ಸಮಾಜದಲ್ಲಿ ಹೆಚ್ಚುತ್ತಿರುವ ಧ್ರುವೀಕರಣವನ್ನು ಕಡಿಮೆ ಮಾಡಿ, ತನ್ನೆಡೆಗೆ ಒಂದು ಮೆಜಾರಿಟಿಯನ್ನು ರೂಪಿಸಿಕೊಳ್ಳುವ ಅತ್ಯಪೂರ್ವ ಅವಕಾಶ ಕಾಂಗ್ರೆಸ್‌ಗೆ ಇದ್ದರೂ, ಆ ವಿಚಾರದಲ್ಲಿ ದಿಕ್ಕೇಡಿಯಂತಿದೆ. ಕನಿಷ್ಠ ಬದ್ಧತೆಯನ್ನೂ ಈ ಪಕ್ಷ ತೋರುತ್ತಿಲ್ಲ
ವರ್ತಮಾನದ ರಾಜಕಾರಣದ ಒಂದು ಘೋರ ವಾಸ್ತವವು ದಾವಣಗೆರೆ ಉಪ ಚುನಾವಣೆಯ ಸಂದರ್ಭದಲ್ಲಿ ಮತ್ತೊಮ್ಮೆ ಅನಾವರಣಗೊಂಡಿದೆ. ದೇಶದ ಸಮಾಜದಲ್ಲಿ ಮತ್ತು ರಾಜಕಾರಣದಲ್ಲಿ ಘೋಷಿತ ಕೋಮುವಾದೀ ಸಿದ್ಧಾಂತದ ಬಿಜೆಪಿಯು ಮುಸ್ಲಿಂ ಸಮುದಾಯವನ್ನು ಸತತವಾಗಿ ದಾಳಿಗೆ ಗುರಿಯಾಗಿಸಿ ಅಂಚಿಗೆ ತಳ್ಳುತ್ತಿದೆ. ಘೋಷಿತ ಸೆಕ್ಯುಲರ್ ಸಿದ್ಧಾಂತದ ಕಾಂಗ್ರೆಸ್ ಪಕ್ಷವೂ ಸಹಾ ಮುಸ್ಲಿಂ ಸಮುದಾಯಕ್ಕೆ ನ್ಯಾಯ ಒದಗಿಸುತ್ತಿಲ್ಲ. ಎರಡೂ ಪಕ್ಷಗಳ ಈ ನಡೆಗೆ ಕಾರಣ ಒಂದೇ ಅಲ್ಲ. ಬಿಜೆಪಿಯು ಒಂದು ಅಜೆಂಡಾದ ಭಾಗವಾಗಿ ಸಮುದಾಯವನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಕೆಲಸದಲ್ಲಿ ನಿರತರಾಗಿದೆ. ಆದರೆ, ಈ ಸಮುದಾಯದ ಅಖಂಡ ಬೆಂಬಲವನ್ನು ಪಡೆದುಕೊಂಡಿರುವ ಕಾಂಗ್ರೆಸ್ ಬಿಜೆಪಿಯ ಕೋಮುವಾದಕ್ಕೆ ಪರಿಣಾಮಕಾರಿಯಾದ ಪ್ರತಿಮದ್ದನ್ನು ಹೊಂದಿಲ್ಲ. ಅದರ ಬಳಿ ಕೋಮು ಧ್ರುವೀಕರಣವನ್ನು ಎದುರಿಸುವ ತಂತ್ರವೂ ಸ್ಪಷ್ಟವಿಲ್ಲ; ತನ್ನ ಘೋಷಿತ ಸಿದ್ಧಾಂತವನ್ನು ಎತ್ತಿ ಹಿಡಿಯುವ ಮತ್ತು ಸಮೂಹ ನೆಲೆಯನ್ನು ರಕ್ಷಿಸುವ ಬದ್ಧತೆಯೂ ಇಲ್ಲ. ಜೊತೆಗೆ ಸಾಂಪ್ರದಾಯಿಕ ರಾಜಕಾರಣವೇ ರೂಢಿಯಾಗಿದ್ದು ಬಲಾಢ್ಯರನ್ನು ಎದುರು ಹಾಕಿಕೊಳ್ಳುವ ಛಾತಿಯೂ ಇಲ್ಲ. ಇವೆಲ್ಲದರ ಕಾರಣದಿಂದ ಅನ್ಯಾಯವನ್ನು ಅನುಭವಿಸುವುದು ಮಾತ್ರ ಮುಸ್ಲಿಮರಾಗಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ನಡೆಯುತ್ತಿರುವುದು ಅದೇ ಆಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರವು ಶೇ.35ರಷ್ಟು