ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ | ರಾಜವಂಶಸ್ಥ-ಶ್ರೀಸಾಮಾನ್ಯ, ಗೆಲ್ಲುವವರು ಯಾರು?

Date:

ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ. ಅಭ್ಯರ್ಥಿ ಆಯ್ಕೆಯೂ ಅವರದೇ. ಹಾಗಾಗಿ ಈ ಕ್ಷೇತ್ರದ ಗೆಲುವು ಸಿದ್ದರಾಮಯ್ಯನವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಕಾರಣಕ್ಕಾಗಿಯೇ ಪ್ರಧಾನಿ ಮೋದಿಯವರು ಕೂಡ ಮೈಸೂರಿನತ್ತ ವಿಶೇಷ ಗಮನ ಹರಿಸಿದ್ದಾರೆ. ಇಲ್ಲಿ ಬಿಜೆಪಿ-ಕಾಂಗ್ರೆಸ್ಸಿನ ಅಭ್ಯರ್ಥಿಗಳು ನೆಪ ಮಾತ್ರಕ್ಕಿದ್ದು, ಸಿದ್ದರಾಮಯ್ಯ-ಮೋದಿ ನಡುವಿನ ಸ್ಪರ್ಧೆಯಾಗಿ ಮಾರ್ಪಾಟಾಗಿದೆ ಎನ್ನುವವರಿದ್ದಾರೆ. ಈ ನಾಯಕರ ಸ್ಥಾನ-ಮಾನಗಳೇನೇ ಇರಬಹುದು, ಮತದಾರನ ಮನಸ್ಸು ಯಾರ ಕಡೆಗಿದೆ ಎನ್ನುವುದು ಬಹಳ ಮುಖ್ಯ, ಅಲ್ಲವೇ?

ಮೈಸೂರಿನ ಜಗತ್ಪ್ರಸಿದ್ಧ ದಸರಾ, ಅರಮನೆ, ಚಾಮುಂಡಿಬೆಟ್ಟ, ಮಹಿಷಾಸುರ, ಮೃಗಾಲಯ, ಮ್ಯೂಸಿಯಂ, ಕುಕ್ಕರಹಳ್ಳಿ ಕೆರೆ, ಪಿರಿಯಾಪಟ್ಟಣದ ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್, ಕೊಡಗಿನ ನಿಸರ್ಗ, ಅಬ್ಬೆ ಫಾಲ್ಸ್, ತಲಕಾವೇರಿ, ಭಾಗಮಂಡಲ, ನಾಗರಹೊಳೆ ಅಭಯಾರಣ್ಯ ಮೊದಲಾದ ಸ್ಥಳಗಳು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುತ್ತವೆ. ಜೊತೆಗೆ ಮೈಸೂರನ್ನು ಸಾಂಸ್ಕೃತಿಕ ನಗರವೆಂದೂ ಕರೆಯಲಾಗುತ್ತದೆ.

ಇಷ್ಟೆಲ್ಲ ವಿಶೇಷತೆಗಳಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಕಣಕ್ಕೆ ಈ ಬಾರಿ ಮೈಸೂರು ರಾಜವಂಶಸ್ಥರ ಕುಡಿ ಯದುವೀರ್ ಆಗಮನವಾಗಿದೆ. ಯದುವೀರ್ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಅಂದರೆ, ಕಳೆದ 25 ವರ್ಷಗಳಿಂದ ರಾಜಕಾರಣದಿಂದ ದೂರವಿದ್ದ ರಾಜವಂಶಸ್ಥರು, ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಹಾಗೆಯೇ 40ಕ್ಕೂ ಹೆಚ್ಚು ವರ್ಷಗಳಿಂದ ಕಾಂಗ್ರೆಸ್ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾದ ಎಂ ಲಕ್ಷ್ಮಣ್ ಅಭ್ಯರ್ಥಿಯಾಗುವ ಮೂಲಕ, ಆ ಕೊರತೆಯನ್ನು ನೀಗಿಸಿದ್ದಾರೆ.

