ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕ್ಬೇಕು ಎಂದು ಹೇಳಿಕೆ ನೀಡಿದ್ದ ಆರೋಪದ ಹಿನ್ನೆಲೆ ಮಾಜಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಫೆಬ್ರವರಿ 15ರಂದು ಮಂಡ್ಯದ ಸಾತನೂರಿನಲ್ಲಿ ಸಿದ್ದರಾಮಯ್ಯ ಅವರ ಹತ್ಯೆಗೆ ಪ್ರಚೋದಿಸುವಂತೆ ಅಶ್ವತ್ಥನಾರಾಯಣ ಹೇಳಿಕೆ ನೀಡಿದ್ದರು. ಹೇಳಿಕೆ ಖಂಡಿಸಿ, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರು ಸಲ್ಲಿಸಿ ಬಹಳ ದಿನಗಳಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ಎಫ್‌ಐಆರ್ ದಾಖಲಿಸುವಂತೆ ಮೇ 24ರಂದು ಮತ್ತೊಮ್ಮೆ ದೂರು ಸಲ್ಲಿಸಿದರು.
ದೂರಿನಲ್ಲಿ ಏನಿದೆ?
“2023ರ ಫೆ. 15 ರಂದು ಮಾಜಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಮಂಡ್ಯ ಜಿಲ್ಲೆಯ ಸಾತನೂರಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಟಿಪ್ಪು ಸುಲ್ತಾನನ್ನು ಮಂಡ್ಯದ ಉರಿಗೌಡ ಮತ್ತು ನಂಜೇಗೌಡರು ಹೇಗೆ ಕೊಂದು ಹಾಕಿದರೂ ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಬಹಿರಂಗವಾಗಿ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿರುತ್ತಾರೆ. ಈ ಬಗ್ಗೆ ಫೆ. 17 ರಂದು ಕಾಂಗ್ರೆಸ್ ಮುಖಂಡರುಗಳು ದೇವರಾಜ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದರೂ ಯಾವುದೇ ಕ್ರಮವಹಿಸಿರುವುದಿಲ್ಲ” ಎಂದು ಆರೋಪಿಸಿದ್ದಾರೆ.
“ಹಿಂದೆ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಮಳೆ ಹಾನಿ ವೀಕ್ಷಣೆಗೆ ಹೋಗಿದ್ದಾಗ ಒಂದು ವರ್ಗ ಕೊಲೆ ಮಾಡಲು ಯತ್ನಿಸಿತ್ತು. ಈ ವಿಚಾರವಾಗಿ ಮಡಿಕೇರಿ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ. ಇವರನ್ನು ಮತ್ತೊಮ್ಮೆ ಸಮಾಜದ್ರೋಹಿಗಳು ಕೊಲೆ ಮಾಡಲು ಯತ್ನಿಸುವ ಸಾಧ್ಯತೆಗಳಿವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಮಾಜಿ ಸಚಿವ ಅಶ್ವತ್ಥನಾರಾಯಣ ಅವರು ನೀಡಿರುವ ಹೇಳಿಕೆಯು ರಾಜ್ಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಚಾರ ಪಡೆದು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ಧರಾಮಯ್ಯನವರ ಸ್ಥಾನಕ್ಕೆ ಕುಂದು ಉಂಟಾಗಿದ್ದು, ರಾಜ್ಯದಲ್ಲಿ ಅಶಾಂತಿ ಉಂಟಾಗಿ ಕೋಮು ಸೌಹಾರ್ದತೆ ಹಾಳಾಗುತ್ತಿರುವುದು ಕಂಡು ಬಂದಿರುತ್ತದೆ” ಎಂದು ಆರೋಪಿಸಿದ್ದಾರೆ.

