ತಮಿಳುನಾಡಿನಲ್ಲಿ ಚುನಾವಣಾ ಕಾವು ಏರುತ್ತಿದ್ದರೂ, ರಾಹುಲ್ ಗಾಂಧಿ ಅವರ ಪ್ರಚಾರ ಇನ್ನೂ ಆರಂಭವಾಗಿಲ್ಲ. ತಮಿಳುನಾಡು ರಾಜ್ಯವನ್ನು ರಾಹುಲ್ ಗಾಂಧಿ ಪರಿಗಣನೆಗೆ ತೆಗೆದುಕೊಂಡಿಲ್ಲವೇ ಅಥವಾ ಡಿಎಂಕೆ ನೇತೃತ್ವದಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಅತಿಯಾದ ವಿಶ್ವಾಸವಿರುವ ಕಾರಣಕ್ಕೆ ತಮಿಳುನಾಡಿನಲ್ಲಿ ಇನ್ನೂ ಚುನಾವಣಾ ಪ್ರಚಾರ ಆರಂಭಿಸಿಲ್ಲವೇ ಎನ್ನುವ ಚರ್ಚೆಗಳು ಈಗ ಕೇಳಿ ಬರುತ್ತಿದೆ. ಇದು ಸಹಜವಾಗಿಯೇ ʼಇಂಡಿಯಾʼ(I.N.D.I.A) ಮೈತ್ರಿಕೂಟದ ಪ್ರಬಲ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಎಲ್ಲವೂ ಸರಿಯಿಲ್ಲವೇ? ಎಂಬ ಪ್ರಶ್ನೆಯನ್ನು ಮೂಡಿಸಿದೆ.
ತಮಿಳುನಾಡಿನಲ್ಲಿ ರಾಹುಲ್ ಪ್ರಚಾರ ಯಾಕಿಲ್ಲ?
ರಾಹುಲ್ ಗಾಂಧಿ ಅವರು ಕೇವಲ ತಮಿಳುನಾಡಿಗೆ ಸೀಮಿತವಾಗದೆ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲೂ ಹೆಚ್ಚಿನ ಗಮನ ಹರಿಸಬೇಕಿದೆ. ಚುನಾವಣಾ ವೇಳಾಪಟ್ಟಿಯ ಆಧಾರದ ಮೇಲೆ ಎಲ್ಲಿ ಅತಿ ಹೆಚ್ಚು ಅಗತ್ಯವಿದೆಯೋ ಅಲ್ಲಿಗೆ ಪ್ರಥಮ ಆದ್ಯತೆ ನೀಡಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕೆ ಮುಂದಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಅಸ್ಸಾಂ ಮತ್ತು ಕೇರಳದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಇರುವುದರಿಂದ ಹೆಚ್ಚಿನ ಸಮಯ ಆ ರಾಜ್ಯಗಳಿಗೆ ಕೊಟ್ಟಿದ್ಧಾರೆ. ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮೈತ್ರಿಕೂಟದ ಮುಖವಾಗಿ ಪ್ರಬಲವಾಗಿ ಪ್ರಚಾರ ನಡೆಸುತ್ತಿದ್ದಾರೆ. ತಮಿಳುನಾಡಿನಲ್ಲಿ ಸ್ಥಳೀಯ ನಾಯಕತ್ವ ಬಲವಾಗಿರುವ ಕಾರಣಕ್ಕೆ ರಾಹುಲ್ ಹೆಚ್ಚು ಗಮನ ಕೊಡುತ್ತಿಲ್ಲ ಎನ್ನುವುದು ಕಾಂಗ್ರೆಸ್ ಪಕ್ಷದ ಸಮರ್ಥನೆ.
ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಬಿರುಕು?