ಮುಸ್ಲಿಂ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿರುವುದರಿಂದ ಈ ವಿಷಯವು ಎದ್ದು ಕಾಣುತ್ತಿದೆ. ದೇಶದ ರಾಜಕಾರಣದಲ್ಲಿ ಶೇ.25ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರದ, ಆದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲ ಹೊಂದಿರುವ ಜಾತಿಗಳೇ ಯಜಮಾನಿಕೆ ತೋರುತ್ತಾ ಬಂದಿವೆ. ಶೇ.75ರಷ್ಟಿರುವ ಸಮುದಾಯಗಳಿಗೆ ಅಂತಹ ಯಜಮಾನಿಕೆ ಅಸಾಧ್ಯವಾಗಿತ್ತು. ಸಾಂವಿಧಾನಿಕ ರಕ್ಷಣೆಯ ಕಾರಣಕ್ಕೆ ಪರಿಶಿಷ್ಟ ಜಾತಿ, ಪಂಗಡಗಳು ಪ್ರಾತಿನಿಧ್ಯ ಪಡೆದುಕೊಂಡರೂ, ಬಲ ಪಡೆಯುವುದು ಸುಲಭವಿಲ್ಲ. ಆದರೆ, ʼ70ರ ದಶಕದಲ್ಲಿ ಕರ್ನಾಟಕದಲ್ಲಿ ದೇವರಾಜ ಅರಸರ ನೇತೃತ್ವದಲ್ಲಿ ಈ ಬಹುಸಂಖ್ಯಾತ ಜಾತಿಗಳು ಆಳ್ವಿಕೆಯಲ್ಲಿ ಗಣನೀಯ ಪಾಲು ಪಡೆಯುತ್ತಿದ್ದರು ಎಂದು ಗತ ಇತಿಹಾಸದ ಮೆಲುಕು ಹಾಕುವ ಕೆಲಸ ಮಾತ್ರ ಆಗಾಗ ನಡೆಯುತ್ತಿರುತ್ತದೆ.
1990ರ ನಂತರ ಬಿಜೆಪಿಯು ಪ್ರವರ್ಧಮಾನಕ್ಕೆ ಬಂದಂತೆಲ್ಲಾ, ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯವು ಗಂಭೀರ ಅಪಾಯವನ್ನೆದುರಿಸುತ್ತಾ ಬಂದಿತು. 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ಸು ಮುಸ್ಲಿಮರಿಗೆ ಟಿಕೆಟ್ ಕೊಟ್ಟಿದ್ದು, 9ರಲ್ಲಿ ಗೆದ್ದಿದ್ದರು. ನಂತರ ಶಿಗ್ಗಾಂವ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಇನ್ನೊಬ್ಬ ಮುಸ್ಲಿಂ ಅಭ್ಯರ್ಥಿ ಗೆದ್ದರು. ಸುಮಾರು 19 ಕ್ಷೇತ್ರಗಳಲ್ಲಿ ಮುಸ್ಲಿಮರು ಶೇ.30ರಷ್ಟಿದ್ದರೂ, ಇಷ್ಠೇ ಸಾಧ್ಯ ಎಂಬ ಚರ್ಚೆ ಚುನಾವಣೆಗೆ ಮುಂಚೆಯೇ ಒಂದೆಡೆ ನಡೆದಿತ್ತು. 2023ರ ಚುನಾವಣೆಯ ಸಂದರ್ಭದಲ್ಲಿ ದೀರ್ಘಕಾಲ ಕರ್ನಾಟಕದಲ್ಲಿದ್ದ ಪ್ರೊ.ಯೋಗೇಂದ್ರ ಯಾದವ್ ಅವರು ʼಕರ್ನಾಟಕವೇ ಪರವಾಗಿಲ್ಲ; ಗಣನೀಯ ಪ್ರಾತಿನಿಧ್ಯ ಸಿಕ್ಕಿದೆʼ ಎಂದು ಎಲ್ಲರನ್ನೂ ಅಚ್ಚರಿಗೆ ಕೆಡವಿದ್ದರು.