“ಈ ಎಲ್ಲಾ ಕಾರಣಗಳಿಂದ ಸಾರ್ವಜನಿಕವಾಗಿ ಮಾಜಿ ಸಚಿವ ಅಶ್ವತ್ಥ ನಾರಾಯಣ ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕೊಲೆ ಮಾಡಲು ಸುಪಾರಿ ನೀಡುವ ಸಂಶಯ ಇರುತ್ತದೆ. ಆದ್ದರಿಂದ ಮಾಜಿ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಅವರ ಇಂತಹ ಕೊಲೆ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಿ ಎಫ್.ಐ.ಆರ್ ದಾಖಲಿಸಿ ಇವರನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು” ಎಂದು ದೂರಿನಲ್ಲಿ ಕೋರಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ಮಾಜಿ ಸಚಿವರ ವಿರುದ್ಧ ಕೊಲೆ ಬೆದರಿಕೆ, ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರು ನೀಡುವ ವೇಳೆ ಮೈಸೂರು ಜಿಲ್ಲಾ ಕಾಂಗ್ರೆಸ್ ನಿಯೋಗದಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ ಜೆ ವಿಜಯ್ ಕುಮಾರ್, ಕೆಪಿಸಿಸಿ ವಕ್ತರ ಎಂ ಲಕ್ಷ್ಮಣ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ ಎಂ ರಾಮು, ಡಿಸಿಸಿ ಕಾನೂನು ವಿಭಾಗದ ಅಧ್ಯಕ್ಷ ವಕೀಲ ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಪದಾಧಿಕಾರಿ ವಕೀಲರಾದ ಶಿವಪ್ರಸಾದ್ ಎಂ ಸುರೇಶ್ ಪಾಳ್ಯ, ಪ್ರೇಮ್, ಲಕ್ಕೇಗೌಡ್ರು, ಚರಣ್ ರಾಜ್, ಮನೋನ್ಮಣಿ, ಮೈತ್ರಿ, ಚಂದ್ರು, ದೊಡ್ಡದಳ್ಳಿ ಮಾದೇವ, ರಾಹುಲ್, ಮನೋಜ್ ಕುಮಾರ್ ಹಾಗೂ ಇತರರು ಇದ್ದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಅಂಬೇಡ್ಕರ್‌ಗೆ ನಿಂದನೆ ಆರೋಪ; ತನಿಖೆಗೆ ಸಮಿತಿ ರಚನೆ
ಅಶ್ವತ್ಥ ನಾರಾಯಣ ಹೇಳಿದ್ದೇನು?
ಫೆಬ್ರವರಿ 15ರಂದು ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಸಿ ಎನ್ ಅಶ್ವತ್ಥನಾರಾಯಣ, “ಮಂಡ್ಯ ಜನರಿಗೆ ರಾಜಕೀಯ ಬದಲಾವಣೆ ಮಾಡುವ ಶಕ್ತಿ ಇದೆ. ಮಂಡ್ಯದವರು ಮನಸ್ಸು ಮಾಡಿದರೆ, ಏನು ಬೇಕಾದರೂ ಸಾಧಿಸುತ್ತಾರೆ. ರಾಜಕೀಯ ದಿಕ್ಸೂಚಿ ಮಂಡ್ಯದಿಂದ ಕಾಣಬೇಕು. ಹೀಗೆ ಮಾಡಲಿಲ್ಲ ಅಂದರೆ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುತ್ತಾರೆ. ನಿಮಗೆ ಟಿಪ್ಪು ಬೇಕಾ ಸಾವರ್ಕರ್ ಬೇಕಾ? ಟಿಪ್ಪು ಬೇಡಾ ಅಂದ್ರೆ ಸಿದ್ದರಾಮಯ್ಯ ಅವರನ್ನು ಟಿಪ್ಪು ಕಳುಹಿಸಿದ ಹಾಗೆ ಕಳಿಸಬೇಕು. ಉರಿಗೌಡ, ನಂಜೇಗೌಡ ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನ ಹೊಡೆದು ಹಾಕಬೇಕು” ಎಂದು ಹೇಳಿದ್ದರು.