ದೇಶಾದ್ಯಂತ ಗಣೇಶ ವಿಸರ್ಜನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ‘ವಿಸರ್ಜನೆ’ಯಾಗಬೇಕಿದೆ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಹೇಳಿದ್ದಾರೆ.
ಶನಿವಾರ ಹೈದರಾಬಾದ್‌ನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ್ ರಾಜ್, ದೇಶದ ಚುನಾವಣಾ ವ್ಯವಸ್ಥೆ ಮತ್ತು ಮತದಾರರ ಪಟ್ಟಿ ಶುದ್ಧೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮೂಲಕ ಲಕ್ಷಾಂತರ ಮತದಾರರ ಹೆಸರುಗಳನ್ನು ಏಕಪಕ್ಷೀಯವಾಗಿ ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಎಸ್‌ಐಆರ್ ಆರಂಭದಲ್ಲಿ ‘ಪರಿಶುದ್ಧಗೊಳಿಸುವ ಪ್ರಕ್ರಿಯೆ’ ಎಂದು ಹೇಳಲಾಗಿತ್ತು. ಆದರೆ ವಾಸ್ತವದಲ್ಲಿ ಇದು ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆಯಾಗಿ ಬದಲಾಗಿದೆ ಎಂದು ದೂರಿದರು. ಪಶ್ಚಿಮ ಬಂಗಾಳದ ಉದಾಹರಣೆ ನೀಡಿದ ಅವರು, ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡ 38 ಲಕ್ಷ ಜನರು ಮರುಸೇರ್ಪಡೆಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇವುಗಳ ವಿಲೇವಾರಿಗೆ 10 ರಿಂದ 12 ವರ್ಷ ಬೇಕಾಗಬಹುದು. ಮತದಾರರು ಅಲ್ಲಿಯವರೆಗೆ ಕಾಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದು ಕಾಕ್ರೋಚ್ ಪಾರ್ಟಿ ಪ್ರತಿಭಟನೆ; ನಟ ಪ್ರಕಾಶ್ ರಾಜ್ ಭಾಗಿ
ತಾವು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದಾಗ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆಗೆ ಬಂದಾಗ ಇಲ್ಲದಿದ್ದ ಕಾರಣಕ್ಕಾಗಿ, ಕೆಲಸಕ್ಕೆ ತೆರಳಿದ್ದ ದೈನಂದಿನ ಕೂಲಿ ಕಾರ್ಮಿಕರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಿರುವುದು ಕಂಡುಬಂದಿದೆ. ತಕ್ಷಣವೇ ಈ ಎಸ್‌ಐಆರ್ ಪ್ರಕ್ರಿಯೆಯನ್ನು ಕೈಬಿಡಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಪ್ರಕಾಶ್ ರಾಜ್ ಒತ್ತಾಯಿಸಿದರು.
ಇನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರು ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿ ದೆಹಲಿಯ ಜಂತರ್ ಮಂತರ್, ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ವಿವಿಧ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿವೆ. ಸಿಇಸಿ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿರುವ ಪ್ರತಿಭಟನಾಕಾರರಿಗೆ ಪ್ರಕಾಶ್ ರಾಜ್ ಬೆಂಬಲ ವ್ಯಕ್ತಪಡಿಸಿದ್ದಾರೆ.