ಅವರು ಹೇಳಿದ್ದೇನೆಂದರೆ, ಒಂದು ವೇಳೆ ಶೇ.30 ಇರಲಿ, ಶೇ.40ರಷ್ಟು ಮುಸ್ಲಿಮರಿದ್ದರೂ ʼಜಾತ್ಯತೀತ ಪಕ್ಷಗಳುʼ ಉತ್ತರ ಭಾರತದಲ್ಲಿ ಖಂಡಿತಾ ಟಿಕೆಟ್ ಕೊಡುವುದಿಲ್ಲ. ಏಕೆಂದರೆ, ಉಳಿದ ಶೇ.60ರಿಂದ 70ರಷ್ಟು ಹಿಂದೂಗಳು ಧ್ರುವೀಕರಣವಾಗಿಬಿಡುತ್ತಾರೆ ಎಂಬುದೇ ಅದಕ್ಕೆ ಕಾರಣ. ಮುಸ್ಲಿಂ ಬಾಹುಳ್ಯ ಹೆಚ್ಚಿದ್ದಲ್ಲಿ ಹಿಂದೂ ಧ್ರುವೀಕರಣ ಸುಲಭ. ಅದೇ ಸಂದರ್ಭದಲ್ಲಿ ಒಂದು ವೇಳೆ ಶೇ.50ರಷ್ಟು ಮುಸ್ಲಿಮರಿದ್ದರೂ ಕೊಡುವುದಿಲ್ಲ ಅಥವಾ ಗೆಲ್ಲುವುದಿಲ್ಲ. ಏಕೆಂದರೆ, ಆಗ ಒಂದಕ್ಕಿಂತ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧೆ ಮಾಡಿ, ಮುಸ್ಲಿಂ ಅಭ್ಯರ್ಥಿಗಳು ಸೋಲುತ್ತಾರೆ. ಶೇ.65ಕ್ಕಿಂತ ಹೆಚ್ಚು ಮುಸ್ಲಿಂ ಮತದಾರರಿದ್ದರೆ ಮಾತ್ರ ಅವರಿಗೆ ಟಿಕೆಟ್ ಕೊಡುತ್ತಾರೆ – ಎಂದಿದ್ದರು. ಇದು ಈ ದೇಶ ಸಾಗುತ್ತಿರುವ ದಿಕ್ಕಿಗೆ ಸೂಚಕ ಎಂದು ನಾವು ಪರಿಗಣಿಸಬಹುದು.
