ಬಾಗಲಕೋಟೆ ಜಿಲ್ಲೆಯಲ್ಲಿ ಒಂದೇ ದಿನ ಮೂರು ಕಡೆ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸಿದೆ. ನಗರದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಜಿ. ಪರಮೇಷ್ವರ್, ಆರ್.ಬಿ ತಿಮ್ಮಾಪುರ್, ಮಲ್ಲಿಕಾರ್ಜುನ್ ಚರಂತಿಮಠ ಸಮ್ಮುಖದಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯ ಭರದಿಂದ ಸಾಗಿತ್ತು.
“ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು” ಎಂದು ಸಚಿವ ಆರ್.ಬಿ.ತಿಮ್ಮಾಪುರ ಮನವಿ ಮಾಡಿದರು. ಕಿರಸೂರ ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವ, “ಪಂಚ ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳ ಬದುಕಿಗೆ ಆಸರೆಯಾಗಿವೆ. ಕಾಂಗ್ರೆಸ್ ಪಕ್ಷ ಬಡವರ, ಶೋಷಿತರ ಪರವಾಗಿದೆ. ನಮ್ಮ ಅಭಿವೃದ್ಧಿ ಯೋಜನೆಗಳ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಕಿವಿಗೊಡದೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು” ಎಂದು ವಿನಂತಿಸಿದರು.
ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ದಿ.ಎಚ್.ವೈ.ಮೇಟಿ ಅವರ ಅಭಿವೃದ್ಧಿ ಕಾರ್ಯಗಳು ನಮ್ಮ ಪಕ್ಷದ ಅಭ್ಯರ್ಥಿಗೆ ಶ್ರೀರಕ್ಷೆ ಆಗಲಿವೆ. ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್‌ಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲರೂ ಉಮೇಶ ಮೇಟಿ ಅವರ ಕೈ ಬಲಪಡಿಸಬೇಕು ಎಂದರು. ಈ ಸಂದರ್ಭದಲ್ಲಿ ಗೌತಮ ಪಾಟೀಲ, ವೆಂಕಟೇಶ ಜಂಬಗಿ, ಗ್ರಾಮಸ್ಥರು ಉಪಸ್ಥಿತರಿದ್ದರು.

ಗೃಹಸಚಿವ ಡಾ.ಜಿ.ಪರಮೇಶ್ವರ ನಗರದ ವಿದ್ಯಾಗಿರಿ, ನವನಗರ ಭಾಗಗಳಲ್ಲಿ ಸೋಮವಾರ ಪ್ರಚಾರ ನಡೆಸಿದರು,
ಜನಪರ ಕಾರ್ಯಗಳಿಂದ ಮೇಟಿ ಅವರು ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಿದ್ದಾರೆ. ಅವರು ಕೈಗೊಂಡ ಕಾರ್ಯಗಳಿಗೆ ಅಪಾರ ಜನ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಚಾರದ ವೇಳೆ ಸಚಿವ ಡಾ.ಎಸ್.ಸಿ.ಮಹಾದೇವಪ್ಪ, ಮಹೇಶ ತಮ್ಮಣ್ಣವರ, ಎಂ.ಎಚ್.ಚಲವಾದಿ, ಪರಶುರಾಮ ನೀಲನಾಯಕ, ಎ.ಡಿ.ಮೊಕಾಶಿ, ಅಂಬು ಚಲವಾದಿ, ಚಂದ್ರಶೇಖರ ಸನ್ನಿ ಇತರರು ಇದ್ದರು.
ಇದನ್ನೂ ಓದಿ>ಬಾಗಲಕೋಟೆ ಉಪ ಚುನಾವಣೆ | ತುರುಸಿನ ಸೆಣಸಾಟದಲ್ಲಿ ಗೆಲುವಿನ ದಡ ಸೇರುವವರಾರು?
ನವನಗರ ಮೂರನೇ ಯುನಿಟ್ ಯೋಜನೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರನ್ನು ಬೆಂಬಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಪದ್ಮನಯನ ನಗರದಲ್ಲಿ ಸೋಮವಾರ ಬೆಳಗ್ಗೆ ಕಾಂಗ್ರೆಸ್ ಮುಖಂಡರೊಂದಿಗೆ ಪ್ರಚಾರ ನಡೆಸಿ ಮಾತನಾಡಿದ ಅವರು, “ಈ ಭಾಗದ ಜನತೆಯ ಅನುಕೂಲಕ್ಕಾಗಿ ಎಚ್.ವೈ.ಮೇಟಿ ಅವರು ವೈದ್ಯಕೀಯ ಮಹಾವಿದ್ಯಾಲಯ ಕನಸು ಕಂಡಿದ್ದರು. ಈ ಕಾರ್ಯ ಯಶಸ್ವಿಯಾಗಿ ಪೂರ್ಣವಾಗಲು ಅವರ ಪುತ್ರ ಉಮೇಶ ಮೇಟಿ ಅವರನ್ನು ಬೆಂಬಲಿಸಬೇಕು” ಎಂದರು.
ವಿದ್ಯಾಗಿರಿಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಪ್ರಚಾರ ನಡೆಸಿ ಮತ ಯಾಚಿಸಿದರು. ಸಂಗಮೇಶ ದೊಡ್ಡಮನಿ, ಶರಣಪ್ಪ ಯಂಡಿಗೇರಿ, ಚೆನ್ನವೀರ ಅಂಗಡಿ ಇತರರಿದ್ದರು.