ಮೊದಲಿನಿಂದಲೂ ಮೈಸೂರು ಯಾವುದೇ ಒಂದು ಜಾತಿಯ ಹಿಡಿತಕ್ಕೆ ಸಿಕ್ಕ ಕ್ಷೇತ್ರವಲ್ಲ. ಜಾತಿಪ್ರಾಬಲ್ಯವಿರುವ ಅಭ್ಯರ್ಥಿಯನ್ನು ಗೆಲ್ಲಿಸಿದ್ದಿಲ್ಲ. 1952ರಿಂದ 2019ರವರೆಗಿನ ಚುನಾವಣೆಗಳನ್ನು ಹಾಗೂ ಗೆದ್ದವರನ್ನು ಗಮನಿಸಿದರೆ, 17 ಚುನಾಯಿತ ಸಂಸದರು ಮೈಸೂರನ್ನು ಪ್ರತಿನಿಧಿಸಿದ್ದಾರೆ. ಅವರಲ್ಲಿ ಅರಸು, ಕುರುಬರು, ಒಕ್ಕಲಿಗರು, ಲಿಂಗಾಯತರು, ದಲಿತರು – ಹೀಗೆ ಎಲ್ಲರೂ ಇದ್ದಾರೆ. 17ರಲ್ಲಿ 12 ಬಾರಿ ಕಾಂಗ್ರೆಸ್ ಗೆದ್ದರೆ, 4 ಬಾರಿ ಬಿಜೆಪಿ ಗೆದ್ದಿದೆ. ಆರಂಭದ ಒಂದು ಸಲ ಮಾತ್ರ ಕಿಸಾನ್ ಮಜ್ದೂರ್ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಗೆದ್ದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆರಂಭದಲ್ಲಿ ಮೈಸೂರು ದ್ವಿಸದಸ್ಯ ಕ್ಷೇತ್ರವಾಗಿತ್ತು. ಚಾಮರಾಜನಗರ ಕೂಡ ಮೈಸೂರು ಜಿಲ್ಲೆಗೆ ಸೇರಿತ್ತು. 1952ರಲ್ಲಿ ಕಿಸಾನ್‌ ಮಜ್ದೂರ್‌ ಪ್ರಜಾ ಸೋಷಿಯಲಿಸ್ಟ್‌ ಪಕ್ಷದಿಂದ ಎಂ.ಎಸ್‌. ಗುರುಪಾದಸ್ವಾಮಿ ಹಾಗೂ ಕಾಂಗ್ರೆಸ್‌ನಿಂದ ಎನ್‌. ರಾಚಯ್ಯ ಆಯ್ಕೆಯಾಗಿದ್ದರು. 1957ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ. ಶಂಕರಯ್ಯ ಹಾಗೂ ಎಸ್‌.ಎಂ. ಸಿದ್ದಯ್ಯ ಗೆದ್ದಿದ್ದರು. 1962ರಲ್ಲಿ ಮೈಸೂರು ಸಾಮಾನ್ಯ ಏಕಸದಸ್ಯ ಕ್ಷೇತ್ರವಾಗಿ, ಕಾಂಗ್ರೆಸ್‌ನ ಎಂ. ಶಂಕರಯ್ಯ ಆಯ್ಕೆಯಾಗಿದ್ದರು. ಆನಂತರ ಮೂರು ಬಾರಿ ಕಾಂಗ್ರೆಸ್‌ನ ತುಳಸೀದಾಸಪ್ಪ ಗೆದ್ದಿದ್ದರು. 1980ರಲ್ಲಿ ಒಮ್ಮೆ ಮಾತ್ರ ಲಿಂಗಾಯತ ಸಮುದಾಯದ ನಾಯಕ ಎಂ. ರಾಜಶೇಖರಮೂರ್ತಿ ಗೆದ್ದಿದ್ದರು.

