ಸೆಪ್ಟೆಂಬರ್ 23ರ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ವರದಿಯ ನಂತರ ಆಯೋಗ ಹಲವು ಸ್ಪಷ್ಟನೆಗಳನ್ನು ನೀಡಿದ್ದರೂ, ಒಂದು ಮುಖ್ಯ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ: ಕಾನೂನುಬದ್ಧವಾಗಿ ಮತದಾರರ ಪಟ್ಟಿಯಲ್ಲಿದ್ದ 16 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಿದವರು ಯಾರು?
ಕೇವಲ ಮಾತಿನಲ್ಲಿ ಮಾತ್ರವಲ್ಲ, ವಾಸ್ತವದಲ್ಲೂ ಭಾರತೀಯ ಚುನಾವಣಾ ಆಯೋಗ ಇಂದು ದಿಕ್ಕುತೋಚದ ಗೊಂದಲದ ಗೂಡಾಗಿದೆಯೇ? ‘ಫಾರ್ಮ್ 6’ ಅದರ ಬುಡಕ್ಕೇ ಕೊಳ್ಳಿ ಇಡಲಿದೆಯೇ? ‘ಫಾರ್ಮ್ 7’ ಅದಕ್ಕೆ ನಿಭಾಯಿಸಲಾಗದಷ್ಟು ತಲೆನೋವಾಗಿ ಪರಿಣಮಿಸಿದೆಯೇ? ಈ ನಮೂನೆಗಳ ಸುತ್ತ ಎದ್ದಿರುವ ವಿವಾದದ ಕಿಡಿಗಳು, ‘ನಾವು ಭಾರತದ ಪ್ರಜೆಗಳು’ ನಮಗೆ ನೀಡಿರುವ ಸಾಂವಿಧಾನಿಕ ಮತದಾನದ ಹಕ್ಕನ್ನು ಕಾಯುವ ಹೊಣೆ ಹೊತ್ತ ಈ ಸಂಸ್ಥೆಯ ಘನತೆಗೆ ಇನ್ನಷ್ಟು ಮಸಿ ಬಳಿದಿವೆ.
ಆತಂಕ ಮೂಡಿಸುವ ನಡೆ-ನುಡಿ
ಚುನಾವಣಾ ಆಯೋಗವು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ತೀವ್ರ ಆಕ್ರೋಶ, ಮಾಧ್ಯಮಗಳ ಕಟು ಟೀಕೆ ಹಾಗೂ ಸಾಮಾಜಿಕ ಜಾಲತಾಣಗಳ ವಿಚಾರಣೆಗೆ ಗುರಿಯಾದಷ್ಟು, ಇತಿಹಾಸದಲ್ಲಿ ಎಂದಿಗೂ ಇಷ್ಟೊಂದು ಜಖಂಗೊಂಡಿರಲಿಲ್ಲ. ಜನರ ನಂಬಿಕೆ ಗಳಿಸಲು ಆಯೋಗಕ್ಕೆ ಹಲವು ವರ್ಷಗಳ ಪಾರದರ್ಶಕತೆ ಮತ್ತು ಕಠಿಣ ಪರಿಶ್ರಮ ಬೇಕಾಗಿತ್ತು. ಈ ಹಿಂದೆ ಇದೇ ಸಂಸ್ಥೆಯನ್ನು ಕೊಂಡಾಡುತ್ತಿದ್ದವರ ನೈಜ ಕಾಳಜಿಗಳನ್ನು ಈಗ ಕಡೆಗಣಿಸಲಾಗುತ್ತಿದೆ. ಕೆಲವೇ ವ್ಯಕ್ತಿಗಳ ಹಠಮಾರಿತನ ಜನ ಆ ಸಂಸ್ಥೆಯ ಮೇಲೆ ಇಟ್ಟಿದ್ದ ನಂಬಿಕೆಯನ್ನು ಕೆಲವೇ ದಿನಗಳಲ್ಲಿ ಧೂಳಿಪಟ ಮಾಡಿಬಿಟ್ಟಿದೆ.
