- ಬರ ಪರಿಹಾರದ ಕಡೆ ಗಮನ ಹರಿಸದ ಕಾಂಗ್ರೆಸ್ ಸರಕಾರ
- ಹೊಸ ಕಾರು ಖರೀದಿ, ಅವಿವೇಕತನದ ಪ್ರದರ್ಶನ: ಟೀಕೆ
ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಪರಿಹಾರದ ಕಡೆ ಗಮನ ಹರಿಸದ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ನಿಗಮ, ಮಂಡಳಿಗಳ ಅಧ್ಯಕ್ಷರ ನೇಮಕಾತಿ, ಲೋಕಸಭಾ ಚುನಾವಣೆ ಕಡೆ ಗಮನ ಹರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟೀಕಿಸಿದರು.
ಮಂಗಳೂರಿನಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ತಯಾರಿ ಕಡೆ ಗಮನ ಕೊಡಿ. ಅದರ ವಿಚಾರದಲ್ಲಿ ನಮ್ಮ ತಕರಾರಿಲ್ಲ. ಆದರೆ, ನಿಮ್ಮ ಆದ್ಯತೆ ಏನು” ಎಂದು ಪ್ರಶ್ನಿಸಿದರು.
“ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಸರಕಾರವು ಬೇಸಿಗೆಯಲ್ಲೂ ರೈತರಿಗೆ ತೊಂದರೆ ಆಗಬಾರದೆಂದು ಕನಿಷ್ಠ 7 ಗಂಟೆ ವಿದ್ಯುತ್ ಕೊಟ್ಟಿತ್ತು. ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಆಗುವುದಾಗಿ ಮುಂಚಿತವಾಗಿಯೇ ಆಲೋಚಿಸಿ ಬಿಜೆಪಿ ಸರಕಾರವು ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಿತ್ತು. ಆದರೆ, ಮುಂಗಾರು, ಹಿಂಗಾರು ವೈಫಲ್ಯ, ಒಂದೆರಡು ತಾಸು ವಿದ್ಯುತ್ ಇಲ್ಲದೆ ರೈತರು ಪರದಾಡುತ್ತಿದ್ದರೂ ರಾಜ್ಯ ಸರಕಾರವು ಹೊಣೆಗೇಡಿಯಂತೆ ವರ್ತಿಸಿದೆ” ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ಏಜೆಂಟರಾಗಿರುವ ರಾಜ್ಯಪಾಲರುಗಳಿಗೆ ಸುಪ್ರೀಮ್ ಚಾವಟಿ!
“ಆಡಳಿತಕ್ಕೆ ಬಂದು ಆರು ತಿಂಗಳಾದರೂ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಮೋಜಿನಲ್ಲಿ ಮುಳುಗಿದೆ. ಮುಖ್ಯಮಂತ್ರಿಗಳು ಒಂದು ಕಡೆ ತಮ್ಮ ಸ್ವಗೃಹ ನವೀಕರಣ, ಅಲಂಕಾರಕ್ಕೆ ಕೋಟಿಗಟ್ಟಲೆ ಹಣ ಬಳಸುತ್ತಾರೆ. ಬರಗಾಲವಿದ್ದರೂ ಸಚಿವರಿಗೆ ಹೊಸ ಕಾರು ಖರೀದಿ ನಡೆದಿದೆ. ಇದು ಅವಿವೇಕತನದ ಪ್ರದರ್ಶನ” ಎಂದು ಟೀಕಿಸಿದರು.
“ಪದೇ ಪದೇ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಾರೆ. ಹಾಗಿದ್ದರೆ ರಾಜ್ಯ ಸರಕಾರಕ್ಕೆ ಜವಾಬ್ದಾರಿ ಇಲ್ಲವೇ. ಜವಾಬ್ದಾರಿ ಮರೆತ ರಾಜ್ಯ ಸರಕಾರದ ಕಿವಿ ಹಿಂಡುವ ಕೆಲಸವನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ನಾವು ಮಾಡುತ್ತೇವೆ” ಎಂದು ಎಚ್ಚರಿಸಿದರು.
“ಅಭಿವೃದ್ಧಿಗೆ ಸಂಬಂಧಿಸಿ ಶಾಸಕರಿಗೆ ಒಂದು ರೂಪಾಯಿ ಅನುದಾನವೂ ಸಿಗುತ್ತಿಲ್ಲ. ಆಡಳಿತ ಪಕ್ಷದ ಸದಸ್ಯರೂ ತಮ್ಮ ಕ್ಷೇತ್ರದಲ್ಲಿ ಗೌರವಯುತವಾಗಿ ಓಡಾಡದ ಹಾಗಾಗಿದೆ. ರಾಜ್ಯ ಸರಕಾರ ಜನರ ವಿಶ್ವಾಸ ಕಳಕೊಂಡಿದೆ. ರೈತ ವಿರೋಧಿ, ಬಡವರ ವಿರೋಧಿ ಸರಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.