ಇದನ್ನು ಓದಿದ್ದೀರಾ?: ಕರ್ನಾಟಕದಲ್ಲಿ ಯೋಗಿ ಮಾದರಿ ಸರ್ಕಾರ ಇದ್ದಿದ್ದರೆ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತಿತ್ತು: ಸಾಹಿತಿ ಎಸ್.ಎಲ್ ಭೈರಪ್ಪ

80ರ ನಂತರ ರಾಜಕಾರಣಕ್ಕೆ ದುಮುಕಿದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಐದು ಬಾರಿ ಕಣಕ್ಕಿಳಿದು, ನಾಲ್ಕು ಬಾರಿ ಗೆದ್ದು ಮೈಸೂರನ್ನು ಪ್ರತಿನಿಧಿಸಿದ್ದರು. 1984, 89, 96 ಮತ್ತು 99ರಲ್ಲಿ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. 1991ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಅಭ್ಯರ್ಥಿಯಾದಾಗ, ಕಾಂಗ್ರೆಸ್ಸಿನ ಚಂದ್ರಪ್ರಭಾ ಅರಸ್ (ದೇವರಾಜ ಅರಸು ಪುತ್ರಿ) ಅವರಿಂದ ಸೋಲನನುಭವಿಸಿದ್ದರು. 1999ರ ನಂತರ ರಾಜವಂಶಸ್ಥರು ರಾಜಕಾರಣದಿಂದ ದೂರವಿದ್ದರು. ಶ್ರೀಕಂಠದತ್ತ ಒಡೆಯರ್ ನಂತರ, ಬಿಜೆಪಿಯ ವಿಜಯಶಂಕರ್(ಎರಡು ಬಾರಿ), ಕಾಂಗ್ರೆಸ್ಸಿನ ಎಸ್.ವಿಶ್ವನಾಥ್(ಒಂದು ಸಲ) ಹಾಗೂ ಬಿಜೆಪಿಯ ಪ್ರತಾಪ್ ಸಿಂಹ(ಎರಡು ಸಲ) ಗೆದ್ದು, ಮೈಸೂರನ್ನು ಪ್ರತಿನಿಧಿಸಿದ್ದರು.

ತಂದೆ ಶ್ರೀಕಂಠದತ್ತ ಒಡೆಯರ್ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷವನ್ನು ಆಯ್ಕೆ ಮಾಡಿಕೊಂಡು, ಗೆದ್ದು ಸಂಸದರಾಗಿದ್ದರು. ಈಗ ದತ್ತು ಪುತ್ರ ಯದುವೀರ್, ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೋದಿಯವರನ್ನು ನಂಬಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಅರಸು ಸಮುದಾಯಕ್ಕೆ ಸೇರಿದ ಯದುವೀರ್‌ಗೆ, ಮೈಸೂರು ಭಾಗದಲ್ಲಿ ಈಗಲೂ ‘ನಮ್ಮ ರಾಜರು’ ಎಂದೇ ಭಾವಿಸುವ, ಗೌರವಿಸುವ ಜನರಿರುವುದರಿಂದ, ಅದೇ ಅವರ ಶ್ರೀರಕ್ಷೆಯಾಗಿದೆ.

