- ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ. ಶರಣ ಪ್ರಕಾಶ ಪಾಟೀಲ ನೇಮಕ
- ಸ್ಥಳೀಯರಾದ ಸಚಿವ ಎನ್ ಎಸ್ ಬೋಸರಾಜು ಅವರನ್ನು ನೇಮಿಸುವಂತೆ ಆಗ್ರಹ
ಡಾ. ಶರಣಪ್ರಕಾಶ ಪಾಟೀಲರನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಜಿಲ್ಲೆಯ ನಾನಾ ಸಂಘಟನೆಗಳ ಮುಖಂಡರು ಪ್ರತ್ಯೇಕ ಪ್ರತಿಭಟನೆ ನಡೆಸಿದ್ದು, ‘ಗೋ ಬ್ಯಾಕ್ ಶರಣಪ್ರಕಾಶ ಪಾಟೀಲ’ ಎಂಬ ಘೋಷಣೆಯೊಂದಿಗೆ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.
ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರದ ಆದೇಶ ಹಿಂಪಡೆಯಬೇಕು ಮತ್ತು ಸ್ಥಳೀಯರಾದ ಸಚಿವ ಎನ್ ಎಸ್ ಬೋಸರಾಜು ಅವರಿಗೆ ರಾಯಚೂರು ಜಿಲ್ಲಾ ಉಸ್ತುವಾರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ರಾಯಚೂರು ನಾಗರಿಕರ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲೆಗೆ ಏಮ್ಸ್ ಮತ್ತು ರಾಯಚೂರು ಅಭಿವೃದ್ಧಿ ವಿರೋಧಿ ಡಾ. ಶರಣ ಪ್ರಕಾಶ ಪಾಟೀಲ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿರುವುದು ರಾಯಚೂರು ಸಮಗ್ರ ಅಭಿವೃದ್ಧಿಗೆ ಹಿನ್ನೆಡೆಯಾಗಲಿದೆ. ಕೂಡಲೇ ರಾಜ್ಯ ಸರ್ಕಾರ ಈ ಆದೇಶವನ್ನು ಹಿಂಪಡೆಯಬೇಕು ಎಂದು ಘೋಷಣೆ ಕೂಗಿವುದರ ಮೂಲಕ ರಾಜ್ಯ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಗೆ ಕಾಂಗ್ರೆಸ್ ಸರ್ಕಾರದಿಂದ ಮತ್ತೊಮ್ಮೆ ಅನ್ಯಾಯವಾಗಿದ್ದು, ಜಿಲ್ಲೆಯ ಉಸ್ತುವಾರಿಯನ್ನು ಅನ್ಯ ಜಿಲ್ಲೆಯವರಿಗೆ ವಹಿಸಿದ್ದು ಅಭಿವೃದ್ಧಿಗೆ ಹಿನ್ನಡೆ ಯಾಗಲಿದೆ. ಹೀಗಾಗಿ ಸಚಿವ ಬೋಸರಾಜ್ ಅವರಿಗೆ ಜಿಲ್ಲೆಯ ಉಸ್ತುವಾರಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್ ಮಾರೆಪ್ಪ, ರಾಘವೇಂದ್ರ ಕುಷ್ಟಗಿ, ಬಸವರಾಜ ಕಳಸ, ಎನ್ ಮಹಾವೀರ್, ಖಾಜಾ ಅಸ್ಲಾಂ ಅಹ್ಮದ್, ಜಾನ್ ವೆಸ್ಲಿ, ಮಾರೆಪ್ಪ ಹರವಿ, ಅಸಿಮುದ್ದೀನ್ ಅಕ್ತಾರ್, ಆಂಜನೇಯ ಕುರುಬದೊಡ್ಡಿ, ಬಸವರಾಜ ಮಿಮಿಕ್ರಿ ಹಾಗೂ ಇತರರು ಇದ್ದರು.

‘ನೋ ಎಂಟ್ರಿ’ ಚಳವಳಿ
ರಾಯಚೂರು ಜಿಲ್ಲಾ ಉಸ್ತುವಾರಿಯಾಗಿ ನೇಮಕವಾದ ಸೇಡಂ ಶಾಸಕ ಶರಣ ಪ್ರಕಾಶ ಪಾಟೀಲ ಅವರ ವಿರುದ್ಧ ರಾಯಚೂರು ನಾಗರಿಕ ವೇದಿಕೆ ವತಿಯಿಂದ “ನೋ ಎಂಟ್ರಿ” ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮುಖಂಡ ಖಾಜಾ ಅಸ್ಲಾಂ ಅಹ್ಮದ್ ಹೇಳಿದ್ದಾರೆ.
