ಬಸವಕಲ್ಯಾಣದಲ್ಲಿ ವಿಶ್ವ ಬಸವಧರ್ಮ ಟ್ರಸ್ಟ್ ಹಾಗೂ ಅನುಭವ ಮಂಟಪದ ಆಶ್ರಯದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ಭಾನುವಾರ ಐದು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಲಿಂಗಾಯತರು ಭೌಗೋಳಿಕವಾಗಿ ಹಿಂದುಗಳಾಗಿದ್ದರೂ, ಬೌದ್ಧ, ಜೈನ ಹಾಗೂ ಸಿಖ್ ಧರ್ಮೀಯರಂತೆ ಧಾರ್ಮಿಕವಾಗಿ ಪ್ರತ್ಯೇಕವಾಗಿದ್ದಾರೆ. ಹೀಗಾಗಿ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ನೀಡಬೇಕು. ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಕೇಂದ್ರ ಸರ್ಕಾರದ ವತಿಯಿಂದ ದೇಶಾದ್ಯಂತ ಆಚರಿಸಬೇಕು. ವಚನ ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳನ್ನು ಆರಂಭಿಸಲು ಕರ್ನಾಟಕ ಸರ್ಕಾರ ಅಗತ್ಯ ಸಹಕಾರ ನೀಡಬೇಕು.
‘ಬಸವ ಮಂಟಪ’ ಪುಸ್ತಕದಲ್ಲಿ ಬಸವಣ್ಣನವರ ಕುರಿತು ಅವಹೇಳನಕಾರಿ ಲೇಖನ ಬರೆದಿರುವ ಲೇಖಕ ರವಿ ಹಂಜಗಿಮಠ ಅವರಿಗೆ ಕಾನೂನು ಬದ್ಧವಾಗಿ ಕಠಿಣ ಶಿಕ್ಷೆ ವಿಧಿಸಬೇಕು. ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಯಾರೇ ಅವಹೇಳನ ಮಾಡಿದರೂ ಅವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬಸವಕಲ್ಯಾಣಕ್ಕೆ ಜಿಲ್ಲಾ ಸ್ಥಾನಮಾನ ನೀಡಬೇಕು ಹಾಗೂ ನಗರಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಬೇಕು ಎಂಬ 5 ನಿರ್ಣಯಗಳು ಅಂಗೀಕರಿಸಲಾಯಿತು.
ಬಸವಣ್ಣನವರು ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ
ವಿಶ್ವಗುರು ಬಸವಣ್ಣನವರು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾದವರಲ್ಲ. ಇಡೀ ಮನುಕುಲಕ್ಕೆ ದಾರಿದೀಪವಾದ ಮಹಾನ್ ವಿಶ್ವಗುರು. ಅವರ ನಡೆ ಮತ್ತು ನುಡಿಗಳ ನಡುವಿನ ಸಾಮ್ಯತೆ ಹಾಗೂ ಶರಣರ ವಚನಗಳ ಮೂಲಕ ಅವರ ನೈಜ ವ್ಯಕ್ತಿತ್ವ ಮತ್ತು ಚಾರಿತ್ರಿಕ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು ಎಂದು ಚಿತ್ರದುರ್ಗದ ಗುರುಘಾಮಠದ ಬಸವಕುಮಾರ ಸ್ವಾಮಿಗಳು ಹೇಳಿದರು.
47ನೇ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವದಲ್ಲಿ ‘ಅನುಭವ ಮಂಟಪ: ಭಾರತೀಯ ಸಂಸ್ಕೃತಿಯ ಅಸ್ಮಿತೆ’ ವಿಷಯದ ಎರಡನೇ ಗೋಷ್ಠಿಯಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿ, ‘ದಯವಿಲ್ಲದ ಧರ್ಮವಾವುದಯ್ಯ’ ಎಂಬ ಬಸವಣ್ಣನವರ ವಚನದ ಆಶಯದಂತೆ ಮಾನವೀಯ ಮೌಲ್ಯಗಳು, ಸಹಿಷ್ಣುತೆ ಮತ್ತು ಅಹಿಂಸೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾಯಕ ಮತ್ತು ದಾಸೋಹ ತತ್ವಗಳು ಇಂದಿನ ಸಮಾಜದಲ್ಲಿನ ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿವೆ. ಈ ತತ್ವಗಳನ್ನು ದೈನಂದಿನ ಬದುಕಿನಲ್ಲಿ ಪಾಲಿಸುವುದು ಅಗತ್ಯ” ಎಂದರು.