ಯಾವುದೇ ಸಮೀಕ್ಷೆ, ವಿಶ್ಲೇಷಣೆಗಳನ್ನು ನೋಡಿದರೂ ಅಥವಾ ರಾಜಕೀಯ ಅಂದಾಜು ಇರುವ ಯಾರೇ ಆದರೂ ಹೇಳಬಹುದಾದ ಎರಡು ಸಂಗತಿಗಳಿವೆ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಬರುವ ಮತಗಳಲ್ಲಿ ಶೇ.90ರಷ್ಟು ಮತಗಳು ಅಹಿಂದ ಸಮುದಾಯಗಳಿಂದಲೇ ಬರುತ್ತವೆ ಮತ್ತು ಮುಸ್ಲಿಮರಲ್ಲಿ ಶೇ.90ಕ್ಕಿಂತ ಹೆಚ್ಚು ಮತದಾರರು ಕಾಂಗ್ರೆಸ್ಸಿಗೇ ಮತ ಹಾಕಿದ್ದಾರೆ. ಹೀಗಿರುವಾಗ, ಕಾಂಗ್ರೆಸ್ ಪಕ್ಷವು ಮುಸ್ಲಿಮರ ಹಿತ ಕಾಯುವ ಕೆಲಸವನ್ನು ಮಾಡುವುದು ಸಹಜವಾಗಿರಬೇಕಿತ್ತು. ಆದರೆ, ಸಮಾಜದಲ್ಲಿ ಧ್ರುವೀಕರಣ ಹೆಚ್ಚಾಗಿರುವುದು ಮತ್ತು ಆ ಕಾರಣಕ್ಕೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಸೋಲುವುದು ನಿಜ. ಹೀಗಾಗಿ ಒಂದು ರಾಜಕೀಯ ಪಕ್ಷವಾಗಿ, ಅಧಿಕಾರಕ್ಕೇರಬೇಕಾದರೆ ಚುನಾವಣಾ ಗೆಲುವೇ ಮಾನದಂಡವಾಗಬೇಕಲ್ಲವೇ? ಈ ಮಾತು ಮುಸ್ಲಿಮರಿಗೆ ಅನ್ವಯಿಸಿದ ಹಾಗೆಯೇ ಇತರ ಶೋಷಿತ ಸಮುದಾಯಗಳಿಗೂ, ಮಹಿಳೆಯರಿಗೂ ಸಹಾ ಅನ್ವಯಿಸುತ್ತದೆ. ಇದೇ ಕಾರಣಕ್ಕೆ ಮತ್ತೆ ಮತ್ತೆ ಬಲಾಢ್ಯ ಜಾತಿಗಳೇ ಹೆಚ್ಚೆಚ್ಚು ಅಧಿಕಾರವನ್ನು ಅನುಭವಿಸುತ್ತಾ ಇರುತ್ತಾರೆ.

ಹಾಗಾದರೆ, 1978ರಲ್ಲಿ ಕರ್ನಾಟಕದಲ್ಲಿ 16 ಮುಸ್ಲಿಂ ಶಾಸಕರಿದ್ದರು ಎಂಬುದು ಮತ್ತು ಅತಿ ಹೆಚ್ಚು ಹಿಂದುಳಿದ ಜಾತಿಗಳಿಗೆ ಸೇರಿದ ಶಾಸಕರು ಇದ್ದರು ಎಂದು ಜಪಿಸುವುದೇಕೆ? ʼಆ ಕಾಲ ಬೇರೆಯಾಗಿತ್ತು; ಅದು ಇಂದಿರಾಗಾಂಧಿಯ ಅಲೆಯಲ್ಲಿ ಆದ ಪವಾಡವಷ್ಟೇʼ ಎಂಬ ಸಮಜಾಯಿಷಿಯೂ ಜೊತೆಯಲ್ಲೇ ಸಿದ್ಧವಾಗಿರುತ್ತದೆ. ಮುಸ್ಲಿಮರಿಗೆ ಆದದ್ದೇ, ಇತರ ಹಿಂದುಳಿದ ಜಾತಿಗಳವರಿಗೂ ಆಗುತ್ತದೆ ಎಂಬುದನ್ನು ಅರಿಯದೇ, ಅವರೂ ಬಿಜೆಪಿ ಮತ್ತು ಆರೆಸ್ಸೆಸ್ಸಿನ ಧ್ರುವೀಕರಣಕ್ಕೆ ಬಲಿಪಶುಗಳಾಗುತ್ತಾರೆ. ಹಾಗೆ ನೋಡಿದರೆ ಮುಸ್ಲಿಮರಿಗಿಂತ ಹೆಚ್ಚು ಪ್ರಾತಿನಿಧ್ಯದ ಕೊರತೆಯನ್ನು ಅನುಭವಿಸುವುದು ಸಣ್ಣ ಪುಟ್ಟ ಹಿಂದುಳಿದ ಜಾತಿಗಳು. ಮುಸ್ಲಿಮರು ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇರುವುದು ಮಾತ್ರವಲ್ಲದೇ, ಕೆಲವು ಕ್ಷೇತ್ರಗಳಲ್ಲಿ ʼಚುನಾವಣೆಯಲ್ಲಿ ಗೆಲ್ಲಲು ಬೇಕಾದಷ್ಟುʼ ಸಂಖ್ಯೆಯಲ್ಲಿದ್ದಾರೆ. ಆದರೆ, ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಅತೀ ಕಡಿಮೆ ಸಂಖ್ಯೆಯಲ್ಲಿ ಹಂಚಿ ಹೋಗಿರುವ ಹಿಂದುಳಿದ ಜಾತಿಗಳ ಕತೆ ಏನು?
