಂದಿಗೆ ತಮ್ಮ ನಿಕಟತೆಯ ಬಗ್ಗೆ ಹೆಮ್ಮೆಪಡುವ ಮೋದಿ, ಕಳೆದ ವರ್ಷ ಜಿ20 ಸಭೆಗೆ ಹಾಜರಾಗದೆ, ತಮ್ಮನ್ನು ನಿಂದಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಮೋಡಿ ಮಾಡಲು ವಿಫಲರಾಗಿದ್ದಾರೆ. ಗಮನಾರ್ಹವಾಗಿ, ಮೋದಿಯವರ ಮೂರನೇ ಅವಧಿಯ ಗೆಲುವಿಗೂ ಕ್ಸಿ ಜಿನ್‌ಪಿಂಗ್‌ ವೈಯಕ್ತಿಕವಾಗಿ ಅಭಿನಂದಿಸಿಲ್ಲ.

ಏತನ್ಮಧ್ಯೆ, ಚೀನಾ ಹಿಮಾಲಯದ ಗಡಿಯ ಭಾರತಕ್ಕೆ ಸೇರಿದ ಪ್ರದೇಶಗಳಲ್ಲಿ ಮಿಲಿಟರಿ ಮೂಲಸೌಕರ್ಯಗಳನ್ನು ವ್ಯಾಪಕವಾಗಿ ಅಭಿವೃದ್ಧಿಪಡಿಸುತ್ತಿದೆ. ಸಿಕ್ಕಿಂನಿಂದ ಕೇವಲ 150 ಕಿಲೋಮೀಟರ್ ದೂರದಲ್ಲಿರುವ ಶಿಗಾಟ್ಸೆಯಲ್ಲಿ ಚೀನಾ ಸುಧಾರಿತ ಜೆ-20 ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ನಿಯೋಜಿಸುತ್ತಿದೆ ಎಂಬ ಇತ್ತೀಚಿನ ವರದಿಗಳು ಭಾರತ-ಚೀನಾ ಬಿಕ್ಕಟ್ಟಿನ ಬಗ್ಗೆ ಒತ್ತಿಹೇಳುತ್ತಿವೆ. ‘ಗಡಿ ಪ್ರದೇಶಗಳ ಮೇಲಿನ ಆಕ್ರಮಣದ ಮೂಲಕ ಭಾರತದ ಪ್ರದೇಶವನ್ನು ವಶಪಡಿಸಿಕೊಳ್ಳುವ ಚೀನಾವನ್ನು ಎದುರಿಸಲು ಮೋದಿ ವಿಫಲರಾಗಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಚೀನಾದೊಂದಿಗಿನ ಸಂಕೀರ್ಣ ಸಂಬಂಧವನ್ನು ನಿರ್ವಹಿಸುವಲ್ಲಿ ರಾಜತಾಂತ್ರಿಕ ಯೋಜನೆಗಳು ನಿರ್ಣಾಯಕವಾಗಿರುತ್ತವೆ. ಉದ್ವಿಗ್ನತೆಗಳು ಮತ್ತು ಪ್ರಾದೇಶಿಕ ವಿವಾದಗಳು ಉಲ್ಬಣಗೊಳ್ಳುವುದನ್ನು ತಪ್ಪಿಸಲು ಎಚ್ಚರಿಕೆಯಿಂದ ನೀತಿಗಳನ್ನು ರೂಪಿಸುವ, ಮುನ್ನಡೆಯುವ ಅಗತ್ಯವಿದೆ. ಮುಂದಿನ ತಿಂಗಳು ಕಜಕಿಸ್ತಾನದ ರಾಜಧಾನಿ ಅಸ್ತಾನಾದಲ್ಲಿ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆ ನಡೆಯಲಿದೆ. ಅಲ್ಲಿ, ಮೋದಿ ಮತ್ತು ಕ್ಸಿ ಜಿನ್‌ಪಿಂಗ್‌ ನಡುವೆ ಸಭೆ ನಡೆಯಲಿದೆಯೇ ಎಂದು ರಾಜಕೀಯ ತಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಕೇಂದ್ರ ಸರ್ಕಾರವು ತನ್ನ ವಿದೇಶಾಂಗ ನೀತಿ ಮತ್ತು ಪ್ರಾದೇಶಿಕ ಭದ್ರತಾ ಉದ್ದೇಶಗಳನ್ನು ಮುನ್ನಡೆಸಲು, ಪ್ರಾದೇಶಿಕ ಸವಾಲುಗಳನ್ನು ನಿಭಾಯಿಸಲು ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧವನ್ನು ಮುಂದುವರೆಸಲಿದೆ. I2U2 (ಭಾರತ, ಇಸ್ರೇಲ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್), ಕೊಲಂಬೊ ಸೆಕ್ಯುರಿಟಿ ಕಾನ್ಕ್ಲೇವ್ (ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಮಾರಿಷಸ್), ಮತ್ತು ಕ್ವಾಡ್ (ಭಾರತ, ಜಪಾನ್, ಆಸ್ಟ್ರೇಲಿಯಾ ಮತ್ತು ಅಮೆರಿಕ) ಕೂಟಗಳಲ್ಲಿ ಭಾರತ ಪ್ರಮುಖ ಪಾತ್ರಗಳನ್ನು ವಹಿಸುತ್ತದೆ.