ಸೇಗುಣಸಿಯ ವಿರಕ್ತಮಠದ ಮಹಾಂತಪ್ರಭು ಮಹಾಸ್ವಾಮಿಗಳು ಅನುಭಾವ ನೀಡಿ, “12ನೇ ಶತಮಾನದಲ್ಲಿ ಬಸವಣ್ಣನವರು ಬಸವಕಲ್ಯಾಣದಲ್ಲಿ ಸ್ಥಾಪಿಸಿದ ಅನುಭವ ಮಂಟಪವು ವಿಶ್ವದ ಮೊದಲ ಆಧ್ಯಾತ್ಮಿಕ ಹಾಗೂ ಪ್ರಜಾಪ್ರಭುತ್ವದ ಸಂಸತ್ತಾಗಿದೆ. ಜಾತಿ, ಲಿಂಗ ಮತ್ತು ವರ್ಗಗಳ ಭೇದವಿಲ್ಲದೆ ಸಮಾಜದ ಎಲ್ಲ ಸ್ತರದ ಶರಣರು ಒಂದೆಡೆ ಸೇರಿ ತಮ್ಮ ಅನುಭವಗಳನ್ನು ವಚನಗಳ ಮುಖಾಂತರ ಹಂಚಿಕೊಂಡರು” ಎಂದು ಅಭಿಪ್ರಾಯಪಟ್ಟರು.
ಅನುಭವ ಮಂಟಪವು ಕೇವಲ ಆಧ್ಯಾತ್ಮಿಕ ಚರ್ಚೆಗೆ ಸೀಮಿತವಾಗದೆ, ಕಾಯಕ, ದಾಸೋಹ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಮೌಲ್ಯಗಳನ್ನು ಭಾರತೀಯ ಸಂಸ್ಕೃತಿಗೆ ನೀಡಿದೆ. ಸಂಸ್ಕೃತದ ಬದಲಾಗಿ ಜನಸಾಮಾನ್ಯರ ಆಡುಭಾಷೆಯಾದ ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಶರಣರು ಭಾರತೀಯ ತತ್ವಜ್ಞಾನಕ್ಕೆ ಹೊಸ ದಿಕ್ಕು ತೋರಿದರು. ಇಂದಿನ ಆಧುನಿಕ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ಅನುಭವಮಂಟಪ ಪ್ರೇರಣೆಯಾಗಿದೆ. ಈ ತತ್ವಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವುದೇ ಭಾರತೀಯ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಮಾರ್ಗವಾಗಿದೆ ಎಂದರು.