ಅದರ ಜೊತೆ ಜೊತೆಗೇ ಬಲಾಢ್ಯ ಜಾತಿಗಳಿಂದ ಬಂದ ಈ ʼಸೆಕ್ಯುಲರ್ʼ ಪಕ್ಷಗಳ ಅಭ್ಯರ್ಥಿಗಳೂ ಗೆಲ್ಲುವುದು ಸೆಕ್ಯುಲರ್ ಪಕ್ಷಗಳ ಅಹಿಂದ/ಬಹುಜನ ಸಾಮಾಜಿಕ ನೆಲೆಯಿಂದ ತಾನೇ? ಹಾಗಿದ್ದ ಮೇಲೆ ಈ ಬಲಾಢ್ಯರ ಕರ್ತವ್ಯವೇನು? ಈ ಪ್ರಶ್ನೆಯನ್ನು ಎಂದೆಂದೂ ಕಾಂಗ್ರೆಸ್ ಪಕ್ಷ ಹಾಕಿಕೊಳ್ಳದೇ ಇರುವುದರಿಂದಲೇ ಮತ್ತು ಅದನ್ನು ಧೈರ್ಯದಿಂದ ಕೇಳದೇ ಇರುವುದರಿಂದಲೇ ಯಥಾಸ್ಥಿತಿಯೆಂಬ ದುಸ್ಥಿತಿ ಇರುವುದು.
ಈ ಲೇಖನ ಓದಿದ್ದೀರಾ?: ಹಿಂದಿ ಹೇರಿಕೆ ಅಷ್ಟೊಂದು ದೊಡ್ಡ ವಿಚಾರವಾ? ಹೌದು, ಬಹಳ ದೊಡ್ಡದು ಏಕೆಂದರೆ…
ಹಿಂದುಳಿದ ಜಾತಿಗಳು, ಸಂಖ್ಯೆಯಲ್ಲಿ ಸಣ್ಣಪುಟ್ಟ ಜಾತಿಗಳು ಅಥವಾ ಮುಸ್ಲಿಂ ಸಮುದಾಯವನ್ನಷ್ಟೇ ಪ್ರತಿನಿಧಿಸುವ ಸಂಘಟನೆಗಳು, ಗುಂಪುಗಳು, ಚಿಂತಕರು, ಅಕ್ಟಿವಿಸ್ಟುಗಳು ತಮ್ಮ ತಮ್ಮ ಸಮುದಾಯದ ಹಕ್ಕನ್ನು ಪ್ರತಿಪಾದಿಸುವುದು ಸುಲಭ. ಆದರೆ, ರಾಜಕೀಯ ಪಕ್ಷವೊಂದು ವಿವಿಧ ಸಮುದಾಯಗಳನ್ನು ಬೆಸೆಯಬಲ್ಲ ಒಂದು ಸಮೀಕರಣವನ್ನು, ತಂತ್ರವನ್ನು, ಘೋಷಣೆಯನ್ನು, ಕಥನವನ್ನು ಮುಂದಿಟ್ಟು ʼಮೆಜಾರಿಟಿʼಯನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಅದಿಲ್ಲದೇ, ಸದರಿ ಪಕ್ಷವು ಅಧಿಕಾರವನ್ನು ಪಡೆದುಕೊಳ್ಳಲಾಗುವುದಿಲ್ಲ. ಅದನ್ನೇ ನಾವು ರಾಜಕಾರಣ ಎಂದು ಕರೆಯುವುದು. ಅಂತಹ ರಾಜಕಾರಣವನ್ನು ಮಾಡುವುದರಲ್ಲಿ ಕಾಂಗ್ರೆಸ್ಸು ವಿಫಲವಾಗಿದೆ.