ಒಂದೊಂದೆ ಇಟ್ಟಿಗೆಯನ್ನು ಜೋಡಿಸಿಟ್ಟು ಕಟ್ಟಿದ ಸಂಸ್ಥೆಯೊಂದು, ಹಾಗೆಯೇ ಕ್ರಮೇಣ ಕುಸಿಯುತ್ತಿರುವಂತೆ ಕಾಣುತ್ತಿದೆ. ಅದರ ಇತ್ತೀಚಿನ ಹೆಜ್ಜೆಗಳನ್ನು ಗಮನಿಸಿದರೆ ಅತ್ಯಂತ ಆತಂಕಕಾರಿಯಾದ ಮಾದರಿಯೊಂದನ್ನು ನೋಡಬಹುದು.
ಇದನ್ನು ಓದಿದ್ದೀರಾ?: ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ
• 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ವಿರುದ್ಧ ತೋರಿದ ನಿರ್ಲಕ್ಷ್ಯ ಮತ್ತು ಪಕ್ಷಪಾತ ಧೋರಣೆ;
• ವಿರೋಧ ಪಕ್ಷಗಳ ವಿರುದ್ಧ ತಾರತಮ್ಯದ ನಡವಳಿಕೆ;
• ಮತದಾನದ ಅವಧಿ ಮುಗಿದ ನಂತರದ ವಿಡಿಯೋ ದೃಶ್ಯಾವಳಿಗಳನ್ನು ಬಹಿರಂಗಪಡಿಸಬೇಕೆಂಬ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶದ ಬೆನ್ನಲ್ಲೇ, ಡಿಸೆಂಬರ್ 2024ರಲ್ಲಿ ಆ ವಿಡಿಯೋಗಳನ್ನು ಮುಚ್ಚಿಡಲು ಅನುಕೂಲವಾಗುವಂತೆ ನಿಯಮಗಳನ್ನು ತರಾತುರಿಯಲ್ಲಿ ಬದಲಿಸಿದ್ದು;
• 2024ರ ಸಾರ್ವತ್ರಿಕ ಚುನಾವಣೆಯಲ್ಲಿ ನಾಯಕರು ಮಾಡಿದ ನೀತಿ ಸಂಹಿತೆ ಉಲ್ಲಂಘನೆಗೆ, ಆ ನಾಯಕರಿಗೆ ಬದಲು ಅವರ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದ್ದು;
• ಪ್ರಮುಖ ಪಕ್ಷಗಳ ‘ಸ್ಟಾರ್ ಪ್ರಚಾರಕ’ರನ್ನು ಆರೋಪಗಳಿಂದ ಮುಕ್ತಗೊಳಿಸಿ, ತಾನು ‘ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದೇನೆ’ ಎಂದು ತೋರಿಸಿಕೊಂಡ ಬೂಟಾಟಿಕೆ;
• ನಾಗರಿಕ ಸಾಮಾಜಿಕ ಸಂಸ್ಥೆಗಳನ್ನು ಕೀಳಾಗಿ ಕಂಡ ರೀತಿ;
• ಮತದಾರರ ಪಟ್ಟಿಯ ಲೋಪದೋಷಗಳ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕರು ನೀಡಿದ ದೂರುಗಳನ್ನು ತೀರಾ ಲಘುವಾಗಿ ತಳ್ಳಿಹಾಕಿದ್ದು;
• ವಿರೋಧ ಪಕ್ಷದ ನಾಯಕರಿಗೆ ತಮ್ಮ ದೂರಿಗೆ ಪ್ರಮಾಣಪತ್ರ ನೀಡಬೇಕು ಇಲ್ಲವೇ ದೇಶದ ಕ್ಷಮೆ ಕೇಳಬೇಕು ಎಂದು ಆಯೋಗಕ್ಕೆ ತಕ್ಕದಲ್ಲದ ಗತ್ತು ತೋರಿದ್ದು;
• ಮತ್ತು ಜೂನ್ 2025ರಲ್ಲಿ ಸುಮಾರು ನೂರು ಕೋಟಿ ಮತದಾರರ ಮೇಲೆ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಅನಗತ್ಯ, ಆಕ್ರಮಣಕಾರಿ ಕಸರತ್ತನ್ನು ಏಕಾಏಕಿ ಹೇರಿದ್ದು.

ಇವೆಲ್ಲವೂ ಒಂದು ಸಾಂವಿಧಾನಿಕ ಸಂಸ್ಥೆಯ ನಿರಂತರ ಅವನತಿ ಮತ್ತು ವಿಕಾರ ರೂಪಕ್ಕೆ ಸಾಕ್ಷಿಯಾಗಿವೆ. ಆಯೋಗದ ಸ್ವಂತ ನಿರ್ಧಾರಗಳೇ ಅದರ ಹೆಸರನ್ನು ಕೆಡಿಸಲು ಸಾಲದೆಂಬಂತೆ, ‘ಸ್ನೇಹಪರ’ ಸರ್ಕಾರವು ಡಿಸೆಂಬರ್ 2023ರಲ್ಲಿ ಹೊಸ ಕಾಯ್ದೆಯೊಂದನ್ನು ತಂದು, ಆಯುಕ್ತರ ಆಯ್ಕೆ ಪ್ರಕ್ರಿಯೆಯಲ್ಲೇ ಅವರ ವಿಶ್ವಾಸಾರ್ಹತೆಗೆ ಆರಂಭದಲ್ಲೇ ಪೆಟ್ಟು ಬೀಳುವಂತೆ ಮಾಡಿತು. ಅಷ್ಟೇ ಅಲ್ಲ, ಆಯೋಗದ ಮೇಲೆ ಟೀಕೆಗಳು ಬಂದಾಗಲೆಲ್ಲಾ ಆಡಳಿತ ಪಕ್ಷವೇ ಅದರ ರಕ್ಷಣೆಗೆ ಧಾವಿಸುತ್ತಿತ್ತು; ರಕ್ಷಣೆ ಮಾಡಿಕೊಳ್ಳಲಾಗದ ಅಸಹಾಯಕ ಮಿತ್ರಪಕ್ಷದಂತೆ ಆಯೋಗವನ್ನು ಕಾಪಾಡಲು ಅದು ಜೊತೆಗೆ ನಿಂತಿತ್ತು.
ಇತ್ತೀಚಿನ ಸಾರ್ವಜನಿಕ ಕೆಸರೆರಚಾಟದಲ್ಲಿ ಆಯೋಗದ ಮೇಲೆ ಕೇವಲ ಆಡಳಿತ ಪಕ್ಷದ ಪರ ನಿಂತಿದೆ ಎಂಬ ಆರೋಪವಷ್ಟೇ ಇಲ್ಲ. ಬದಲಿಗೆ, ಸ್ವತಃ ಸಹ-ಚುನಾವಣಾ ಆಯುಕ್ತರೇ ಅದರ ವಿರುದ್ಧ ‘ಕಾನೂನುಬಾಹಿರ ಕೆಲಸಗಳ’ ಗಂಭೀರ ಆಪಾದನೆಗಳನ್ನು ಹೊರಿಸಿದ್ದಾರೆ. ಆರೋಪಗಳು ಮುಖ್ಯವಾಗಿ ಎರಡು ವಿಚಾರಗಳಿಗೆ ಸಂಬಂಧಿಸಿವೆ: ಒಂದು, ‘ಫಾರ್ಮ್ 6’ರಲ್ಲಿ ಮಾಡಲಾದ ಅನಧಿಕೃತ ಬದಲಾವಣೆಗಳು. ಇನ್ನೊಂದು, ಮತದಾರರ ನೋಂದಣಿ ಅಧಿಕಾರಿಗಳಿಗೆ ವೆಬ್‌ಪೋರ್ಟಲ್ ಪ್ರವೇಶವನ್ನು ನಿರಾಕರಿಸಿ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದು.
ಮತ್ತೊಂದೆಡೆ, ಗುರುತಿಲ್ಲದ ವ್ಯಕ್ತಿಗಳು ‘ಫಾರ್ಮ್ 7’ ಅನ್ನು ದುರುಪಯೋಗಪಡಿಸಿಕೊಂಡು, ಈಗಾಗಲೇ ಪಟ್ಟಿಯಲ್ಲಿರುವ ಅರ್ಹ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಕೈಬಿಡಲು ಅರ್ಜಿ ಸಲ್ಲಿಸುತ್ತಿದ್ದಾರೆ ಎಂಬ ಗಂಭೀರ ದೂರುಗಳೂ ಕೇಳಿಬಂದಿವೆ.