ರಾಜವಂಶಸ್ಥ ಯದುವೀರ್ ವಿರುದ್ಧ ಸರಳ-ಸಜ್ಜನ, ಉತ್ತಮ ವಾಗ್ಮಿ ಎಂದೇ ಹೆಸರು ಗಳಿಸಿರುವ ಕಾಂಗ್ರೆಸ್‌ನ ಎಂ. ಲಕ್ಷ್ಮಣ್ ಸ್ಪರ್ಧಾಕಣದಲ್ಲಿದ್ದಾರೆ. ಎಂ. ಲಕ್ಷ್ಮಣ್, ಎಂಜಿನಿಯರಿಂಗ್ ಪದವೀಧರರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕುಲುವನಹಳ್ಳಿಯ ಮುದ್ದಲಿಂಗೇಗೌಡ-ಸಾಕಮ್ಮ ದಂಪತಿಗಳ ಪುತ್ರ. ಕಳೆದ 35 ವರ್ಷಗಳಿಂದ ಮೈಸೂರಿನ ಕನ್ನೇಗೌಡನ ಕೊಪ್ಪಲಿನಲ್ಲಿದ್ದಾರೆ. ಕಾಂಗ್ರೆಸ್ ವಕ್ತಾರರಾಗಿ, ಸಂಸದ ಪ್ರತಾಪ್ ಸಿಂಹ ವಿರುದ್ಧ ತೊಡೆ ತಟ್ಟಿ ನಿಂತವರು. ಬಿಜೆಪಿಯ ಸುಳ್ಳುಗಳನ್ನು, ಹುಸಿ ಹಿಂದುತ್ವವನ್ನು ತರ್ಕಬದ್ಧ ಕಾರಣಗಳನ್ನಿಟ್ಟು ಧೈರ್ಯವಾಗಿ ಎದುರಿಸಿದವರು. ‘ನಾನು ಹುಟ್ಟುತ್ತಾ ಒಕ್ಕಲಿಗ, ಬೆಳೆಯುತ್ತಾ ವಿಶ್ವ ಮಾನವ’ ಎನ್ನುವ ಲಕ್ಷ್ಮಣ್ ಬೆಂಬಲಕ್ಕೆ ಮುಖ್ಯಮುಂತ್ರಿ ಸಿದ್ದರಾಮಯ್ಯ ಇದ್ದಾರೆ. ಯದುವೀರ್ ಒಡೆಯರ್ ಬೆನ್ನಿಗೆ ರಾಜವಂಶಸ್ಥರು ಎಂಬ ಹೆಸರಿದೆ. ಜೊತೆಗೆ ಮೋದಿ ಇದ್ದಾರೆ. ಇಬ್ಬರಿಗೂ ಇದು ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಮೈಸೂರು-ಕೊಡಗು ಕ್ಷೇತ್ರ ಕುತೂಹಲದ ಕಣವಾಗಿ ಮಾರ್ಪಟ್ಟಿದೆ.

ಇನ್ನು ಶಾಸಕರು ಹಾಗೂ ಪಕ್ಷಗಳ ಬಲಾಬಲದತ್ತ ನೋಡುವುದಾದರೆ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ಕ್ಷೇತ್ರಗಳು ಒಳಪಡುತ್ತವೆ. ಕರಾವಳಿ ಜಿಲ್ಲೆಗೆ ಸೇರುವ ಮಡಿಕೇರಿ ಮತ್ತು ವಿರಾಜಪೇಟೆ, ಈ ಮೊದಲು ಬಿಜೆಪಿಯ ಭದ್ರಕೋಟೆಯಾಗಿತ್ತು. ಆದರೆ ಈ ಬಾರಿ ಅಲ್ಲಿಂದ ಕಾಂಗ್ರೆಸ್ ಹುರಿಯಾಳುಗಳಾದ ಎ.ಎಸ್. ಪೊನ್ನಣ್ಣ ಮತ್ತು ಮಂತರ್ ಗೌಡ ಗೆದ್ದಿದ್ದಾರೆ. ಹಾಗೆಯೇ ಮೈಸೂರು ಜಿಲ್ಲೆಗೆ ಸೇರುವ ಚಾಮರಾಜ(ಕೆ. ಹರೀಶ್ ಗೌಡ), ನರಸಿಂಹರಾಜ(ತನ್ವೀರ್ ಸೇಠ್), ಪಿರಿಯಾಪಟ್ಟಣ(ಕೆ.ವೆಂಕಟೇಶ್) ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ಹುಣಸೂರು(ಜಿ.ಡಿ. ಹರೀಶ್ ಗೌಡ), ಚಾಮುಂಡೇಶ್ವರಿ(ಜಿ.ಟಿ.ದೇವೇಗೌಡ)ಗಳನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಂಡಿದೆ. ಕೃಷ್ಣರಾಜ(ಟಿ.ಎಸ್. ಶ್ರೀವತ್ಸ) ಕ್ಷೇತ್ರವೊಂದರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಹಾಗಾಗಿ ಕಾಂಗ್ರೆಸ್ 5ರಲ್ಲಿ, ಜೆಡಿಎಸ್ 2ರಲ್ಲಿ ಮತ್ತು ಬಿಜೆಪಿ ಒಂದರಲ್ಲಿ ಗೆದ್ದಿದ್ದು, ಬಿಜೆಪಿ ಹೀನಾಯ ಸ್ಥಿತಿಯಲ್ಲಿದೆ.

