ಪತಿ ತಾನು ವಿವಾಹೇತರ ಸಂಬಂಧ ಹೊಂದಿರುವ ಮಹಿಳೆಯೊಂದಿಗೆ ಪತ್ನಿಯೂ ಒಟ್ಟಿಗೆ ವಾಸಿಸಬೇಕು ಎಂದು ಒತ್ತಾಯಿಸುವುದು ಅತ್ಯಂತ ಗಂಭೀರ ಮಾನಸಿಕ ಕ್ರೌರ್ಯಕ್ಕೆ ಸಮಾನ ಎಂದು ಜಾರ್ಖಂಡ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ವೇಳೆ, 2019ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ವೈದ್ಯ ದಂಪತಿಯ ವಿವಾಹವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಸುಜಿತ್ ನಾರಾಯಣ ಪ್ರಸಾದ್ ಮತ್ತು ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರನ್ನೊಳಗೊಂಡ ವಿಭಾಗೀಯ ಪೀಠವು ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿ ಈ ಆದೇಶ ನೀಡಿದೆ.
ಪತಿ ಮತ್ತೊಬ್ಬ ಮಹಿಳೆಯೊಂದಿಗಿನ ಸಂಬಂಧವನ್ನು ಒಪ್ಪಿಕೊಳ್ಳುವಂತೆ ಪತ್ನಿಯನ್ನು ಒತ್ತಾಯಿಸಿದ್ದು, ಆ ಮಹಿಳೆಯನ್ನು ತನ್ನ ‘ಕಿರಿಯ ಸಹೋದರಿ’ ಎಂದು ಬಿಂಬಿಸಲು ಪ್ರಯತ್ನಿಸಿದ್ದು ದಾಂಪತ್ಯದ ವಿಶ್ವಾಸಕ್ಕೆ ಗಂಭೀರ ಧಕ್ಕೆ ಉಂಟುಮಾಡಿದೆ ಎಂದು ನ್ಯಾಯಾಲಯ ಹೇಳಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ ದಂಪತಿ 2018ರ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ಧನ್‌ಬಾದ್‌ನಲ್ಲಿ ನೆಲೆಸಿದ್ದ ಪತಿ ತುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಪತ್ನಿ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್‌ನಲ್ಲಿ (ಬಿಸಿಸಿಎಲ್) ಕೆಲಸ ಮಾಡುತ್ತಿದ್ದರು.
ಪತಿ ವಿಧವೆಯೊಬ್ಬರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಪತ್ನಿ ಆರೋಪಿಸಿದ್ದರು. ಕುಟುಂಬದವರು ಮಧ್ಯಸ್ಥಿಕೆ ವಹಿಸಿದ ಸಂದರ್ಭದಲ್ಲಿ ಸಂಬಂಧ ಕಡಿದುಕೊಳ್ಳುವುದಾಗಿ ಪತಿ ಲಿಖಿತ ಭರವಸೆ ನೀಡಿದ್ದರೂ, ಬಳಿಕವೂ ಆ ಸಂಬಂಧ ಮುಂದುವರಿಸಿದ್ದರು ಎಂಬುದು ಪತ್ನಿಯ ದೂರಾಗಿತ್ತು.
ಈ ಬಗ್ಗೆ ಪತ್ನಿ ಆಕ್ಷೇಪ ವ್ಯಕ್ತಪಡಿಸಿದಾಗ, ಪೊರಕೆ ಮತ್ತು ನೆಲ ಒರೆಸುವ ಕೋಲಿನಂತಹ ಮನೆಯ ವಸ್ತುಗಳಿಂದ ಹಲ್ಲೆ ನಡೆಸಲಾಗಿತ್ತು. ಇದರಿಂದ ಬೆನ್ನುಮೂಳೆಯ ಡಿಸ್ಕ್ ಸಮಸ್ಯೆ ಹಾಗೂ ಟ್ರಾಮಾಟಿಕ್ ಆಸ್ಟಿಯೊಆರ್ಥ್ರೈಟಿಸ್ ಸೇರಿದಂತೆ ಆರೋಗ್ಯ ಸಮಸ್ಯೆಗಳು ಉಂಟಾದವು ಎಂದು ಪತ್ನಿ ಆರೋಪಿಸಿದ್ದರು.
ಪತ್ನಿಯ ಆರೋಪಗಳನ್ನು ಪತಿ ನಿರಾಕರಿಸಿದ್ದರು. ಪತ್ನಿಯ ತಂದೆಗೆ ಸೇರಿದ ಕ್ಲಿನಿಕ್‌ನಿಂದ ನೀಡಲಾಗಿದ್ದ ವೈದ್ಯಕೀಯ ದಾಖಲೆಗಳು ಕಟ್ಟುಕಥೆ ಎಂದು ಅವರು ವಾದಿಸಿದ್ದರು. ಅಲ್ಲದೆ, 2023ರ ಜನವರಿಯಲ್ಲಿ ಪತ್ನಿ ದಾಂಪತ್ಯ ಜೀವನಕ್ಕೆ ಮರಳುವಂತೆ ಕೋರಿ ಏಕಪಕ್ಷೀಯ ಆದೇಶವನ್ನೂ ಪಡೆದಿದ್ದರು.
ಆದರೆ, ಪತ್ನಿಯ ತಂದೆಯ ಕ್ಲಿನಿಕ್‌ನಿಂದ ವೈದ್ಯಕೀಯ ದಾಖಲೆಗಳು ಬಂದಿವೆ ಎಂಬ ಒಂದೇ ಕಾರಣಕ್ಕೆ ಅವುಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಪತಿಯ ನಡವಳಿಕೆಯೇ ಪತ್ನಿ ವೈವಾಹಿಕ ಮನೆಯನ್ನು ತೊರೆಯುವ ಪರಿಸ್ಥಿತಿಯನ್ನು ಸೃಷ್ಟಿಸಿತು ಎಂದೂ ನ್ಯಾಯಾಲಯ ಗಮನಿಸಿದೆ.
ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿದ್ದ ಹಜಾರಿಬಾಗ್ ಕುಟುಂಬ ನ್ಯಾಯಾಲಯದ 2023ರ ನವೆಂಬರ್ ಆದೇಶವನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಕುಟುಂಬ ನ್ಯಾಯಾಲಯವು ಸಾಕ್ಷ್ಯಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ವೈವಾಹಿಕ ಪ್ರಕರಣಗಳಲ್ಲಿ ಅನ್ವಯವಾಗುವ ‘ಸಂಭವನೀಯತೆಗಳ ಆಧಾರದ ಮೇಲಿನ ಸಾಕ್ಷ್ಯಮೌಲ್ಯಮಾಪನ’ ತತ್ವವನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಜಾರ್ಖಂಡ್ | 3 ಪರೀಕ್ಷೆಗಳ ರದ್ದತಿಗೆ ಸರ್ಕಾರ ಒಪ್ಪಿಗೆ; ಉದ್ಯೋಗ ಸಮಿತಿ ಮೂವರು ಸದಸ್ಯರ ರಾಜೀನಾಮೆ
ಸುಪ್ರೀಂ ಕೋರ್ಟ್‌ನ ಸಮರ್ ಘೋಷ್ ವಿರುದ್ಧ ಜಯಾ ಘೋಷ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, 2019ರಿಂದ ಮುಂದುವರಿದ ದೀರ್ಘಕಾಲದ ಪ್ರತ್ಯೇಕ ವಾಸವು ದಾಂಪತ್ಯ ಸಂಬಂಧ ಗಂಭೀರವಾಗಿ ಹದಗೆಟ್ಟಿರುವುದನ್ನು ಸೂಚಿಸುತ್ತದೆ ಎಂದು ಹೇಳಿದೆ.
“ವಿವಾಹವು ಪರಸ್ಪರ ವಿಶ್ವಾಸ, ಸಹಬಾಳ್ವೆ ಮತ್ತು ಹಂಚಿಕೊಂಡ ಅನುಭವಗಳ ಮೇಲೆ ನಿರ್ಮಿತವಾದ ಸಂಬಂಧವಾಗಿದೆ. ಪತಿ-ಪತ್ನಿಯ ನಡುವಿನ ವಿಶ್ವಾಸ ಮತ್ತು ಗೌರವವೇ ದಾಂಪತ್ಯದ ಅಡಿಪಾಯ. ಅದು ಒಮ್ಮೆ ಮುರಿದರೆ ಸಂಬಂಧವನ್ನು ಪುನಃ ಸರಿಪಡಿಸುವುದು ಕಷ್ಟ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಂತಿಮವಾಗಿ, ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 13(1)(i-a) ಅಡಿಯಲ್ಲಿ ಪತ್ನಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಗೆ ಅನುಮತಿ ನೀಡಿದ ಹೈಕೋರ್ಟ್, ಕಾಯ್ದೆಯ ಸೆಕ್ಷನ್ 25ರ ಅಡಿಯಲ್ಲಿ ಶಾಶ್ವತ ಜೀವನಾಂಶ ಕೋರಿ ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಲು ಪತ್ನಿಗೆ ಸ್ವಾತಂತ್ರ್ಯ ನೀಡಿದೆ.