ನಿಯಮ ಮೀರಿದ ಘೋಷಣಾಪತ್ರ
ಮತದಾರರ ನೋಂದಣಿ ನಿಯಮಗಳು 1960ರ ಅಡಿಯಲ್ಲಿ ಬರುವ ‘ಫಾರ್ಮ್ 6’ ಎಂಬುದು ಮೊದಲ ಬಾರಿಗೆ ಮತದಾರರಾಗುವವರು ಅಥವಾ ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಸ್ಥಳಾಂತರಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸಲ್ಲಿಸುವ ಅರ್ಜಿಯಾಗಿದೆ. ಇದರಲ್ಲಿ ಅರ್ಜಿದಾರರು ತಮ್ಮ ಗುರುತು, ಹುಟ್ಟಿದ ದಿನಾಂಕ, ವಾಸಸ್ಥಳ, ಪೌರತ್ವ ಮತ್ತು ಹುಟ್ಟಿದ ಊರಿನ ವಿವರಗಳನ್ನು ನೀಡುವುದು ಕಡ್ಡಾಯ. ತಾವು ಬೇರೆಲ್ಲೂ ಹೆಸರು ಸೇರಿಸಿಲ್ಲವೆಂದು ಪ್ರಮಾಣೀಕರಿಸಬೇಕು. ತಪ್ಪು ಮಾಹಿತಿ ನೀಡುವುದು 1950ರ ಜನಪ್ರತಿನಿಧಿ ಕಾಯ್ದೆಯ ಕಲಂ 31ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂಬ ಎಚ್ಚರಿಕೆಯೂ ಇರುತ್ತದೆ. ಮತದಾರರ ಅರ್ಹತೆ ಸಾಬೀತುಪಡಿಸಲು ನಿಯಮಗಳ ಪ್ರಕಾರ ಇದಕ್ಕಿಂತ ಹೆಚ್ಚೇನೂ ಬೇಕಾಗಿಲ್ಲ.
ಇದನ್ನು ಓದಿದ್ದೀರಾ?: ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ
ಆದರೆ, ಜೂನ್ 24, 2025 ರಂದು ಈ ತೀವ್ರ ಪರಿಷ್ಕರಣೆ ಕುರಿತು ಹೊರಡಿಸಿದ ಅಧಿಸೂಚನೆಯಲ್ಲಿ, ಫಾರ್ಮ್ 6 ಅಥವಾ 8ರ ಜೊತೆಗೆ ‘ಅನೆಕ್ಸರ್ ಡಿ’ ಎಂಬ ಹೊಸ ‘ಘೋಷಣಾಪತ್ರ’ವನ್ನು ತುಂಬಬೇಕು ಎಂದು ಆಯೋಗ ಷರತ್ತು ವಿಧಿಸಿತು. ಈ ಘೋಷಣಾಪತ್ರವು ಅರ್ಜಿದಾರರ ಹುಟ್ಟಿದ ದಿನಾಂಕದ ಆಧಾರದ ಮೇಲೆ ಪೌರತ್ವ ಕಾಯ್ದೆಗೆ ಅನುಗುಣವಾಗಿ ವರ್ಗೀಕರಿಸಿ, ದಾಖಲೆಗಳನ್ನು ಒದಗಿಸುವಂತೆ ಕೇಳುತ್ತದೆ. ಇದು ಮೂಲ ನಿಯಮಗಳನ್ನು ಮೀರಿದಂತೆ ಕಾಣುತ್ತದೆ. ಇದೇ ಕಾರಣಕ್ಕೆ ಸಹ-ಆಯುಕ್ತರು ಇದನ್ನು ‘ಕಾನೂನುಬಾಹಿರ ಮತ್ತು ಅನಧಿಕೃತ’ ಎಂದು ಕರೆದರು. ಹಲವರು ಇದನ್ನು ‘ಹಿಂಬಾಗಿಲಿನಿಂದ ರಾಷ್ಟ್ರೀಯ ಪೌರತ್ವ ನೋಂದಣಿ (NRC) ಜಾರಿಗೊಳಿಸುವ ಹುನ್ನಾರ’ ಎಂದೇ ಶಂಕಿಸಿದರು.
ಕಾನೂನಿನ ಸೆಕ್ಷನ್ 28ರ ಪ್ರಕಾರ, ನಿಯಮಗಳನ್ನು ರಚಿಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಆಯೋಗವೇ ಒಕ್ಕೊರಲಿನಿಂದ ತೀರ್ಮಾನಿಸಿದರೂ ಏಕಪಕ್ಷೀಯವಾಗಿ ಫಾರ್ಮ್ 6 ಅನ್ನು ಬದಲಾಯಿಸಲು ಅದಕ್ಕೆ ಅಧಿಕಾರವಿಲ್ಲ. ಸೆಪ್ಟೆಂಬರ್ 26ರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಆಯೋಗವು, ‘SIR ಗಾಗಿ ಫಾರ್ಮ್ 6ರ ಜೊತೆಗೆ ಈ ಘೋಷಣೆಯನ್ನು ಸೇರಿಸಲಾಗಿದೆ ಮತ್ತು ಇದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ’ ಎಂದು ಹೇಳಿಕೊಂಡಿತು. ಆದರೆ, ಭಾರತದ ಮುಖ್ಯ ನ್ಯಾಯಮೂರ್ತಿಗಳು ‘ನಾವು ಯಾವುದೇ ಬದಲಾದ ಫಾರ್ಮ್ 6 ಅನ್ನು ಅನುಮೋದಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.
ಅಕ್ಟೋಬರ್ 1, 2026ರಂದು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದ ಆಯೋಗ, ‘ಯಾರ ಹೆಸರಾದರೂ ಬಿಟ್ಟುಹೋಗಿದ್ದರೆ ಅವರು ಯಾವುದೇ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು’ ಎಂದಿತು. ಹಳೆಯ ಪಟ್ಟಿಯಲ್ಲಿದ್ದು ಈಗಿನ ಪಟ್ಟಿಯಲ್ಲಿ ಬಿಟ್ಟುಹೋದವರ ಮನೆಮನೆಗೆ ಹೋಗಿ ಪರಿಶೀಲಿಸಿ, ಫಾರ್ಮ್ 6 ಮೂಲಕ ಹೆಸರು ಸೇರಿಸಲು ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಚಿಸಿತು.
ಗಮನಿಸಬೇಕಾದ ಅಂಶವೆಂದರೆ, ಈ ಪರಿಷ್ಕರಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಘೋಷಣಾಪತ್ರವಿರುವ ಫಾರ್ಮ್ 6 ಮುಂದುವರಿಯುತ್ತದೆ, ಪರಿಷ್ಕರಣೆ ಮುಗಿದ ರಾಜ್ಯಗಳಲ್ಲಿ ಹಳೆಯ ಫಾರ್ಮ್ 6 ಬಳಕೆಯಾಗುತ್ತದೆ. ಹೀಗೆ ಎರಡು ಬಗೆಯ ಫಾರ್ಮ್ 6 ಅನ್ನು ಬಳಸುವ ಆಯೋಗದ ನಿಜವಾದ ಉದ್ದೇಶವೇನು? ಸಂವಿಧಾನದ 326ನೇ ವಿಧಿಯಡಿ ಮತದಾನದ ಹಕ್ಕಿಗೂ, ಈ ಹೊಸ ಘೋಷಣಾಪತ್ರದಲ್ಲಿ ಕೇಳುತ್ತಿರುವ ವಿವರಗಳಿಗೂ ಯಾವುದೇ ಸಂಬಂಧವಿಲ್ಲ. ಹಾಗಾದರೆ ಇದು ಅರೆ-ಎನ್‌ಆರ್‌ಸಿ (quasi-NRC) ಸೃಷ್ಟಿಸುವ ಪ್ರಯತ್ನವಲ್ಲದೆ ಮತ್ತಿನ್ನೇನು?
ವಿಸ್ತರಿಸುತ್ತಿರುವ ಆತಂಕಗಳು
ಉತ್ತರಾಖಂಡ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ‘ಫಾರ್ಮ್ 7’ ದುರ್ಬಳಕೆ ಮಾಡಿಕೊಂಡು ಹಾಲಿ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಅಳಿಸಿಹಾಕಲು ಅರ್ಜಿಗಳು ಸಲ್ಲಿಕೆಯಾಗುತ್ತಿರುವ ರೀತಿ ಅಷ್ಟೇ ಗಂಭೀರವಾಗಿದೆ. ಸುಳ್ಳು ಫಾರ್ಮ್ 7 ಸಲ್ಲಿಸಿದವರ ವಿರುದ್ಧ ಆಯೋಗ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಅಥವಾ ಕ್ರಿಮಿನಲ್ ಮೊಕದ್ದಮೆ ಹೂಡದಿರುವುದು, ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯವನ್ನು ಕಾಪಾಡುವಲ್ಲಿ ಅದು ಮೈಮರೆತಿದೆ ಎಂಬ ಭಾವನೆಯನ್ನು ಮೂಡಿಸಿದೆ.
ದತ್ತಾಂಶವನ್ನು ಆಯೋಗವು ತನ್ನ ಕೇಂದ್ರ ಕಚೇರಿಯ ಹಿಡಿತದಲ್ಲಿಟ್ಟುಕೊಂಡಿರುವುದು ಮತ್ತಷ್ಟು ದುರ್ಬಳಕೆಯ ಆತಂಕಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳ ಮತ್ತು ಗೋವಾದ ಅಧಿಕಾರಿಗಳ ದೂರಿನ ಪ್ರಕಾರ, ಅಧಿಕೃತ ಅಧಿಕಾರಿಗಳಿಗೆ ತೀರ್ಮಾನಗಳನ್ನು ಜಾರಿಗೊಳಿಸಲು ಈ ಕೇಂದ್ರೀಕೃತ ವ್ಯವಸ್ಥೆ ಅಡ್ಡಿಪಡಿಸುತ್ತಿದೆ; ಆದರೆ ಅನಧಿಕೃತ ವ್ಯಕ್ತಿಗಳು ಅವರ ಪರವಾಗಿ ಕೆಲಸ ಮಾಡಲು ಅವಕಾಶ ನೀಡುತ್ತಿದೆ. ಪಶ್ಚಿಮ ಬಂಗಾಳದ ಮೇಲ್ಮನವಿ ನ್ಯಾಯಮಂಡಳಿಗಳ 11 ನ್ಯಾಯಾಧೀಶರು ಈ ತಾಂತ್ರಿಕ ವ್ಯವಸ್ಥೆಯು ತಮ್ಮ ಕೆಲಸಕ್ಕೆ ತೊಡಕಾಗಿದೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿಯೂ ಈ ವ್ಯವಸ್ಥೆಯ ಹಲವು ಲೋಪಗಳನ್ನು ಎತ್ತಿತೋರಿಸಿದ್ದಾರೆ.

ಸೆಪ್ಟೆಂಬರ್ 23ರ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ವರದಿಯ ನಂತರ ಆಯೋಗ ಹಲವು ಸ್ಪಷ್ಟನೆಗಳನ್ನು ನೀಡಿದ್ದರೂ, ಒಂದು ಮುಖ್ಯ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ: ಕಾನೂನುಬದ್ಧವಾಗಿ ಮತದಾರರ ಪಟ್ಟಿಯಲ್ಲಿದ್ದ 16 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಿದವರು ಯಾರು?
ಚುನಾವಣಾ ಆಯೋಗ ನೀಡುತ್ತಿರುವ ಸಮರ್ಥನೆಗಳು ಜನರ ಹಿಂದಿನ ಅನುಮಾನಗಳನ್ನು ಖಚಿತಪಡಿಸುತ್ತಿವೆ. ಅದೇ ವೇಳೆ, ಅದರ ವಿಚಿತ್ರ ನಡವಳಿಕೆಗಳು ಹೊಸ ಮತ್ತು ಅತ್ಯಂತ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.
ಮೂಲ: ಅಶೋಕ್ ಲಾವಾಸಾ, ಮಾಜಿ ಚುನಾವಣಾ ಆಯುಕ್ತರು ಹಾಗೂ ಕೇಂದ್ರ ಸರ್ಕಾರದ ಮಾಜಿ ಹಣಕಾಸು ಕಾರ್ಯದರ್ಶಿ, ಕನ್ನಡಕ್ಕೆ: ಟಿ.ಎಸ್. ವೇಣುಗೋಪಾಲ್





