ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳುವುದಕ್ಕಾದರೂ ಇಂತಹ ಹೋರಾಟಗಳನ್ನು ಬೆಂಬಲಿಸಬೇಕಾಗುತ್ತದೆ.
ಅಕ್ಟೋಬರ್ 10ರಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ, ನಡೆಸಿದ ಪ್ರತಿಭಟನಾಕಾರನ್ನು ಬಂಧಿಸಲಾಗುತ್ತಿದೆ. ಬಲಪ್ರಯೋಗವೂ ನಡೆಯುತ್ತಿದೆ. ಉನ್ನತ ನ್ಯಾಯಾಲಯವು ಇವೆಲ್ಲಾ ತಪ್ಪು ಅಂದರೂ ಸರ್ಕಾರ ಬಂಧಿಸುವುದನ್ನು ಮುಂದುವರಿಸಿದೆ. ಪತ್ರಕರ್ತರನ್ನೂ ಬಿಟ್ಟಿಲ್ಲ. ಪ್ರತಿಭಟಿಸಿದ ವಿರೋದಪಕ್ಷದ ನಾಯಕರನ್ನೂ ಬಂಧಿಸಲಾಗಿತ್ತು.
ಸಹಜವಾಗಿಯೇ ಹಲವರಿಗೆ ಮಹಾತ್ಮ ಗಾಂಧಿಯವರ ನೆನಪಾಗಿದೆ. ಅವರ ಹಲವು ಕ್ರಮಗಳು, ಹೇಳಿಕೆಗಳು ಉಲ್ಲೇಖವಾಗುತ್ತಿವೆ. 1922ರ ಮಹಾತ್ಮ ಗಾಂಧಿಯವರ ದೇಶದ್ರೋಹ ವಿಚಾರಣೆಯ ಹೇಳಿಕೆಯನ್ನಂತೂ ಹಲವರು ಸ್ಮರಿಸಿಕೊಳ್ಳುತ್ತಿದ್ದಾರೆ. ಅಂದು ಅಧಿಕಾರದಲ್ಲಿರುವವರನ್ನು ಹೇಗೆ ವಿರೋಧಿಸಬೇಕು ಎಂಬುದನ್ನು ಕುರಿತು ಗಾಂಧೀಜಿ ಬ್ರಿಟಿಷ್ ನ್ಯಾಯಾಲಯದಲ್ಲಿ ಮಾತನಾಡಿದ್ದರು.
ಆಗಲೂ ರಾಜಧಾನಿ ದೆಹಲಿಯಲ್ಲಿ ಭಾರಿ ಪ್ರಮಾಣದ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಆಗ ಯುವ ಪ್ರತಿಭಟನಾಕಾರರು ಅಹಿಂಸಾತ್ಮಕ ಪ್ರತಿರೋಧಕ್ಕೆ (ಸತ್ಯಾಗ್ರಹಕ್ಕೆ) ಕರೆ ನೀಡಿದ್ದರು.
ಅಕ್ಟೋಬರ್ 10ರಂತೆಯೇ ಶನಿವಾರವಾಗಿದ್ದ 1922ರ ಮಾರ್ಚ್ 18ರಂದು, ಅಹಮದಾಬಾದ್ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಎನ್. ಬ್ರೂಮ್‌ಫೀಲ್ಡ್ ನೀಡಿದ ಅವಕಾಶವನ್ನು ಸ್ವೀಕರಿಸಿ ಮಹಾತ್ಮ ಗಾಂಧಿಯವರು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ನೀಡಿದ್ದರು. ಸ್ವತಃ ವಕೀಲರಾಗಿದ್ದ ಗಾಂಧೀಜಿ ಮಾತನಾಡುತ್ತಾ:
“ಪ್ರೀತಿ ಅಥವಾ ಗೌರವವನ್ನು ಕಾನೂನಿನ ಮೂಲಕ ಬಲವಂತವಾಗಿ ಮೂಡಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಅಥವಾ ವ್ಯವಸ್ಥೆಯ ಮೇಲೆ ಯಾರಿಗಾದರೂ ಗೌರವ ಅಥವಾ ಒಲವು ಇಲ್ಲದಿದ್ದರೆ, ಅವರಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿರಬೇಕು. ಪ್ರತಿಭಟನಾಕಾರರು ಹಿಂಸಾತ್ಮಕವಾದ ಮಾರ್ಗವನ್ನು ಅನುಸರಿಸಬಾರದು. ಅಥವಾ ಹಿಂಸೆಯನ್ನು ಪ್ರಚೋದಿಸಬಾರದು. ಅಲ್ಲಿಯವರೆಗೆ ಇದಕ್ಕೆ ಅವಕಾಶ ಮಾಡಿಕೊಡಬೇಕು.”
ಗಾಂಧಿಯವರಿಗೆ ಹಿಂಸಾತ್ಮಕ ಅಸಹಕಾರ ಚಳವಳಿಯ ಬಗ್ಗೆ ಒಪ್ಪಿಗೆ ಇರಲಿಲ್ಲ. “ಹಿಂಸೆಯು ಕೆಟ್ಟದ್ದನ್ನು ಮತ್ತಷ್ಟು ಹೆಚ್ಚಿಸುತ್ತದೆ” ಎನ್ನುವುದು ಅವರ ನಿಲುವಾಗಿತ್ತು. ಅಷ್ಟೇ ಅಲ್ಲ ಅವರ ದೃಷ್ಟಿಯಲ್ಲಿ, ಅಹಿಂಸೆ ಎಂದರೆ “ಅಸಹಕಾರ ಚಳವಳಿಯ ಕಾರಣಕ್ಕಾಗಿ ಕಾನೂನು ನೀಡುವ ಶಿಕ್ಷೆಯನ್ನು ಸ್ವಇಚ್ಛೆಯಿಂದ ಸ್ವೀಕರಿಸುವುದು”. ಗಾಂಧೀಜಿಯವರು ತಮ್ಮ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಮೂರು ಲೇಖನಗಳನ್ನು ಪ್ರಕಟಿಸಿದ್ದಕ್ಕಾಗಿ ವಿಚಾರಣೆ ಎದುರಿಸುತ್ತಿದ್ದರು. ಅವರು ಮತ್ತು ಅವರ ಪತ್ರಿಕೆಯ ಸಂಪಾದಕ ಶಂಕರಲಾಲ್ ಗೇಲಾಭಾಯಿ ಬ್ಯಾಂಕರ್ ತಮ್ಮ ತಪ್ಪನ್ನು ಒಪ್ಪಿಕೊಂಡರು ಮತ್ತು ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಸ್ವಾತಂತ್ರ್ಯದ ನಂತರದ ಬೆಳವಣಿಗೆ
ಸ್ವಾತಂತ್ರ್ಯದ ನಂತರ, ಭಾರತದ ಸುಪ್ರೀಂ ಕೋರ್ಟ್ ಗಾಂಧೀಜಿಯವರು ವ್ಯಕ್ತಪಡಿಸಿದ ಈ ವಿರೋಧದ ಹಕ್ಕನ್ನು ಸಂವಿಧಾನದ 19ನೇ ವಿಧಿಯಲ್ಲಿ ಅಳವಡಿಸಿತು. ಇದರ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಮೂಲಭೂತ ಹಕ್ಕುಗಳನ್ನಾಗಿ ಮಾಡಿತು.
1972ರ ‘ಹಿಮತ್ ಲಾಲ್ ಕೆ. ಶಾ ವಿರುದ್ಧ ಪೊಲೀಸ್ ಕಮಿಷನರ್, ಅಹಮದಾಬಾದ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಹೀಗೆ ತೀರ್ಪು ನೀಡಿತ್ತು:
“ಪ್ರಜೆಗಳ ಸಭೆ ಸೇರುವ ಹಕ್ಕಿಗೆ ಸಹಾಯವಾಗುವಂತೆ ಮಾತ್ರ ಸರ್ಕಾರ ನಿಯಮಗಳನ್ನು ಮಾಡಬಹುದು. ಕೇವಲ ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಅನಿವಾರ್ಯವಾದ ನಿರ್ಬಂಧಗಳನ್ನು ಮಾತ್ರ ಹೇರಬಹುದು… ಸಂವಿಧಾನ ಜಾರಿಗೆ ಬರುವ ಮೊದಲು ಸಭೆ ಸೇರುವ ಹಕ್ಕನ್ನು ಕಾನೂನಿನ ಮೂಲಕ ಕಿತ್ತುಕೊಳ್ಳಬಹುದಿತ್ತು. ಆದರೆ ಸಂವಿಧಾನ ಬಂದ ನಂತರ, ಸಮಂಜಸವಾದ ನಿರ್ಬಂಧಗಳನ್ನು ಹೊರತುಪಡಿಸಿ ಈ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ.”
ನಂತರ 2016ರಲ್ಲಿ ಸುಪ್ರೀಂ ಕೋರ್ಟ್ ಶಾಂತಿಯುತ ಸಾರ್ವಜನಿಕ ಪ್ರತಿಭಟನೆಯ ಹಕ್ಕನ್ನು ಇನ್ನಷ್ಟು ಬಲಪಡಿಸಿತು. ಸಮಸ್ಯೆಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಸಾರಿತು.
ಇದನ್ನು ಓದಿದ್ದೀರಾ?: ಸುಪ್ರೀಂ ಆದೇಶ ಉಲ್ಲಂಘನೆ: ಕಾನೂನುಬಾಹಿರ ವಶಕ್ಕೆ ತಡೆ ಇದ್ದರೂ 100ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ!
‘ಅನಿತಾ ಠಾಕೂರ್ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಸರ್ಕಾರ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೀಗೆ ಹೇಳಿತ್ತು: “ಸಂಘಟಿತ ಮತ್ತು ಅಹಿಂಸಾತ್ಮಕ ಪ್ರತಿಭಟನಾ ಮೆರವಣಿಗೆಗಳು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಅಸ್ತ್ರಗಳಾಗಿದ್ದವು. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಇಂದು ಸಂವಿಧಾನದಲ್ಲಿ ಮೂಲಭೂತ ಹಕ್ಕಾಗಿ ಗುರುತಿಸಲಾಗಿದೆ.”
ಆದರೆ ಈಗ ಸರ್ಕಾರ ಮತ್ತೆ ನಮ್ಮನ್ನು ಬ್ರಿಟೀಷರ ಕಾಲಕ್ಕೆ ಕರೆದುಕೊಂಡು ಹೋಗುತ್ತಿದೆ. ಸಭೆ ಸೇರುವ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಪ್ರತಿಭಟಿಸುವ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಪ್ರಜಾಪ್ರಭುತ್ವಕ್ಕೆ ಯಾವಾಗಲೂ ಬಹುಮತದ ಸರ್ವಾಧಿಕಾರದ ಬಗ್ಗೆ ಆತಂಕವಿರುತ್ತದೆ. ಆ ಕಾರಣಕ್ಕಾಗಿಯೇ ಬಲವಾದ, ಸ್ವಾಯತ್ತವಾದ ನ್ಯಾಯಾಂಗ, ಅಧಿಕಾರಿಗಳು, ಮಾಧ್ಯಮ, ಇತ್ಯಾದಿ ವ್ಯವಸ್ಥೆಗಳು ಬೇಕಾಗುತ್ತವೆ. ರಾಜಕಾರಣಿಗಳನ್ನು ನಿಯಂತ್ರಿಸಲು ಮತ್ತು ಸರಿದೂಗಿಸಲು ಇವು ಅನಿವಾರ್ಯ. ಆದರೆ ಇಂದು ಈ ಎಲ್ಲಾ ಪ್ರಭಾವಶಾಲಿ ವ್ಯವಸ್ಥೆಗಳು ದುರ್ಬಲವಾಗಿವೆ. ಜನಪ್ರಿಯ ನಾಯಕರು ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದ್ದಾರೆ. ಅಧಿಕಾರಿಗಳು ಅಥವಾ ಬುದ್ಧಿಜೀವಿಗಳು ಸ್ವತಂತ್ರವಾಗಿ ಉಳಿಯುವುದು ಕಷ್ಟವಾಗಿದೆ.
ಇವೆಲ್ಲವನ್ನೂ ನೋಡಿದಾಗ, ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳುವುದಕ್ಕಾದರೂ ಇಂತಹ ಹೋರಾಟಗಳನ್ನು ಬೆಂಬಲಿಸಬೇಕಾಗುತ್ತದೆ.

ಟಿ.ಎಸ್. ವೇಣುಗೋಪಾಲ್
ಕನ್ನಡದ ಪ್ರಮುಖ ಅರ್ಥಶಾಸ್ತ್ರಜ್ಞರು, ಅಂಕಣಕಾರರು ಹಾಗೂ ಲೇಖಕರು. ಅವರು ದೇಶದ ಆರ್ಥಿಕತೆ, ಜಿಡಿಪಿ (GDP) ಬೆಳವಣಿಗೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳು ಮತ್ತು ಸಾಮಾಜಿಕ-ಆರ್ಥಿಕ ಸ್ಥಿತ್ಯಂತರಗಳ ಕುರಿತು ಪ್ರಮುಖ ಮಾಧ್ಯಮಗಳಲ್ಲಿ ನಿಯಮಿತವಾಗಿ ವಿಶ್ಲೇಷಣಾತ್ಮಕ ಲೇಖನಗಳನ್ನು ಬರೆಯುತ್ತಾರೆ.