ಅದರಲ್ಲೂ ಮುಸ್ಲಿಂ ಸಮುದಾಯದ ವಿಚಾರದಲ್ಲಿ ಘೋರವಾಗಿ ವಿಫಲವಾಗಿದೆ. ಚುನಾವಣೆಯಲ್ಲಿ ಟಿಕೆಟ್ ಕೊಡುವುದು ಹೋಗಲಿ, ಹಿಜಾಬ್ ವಿಚಾರದಲ್ಲಿ ಅಮಾನವೀಯವಾದ ಕೃತ್ಯಕ್ಕೆ ಕೈ ಹಾಕಿದ ಬಿಜೆಪಿಯನ್ನು ಸೋಲಿಸಿ ದೊಡ್ಡ ಬಹುಮತದಿಂದ ಆರಿಸಿ ಬಂದ ಮೇಲೂ ಆ ನಿಟ್ಟಿನಲ್ಲಿ ಒಂದು ಸರಳ ಸರ್ಕಾರೀ ಆದೇಶ ಹೊರಡಿಸಿಲ್ಲ; 2 ಬಿ ಮೀಸಲಾತಿಯ ವಿಚಾರದಲ್ಲಿ ಕ್ರಮ ತೆಗೆದುಕೊಂಡಿಲ್ಲ; ಯತ್ನಾಳರಂಥವರು, ಸಿ.ಟಿ.ರವಿಯಂಥವರು, ಸುನಿಲ್ ಕುಮಾರನಂಥವರು ಹೋಗಲಿ, ಕನಿಷ್ಠ ಪುನೀತ್ ಕೆರೆಹಳ್ಳಿಯನ್ನು ಹೆಡೆಮುರಿ ಕಟ್ಟಲಾಗಿಲ್ಲ. ಎಲ್ಲಾ ಏಕೆಂದರೆ, ತನ್ನ ಘೋಷಿತ ಸಿದ್ಧಾಂತದ ಆಧಾರದ ಮೇಲೆ ರಾಜಕೀಯ ಮಾಡಲು ಅದರಿಂದ ಆಗುತ್ತಿಲ್ಲ. ಸಮಾಜದಲ್ಲಿ ಹೆಚ್ಚುತ್ತಿರುವ ಧ್ರುವೀಕರಣವನ್ನು ಕಡಿಮೆ ಮಾಡಿ, ತನ್ನೆಡೆಗೆ ಒಂದು ಮೆಜಾರಿಟಿಯನ್ನು ರೂಪಿಸಿಕೊಳ್ಳುವ ಅತ್ಯಪೂರ್ವ ಅವಕಾಶ ಅದಕ್ಕಿದ್ದರೂ, ಆ ವಿಚಾರದಲ್ಲಿ ದಿಕ್ಕೇಡಿಯಂತಿದೆ. ಕನಿಷ್ಠ ಬದ್ಧತೆಯನ್ನೂ ಈ ಪಕ್ಷ ತೋರುತ್ತಿಲ್ಲ. ತನ್ನೆಲ್ಲಾ ಕಾರ್ಯಕರ್ತರಿಗೆ ನಾಯಕತ್ವ ಕೊಟ್ಟು ಸಾಮಾಜಿಕ ನ್ಯಾಯ ಮತ್ತು ಸೆಕ್ಯುಲರಿಸಂಅನ್ನು ಸಮಾಜದಲ್ಲಿ ಪಸರಿಸುವುದೇ ಆ ಪಕ್ಷ ಮಾಡಬೇಕಿದ್ದ ಕೆಲಸ. ಆದರೆ, ಮಲ್ಲಿಕಾರ್ಜುನ್ ರೀತಿಯ ಫ್ಯೂಡಲ್ ನಾಯಕರನ್ನಿಟ್ಟುಕೊಂಡು, ಪಕ್ಕದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲಿ ಎಂದು ಕರೆ ಕೊಡುವ ಶಾಮನೂರು ಶಿವಶಂಕರಪ್ಪನವರಂಥವರನ್ನು ದೀರ್ಘಕಾಲ ನಾಯಕರಾಗಿಸಿಕೊಂಡು ಸಾಧಿಸಬಹುದಾದ ಕೆಲಸವಲ್ಲ ಅದು.
