- ಕೋಲ್ಕತ್ತದಲ್ಲಿ ಸುದ್ದಿಗಾರರ ಜೊತೆ ಮಮತಾ ಬ್ಯಾನರ್ಜಿ ಮಾತು
- 2017ರಲ್ಲಿ ಕೇಂದ್ರ ಬಜೆಟ್ ಜೊತೆ ರೈಲ್ವೆ ಬಜೆಟ್ ವಿಲೀನ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಒಡಿಶಾ ರೈಲು ದುರಂತ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು ರೈಲ್ವೆಯ ಅಸುರಕ್ಷತೆಗೆ ಕೇಂದ್ರ ಬಿಜೆಪಿ ಸರ್ಕಾರವೇ ಕಾರಣ ಎಂದು ದೂರಿದ್ದಾರೆ.
ಕೇಂದ್ರ ಸರ್ಕಾರ ಈ ಹಿಂದೆ ಚಾಲ್ತಿಯಲ್ಲಿದ್ದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುವ ಪದ್ಧತಿಯನ್ನು ನಿಲ್ಲಿಸಿದ ದಿನವೇ ಭಾರತೀಯ ರೈಲ್ವೆ ವ್ಯವಸ್ಥೆ ನಾಶವಾಗಿದೆ ಎಂದು ಬ್ಯಾನರ್ಜಿ ಅವರು ಗುರುವಾರ (ಜೂನ್ 7) ಟೀಕಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇಂದ್ರ ಬಜೆಟ್ ಜೊತೆ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸುವ ಮೂಲಕ ಸುಮಾರು 100 ವರ್ಷಗಳ ಅಭ್ಯಾಸವನ್ನು ಕೊನೆಗೊಳಿಸಿತು” ಎಂದು ಹೇಳಿದರು.
“ನಾನು ರೈಲ್ವೆ ಸಚಿವೆಯಾಗಿದ್ದಾಗ, ಹಣಕಾಸು, ನೌಕರರ ಕಲ್ಯಾಣ, ಸಿಗ್ನಲಿಂಗ್, ಇಂಜಿನಿಯರಿಂಗ್ ಮತ್ತು ಎಲೆಕ್ಟಿಕಲ್ ಹೀಗೆ ನಾನಾ ರೈಲ್ವೆ ಇಲಾಖೆಗಳ ಸಂಪುಟ ಶ್ರೇಣಿಯ ಆರು ಕಾರ್ಯದರ್ಶಿಗಳನ್ನು ಹೊಂದುವ ಆಯ್ಕೆಯಿತ್ತು. ಅವರು ಹಲವು ಇಲಾಖೆಗಳ ನಡುವೆ ಸಮನ್ವಯ ಕಾಯ್ದುಕೊಳ್ಳಲು ಸಹಾಯ ಮಾಡುತ್ತಿದ್ದರು. ಆದರೆ ಇಂದು ಅಂತಹ ಸಮನ್ವಯ ಇಲ್ಲವಾಗಿದೆ” ಎಂದು ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದರು.
“ಪ್ರತ್ಯೇಕವಾಗಿ ಬಜೆಟ್ ಮಂಡಿಸುವುದನ್ನು ನಿಲ್ಲಿಸಿದ ದಿನವೇ ಭಾರತೀಯ ರೈಲ್ವೆ ವ್ಯವಸ್ಥೆ ನಾಶವಾಗಿದೆ. ಈ ದಿನಗಳಲ್ಲಿ ಯಾರೂ ಈ ವಿಷಯಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ” ಎಂದು ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು.
ಜೂನ್ 2 ರಂದು ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಪಶ್ಚಿಮ ಬಂಗಾಳದ ನಿವಾಸಿಗಳು ಸೇರಿದಂತೆ 288 ಜನರು ಮೃತಪಟ್ಟಿದ್ದಾರೆ. ಆದರೆ, ರೈಲು ದುರಂತದ ಹಿಂದಿನ ಸತ್ಯವನ್ನು ಹತ್ತಿಕ್ಕುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರತವಾಗಿದೆ ಎಂದು ಬ್ಯಾನರ್ಜಿ ಆರೋಪಿಸಿದರು.