ಆದಾಗ್ಯೂ, ಕ್ವಾಡ್‌ ಕೂಟದಲ್ಲಿ ಭಾರತವನ್ನು ಕೈಬಿಟ್ಟು, ಫಿಲಿಪೈನ್ಸ್‌ಅನ್ನು ಒಳಗೊಂಡು ‘ಸ್ಕ್ವಾಡ್’ ರಚಿಸಲು ಅಮೆರಿಕ ಮುಂದಾಗಿದೆ. ಈಗ, ಕ್ವಾಡ್‌ ಕೂಟ ಹಿನ್ನೆಲೆಗೆ ಸರಿಯುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ‘ಸ್ಕ್ವಾಡ್’ ಗುಂಪಿಗೆ ಹೆಚ್ಚುವರಿ ಒತ್ತನ್ನು ನೀಡಲಾಗುತ್ತಿದೆ. ಕ್ವಾಡ್ ನಾಯಕರು ಶೃಂಗಸಭೆ ನಡೆಸಿ ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಈ ವರ್ಷದ ಜನವರಿಯಲ್ಲಿ ಭಾರತದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಬರಲು ಮೋದಿಯ ಆಹ್ವಾನವನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ತಿರಸ್ಕರಿಸಿದರು. ಪರಿಣಾಮ, ಜನವರಿಯ ಅಂತ್ಯದಲ್ಲಿ ನಡೆಯಬೇಕಿದ್ದ ಯೋಜಿತ ಕ್ವಾಡ್ ಶೃಂಗಸಭೆಯನ್ನು ಮುಂದೂಡಲಾಯಿತು. ಭಾರತದಲ್ಲಿ ಲೋಕಸಭಾ ಚುನಾವಣೆ ಆರಂಭವಾಗುವ ಮುನ್ನ ಏಪ್ರಿಲ್ 19ರಂದು ಶೃಂಗಸಭೆಯನ್ನು ನಡೆಸಲು ಮತ್ತೊಮ್ಮೆ ಪ್ರಯತ್ನ ನಡೆದರೂ, ಅದೂ ಕೂಡ ವಿಫಲವಾಯಿತು. ನವೆಂಬರ್‌ನಲ್ಲಿ ಅಮೆರಿಕ ಚುನಾವಣೆಗಳು ನಡೆಯಲಿದ್ದು, ಅಲ್ಲಿಯವರೆಗೂ ಯಾವುದೇ ಶೃಂಗಸಭೆ ನಡೆಯುವ ಸಾಧ್ಯತೆಯಿಲ್ಲ.