ಮೈತ್ರಿ ಎಂದಮೇಲೆ ಸಣ್ಣಪುಟ್ಟ ಅಸಮಾಧಾನಗಳು ಇರುವುದು ಸಹಜ. ಆದರೆ, ಸದ್ಯಕ್ಕೆ ಈ ಎರಡು ಪಕ್ಷಗಳ ನಡುವೆ ಯಾವುದೇ ಗಂಭೀರ ಬಿರುಕು ಕಂಡುಬಂದಿಲ್ಲ. ಆರಂಭದಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಸ್ವಲ್ಪ ಭಿನ್ನಮತವಿದ್ದರೂ, ಅಂತಿಮವಾಗಿ ಎರಡೂ ಪಕ್ಷಗಳು ಪರಸ್ಪರ ಒಪ್ಪಿಗೆಯೊಂದಿಗೆ ಸೀಟು ಹಂಚಿಕೆಯನ್ನು ಪೂರ್ಣಗೊಳಿಸಿವೆ. ಇನ್ನು, ಬಿಜೆಪಿಯನ್ನು ತಮಿಳುನಾಡಿನಿಂದ ದೂರವಿಡಬೇಕು ಎಂಬ ಒಂದೇ ಗುರಿಯನ್ನು ಎರಡೂ ಪಕ್ಷಗಳು ಹೊಂದಿವೆ. ಈ ಸಿದ್ಧಾಂತದ ಸಮಾನತೆ ಅವರನ್ನು ಒಂದಾಗಿ ಹಿಡಿದಿಟ್ಟಿದೆ. ಹಾಗಾಗಿ ಭಿನ್ನಮತ ಇಲ್ಲ ಎನ್ನುವುದು ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷದ ಸಮರ್ಥನೆಯಾಗಿದೆ. ಉಭಯ ಪಕ್ಷಗಳ ನಾಯಕರು ನಿರಂತರ ಸಂಪರ್ಕದಲ್ಲಿದ್ದು, ಪ್ರಚಾರದ ರೂಪುರೇಷೆಗಳನ್ನು ಜಂಟಿಯಾಗಿ ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಶೀಘ್ರದಲ್ಲೇ ತಮಿಳುನಾಡಿನಲ್ಲಿ ಬೃಹತ್ ಚುನಾವಣಾ ಪ್ರಚಾರವನ್ನು ನಡೆಸಲಿದ್ದಾರೆ. ವಿಶೇಷವಾಗಿ ಕಾಂಗ್ರೆಸ್ ಸ್ಪರ್ಧಿಸುತ್ತಿರುವ ಕ್ಷೇತ್ರಗಳಲ್ಲಿ ಮತ್ತು ಡಿಎಂಕೆ ಭದ್ರಕೋಟೆಗಳಲ್ಲಿ ಸ್ಟಾಲಿನ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಸಾಧ್ಯತೆಯಿದೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ : ʼಈ ದಿನʼ ಕವಿತೆ | ಕಲೆಯೇನಲ್ಲ…
ಇನ್ನು, ಪುದುಚೆರಿ ಕೇಂದ್ರಾಡಳಿತ ಪ್ರದೇಶದ ಚುನಾವಣಾ ಬಹಿರಂಗ ಪ್ರಚಾರ ಮುಕ್ತಾಯಕ್ಕೆ ಒಂದು ದಿನದ ಮೊದಲು ಅಂದರೆ (ಏ.06) ಸೋಮವಾರ ಪುದುಚೆರಿಗೆ ರಾಹುಲ್ ಭೇಟಿ ನೀಡಿದ್ದರು. ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಅಭ್ಯರ್ಥಿಗಳ ಪರ ಮತ ಯಾಚಿಸಿದ್ದರು. ಆದರೆ, ಎಲ್ಲಿಯೂ ಮಿತ್ರಪಕ್ಷವಾದ ಡಿಎಂಕೆ ಅಥವಾ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಅದೇ ದಿನ ಸ್ಟ್ಯಾಲಿನ್ ಕೂಡ ಚುನಾವಣಾ ಪ್ರಚಾರಕ್ಕೆ ಪುದುಚೆರಿಗೆ ಬಂದಿದ್ದರು. ಆದರೆ, ರಾಹುಲ್ ಮತ್ತು ಸ್ಟ್ಯಾಲಿನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಬೆಳವಣಿಗೆಯೇ ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಭಿನ್ನಮತ ಉಂಟಾಗಿದೆ ಎನ್ನುವ ಚರ್ಚೆಯನ್ನು ಎಬ್ಬಿಸಿದೆ ಎನ್ನುವುದು ಇಲ್ಲಿ ಉಲ್ಲೇಖನೀಯ.
ರಾಜಕೀಯದಲ್ಲಿ “ಮೌನ” ಎನ್ನುವುದು ಯಾವಾಗಲೂ ಅಸಮಾಧಾನದ ಸಂಕೇತವಾಗಿರುವುದಿಲ್ಲ, ಕೆಲವೊಮ್ಮೆ ಅದು ದೊಡ್ಡ ಮಟ್ಟದ ಅಬ್ಬರಕ್ಕೆ ಮುನ್ಸೂಚನೆಯೂ ಆಗಿರುತ್ತದೆ. ಸದ್ಯದಲ್ಲೇ ರಾಹುಲ್ ಗಾಂಧಿ ತಮಿಳುನಾಡಿನಲ್ಲೂ ಅಬ್ಬರದ ಪ್ರಚಾರ ಮಾಡಲಿದ್ದಾರೆ ಎನ್ನುವುದು ತಮಿಳುನಾಡಿನ ಕಾಂಗ್ರೆಸ್ ಪಕ್ಷದ ನಾಯಕರ ವಾದ.