ಇವೆಲ್ಲವೂ ಎರಡು ಚುನಾವಣೆಗಳ ನಡುವೆ ಮಾಡಬೇಕಾದ ಕೆಲಸ. ಅವೆಲ್ಲವನ್ನೂ ಮಾಡದೇ, ಇದ್ದಕ್ಕಿದ್ದಂತೆ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ಕೊಡುವಾಗ ʼಸೆಕ್ಯುಲರ್ ಆಗಿಬಿಡುವುದುʼ ಅಷ್ಟು ಸುಲಭವಲ್ಲ. ಇವೆಲ್ಲದರ ಮಧ್ಯೆಯೂ ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರುವುದು ಸಾಧ್ಯವಿತ್ತು. ಅದಕ್ಕೆ ಬೇಕಿದ್ದ ಪ್ರಬುದ್ಧತೆಯನ್ನು, ಬದ್ಧತೆಯನ್ನು ಕಾಂಗ್ರೆಸ್ಸಿನ ನಾಯಕರು ತೋರಲಿಲ್ಲ.
ಕಾಂಗ್ರೆಸ್ಸಿನ ರಾಜಕೀಯದಲ್ಲಿ ಸಂವಿಧಾನದ ತಾತ್ವಿಕತೆ, ಸಾಮಾಜಿಕ ನ್ಯಾಯದ ಆಶಯ ಮತ್ತು ಸೆಕ್ಯುಲರಿಸಂನ ಹೂರಣ ಇರುವುದೇ ಆದಲ್ಲಿ ಚುನಾವಣೆಗಳ ನಡುವೆ ಮತ್ತು ಚುನಾವಣೆಗಳ ಹೊತ್ತಿನಲ್ಲಿ ಅದು ಅಗತ್ಯವಿರುವ ಮುಂದಡಿಯಿಟ್ಟು ಕೆಲಸ ಮಾಡಬೇಕು. ಪರಿಸ್ಥಿತಿ ಎತ್ತ ಕಡೆ ಎಳೆದುಕೊಂಡು ಹೋಗುತ್ತದೋ ಅತ್ತ ಕಡೆಗೆ ವಾಲಿಬಿಟ್ಟು ನಂತರ ಯಾರ್ಯಾರ ಮೇಲೋ ಗೂಬೆ ಕೂರಿಸಿದರೆ, ಈ ದೇಶ ಈಗ ಎತ್ತ ಕಡೆಗೆ ಹೋಗುತ್ತಿದೆಯೋ ಆ ಕಡೆಗೇ ಚುನಾವಣಾ ಫಲಿತಾಂಶವೂ ಇರುತ್ತದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆಯಲ್ಲಿ ಸೋಲು-ಗೆಲುವುಗಳೇನೇ ಆಗಲಿ, ಕಾಂಗ್ರೆಸ್ಸಿನ ರಾಜಕೀಯ ಸೋಲುತ್ತದೆ; ಬಿಜೆಪಿಯ ರಾಜಕೀಯ ಗೆಲ್ಲುತ್ತದೆ. ಇವೆಲ್ಲವೂ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾದದ್ದಲ್ಲ; ಬಹುತೇಕ ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳಿಗೂ ಅನ್ವಯಿಸುತ್ತದೆ.




