ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ 90 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದಲ್ಲಿ ಅವರ ನೆಚ್ಚಿನ ನಿಂದನಾ ಪದವನ್ನು ಒಮ್ಮೆಯೂ ಬಳಸದೆ ಅವರು ಪವಾಡ ಸೃಷ್ಟಿಸಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ದೇಶವು ನಕ್ಸಲರಿಂದ ಮುಕ್ತವಾಗಿದೆ ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ಅವರನ್ನು ಕಾಂಗ್ರೆಸ್ ಟೀಕಿಸಿದೆ. ಅಮಿತ್ ಶಾ ಅವರಿಗೆ ಟಾಂಗ್ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ನಿನ್ನೆ ಗೃಹ ಸಚಿವರು ಲೋಕಸಭೆಯಲ್ಲಿ ಒಂದು ಪವಾಡವನ್ನು ಸಾಧಿಸಿದ್ದಾರೆ. ಈ ಹಿಂದೆ ಅವರು ಬಳಸಿದ್ದ ಮತ್ತು ಹಲವು ಸಂದರ್ಭಗಳಲ್ಲಿ ಕಡತದಿಂದ ತೆಗೆದುಹಾಕಬೇಕಾಗಿ ಬಂದಿದ್ದ ಅವರ ನೆಚ್ಚಿನ ನಿಂದನಾ ಪದವನ್ನು ಒಮ್ಮೆಯೂ ಬಳಸದೆ ಅವರು 90 ನಿಮಿಷಗಳ ಕಾಲ ಆರ್ಭಟಿಸಿದ್ದಾರೆ” ಎಂದು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ತಾವು ‘ಎಕ್ಸ್’ನಲ್ಲಿ ಪ್ರಕಟಿಸಿದ್ದ ಪೋಸ್ಟ್ ಅನ್ನು ರಮೇಶ್ ಉಲ್ಲೇಖಿಸಿದ್ದಾರೆ. ಅದರಲ್ಲಿ; ಲೋಕಸಭೆಯಲ್ಲಿ ಶಾ ಬಳಸಿದ್ದ ಅವರ ನೆಚ್ಚಿನ ಪದವೊಂದನ್ನು ಕಡತದಿಂದ ತೆಗೆದುಹಾಕಲಾಗಿತ್ತು ಎಂದು ಲೇವಡಿ ಮಾಡಲಾಗಿದೆ.
ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ್ದ ಶಾ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು, “ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1970ರ ದಶಕದಲ್ಲಿ ಅಂದಿನ ಅವಿಭಜಿತ ಆಂಧ್ರಪ್ರದೇಶದ ಚುನಾವಣೆಯಲ್ಲಿ ನಕ್ಸಲರ ಬೆಂಬಲವನ್ನು ಪಡೆದಿದ್ದರು. ಮಾವೋವಾದಿ ಸಿದ್ಧಾಂತದಿಂದ ಪ್ರಭಾವಿತರಾಗಿದ್ದರು. ಛತ್ತೀಸ್‌ಗಢ, ಜಾರ್ಖಂಡ್, ಒಡಿಶಾ, ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಆಂಧ್ರಪ್ರದೇಶ ಹಾಗೂ ತೆಲಂಗಾಣದಾದ್ಯಂತ ಹರಡಿದ್ದ ‘ರೆಡ್ ಕಾರಿಡಾರ್’ ಅನ್ನು ಅಧಿಕಾರದಲ್ಲಿರುವವರ ಬೆಂಬಲವಿಲ್ಲದೆ ಸೃಷ್ಟಿಸಲು ಸಾಧ್ಯವಿರಲಿಲ್ಲವೆಂದು ತಜ್ಞರು ಹೇಳುತ್ತಾರೆ” ಎಂದು ಆರೋಪಿಸಿದ್ದರು.