ಬಿಜೆಪಿಯ ಈ ಹೀನಾಯ ಸ್ಥಿತಿಗೆ ಕಳೆದ ಹತ್ತು ವರ್ಷಗಳ ಕಾಲ ಸಂಸದರಾಗಿದ್ದ ಪ್ರತಾಪ್ ಸಿಂಹ ಕಾರಣ ಎಂದು ಬಿಜೆಪಿಗರೇ ದೂರುತ್ತಿದ್ದಾರೆ. ತುಂಬಾ ಸುಲಭವಾಗಿ ಸಿಕ್ಕ ಸಂಸದನ ಸ್ಥಾನದ ಮಹತ್ವವನ್ನೇ ಅರಿಯದ ಪ್ರತಾಪ್ ಸಿಂಹ, ಹತ್ತು ವರ್ಷಗಳನ್ನು ಹುಡುಗಾಟದಲ್ಲಿಯೇ ಕಳೆದುಬಿಟ್ಟರು. ಸೋಷಿಯಲ್ ಮೀಡಿಯಾಗಳಲ್ಲಿ ಜೀವಂತವಿದ್ದು, ಕ್ಷೇತ್ರದ ಅಭಿವೃದ್ಧಿ ಮರೆತರು. ಮೋದಿಯವರೊಂದಿಗೆ ನಿಕಟ ಸಂಪರ್ಕವಿದೆ ಎಂಬ ದಾಢಸಿತನ ತೋರಿ, ಪಕ್ಷದ ಹಿರಿಯರನ್ನು ನಿರ್ಲಕ್ಷಿಸಿದರು. ಅದೇ ಹುಡುಗಾಟಿಕೆಯಲ್ಲಿಯೇ ಹುಡುಗರಿಗೆ ಪಾಸ್ ಕೊಟ್ಟು ಸಂಸತ್ತಿನೊಳಗೆ ಕೋಲಾಹಲವೆಬ್ಬಿಸಿದರು. ಹೀಗಾಗಿ ಪ್ರತಾಪ್ ಸಿಂಹರಿಗೆ ಟಿಕೆಟ್ ತಪ್ಪಿತು. ಅವರಿಂದಾಗಿಯೇ ಮೈಸೂರು ಭಾಗದಲ್ಲಿ ಬಿಜೆಪಿ, ತಳಮಟ್ಟ ಮುಟ್ಟಲು ಕಾರಣವಾಯಿತು.

