ಲೋಕಸಭೆಯಲ್ಲಿ ಕಳೆದ ವಾರ ಮಂಡನೆ ಆಗಿರುವ ‘ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026 ಅನೇಕ ಚರ್ಚೆಗಳನ್ನು ಮುನ್ನೆಲೆಗೆ ತಂದಿದೆ. ಮಸೂದೆಯಲ್ಲಿ ಸರ್ಕಾರೇತರ ಸಂಸ್ಥೆಗಳ ಪರವಾನಗಿಯನ್ನು ಅಮಾನತುಗೊಳಿಸುವುದು, ರದ್ದುಪಡಿಸುವುದು, ನವೀಕರಿಸದಿದ್ದರೆ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ಕಠಿಣ ನಿಯಮಗಳನ್ನು ಒಳಗೊಂಡಿದೆ. ನವೀಕರಣ ಅರ್ಜಿಯನ್ನು ತಿರಸ್ಕರಿಸಿದರೂ ಅಥವಾ ಅರ್ಜಿ ಸಲ್ಲಿಸದಿದ್ದರೂ ಪರವಾನಗಿ ರದ್ದಾಗಿದೆ ಎಂದು ಪರಿಗಣಿಸುವ ನಿಬಂಧನೆಗಳನ್ನೂ ಈ ತಿದ್ದುಪಡಿ ಮಸೂದೆಯಲ್ಲಿ ಸೇರಿಸಲಾಗಿದೆ. ಇವು ಸರ್ಕಾರೇತರ ಸಂಸ್ಥೆಗಳ ಮೇಲೆ ಕೇಂದ್ರದ ಹಿಡಿತವನ್ನು ಬಿಗಿಗೊಳಿಸುವ ಕ್ರಮವೆಂದು ಸಾಮಾಜಿಕ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
ಈಗಾಗಲೇ ವಿದೇಶಿ ದೇಣಿಗೆ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಯಮಗಳು ಇರುವುದರ ನಡುವೆ ಇಂತಹದ್ದೊಂದು ಕಠಿಣ ಕ್ರಮವನ್ನು ಮಸೂದೆಯಲ್ಲಿ ಅಳವಡಿಸಿರುವುದು ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಚಟುವಟಿಕೆ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಅವುಗಳ ಮೇಲಿನ ಹಿಡಿತವನ್ನು ಸಾಧಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಇದು ಸುಲಭವಾಗಲಿದೆ. ಈ ಸಂಬಂಧಿಸಿದಂತೆ ಒಂದು ಪ್ರಾಧಿಕಾರವೊಂದನ್ನು ಸ್ಥಾಪಿಸುವುದಕ್ಕೆ ಮಸೂದೆಯ ಮೂಲಕ ಉದ್ದೇಶಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸರ್ಕಾರ ಸ್ಥಾಪಿಸುವುದಕ್ಕೆ ಮುಂದಾಗಿರುವ ಪ್ರಾಧಿಕಾರ ಸರ್ಕಾರೇತರ ಸಂಸ್ಥೆಗಳಿಗೆ ಬರುವ ವಿದೇಶಿ ದೇಣಿಯ ಬಗ್ಗೆ ಗಮನ ಹರಿಸಲಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.
ಇದನ್ನೂ ಓದಿ : ದಾವಣಗೆರೆ ಉಪ ಚುನಾವಣೆ | ಯಾರೇ ಸೋಲಲಿ ಅಥವಾ ಗೆಲ್ಲಲಿ, ಕಾಂಗ್ರೆಸ್ಸಿನ ʼರಾಜಕೀಯʼ ಸೋತಾಗಿದೆ!
ಸರ್ಕಾರೇತರ ಸಂಸ್ಥೆಗಳ ಪರವಾನಿಗೆ ರದ್ದಾಗಿರುವ ಅಥವಾ ಅಮಾನತುಗೊಂಡಿರುವ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಅಧಿಕಾರ ಪ್ರಾಧಿಕಾರಕ್ಕೆ ಇದೆ ಎಂದು ಈ ವಿವಾದಾಸ್ಪದ ಮಸೂದೆಯಲ್ಲಿ ಹೇಳಲಾಗಿದೆ. ಸರ್ಕಾರದ ಅನುಮತಿಯಿಲ್ಲದೇ, ವಿದೇಶಿ ದೇಣಿಗೆಯಿಂದ ಆಸ್ತಿಗಳನ್ನು ವಶಕ್ಕೆ ಪಡೆದುಕೊಂಡು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಪರಮಾಧಿಕಾರವನ್ನು ಪ್ರಾಧಿಕಾರಕ್ಕೆ ನೀಡಿರುವುದು ಸರ್ಕಾರೇತರ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಇನ್ನು, ಎಎಫ್‌ಸಿಆರ್‌ಎ ಸಂಬಂಧಿಸಿಂತೆ ಯಾವುದೇ ತನಿಖೆಯನ್ನು ಮಾಡುವುದಕ್ಕೆ ಕೇಂದ್ರದ ಅನುಮತಿ ಪಡೆಯಬೇಕು ಎಂದು ಹೇಳಿರುವುದು ಕೂಡ ಅಧಿಕಾರವನ್ನು ವಿಕೇಂದ್ರೀಕರಣದಿಂದ ಕೇಂದ್ರೀಕರಣಕ್ಕೆ ತಿರುಗಿಸುವುದಕ್ಕೆ ನಾಂದಿ ಹಾಡಿದಂತಾಗುತ್ತದಲ್ಲದೇ, ರಾಜ್ಯ ಸರ್ಕಾರಗಳ ಅಧಿಕಾರವನ್ನು ಕಸಿದಂತಾಗುತ್ತದೆ ಎನ್ನುವುದು ಸ್ಪಷ್ಟವಾಗಿದೆ.
2016, 2018 ಮತ್ತು 2020ರಲ್ಲಿ ತರಲಾದ ತಿದ್ದುಪಡಿಗಳಲ್ಲಿಯೂ ಕಠಿಣ ನಿಯಮಗಳನ್ನು ಅಳವಡಿಸಲಾಗಿದೆ. ಈಗ ಅದರ ಮುಂದುವರಿದ ಅಧ್ಯಾಯವಿದು. ಪ್ರಾಧಿಕಾರದ ಮೂಲಕ ನಿರ್ವಹಣೆಗೆ ಮುಂದಾಗಿರುವುದು, ಇದು ಸರ್ಕಾರೇತರ ಸಂಸ್ಥೆಗಳ ಸ್ವಾತಂತ್ರ್ಯವನ್ನು ಕಸಿಯುವುದಕ್ಕೆ ಮಾರ್ಗವಾಗಬಹುದು. ಆಡಳಿತ ಸರ್ಕಾರದ ನೀತಿ, ನಿಯಮಗಳಿಗೆ ಅನುಕೂಲಕರವಾಗುವಂತೆ ಪ್ರಾಧಿಕಾರ ನಡೆದುಕೊಳ್ಳಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇನ್ನು, ಕಳೆದೊಂದು ದಶಕದಲ್ಲಿ 20,711 ಸಂಸ್ಥೆಗಳ ವಿದೇಶಿ ದೇಣಿಗೆಗಳ ಪರವಾನಗಿಗಳನ್ನು ರದ್ದುಪಡಿಸಲಾಗಿದೆ. ಪ್ರಸ್ತುತ ಎಫ್‌ಸಿಆರ್‌ಎ ಪ್ರಮಾಣಪತ್ರವನ್ನು ಹೊಂದಿರುವ 16,000 ಸಂಸ್ಥೆಗಳಷ್ಟೇ ಕಾರ್ಯ ನಿರ್ವಹಿಸುತ್ತಿವೆ ಎನ್ನುವುದು ಇಲ್ಲಿ ಉಲ್ಲೇಖನೀಯ.
ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಕಾಯ್ದೆ – 2020ರ (ಎಫ್‌ಆರ್‌ಸಿಎ) ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ್ದ ಸುಪ್ರೀಂ ಕೋರ್ಟ್ ಮಸೂದೆಯ ಉದ್ದೇಶವನ್ನು ಎತ್ತಿ ಹಿಡಿದಿತ್ತು. ದೇಶದ ಸರ್ಕಾರೇತರ ಸಂಸ್ಥೆಗಳು ವಿದೇಶಿ ದೇಣಿಗೆಯನ್ನು ಬಳಸುತ್ತಿರುವುದಕ್ಕೆ ನಿರ್ಬಂಧ ವಿಧಿಸಿರುವ ವಿದೇಶಿ ದೇಣಿಗೆ(ನಿಯಂತ್ರಣ) ತಿದ್ದುಪಡಿ ಕಾಯ್ದೆ 2020 (ಎಫ್‌ಸಿಆರ್‌ಎ) ಅನ್ನು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ನೇತೃತ್ವದ ತ್ರಿಸದಸ್ಯ ಪೀಠ ಎತ್ತಿ ಹಿಡಿದಿತ್ತು. ಭಾರತದಲ್ಲಿ ದೇಣಿಗೆ ನೀಡುವವರಿಗೆ ಬರವಿಲ್ಲ ಎಂದಿದ್ದ ಸುಪ್ರೀಂ ಕೋರ್ಟ್, ದೇಣಿಗೆಯ ಮೂಲಕ ವಿದೇಶಗಳ ಪ್ರಭಾವವನ್ನು ನಿಯಂತ್ರಿಸಲು ತರಲಾದ ತಿದ್ದುಪಡಿ ಎಂದೂ ಕೂಡ ಅಭಿಪ್ರಾಯಪಟ್ಟಿತ್ತು. ಮಾತ್ರವಲ್ಲದೇ, ದೇಶದಲ್ಲೇ ದೇಣಿಗೆ ನೀಡುವವರತ್ತ ಗಮನ ಹರಿಸಿ ಎಂದು ಸರ್ಕಾರೇತರ ಸಂಸ್ಥೆಗಳ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿದಾರರಿಗೆ ಸಲಹೆ ನೀಡಿತ್ತು ಎನ್ನವುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ : ಹಿಂದಿ ಹೇರಿಕೆ ಅಷ್ಟೊಂದು ದೊಡ್ಡ ವಿಚಾರವಾ? ಹೌದು, ಬಹಳ ದೊಡ್ಡದು ಏಕೆಂದರೆ…
2010ರ ಮೂಲಶಾಸನಕ್ಕೆ ತಿದ್ದುಪಡಿ ತರುವುದು ಮೂಲ ಉದ್ದೇಶ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೇ, ಇದು ಸರ್ಕಾರೇತರ ಸಂಸ್ಥೆಗಳ ಉದ್ದೇಶಗಳಿಗೆ ಮಾರಕವಾಗಿ ಪರಿಣಮಿಸಲಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಈಗಾಗಲೇ ಕೇರಳದಲ್ಲಿ ಈ ಸಂಬಂಧಿಸಿದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ವತಃ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ ಪತ್ರ ಬವರೆದಿದ್ದಾರೆ. ಮೋದಿ ಅವರಿಗೆ ಬರೆದ ಪತ್ರದಲ್ಲಿ ಕೇಂದ್ರದ ಈ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ್ದು, 2026ರ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ (FCRA)ಯು “ನಾಗರಿಕ ಸಮಾಜ ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳ ಸ್ವಾಯತ್ತತೆಯ ಮೇಲಿನ ನೇರ ದಾಳಿ” ಎಂದು ಹೇಳಿದ್ದಾರೆ. ತಾಂತ್ರಿಕ ಕಾರಣಗಳಿಗಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಈ ಮಸೂದೆ ನೀಡುವುದರಿಂದ, ಇದು ಸರ್ಕಾರೇತರ ಸಂಸ್ಥೆಗಳ ಮೇಲೆ ದೌರ್ಜನ್ಯಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಸೇವಾ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು, ವಿದೇಶಿ ದೇಣಿಗೆ ಮಸೂದೆಯನ್ನು ʼಅಪಾಯಕಾರಿʼ ಎಂದು ವಿಪಕ್ಷಗಳು ಟೀಕಿಸಿವೆ. ನಾಗರಿಕ ಸಂಘಟನೆಗಳು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಒಂದು ಮಸೂದೆಯು ಸರ್ಕಾರೇತರ ಸಂಸ್ಥೆಗಳ ಸದುದ್ದೇಶಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಎಂದರೇ, ಅದರ ಬಗ್ಗೆ ಪರಿಶೀಲಿಸಬೇಕಾದ ಅನಿವಾರ್ಯತೆ ಇದೆ.