ಏತನ್ಮಧ್ಯೆ, ನ್ಯೂಯಾರ್ಕ್‌ನಲ್ಲಿ ಯುಎಸ್-ಕೆನಡಾದ ಪ್ರಜೆ ಮತ್ತು ಖಲಿಸ್ತಾನಿ ಪ್ರತ್ಯೇಕತಾವಾದಿ ಎಂದು ಹೇಳಲಾದ ಗುರ್ಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸುವಲ್ಲಿ ಭಾರತೀಯ ಗುಪ್ತಚರ ಏಜೆಂಟರು ಭಾಗಿಯಾಗಿದ್ದಾರೆ ಎಂಬ ಆರೋಪವು ಭಾರತ-ಅಮೆರಿಕ ಸಂಬಂಧದಲ್ಲಿ ಬಿರುಕು ಮೂಡಿಸಿದೆ. ಹೆಚ್ಚುವರಿಯಾಗಿ, ಉಕ್ರೇನ್-ರಷ್ಯಾ ನಡುವಿನ ಯುದ್ಧದಲ್ಲಿ ರಷ್ಯಾಗೆ ಭಾರತ ಬೆಂಬಲ ನೀಡಿದೆ. ಚಬಹಾರ್ ಬಂದರಿಗೆ ಸಂಬಂಧಿಸಿದಂತೆ ಇರಾನ್‌ನೊಂದಿಗೆ ಭಾರತ ದೀರ್ಘಾವಧಿಯ ಒಪ್ಪಂದ ಮಾಡಿಕೊಂಡಿದೆ. ಇದು ಅಮೆರಿಕ ಜೊತೆಗಿನ ಭಾರತದ ಸಂಬಂಧವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಕಳೆದ ವರ್ಷ ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ಕೆನಡಾದ ಪ್ರಜೆ ಮತ್ತು ಖಲಿಸ್ತಾನಿ ಪ್ರತ್ಯೇಕತಾವಾದಿ ಎಂದು ಹೇಳಲಾದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಡೆದಿದ್ದು, ಆ ಕಾರಣದಿಂದಾಗಿ ಕೆನಡಾ-ಭಾರತದ ಸಂಬಂಧವೂ ಮೋದಿ ಆಡಳಿತದಲ್ಲಿ ಹದಗೆಟ್ಟಿದೆ. ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿದ್ದರು. ಇದು ಗಂಭೀರ ರಾಜತಾಂತ್ರಿಕ ಜಗಳಕ್ಕೆ ಕಾರಣವಾಯಿತು. ಪರಿಣಾಮ, ಎರಡು ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಸಂಬಂಧಗಳಿಗೆ ಹಾನಿಯಾಗಿದೆ. ಪಾಕಿಸ್ತಾನದೊಂದಿಗಿನ ಸಂಬಂಧಗಳು ಸಹ ಹದಗೆಟ್ಟಿವೆ.

ಈ ವರದಿ ಓದಿದ್ದೀರಾ?: ಮೋದಿ ಜಾಗಕ್ಕೆ ಗಡ್ಕರಿ?; ಕರಣ್  ಥಾಪರ್ ಸಂದರ್ಶನದಲ್ಲಿ ಕ್ರಿಸ್ಟೋಫೆ ಜಫರ್ಲೋ ತೆರೆದಿಟ್ಟ ಒಳನೋಟಗಳು

ರಷ್ಯಾ-ಚೀನಾ ನಡುವಿನ ನಿಕಟ ಸಂಬಂಧಗಳ ಹೊರತಾಗಿಯೂ ರಷ್ಯಾದೊಂದಿಗೆ ಭಾರತವು ಐತಿಹಾಸಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮುನ್ನಡೆಸುತ್ತಿದೆ. ಈ ಸಂಕೀರ್ಣ ತ್ರಿಕೋನ ಸಂಬಂಧಗಳನ್ನು ನಿರ್ವಹಿಸಲು ಸೂಕ್ಷ್ಮವಾದ ಸಮತೋಲನದ ಅಗತ್ಯವಿದೆ.

ಏತನ್ಮಧ್ಯೆ, ಮೋದಿಯವರ 10 ವರ್ಷಗಳ ಆಡಳಿತದಲ್ಲಿ ಭಾರತೀಯ ಪ್ರಜಾಪ್ರಭುತ್ವವು ತೀವ್ರ ಒತ್ತಡಕ್ಕೆ ಒಳಗಾಗುತ್ತಿದೆ. ಅನೈತಿಕತೆ ಮತ್ತು ಧಾರ್ಮಿಕ ಮತಾಂಧತೆ ಹೆಚ್ಚುತ್ತಿದೆ. ದೇಶದ ಜಾಗತಿಕ ಇಮೇಜ್ ಕುಂದಿದೆ. ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ಪ್ರಕಾರ, ಬಿಜೆಪಿ ಸರ್ಕಾರದ ‘ಅಸಹನೆ ಅಸಹಿಷ್ಣುತೆ ಮತ್ತು ಮಾನವ ಹಕ್ಕುಗಳ ದಮನ’ದಿಂದ ಜಾಗತಿಕವಾಗಿ ರಾಷ್ಟ್ರದ ಇಮೇಜ್ ಹಾಳಾಗಿದೆ. ಸ್ವೀಡನ್‌ನ ವಿ-ಡೆಮ್ ಇನ್ಸ್ಟಿಟ್ಯೂಟ್ ಭಾರತವನ್ನು ‘ಚುನಾವಣಾ ನಿರಂಕುಶಪ್ರಭುತ್ವ’ ಎಂದು ವರ್ಗೀಕರಿಸಿದೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ, ‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ’ ರಾಷ್ಟ್ರವಾಗಿದ್ದ ಭಾರತ, ಈಗ 180 ದೇಶಗಳಲ್ಲಿ 159ನೇ ಸ್ಥಾನಕ್ಕೆ ಕುಸಿದಿದೆ.

ಗೃಹ ಸಚಿವಾಲಯ ಸೇರಿದಂತೆ ಹೊಸ ಸರ್ಕಾರದಲ್ಲಿ ಬಹುಪಾಲು ನಿರ್ಣಾಯಕ ಸಚಿವಾಲಯಗಳನ್ನು ಬಿಜೆಪಿ ತನ್ನ ತೆಕ್ಕೆಯಲ್ಲಿಯೇ ಉಳಿಸಿಕೊಂಡಿದ್ದರೂ, ಮೈತ್ರಿ ಪಾಲುದಾರರ ಮೇಲೆ ಪಕ್ಷವು ಅವಲಂಬಿತರಾಗಿರುವುದು ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ. ”ಭಾರತದಲ್ಲಿ ದುರ್ಬಲರಾಗಿ, ವಿನೀತರಾಗಬೇಕಾದ ಒತ್ತಡ ಹೊಂದಿರುವ ಮೋದಿ, ತಮ್ಮ ಮೂರನೇ ಅವಧಿಯಲ್ಲಿ ಅಂತಾರಾಷ್ಟ್ರೀಯ ಒತ್ತಡಕ್ಕೆ ಹೆಚ್ಚು ಒಳಗಾಗುತ್ತಾರೆ. ಈ ಹಿಂದೆ, ಜಾಗತಿಕ ವೇದಿಕೆಗಳಲ್ಲಿ ಭಾರೀ ವಿಶ್ವಾಸದಿಂದ ನಡೆಯಲು ಮಾಡಿಕೊಂಡಿದ್ದ ಏರ್ಪಾಡುಗಳು ಕುಸಿದುಬೀಳಲಿವೆ” ಎಂದು ವಿಶ್ವಸಂಸ್ಥೆಯ ಮಾಜಿ ವಕ್ತಾರ ಇ.ಡಿ. ಮ್ಯಾಥ್ಯೂ ಹೇಳಿದ್ದಾರೆ.

 

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಮೋದಿ ನೆಪಮಾತ್ರ. ಅವರು ಅರ್.ಎಸ್.ಎಸ್. ನ ನೆರಳು. ಮೋದಿಯ ಸ್ವಂತಿಕೆ ಅನ್ವುವುದು ಇಲ್ಲ ಏನೂ ಇಲ್ಲ. ಮೋದಿಯ ಮಾತು ಅರ್.ಎಸ್.ಎಸ್. ಅಜಂಡಾದ ಭಾಗವಾಗಿರುತ್ತದೆಯೇ ಹೊರತು ಅವು ಮೋದಿಯ ಸ್ವಂತದ ಮಾತುಗಳಲ್ಲ. ಅವರು ತೆಗೆದುಕೊಳ್ಳುವ ನಿರ್ಣಯಗಳು, ತರುವ ಕಾನೂನುಗಳು ಅಥವ ತಿದ್ದುಪಡಿಗಳು, ದೇಶದಲ್ಲಿ ನಡೆಯುವ ವ್ಯವಸ್ಥಿತ ಸಾಮೂಹಿಕ ಹತ್ಯಾಕಾಂಡಗಳು, ಜಾತಿಯ ಗಲಾಟೆಗಳು, ಮುಸ್ಲಿಂ ವಿರೋಧಿ ನಿಲುವುಗಳು, ದಲಿತರ ಹತ್ಯಾಕಾಂಡಗಳು, ಕ್ರೈಸ್ತರ ಮೇಲಿನ ದಾಳಿಗಳು, ಬಂಡವಾಳಿಗರ ಕೈಗೆ ದೇಶವನ್ನು ಒಪ್ಪಿಸುತ್ತಿರುವ ಹಾಗೂ ವಿದೇಶಾಂಗ ನೀತಿ ನಿರೂಪಣಿಯ ಹಿಂದಿನ ಕಾಣದ ಕೈ ಪುರೋಹಿತಶಾಹಿ ನಿಯಂತ್ರಣದಲ್ಲಿರುವ ಆರ್.ಎಸ್.ಎಸ್. ಆದ್ದರಿಂದ ಎಲ್ಲಾದಕ್ಕೂ ಮೋದಿಯನ್ನು ಮೋದಿಯನ್ನು ಕಾರಣವಾಗಿಸುವಾಗ ಇದೊಂದು ಎಚ್ಚರ ಇದ್ದಿದ್ದರೆ ಒಳಿತತ ಎನ್ನುವುದು ನನ್ನ ಅಭಿಪ್ರಾಯ.
    ದಯಾನಂದ ಮೂರ್ತಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

1950ರ ಕೇಂದ್ರ ಬಜೆಟ್ ಸೋರಿಕೆ: ನಡೆದಿದ್ದೇನು, ಪರಿಣಾಮವೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸತತ ಏಳನೇ...

ನಾಲ್ಕು ಕೃಷಿ ಡಿಪ್ಲೊಮಾ ಕಾಲೇಜು ಪುನರಾರಂಭಕ್ಕೆ ಮರು ಅನುಮತಿ ನೀಡಿದ ಸರ್ಕಾರ

ಕಳೆದ ಸರ್ಕಾರದ ಅವದಿಯಲ್ಲಿ ತಡೆಹಿಡಿಯಲಾಗಿದ್ದ ವಿವಿಧ ಕೃಷಿ ವಿವಿ ವ್ಯಾಪ್ತಿಯ ನಾಲ್ಕು...

ವಾಲ್ಮೀಕಿ ನಿಗಮ ಅಕ್ರಮ | ಹಣ ಲೂಟಿ ಮಾಡಲು ನಕಲಿ ಹುದ್ದೆ ಸೃಷ್ಟಿ!

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಕೋಟ್ಯಂತರ ರೂ.ಗಳನ್ನು ಲೂಟಿ...

ಕೇದಾರನಾಥ ದೇಗುಲದಿಂದ 228 ಕೆಜಿ ಚಿನ್ನ ನಾಪತ್ತೆ: ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

"ಕೇದಾರನಾಥ ದೇವಸ್ಥಾನದಲ್ಲಿದ್ದ ಚಿನ್ನ ನಾಪತ್ತೆಯಾಗಿದೆ, 228 ಕೆಜಿ ಚಿನ್ನದ ಹಗರಣ ನಡೆದಿದೆ. ಆದರೆ...