ರಾಯಚೂರು ಜಿಲ್ಲಾ ಉಸ್ತುವಾರಿಯಾಗಿ ರಾಯಚೂರು ಭಾಗದ ಮುಖಂಡರಿಗೆ ಕೊಡಬೇಕು. ಈ ಭಾಗದ ಸಚಿವರಾದ ಎನ್ ಎಸ್ ಬೋಸರಾಜ ಅವರನ್ನೇ ನೇಮಕ ಮಾಡಬೇಕು. ಬೇರೆ ಭಾಗದಲ್ಲಿ ಅವರವರ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ಕೊಡಲಾಗಿದೆ. ರಾಯಚೂರಿಗೆ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚಿಗೆ ಶರಣ ಪ್ರಕಾಶ ಪಾಟೀಲ ಅವರು ಏಮ್ಸ್ ಕಲ್ಬುರ್ಗಿಗೆ ಬೇಕು ಎಂದು ಕೇಳಿದ್ದರು. ಅನೇಕ ದಿನಗಳಿಂದ ರಾಯಚೂರಿನಲ್ಲಿ ಈ ಸಂಬಂಧ ಧರಣಿ ನಡೆಯುತ್ತಿದೆ. ಇಂತಹ ಹೇಳಿಕೆ ಖಂಡಿಸಿ ನಾಳೆ ಅಂಬೇಡ್ಕರ್ ವೃತದಲ್ಲಿ ಗೋ ಬ್ಯಾಕ್ ಘೋಷಣೆ ಕೂಗಿ ಪ್ರತಿಭಟಿಸಲಿದ್ದೇವೆ ಎಂದು ಈದಿನ.ಕಾಮ್ಗೆ ತಿಳಿಸಿದ್ದಾರೆ.

ಪ್ರತಿಕೃತಿ ದಹನ; ರಾಯಚೂರು ಬಂದ್ ಎಚ್ಚರಿಕೆ
ಡಾ. ಶರಣ ಪ್ರಕಾಶ ಪಾಟೀಲರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವ ರಾಜ್ಯ ಸರ್ಕಾರದ ಆದೇಶವನ್ನು ವಿರೋಧಿಸಿ ನಾನಾ ಕನ್ನಡಪರ, ಪ್ರಗತಿಪರ ಸಂಘಟನೆಗಳ ಮುಖಂಡರು ರಾಯಚೂರು ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಶರಣಪ್ರಕಾಶ ಪಾಟೀಲ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ), ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ, ಅಖಿಲ ಕರ್ನಾಟಕ ರಕ್ಷಣಾ ಸಮಿತಿ, ಕನ್ನಡ ರಣಧೀರರ ಪಡೆ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ನಗರದ ಮಹತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ ಬಳಿ ಕಳೆದ 392 ದಿನಗಳಿಂದ ಅನಿರ್ಧಿಷ್ಠಾವಧಿ ಧರಣಿ ನಡೆಸಲಾಗುತ್ತಿದೆ. ಆದರೆ, ನೂತನ ವೈದ್ಯಕೀಯ ಸಚಿವರಾಗಿ ನೇಮಕ ಆಗಿರುವ ಡಾ. ಶರಣ ಪ್ರಕಾಶ ಪಾಟೀಲ ಕಲಬುರಗಿಗೆ ಏಮ್ಸ್ ಮಂಜೂರು ಮಾಡುವುದಾಗಿ ಈಚೆಗೆ ಹೇಳಿಕೆ ನೀಡಿದ್ದು ಖಂಡನೀಯ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಶೋಭಕ್ಕನಿಗೂ ಫ್ರೀ ಎಂಬ ಮಾತು ಕಾಂಗ್ರೆಸ್‌ನ ದುರಂಹಕಾರಕ್ಕೆ ಸಾಕ್ಷಿ: ಶೋಭಾ ಕರಂದ್ಲಾಜೆ
ರಾಯಚೂರು ಜಿಲ್ಲೆಯ ಬಗ್ಗೆ ಕಳಾಕಳಿ ಇಲ್ಲದ ಸಚಿವರನ್ನು ಜಿಲ್ಲಾ ಮಂತ್ರಿ ಮಾಡುವುದು ಸರಿಯಲ್ಲ. ರಾಜ್ಯದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಜಿಲ್ಲೆಯ ಎನ್.ಎಸ್ ಬೋಸರಾಜು ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಒಂದುವೇಳೆ ಡಾ. ಶರಣ ಪ್ರಕಾಶ ಪಾಟೀಲರನ್ನು ಉಸ್ತುವಾರಿ ಸಚಿವರಾಗಿ ಮುಂದುವರೆಸಿದರೆ ಅವರ ವಿರುದ್ಧ ‘ಗೋ ಬ್ಯಾಕ್’ ಚಳವಳಿ ಮಾಡಿ, ರಾಯಚೂರು ಬಂದ್‌ಗೆ ಕರೆ ನೀಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮಗೌಡ ಬಣ) ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಕುಮಾರ ಜೈನ್, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕಳಸ, ಕನ್ನಡಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಇಮ್ರಾನ್ ಬಡೇಸಾಬ್, ಕರ್ನಾಟಕ ರಣಧೀರ ಪಡೆಯ ಜಿಲ್ಲಾಧ್ಯಕ್ಷ ರಮೇಶ, ಅಖಂಡ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ರಾಜಶೇಖರ ಹಾಗೂ ಇತರರು ಇದ್ದರು.