ನಾಲ್ವರು ಗಣ್ಯರಿಗೆ ಪ್ರಶಸ್ತಿ
ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರಿಗೆ ಡಾ.ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಶೋಧಕ ಅಶೋಕ ದೊಮ್ಮಲೂರು ಅವರಿಗೆ ಶರಣ ಬಾಬಾಸಾಹೇಬ ವಾರದ ಸ್ಮರಣಾರ್ಥ ಡಾ.ಫ.ಗು.ಹಳಕಟ್ಟಿ ಪ್ರಶಸ್ತಿ, ಡಾ.ಗುರುಲಿಂಗಪ್ಪ ಹಿರೇಮಠ ಅವರಿಗೆ ಶರಣ ವೈದ್ಯ ಸಂಗಣ್ಣ ಪ್ರಶಸ್ತಿ ಹಾಗೂ ಆಕಾಶ ಮೋಳಕೇರಿ ಅವರಿಗೆ ಶರಣ ಒಕ್ಕಲಿಗ ಮುದ್ದಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿರ್ದೇಶಕ ಹಂಸಲೇಖ ಮಾತನಾಡಿ, “ವಚನ ಸಾಹಿತ್ಯವೆಂಬ ತೆಂಗಿನಕಾಯಿಯನ್ನು ಭಾಲ್ಕಿ ಶ್ರೀಗಳು ನನಗೆ ಕರುಣಿಸಿದ್ದಾರೆ. ಅದನ್ನು ಹೆಮ್ಮರವಾಗಿ ಬೆಳೆಸಿ, ಸಾವಿರಾರು ತೆಂಗಿನ ಗಿಡಗಳ ಮೂಲಕ ವಚನ ಸಾಹಿತ್ಯದ ಪರಿಮಳವನ್ನು ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ವಚನವೃಕ್ಷ ನಿರ್ಮಿಸಲು ಪ್ರಯತ್ನಿಸುತ್ತೇನೆ. ಲಿಂಗಾಯತ ಜಾತಿಯಲ್ಲ, ಅದು ಆಯತ. ಜಗತ್ತಿನ ಮಹಾನ್ ಸೃಷ್ಟಿಯನ್ನು ಇಷ್ಟಲಿಂಗದ ರೂಪದಲ್ಲಿ ಕರುಣಿಸಿದವರು ವಿಶ್ವಗುರು ಬಸವಣ್ಣನವರು” ಎಂದು ಹೇಳಿದರು.
ಅನುಭವ ಮಂಟಪ ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಸಚಿವ ಈಶ್ವರ ಖಂಡ್ರೆ ಮಾತನಾಡಿ, “ಬಸವಣ್ಣನವರ ಸಮಾನತೆ, ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯದ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಸರ್ವಕಾಲಕ್ಕೂ ಮಾನವ ಸಮಾಜಕ್ಕೆ ದಾರಿದೀಪವಾಗಿವೆ. ಶರಣರ ವಿಚಾರಧಾರೆ ಮತ್ತು ಬಸವಣ್ಣನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಬಸವ ತತ್ವ ಒಂದು ಕಾಲಕ್ಕೆ ಸೀಮಿತವಾಗದೆ, ಮಾನವೀಯ ಸಮಾಜ ನಿರ್ಮಾಣಕ್ಕೆ ಶಾಶ್ವತ ಮಾರ್ಗದರ್ಶನ ನೀಡುವ ಮೌಲ್ಯಗಳಾಗಿವೆ” ಎಂದರು.
“ನೂತನ ಅನುಭವ ಮಂಟಪದ ಕಾಮಗಾರಿಗೆ ಹೆಚ್ಚುವರಿಯಾಗಿ ₹150 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಬಸವ ಜಯಂತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿಯೇ ಅನುಭವ ಮಂಟಪ ಲೋಕಾರ್ಪಣೆಗೊಳಿಸಲಾಗುವುದು. ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ಒಟ್ಟು ವೆಚ್ಚ ₹1,000 ಕೋಟಿ ತಲುಪುವ ಸಾಧ್ಯತೆಯಿದೆ. ಅನುಭವ ಮಂಟಪವನ್ನು ವಿಶ್ವದ ಮೊದಲ ಸಂಸತ್ತಿನ ನೆಲೆಯಾಗಿ ಅಭಿವೃದ್ಧಿಪಡಿಸಿ, ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲಾಗುವುದು. ಪರುಷ ಕಟ್ಟೆಯ ಅಭಿವೃದ್ಧಿ ಕಾಮಗಾರಿಯು ಶೀಘ್ರದಲ್ಲೇ ಆರಂಭಿಸಲಾಗುವುದು” ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ ಮಾಜಿ ಸಚಿವ, ಶಾಸಕ ರಹೀಂ ಖಾನ್, ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಬುಳ್ಳಾ ಅಧ್ಯಕ್ಷತೆ ವಹಿಸಿದ್ದರು. ಮೂರು ಸಾವಿರ ಮಠದ ಹುಬ್ಬಳ್ಳಿಯ ಪೂಜ್ಯರು, ಮುಗದಲ್‌ನ ಮಹಾಂತ ಮಹಾಸ್ವಾಮಿಗಳು, ಹುಲಸೂರಿನ ಡಾ.ಶಿವಾನಂದ ಸ್ವಾಮಿಗಳು ಹಾಗೂ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು.
