ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್ ಬಜೆಟ್ ಸಿನಿಮಾಗಳಲ್ಲೂ ನಿಲ್ಲದ ಸಂಭಾವನೆ ತಾರತಮ್ಯ!

Date:

₹4,000 ಕೋಟಿಯ ಬೃಹತ್ ಬಜೆಟ್‌ನ ‘ರಾಮಾಯಣ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ! ಇಡೀ ಕಥೆಯ ಕೇಂದ್ರಬಿಂದು ಸೀತೆಯ ಪಾತ್ರಧಾರಿಗೆ ಕೇವಲ ₹12 ಕೋಟಿ! ನಾಯಕಿ-ನಾಯಕರ ನಡುವಿನ ಈ ಭಾರೀ ತಾರತಮ್ಯಕ್ಕೆ ಚಿತ್ರರಂಗ ನೀಡುವ ಸಮರ್ಥನೆಗಳೇನು? ನಾಯಕಿಯರ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸುವ ಮಾನದಂಡಗಳೇನು?

- Advertisement -

ಭಾರತೀಯ ಚಲನಚಿತ್ರ ರಂಗದ ಇತಿಹಾಸದಲ್ಲೇ ಅತ್ಯಂತ ವೈಭವೋಪೇತ, ಮಹತ್ವಾಕಾಂಕ್ಷೆಯ ಮತ್ತು ಬೃಹತ್ ಬಜೆಟ್‌ನ ‘ರಾಮಾಯಣ: ರೈಸ್ ಆಫ್ ಲೆಜೆಂಡ್’ ಚಿತ್ರ ಇದೇ ನವೆಂಬರ್ 5ರಂದು ಜಾಗತಿಕ ಮಟ್ಟದಲ್ಲಿ ತೆರೆಕಾಣಲು ಸಜ್ಜಾಗಿದೆ. ಬಾಲಿವುಡ್‌ ಸ್ಟಾರ್‌ ನಟ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್, ನಟಿ ಸಾಯಿ ಪಲ್ಲವಿ ಮತ್ತು ಹಿರಿಯ ನಟ ಸನ್ನಿ ಡಿಯೋಲ್ ಅವರಂತಹ ಘಟಾನುಘಟಿ ತಾರಾಗಣ ಚಿತ್ರದಲ್ಲಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಬಂಡವಾಳ ಹೂಡಿಕೆ, ಎನ್‌ಸಿಡಿ ಆಸ್ಕರ್ ವಿಜೇತ ತಂತ್ರಜ್ಞರ ಕೈಚಳಕ ಹಾಗೂ ಎ.ಆರ್. ರೆಹಮಾನ್ ಮತ್ತು ಹಾನ್ಸ್ ಜಿಮ್ಮರ್ ಅವರಂತಹ ದಿಗ್ಗಜರ ಸಂಗೀತ ಸಾರಥ್ಯದಲ್ಲಿ ರೂಪುಗೊಂಡಿರುವ ಈ ಸಿನಿಮಾಗೆ ಎರಡೂ ಭಾಗಗಳಿಗೆ ಸೇರಿ ಬರೋಬ್ಬರಿ ನಾಲ್ಕು ಸಾವಿರ ಕೋಟಿ ರೂಪಾಯಿಗಳ ಬಜೆಟ್ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಬೃಹತ್ ಸಿನಿಮಾದ ತೆರೆಮರೆಯಿಂದ ಹೊರಬಂದಿರುವ ಪ್ರಮುಖ ತಾರಾಗಣದ ಸಂಭಾವನೆಯ ವಿವರಗಳು ಮಾತ್ರ ಚಿತ್ರರಂಗದಲ್ಲಿ ಬೇರೂರಿರುವ ಹಳೆಯ ತಾರತಮ್ಯದ ಜಾಡ್ಯವೊಂದನ್ನು ಮತ್ತೆ ಚರ್ಚೆಗೆ ತಂದಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ...

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ ರಾಜ್ಯ ಮಣಿಪುರದಲ್ಲಿ ಶತಮಾನಗಳಿಂದ ಬೆಳೆದು ಬಂದಿದ್ದ ಸೌಹಾರ್ದತೆಯ ಬೇರುಗಳನ್ನು ಸಂಪೂರ್ಣವಾಗಿ ಕೊಳೆತು ಹೋಗಲು ಕೇಂದ್ರ ಸರ್ಕಾರ ಬಿಟ್ಟಂತಿದೆ. 2023ರಿಂದ ನಡೆಯುತ್ತಿರುವ...

ಅಮೆರಿಕ ಮಧ್ಯಂತರ ಚುನಾವಣೆ: ಡೊನಾಲ್ಡ್ ಟ್ರಂಪ್ ಕುರ್ಚಿಗಿಲ್ಲ ಕುತ್ತು;...

ಅಮೆರಿಕದ ಕಾಂಗ್ರೆಸ್‌ಗೆ ನ. 3ರಂದು ನಡೆಯಲಿರುವ 'ಮಧ್ಯಂತರ ಚುನಾವಣೆ' ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಬಹುದೊಡ್ಡ ಅಗ್ನಿಪರೀಕ್ಷೆ. ಈ ಸಮರದಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಬಹುಮತ ಕಳೆದುಕೊಂಡರೂ ಅವರ ಅಧ್ಯಕ್ಷ ಸ್ಥಾನಕ್ಕೇನೂ ಕುತ್ತಿಲ್ಲ;...

ವರದಿಗಳು ಮತ್ತು ಚಿತ್ರರಂಗದ ಆಂತರಿಕ ಮೂಲಗಳ ಪ್ರಕಾರ, ʼರಾಮಾಯಣʼ ಚಿತ್ರದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿರುವ ನಟ ರಣಬೀರ್ ಕಪೂರ್ ಅವರಿಗೆ ಬರೋಬ್ಬರಿ 150 ಕೋಟಿ ರೂಪಾಯಿಗಳ ಸಂಭಾವನೆ ನೀಡಲಾಗಿದೆ. ಅದೇ ರೀತಿ, ಲಂಕೆಯ ರಾಕ್ಷಸ ರಾಜ ರಾವಣನ ಪಾತ್ರದಲ್ಲಿ ಅಬ್ಬರಿಸಲಿರುವ ನಟ ಯಶ್‌ಗೆ 100 ಕೋಟಿ ರೂಪಾಯಿಗಳ ಸಂಭಾವನೆ ಪಾವತಿಸಲಾಗಿದೆ. ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸನ್ನಿ ಡಿಯೋಲ್ 40 ಕೋಟಿ ರೂಪಾಯಿ ಪಡೆದಿದ್ದರೆ, ಲಕ್ಷ್ಮಣನ ಪಾತ್ರಧಾರಿಯಾದ ರವಿ ದುಬೆ 20 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದಾರೆ. ಆದರೆ, ಇಡೀ ರಾಮಾಯಣ ಮಹಾಕಾವ್ಯದ ಅತಿ ಮುಖ್ಯ ಕೇಂದ್ರಬಿಂದು ‘ಸೀತೆ’ಯ ಪಾತ್ರಕ್ಕೆ ಜೀವತುಂಬುತ್ತಿರುವ ನಟಿ ಸಾಯಿ ಪಲ್ಲವಿ ಅವರಿಗೆ ನೀಡಿರುವ ಸಂಭಾವನೆ ಮಾತ್ರ ಕೇವಲ 12 ಕೋಟಿ ರೂಪಾಯಿಗಳು! ನಾಲ್ಕು ಸಾವಿರ ಕೋಟಿ ರೂಪಾಯಿಗಳಷ್ಟು ದೈತ್ಯ ಬಜೆಟ್ ಹೊಂದಿರುವ ಸಿನಿಮಾವೊಂದರಲ್ಲಿ, ಚಿತ್ರದ ಮುಖ್ಯ ನಾಯಕಿಗಿಂತ ನಾಯಕ ನಟನಿಗೆ ಹತ್ತು ಪಟ್ಟಿಗೂ ಹೆಚ್ಚು ಸಂಭಾವನೆ ನೀಡಿರುವುದು ಮತ್ತು ಪೋಷಕ ಪಾತ್ರಗಳಿಗಿಂತಲೂ ನಾಯಕಿಗೆ ಕಡಿಮೆ ಮೊತ್ತವನ್ನು ನಿಗದಿಪಡಿಸಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.