ಇದು ಸಹಜವಾಗಿಯೇ ಕಾಂಗ್ರೆಸ್‌ಗೆ ವರದಾನವಾಗಿದೆ. ಅಭ್ಯರ್ಥಿ ಲಕ್ಷ್ಮಣ್, ಈಗಲಾದರೂ ಪ್ರತಾಪ್ ಸಿಂಹರ ಮೇಲೆ ಹರಿಹಾಯುವುದನ್ನು ಬಿಟ್ಟು, ಮತದಾರರ ಮನವೊಲಿಸುವ ಕಾರ್ಯದಲ್ಲಿ ಮಗ್ನರಾದರೆ, ಗೆಲುವಿನ ಕಡೆಗೆ ಹೆಜ್ಜೆ ಹಾಕಬಹುದು. ಹಾಗೆಯೇ ಯದುವೀರ್ ಕೂಡ, ಸ್ಥಳೀಯ ಬಿಜೆಪಿಗರನ್ನು- ಅದರಲ್ಲೂ ಪ್ರತಾಪ್ ಸಿಂಹರನ್ನು ಬಗಲಿಗಿಟ್ಟುಕೊಳ್ಳದೆ, ರಾಜವಂಶಸ್ಥರು ಮತ್ತು ಮೋದಿಯ ಅಲೆಯನ್ನು ನಾಜೂಕಾಗಿ ಬಳಸಿಕೊಂಡರೆ, ಒಂದು ಮಟ್ಟದ ಪೈಪೋಟಿ ಕೊಡಬಲ್ಲರು.

ಇನ್ನು ಅಂಕಿ ಸಂಖ್ಯೆಗಳ ಲೆಕ್ಕಾಚಾರಕ್ಕೆ ಬಂದರೆ, ಮೈಸೂರು-ಕೊಡಗು ಕ್ಷೇತ್ರದಲ್ಲಿ ಒಟ್ಟು 21,19,410 ಮತದಾರರಿದ್ದಾರೆ. ಲೆಕ್ಕಾಚಾರದಲ್ಲಿ ಒಕ್ಕಲಿಗರು ಮೊದಲ ಸ್ಥಾನದಲ್ಲಿದ್ದಾರೆ. 3 ಲಕ್ಷದ 26 ಸಾವಿರಕ್ಕೂ ಹೆಚ್ಚಿರುವ ಒಕ್ಕಲಿಗರು, ಯಾವುದೇ ಒಂದು ಪಕ್ಷದ ಪರ ನಿಂತವರಲ್ಲ. ಆದರೆ ಈ ಬಾರಿ ಕಾಂಗ್ರೆಸ್ಸಿನಿಂದ ಒಕ್ಕಲಿಗ ಅಭ್ಯರ್ಥಿ ಲಕ್ಷ್ಮಣ್ ನಿಂತಿರುವುದರಿಂದ, ಒಕ್ಕಲಿಗರ ಒಲುವು-ನಿಲುವು ಕೂಡ ನಿರ್ಣಾಯಕ ಪಾತ್ರ ವಹಿಸಲಿದೆ. ಒಕ್ಕಲಿಗರ ನಂತರ ಮುಸ್ಲಿಮರು ಮತ್ತು ಪರಿಶಿಷ್ಟ ಜಾತಿ-ಪಂಗಡದ ಮತದಾರರು ತಲಾ ಮೂರು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜೊತೆಗೆ ಕುರುಬರ ಸಂಖ್ಯೆ(1ಲಕ್ಷದ 65 ಸಾವಿರ)ಯೂ ಗಣನೀಯವಾಗಿದೆ.

ಇದನ್ನು ಓದಿದ್ದೀರಾ?: ಅಘೋಷಿತ ತುರ್ತು ಪರಿಸ್ಥಿತಿ: ಪ್ರಧಾನಿ ಮೋದಿಗೆ ಸೋಲು ಕಟ್ಟಿಟ್ಟ ಬುತ್ತಿ?

ಈ ಜಾತಿ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ, ಒಕ್ಕಲಿಗರು, ಕುರುಬರು, ಮುಸ್ಲಿಮರು ಮತ್ತು ದಲಿತರು- ಕಾಂಗ್ರೆಸ್ ಕೈ ಹಿಡಿಯಬಹುದೆಂಬ ಅಂದಾಜು ಮಾಡಿದರೂ, ಉಳಿದ ಸಮುದಾಯಗಳ ಸಂಖ್ಯೆ ಅದಕ್ಕಿಂತ ಹೆಚ್ಚಾಗಿದೆ. ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ರಾಜವಂಶಸ್ಥ ಸಮುದಾಯವಾದ ಅರಸುಗಳು 6,139 ಮತದಾರರಿದ್ದಾರೆ. ಇವರು ಇಲ್ಲಿ ನಿಜಕ್ಕೂ ಅಲ್ಪಸಂಖ್ಯಾತರಾಗಿದ್ದಾರೆ.

ಮೈಸೂರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ. ಅಭ್ಯರ್ಥಿ ಆಯ್ಕೆಯೂ ಅವರದೇ. ಹಾಗಾಗಿ ಈ ಕ್ಷೇತ್ರದ ಗೆಲುವು ಸಿದ್ದರಾಮಯ್ಯನವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮುಖ್ಯಮಂತ್ರಿ ಕುರ್ಚಿಯನ್ನು ಪಣಕ್ಕಿಡಲಾಗಿದೆ. ಈ ಕಾರಣಕ್ಕಾಗಿಯೇ ಪ್ರಧಾನಿ ಮೋದಿಯವರು ಕೂಡ ಮೈಸೂರಿನತ್ತ ವಿಶೇಷ ಗಮನ ಹರಿಸಿದ್ದಾರೆ. ಇಲ್ಲಿ ಬಿಜೆಪಿ-ಕಾಂಗ್ರೆಸ್ಸಿನ ಅಭ್ಯರ್ಥಿಗಳು ನೆಪ ಮಾತ್ರಕ್ಕಿದ್ದು, ಸಿದ್ದರಾಮಯ್ಯ-ಮೋದಿ ನಡುವಿನ ಸ್ಪರ್ಧೆಯಾಗಿ ಮಾರ್ಪಾಟಾಗಿದೆ ಎನ್ನುವವರಿದ್ದಾರೆ. ಈ ನಾಯಕರ ಸ್ಥಾನ-ಮಾನಗಳೇನೆ ಇರಬಹುದು, ಮತದಾರನ ಮನಸ್ಸು ಯಾರ ಕಡೆಗಿದೆ ಎನ್ನುವುದು ಬಹಳ ಮುಖ್ಯ, ಅಲ್ಲವೇ?

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೈಲಿನಲ್ಲಿ ದೆಹಲಿ ಸಿಎಂ; ಎಎಪಿ ಚುನಾವಣಾ ಪ್ರಚಾರದಲ್ಲಿ ಕೇಜ್ರಿವಾಲ್ ಪತ್ನಿಗೆ ಪ್ರಮುಖ ಪಾತ್ರ

ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದು ಈಗ...

ತೆಲಂಗಾಣ | 4,568 ಕೋಟಿ ರೂ. ಒಡೆಯ ಕೆ.ವಿಶ್ವೇಶ್ವರ ರೆಡ್ಡಿ ರಾಜ್ಯದ ಅತ್ಯಂತ ಶ್ರೀಮಂತ ಬಿಜೆಪಿ ಅಭ್ಯರ್ಥಿ

ತೆಲಂಗಾಣದ ಲೋಕಸಭಾ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಚೆವೆಳ್ಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...

ಪಶ್ಚಿಮ ಬಂಗಾಳ | ಪ್ರಧಾನಿ ಚುನಾವಣಾ ರ್‍ಯಾಲಿ ಬಳಿಕ ಟಿಎಂಸಿಯಿಂದ ಮೋದಿ ಹೇಳಿಕೆಗಳ ಫ್ಯಾಕ್ಟ್‌ಚೆಕ್!

ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭರ್ಜರಿಯಾಗಿ ರ್‍ಯಾಲಿ ನಡೆಸಿ ಚುನಾವಣಾ...

ಬಿಜೆಪಿ ತನ್ನ ಭದ್ರಕೋಟೆಯಲ್ಲೂ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿಲ್ಲ: ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ...