ಅಮೃತ ನೆನಪುಗಳು- ಅನಂತದಲ್ಲಿ ಲೀನವಾದ ಆತ್ಮಸಂಗಾತ

Date:

ಹಿರಿಯ ಲೇಖಕಿ ರೇಣುಕಾ ನಿಡಗುಂದಿ ಅವರು ಬರೆದಿರುವ ಅಮೃತ ನೆನಪುಗಳು – ಅಮೃತಾ ಪ್ರೀತಂ ಅವರ ಜೀವನಗಾಥೆಯ ಕೆಲವು ನೆನಪುಗಳ ಸಂಗ್ರಹಯ ಕೃತಿ ಎರಡನೇ ಮುದ್ರಣ ಇದೇ ಶನಿವಾರ (ಮೇ ೯) ಸಂಜೆ ೫ಕ್ಕೆ ಬೆಂಗಳೂರಿನ ವಿಜಯನಗರದ ಬೀಟಲ್‌ ಬುಕ್‌ ಶಾಪ್‌ನಲ್ಲಿ ಬಿಡುಗಡೆಯಾಗಲಿದೆ.

- Advertisement -

ಜೀನೆ ಲಗೋ ತೋ ಕರನಾ ಫೂಲ್ ಜಿಂದಗಿ ಕೇ ಹವಾಲೇ
ಜಾನೇ ಲಗೋ ತೋ ಕರನಾ ಬೀಜ್ ಧರತಿ ಕೇ ಹವಾಲೇ
ಬದುಕಲು ತೊಡಗಿದಾಗ,  ಬದುಕಿನ ಕೈಗೆ ಹೂಗಳನ್ನು ಒಪ್ಪಿಸು
ಹೊರಡುವಾಗ  ಭೂಮಿಯ ಕೈಗೆ ಬೀಜಗಳನ್ನು ಒಪ್ಪಿಸು 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಡಿಸೆಂಬರ್ 22, 2023 ರಂದು ಇಮ್ರೋಜ್ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದರು. ಜೀವನದ 97 ವಸಂತಗಳನ್ನು ಪೂರೈಸಿ ಇನ್ನೊಂದು ಲೋಕದಲ್ಲಿರುವ ತಮ್ಮ ಸಂಗಾತಿಯನ್ನು ಸೇರಿಕೊಂಡರು. ಅವರ ಅಂತ್ಯಕ್ರಿಯೆ ಮುಂಬಯಿಯಲ್ಲಿ ನಡೆಯಿತು. ಈ ಶತಮಾನದ ಇಬ್ಬರು ಅದ್ಭುತ ಪ್ರೇಮಿಗಳು ಅಪಾರವಾದ ಪ್ರೀತಿಯ ಬೀಜಗಳನ್ನು ಈ ಭೂಮಿಗೆ ಒಪ್ಪಿಸಿ ಅಪರಿಮಿತವಾದ ಪ್ರೀತಿಯನ್ನು ಬಿತ್ತಿ ಅಮರರಾಗಿಹೋದರು. 

ಅಮೃತಾ ಪ್ರೀತಂ ಕುಟುಂಬಕ್ಕೆ ಹತ್ತಿರವಾಗಿದ್ದವರು ಡಾ.ಅಜೀತ್ ಕೌರ್-ನನಗೂ ಪರಿಚಿತರು. ( 2019ರಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾದ ಪಂಜಾಬಿ ಕತೆಗಾರ್ತಿ, ಕಾದಂಬರಿಕಾರ್ತಿ, ಲೇಖಕಿ. ಇವರ ಆತ್ಮಕತೆ –“ಖಾನಾಬದೋಶ್- “ಅಲೆಮಾರಿಯೊಬ್ಬಳ ಆತ್ಮವೃತ್ತಾಂತ” ಕನ್ನಡಕ್ಕೆ ಅನುವಾದಗೊಂಡಿದೆ. ಅಹರ್ನಿಶಿ ಪ್ರ.).     

ಅಮೃತಾರ ತಂದೆ ಕರ್ತಾರ್ ಸಿಂಗ್ ಹಿತಕಾರಿ ಅವರಿಗೂ ಅಜೀತ್ ಕೌರ್ ತಂದೆಗೂ ಗಾಢ ಸ್ನೇಹ, ಸಲುಗೆ, ಇತ್ತು. ಕರ್ತಾರ ಸಿಂಗ್ ಒಮ್ಮೆ ಮನೆಗೆ ಬಂದಾಗ ಅಜೀತ್ ’ಐರಿಷ್’ ಶಾಲೆಗೆ ಹೋಗುವುದನ್ನು ತಿಳಿದು, “ಮೊದಲು ಪಂಜಾಬಿಯನ್ನು ನೆಟ್ಟಗೆ ಕಲಿಯಲಿ” ಎಂದು ಅಜೀತಳನ್ನು ತಮ್ಮ ಖಾಲ್ಸಾ ಶಾಲೆಗೆ ಸೇರಿಸುತ್ತಾರೆ. ಅಮೃತಾರನ್ನು ಆಕೆ ಮೊದಲು ನೋಡಿದ್ದು ತಮ್ಮ ತಂದೆಯವರ ಕ್ಲಿನಿಕ್ಕಿನಲ್ಲಿ. ಲಾಹೋರಿನಲ್ಲಿ. ಅಮೃತಾ ಪ್ರೀತಂ ಸಿಂಗರನ್ನು ಮದುವೆ ಆದ ಬಳಿಕ ಅವರಿಗೆ ಟಿಬಿ ಆಗಿತ್ತು.  ಹೋಮಿಯೋಪತಿ ವೈದ್ಯರಾಗಿದ್ದ ಅಜೀತ್ ಕೌರ್ ತಂದೆಯವರ ಬಳಿ ತೋರಿಸಿಕೊಳ್ಳಲು ಬರುತ್ತಿದ್ದರಂತೆ. ಎರಡು ವರ್ಷದ ಔಷಧೋಪಚಾರದ ಬಳಿಕ ಅಮೃತಾ ಆರೋಗ್ಯ ಸುಧಾರಿಸುತ್ತದೆ. ಅಜೀತ್ ಕೌರ್ ಹೇಳುತ್ತಾರೆ- ಅಮೃತಾರನ್ನು ನಿಜವಾಗಿ ಪ್ರೀತಿಸಿದ ಪುರುಷರು ಇಬ್ಬರೇ. ಒಂದು ಆಕೆಯ ಪತಿ ಪ್ರೀತಂ ಸಿಂಗ್, ಇನ್ನೊಬ್ಬರು ಇಂದ್ರಜಿತ್. ಆಗಿನ್ನೂ ಇಂದ್ರಜೀತ್ ಇಮ್ರೋಜ್ ಆಗಿರಲಿಲ್ಲ. ಅಮೃತಾಗೆ ಹೌಸ್‍ಖಾಸ್‍ನಲ್ಲಿ 500 ಗಜ (ಸುಮಾರು 415  Sq.Metre)  ಜಮೀನು ಹಂಚಿಕೆಯಾದಾಗ ಆಕೆ ಪ್ರೀತಂ ಸಿಂಗ್ ಅವರಿಗೆ ಪಟೇಲ್ ನಗರದ ಮನೆ ಮಾರಿ ಮನೆ ಕಟ್ಟಲು ಹಣ ಕೊಡು ಹಾಗೂ ಮಕ್ಕಳನ್ನು ಕರೆದುಕೊಂಡು ತಂದೆಯ (ಅಮೃತಾರ ಮಾವ) ಬಳಿ ವಾಸಿಸಲು ಆಗ್ರಹಿಸುತ್ತಾರೆ. ಪ್ರೀತಂ ಸಿಂಗ್ ಹಾಗೇ ಮಾಡುತ್ತಾರೆ. ಹೌಜಖಾಸ್ ಮನೆ ತಯಾರಾದಾಗ ಮಕ್ಕಳನ್ನು ಕರೆದುಕೊಂಡು ಬಂದ ಪ್ರೀತಂ ಸಿಂಗ್ ಮೊದಲು ಅಲ್ಲಿಯೇ ಇರುತ್ತಾರೆ, ಆದರೆ ಅಮೃತಾ ಹೊಂದಿಕೆಯಾಗದ ಸಂಬಂಧವನ್ನು ತಿರಸ್ಕರಿಸಿದಾಗ ಆತ ಪುನಃ ತಂದೆಯ ಮನೆಗೆ ತೆರಳುತ್ತಾರಂತೆ. ಕೊನೆಗೆ ಅಲ್ಲೂ ಆಸ್ತಿ ಹಂಚಿಕೆಯಾಗಿ ಎಲ್ಲ ಬೇರೆಯಾಗುತ್ತಾರೆ. ಒಮ್ಮೆ ಅಜೀತ್ ಕೌರ್ ಸದರ್ ಬಜಾರಿನಲ್ಲಿರುವ ಅವರ ಅಂಗಡಿಯನ್ನು ಹುಡುಕಿಕೊಂಡು ಹೋದಾಗ ಪ್ರೀತಂ ಒಂದು ಪುಟ್ಟ ಅಂಗಡಿಯಲ್ಲಿ ಕುಳಿತಿರುತ್ತಾರಂತೆ. 

ಅಜೀತ್ ಕೇಳುತ್ತಾರೆ – “ಅಮೃತಾ ನಿಮ್ಮನ್ನು ತೊರೆದಳು, ನಿಮ್ಮೊಂದಿಗೆ ಇಷ್ಟೆಲ್ಲಾ ಘಟಿಸಿದೆ, ನಿಮಗೇನೂ ಅನಿಸುತ್ತಿಲ್ಲವೇ? “ 

ಆಗ ಪ್ರೀತಂ ಸಿಂಗ್ ಹೇಳುತ್ತಾರೆ – “ನಾವು ಯಾರನ್ನಾದರೂ ಪ್ರೀತಿಸಿದರೆ ಅವರ ಸುಖದಲ್ಲಿಯೇ ನಮ್ಮ ಸುಖ ಎಂದುಕೊಳ್ಳಬೇಕು, ಆಕೆ ಖುಶಿಯಾಗಿದ್ದರೆ ನನಗೂ ಅದೇ ಖುಶಿ” ಎಂದರಂತೆ. ಇಂತಹ ಗಂಡ ಎಲ್ಲಾದರೂ ಇದ್ದಾನೆಯೇ? ಯಾರಾದರೂ ನೋಡಿದ್ದೀರಾ? ದೇವರಂತಹ ಮನುಷ್ಯ” ಎನ್ನುತ್ತಾರೆ ಅಜೀತ್ ಕೌರ್.

ಅದೇ ರೀತಿ ಇಂದ್ರಜೀತ್ ಕೂಡ ಅಮೃತಾರನ್ನು ಪ್ರೀತಿಸಿದ. ಇಂದ್ರಜೀತ್ ಇಮ್ರೋಜ್ ಆಗುವ ಹಾದಿ ಸುಲಭದ್ದಾಗಿರಲಿಲ್ಲ. ಅದು ಅಗ್ನಿದಿವ್ಯದ ಹಾದಿ, ತ್ಯಾಗದ ಹಾದಿ, ಎಲ್ಲ ವಿಷವನ್ನು ನುಂಗಿ ನಂಜುಂಡನಾಗಬೇಕಾಗಿದ್ದ ಕಡುಕಷ್ಟದ ಹಾದಿಯಾಗಿತ್ತು. ಇಂದ್ರಜಿತ್ ಹೆಸರು ಬದಲಿಸಿಕೊಂಡು ಇಮ್ರೋಜ್ ಆದಾಗ ಜನರು ಅವರನ್ನು ಮುಸ್ಲಿಂ ಎಂದು ತಿಳಿದು ಸಾಕಷ್ಟು ವಿರೋಧವನ್ನುಂಟು ಮಾಡಿದ್ದರಂತೆ. ಅಮೃತಾ ಮಗ ನವರೋಜ್ ಹಾಗೂ ಇಮ್ರೋಜ್ ಇಬ್ಬರ ಎತ್ತರ, ಮೈಕಟ್ಟು ಒಂದೇ ಆಗಿದ್ದು ಕೆಲವೊಮ್ಮೆ ಇಮ್ರೋಜ್‌ರನ್ನು ನವರಾಜ್ ಗೆಳೆಯ ಎಂದು ಪರಿಚಯಿಸುತ್ತಿದ್ದರು ಅಮೃತಾ. ಇವೆರಡೇ ಉದಾಹರಣೆ ಸಾಕು ಅವರ ಲಿವ್-ಇನ್ ಬದುಕೂ ಹೂವಿನ ಹಾಸಾಗಿರಲಿಲ್ಲ. ಬೆಂಕಿಕೊಂಡವನ್ನು ಹಾದು ಬರಬೇಕಿತ್ತು.  ಬೇರೆಯವರೇಕೆ ಖುಶ್ವಂತ್ ಸಿಂಗರೇ ವ್ಯಂಗ್ಯವಾಡಿದ್ದರು – “ನಿನ್ನ ಜೀವನದಲ್ಲೇನಿದೆ? ಅದನ್ನು ಒಂದು ರೆವೆನ್ಯೂ ಸ್ಟ್ಯಾಂಪ್ ಬೆನ್ನಿಗೆ ಬರೀಬಹುದು” ಅಂತ. ಈ ಮಾತನ್ನು ಗಂಭೀರವಾಗಿಯೇ ತೆಗೆದುಕೊಂಡ ಅಮೃತಾ ತಮ್ಮ ಆತ್ಮಕತೆಗೆ “ರಸೀದಿ ಟಿಕೆಟ್” ಎಂದೇ ಹೆಸರಿಟ್ಟದ್ದು ಇತಿಹಾಸದ ಪುಟಕ್ಕೆ ಸೇರ್ಪಡೆಯಾದ ಪ್ರಸಿದ್ಧ ಘಟನೆ. 

