‘ಚುನಾವಣಾ ಆಯೋಗ ಏನು ಮುಚ್ಚಿಡಲು ಪ್ರಯತ್ನಿಸುತ್ತಿದೆ?’ ಎಂಬ ಗಂಭೀರ ಅನುಮಾನ ಈಗ ಜನಸಾಮಾನ್ಯರಲ್ಲಿ ಮೂಡಿದೆ. ಇದಕ್ಕೆ ಕಾರಣ, ಚುನಾವಣಾ ಆಯುಕ್ತರಾದ ವಿವೇಕ್ ಜೋಶಿ ಮತ್ತು ಸುಖ್‌ಬೀರ್ ಸಿಂಗ್ ಸಂಧು ತೋರಿದ ಅಸಮಾಧಾನ ಮತ್ತು ಭಿನ್ನಾಭಿಪ್ರಾಯಗಳ ಬಗ್ಗೆ ಮಾಹಿತಿ ಕೋರಿ ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿ. ನಿಯಮದ ಪ್ರಕಾರ, ಆರ್‌ಟಿಐ ಅರ್ಜಿಗೆ 30 ದಿನಗಳೊಳಗೆ ಉತ್ತರ ನೀಡಬೇಕಿದ್ದರೂ, ಭಾರತೀಯ ಚುನಾವಣಾ ಆಯೋಗವು (ECI) ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ಅಕ್ಟೋಬರ್ 26 ರಂದೇ 30 ದಿನಗಳ ಗಡುವು ಮುಕ್ತಾಯಗೊಂಡಿದ್ದರೂ ಆಯೋಗ ಮಾತ್ರ ಮೌನದಲ್ಲೇ ಉಳಿದಿದೆ. ಗಡುವು ಮುಗಿದ ನಂತರವೂ ಹಿರಿಯ ಕಾರ್ಯಕರ್ತ ಲೋಕೇಶ್ ಬತ್ರಾ ಅವರು ತಮ್ಮ ಅರ್ಜಿಯನ್ನು ತುರ್ತಾಗಿ ವಿಲೇವಾರಿ ಮಾಡುವಂತೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಭಾರತದ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರು ಇದ್ದಾರೆ. ಸಾಂವಿಧಾನಿಕ ನಿಯಮಗಳ ಪ್ರಕಾರ ಆಯೋಗದ ಪ್ರಮುಖ ನಿರ್ಧಾರಗಳು ಸರ್ವಾನುಮತದಿಂದ ಅಥವಾ ಬಹುಮತದ ಆಧಾರದ ಮೇಲೆ ಕೈಗೊಳ್ಳಬೇಕು. ಆದರೆ, ಇತ್ತೀಚೆಗೆ ಆಯೋಗದಲ್ಲಿ ನಡೆದ ಕೆಲವು ಬೆಳವಣಿಗೆಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ.
ಕೆಲ ತಿಂಗಳು ಹಿಂದೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯೊಂದು ದೊಡ್ಡ ಸಂಚಲನ ಮೂಡಿಸಿತ್ತು. ಚುನಾವಣಾ ಆಯುಕ್ತರಾದ ವಿವೇಕ್ ಜೋಶಿ ಮತ್ತು ಸುಖ್‌ಬೀರ್ ಸಿಂಗ್ ಸಂಧು ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕ್ರಮಗಳನ್ನು ವಿರೋಧಿಸಿ 10 ತಿಂಗಳಲ್ಲಿ ಬರೋಬ್ಬರಿ 14 ಬಾರಿ ಲಿಖಿತವಾಗಿ ಆಕ್ಷೇಪಣೆಗಳನ್ನು ದಾಖಲಿಸಿದ್ದರು ಎಂಬ ಅಂಶ ಆ ವರದಿಯಿಂದ ಹೊರಬಂದಿತ್ತು. ತಮಗೆ ಯಾವುದೇ ಮುನ್ಸೂಚನೆ ಅಥವಾ ಮಾಹಿತಿ ನೀಡದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಇಬ್ಬರು ಆಯುಕ್ತರು ತೀವ್ರ ಅಸಮಾಧಾನ ಹೊರಹಾಕಿದ್ದರು.
ಪ್ರಮುಖವಾಗಿ: ಪಶ್ಚಿಮ ಬಂಗಾಳದಲ್ಲಿ ನ್ಯಾಯಾಂಗ ಅಧಿಕಾರಿಗಳಿಂದ ಸೇರ್ಪಡೆಗೊಂಡಿದ್ದ 16.1 ಲಕ್ಷ ಮತದಾರರ ಮೇಲ್ಮನವಿಗಳನ್ನು ಪ್ರಶ್ನಿಸಿದ್ದು. ‘ಇಸಿನೆಟ್’ (ECINET) ಮೂಲಕ ಮತದಾರರ ಪಟ್ಟಿಯ ಡೇಟಾಬೇಸ್ ಅನ್ನು ಏಕಪಕ್ಷೀಯವಾಗಿ ಕೇಂದ್ರೀಕರಿಸುತ್ತಿರುವುದು. ಆನ್‌ಲೈನ್‌ನಲ್ಲಿ ‘ಫಾರ್ಮ್ 6’ ಗೆ ಕಾನೂನುಬಾಹಿರವಾಗಿ ಬದಲಾವಣೆಗಳನ್ನು ತಂದಿರುವುದು. ಆಯುಕ್ತರ ಅನುಮೋದನೆಯಿಲ್ಲದೆ ಇಸಿಐ (ECI) ಹೆಸರಿನಲ್ಲಿ ಅಧಿಕೃತ ಸುತ್ತೋಲೆ ಹಾಗೂ ಸಂವಹನಗಳನ್ನು ಕಳುಹಿಸಿರುವುದು. – ಈ ಎಲ್ಲ ವಿಚಾರಗಳ ಕುರಿತು ಜೋಶಿ ಮತ್ತು ಸಂಧು ಅವರು ಆಕ್ಷೇಪ ಎತ್ತಿದ್ದರು. ಅಲ್ಲದೆ, ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೆ ಪತ್ರವನ್ನೂ ಬರೆದಿದ್ದರು. ಆದರೆ, ಸಂಪುಟ ಸಚಿವಾಲಯವು ಈ ಪತ್ರಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ, ಅವುಗಳನ್ನು ನೇರವಾಗಿ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ಮರುಕಳಿಸಿತ್ತು ಎಂಬುದು ಮತ್ತೊಂದು ಆರ್‌ಟಿಐ ಮೂಲಕ ಬಹಿರಂಗವಾಗಿತ್ತು.
ಚುನಾವಣಾ ಆಯೋಗದ ಒಳಗೆ ಆಯುಕ್ತರ ನಡುವೆಯೇ ಇಷ್ಟೊಂದು ಗಂಭೀರ ಭಿನ್ನಾಭಿಪ್ರಾಯಗಳಿದ್ದು, ಪ್ರಮುಖ ನಿರ್ಧಾರಗಳನ್ನು ತಮ್ಮ ಗಮನಕ್ಕೆ ತಾರದೆ ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗಿದೆ ಎಂಬ ಸಂಗತಿ ಹೊರಬರುತ್ತಿದ್ದಂತೆ, ದೇಶಾದ್ಯಂತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಆಕ್ರೋಶ ಹಾಗೂ ಪ್ರತಿಭಟನೆಗಳು ವ್ಯಕ್ತವಾಗಲಾರಂಭಿಸಿದವು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ನಿವೃತ್ತ ಕಮೊಡೋರ್ ಲೋಕೇಶ್ ಬತ್ರಾ ಅವರು ಚುನಾವಣಾ ಆಯೋಗಕ್ಕೆ ಮತ್ತೊಂದು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಇಬ್ಬರು ಚುನಾವಣಾ ಆಯುಕ್ತರು ದಾಖಲಿಸಿದ ಭಿನ್ನಾಭಿಪ್ರಾಯ ಹಾಗೂ ಆಕ್ಷೇಪಣೆಗಳ ಪ್ರತಿಗಳನ್ನು ಒದಗಿಸುವಂತೆ ಅವರು ಕೋರಿದ್ದರು. ಜತೆಗೆ, ಆಯುಕ್ತರು ಎತ್ತಿದ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಸಿಇಸಿ ಕೈಗೊಂಡ ಕ್ರಮಗಳೇನು ಮತ್ತು ಅದಕ್ಕೆ ಸಂಬಂಧಿಸಿದ ಕಡತಗಳ ವಿವರಗಳನ್ನೂ ಅವರು ಕೇಳಿದ್ದರು. ಆದರೆ ಇದಕ್ಕೆ ಆಯೋಗದಿಂದ ಇನ್ನೂ ಯಾವುದೇ ಉತ್ತರ ಸಿಕ್ಕಿಲ್ಲ.