ಸಾಹಿತಿ ಸುನೀತಾ ರಾಜು (ದಾವಣಗೆರೆ) ವಿರಚಿತ ಎರಡು ಗ್ರಂಥಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಶ್ರೀಕಾಂತ ಸ್ವಾಮಿ, ಗುಣವಂತರಾವ ಪಾಟೀಲ, ಅವಿನಾಶ ಭೋಸಿಕರ್, ಮಹೇಶ ಬೆಲ್ಲದ, ಪಿ.ಚಂದ್ರಶೇಖರ ರೆಡ್ಡಿ, ನೀಲಕಂಠ ಮೂಲಗೆ, ರವೀಂದ್ರ ಶಾಬಾದಿ, ರಾಜಶೇಖರ ಯಕ್ಕಂಚಿ, ಮಲ್ಲಿಕಾರ್ಜುನ ವಡ್ಡನಕೇರೆ, ದಿಗಂಬರ ಮಡಿವಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಾ.ಎಸ್.ಬಿ.ದುರ್ಗೆ ಅವರಿಂದ ಬಸವಗುರುಪೂಜೆ ನೆರವೇರಿತು. ಜಗನ್ನಾಥ ಪತಂಗೆ ಸ್ವಾಗತಿಸಿದರು. ಡಾ.ಸಂಜುಕುಮಾರ ಜುಮ್ಮಾ ನಿರೂಪಿಸಿದರು. ಆಕಾಶ ಖಂಡಾಳೆ ವಂದಿಸಿದರು. ರಾಜಕುಮಾರ ಹೂಗಾರ ತಂಡದಿಂದ ವಚನ ಗಾಯನ ಹಾಗೂ ಅನುಭವಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ವಚನ ನೃತ್ಯ ನಡೆಯಿತು.
ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ
ಉತ್ಸವದ ಭಾಗವಾಗಿ ಡಾ. ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನಿಧ್ಯದಲ್ಲಿ ಭಾನುವಾರ ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿತು. ಪೂಜ್ಯ ಗುರುಬಸವ ಪಟ್ಟದ್ದೇವರು ದಿವ್ಯ ನೇತೃತ್ವ ವಹಿಸಿದ್ದರು. ವಿವಿಧ ಮಠಾಧೀಶರು ಉಪಸ್ಥಿತರಿದ್ದರು
ಇದನ್ನೂ ಓದಿ : ವೀರಶೈವ-ಲಿಂಗಾಯತರು ಯಾವತ್ತಿದ್ದರೂ ಒಂದೇ: ಬಿ.ವೈ.ವಿಜಯೇಂದ್ರ
ಬಸವಲಿಂಗ ಪಟ್ಟದ್ದೇವರು ಮಾತನಾಡಿ, “ಪ್ರತಿನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಮನಸ್ಸು ಶುದ್ಧವಾಗುತ್ತದೆ ಹಾಗೂ ದೈವಿಕ ಕೃಪೆ ಲಭಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಬೆಳಿಗ್ಗೆ ಸ್ನಾನ ಮಾಡಿದ ಬಳಿಕ ಮನೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು” ಎಂದು ತಿಳಿಸಿದರು.
ಅನುಭವ ಮಂಟಪ ಉತ್ಸವ ಪ್ರಯುಕ್ತ ಆಯೋಜಿಸಿದ ನವೆಂಬರ್ 22ರಂದು ನಡೆದ ಬಸವಾದಿ ಶರಣರ ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಪ್ರಥಮ ಸ್ಥಾನ ಪಡೆದ ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ, ದ್ವಿತೀಯ ಸ್ಥಾನ ಪಡೆದ ವಿಜಯಪುರದ ಶರಣ ಮಲಕಣ್ಣ ತಲವಾರ ಹಾಗೂ ತೃತೀಯ ಸ್ಥಾನ ಪಡೆದ ಬೆಳಗಾವಿಯ ಕು.ವಿನಾಯಕ ಶಿವಪ್ಪ ಅವರನ್ನು ಸನ್ಮಾನಿಸಲಾಯಿತು.