ಅಮೃತಾ ತಮ್ಮ ಆಯುಷ್ಯದ ಕಡೆ ದಿನಗಳಲ್ಲಿ ಎರಡು ವರ್ಷ ಹಾಸಿಗೆ ಹಿಡಿದಾಗ ಇಮ್ರೊಜ್ ತಾಯಿ ಮಗುವನ್ನು ನೋಡಿಕೊಳ್ಳುವಂತೆ ಆಕೆಯನ್ನು ನೋಡಿಕೊಂಡರು. ಮಗುವನ್ನು ಹಾಸಿಗೆಯಿಂದ ಎತ್ತಿಕೊಂಡು ಬಾತ್‌ರೂಮಿಗೆ ಕರೆದೊಯ್ದು ಶುಚಿಗೊಳಿಸುವಂತೆ ಆಕೆಯನ್ನು ಶುಚಿಗೊಳಿಸಿ ಮತ್ತೆ ಹಾಸಿಗೆಗೆ ಕರೆತರುತ್ತಿದ್ದರು. ಸೊಸೆ ಅಲಕಾ ಬೆಡ್‌ಶೀಟ್ ಬದಲಾಯಿಸುತ್ತಿದ್ದಳು. ದೇಹದ ನೋವನ್ನು ತಾಳಲಾರದೇ ಅಮೃತಾ ನನಗೊಂದಿಷ್ಟು ಸೈನೈಡ್ ತಂದುಕೊಡಿ ಎಂದು ಅಳುತ್ತಿದ್ದರೆ ಇಮ್ರೋಜ್ ಇಡೀ ನಲವತ್ತು ವರ್ಷದ ಸಾಂಗತ್ಯದಲ್ಲಿ ಬಂದ ಎಲ್ಲಾ ಕಷ್ಟ ಸುಖಗಳನ್ನು ಹಂಚಿಕೊಂಡಿರುವಾಗ ಈಗ ಆಕೆಯ ನೋವನ್ನು ತೆಗೆದುಕೊಳ್ಳಲು ಆಗುತ್ತಿಲ್ಲವಲ್ಲ” ಎಂದು ಪರಿತಪಿಸುತ್ತಿದ್ದರಂತೆ. ಆಕೆಯ ಪ್ರಾಣ ಹೋದಾಗ ಆಕೆ ದೇಹ ಪುಟ್ಟ ಗುಬ್ಬಚ್ಚಿಯಂತಾಗಿತ್ತು. ಇಮ್ರೋಜ್ ಆಕೆಯನ್ನು ಎತ್ತಿಕೊಂಡು ಬಂದು ವಾಹನದಲ್ಲಿ ಮಲಗಿಸಿದರಂತೆ. ಅಜೀತ್ ಕೌರ್ ಸೇರಿ ಕೆಲವೇ ಕೆಲವು ಸಾಹಿತಿಗಳು, ಲೇಖಕರು, ಪರಿಚಿತರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಅಂದು ದೀಪಾವಳಿಯ ಹಿಂದಿನ ದಿನವಾಗಿತ್ತು. ಬೀದಿಯಲ್ಲೆಲ್ಲ ದೀಪಗಳ ಅಲಂಕಾರ, ಪಟಾಕಿಗಳ ಸದ್ದು. ಜನರು ಮಿಠಾಯಿಯನ್ನು ಖರೀದಿಸುತ್ತಿದ್ದರು. ಜನರಿಗೇನು ಗೊತ್ತು ಪಂಜಾಬದ “ಮಲ್ಲಿಕಾ-ಏ-ಶೆಹನಷಾ, ಶಹನಷಾ ಮಲ್ಲಕಾ ಆಲಿಯಾ, ಪಂಜಾಬಿನ ಕಾವ್ಯಲೋಕದ ಸಾಮ್ರಾಜ್ಞಿ ಹೋಗುತ್ತಿದ್ದಾಳೆ ಮಹಾಮನೆಗೆ ಎಂದು!” ಹಾಗಿತ್ತು ಆಕೆಯ ಅಂತಿಮ ಯಾತ್ರೆ. ಇಮ್ರೋಜ್ ಅಳುತ್ತಿದ್ದಿಲ್ಲ. ಶಾಂತವಾಗಿದ್ದರು. ಸಂತೈಸಲು ಬಂದವರಲ್ಲಿ – ಆಕೆ ದೇಹ ತ್ಯಜಿಸಿದ್ದಾಳೆ ಸಾಂಗತ್ಯವನ್ನಲ್ಲ” ಎನ್ನುತ್ತಿದ್ದರು. ದೇಹ ಪಂಚತತ್ವಗಳಲ್ಲಿ ಲೀನವಾಗುತ್ತಿರುವಾಗ – ಅಮೃತಾ ಬೀಜವಾದಳು. ಒಂದು ಬೀಜ ಸಮೃದ್ಧ ಫಸಲನ್ನು ಕೊಡುತ್ತದೆ” ಎಂದಿದ್ದರಂತೆ. ಆ ಬಳಿಕ ಕಲಾವಿದನಾಗಿದ್ದ ಇಮ್ರೋಜ್ ಕವಿಯಾಗುತ್ತಾರೆ. ಅಮೃತಾಳ ನೆನಪಲ್ಲಿ ಕವಿತೆಗಳನ್ನು ಬರೆಯುತ್ತಾರೆ.       

ದೇಶ ವಿಭಜನೆಯಲ್ಲಿ ಲಾಹೋರ್ ತೊರೆದು ದಿಲ್ಲಿಗೆ ಬಂದಾಗ ಇಮ್ರೋಜ್ ನಿರಾಶ್ರಿತರ ಶಿಬಿರದಲ್ಲಿ ತಂಗಿರುತ್ತಾರೆ. ಆ ಶಿಬಿರದಲ್ಲಿ ಉದ್ಯೋಗ ಅರಸುವವರಿಗೆ ಪೇಂಟಿಂಗ್ ಕೆಲಸ, ಪ್ಲಂಬಿಂಗ್ ಕೆಲಸ, ಗುಮಾಸ್ತರ ಕೆಲಸ ಹೀಗೆ  ಜಾಹೀರಾತು, ಘೋಷಣೆಗಳನ್ನು ಕೂಗುತ್ತಿದ್ದರು. ಇಂದ್ರಜೀತ್ ಕೂಡ ಯಾರಿಂದಲೋ 25 ಪೈಸೆ ಕಡ ಪಡೆದು ಕನಾಟ್ ಪ್ಲೇಸಿಗೆ ಇಂಟರವ್ಯೂಗೆ ಹೋಗುತ್ತಾರಂತೆ ಅವರು ಪರೀಕ್ಷೆ ಬರೆದು, ಇಂಟರ್ವ್ಯೂ ಕೊಟ್ಟು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾಗ  ಅಧಿಕಾರಿಗಳು ’ಇವತ್ತು ಹೋಗು ನಾಳೆ ಬಾ’ – ತಿಳಿಸುತ್ತೇವೆ ಎನ್ನುತ್ತಾರೆ. ಆಗ ಇಮ್ರೋಜ್ – “ಇವತ್ತು ನಾನು 25 ಪೈಸೆ ಕಡ ಪಡೆದುಕೊಂಡು ಬಂದಿದ್ದೇನೆ, ಕೆಲಸ ಸಿಗುತ್ತದೋ ಇಲ್ಲವೋ ಇವತ್ತೇ ಹೇಳಿಬಿಡಿ” ದಿನಾ ದಿನಾ 25 ಪೈಸೆ ಎಲ್ಲಿಂದ ತರಲಿ, ಬೇರೆಯವರಲ್ಲಿ ಕಡ ಪಡೆಯುವುದು ನನಗಿಷ್ಟವಿಲ್ಲ” ಎನ್ನುತ್ತಾರೆ.  ಅಲ್ಲಿನ ಒಬ್ಬ ಕಲಾವಿದ – “ಕೆಲಸ ನಿನಗೆ ಸಿಕ್ಕೇ ಸಿಗುತ್ತದೆ, ಈ ಎರಡು ಆಣೆ ಇಟ್ಟುಕೋ, ಆ ಮೇಲೆ ತೀರಿಸು” ಎನ್ನುತ್ತಾನೆ. ಮುಂದೆ ಅವರಿಗೆ ಅಲ್ಲಿಯೇ ಕೆಲಸ ಸಿಗುತ್ತದೆ. ಅದು ಪ್ರಸಿದ್ಧ ಅಮೇರಿಕನ್  Advertising ಕಂಪನಿ-  ಜೆ ವಾಲ್ಟರ್ ಥಾಂಪ್ಸನ್ ಆಗಿದ್ದು ಇಮ್ರೋಜ್ ಅವರಿಗೆ ಮುಂಬಯಿನ  ಚಿತ್ರರಂಗದ ಬೆಡಗಿನ ಜಗತ್ತು ತೆರೆದುಕೊಳ್ಳುತ್ತದೆ.

1950ರಲ್ಲಿ ಮುಂಬಯಿಗೆ ತೆರಳಿದ ಇಮ್ರೋಜ್‍ಗೆ ರಾಜಕಪೂರ್ ರ “ ಆವಾರ “ ಚಿತ್ರಕ್ಕೆ {ಟೈಟಲ್ಸ್) ಶೀರ್ಷಿಕೆ ಬರೆಯುವ  ಕೆಲಸ ಸಿಗುತ್ತದೆ.  ಮುಂದೆ  ದಿಲೀಪ್ ಕುಮಾರ್ ನಟಿಸಿದ “ಆನ್” ಚಿತ್ರ, ಗುರುದತ್ತ ನಿರ್ದೇಶನದ ಪ್ಯಾಸಾ, ನಿರ್ಮಾಪಕ  ರಲ್ಹಾನ್ ಹೀಗೆ ಅನೇಕ ದಿಗ್ಗಜರ ಚಿತ್ರಗಳ  ಪೋಸ್ಟರ್/ ಬ್ಯಾನರ್ ಚಿತ್ರಿಸುವ, ಡಿಸೈನ್ ಮಾಡುವ, ಟೈಟಲ್ ಬರೆಯುವಂತಹ ಸೃಜನಾತ್ಮಕ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಕೆಲಸವಿಲ್ಲದೆ ಕಿಸೆಯಲ್ಲಿ ಹಣವಿಲ್ಲದ ದಿನಗಳಲ್ಲಿ ಉಪವಾಸದ ದಿನಗಳನ್ನೂ ಕಳೆಯುತ್ತಾರೆ. “ಆವಾರಾ”ದ ಟೈಟಲ್ಸ್ ಬರೆದ ಸಂಭಾವನೆ ಇನ್ನೂ ಸಿಕ್ಕಿರಲಿಲ್ಲ. “ಆವಾರಾ”ದ ಪ್ರಿಮಿಯರ್ ಶೋ ದಿಲ್ಲಿಯಲ್ಲಿ ಇದ್ದುದರಿಂದ ರಾಜಕಪೂರ್ ದಿಲ್ಲಿಯಲ್ಲಿದ್ದರು. ಅವರು ವಾಪಸ್ ಮುಂಬಯಿಗೆ ಹೋಗಿ ಹಣ ಕೊಡುವವರೆಗೂ ಇಮ್ರೋಜ್‍ ಕೈಯಲ್ಲಿ ಹಣವಿರಲಿಲ್ಲ. ಅಂದು ರಾಜಕಪೂರ್ ಹಣ ಕೊಟ್ಟ ದಿನ ಹೊಟ್ಟೆ ತುಂಬ ಆಮ್ಲೇಟ್ ತಿಂದರಂತೆ. ಹಾಗಿದ್ದವು ದಿನಗಳು.    

ಅಲ್ಲಿಂದ ಖ್ಯಾತ ಉರ್ದು ಪತ್ರಿಕೆ “ಶಮಾ”ದಲ್ಲಿ ಇಲ್ಲಸ್ಟ್ರೇಟ್ ಕೆಲಸ ಸಿಕ್ಕು, ಅವರು ದಿಲ್ಲಿಗೆ ಬರುತ್ತಾರೆ. “ಶಮಾ” ಉರ್ದು ಭಾಷೆಯ ಅತ್ಯಂತ ಜನಪ್ರಿಯ ಮಾಸಪತ್ರಿಕೆಯಾಗಿತ್ತು. ಇದು ತಿಂಗಳಿಕೆ ಒಂದು ಲಕ್ಷ್ಯ ವಿತರಣೆಯನ್ನು ತಲುಪಿದ್ದ ಮೊದಲ ಉರ್ದು ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ವಿಮಾನಗಳ ಮೂಲಕ ವಿದೇಶಗಳಿಗೂ ಸಾಗಣೆಯಾಗುತ್ತಿತ್ತು. ಆ ಕಾಲಕ್ಕೆ ಇದು ಒಂದು ದೊಡ್ದ ಸಾಧನೆ. ಈ ಪತ್ರಿಕೆಯಲ್ಲಿ ಅನೇಕ ಪ್ರಸಿದ್ಧ ಸಾಹಿತಿಗಳು ಬರೆಯುತ್ತಿದ್ದರು.  ಆರಜೂ ಲಖನ್ವಿ, ಫಿರಾಕ್ ಗೋರಖಪುರಿ, ಇಸ್ಮತ್ ಚುಗತಾಯಿ, ಕ್ರಿಶನ್ ಚಂದರ್, ಜಿಗರ್ ಮೊರಾದಾಬಾದಿ ಮತ್ತು ಆಗಷ್ಟೇ ಅಮೃತಾ ಪ್ರೀತಮ್ ಅವರ “ಡಾ.ದೇವ್” ಕಾದಂಬರಿ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ಧಾರಾವಾಹಿಗೆ ಚಿತ್ರ ವಿನ್ಯಾಸ ಮಾಡುತ್ತಿದ್ದುದು ಇಮ್ರೊಜ್.  ಚಿತ್ರ ವಿನ್ಯಾಸಕಾರರೂ ಕತೆಯನ್ನೂ ಓದಿಯೇ ಓದುತ್ತಾರೆ. ಆ ಕತೆ ಹೇಗಿತ್ತೆಂದರೆ ಅದು ತನ್ನದೇ ಕತೆಯೇನೋ ಅನಿಸುತ್ತಿತ್ತಂತೆ ಇಮ್ರೋಜರಿಗೆ. ಬರಹಗಾರ್ತಿಯನ್ನು ನೋಡಿರಲಿಲ್ಲ ಆ ತನಕ. ಒಮ್ಮೆ ಅವರು ತಮಾಷೆಯಲ್ಲಿ ಅಮೃತಾರಿಗೆ ಫೋನ್ ಮಾಡುತ್ತಾರೆ. ಆ ಕಡೆಯಿಂದ ಫೋನ್ ತೆಗೆದುಕೊಂಡ ಅಮೃತಾ – “ಯಾರು” ಎಂದಾಗ ಇಮ್ರೋಜ್..- ನಾನು  ಡಾ. ದೇವ್ ” ಎನ್ನುತ್ತಾರೆ ತುಂಟತನದಲ್ಲಿ. ಹೀಗೆ ಅವರ ಮಾತುಕತೆ ಪರಿಚಯ ಶುರುವಾಗುತ್ತದೆ. ಇದಕ್ಕೂ ಮೊದಲೋ ನಂತರವೋ ಒಮ್ಮೆ ಅಮೃತಾ ತಮ್ಮ ಪುಸ್ತಕದ ಮುಖಪುಟ ವಿನ್ಯಾಸಕ್ಕೆ ಕಲಾವಿದರನ್ನು ಹುಡುಕುತ್ತಿದ್ದಾಗ ಯಾರೋ ಸ್ನೇಹಿತರು ಇಂದ್ರಜಿತ್ ಬಗ್ಗೆ ಮಾಹಿತಿ ಕೊಡುತ್ತಾರೆ. ಆಕೆ ಅವರನ್ನು ಹುಡುಕಿಕೊಂಡು ’ಶಮಾ’ ಕಚೇರಿಗೆ ಬರುತ್ತಾಳೆ.  ಈ ರೀತಿ  ಅವರಿಬ್ಬರ ಪರಿಚಯ, ಸ್ನೇಹ ಮಾತುಕತೆ ಶುರುವಾಗಿ ಅನುರಾಗ ಮೊಳಕೆ ಒಡೆದು ಪ್ರೇಮ ಬೇರೂರತೊಡಗುತ್ತದೆ.   ಅಮೃತಾರ ಮುಂದಿನ ಎಲ್ಲಾ ಪುಸ್ತಕಗಳಿಗೂ ಇಮ್ರೋಜರದೇ  ಮುಖಪುಟ ವಿನ್ಯಾಸ, ಒಳಪುಟಗಳ ಚಿತ್ರಗಳಿವೆ. ಅದವರಿಬ್ಬರ ನಡುವಿನ ಅಲಿಖಿತ ಒಡಂಬಡಿಕೆಯಾಗಿತ್ತು.  

ಕಲಾವಿದ ಹಾಗೂ ಕವಿಯತ್ರಿ ಇವರಿಬ್ಬರ ಬದುಕಿನ ಪುಟಗಳ ತುಂಬ ಮಧುರ ಸಾಂಗತ್ಯ, ಅನ್ಯೋನ್ಯತೆಯ ನವಿರೇ ತುಂಬಿದೆ. ಇಬ್ಬರೂ ಒಟ್ಟಿಗೇ ಬಾಳತೊಡಗಿದಾಗ ಇಬ್ಬರೂ ಪಂಜಾಬಿ ಸಾಹಿತ್ಯಿಕ ಪತ್ರಿಕೆಯಾದ “ನಾಗಮಣಿ”ಯನ್ನು ಸತತ ಮೂವತ್ತೇಳು ವರ್ಷಗಳ ಕಾಲ ನಡೆಸುತ್ತಾರೆ. ಅದು ಪಂಜಾಬಿ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸಿದ್ದಲ್ಲದೇ  ಹೊಸ ಬರಹಗಾರರನ್ನು ಸೃಷ್ಟಿಸಿತು. ಅಲ್ಲಿ ಪ್ರಕಟವಾಗುವ ಕತೆ, ಕವಿತೆಗಳು, ಪ್ರಬಂಧಗಳು, ಮೊದಲ ಪ್ರೇಮ ಅಂಕಣ ಇವೆಲ್ಲವೂ ಹೊಸ ಪೀಳಿಗೆಯನ್ನು ಆಕರ್ಷಿಸಿದ್ದಲ್ಲದೇ  ಓದುಗರಿಗೆ ತಾವೂ ಬರೆಯಬೇಕು, ತಮ್ಮ ಮೊದಲ ಪ್ರೇಮವನ್ನು ಹಂಚಿಕೊಳ್ಳಬೇಕು” ಎನಿಸುತ್ತಿತ್ತಂತೆ. ಡಾ. ಅಜೀತ್ ಕೌರ್ ಬೆಂಕಿ ಅಪಘಾತದಲ್ಲಿ ತಮ್ಮ ಪ್ರೀತಿಯ ಮಗಳನ್ನು ಕಳೆದುಕೊಂಡು, ಸಾಂಸಾರಿಕ ಬದುಕಿನಲ್ಲಿ ಅತ್ಯಂತ ದುಃಖಮಯ  ಸಮಯವನ್ನು ಎದುರಿಸುತ್ತಿದ್ದಾಗ, ಅಮೃತಾರೇ,  “ಸುಮ್ಮನೇ ಕೂತು ಬರೀ ” ಎಂದು ಗದರಿ ಅವರನ್ನು ಪ್ರೇರೇಪಿಸಿದ್ದನ್ನು ಒಂದೆಡೆ ಅಜೀತ್ ಕೌರರೇ ಬರೆದುಕೊಂಡಿದ್ದಾರೆ. ಹೀಗೆ ಅವರ  “ಖಾನಾಬದೋಶ್” ನಾಗಮಣಿಯಲ್ಲಿ ಪಂಜಾಬಿ ಭಾಷೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು.  ಅಮೃತಾ -ಇಮ್ರೊಜ್ ಅವರ ಕನಸಿನ “ನಾಗಮಣಿ” ಪಂಜಾಬಿಗಳ ಮನೆ ಮಾತಾಗಿಹೋಗಿತ್ತು. “ನಾಗಮಣಿ”ಯನ್ನು ಮುದ್ರಿಸಲು ಖ್ಯಾತಿವುಳ್ಳ, ಛಾತಿವುಳ್ಳ ಯಾರೂ ಮುಂದೆ ಬರುವುದಿಲ್ಲ, ಆಗ ಹೌಜಖಾಸಿನ ಒಂದು ಪುಟ್ಟ ಅಚ್ಚಿನ ಮನೆಯಲ್ಲಿ “ನಾಗಮಣಿ” ಮುದ್ರಣಗೊಳ್ಳತೊಡಗುತ್ತದೆ. ಅಪಾರವಾದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ “ನಾಗಮಣಿ”ಯನ್ನು ಪಂಜಾಬಿ ಓದುಗರು ತಲೆ ಮೇಲಿಟ್ಟುಕೊಂಡು ಬೆಳೆಸಿದರು, ಕೆಟ್ಟದಿನಗಳಲ್ಲಿ ಕೈಹಿಡಿದು ಪ್ರೋತ್ಸಾಹಿಸಿದರು.                   

2014 ರಲ್ಲಿ ನಾನೂ ಗ್ರೇಟರ್ ಕೈಲಾಶ್‍ನ ನನ್ನ ಕಾರ್ಪೋರೇಟ್ ಕಚೇರಿಯಿಂದ ಬೇರೆಡೆ ಹೋದ ನಂತರ ಇಮ್ರೋಜರನ್ನು ಕಾಣುವುದೇ ಅಪರೂಪವಾಗಿತ್ತು. ಅಪರೂಪವೇನು ಅತೀ ದುಸ್ತರವಾಗಿತ್ತು. ಇಮ್ರೋಜ್ ಸಿಗಲಾರದಂತೆಯೇ ಗ್ರೇಟರ್ ಕೈಲಾಸಿನ ಗಾಳಿ, ಬೆಳಕು ಗುಲಮೊಹರಿನ ಕೆಂಪು ಹೂಹಾಸು, ಪಾರಿಜಾತದ ಘಮಲು ತುಂಬಿದ ಓಣಿಗಳು, ಬಿರುಬಿಸಿಲಲ್ಲೂ ನಗುನಗುತ್ತ ತಲೆದೂಗುತ್ತಿದ್ದ ಅಮಲ್ತಾಸಿನ ಹಳದಿ ಗೆಜ್ಜೆ ಹೂಗೊಂಚಲುಗಳು ಕೂಡ ದೂರಾಗಿಹೋದವು. ಅಂತಹ ಜಾಗದಲ್ಲಿ ನಾನಿದ್ದೆ. ದಿಲ್ಲಿಯಿಂದ ದೂರ. ಆ ನಡುವೆ ಇಮ್ರೋಜ್ ಪಂಜಾಬಿಗೆ ಹೋದವರು ಯಾವಾಗ ಮರಳಿದರು ಎಂಬುದೂ ಗೊತ್ತಾಗಲಿಲ್ಲ. ಅವರ ಮೊಮ್ಮಗ ಅಮನ್ ಕ್ವಾತ್ರಾ ಇಮೇಲಿಗೆ ಉತ್ತರಿಸುತ್ತಿದ್ದನೇ ಹೊರತು ಇಮ್ರೋಜ್ ಬಗ್ಗೆ ಕೇಳಿದ ಯಾವ ಪ್ರಶ್ನೆಗೂ ಉತ್ತರಿಸುತ್ತಿರಲಿಲ್ಲ. ಕೆಲವೊಮ್ಮೆ ಅವರ ಫೋನ್ ರಿಂಗಾಗುತ್ತಿತ್ತೇ ಹೊರತು ಯಾರೂ ಎತ್ತಿಕೊಳ್ಳುತ್ತಿದ್ದಿಲ್ಲ. ಹೇಗಿದ್ದಾರೋ ಎನ್ನುವ ಆತಂಕವಾಗುತ್ತಿತ್ತು. ದಿನೇ ದಿನೇ ಅವರಿಗೂ ವಯಸ್ಸಾಗುತ್ತ, ಆರೋಗ್ಯ ಕ್ಷೀಣಿಸುತ್ತ ಬಹುಶಃ ಅಭಿಮಾನಿಗಳ ಫೋನ್ ಕಿರಿಕಿರಿಯಿಂದಾಗಿಯೋ ಏನೋ ಬಹುಕಾಲ ಮೌನ ಆವರಿಸಿಕೊಂಡಿತ್ತು. ಈ ಲೋಕದ ವ್ಯವಹಾರಗಳಿಂದಲೇ ಹಿಂದೆ ಸರಿದುಬಿಟ್ಟರೇನೋ  ಅನಿಸುತ್ತಿತ್ತು.

ಇದೆಲ್ಲದರ ನಡುವೆ ನನ್ನ ಕೊನೆಯ ಭೇಟಿ ಮಾತ್ರ ಸದಾ ನೆನಪಲ್ಲಿ ಉಳಿದಿರುತ್ತದೆ. ಆಗಷ್ಟೇ ಪಾರಿಜಾತದ ಹೂಗಳು ಅರಳಿ ಸುತ್ತಲೂ  ಕಂಪಡರುವ ಶರದೃತುವಿನ ಆರಂಭದ ಕಾಲ. ಹೇಗೋ ಬಿಡುವು ಮಾಡಿಕೊಂಡು ಇಮ್ರೋಜರನ್ನು ಕಾಣಲು ಸಮಯ ಪಡೆದಿದ್ದೆ. ಮಧ್ಯಾಹ್ನ ಮೂರು ಗಂಟೆಗೆ ಬರಲು ಹೇಳಿದ್ದರು. ಅವರಿಗೆ ಸಂಜೆ ಪಂಜಾಬ್ ಸದನದಲ್ಲಿನ ಯಾವುದೋ ಕಾರ್ಯಕ್ರಮಕ್ಕೆ ಹೋಗಲಿಕ್ಕಿತ್ತು. ಅವರೊಂದಿಗೆ ತುಸು ಹೊತ್ತು ಹರಟಿ ಚಹ ಕುಡಿದು ಮುಗಿಸುವ ಹೊತ್ತಿಗೇ ಸೂರ್ಯನ ಬಿಸಿಲು ಮಂದವಾಗಿ ಸಂಜೆಯಾಗುತ್ತಿರುವ ಸೂಚನೆ ಕೊಟ್ಟಿತು. ಹಂಸದಂತೆ ಮೆಲ್ಲಗಿನ ಹೆಜ್ಜೆ ಇಟ್ಟು ಮನೆ ತುಂಬ ಓಡಾಡಿದ ಇಮ್ರೋಜ್ ಅದೇ ಬಿಳಿ ಪೈಜಾಮ್ ಕುರ್ತಾದ ಮೇಲೊಂದು ಶಾಲು ಸುತ್ತಿಕೊಂಡು  ಹೊರಡುವ ಸಿದ್ಧತೆ ನಡೆಸಿದರು. ನನಗೆ ಮಾರ್ಗದಲ್ಲಿ ಎಲ್ಲಿಯಾದರೂ ಬಸ್ ಸ್ಟಾಪಿಗೋ ಮೆಟ್ರೋಕ್ಕೊ ಬಿಡ್ತೀನಿ ಅಂದಿದ್ದರು. ಡ್ರೈವರ್  ಕಾರು ಹೊರತೆಗೆದು ರೆಡಿಯಾಗಿ ನಿಂತಿದ್ದ. ಹಿಂದಿನ ಸೀಟಿನಲ್ಲಿಯೇ ಇಮ್ರೋಜ್ ಅವರೊಂದಿಗೆ ನಾನೂ ಕೂತುಕೊಂಡೆ.ಮತ್ತೆ ಮಾತಾಡಲು ಏನೂ ಉಳಿದಿರಲಿಲ್ಲ. ದಿಲ್ಲಿಯ ಬೀದಿಗಳೂ ಉದಾಸಗೊಂಡಂತಿದ್ದವು. ನಡು ನಡುವೆ  ದಿಲ್ಲಿಯ ಟ್ರ್ಯಾಫಿಕ್ಕು, ಹಳೆಯ ದಿಲ್ಲಿ, ಗಾಲಿಬ್ ಇತ್ಯಾದಿ ಒಂದೊಂದು ಮಾತು ಬಂದುಹೋಗುತ್ತಿತ್ತು. ಅವರಿಗೆ ನೆಗಡಿಯಾಗಿತ್ತು. ಮೂಗಿನಿಂದ ನೀರಿಳಿಯುತ್ತಿತ್ತು. ಇಲ್ಲಿ ಚಳಿಗಾಲದಲ್ಲಿ ಬಹುತೇಕರಿಗೆ ಈ ತರ ಸಮಸ್ಯೆ ಇರುತ್ತದೆ. ವಯಸ್ಸಾದರಿಗೆ ಸ್ವಲ್ಪ ಹೆಚ್ಚು. ವಾಕ್ ಮಾಡುವಾಗ ಮೂಗಿನಲ್ಲಿ ನೀರಿಳಿಯುವಂತಾಗುತ್ತದೆ. ಶೀತವಾಗಿಲ್ಲದಿದ್ದರೂ ಒಂದು ನಮೂನೆಯ ಕಿರಿಕಿರಿ.  

ಮೈಗೆ ಸುತ್ತಿಕೊಂಡಿದ್ದ ಶಾಲ್ ಒಳಗಡೆಯಿಂದ ಕೈ ಹೊರಕ್ಕೆಳೆದುಕೊಂಡು ಆಗಾಗ ಮೂಗನ್ನು ಒರೆಸಿಕೊಳ್ಳುತ್ತ ಕುಳಿತಿದ್ದ ಇಮ್ರೋಜರನ್ನು ಕಂಡು ಕರುಳು ಚುರ್ರ್ ಎಂದಿತ್ತು. ಅಷ್ಟು ಎತ್ತರದ ಮನುಷ್ಯ ಇಷ್ಟೇ ಇಷ್ಟು ಹಿಡಿಯಾಗಿ ಗುಬ್ಬಚ್ಚಿಯಂತೆ ಮುದುಡಿಕೊಂಡು ಕುಳಿತಿದ್ದರು. ಆಯುಷ್ಯದ ಇಳಿಸಂಜೆ ನಿಜಕ್ಕೂ ಕಠೋರವಾದುದು. ದೇಹದ ಮೇಲೆ ವಯಸ್ಸಿನ ಗಾಢ ನೆರಳಿತ್ತು. ಆದರೂ, ಅವರ ಮಾಂತ್ರಿಕ ನಗು ಮಾಸಿರಲಿಲ್ಲ. ಹೀಗೆ ಅವರನ್ನು ನೋಡಿದಾಗೆಲ್ಲ ಸಂಗಾತಿಯನ್ನು ಕಳೆದುಕೊಂಡು ಒಂಟಿಯಾಗಿ ಕುಳಿತ ಹಕ್ಕಿಯಂತೆ ಕಾಣುತ್ತಿದ್ದರು. ಅದರೊಂದಿಗೆ ಅವರದೇ ಒಂದು ಕವಿತೆ ನೆನಪಾಗುತ್ತಿತ್ತು. ಬಹುಶಃ ಅಮೃತಾರ ಅನಾರೋಗ್ಯದಲ್ಲಿ ಬರೆದಿದ್ದೆಂದು ತೋರುತ್ತದೆ.     

ಈಗ ಈ ಗೂಡೂ ನಲವತ್ತು ವರ್ಷದ್ದಾಯಿತು,

ನೀನೂ ಈಗ ಹಾರುವ ತಯಾರಿಯಲ್ಲಿದ್ದೀಯಾ, 

ಈ ಮನೆಯ ಕಣ ಕಣವೂ

 ಹೇಗೆ ನಿನ್ನನ್ನು ಸ್ವಾಗತಿಸುತ್ತಿತ್ತು,

ನೀನು ಬರುವಾಗ !

ಹಾಗೆಯೇ ಈ ಹಾರುವಿಕೆಗೂ ,

ಈ ಹೋಗುವಿಕೆಗೂ,

ಈ ಮನೆಯ ಕಣ ಕಣವೂ ನಿನಗೆ ವಿದಾಯ ಹೇಳುತ್ತಿದೆ. …..

ನಾನು ಇಳಿಯುವ ತಾಣ ಬಂದಿತ್ತು. ಭಾರವಾದ ಮನಸ್ಸಿನಿಂದ ಅವರಿಗೆ ಬೈ ಹೇಳಿ ಪ್ರಗತಿ ಮೈದಾನ್ ಮೆಟ್ರೋ ಸ್ಟೇಷನ್ ಕಡೆಗೆ ಹೆಜ್ಜೆಹಾಕಿದ್ದೆ. ಅವರ ಗಾಡಿ ಮುಂದೆ ಸಾಗಿತು. ಈ ಬೃಹತ್ ನಗರದ ನಿರ್ದಯ ಹೆದ್ದಾರಿಯ ಮೇಲಿನ ಮರಗಳನ್ನು ಹಿಂದೆಹಾಕುತ್ತಾ ಆ ಒಂಟಿಹಕ್ಕಿ ಸಾಗಿಹೋಯಿತು. ಅದೇ ಕೊನೆಯ ಭೇಟಿ. ಮತ್ತೆಂದೂ ಇಮ್ರೋಜ್ ಅವರನ್ನು  ನೋಡಲಾಗಲಿಲ್ಲ.                      

ಆದರೆ ಕುಳಿತು ಚಿಂತಿಸಿದಾಗೆಲ್ಲ ಇಮ್ರೋಜ್‌ ಅವರ ಪ್ರೇಮದ ಪರಿಗೆ ವಿಸ್ಮಯಪಡುತ್ತೇನೆ, ಮೂಕವಾಗುತ್ತೇನೆ. ಅವರು ಈ ಲೋಕದ ವ್ಯಕ್ತಿಯಲ್ಲವೇ ಅಲ್ಲ. ಬೇರೊಂದು ಲೋಕದಿಂದ ದೇವರೇ ಅಮೃತಾರಿಗಾಗಿ ಕಳಿಸಿದ ದೂತನೇನೋ ಎನಿಸುತ್ತದೆ. ಅಪ್ಪಟಪ್ರೇಮಿ, ಆರಾಧಕ. ಒಬ್ಬ ವ್ಯಕ್ತಿಯನ್ನು ಯಾವ ಫಲಾಪೇಕ್ಷೆ ಇಲ್ಲದೇ ಹೀಗೂ ಪ್ರೇಮಿಸಬಹುದು ಎಂಬುದಕ್ಕೆ ಇಮ್ರೋಜ್ ಒಂದು ಮಾದರಿ. ಅಮೃತಾರನ್ನು ಪ್ರೇಮಿಸಿದ್ದು, ಪೂಜಿಸಿದ್ದಲ್ಲದೇ ಒಂದು ಪುಸ್ತಕದ ಹೊರಕವಚ ಪುಸ್ತಕವನ್ನು ರಕ್ಷಿಸುವಂತೆ ಇಮ್ರೋಜ್ ಬಾಳಿನುದ್ದಕ್ಕೂ ಅಮೃತಾರನ್ನು ಪೊರೆದರು, ಎಲ್ಲಾ ವೈರುಧ್ಯಗಳನ್ನು ಮೀರಿ ಆಸರೆಯಾಗಿ ನಿಂತರು.  

ಬದುಕೇ ಒಂದು ವಿಸ್ಮಯ. ಕೆಲವೊಂದು ವಿಸ್ಮಯಗಳು ಬದುಕನ್ನು ಶ್ರೀಮಂತಗೊಳಿಸುತ್ತವೆ. ಮನುಷ್ಯರನ್ನಾಗಿಸುತ್ತವೆ.  ಇಂತಹದ್ದೊಂದು ಸಂತೋಷವನ್ನು ಪಡೆದದ್ದು ಡಾ. ಲವ್ಲೀನ್ ಥಡಾನಿ ಮೇಡಂ ಪರಿಚಯದಿಂದಾಗಿ. ಆಕೆ ದೂರದರ್ಶನದ ಆಂಕರ್, ನಟಿ, ಕವಿಯತ್ರಿ, ಚಿತ್ರ ನಿರ್ಮಾಪಕಿ, ಹಲವು ಭಾರತೀಯ ಪ್ರಧಾನ ಮಂತ್ರಿಗಳ ಅಧಿಕೃತ ಭಾಷಾಂತರಕಾರ್ತಿ. ಆಲ್ ಇಂಡಿಯಾ ರೇಡಿಯೋ ನಲ್ಲಿ ರಷಿಯನ್ ಲ್ಯಾಂಗ್ವೇಜ್ ಸರ್ವಿಸಸ್ ವಿಭಾಗದ ಮುಖ್ಯಸ್ಥೆಯಾಗಿದ್ದವರು, ತಮ್ಮದೇ ಆದ ಪ್ರೊಡಕ್ಷನ್ ಕಂಪನಿ ನಡೆಸುತ್ತಿದ್ದರು. ಜರ್ನಲಿಸಂ ವಿದ್ಯಾರ್ಥಿಯಾಗಿದ್ದ ನನ್ನ ಮಗ ಆಶಿಷ್ ನಿಡಗುಂದಿ ಲವ್ಲೀನ್ ಕಚೇರಿಯಲ್ಲಿ ಇಂಟರ್ನ್ ಆಗಿ ಕೆಲಸಮಾಡತೊಡಗಿದ್ದಾಗ ನನಗೆ ಇಮ್ರೋಜ್ ಅವರನ್ನು ಕಾಣುವ ಸುಯೋಗ ಒದಗಿತ್ತು. ಅವರನ್ನು ಭೆಟ್ಟಿಯಾಗುತ್ತೇನೆಂದು ನಾನು ಕನಸು ಮನಸ್ಸಿನಲ್ಲಿಯೂ ಯೋಚಿಸಿದ್ದಿಲ್ಲ.  ಲವ್ಲಿನ್ ಅವರ ಕಚೇರಿ ಹಾಗೂ ನನ್ನ ಕಚೇರಿ ಅಕ್ಕಪಕ್ಕದ ಕಟ್ಟಡಗಳಲ್ಲಿದ್ದರಿಂದ ನಾನೂ ಆಗಾಗ ಅಲ್ಲಿಗೆ ಹೋಗುತ್ತಿದ್ದೆ. ಕೆಲವೊಮ್ಮೆ ಮಗನಿಗೆ ಲಂಚ್ ಬಾಕ್ಸ್ ಕೊಡಲು.      

ಲವ್ಲೀನ್ ಥಡಾನಿ ತಮ್ಮ women empowerment ಕುರಿತ ಡಾಕ್ಯೂಮೆಂಟರಿಯೊಂದರ ಪ್ರದರ್ಶನವನ್ನು ದಿಲ್ಲಿಯ ICCR ನಲ್ಲಿ ಇಟ್ಟುಕೊಂಡಿದ್ದರು. ಪ್ರದರ್ಶನದ ಬಳಿಕ ಕವಿಗೋಷ್ಠಿ ಇತ್ತು. ನನಗೂ ಆಹ್ವಾನವಿದ್ದುದರಿಂದ ಮಗನೊಂದಿಗೆ ನಾನೂ ಹೋಗಿದ್ದೆ. ಆ ಕವಿಗೋಷ್ಠಿಯಲ್ಲಿ ಆಗಮಿಸಿದ್ದರು ಇಮ್ರೋಜ್. ನಾನವರನ್ನು ಕಂಡದ್ದು ಅದೇ ಮೊದಲು. ನೆಹರೂ ಜಾಕೆಟ್ ಹಾಕಿಕೊಂಡು ಬಹಳ ಆರೋಗ್ಯಕರವಾಗಿ ಕಾಣುತ್ತಿದ್ದರು. ದೆಹಲಿಯ ಪ್ರಖ್ಯಾತ ಹಿಂದಿ ಕವಿಗಳೆಲ್ಲಾ ಅವರನ್ನು “ಚಲತಾ ಫಿರತಾ ತಾಜ್ಮಹಲ್” ಎಂದು ಸಂಬೋಧಿಸಿ ವೇದಿಕೆಗೆ ಕರೆತಂದದ್ದು ನಿನ್ನೆ ಮೊನ್ನೆಯೋ ಅನ್ನುವಂತಿದೆ. ಸೌಮ್ಯ ಸ್ನಿಗ್ಧ- ನಿಗರ್ವಿ ವ್ಯಕ್ತಿತ್ವ ಕಣ್ಣಿಗೆ ಕಟ್ಟಿದಂತಿದೆ. ಅವತ್ತಿನಿಂದಲೂ ಈ ಚಲತಾ ಫಿರತಾ ತಾಜ್ಮಹಲ್ ನನ್ನನ್ನು ಕಾಡತೊಡಗಿತ್ತು. ಅಮೃತಾ ಪ್ರೀತಂ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿರಲಿಲ್ಲ. ಆಗ ನಾನೂ ದೆಹಲಿಗೆ ಹೊಸಬಳಾಗಿದ್ದೆ. ಅವರನ್ನು ಹುಡುಕುವಷ್ಟು ದಿಲ್ಲಿ ನನಗೆ ಪರಿಚಿತವಿದ್ದಿಲ್ಲ. ನಾನೂ ದಿಲ್ಲಿಗೆ ಹಳಬಳಾಗಿ ಕವಿತೆಯ ಪುಟದಂತಿರುವ ಅವರ  ತೆರೆದ ಬಾಗಿಲನ್ನು ತಟ್ಟುವ ಹೊತ್ತಿಗೆ ಅವರು ಇಲ್ಲವಾಗಿದ್ದರು. ಇಮ್ರೋಜ್‌ ನಸುನಗುತ್ತ ಬಾಗಿಲು ತೆರೆದು ಸ್ವಾಗತಿಸಿದ್ದರು.

“ಆಪಕೋ ಕಭೀ ಉನಕಾ ನಾ ಹೋನೆ ಕಾ ಎಹಸಾಸ್ ಹುವಾ ಹೈ? ಅವರಿಲ್ಲ ಶೂನ್ಯತೆ ಕಾಡಿದೆಯಾ? ಎಂದು ಕೇಳಿದ್ದೆ.   ಅವಳೆಲ್ಲಿ ಹೋಗಿದ್ದಾಳೆ ಇಲ್ಲಿಯೇ ಇದ್ದಾಳೆ “ ಎಂದಿದ್ದರು ಇಮ್ರೋಜ್.ಮುಂದೆ ಕೇಳಿದ್ದೆಲ್ಲಾ ಅವರ ಬದುಕಿನ ಕತೆಗಳು. ಮನೆ ತುಂಬ ಅಮೃತಾರ ಫೋಟೋಗಳು. ಮಕ್ಕಳೊಂದಿಗೆ, ಇಮ್ರೋಜ್ ಜತೆಗೆ, ಇಂದಿರಾ ಗಾಂಧಿ, ಅವರ ವಿದೇಶ ಪ್ರವಾಸದ ಸಮಯದಲ್ಲಿನ ಫೋಟೋ, ಕವಿತೆಗಳ ಫ್ರೇಮ್ ಹೀಗೆ ಇಡಿ ಪಡಸಾಲೆಯ ತುಂಬ ಫೋಟೋ ಶೋ ರೂಮ್ ತರಹ ಅಲಂಕಾರಗೊಂಡಿತ್ತು. ಮತ್ತೊಂದು ಕೋಣೆಯಲ್ಲಿ ಇಮ್ರೋಜ್ ಬಿಡಿಸಿದ್ದ ಚಿತ್ರಗಳು. ಕ್ಯಾನವಾಸ್, ವಿವಿಧ ಆಕಾರದ ಕುಂಚಗಳು, ಒಣಗಿಹೋದ ಬಣ್ಣ ಕಲಸುವ ಪ್ಯಾಲೆಟ್ ಅವರು ಈಗ ಪೇಟಿಂಗ್ ಮಾಡುತ್ತಿಲ್ಲ ಎಂಬುದನ್ನು ಹೇಳುತ್ತಿತ್ತು.  ಆಗಲೇ ಎಂಭತ್ತೇಳರ ಆ  ಕಲಾವಿದನಿಗೆ  ಬದುಕಿನ ನಶ್ವರತೆ, ಕ್ಷಣ ಭಂಗುರತೆ, ಒಂಟಿತನ ಒಗ್ಗಿಹೋಗಿತ್ತು ಎನಿಸುತ್ತದೆ. ಹಲವು ಏಳುಬೀಳುಗಳ ಬೆಂಕಿಯಲ್ಲಿ  ಪಕ್ವಗೊಂಡ ಬದುಕಿನ ಒಂಟಿತನವನ್ನು ಆಕೆ ತನ್ನೊಂದಿಗೇ ಇದ್ದಾಳೆನ್ನುವ ವಿಶ್ವಾಸದಲ್ಲಿ, ಆ ವಿಶ್ವಾಸವೇ  ವಾಸ್ತವ ಎನ್ನುವಂತೆ ಜೀವಿಸುತ್ತಿದ್ದ ಇಮ್ರೋಜ್ ಸಂತನಂತಾಗಿದ್ದರು. ಹೀರಳನ್ನು ಜಪಿಸುತ್ತಾ ಜೋಗಿಯಾಗಿ ಹೋದ ರಾಂಝನಂತೆ. ಜೀವದ ಸಂಗಾತಿಯ ನೆನಪಲ್ಲಿಯೇ ಧ್ಯಾನಸ್ಥನಾಗಿರುವಂತಹ ಜೀವಕ್ಕೆ ಇನ್ಯಾವ ಆಶೆ ಆಕಾಂಕ್ಷೆಗಳಿದ್ದಾವು? ನನ್ನಂತೆ ಅದೆಷ್ಟು ಜನ ಅವರನ್ನು ನೋಡಲು, ಅಮೃತಾರ ಬಗ್ಗೆ ಕೇಳಲು ಬರುತ್ತಿದ್ದರೋ ಏನೋ.  ನೂರು ಜನ ಬಂದರೂ ನೂರೂ ಜನರಿಗೆ ಬೇಸರವಿಲ್ಲದೇ ಕೂರಿಸಿಕೊಂಡು ತಮ್ಮ ಪ್ರೇಮಗಾಥೆಯನ್ನು ಹೇಳಬಲ್ಲವರಾಗಿದ್ದರು ಇಮ್ರೋಜ್. ಎಲ್ಲಕ್ಕಿಂತ ಹೃದಯ ಕರಗುವುದೆಂದರೆ ಇಮ್ರೊಜ್ ಅವರು ತಾವೇ ಚಹ ಮಾಡಿ ಟ್ರೇಯಲ್ಲಿಟ್ಟುಕೊಂಡು ತರುವುದು. ಚಹದೊಂದಿಗೆ ಬಿಸ್ಕತ್ತು. ಬಹುಶಃ ಅಮೃತಾರಿಗೆ ಬಹಳ ಇಷ್ಟವಾಗಿದ್ದ ಚಹವನ್ನು ಪ್ರಸಾದದಂತೆ ಸ್ವೀಕರಿಸಿದ ಪುಣ್ಯ ನನ್ನದು. ಇಂತಹ ನಡೆದಾಡುವ ತಾಜಮಹಲನ್ನು ನನಗೆ ತೋರಿಸಿಕೊಟ್ಟ ಡಾ.ಲವ್ಲೀನ್ ಥಡಾನಿ ಅವರಿಗೆ ಮತ್ತು ನನ್ನೆಲ್ಲಾ ಕಾಟಗಳನ್ನು ಸಹಿಸಿ ಇಮ್ರೋಜ್ ಅವರ ಮನೆಯನ್ನು ಹುಡುಕಲು ನೆರವಾದ ನನ್ನ ಮಗನಿಗೂ ಆಭಾರಿಯಾಗಿದ್ದೇನೆ.   

ಇಮ್ರೋಜ್ ಯಾವಾಗಲೂ ಹೇಳುತ್ತಿದ್ದರು ನಾವು ಯಾವತ್ತೂ ಒಬ್ಬರಿಗೊಬ್ಬರು ಐ ಲವ್ ಯೂ ಹೇಳಲಿಲ್ಲ. ಹೇಳುವ ಅಗತ್ಯವೂ ಇದ್ದಿಲ್ಲ. ರಸೀದಿ ಟಿಕೇಟಿನಲ್ಲಿ ಅಮೃತಾ ತಮ್ಮ ಕನಸುಗಳ ಬಗ್ಗೆ ಬರೆದಿದ್ದಾರೆ. ಸಾಯಿ ಕನಸಿನಲ್ಲಿ ಬಂದದ್ದು ಇತ್ಯಾದಿ.  ಅವರು ಹೇಳುವ ಇನ್ನೊಂದು ಕನಸೆಂದರೆ – “ಒಂದು ದೊಡ್ದ ಕಾಡು. ಅದರಲ್ಲೊಂದು ವಿಶಾಲವಾದ ಮಹಲು. ಆ ಮಹಲಿಗಿರುವ ಮೆಟ್ಟಿಲುಗಳನ್ನು ಹತ್ತಿಕೊಂಡು ಅಮೃತಾ ಮೇಲೆ ಹೋಗುತ್ತಾರೆ. ಆ ಮಹಲಿನಲ್ಲಿ ಒಬ್ಬ ಕಲಾವಿದ ಚಿತ್ರಕ್ಕೆ ಬಣ್ಣ ತುಂಬುತ್ತಾ ಕುಳಿತಿದ್ದಾನೆ. ಮುಖ ಕಾಣುತ್ತಿಲ್ಲ. ಇದು ಆಕೆಯನ್ನು ಪದೇ ಪದೇ ಕಾಡುವ ಕನಸು. ಇಮ್ರೋಜ್ ಭೇಟ್ಟಿಯಾದ ಮೇಲೆ ಈ ಕನಸು ಬೀಳುವುದು ನಿಂತುಹೋಯಿತು” ಎನ್ನುತ್ತಾರೆ ಅಮೃತಾ. ’ದೇವರೇ ಸೃಷ್ಟಿಸಿದ ಜೋಡಿ, ರಬ್ ನೇ ಬನಾಯಾ ಜೋಡಾ’ ಅಂತಾರಲ್ಲ ಹಾಗೆ. ಒಬ್ಬರನ್ನೊಬ್ಬರು ಅಷ್ಟೊಂದು ಇಷ್ಟಪಡುತ್ತಿದ್ದೆವು”. ರಸೀದಿ ಟಿಕೇಟಿನಲ್ಲಿ ಅಮೃತಾ ಹೇಳುವ ಆಧೀ ರೋಟಿ, ಆಧಾ ಚಾಂದ್  ಘಟನೆ ಏನು ಹೇಳಿ ಅಂತಾ ಕೇಳಿದ್ದಕ್ಕೆ, ಇಮ್ರೋಜ್‌ ಪಟೇಲ್ ನಗರದ ಕತೆ ಹೇಳತೊಡಗಿದರು.

“ನನಗೆ ಅಮೃತಾ ಸಿಕ್ಕಾಗ, ಆಕೆ ಒಬ್ಬರ ಪತ್ನಿ, ಇಬ್ಬರು ಮಕ್ಕಳ ತಾಯಿ ಹಾಗೂ ಸಾಹಿರ್‌ನ ಪ್ರೇಯಸಿಯಾಗಿದ್ದಳು. ಆದರೆ ನನಗೆ ಇದ್ಯಾವುದೂ ಕಣ್ಣಿಗೆ ಕಾಣಿಸಲೇ ಇಲ್ಲ. ಕೇವಲ ಅಮೃತಾ ಮಾತ್ರ ಗೋಚರಿಸಿದ್ದಳು. ನನಗಾಗಿಯೇ, ನನಗೋಸ್ಕರವೇ ಅಮೃತಾ ಇದ್ದಾಳೆನ್ನುವ ಭಾಸ. ಆಗ ನಾನೂ ಪಟೇಲ್ ನಗರದಲ್ಲಿ ಅವಳ ಮನೆ ಹತ್ತಿರದಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ. ಮಕ್ಕಳು ಕಾಂಡ್ಲಾ ಹಾಗೂ ನವರಾಜ್ ಮಾಡರ್ನ್ ಸ್ಕೂಲಿಗೆ ಹೋಗುತ್ತಿದ್ದರು. ನಾನು ಉರ್ದು ಪತ್ರಿಕೆಗಾಗಿ ಕೆಲಸಮಾಡುತ್ತಿದ್ದೆ. ಕೆಲವೊಮ್ಮೆ ಸ್ಕೂಲ್ ಬಸ್ ಬರುವುದು ತಡವಾಗುತ್ತಿತ್ತು. ಆಗ ನನ್ನ ಹತ್ತಿರ ಸ್ಕೂಟರ್ ಇತ್ತು. ನಾನು ಊಟದ ವೇಳೆಗೆ ಕಚೇರಿ ಬಿಟ್ಟು, ಶಾಲೆಗೆ ಹೋಗಿ ಮಕ್ಕಳನ್ನು ಪಿಕ್ ಮಾಡಿ ನನ್ನ ಸ್ಕೂಟರಿನಲ್ಲಿ ತಂದು ಮನೆಗೆ ಬಿಡುತ್ತಿದ್ದೆ. ಯಹ್ ಕಾಮ್ ಮುಝೆ ಕಿಸೀನೆ ನಹೀ ಕಹಾ… ಮಾಡು ಅಂತಾ ಯಾರೂ ಹೇಳಲಿಲ್ಲ, ನಾನೇ ಸ್ವತಃ ಮಾಡತೊಡಗಿದ್ದೆ. ಮಾಡಬೇಕೆನಿಸಿತು… ಮಾಡತೊಡಗಿದೆ.”

ಅಮೃತಾಳ ಮನೆಯಲ್ಲಿ ಅಡುಗೆಗೆ ನೌಕರರಿದ್ದರು. ಆಕೆ ಯಾವತ್ತೂ ಅಡುಗೆ ಮಾಡಿದ್ದಿಲ್ಲ. ನಾನು ಮಕ್ಕಳನ್ನು ಕರೆತರತೊಡಗಿದಾಗ ಅಮೃತಾ ಸ್ವತಃ ತಾನೇ ಅಡುಗೆ ಮಾಡತೊಡಗಿದಳು. ಬಿಸಿಬಿಸಿ ರೋಟಿಯನ್ನು ಮಾಡಿ, ಮೋಡಾದ ಮೇಲೆ ಕೂರಿಸಿ ತಿನ್ನು ಎಂದು ಉಪಚರಿಸುತ್ತಿದ್ದಳು. ಕೆಲವೊಮ್ಮೆ ಅವಳ ಪತಿ ಪ್ರೀತಂ ಸಿಂಗ್ ಕೂಡ, ನಿನ್ನಿಂದಾಗಿ ಅಮೃತಾಳ ಕೈಯಡುಗೆ ಸಿಗುತ್ತಿದೆ, ನೀನೂ ಊಟ ಮಾಡು – ಎಂದು ನಿಲ್ಲಿಸಿಕೊಳ್ಳುತ್ತಿದ್ದರು.

ಇದೆಲ್ಲ ಕೇಳುತ್ತಿದ್ದರೆ ಅವರೆಷ್ಟು ಪುಣ್ಯವಂತರಾಗಿದ್ದರು ಎನಿಸುತ್ತದೆ. ಇಂದಿನ ಕಾಲದಲ್ಲಿ ಅವರಿಬ್ಬರೂ ಲಿವ್ ಇನ್ ಇದ್ದಿದ್ದರೆ ಅವರನ್ನು ನೆಮ್ಮದಿಯಾಗಿ ಇರಲು ಬಿಡುತ್ತಿತ್ತೇ ಈ ಸಮಾಜ? ಸಮಾಜ ಹೋಗಲಿ ಗಂಡ ಕಿರುಕುಳ ಕೊಡದೇ  ಬಿಡುತ್ತಿದ್ದನೇ? ಆಗಲೂ ಸಮಾಜ ಸುಮ್ಮನಿರಲಿಲ್ಲ. ಸಾಕಷ್ಟು ಟೀಕೆಗಳನ್ನು, ಅಪಮಾನಗಳನ್ನು ಎದುರಿಸಿದ್ದರು.  ಆದರೂ ಅವರಿಬ್ಬರೂ “ನನ್ನ ಸಮಾಜ ನೀನು ನಿನ್ನ ಸಮಾಜ ನಾನು“ ಎಂದು ಇದೇ ನೆಲದಲ್ಲಿ ಗಟ್ಟಿಯಾಗಿ ಕಾಲೂರಿ ನಿಂತು ಬಾಳಿದರು. ಕಾಲೆಳೆಯುವವರು ಆಗಲೂ ಇದ್ದರು. ಇವತ್ತಿನ ಬದಲಾದ ಕಾಲಘಟ್ಟದಲ್ಲಿ ಅಮೃತಾ ಇಮ್ರೋಜರ  ಸಾಂಗತ್ಯವನ್ನು ಇನ್ನೊಂದು ಲೋಕದ ವಿಸ್ಮಯವೆನ್ನುವಂತೆಯೇ ಈ ಜಗತ್ತು ನೋಡುತ್ತಿದೆ. ಆ ಜಗತ್ತಿಗಾಗಿ ಹಂಬಲಿಸುತ್ತಿದೆ.  ಅಂತಹ ನಿರ್ವ್ಯಾಜ್ಯ ಪ್ರೀತಿಗಾಗಿ, ಸಾಂಗತ್ಯಕ್ಕಾಗಿ ಹಾತೊರೆಯುತ್ತಿದೆ.   

ಅಮೃತಾ ಆ ದಿನಗಳಲ್ಲಿ ರೇಡಿಯೋದಲ್ಲಿ ಪಂಜಾಬಿ ಉದ್ಘೋಷಕಿಯಾಗಿ ಕೆಲಸ ಮಾಡುತ್ತಿದ್ದಾಗ ಇಮ್ರೋಜರೇ ಸ್ಕೂಟರ್ ಮೇಲೆ ಹೋಗಿ ಬಿಟ್ಟು ಬರುತ್ತಿದ್ದರು. ರಾತ್ರಿಯಾದರೆ ಆಕಾಶವಾಣಿಯ ವಾಹನ ಅಮೃತಾಳನ್ನು ಮನೆಗೆ ಬಿಡುತ್ತಿತ್ತು. ವಾಹನವಿದ್ದಾಗಲೂ ಇಮ್ರೋಜ್ ದಿನಾ ಸಂಜೆ ಕಚೇರಿ ಮುಗಿಸಿ ಆಕಾಶವಾಣಿಗೆ ಅಮೃತಾಳನ್ನು ಕಾಣಲು ಹೋಗುತ್ತಿದ್ದರು. ಒಮ್ಮೆ ಅವಳ ವಾಹನ ರಾತ್ರಿ ಹತ್ತಾದರೂ ಬರಲಿಲ್ಲ. ಕಾದು ಕಾದು ಕೊನೆಗೆ ಇಮ್ರೋಜ್ “ಚಲೋ ಪೈದಲ್ ಚಲತೇ ಹೈ” ಎನ್ನುತ್ತಾರೆ. ಅಮೃತಾ ಎಲ್ಲಿ? ಯಾಕೆ? ಎಂಬ ಒಂದು ಪ್ರಶ್ನೆಯನ್ನೂ ಕೇಳದೇ ಹೆಜ್ಜೆ ಹಾಕತೊಡಗುತ್ತಾರೆ. ಅವತ್ತು ಬೆಳದಿಂಗಳ ರಾತ್ರಿಯಾಗಿತ್ತು. ಹಾಗೇ ಇಬ್ಬರೂ ಆಕಾಶವಾಣಿಯಿಂದ ಪಟೇಲ್ ನಗರದವರೆಗೂ ಕಾಲು ನಡಿಗೆಯಲ್ಲೇ ಬರುತ್ತಾರೆ. ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಮನೆ ತಲುಪಿದಾಗ ಮಧ್ಯರಾತ್ರಿ. ಎಲ್ಲರೂ ಮಲಗಿಯಾಗಿತ್ತು. ಉಣ್ಣಲು ಉಳಿದದ್ದು ಒಂದೇ ರೊಟ್ಟಿ. ಆಗ ಅಮೃತಾ ಇದ್ದುದರಲ್ಲೇ ಹಂಚಿ ತಿನ್ನೋಣವೆಂದು ಇಬ್ಬರೂ ಅರ್ಧರ್ಧ ರೋಟಿ ತಿಂದರು. ಅವತ್ತು ಮೇಲೆ ಆಗಸದಲ್ಲಿ ಚಂದ್ರನೂ ಅರ್ಧದಷ್ಟೇ ಇದ್ದ”.

ಇಮ್ರೋಜ್ ಈ ಘಟನೆಯನ್ನು ಮೊನ್ನೆ ಮೊನ್ನೆ ನಡೆದಂತೆ ವಿವರಿಸುತ್ತಿದ್ದರು. ನನಗೂ ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಅವರ ಬಾಯಿಂದ ಕೇಳಬೇಕೆನ್ನುವ ಆಸೆ. ಯಾವತ್ತೋ ನಡೆದ ಘಟನೆಗಳು ಕಣ್ಣ ಮುಂದೆ ಮರುಕಳಿಸುತ್ತಿದ್ದವು. ಮಾತುಗಳು ಮೂಕವಾಗಿದ್ದವು. ಅವರು ಏನೇ ಮಾತಾಡಲಿ ಅದು ಅಮೃತಾ ಕುರಿತೇ ಇರುತ್ತಿತ್ತು. “ಪಟೇಲ್ ನಗರದಲ್ಲಿದ್ದಾಗ ಒಮ್ಮೆ ಅಮೃತಾ ನನ್ನ ಟೆರೇಸಿನ ಕೋಣೆಗೆ ಬಂದು ಬಾಗಿಲು ಬಡಿದಳು. ಬಾಗಿಲು ತೆರೆಯುವುದು ಸ್ವಲ್ಪ ತಡವಾಯಿತು. ಆಗ ಅಮೃತಾ ..” ಅಬ್ ತುಮ್ಹಾರಾ ಭೀ ದರವಾಜಾ ಖಟಖಟಾನಾ ಪಡೇಗಾ?” ಎಂದಳಂತೆ. ತಕ್ಷಣವೇ ನಾನು ಕೋಣೆಯ ಚಾವಿಯನ್ನು ಅಮೃತಾ ಕೈಯಲ್ಲಿಟ್ಟುಬಿಟ್ಟೆ.ಇದು ನಿಂದೇ ಮನೆ, ಯಾವಾಗ ಬೇಕಾದರೂ ಬಾ -ಎನ್ನುವಂತೆ. ಇದೇ ಘಟನೆಯ ಬಗ್ಗೆ ನಂತರ ಇಮ್ರೋಜ್ ಬರೆಯುತ್ತಾರೆ.

ಆಕೆ ಬಾಗಿಲು ಬಡಿದಳು
ನಾನು
ಚಾವಿಯ ಗೊಂಚಲನ್ನೇ ಕೊಟ್ಟೆ ಆಕೆಗೆ
ಕೋಣೆ
ಮನೆಯಾಗುವುದನ್ನು
ನೋಡುತ್ತಿತ್ತು…

ಮತ್ತು ನಾನು ಆ ಕಣ್ಣ ಹೊಳಪಿನಲ್ಲಿ
ಪ್ರೀತಿಯುದಿಸುವುದನ್ನು
ನೋಡುತ್ತಿದ್ದೆ…!

“ಕಮರಾ  ಘರ್ ಬನತೇ ದೇಖ ರಹಾ ಥಾ”… “ಕೋಣೆ ಮನೆಯಾಗುವ“ ಎಂಥ ಸುಂದರ ರೂಪಕ. ಎಂಥ ಭರವಸೆಯ ಮಾತು. ಆಳದ ಪ್ರೀತಿ. ಕಲಾವಿದನೊಬ್ಬನನ್ನು ಪ್ರೇಮ ಕವಿಯನ್ನಾಗಿಸಿತು.   

ಇಮ್ರೋಜ್ ಪ್ರಕಾರ  ಸಾಹಿರ್ ಕೇವಲ ಒಂದು ಭ್ರಮೆಯಾಗಿದ್ದ. ಇಮ್ರೋಜ್ ಅಷ್ಟೆ ಅಲ್ಲ ಡಾ.ಅಜೀತ್ ಕೌರ್ ಕೂಡ ಹೀಗೇ ಹೇಳುತ್ತಾರೆ.  ಒಮ್ಮೆ ಸಾಹಿರ್ ಕಾದಂಬರಿಕಾರ, ನಾಟಕಕಾರ, ಲೇಖಕ, ರಂಗ ನಿರ್ದೇಶಕ  ಡಾ. ಬಲವಂತ್ ಗಾರ್ಗಿ ಅವರ ಮನೆಗೆ ಬಂದಿದ್ದಾಗ ಹಲವಾರು ಲೇಖಕರನ್ನು ಗಾರ್‍ಗಿ ಆಮಂತ್ರಿಸಿದ್ದರಂತೆ. ಅಜೀತ್ ಕೌರ್ ಕೂಡ ಅಲ್ಲಿದ್ದರು. ಕೊನೆಯಲ್ಲಿ ಕೌರ್ ಕೇಳಿಯೇ ಬಿಡುತ್ತಾರೆ ಸಾಹಿರ್‌ನನ್ನು- “ಅಮೃತಾ ನಿನ್ನನ್ನು ಇಷ್ಟೊಂದು ಪ್ರೀತಿಸ್ತಾಳೆ, ಏನು ನಿನ್ನ ಅಭಿಪ್ರಾಯ ಏನು, ಮನಸ್ಸಲ್ಲಿ ಏನಿದೆ? ” ಆಗ ಸಾಹಿರ್ ನಕ್ಕು ಮಾತನ್ನು ತೇಲಿಸುತ್ತಾ,“ ನನ್ನ ಕಡೆಯಿಂದ ಏನಿಲ್ಲ, ನನ್ನ ಮನಸ್ಸಲ್ಲಿ ಆ ತರ ಏನಿಲ್ಲ, ಎಲ್ಲಾ ಆಕೆಯ ಕಡೆಯಿಂದಲೇ “ ಎನ್ನುತ್ತಾರೆ. ಅಮೃತಾರ ಬಗ್ಗೆ ಅಪಾರವಾದ ಪ್ರೀತಿ ಕಾಳಜಿ ಇದ್ದ ಅಜೀತ್ ಕೌರ್ ಈ ಮಾತನ್ನು ಕಿವಿಯಾರೆ ಕೇಳಿದ್ದಾರೆ. ಸಾಹಿರ್ ಬಗೆಗಿನ ಅಮೃತಾ ಪ್ರೇಮ ವ್ಯಾಮೋಹ ಎಲ್ಲಾ ಕೇವಲ ಅವಳ ಕಡೆಯಿಂದ ಇದ್ದದ್ದು. ಸಾಹಿರ್ ಕಡೆಯಿಂದಲ್ಲ ಎನ್ನುತ್ತಾರೆ ಅಜೀತ್ ಕೌರ್ ಭಾರವಾದ ಹೃದಯದಿಂದ.   

ಅಮೃತಾ ಸಾಹಿರ್ ನನ್ನು ಹುಚ್ಚಳಂತೆ ಪ್ರೀತಿಸುತ್ತಿದ್ದಳು. ಅವಳಿಗೆ ಸಾಹಿರ್ ಗೀಳು ಎಷ್ಟಿತ್ತೆಂದರೆ, ನಿಂತಲ್ಲಿ, ಕೂತಲ್ಲಿ, ಟೇಬಲ್, ಕುರ್ಶಿ, ಕಾಗದ ಎಲ್ಲೆಂದರಲ್ಲಿ ಬೆರಳಿನಿಂದ ಸಾಹಿರ್….ಸಾಹಿರ್… ಎಂದು ಗೀಚತೊಡಗುತ್ತಿದ್ದಳು. ಅದೇ ಒಂದು ಚಟವಾಗಿಹೋಗಿತ್ತು. ಇಮ್ರೋಜ್ ಯಾವತ್ತೂ ಅವಳ ಖಾಸಗೀ ವಿಷಯಗಳನ್ನು ಕೇಳುತ್ತಿದ್ದಿಲ್ಲ. ಅವಳೂ ನನ್ನನ್ನು ನನ್ನ ಪೇಂಟಿಂಗ್… ಕ್ಯಾನವಾಸ್… ಬಣ್ಣಕ್ಕೆ ಯಾಕೆ ದುಡ್ಡು ಸುರಿತೀಯಾ ಅಂತಾ ಯಾವತ್ತೂ ಪ್ರಶ್ನಿಸುತ್ತಿರಲಿಲ್ಲ. ನಾವು ಯಾವತ್ತೂ ಒಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಯತ್ನಿಸಲಿಲ್ಲ. ಎಲ್ಲಿ ಹೋದೆ? ಯಾರ ಹತ್ತಿರ ಮಾತಾಡಿದೆ? ಈ ತರಾ ಯಾವತ್ತೂ ಪ್ರಶ್ನಿಸಲೂ ಇಲ್ಲ. ನಾನೇನು ಚೌಕಿದಾರನಾ ಇವೆಲ್ಲ ಕೇಳಲು!

“ಒಂದು ವೇಳೆ ಅಮೃತಾ ಜೀ ನಿಮಗೇ ಸಿಗದೇ ಹೋಗಿದ್ದರೇ, ಸಾಹಿರ್ ಮದುವೆಯಾಗಿದ್ದರೇ…?” ಎಂದು ಕೇಳಿದ್ದೆ ಒಮ್ಮೆ.

ಹುಟ್ಟಿನೊಂದಿಗೆ ನನ್ನ

ಹಣೆಬರಹ ಬರೆಯಲಾಗಲಿಲ್ಲ

ಯೌವ್ವನದಲ್ಲಿ ಬರೆಯಲಾಯಿತು

ಅದೂ ಕೂಡ ಕವಿತೆಯಲ್ಲಿ

ನಾನು ಈಗ ಅದನ್ನು ಓದಿದ್ದೇನೆ

ಆದರೆ ನೀನೇಕೆ

ನನ್ನ ವಿಧಿಯ ಕವಿತೆಯನ್ನು

ನಿನ್ನ ಕೊನೆಯ ಕವಿತೆಯನ್ನಾಗಿ ಮಾಡುತ್ತಿದ್ದಿಯೇ

ನಾನಿರುವ ತನಕವೂ

ನಿನ್ನ ಯಾವ ಕವಿತೆಯೂ

ಎಂದಿಗೂ ಕೊನೆಯ ಕವಿತೆಯಾಗಲಾರದು.”

ಬಹುಶಃ ಅವರು ಹುಟ್ಟಿದಾಗಲೇ ವಿಧಿಯಮ್ಮ ಅವರ ಹಣೆಯಲ್ಲಿ ಅಮೃತಾ ಹೆಸರು ಬರೆದ್ದಿದ್ದಿರಬಹುದು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಇಮ್ರೊಜ್ ಎಂಟು ವರ್ಷದ ಹುಡುಗನಾಗಿದಾಗಿನಿಂದಲೂ ಅಮೃತಾರ ಚೆಲುವಾದ ಮೂರ್ತಿಯನ್ನು ಎದೆಯಲ್ಲಿಟ್ಟುಕೊಂಡಿದ್ದರು. ಹಾಡು- ಸಿನೇಮ ಪ್ರಿಯರಾಗಿದ್ದ ಅವರ ತಂದೆ ಯಾವುದೋ ದಿನಪತ್ರಿಕೆಯಲ್ಲಿ ಅಚ್ಚಾಗಿದ್ದ ಅಮೃತಾರ ಪಟವನ್ನು ಗೋಡೆಗೆ ಅಂಟಿಸಿದ್ದರು.     

“ಇಲ್ಲ. ಅವಳು ನನಗೇ ಸಿಗುತ್ತಿದ್ದಳು. ಅದು ನನಗೆ ಗೊತ್ತಿತ್ತು. ಅಕಸ್ಮಾತ್ ಸಾಹಿರ್ ಮನೆಯಲ್ಲಿ ಕೂತು ನಮಾಜ್ ಮಾಡುತ್ತಿದ್ದರೂ ನಾನು ಹೋಗಿ ಹೊತ್ತುಕೊಂಡು ಬರುತ್ತಿದ್ದೆ” ಇಮ್ರೋಜ್ ಅದೇ ತುಂಟತನದಲ್ಲಿ ಹೇಳುತ್ತಿದ್ದದ್ದು ಈಗಲೂ ಕಿವಿಯಲ್ಲಿ ಅನುರಣಿಸುತ್ತದೆ.

ಹೀಗೆ ಹೇಳುವ ಇಮ್ರೊಜ್ ಅವರ ಪ್ರೇಮದ ಪರಿಗೆ ವಿಸ್ಮಯ ಪಡುತ್ತೇನೆ. ಮೂಕವಾಗುತ್ತೇನೆ. ಅವರು ಈ ಲೋಕದ ವ್ಯಕ್ತಿಯಲ್ಲವೇ ಅಲ್ಲ. ಬೇರೊಂದು ಲೋಕದಿಂದ ದೇವರೇ ಅಮೃತಾರಿಗಾಗಿ ಕಳಿಸಿದ ದೂತನೆನೋ ಎನಿಸುತ್ತದೆ.  

ಪ್ರೇಮ ಅತ್ಯಂತ ಸರಳ

ಆರಾಧನೆ

ಹರಿಯುವ ನೀರಿನಂತಹದ್ದು

ಯಾವುದೇ ಪದಗಳ ಅಗತ್ಯವಿಲ್ಲ

ಯಾವುದೇ ಭಾಷೆಗೆ ಸೀಮಿತವಿಲ್ಲ

ಯಾವುದೇ ಸಮಯದ ಬಂಧನವಿಲ್ಲ

ಮತ್ತು ಯಾರಿಗಾದರೂ ತಲೆಬಾಗುವ

ಯಾವ ಬಾಧ್ಯತೆಯೂ ಇಲ್ಲ

ಪ್ರೀತಿಯಿಂದ ಬದುಕುತ ಬದುಕುತ್ತ

ಈ ಆರಾಧನೆ ತಂತಾನೇ

ಪ್ರತಿಕ್ಷಣವೂ ನಡೆಯುತ್ತಲೇ ಇರುತ್ತದೆ

ಹಾಗೂ  ಎಲ್ಲಿ ತಲುಪಬೇಕೋ

ಅಲ್ಲಿ ತಲುಪುತ್ತಿರುತ್ತದೆ ಇಮ್ರೋಜ್ ಬದುಕೇ ಒಂದು ಆರಾಧನೆಯಂತೆ.  ನಮ್ಮ ಕನ್ನಡದ ಕವಿ ಕೆ ಎಸ್ ನರಸಿಂಹಸ್ವಾಮಿ ಅವರು – ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ, ನಿನ್ನೊಳಿದೆ ನನ್ನ ಮನಸು” ಎಂದು ಎಷ್ಟು ಸುಂದರವಾಗಿ ಹೇಳಿದ್ದಾರೆ.   ಸದಾ ಅವಳೊಳಗೇ ಉಸಿರಾಡಿದ ಇಮ್ರೋಜ್ರರನ್ನು ಪ್ರೇಮ ಕವಿಯಾಗಿಸಿತು. ಬದುಕಿನ ಕ್ಯಾನವಾಸ್ ತುಂಬ ಅಮೃತಾ ಎಂಬ ಜೀವನದಿಯ ಕಲರವವನ್ನು, ಅಗಣಿತ ಬಣ್ಣಗಳನ್ನು ತುಂಬಿದರು. ಎದೆಗಿಳಿದ ಭಾವಗಳನ್ನು ಅಕ್ಷರಗಳಲ್ಲಿ ಸೆರೆಹಿಡಿದು ಕಾಗದದಲ್ಲಿ ಮೂಡಿಸುವುದನ್ನು ಕಲಿತರು.     

ಜಿಂದಗಿ ತಸ್ವೀರ ಭಿ ಹೈ

ತಕದೀರ ಭಿ

ಮನ್ ಚಾಹೇ ರಂಗೋ ಸೇ

ಬನ್ ಜಾಯೇ ತೋ ತಸ್ವೀರ್

ಅನಚಾಹೇ ರಂಗೋ ಸೇ

ಬನ್ ಜಾಯೇ ತೋ ತಕದೀರ್

ಜೀವನ ಒಂದು ಚಿತ್ರವೂ ಹೌದು

ವಿಧಿಯೂ ಹೌದು

ಮನಸ್ಸಿಗೆ ಇಷ್ಟವಾದ ಬಣ್ಣಗಳಿಂದ

ಆದರೆ ಅದು ಚಿತ್ರವಾಗುತ್ತದೆ

ಇಷ್ಟವಿಲ್ಲದ ಬಣ್ಣಗಳಿಂದ ಆದರೆ

ಅದು ವಿಧಿಯಾಗುತ್ತದೆ

<<<<<<< 

ಎಚ್ಚರವುಳ್ಳವನಿಗೆ

ಜೀವನ ಪ್ರತಿ ತಿರುವಿನಲ್ಲೂ

ಕಾಯುತ್ತಲೇ ಎದುರಾಗುತ್ತದೆ

ನಿದ್ರಿಸುತ್ತಿರುವವನನ್ನು

ಜೀವನ ಮೌನವಾಗಿ

ಬೈಪಾಸ್ ಮಾಡಿ

ಮುಂದೆ ಸಾಗುತ್ತದೆ

>>>>>>>>>>>>>>>>> 

ಗ್ರಂಥಗಳಲ್ಲಿ ಧರ್ಮ

ಸಂಸ್ಕೃತಿಯ ಕಾರಣವಾಗಿತ್ತು

ಆದರೆ ಜೀವನದಲ್ಲಿ

ದ್ವೇಷದ ಕಾರಣವಾಗಿಬಿಟ್ಟಿದೆ

ಯಾರು ಯಾರ ಮಾತು ಕೇಳಬೇಕು?

ಗ್ರಂಥಗಳದ್ದೇ

ಅಥವಾ ಜೀವನದ್ದಾ?

>>>>>>>>> 

ಐದು ನದಿಗಳ ಮಗಳು

ಭೂಮಿಯ ಕಸೂತಿಯ

ಎಲ್ಲಾ ಬಣ್ಣಗಳನ್ನು ಸೇರಿಸಿ

ಹರಿಯುವ ನೀರಿನಂತೆ

ಕವಿತೆ ಕವಿತೆ ಬರೆಯುತ್ತಾ ಬರೆಯುತ್ತಾ ಇದ್ದಳು

ಬದುಕಿನ

ಕಾಗದದ ಮೇಲೆ

>>>>>>>> 

ಕಾನೂನು

ಒಬ್ಬ ಅಪರಿಚಿತ ಪುರುಷ ಮತ್ತು ಮಹಿಳೆಗೆ

ಸಂಬಂಧ ಕಟ್ಟಿಕೊಳ್ಳಲು

ಕೇವಲ ಅವಕಾಶ ನೀಡುತ್ತದೆ

ಸಂಬಂಧವನ್ನೇ ಅಲ್ಲ

ಸಂಬಂಧ ಮೂಡುತ್ತದೋ ಇಲ್ಲವೋ

ಅದರ ಬಗ್ಗೆ ಕಾನೂನು

ತಲೆಕೆಡಿಸಿಕೊಳ್ಳುವುದಿಲ್ಲ

ಹಾಗೇ ಅದರ ಜವಾಬ್ದಾರಿಯನ್ನೂ

ತೆಗೆದುಕೊಳ್ಳುವುದಿಲ್ಲ

>>>>>>>> 

ಜೊತೆಗೆ ನಡೆಯುತ್ತಾ ನಡೆಯುತ್ತಾ ಒಂದು ದಿನ  ಅಮೃತಾ ಇಮ್ರೊಜರನ್ನು  ಕೇಳಿದ್ದಳು— 

“ನೀನು ಯಾವಾಗಲಾದರೂ ‘woman with mind’

ಎಂಬ ಚಿತ್ರವನ್ನು ಬಿಡಿಸಿದ್ದೀಯಾ?”

ನಡೆಯುತ್ತಾ ನಾನು ನಿಂತುಹೋದೆ

ನನ್ನೊಳಗೆ ನೋಡಿದೆ, ಹೊರಗೆ ನೋಡಿದೆ

ಉತ್ತರ ಎಲ್ಲಿಯೂ ಇರಲಿಲ್ಲ

ಎಲ್ಲ ದಿಕ್ಕುಗಳನ್ನೂ ನೋಡಿದೆ—

ಪ್ರತಿ ದಿಕ್ಕಿನತ್ತ ನೋಡಿ ಕಾದೆ

ಆದರೆ ಯಾವ ಧ್ವನಿಯೂ ಬಂದಿಲ್ಲ, ಎಲ್ಲಿಂದಲೂ ಉತ್ತರ ಸಿಗಲಿಲ್ಲ

ಉತ್ತರ ಹುಡುಕುತ್ತಾ ಹುಡುಕುತ್ತಾ

ನಡೆಯುತ್ತಾ ಹೋಗಿ ತಲುಪಿದೆ—

ಚಿತ್ರಕಲೆಯ ಕ್ಲಾಸಿಕ್‌ ಕಾಲಕ್ಕೆ

ಅಮೃತಾ ಕೇಳಿದ ಆ ಪ್ರಶ್ನೆಯಲ್ಲಿರುವ ಮಹಿಳೆ

ಮಹಿಳೆಯ ಒಳಗಿನ ಚಿಂತನೆ

ಆ ಚಿಂತನೆಯ ಬಣ್ಣಗಳು

ಯಾವುದೇ ಚಿತ್ರದಲ್ಲಿ ಕಾಣಿಸಲಿಲ್ಲ

ಯಾವುದೇ ಕಲಾ ಗ್ರಂಥದಲ್ಲೂ ನನಗೆ ಸಿಗಲಿಲ್ಲ

ಆ ಮಹಿಳೆಯೂ, ಆಕೆಯ ಚಿಂತನೆಯೂ

ಅದನ್ನು ಹುಡುಕಲು ಪ್ರಯತ್ನಿಸಿದೆ—

ಹೌದು,

ನೋಡುತ್ತಾ ನೋಡುತ್ತಾ ಆಶ್ಚರ್ಯವಾಯಿತು

ಯಾವ ಚಿತ್ರಕಾರನೂ ಮಹಿಳೆಯನ್ನು ದೇಹಕ್ಕಿಂತ ಹೆಚ್ಚಾಗಿ

ಕಂಡಂತಿಲ್ಲ, ಬಿಡಿಸಿದಂತಿಲ್ಲ

ಪೂರ್ಣ ಮಹಿಳೆ ದೇಹಕ್ಕಿಂತ ಮಿಗಿಲಾದವಳು

ದೇಹದ ಜೊತೆ ಮಲಗಬಹುದು

ಆದರೆ ದೇಹದ ಜೊತೆ ಮಾತ್ರ ಜಾಗೃತರಾಗಲು ಸಾಧ್ಯವಿಲ್ಲ

ಒಂದು ವೇಳೆ ಚಿತ್ರಕಾರರು ಸಂಪೂರ್ಣ ಮಹಿಳೆಯ ಜೊತೆ ಜಾಗೃತರಾಗಿ

ನೋಡಿದ್ದರೆ

ಚಿತ್ರಕಲೆ ಇನ್ನಷ್ಟು ಬದಲಾಗುತ್ತಿತ್ತು—ಇಲ್ಲಿಯವರೆಗೆ

ಮಾಡರ್ನ್‌ ಆರ್ಟ್‌ನಲ್ಲಿ ಯಾವುದೂ ಸಂಪೂರ್ಣ ಉಳಿದಿಲ್ಲ—

ಮಹಿಳೆಯೂ ಇಲ್ಲ,

ಪುರುಷನೂ ಇಲ್ಲ,

ಚಿಂತನೆಯೂ ಇಲ್ಲ…

ಒಮ್ಮೆ ಪುರುಷನು ಸಹ ಮಹಿಳೆಯ ಜೊತೆ ಜಾಗೃತರಾಗಿ ನೋಡಿದ್ದರೆ

ಜೀವನವೇ ಬದಲಾಗುತ್ತಿತ್ತು

ಬದುಕಲು ಯೋಗ್ಯವಾದ ಜೀವನವಾಗುತ್ತಿತ್ತು

ಅವನದ್ದೂ,ಅವನ ಪೀಳಿಗೆಯದ್ದೂ ಸಹ…

ಹೀಗೆ ಇಮ್ರೊಜ್ ಮಾತ್ರ ಯೋಚಿಸಬಲ್ಲರು. ಪುರುಷ  ಮಹಿಳೆಯ ದೇಹದಾಚೆಗಿನ ಸಖ್ಯವನ್ನು, ಪರಿಪೂರ್ಣ ಮಹಿಳೆಯ ಚಿತ್ರಣವನ್ನು ದಾರ್ಶನಿಕನಂತೆ ವ್ಯಾಖ್ಯಾನಿಸಿದ, ಅಮೃತಾರನ್ನೇ ಉಸಿರಾಡಿದ, ಅಮೃತಾರನ್ನೇ ಬದುಕಿದ, ನಿರ್ಗಮನದ ನಂತರವೂ ಅಮೃತಾರನ್ನು ಸಜೀವವಾಗಿಟ್ಟ ಇಮ್ರೋಜ್ ಈಗಿಲ್ಲ. ಇಹಲೋಕವನ್ನು ತ್ಯಜಿಸಿ ನಕ್ಷತ್ರಲೋಕವನ್ನು ಸೇರಿದ್ದಾರೆ.  ಕೊನೆಗೂ ಅವರ ಜೀವ “ಮೈ ತೆನೂ ಫಿರ್ ಮಿಲಾಂಗಿ” -ನಾ ನಿನಗೆ ಮತ್ತೆ ಸಿಗುವೆ” ಎಂದ ಅಮೃತಾರ ಆತ್ಮವನ್ನು ಸೇರಿಕೊಂಡಿದೆ. “ಆಕೆ ದೇಹ ತ್ಯಜಿಸಿದ್ದಾಳೆಯೇ ಹೊರತು ನನ್ನ ಸಂಗಾತ ತೊರೆದಿಲ್ಲ” ಎಂದೇ ನಂಬಿ ಬದುಕಿದ ಈ ಪ್ರೇಮಿಗೊಂದು ಅಶ್ರುತರ್ಪಣ, ಭಾವಪೂರ್ಣ ಶ್ರದ್ಧಾಂಜಲಿ. ಈ ಪ್ರೇಮದ ಕತೆ ಇಲ್ಲಿಗೇ ಮುಗಿಯುವುದಿಲ್ಲ ಎಲ್ಲಿಯವರೆಗೆ ಪ್ರೇಮಿಗಳು ಈ ಭೂಮಿಯ ಮೇಲೆ ಇರುತ್ತಾರೋ ಅಲ್ಲಿಯವರೆಗೆ ಪ್ರತಿಯೊಬ್ಬ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ಇರುತ್ತಾರೆ ಈ ಜೀವಗಳು.  

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ ʼನೀರೋʼ; ಭಾರತ ಉರಿಯುತ್ತಿರುವಾಗ ಭಜನೆ ಮಾಡಿದ ʼಮೋದಿʼ!

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

KPSC ಹಗರಣ | ಅಮಾನತಿನಲ್ಲಿರುವ ಐಎಎಸ್‌ ಗಂಗ್ವಾರ್‌ಗೆ ಜಾಮೀನು ನಿರಾಕರಣೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ...

ಏಕಪಕ್ಷೀಯ ನಿರ್ಧಾರ ವಿವಾದದ ಬೆನ್ನಲ್ಲೇ ಸಭೆ: ಸರ್ವಮತದಿಂದ ತೀಮಾರ್ನಗಳ ತಗೆದುಕೊಂಡಿದ್ದು ಎಂದ ಇಸಿಐ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ...