ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಸಮೂಹದ ನಡುವಿನ ಸಂಬಂಧದ ಕುರಿತು ಸಬೀರ್ ಭಾಟಿಯಾ ನಿರ್ಮಿಸಿರುವ “The Friendship Files / How Modi and Adani Stole India” ಎಂಬ ವಿಡಿಯೊದ ಆನ್‌ಲೈನ್ ಪ್ರಸಾರಕ್ಕೆ ಕಲ್ಕತ್ತಾ ಹೈಕೋರ್ಟ್ ತಡೆ ನೀಡಿದೆ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಾಲಯ, ಮಧ್ಯಂತರ ತಡೆಯಾಜ್ಞೆಯನ್ನು 2027ರ ಜನವರಿ 31ರವರೆಗೆ ಮುಂದುವರಿಸಲು ಆದೇಶಿಸಿದೆ.
ನ್ಯಾಯಮೂರ್ತಿ ಆರ್ಯಕ್ ದತ್ ಅವರ ಪೀಠವು, ಸಬೀರ್ ಭಾಟಿಯಾ ಮತ್ತು ‘Shadow Citizens’ ಎಂಬ ಮತ್ತೊಂದು ಯೂಟ್ಯೂಬ್ ಚಾನೆಲ್ ಸಹಯೋಗದಲ್ಲಿ ತಯಾರಿಸಲಾದ 36 ನಿಮಿಷಗಳ ವಿಡಿಯೊವನ್ನು ಸಾಮಾನ್ಯ ಸುದ್ದಿ ವರದಿಯೆಂದು ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.
ಅದಾನಿ ಸಮೂಹವು ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದೆ ಅಥವಾ ರೈತರ ಮೇಲಿನ ಪೊಲೀಸ್ ಹಿಂಸಾಚಾರದ ವಿಚಾರದಲ್ಲಿ ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳಲು ಅದಕ್ಕೆ ರಕ್ಷಣೆ ನೀಡಲಾಗಿದೆ ಎಂಬಂತಹ ಆರೋಪಗಳಿಗೆ ಯಾವುದೇ ಅಧಿಕೃತ ಪ್ರಾಧಿಕಾರದ ಸಮರ್ಥನೆ ಕಂಡುಬಂದಿಲ್ಲ ಎಂದು ನ್ಯಾಯಾಲಯ ಪ್ರಾಥಮಿಕವಾಗಿ ಗಮನಿಸಿದೆ.
ಮೂಲ ವಿಡಿಯೊವನ್ನು ಈ ಹಿಂದೆಯೇ ನಿಷ್ಕ್ರಿಯಗೊಳಿಸಲಾಗಿದ್ದರೂ, ಅದನ್ನು ಮತ್ತೆ ಅಪ್‌ಲೋಡ್ ಮಾಡಿರುವುದರ ಹಿಂದೆ ಸದುದ್ದೇಶ ಇಲ್ಲ ಎಂಬುದನ್ನ ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಅಕ್ಟೋಬರ್ 9ರಂದು ಸಬೀರ್ ಭಾಟಿಯಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ‘Shadow Citizens’ ಸಹಯೋಗದೊಂದಿಗೆ ಈ ವಿಡಿಯೊವನ್ನು ಪ್ರಕಟಿಸಲಾಗಿತ್ತು. ಬಳಿಕ ಅದನ್ನು ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಳ್ಳಲಾಗಿತ್ತು. ಯೂಟ್ಯೂಬ್ ಮತ್ತು ಎಕ್ಸ್‌ನಲ್ಲಿ ವಿಡಿಯೊ 80,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು ಎಂದು ವರದಿಯಾಗಿದೆ.
ವಿಡಿಯೊದಲ್ಲಿ ಮಾನನಷ್ಟಕಾರಿ ವಿಷಯಗಳಿವೆ ಮತ್ತು ಅಗತ್ಯ ಪರಿಶೀಲನೆ ನಡೆಸದೆ ಆರೋಪಗಳನ್ನು ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ, ಸರ್ಕಾರವು ಈ ಹಿಂದೆ ವಿಡಿಯೊವನ್ನು ತೆಗೆದುಹಾಕಲು ಕ್ರಮ ಕೈಗೊಂಡಿತ್ತು. ಆದರೂ, ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅದರ ಮರುಪ್ರಸಾರ ಮುಂದುವರಿದಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅದಾನಿ ಎಂಟರ್‌ಪ್ರೈಸಸ್ ನ್ಯಾಯಾಲಯದ ಮೊರೆ ಹೋಗಿತ್ತು. ಕಂಪನಿಯು ವಿಡಿಯೊದ ಪ್ರಸಾರ ಮತ್ತು ಮರುಪ್ರಸಾರವನ್ನು ತಡೆಯುವಂತೆ ಹಾಗೂ ಅದನ್ನು ಪ್ರಕಟಿಸಿರುವ ವಿವಿಧ ಆನ್‌ಲೈನ್ ವೇದಿಕೆಗಳಿಂದ ತೆಗೆದುಹಾಕುವಂತೆ ಮನವಿ ಮಾಡಿತ್ತು.
ವಿಡಿಯೊದಲ್ಲಿನ ಆರೋಪಗಳು ಸುಳ್ಳಾಗಿದ್ದು, ಪ್ರಮುಖ ಸಂಗತಿಗಳನ್ನು ಕೈಬಿಟ್ಟು ಅದಾನಿ ಸಮೂಹವನ್ನು ಗುರಿಯಾಗಿಸುವ ನಿರೂಪಣೆ ಸೃಷ್ಟಿಸಲಾಗಿದೆ ಎಂಬುದು ಕಂಪನಿಯ ವಾದವಾಗಿತ್ತು. ತನ್ನ ಪ್ರತಿಷ್ಠೆಗೆ ಗಂಭೀರ ಹಾನಿಯಾಗಿದೆ ಎಂದೂ ಕಂಪನಿ ಹೇಳಿತ್ತು.
ಇದನ್ನೂ ಓದಿ: ಗ್ರೇಟ್ ನಿಕೋಬಾರ್ ಯೋಜನೆ: ಕಲ್ಕತ್ತಾ ಹೈಕೋರ್ಟ್ ವಿಚಾರಣೆಗೆ ತಡೆ ನೀಡಲು ಸುಪ್ರೀಂ ನಕಾರ
ವಿಡಿಯೊದ ಶೀರ್ಷಿಕೆಯು ಕಳ್ಳತನದ ಆರೋಪವನ್ನು ಪರೋಕ್ಷವಾಗಿ ಸೂಚಿಸುವ ನಾಟಕೀಯ ನಿರೂಪಣೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆನ್‌ಲೈನ್ ವಿಷಯವು ಮರುಹಂಚಿಕೆ ಮತ್ತು ಮರುಅಪ್‌ಲೋಡ್‌ಗಳ ಮೂಲಕ ವೇಗವಾಗಿ ಹರಡುವುದರಿಂದ, ಉಂಟಾಗುವ ಪ್ರತಿಷ್ಠೆಯ ಹಾನಿಯನ್ನು ಕೇವಲ ಹಣದ ಪರಿಹಾರದಿಂದ ಸರಿಪಡಿಸುವುದು ಕಷ್ಟವಾಗಬಹುದು ಎಂದು ಅದು ಗಮನಿಸಿದೆ.
ಆದರೆ, ಈ ಆದೇಶವು ಅದಾನಿ ಸಮೂಹದ ವಿರುದ್ಧದ ರಚನಾತ್ಮಕ ಟೀಕೆ ಅಥವಾ ಸರ್ಕಾರದ ನೀತಿಗಳ ಕುರಿತು ಸಾಕ್ಷ್ಯಾಧಾರಿತ, ಸತ್ಯನಿಷ್ಠ ವರದಿಗಾರಿಕೆಯನ್ನು ನಿರ್ಬಂಧಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅದಾನಿ ಎಂಟರ್‌ಪ್ರೈಸಸ್ ಪರ ಹಿರಿಯ ವಕೀಲ ಅನಿರ್ಬನ್ ರೇ ಅವರು ಸಂಜಯ್ ಬಸು, ಅಮಿತ್ ಕುಮಾರ್ ನಾಗ್, ಪಿಯೂಷ್ ಅಗರ್ವಾಲ್, ಶಿವಾಂಗಿ ಥಾರ್ಡ್, ರಂಜಬತಿ ರೇ, ಶ್ರೀವಲ್ಲಿ ಕಜಾರಿಯಾ ಮತ್ತು ದೇಬಜ್ಯೋತಿ ದಾಸ್ ಅವರೊಂದಿಗೆ ವಾದ ಮಂಡಿಸಿದರು.