“ನಾನು ಹೇಳಿದ್ದನ್ನು ಮತ್ತೆ ಪುನರಾವರ್ತಿಸುತ್ತೇನೆ. ನಮಗೆ ಬೇಕಾಗಿರುವುದು ಅಪಘಾತದ ಕಾರಣದ ಬಗ್ಗೆ ಸತ್ಯ ಹೊರಬರಬೇಕು. ಸತ್ಯವನ್ನು ಹೇಗೆ ದುರ್ಬಳಕೆ ಮಾಡಲಾಗುತ್ತಿದೆ ಮತ್ತು ಅಪಘಾತದ ನಿಜವಾದ ಕಾರಣವನ್ನು ಮುಚ್ಚಿ ಹಾಕಲು ನಕಲಿ ಕಥೆಗಳನ್ನು ಹೇಳುತ್ತಿರುವುದನ್ನು ನಾವು ನೋಡಿದ್ದೇವೆ” ಎಂದು ಬ್ಯಾನರ್ಜಿ ಹೇಳಿದರು.
ಮಮತಾ ಬ್ಯಾನರ್ಜಿ ಮಣಿಪುರದ ಹಿಂಸಾಚಾರದ ಬಗ್ಗೆ ಮಾತನಾಡಿ, ಸತ್ಯವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಅದಕ್ಕಾಗಿ ಮಣಿಪುರ ರಾಜ್ಯಕ್ಕೆ ಪತ್ರಕರ್ತರು ಸೇರಿದಂತೆ ಯಾರಿಗೂ ಭೇಟಿ ನೀಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.
“ಒಡಿಶಾ ತ್ರಿವಳಿ ರೈಲು ಅಪಘಾತದ ಸಂತ್ರಸ್ತರಿಗೆ ಪರಿಹಾರ ನೀಡಲು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಆರೋಪಿಸಿ ರಾಜ್ಯಕ್ಕೆ ಪತ್ರ ಬರೆದಿದೆ. ನಾನು ದುರಂತ ನಿರ್ವಹಣಾ ವಿಭಾಗದ ಹಣವನ್ನು ಬಳಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೆನಡಾದಲ್ಲಿ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ; ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
“ನನಗೆ ಮುಖ್ಯವಾದುದು ಜನರಿಗೆ ನೆರವು ನೀಡುವುದು. ಹಣ ಯಾವ ಇಲಾಖೆಯಿಂದ ಬರುತ್ತದೆ ಎಂದು ನಾನು ಗಮನಿಸುತ್ತಿಲ್ಲ. ಎಲ್ಲ ನಿಧಿಗಳು ರಾಜ್ಯಕ್ಕೆ ಸೇರಿವೆ. ಬಿಜೆಪಿ ಸುಳ್ಳು ನಿರೂಪಣೆಗಳನ್ನು ಸೃಷ್ಟಿಸುತ್ತಿದೆ. ನಾನು ಹಣವನ್ನು ಎಲ್ಲಿಂದ ಪಡೆದುಕೊಂಡಿದ್ದೇನೆ ಎಂಬುದರ ಮೇಲೆ ಕೇಂದ್ರೀಕರಿಸುವ ಬದಲಿಗೆ ಬಿಜೆಪಿ ಏನಾದರೂ ಒಳ್ಳೆಯದು ಮಾಡಲಿ” ಎಂದು ಬ್ಯಾನರ್ಜಿ ಬಿಜೆಪಿಗೆ ತಿರುಗೇಟು ನೀಡಿದರು.
ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳಕ್ಕೆ ಹಲವಾರು ಯೋಜನೆಗಳು ಮತ್ತು ಯೋಜನೆಗಳಿಗೆ ಹಣವನ್ನು ಕಳುಹಿಸುವುದನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದರು.