ಲೋಕಸಭೆಗೆ `ಕೈ’ ಅಭ್ಯರ್ಥಿಗಳಾಗುತ್ತಾರಾ ರಮ್ಯಾ, ಗೀತಾ ಶಿವರಾಜಕುಮಾರ್?

ರಮ್ಯಾ ಗೀತಾ
  • ಲೋಕಸಭೆಯಲ್ಲೂ ಗೆಲುವಿನ ಓಟ ಮುಂದುವರಿಸಲು ಕಾಂಗ್ರೆಸ್ ಚಿಂತನೆ
  • ಬಿಜೆಪಿ ಬಲವಿರುವ ಎರಡು ಕ್ಷೇತ್ರಗಳ ಮೇಲೆ ನಿಗಾವಹಿಸಿದ ಕೈ ನಾಯಕರು

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಕರುನಾಡನ್ನು ತೆಕ್ಕೆಗೆ ಹಾಕಿಕೊಂಡಿರುವ ಕಾಂಗ್ರೆಸ್ ಈಗ ರಾಷ್ಟ್ರ ರಾಜಕಾರಣದಲ್ಲೂ ಮರಳಿ ಹಿಡಿತ ಸಾಧಿಸಲು ತಯಾರಿ ಆರಂಭಿಸಿದೆ.

ಇದರ ಭಾಗವಾಗಿ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯತ್ತ ಪಕ್ಷ ಚಿತ್ತ ನೆಟ್ಟಿದೆ. ವಿಧಾನಸಭೆಯಲ್ಲಿ ಪಕ್ಷ ಬೆಂಬಲಿಸಿದ ಜನ ಲೋಕಸಭೆಯಲ್ಲೂ ಕೈ ಹಿಡಿಯುತ್ತಾರೆನ್ನುವ ವಿಶ್ವಾಸದಲ್ಲಿರುವ ಕಾಂಗ್ರೆಸ್ ಪಾಳಯ ಅದಕ್ಕೆ ಈಗಿನಿಂದಲೇ ಅರ್ಹ ಅಭ್ಯರ್ಥಿಗಳನ್ನು ಅಣಿಗೊಳಿಸುತ್ತಿದೆ.

ಬಲ್ಲ ಮೂಲಗಳ ಪ್ರಕಾರ, ಮಂಡ್ಯದಿಂದ ಮಾಜಿ ಸಂಸದೆ ರಮ್ಯಾ ಅವರನ್ನೂ, ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ್ ಅವರನ್ನೂ ಕಾಂಗ್ರೆಸ್ ಕಣಕ್ಕಿಳಿಸಲು ಚಿಂತನೆ ನಡೆಸಿದೆಯಂತೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸ್ವಾಭಿಮಾನದ ಹೆಸರಿನಲ್ಲಿ ಮಂಡ್ಯದ ಜನರ ಮನಗೆದ್ದು ಮನೆಮಗಳಾಗುವೆ ಎಂದಿದ್ದ ಸಂಸದೆ ಸುಮಲತಾ ಅಂಬರೀಶ್, ಬದಲಾದ ಕಾಲದಲ್ಲಿ ಮೋದಿ ಅಲೆ ನೆಚ್ಚಿಕೊಂಡು ಬಿಜೆಪಿ ಪಾಳಯ ಸೇರಿ, ಹೊಸ ವರಸೆ ಶುರು ಮಾಡಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಂಡಿದ್ದೂ ಅಲ್ಲದೆ, ತಮ್ಮ ಬೆಂಬಲಿಗರನ್ನೆಲ್ಲ ಬಿಜೆಪಿ ಅಭ್ಯರ್ಥಿಗಳನ್ನಾಗಿಸಿ ಸೋತು ಸುಮ್ಮನಾಗದ ಸುಮಲತಾ, ಈಗ ಲೋಕಸಭೆಯಲ್ಲಿ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ಈಗ ಇದನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡಿರುವ ಕಾಂಗ್ರೆಸ್, ಸುಮಲತಾ ಎದುರು ಅದೇ ಊರಿನ ಮಗಳು, ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಅವರನ್ನು ಎದುರಾಳಿಯಾಗಿಸಲು ಯೋಚನೆ ನಡೆಸಿದೆಯಂತೆ. ಹೀಗಾದಲ್ಲಿ ಸಕ್ಕರೆ ನಾಡು ಮತ್ತೊಮ್ಮೆ ಸ್ಟಾರ್ ವಾರ್‌ಗೆ ವೇದಿಕೆಯಾಗುವುದರಲ್ಲಿ ಅನುಮಾನವಿಲ್ಲ.ರಮ್ಯಾ

ರಮ್ಯಾ ರಾಜಕೀಯ

ಅದು 2009ರ ಲೋಕಸಭೆ ಚುನಾವಣೆ. ಮಂಡ್ಯದಿಂದ ಜೆಡಿಎಸ್ ಹುರಿಯಾಳುವಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದ ಚಲುವರಾಯಸ್ವಾಮಿ ಇಲ್ಲಿನ ಸಂಸದರಾಗಿದ್ದರು. ನಂತರ 2013ರ ವಿಧಾನಸಭೆ ಚುನಾವಣೆಯಲ್ಲಿ ಅವರು ನಾಗಮಂಗಲದಿಂದ ಸ್ಪರ್ಧಿಸಿ ವಿಧಾನಸೌಧ ಪ್ರವೇಶಿಸಿದ ಕಾರಣ ಮಂಡ್ಯ ಲೋಕಸಭೆ ಕ್ಷೇತ್ರ ತೆರವಾಗಿತ್ತು.

ಆಗ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿದ ರಮ್ಯಾ ಜೆಡಿಎಸ್‌ನ ಸಿ.ಎಸ್.ಪುಟ್ಟರಾಜು ವಿರುದ್ಧ ಗೆಲುವು ದಾಖಲಿಸಿದ್ದರು. ಆದರೆ ಮರು ವರ್ಷ ಅಂದರೆ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಅದೇ ಜೆಡಿಎಸ್‌ನ ಪುಟ್ಟರಾಜು ವಿರುದ್ಧ ಸೋಲು ಅನುಭವಿಸಿದ್ದರು. ಇದಾದ ಬಳಿಕ ರಮ್ಯಾ ಕಾಂಗ್ರೆಸ್‌ನ ರಾಷ್ಟ್ರೀಯ ಸಾಮಾಜಿಕ ಜಾಲತಾಣ ತಂಡದಲ್ಲಿ ಕೆಲಸ ನಿರ್ವಹಿಸಿದ್ದರು.

ಆನಂತರ, ರಮ್ಯಾ ಏಕಾಏಕಿ ಮೂರು ವರ್ಷಗಳ ಕಾಲ ರಾಜಕೀಯದಿಂದ ದೂರ ಉಳಿದುಬಿಟ್ಟರು. ಇನ್ನೇನು ರಾಜಕೀಯ ರಂಗವನ್ನೇ ಬಿಟ್ಟರು ಎನ್ನುವ ವದಂತಿಗಳ ನಡುವೆ ಮರಳಿ ಕೈ ಪಾಳಯದಲ್ಲಿ ಕಾಣಿಸಿಕೊಂಡ ಅವರು ರಾಹುಲ್‌ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದರು. ಮುಂದುವರೆದು ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೆಲ ಪ್ರಮುಖರೊಂದಿಗೆ ಪ್ರಚಾರಕಾರ್ಯವನ್ನೂ ಕೈಗೊಂಡಿದ್ದರು.

ಇಷ್ಟಾಗುವುದರೊಳಗೆ ಕಾಂಗ್ರೆಸ್ ಸೇರುತ್ತಾರೆಂದಿದ್ದ ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ ಮತ್ತೆ ರಮ್ಯಾ ಹೆಸರು ಕೈ ಪಾಳಯದೊಳಗೆ ಚಾಲ್ತಿಗೆ ಬಂದಿತ್ತು. ಈಗ ಆಕೆಯೇ ಮಂಡ್ಯ ಲೋಕಸಭೆ ಕ್ಷೇತ್ರದಿಂದ 2024ರಲ್ಲಿ ಸ್ಪರ್ಧಿಯಾಗುವ ಸಾಧ್ಯತೆಯನ್ನು ಗಟ್ಟಿಗೊಳಿಸಿದೆ. ಮೂಲಗಳ ಪ್ರಕಾರ ಇದೇ ಬಹುತೇಕ ಪಕ್ಕಾ ಆಗಲಿದೆ.

ಗೀತಾ ಶಿವರಾಜ್‌ ಕುಮಾರ್‌

ಇದೇ ರೀತಿ, ಬಿಜೆಪಿ ಪ್ರಾಬಲ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕುಟುಂಬದ ಹಿಡಿತದಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲೂ ಮ್ಯಾಜಿಕ್ ಸೃಷ್ಟಿಸಲು ಕೈ ಪಾಳಯ ಸಿದ್ದವಾಗುತ್ತಿದೆ. ಇಲ್ಲಿ ಬಿಎಸ್‌ವೈ ಹಿರಿಯ ಮಗ ಬಿ.ವೈ.ರಾಘವೇಂದ್ರ ಎದುರು ಬಂಗಾರಪ್ಪ ಪುತ್ರಿ, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಲು ಮುಂದಾಗಿದೆ.

ವಿಧಾನಸಭೆ ಚುನಾವಣೆ ವೇಳೆ ಸಹೋದರ ಮಧುಬಂಗಾರಪ್ಪ ಜೊತೆ ಗೀತಾ ಶಿವರಾಜಕುಮಾರ್ ಕಾಂಗ್ರೆಸ್ ಸೇರಿದ್ದರು.ಗೀತಾ ಶಿವರಾಜ್_ ಕುಮಾರ್

ಈ ಸುದ್ದಿ ಓದಿದ್ದೀರಾ?:ಜಿಪಂ, ತಾಪಂ ಚುನಾವಣೆ: ಪುಟಿದೇಳಲು ಜೆಡಿಎಸ್, ಪ್ರಾಬಲ್ಯ ಸಾಧಿಸಲು ಕಾಂಗ್ರೆಸ್‌ ಹವಣಿಕೆ

2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಗೀತಾ

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರಿಯಾಗಿರುವ ಗೀತಾ ಶಿವರಾಜಕುಮಾರ್ ಗೆ ಅಪ್ಪನ ಕಾಲದಿಂದಲೂ ರಾಜಕೀಯ ನಂಟಿತ್ತು. ಆದರೆ ಅವರು ಸಕ್ರಿಯ ರಾಜಕಾರಣಕ್ಕೆ ಅಡಿ ಇಟ್ಟಿದ್ದು, ಸಹೋದರ ಮಧು ಬಂಗಾರಪ್ಪನವರೊಂದಿಗೆ. ಜೆಡಿಎಸ್ ಪಕ್ಷದಲ್ಲಿದ್ದ ಮಧು, 2014ರಲ್ಲಿ ಗೀತಾ ಅವರನ್ನು ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ದುರದೃಷ್ಟವಶಾತ್ ಈ ಚುನಾವಣೆಯಲ್ಲಿ ಅವರು ಸೋಲನ್ನಪ್ಪಿದ್ದರು.

ಈಡಿಗ ಮತಗಳ ಮೇಲೆ ಕಣ್ಣು

ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ ಸಮುದಾಯದ ಮತ ದೊಡ್ಡ ಪ್ರಮಾಣದಲ್ಲಿದೆ. ಜೊತೆಗೆ ಈ ಸಮುದಾಯದ ದೊಡ್ಡ ನಾಯಕ ಬಂಗಾರಪ್ಪ. ಈಗಲೂ ಈ ಕುಟುಂಬದ ಬಗ್ಗೆ ಇಲ್ಲಿನವರಿಗೆ ಅದೇ ಗೌರವವಿದೆ. ಈ ಕುಟುಂಬದ ಕುಡಿ ಗೀತಾ, ಹಾಲಿ ಸಚಿವ ಮಧು ಅವರ ಸಹೋದರಿ, ಡಾ. ರಾಜ್ ಕುಮಾರ್ ಕುಟುಂಬದ ಸೊಸೆ ಎನ್ನುವ ಕಾರಣಕ್ಕೆ ವಿಶೇಷ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟು ಸಾಲದೆನ್ನುವಂತೆ ಪತಿಯೂ ಸ್ಟಾರ್ ನಟನಾಗಿರುವ ಕಾರಣ ಅವರ ಪ್ರಾಮುಖ್ಯತೆ ಗ್ರಾಫ್‌ ಇನ್ನಷ್ಟು ಮೇಲಕ್ಕೇರಿದೆ.

ಈಗ ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕಾಂಗ್ರೆಸ್ ಗೀತಾ ಅವರನ್ನೇ ತನ್ನ ಉಮೇದುವಾರರನ್ನಾಗಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಈಗಾಗಲೇ ರಾಜ್ಯದ ಚುನಾವಣೆಯಲ್ಲಿ ಪಕ್ಷ ಇಲ್ಲಿಯೂ ಗಮನಾರ್ಹ ಸಾಧನೆಗೈದಿರುವುದು ನಾಯಕರ ಲೆಕ್ಕಾಚಾರವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಹೀಗೆ ರಾಜ್ಯ ಚುನಾವಣೆಯ ಗೆಲುವಿನ ಅಲೆ ಮೇಲೆ ಮತ್ತೊಂದು ದಿಗ್ವಿಜಯ ಸಾಧಿಸಲು ಸಿದ್ದತೆ ನಡೆಸಿದೆ. ಸದ್ಯಕ್ಕೆ ಮಂಡ್ಯ ಹಾಗೂ ಶಿವಮೊಗ್ಗ ಕ್ಷೇತ್ರಗಳ ವಿಚಾರದಲ್ಲಿ ಅಂತಿಮ ನಿರ್ಧಾರಕ್ಕೆ ಬಂದಿರುವ ಪಕ್ಷ ಉಳಿದ ಕ್ಷೇತ್ರಗಳಲ್ಲೂ ಬಿಜೆಪಿಗೆ ಬೆವರಿಳಿಸಲು ಸಿದ್ಧವಾಗುತ್ತಿದೆ.

LEAVE A REPLY

Please enter your comment!
Please enter your name here