Ramayana 1

ಭಾರತೀಯ ಚಿತ್ರರಂಗದಲ್ಲಿ ನಾಯಕ ಮತ್ತು ನಾಯಕಿಯರ ನಡುವಿನ ಈ ಆರ್ಥಿಕ ತಾರತಮ್ಯವು ನಿನ್ನೆ ಮೊನ್ನೆಯದಲ್ಲ. ದಶಕಗಳಿಂದಲೂ ಪ್ರಾದೇಶಿಕ ಭಾಷೆಗಳಿಂದ ಹಿಡಿದು ಬಾಲಿವುಡ್‌ವರೆಗೆ ಬಹುತೇಕ ಎಲ್ಲಾ ಸಿನಿಮಾ ರಂಗಗಳಲ್ಲೂ ಈ ಅಸಮಾನತೆಯು ಬೇತಾಳದಂತೆ ಮುಂದುವರಿಯುತ್ತಲೇ ಬಂದಿದೆ. ಸಿನಿಮಾ ನಿರ್ಮಾಪಕರು ಮತ್ತು ವಿತರಕರು ಈ ತಾರತಮ್ಯಕ್ಕೆ ನೀಡುವ ಮೊದಲ ಮತ್ತು ಪ್ರಮುಖ ಸಮರ್ಥನೆ ಎಂದರೆ ಅದು ನಟರ ‘ಬಾಕ್ಸ್ ಆಫೀಸ್ ಮಾರುಕಟ್ಟೆ ಮೌಲ್ಯ’ ಅಥವಾ ‘ಟಿಕೆಟ್ ಮಾರಾಟದ ಸಾಮರ್ಥ್ಯ’. ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಸಂಪೂರ್ಣವಾಗಿ ನಾಯಕ ನಟನ ಹೆಸರಿನ ಮೇಲೆಯೇ ಆಧಾರಿತವಾಗಿರುತ್ತದೆ ಎಂಬುದು ಚಿತ್ರರಂಗದ ಸಾಂಪ್ರದಾಯಿಕ ನಂಬಿಕೆ. ರಣಬೀರ್ ಕಪೂರ್ ಅವರ ‘ಅನಿಮಲ್’ ಅಥವಾ ಯಶ್ ಅವರ ‘ಕೆಜಿಎಫ್’ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಬರೆದ ಕೋಟ್ಯಂತರ ರೂಪಾಯಿಗಳ ದಾಖಲೆಯನ್ನು ಆಧಾರವಾಗಿಟ್ಟುಕೊಂಡು ಅವರ ಸಂಭಾವನೆಯನ್ನು ಸಮರ್ಥಿಸಲಾಗುತ್ತದೆ. ಆದರೆ, ಕೇವಲ ನಟನ ಹೆಸರಿನಿಂದಲೇ ಸಿನಿಮಾ ಓಡುತ್ತದೆ ಎನ್ನುವುದಾದರೆ, ಕಥೆಯ ಮುಖ್ಯ ಪ್ರಾಣವಾಗಿರುವ ನಾಯಕಿಯ ಪಾತ್ರವನ್ನು ಇಷ್ಟು ಹಗುರವಾಗಿ ಕಾಣುವುದು ಎಷ್ಟು ಸಮಂಜಸ?

ಜೊತೆಗೆ, ಭಾರತೀಯ ಚಿತ್ರರಂಗವು ಮೂಲತಃ ಪುರುಷ ಪ್ರಧಾನ ಮನಸ್ಥಿತಿಯಿಂದಲೇ ರೂಪಿಸಲ್ಪಟ್ಟಿದೆ. ಯಾವುದೇ ಒಂದು ಪ್ರಮುಖ ಸಿನಿಮಾದ ಕಥೆ, ಚಿತ್ರಕಥೆ, ಪ್ರಚಾರ ತಂತ್ರಗಳು ಮತ್ತು ನಿರ್ಮಾಣದ ಪ್ರಮುಖ ನಿರ್ಧಾರಗಳು ನಾಯಕ ನಟನನ್ನೇ ಕೇಂದ್ರವಾಗಿಟ್ಟುಕೊಂಡು ಸಾಗುತ್ತವೆ. ನಟಿಯರಿಗೆ ಸಿನಿಮಾಗಳಲ್ಲಿ ಎಷ್ಟೇ ಪ್ರಾಮುಖ್ಯತೆ ಇದ್ದರೂ ಅಥವಾ ಅವರ ಅಭಿನಯ ಎಷ್ಟೇ ಪ್ರಶಂಸೆಗೆ ಪಾತ್ರವಾದರೂ, ಅವರಿಗೆ ಸಿಗುವ ಆರ್ಥಿಕ ಮಾನ್ಯತೆ ಮಾತ್ರ ತೀರಾ ನಿರಾಸಾದಾಯಕವಾಗಿರುತ್ತದೆ. ಸಾಯಿ ಪಲ್ಲವಿ ಅವರಂತಹ ಪ್ರಬುದ್ಧ ನಟಿಗೆ ಕೇವಲ 12 ಕೋಟಿ ನೀಡುವುದು ಅವರ ಪ್ರತಿಭೆ ಮತ್ತು ಕೊಡುಗೆಗೆ ಮಾಡುವ ಅಪಚಾರವೇ ಸರಿ. ಸೀತೆಯ ಪಾತ್ರವಿಲ್ಲದೆ ರಾಮಾಯಣದ ಕಥೆಗೆ ಯಾವುದೇ ಅಸ್ತಿತ್ವವಿಲ್ಲ ಎಂಬ ಸತ್ಯ ಗೊತ್ತಿದ್ದರೂ, ಆರ್ಥಿಕ ಲೆಕ್ಕಾಚಾರದಲ್ಲಿ ನಾಯಕಿಯನ್ನು ಎರಡನೇ ದರ್ಜೆಯ ಕಲಾವಿದೆಯಂತೆಯೋ ಇಲ್ಲ ಪೋಷಕ ಪಾತ್ರದಂತೆಯೋ ನೋಡುವುದು ಚಿತ್ರರಂಗದ ಸಂಸ್ಕೃತಿ ಎಂಥದ್ದು ಎಂಬುದನ್ನು ತೋರಿಸುತ್ತದೆ.

ನಾಯಕ ನಟರು ಒಂದು ಬಿಗ್ ಬಜೆಟ್ ಸಿನಿಮಾಗಾಗಿ 1 ರಿಂದ 2 ವರ್ಷಗಳ ಕಾಲ ಸಂಪೂರ್ಣವಾಗಿ ಒಂದೇ ಪ್ರಾಜೆಕ್ಟ್‌ಗೆ ಕಮಿಟ್ ಆಗುತ್ತಾರೆ. ಈ ಸಮಯದಲ್ಲಿ ಅವರು ಬೇರೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಉದಾಹರಣೆಗೆ, ದೈಹಿಕ ಬದಲಾವಣೆ, ಕಠಿಣ ಜಿಮ್ ವರ್ಕ್‌ಔಟ್‌ಗಳು ಹಾಗೂ ಸಾಹಸ ದೃಶ್ಯಗಳ ಅಭ್ಯಾಸಕ್ಕಾಗಿ ಅಪಾರ ಸಮಯವನ್ನು ಮೀಸಲಿಡುತ್ತಾರೆ. ಹೀಗಾಗಿ, ಅವರು ಕಳೆದುಕೊಳ್ಳುವ ಇತರ ಅವಕಾಶಗಳ ನಷ್ಟವನ್ನು ಭರ್ತಿ ಮಾಡಲು ಹೆಚ್ಚಿನ ಸಂಭಾವನೆ ನೀಡಲಾಗುತ್ತದೆ ಎಂಬುದು ನಿರ್ಮಾಪಕರ ವಾದ. ಆದರೆ, ನಟಿಯರು ಕೂಡ ಅದೇ ಸಿನಿಮಾಗಾಗಿ ತಿಂಗಳುಗಟ್ಟಲೆ ಕಾಲ್ ಶೀಟ್ ನೀಡುತ್ತಾರೆ. ರಾಮಾಯಣದಂತಹ ಪೌರಾಣಿಕ ಚಿತ್ರದಲ್ಲಿ ಸೀತೆಯ ಪಾತ್ರ ನಿರ್ವಹಿಸುವ ನಟಿಗೆ ಕೇವಲ ದೈಹಿಕ ಶ್ರಮವಲ್ಲದೆ, ದಿನಗಟ್ಟಲೆ ಭಾರೀ ತೂಕದ ಆಭರಣ, ವಸ್ತ್ರಾಲಂಕಾರ ಮತ್ತು ಮೇಕಪ್‌ನೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸುವ ಸವಾಲಿರುತ್ತದೆ. ಆದರೂ ಅವರ ಈ ಸಮಯ ಮತ್ತು ಶ್ರಮಕ್ಕೆ ಸಮಾನ ಆರ್ಥಿಕ ಮೌಲ್ಯ ಸಿಗುವುದಿಲ್ಲ. ಆದರೂ, ಶ್ರಮ ಮತ್ತು ಪ್ರತಿಭೆಯ ಆಧಾರದ ಮೇಲೆ ಸಂಭಾವನೆ ನಿರ್ಧಾರವಾಗದೆ, ಕೇವಲ ಲಿಂಗದ ಆಧಾರದ ಮೇಲೆ ಮತ್ತು ಹಳೆಯ ಮಾರುಕಟ್ಟೆ ಸೂತ್ರಗಳ ಆಧಾರದ ಮೇಲೆ ಸಂಭಾವನೆ ನಿಗದಿಯಾಗುತ್ತಿರುವುದು ನಿಜಕ್ಕೂ ವಿಪರ್ಯಾಸ.

ಒಂದು ಸಿನಿಮಾದಲ್ಲಿ ನಾಯಕನ ಪಾತ್ರಕ್ಕೆ ಹೆಚ್ಚಿನ ಪ್ರಚಾರ ನೀಡಲಾಗುತ್ತದೆ. ಚಿತ್ರದ ಪೋಸ್ಟರ್‌ಗಳಲ್ಲಿ, ಟೀಸರ್‌ಗಳಲ್ಲಿ, ಟ್ರೇಲರ್‌ಗಳಲ್ಲಿ ನಾಯಕನಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತದೆ. ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ನಾಯಕನ ಸುತ್ತಲೇ ಚರ್ಚೆ ನಡೆಯುವುದು ಸಾಮಾನ್ಯ. ನಾಯಕಿಯ ಪಾತ್ರ ಕಥೆಗೆ ಎಷ್ಟು ಮುಖ್ಯವಾಗಿದ್ದರೂ, ಆಕೆಯನ್ನು ಕೆಲವೊಮ್ಮೆ ನಾಯಕನಿಗೆ ಪೂರಕವಾದ ಪಾತ್ರವಾಗಿ ಮಾತ್ರ ನೋಡಲಾಗುತ್ತದೆ. ಇದರ ಪರಿಣಾಮ ಸಂಭಾವನೆಯಲ್ಲೂ ಕಾಣಿಸುತ್ತದೆ. ನಾಯಕಿಯೊಬ್ಬರು ಹಲವು ವರ್ಷಗಳ ಅನುಭವ ಹೊಂದಿದ್ದರೂ, ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದ್ದರೂ, ಆಕೆಗೆ ನಾಯಕನಷ್ಟೇ ಸಂಭಾವನೆ ನೀಡುವ ಪದ್ಧತಿಯೇ ಇಲ್ಲ.

ನಿರ್ಮಾಪಕರು ಸಂಭಾವನೆಯನ್ನು ಆ ನಟನ ಹೆಸರಿನ ಮೇಲೆ ವಿತರಕರು ಎಷ್ಟು ಕೋಟಿ ರೂಪಾಯಿಗೆ ಸಿನಿಮಾ ಖರೀದಿಸುತ್ತಾರೆ ಎಂಬುದರ ಮೇಲೆ ನಿರ್ಧರಿಸುತ್ತಾರೆ. ಸ್ಯಾಟಲೈಟ್, ಡಿಜಿಟಲ್ ಮತ್ತು ಥಿಯೇಟ್ರಿಕಲ್ ಹಕ್ಕುಗಳು ನಾಯಕ ನಟನ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಮಾರಾಟವಾಗುತ್ತವೆ ಎಂಬುದು ವ್ಯವಹಾರಿಕ ಸೂತ್ರ. ಇದು ಒಂದು ರೀತಿಯ ಕೃತಕ ಚಕ್ರವಾಗಿದೆ. ನಾಯಕ ನಟರಿಗೆ ದೊಡ್ಡ ಮಟ್ಟದ ಪ್ರಚಾರ ಮತ್ತು ಪ್ರಾಮುಖ್ಯತೆ ನೀಡುವುದರಿಂದ ಅವರ ಮಾರುಕಟ್ಟೆ ಮೌಲ್ಯ ಹೆಚ್ಚುತ್ತಲೇ ಹೋಗುತ್ತದೆ. ಆದರೆ ನಟಿಯರಿಗೆ ಅಷ್ಟೇ ಮಟ್ಟದ ಪ್ರಚಾರ ಅಥವಾ ಪೋಸ್ಟರ್‌ಗಳಲ್ಲಿ ಜಾಗ ನೀಡದಿರುವುದರಿಂದ, ಅವರ ಮಾರುಕಟ್ಟೆ ಮೌಲ್ಯವನ್ನು ಬೆಳೆಯಲು ಬಿಡದೆ ಕೃತಕವಾಗಿ ಸೀಮಿತಗೊಳಿಸಲಾಗುತ್ತಿದೆ.

ramayana

‘ರಾಮಾಯಣ’ ಸಿನಿಮಾದಲ್ಲಿ ಸೀತೆಯ ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಅವರ ಹೆಸರು ಘೋಷಣೆಯಾದಾಗಿನಿಂದಲೂ ಚಿತ್ರರಂಗದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪ್ರೇಕ್ಷಕರ ವಲಯದಲ್ಲಿ ಈ ಆಯ್ಕೆ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತ್ತು. ಬಾಲಿವುಡ್ ಅಥವಾ ದೊಡ್ಡ ಬಜೆಟ್‌ನ ಪೌರಾಣಿಕ ಸಿನಿಮಾಗಳಲ್ಲಿ ನಾಯಕಿಯರನ್ನು ಬಿಂಬಿಸುವ ಪರಿಪೂರ್ಣತೆ ಅಥವಾ ಗ್ಲಾಮರ್ ಲುಕ್‌ನ ವ್ಯಾಖ್ಯಾನಕ್ಕೆ ಸಾಯಿ ಪಲ್ಲವಿ ಸ್ವಲ್ಪ ಭಿನ್ನವಾಗಿ ನಿಲ್ಲುತ್ತಾರೆ. ಅವರು ತಮ್ಮ ಸ್ವಾಭಾವಿಕ ಮೈಬಣ್ಣ, ಸರಳತೆ ಮತ್ತು ಮೇಕಪ್ ಇಲ್ಲದ ನೋಟಕ್ಕೇ ಹೆಸರುವಾಸಿ. ಈ ಹಿಂದೆ ರಾಮಾಯಣ ಆಧಾರಿತ ಚಿತ್ರಗಳು ಅಥವಾ ಧಾರಾವಾಹಿಗಳಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸಿದವರ ಲುಕ್ ಹಾಗೂ ಈಗಿನ ಸಾಯಿ ಪಲ್ಲವಿ ಅವರ ಲುಕ್ ಅನ್ನು ಹೋಲಿಕೆ ಮಾಡಿ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ ಕೂಡ ಮಾಡಿದ್ದರು.

ಸಾಯಿ ಪಲ್ಲವಿ ಯಾವುದೇ ವಾಣಿಜ್ಯ ಜಾಹೀರಾತುಗಳಲ್ಲಿ ನಟಿಸದೆ, ಕೇವಲ ನಟನೆಯನ್ನೇ ನೆಚ್ಚಿಕೊಂಡಿರುವ ಕೆಲವೇ ಕಲಾವಿದರಲ್ಲಿ ಒಬ್ಬರು. ಪ್ರೇಕ್ಷಕರಲ್ಲಿ ಅವರಿಗಿರುವ ಗೌರವ ಮತ್ತು ವಿಶ್ವಸಾರ್ಹತೆ ಸಿನಿಮಾದ ತೂಕವನ್ನು ಹೆಚ್ಚಿಸುತ್ತದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ತರಲು ನಟಿಯ ಬ್ರ್ಯಾಂಡ್ ಮೌಲ್ಯವೂ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತದೆ ಎಂಬುವುದಕ್ಕೆ ಸಾಯಿ ಪಲ್ಲವಿ ಅವರ ಹಿಂದಿನ ಹಿಟ್ ಸಿನಿಮಾಗಳೇ ಸಾಕ್ಷಿ. ಹೀಗಿರುವಾಗ, ಸಂಭಾವನೆ ನಿರ್ಧಾರದಲ್ಲಿ ಕೇವಲ ನಟನ ಹೆಸರನ್ನು ಮಾತ್ರ ಮುನ್ನೆಲೆಗೆ ತರುವುದು ಪೂರ್ವಾಗ್ರಹ ಪೀಡಿತ ನಿರ್ಧಾರವಾಗುತ್ತದೆ. ವಿಮರ್ಶೆಗಳು ಏನೇ ಇದ್ದರೂ, ತೆರೆಯ ಮೇಲೆ ಸಾಯಿ ಪಲ್ಲವಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಸೀತೆಯ ಪಾತ್ರಕ್ಕೆ ಹೊಸ ವ್ಯಾಖ್ಯಾನ ಬರೆಯಲಿದ್ದಾರೆ ಎಂಬ ನಿರೀಕ್ಷೆ ದಟ್ಟವಾಗಿದೆ.

ಹಾಲಿವುಡ್‌ನಲ್ಲಿ ʼಸಮಾನ ಕೆಲಸಕ್ಕೆ ಸಮಾನ ಸಂಭಾವನೆʼ ಅಭಿಯಾನದ ಮೂಲಕ ಜೆನಿಫರ್ ಲಾರೆನ್ಸ್, ಮೈಲಿ ಸೈರಸ್ ಅವರಂತಹ ನಟಿಯರು ಧ್ವನಿ ಎತ್ತಿ ತಮ್ಮ ಹಕ್ಕನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಭಾರತೀಯ ಚಿತ್ರರಂಗದಲ್ಲಿ ಸಾವಿರಾರು ಕೋಟಿಗಳ ಬಜೆಟ್ ಸಿನಿಮಾಗಳು ಬಂದರೂ, ಸಂಭಾವನೆ ಅಂತರ ದೊಡ್ಡದಾಗಿಯೇ ಉಳಿದಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಮೇಲೆ ಸಿನಿಪ್ರಿಯರ ಬೇಸರ; ಅಬ್ಬರದ ದೃಶ್ಯಗಳ ನಡುವೆ ಕಳೆದುಹೋದ ಕಥೆ, ಮಹಿಳಾ ಧ್ವನಿ

ಇನ್ನು ಬಿಡುಗಡೆಯ ಹೊಸ್ತಿಲಲ್ಲಿರುವ ‘ರಾಮಾಯಣ’ ಸಿನಿಮಾದ ಬಾಕ್ಸ್ ಆಫೀಸ್ ನಿರೀಕ್ಷೆಯತ್ತ ಗಮನಹರಿಸುವುದಾದರೆ, ದೇಶಾದ್ಯಂತ ಸುಮಾರು 33 ಕೋಟಿ ರೂಪಾಯಿಗಳಿಗೂ ಅಧಿಕ ಮುಂಗಡ ಟಿಕೆಟ್ ಬುಕಿಂಗ್ ಆಗಿದೆ. ಐಮ್ಯಾಕ್ಸ್, 4DX ನಂತಹ ಪ್ರೀಮಿಯಂ ಸ್ಕ್ರೀನ್‌ಗಳಲ್ಲಿ ಪ್ರೇಕ್ಷಕರಿಂದ ಅಭೂತಪೂರ್ವ ಸ್ಪಂದನೆ ಸಿಗುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ಸಿಕ್ಕಿದೆ. ಆದಾಗ್ಯೂ, ʼಪುಷ್ಪ 2 ‘ ಅಥವಾ ‘ಧುರಂಧರ್ 2’ ನಂತಹ ಸಿನಿಮಾಗಳು ಬಿಡುಗಡೆಗೂ ಮುನ್ನ ಸೃಷ್ಟಿಸಿದ್ದ ಮುಂಗಡ ಬುಕಿಂಗ್‌ಗೆ ಲಿಸಿದರೆ, ರಾಮಾಯಣದ ಹೈಪ್ ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಎಂಬ ಮಾತೂ ಕೇಳಿಬರುತ್ತಿದೆ.

ಏನೇ ಆದರೂ, ಭಾರತೀಯ ಚಿತ್ರರಂಗದಲ್ಲಿ ಆಳವಾಗಿ ಬೇರೂರಿರುವ ಪುರುಷ ಪ್ರಧಾನ ಮನಸ್ಥಿತಿ ಬದಲಾಗಬೇಕು. ದಶಕಗಳಿಂದ ಕೇವಲ ನಟರ ಇಮೇಜ್ ಮತ್ತು ಪುರುಷ ಪ್ರಾಧನ್ಯತೆಯ ಹಳೆಯ ಸೂತ್ರಗಳನ್ನೇ ಅಳತೆಗೋಲಾಗಿಟ್ಟುಕೊಂಡು, ತೆರೆಯ ಹಿಂದೆ ಹಾಗೂ ಮುಂದೆ ಸಮಾನವಾಗಿ ಶ್ರಮಿಸುವ ನಾಯಕಿಯರ ಪ್ರತಿಭೆ ಮತ್ತು ಶ್ರಮವನ್ನು ಕಡೆಗಣಿಸುತ್ತಿರುವ ಈ ಸಂಸ್ಕೃತಿಗೆ ಪೂರ್ಣವಿರಾಮ ಬೀಳಬೇಕು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಚಿತ್ರರಂಗದ ಈ ಮೊಂಡುತನದ ಯೋಚನೆ ಹೋಗಬೇಕು. ಲಿಂಗ ತಾರತಮ್ಯದ ಈ ಕೃತಕ ಗೋಡೆಯು ಸಂಪೂರ್ಣವಾಗಿ ಒಡೆದುಬಿದ್ದು, ಪ್ರತಿಭೆ ಮತ್ತು ಶ್ರಮಕ್ಕೆ ಮಾತ್ರ ಬೆಲೆ ಸಿಗುವ, ಸಮಾನ ಕೆಲಸಕ್ಕೆ ಸಮಾನ ಸಂಭಾವನೆ ದೊರೆಯುವ ಆರೋಗ್ಯಕರ ಹಾಗೂ ನ್ಯಾಯಯುತ ವಾತಾವರಣ ಭಾರತೀಯ ಸಿನಿರಂಗದಲ್ಲಿ ನಿರ್ಮಾಣವಾಗಬೇಕು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ...

ರೈತ ಹೋರಾಟದಿಂದ ವಿಧಾನಸಭಾಧ್ಯಕ್ಷ ಸ್ಥಾನದವರೆಗೆ ಕಾಗೋಡು ತಿಮ್ಮಪ್ಪ ಹಾದಿ…

ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಹೋರಾಟ,...

ಈ ದಿನ ಕವಿತೆ | ಎರಡು ದೀಪಗಳು- ಅಲಿ ಸರ್ದಾರ್ ಜಾಫ್ರಿ

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಉರ್ದು ಕವಿ ಅಲಿ ಸರ್ದಾರ್ ಜಾಫ್ರಿಯವರ...

ಕರಸ್ಥಲದ ಲಿಂಗ ಮತ್ತು ಬೆರಳಿನ ಮಸಿ: ಸ್ಥಾವರ ಪ್ರಭುತ್ವದ ನಡುವೆ ಕಾಯಕ ಜೀವಿಯ ಘನತೆ

ಭಾರತೀಯ ಸಮಾಜದ ಹಳ್ಳಿಯ ಭೌತಿಕ ವಿನ್ಯಾಸವನ್ನು ಗಮನಿಸಿದರೆ ಅದೊಂದು ಅಪ್ಪಟ ಘನೀಕೃತ...