ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸುತ್ತೇವೆಂದು ಚುನಾವಣಾ ಆಯೋಗ/ಗ್ಯಾನೇಶ್ ಕುಮಾರ್ ಏಕಪಕ್ಷೀಯವಾಗಿ ದೇಶದ ಮೇಲೆ ಹೇರಿದ ಎಸ್‌ಐಆರ್ ಪ್ರಕ್ರಿಯೆ ಕರ್ನಾಟಕದಲ್ಲಿ ಪೂರ್ಣಗೊಂಡಿದೆ. ಅಂತಿಮ ಮತದಾರರ ಪಟ್ಟಿಯೂ ಪ್ರಕಟಗೊಂಡಿದೆ. ಆದರೆ, ಬೆಂಗಳೂರಿನ ಅಂತಿಮ ಮತದಾರರ ಪಟ್ಟಿಯಲ್ಲಿ ಗಂಭೀರ ಲೋಪಗಳು ಬಹಿರಂಗವಾಗಿವೆ. ಮತದಾರರ ಹೆಸರುಗಳ ಜಾಗದಲ್ಲಿ ಅರ್ಥವಾಗದ ಚಿಹ್ನೆಗಳು, ಸಂಬಂಧಿಕರ ಹೆಸರಿನ ಬದಲು ‘Husband Husband’, ‘Wife’, ಇಮೇಲ್ ವಿಳಾಸಗಳು ಹಾಗೂ ಜನ್ಮದಿನಾಂಕಗಳನ್ನು ನಮೂದಿಸಲಾಗಿದೆ. ಒಂದೇ ಮತಗಟ್ಟೆಯಲ್ಲಿ ಸಾಲುಸಾಲಾಗಿ ಇಂತಹ ತಪ್ಪುಗಳು ಕಂಡುಬಂದಿವೆ. ಕನಿಷ್ಠ 1,000 ನಮೂದುಗಳಲ್ಲಿ ದೋಷಗಳನ್ನು ಗುರುತಿಸಿರುವುದಾಗಿ ‘ದಿ ಹಿಂದು’ ವರದಿ ಮಾಡಿದೆ.
ಕರ್ನಾಟಕದಲ್ಲಿ ಜೂನ್ 30ರಂದು ಎಸ್‌ಐಆರ್ ಪ್ರಕ್ರಿಯೆ ಆರಂಭಿಸಿದ ಚುನಾವಣಾ ಆಯೋಗವು, ಮೂರೂವರೆ ತಿಂಗಳುಗಳ ಕಾಲ ಪ್ರಕ್ರಿಯೆ ನಡೆಸಿ, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದೆ. ಎಸ್‌ಐಆರ್‌ಗೂ ಮುನ್ನ 5.5 ಕೋಟಿ ಮತದಾರರಿದ್ದ ಕರ್ನಾಟಕದ ಮತಪಟ್ಟಿಯಲ್ಲಿ ಈಗ 4.5 ಕೋಟಿ ಮತದಾರರ ಹೆಸರುಗಳಷ್ಟೇ ಉಳಿದಿವೆ. ಬರೋಬ್ಬರಿ 99 ಲಕ್ಷ ಮತದಾರರನ್ನು ಅಳಿಸಿಹಾಕಲಾಗಿದೆ. ಇವರಲ್ಲಿ, ಲಕ್ಷಾಂತರ ಮಂದಿ ಅರ್ಹ ಮತದಾರರೂ ಮತದ ಹಕ್ಕು ಕಳೆದುಕೊಂಡಿದ್ದಾರೆ.
ಆದಾಗ್ಯೂ, ಪ್ರಕಟವಾಗಿರುವ ಅಂತಿಮ ಮತಪಟ್ಟಿಯಲ್ಲಿಯೂ ಮತದಾರರ ಹೆಸರು ಮತ್ತು ಸಂಬಂಧಿಕರ ವಿವರಗಳೇ ಸರಿಯಾಗಿ ದಾಖಲಾಗದಿರುವ ಬಹಿರಂಗಗೊಂಡಿದೆ. ನವೆಂಬರ್ 2ರಂದು ‘ದಿ ಹಿಂದು’ ಪತ್ರಿಕೆ ಪ್ರಕಟಿಸಿದ ತನಿಖಾ ವರದಿಯಲ್ಲಿ ಬೆಂಗಳೂರಿನ ಹಲವು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳಲ್ಲಿ ಕನಿಷ್ಠ ಸಾವಿರ ದೋಷಪೂರಿತ ನಮೂದುಗಳನ್ನು ಗುರುತಿಸಲಾಗಿದೆ. ಕೆಲವು ಮತದಾರರ ಹೆಸರುಗಳ ಜಾಗದಲ್ಲಿ ಓದಲು ಸಾಧ್ಯವಾಗದ ಸಂಕೇತಗಳಿದ್ದರೆ, ಇನ್ನೂ ಕೆಲವು ನಮೂದುಗಳಲ್ಲಿ ತಂದೆ, ತಾಯಿ ಅಥವಾ ಪತಿ–ಪತ್ನಿಯ ಹೆಸರು ಇರಬೇಕಾದ ಜಾಗದಲ್ಲಿ ಸಂಬಂಧವನ್ನು ಸೂಚಿಸುವ ಪದಗಳನ್ನೇ ನಕಲಿಸಲಾಗಿದೆ.
ಈ ಸಮಸ್ಯೆ ಒಂದು ಕ್ಷೇತ್ರ ಅಥವಾ ಒಂದು ಮತಗಟ್ಟೆಗೆ ಸೀಮಿತವಾಗಿಲ್ಲ. ದಾಸರಹಳ್ಳಿ, ಚಾಮರಾಜಪೇಟೆ, ಮಹದೇವಪುರ, ಯಲಹಂಕ ವಿಧಾನಸಭಾ ಕ್ಷೇತ್ರಗಳು ಹಾಗೂ ಬಿಬಿಎಂಪಿ ದಕ್ಷಿಣ ಜಿಲ್ಲೆಯಲ್ಲಿ ಇಂತಹ ದೋಷಗಳ ಸರಮಾಲೆಯೇ ಕಂಡುಬಂದಿರುವುದು ಚುನಾವಣಾ ಆಯೋಗದ ವ್ಯವಸ್ಥೆಯಲ್ಲಿನ ಲೋಪಗಳನ್ನು ಬಟಾಬಯಲು ಮಾಡಿದೆ.
ವಿಶೇಷವಾಗಿ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಭಾಗ ಸಂಖ್ಯೆ 324ರಲ್ಲಿ ಒಟ್ಟು 425 ಮತದಾರರಿದ್ದು, ಈ ಪಟ್ಟಿಯಲ್ಲಿ ಮತದಾರರ ಹೆಸರುಗಳು ಮತ್ತು ಅವರ ಸಂಬಂಧಿಕರ ಹೆಸರುಗಳು ಸಂಪೂರ್ಣವಾಗಿ ಅರ್ಥವಾಗದ ಸಂಕೇತಗಳಲ್ಲಿ ಕಾಣಿಸಿಕೊಂಡಿವೆ. ಉದಾಹರಣೆಗೆ, ಈ ಮತಗಟ್ಟೆಯ 4ರಿಂದ 7, 143ರಿಂದ 150, 152ರಿಂದ 157, 300ರಿಂದ 302, 306ರಿಂದ 313, 327ರಿಂದ 330 ಹಾಗೂ 336ರಿಂದ 340ರವರೆಗಿನ ಹಲವಾರು ಕ್ರಮಸಂಖ್ಯೆಗಳಲ್ಲಿ ಈ ರೀತಿಯ ತಪ್ಪುಗಳು ದಾಖಲಾಗಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕ್ರಮಸಂಖ್ಯೆ 327ರಲ್ಲಿ ಮತದಾರರ ಹೆಸರಿನ ಜಾಗದಲ್ಲಿ µ¢µÌèÌ ಹಾಗೂ ಸಂಬಂಧಿಕರ ಹೆಸರಿನ ಜಾಗದಲ್ಲಿ Ï¢µÈèÈ ಎಂಬ ವಿಚಿತ್ರ ಮತ್ತು ಓದಲು ಅಸಾಧ್ಯವಾದ ಅಕ್ಷರಗಳು ರಾರಾಜಿಸುತ್ತಿವೆ. ಈ ರೀತಿಯ ಸಂಕೇತಗಳು ಒಂದೇ ಮತಗಟ್ಟೆಯ ಅನೇಕ ಕಡೆಗಳಲ್ಲಿ ಪುನರಾವರ್ತನೆಗೊಂಡಿವೆ. ಇಂತಹ ಲೋಪಗಳು ಕೇವಲ ಒಬ್ಬಿಬ್ಬರ ಕಾಗುಣಿತದ ತಪ್ಪಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ. ಇದು ವ್ಯವಸ್ಥಿತ ತಾಂತ್ರಿಕ ದೋಷವಾಗಿರುವ ಸಾಧ್ಯತೆಯೇ ದಟ್ಟವಾಗಿದೆ. ಮತದಾರರ ಪಟ್ಟಿಯನ್ನು ಪರಿಶೀಲಿಸಲು ಮುಂದಾಗುವ ಸಾಮಾನ್ಯ ನಾಗರಿಕರಿಗೆ ಇಂತಹ ನಮೂದುಗಳಿಂದ ಸಂಬಂಧಪಟ್ಟ ವ್ಯಕ್ತಿಯನ್ನು ಗುರುತಿಸುವುದು ಕಷ್ಟಸಾಧ್ಯವಾಗಿದೆ.

ಇದಲ್ಲದೆ, ಮತದಾರರ ಪಟ್ಟಿಯಲ್ಲಿ ಇರಬೇಕಾದ ಮೂಲಭೂತ ವಿವರಗಳಾದ ಹೆಸರು, ವಯಸ್ಸು, ಲಿಂಗ, ಸಂಬಂಧಿಕರ ಹೆಸರು, ಮನೆ ಸಂಖ್ಯೆ ಮುಂತಾದವುಗಳಲ್ಲಿ ಕೂಡ ವಿಪರೀತ ವ್ಯತ್ಯಾಸಗಳು ಕಂಡುಬಂದಿವೆ. ಸಾಮಾನ್ಯವಾಗಿ ಪಟ್ಟಿಯಲ್ಲಿ ತಂದೆ, ತಾಯಿ ಅಥವಾ ಪತಿ–ಪತ್ನಿಯ ಹೆಸರು ಇರಬೇಕಾದ ಜಾಗದಲ್ಲಿ, ಆ ಸಂಬಂಧವನ್ನು ಸೂಚಿಸುವ ಪದಗಳನ್ನೇ ಹೆಸರಿನಂತೆ ಉಲ್ಲೇಖಿಸಲಾಗಿದೆ.
ಉದಾಹರಣೆಗೆ, ದಾಸರಹಳ್ಳಿ ಕ್ಷೇತ್ರದ ಮತಗಟ್ಟೆ ಭಾಗ ಸಂಖ್ಯೆ 7ರಲ್ಲಿ ಕವಿತಾ ಎಂಬ ಮತದಾರರ ಹೆಸರಿನ ಜೊತೆಗೆ, ಅವರ ಸಂಬಂಧಿಕರ ಹೆಸರಿನ ಜಾಗದಲ್ಲಿ ‘Husband Husband’ ಎಂದು ಮುದ್ರಿತವಾಗಿದೆ. ಅದೇ ರೀತಿ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅಬ್ದುಲ್ ಸಲಾಮ್ ಎಂಬ ಮತದಾರರ ಸಂಬಂಧಿಕರ ಹೆಸರಿನ ಜಾಗದಲ್ಲಿ Wife ಎಂದು ನಮೂದಿಸಲಾಗಿದೆ. ಮಹದೇವಪುರ ಕ್ಷೇತ್ರದ ಕೆಲವು ಕಡೆಗಳಲ್ಲಿ ಸಂಬಂಧಿಕರ ಹೆಸರಿನ ಜಾಗದಲ್ಲಿ ಕೇವಲ ‘S’ ಅಥವಾ ‘B’ ಎಂಬ ಒಂದೇ ಒಂದು ಇಂಗ್ಲಿಷ್ ಅಕ್ಷರ ಮಾತ್ರ ಕಾಣಿಸಿಕೊಂಡಿದೆ. ಇದರ ಜೊತೆಗೆ NA, None, Husband, Mother ಮುಂತಾದ ಪದಗಳು ಹೆಸರಿನ ಜಾಗದಲ್ಲಿ ಬಂದಿವೆ.
ಕೇವಲ ಸಂಬಂಧಿಕರ ಹೆಸರು ಮಾತ್ರವಲ್ಲದೆ, ಇಮೇಲ್ ವಿಳಾಸಗಳು, ಜನ್ಮದಿನಾಂಕಗಳು ಹಾಗೂ ವಿಶಿಷ್ಟ ಗುರುತಿನ ಸಂಖ್ಯೆಗಳು ಕೂಡ ನೇರವಾಗಿ ಹೆಸರಿರಬೇಕಿದ್ದ ಜಾಗದಲ್ಲಿ ನಮೂದಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಯಲಹಂಕ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಭಾಗ ಸಂಖ್ಯೆ 332ರಲ್ಲಿ ಮತದಾರರೊಬ್ಬರ ಸಂಬಂಧಿಕರ ಹೆಸರಿನ ಜಾಗದಲ್ಲಿ ಅಧಿಕೃತ ಇಮೇಲ್ ವಿಳಾಸವೇ ದಾಖಲಾಗಿದೆ. ಬಿಬಿಎಂಪಿ ದಕ್ಷಿಣ ಜಿಲ್ಲೆಯ ಮತ್ತೊಂದು ನಮೂದಿನಲ್ಲಿ ವ್ಯಕ್ತಿಯ ಹೆಸರಿನೊಂದಿಗೆ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ಹೋಲುವ ಅಕ್ಷರ ಮತ್ತು ಅಂಕಿಗಳ ಸರಣಿ ಕಂಡುಬಂದಿದೆ.

ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಹೆಸರಿನೊಂದಿಗೆ 01/06/1974 ಎಂಬ ಜನ್ಮದಿನಾಂಕ ಸೇರಿಕೊಂಡಿರುವುದು ಕಂಡುಬಂದಿದೆ. ಹಾಗೆಯೇ 44 ವರ್ಷದ ಮಹಿಳೆಯೊಬ್ಬರ ಹೆಸರಿನ ಜಾಗದಲ್ಲಿ ??????K ಎಂಬ ಸಂಕೇತಗಳಿವೆ. ಇನ್ನು ಕೆಲವು ಕಡೆಗಳಲ್ಲಿ XXX ಅಥವಾ ……. ಎಂಬ ಅರ್ಥಹೀನ ಚಿಹ್ನೆಗಳೇ ಹೆಸರುಗಳ ಜಾಗದಲ್ಲಿ ಕಾಣಿಸಿಕೊಂಡಿವೆ. ಇವು ಕೇವಲ ಭಾಷಾಂತರದ ಅಥವಾ ಕಾಗುಣಿತದ ಸಣ್ಣಪುಟ್ಟ ಲೋಪಗಲ್ಲ. ಇಮೇಲ್ ವಿಳಾಸಗಳು ಮತ್ತು ದಿನಾಂಕಗಳು ತಪ್ಪು ಅಂಕಣಗಳಲ್ಲಿ ಕುಳಿತುಕೊಂಡಿರುವುದು ದತ್ತಾಂಶ ಪ್ರಕ್ರಿಯೆಯಲ್ಲಿನ ಗಂಭೀರ ತಾಂತ್ರಿಕ ಪ್ರಮಾದಗಳು.
ಇಂತಹ ದೋಷಗಳ ಕುರಿತು ಕೆಲವು ಎಇಆರ್‌ಒ ಮತ್ತು ಬಿಎಲ್‌ಒಗಳು ಪ್ರಕ್ರಿಯಿಸಿದ್ದು, “ಕನ್ನಡ ಅಕ್ಷರಗಳನ್ನು ಇಂಗ್ಲಿಷ್ ರೂಪಕ್ಕೆ ಪರಿವರ್ತಿಸುವ ಅಥವಾ ಡಿಜಿಟಲ್ ಕಡತಗಳನ್ನು ಬೇರೆ ಸ್ವರೂಪಕ್ಕೆ ಬದಲಾಯಿಸುವ ಪ್ರಕ್ರಿಯೆಯಲ್ಲಿ (ಫಾಂಟ್ ಎನ್‌ಕೋಡಿಂಗ್ ದೋಷ) ಈ ಸಮಸ್ಯೆ ಉಂಟಾಗಿರಬಹುದು” ಎಂಬ ಸಮರ್ಥನೆಗಳನ್ನು ನೀಡಿದ್ದಾರೆ.
ಒಂದು ವೇಳೆ, ಕಂಪ್ಯೂಟರ್‌ನಲ್ಲಿ ಕನ್ನಡದ ಫಾಂಟ್‌ಗಳನ್ನು ಇಂಗ್ಲಿಷ್‌ಗೆ ಅನುವಾದಿಸುವಾಗ ಇಂತಹ ತಪ್ಪುಗಳು ಆಗಬಹುದು. ಆದರೆ, ಅದನ್ನು ‘ಮ್ಯಾನ್ಯುವಲ್’ ಆಗಿ ಪರಿಶೀಲಿಸಬೇಕಾದ್ದು, ಚುನಾವಣಾ ಅಧಿಕಾರಿಗಳ ಕರ್ತವ್ಯ. ಹಾಗೆ ನೋಡಿದರೆ, ಇದು ಕೇವಲ ಫಾಂಟ್‌ಗಳ ಸಮಸ್ಯೆಯೂ ಇಲ್ಲ. ಹೆಸರಿನ ಜಾಗದಲ್ಲಿ ಇಮೇಲ್ ವಿಳಾಸಗಳು, ಜನ್ಮದಿನಾಂಕಗಳು ಹಾಗೂ ‘Husband’ ಅಥವಾ ‘Wife’ ಎಂಬ ಪದಗಳು ನಮೂದಾಗಿರುವುದು ಅಧಿಕಾರಿಗಳು ದತ್ತಾಂಶಗಳನ್ನೇ ಸರಿಯಾಗಿ ನಿರ್ವಹಿಸಿಲ್ಲ ಎಂಬ ಅಸಲಿಯತ್ತನ್ನು ಹೊರಗೆಳೆಯುತ್ತವೆ.
ಈ ಲೇಖನ ಓದಿದ್ದೀರಾ?: ಅಮೆರಿಕ ಮಧ್ಯಂತರ ಚುನಾವಣೆ: ಡೊನಾಲ್ಡ್ ಟ್ರಂಪ್ ಕುರ್ಚಿಗಿಲ್ಲ ಕುತ್ತು; ಬಹುಮತ ಕಳೆದುಕೊಂಡರೆ ಸರ್ಕಾರ ‘ಹಲ್ಲು…
ಈ ಲೋಪದಲ್ಲಿ ಅತ್ಯಂತ ಮುಖ್ಯವಾದ ಸಂಗತಿಯೆಂದರೆ, ಕನಿಷ್ಠ ಮೂವರು ಬಿಎಲ್‌ಒಗಳು ‘ಇಂತಹ ದೋಷಗಳು ಅಂತಿಮ ಪಟ್ಟಿ ಪ್ರಕಟಗೊಳ್ಳುವ ಮುನ್ನವೇ ತಮ್ಮ ಗಮನಕ್ಕೆ ಬಂದಿದ್ದವು’ ಎಂದು ಹೇಳಿಕೊಂಡಿರುವುದು. “ಈ ದೋಷಗಳ ಕುರಿತು ತಾವು ತಮ್ಮ ಮೇಲಧಿಕಾರಿಗಳಿಗೂ ಸ್ಪಷ್ಟ ಮಾಹಿತಿ ನೀಡಿದ್ದೆವು. ಆದರೆ, ಅಂತಿಮ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವಾಗ ಸಾಫ್ಟ್‌ವೇರ್ ತೊಂದರೆಗಳು ತಾನಾಗಿಯೇ ಸರಿಹೋಗುತ್ತವೆ ಎಂಬುದಾಗಿ ಅಧಿಕಾರಿಗಳು ತಮಗೆ ಭರವಸೆ ನೀಡಿದ್ದರು” ಎಂದು ಅವರು ತಿಳಿಸಿದ್ದಾರೆ.
ಆದರೆ, ವಾಸ್ತವದಲ್ಲಿ ಅಂತಿಮ ಪಟ್ಟಿ ಬಿಡುಗಡೆಯಾದ ಬಳಿಕವೂ ದೋಷಗಳು ಹಾಗೆಯೇ ಮುಂದುವರಿದಿವೆ. ಈಗ ತಪ್ಪುಗಳಾಗಿರುವ ಮತದಾರರಿಗೆ ಫಾರಂ–8 ಸಲ್ಲಿಸಿ ತಿದ್ದುಪಡಿ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಬಿಟ್ಟಿ ಸಲಹೆ ನೀಡುತ್ತಿದ್ದಾರೆ.ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕರಡು ಪಟ್ಟಿಯ ಹಂತದಲ್ಲೇ ಇಂತಹ ಲೋಪಗಳು ಗೊತ್ತಿದ್ದರೂ ಅವುಗಳನ್ನು ಕಾಲಮಿತಿಯಲ್ಲಿ ಪರಿಹರಿಸದೆ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದು ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಈ ಪ್ರಶ್ನೆಗೆ ಚುನಾವಣಾ ಆಯೋಗದ ಬಳಿ ಉತ್ತರವಿಲ್ಲ. ಅದು ಉತ್ತರಿಸುವುದೂ ಇಲ್ಲ.
ಈಗ, ಮತದಾರರು ತಾವು ಯಾವುದೇ ತಪ್ಪು ಮಾಡದಿದ್ದರೂ, ತಾವು ನಿಖರವಾದ ವಿವರಗಳನ್ನೇ ಗಣತಿ ನಮೂನೆಯಲ್ಲಿ ಭರ್ತಿ ಮಾಡಿದ್ದರೂ ತಮ್ಮ ಹೆಸರು ಅಥವಾ ವಿವರಗಳು ತಪ್ಪಾಗಿ ಮುದ್ರಣಗೊಂಡಿರುವುದು ಸಂಕಷ್ಟತ್ತೆ ದೂಡಿದೆ. ಅವರೆಲ್ಲರೂ ಮತ್ತೆ ಚುನಾವಣಾ ಅಧಿಕಾರಿಗಳ ಬಳಿಗೆ ಅಲೆದಾಡಬೇಕಾಗಿದೆ. ಮತಪಟ್ಟಿಯಲ್ಲಿ ಕೆಲವು ಮತದಾರರ ಹೆಸರುಗಳೇ ಸಂಪೂರ್ಣವಾಗಿ ಗುರುತಿಸಲಾಗದಂತೆ ಬದಲಾಗಿರುವುದರಿಂದ, ಅವರೆಲ್ಲರೂ ತಮ್ಮ ಮನೆಯ ಸಂಖ್ಯೆಯನ್ನು ಆಧರಿಸಿ ತಮ್ಮ ಮತ ಸಂಖ್ಯೆಯನ್ನು ಹುಡುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.



