ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(KIADB)ವತಿಯಿಂದ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ,ಕಾನೂನು ಸುವ್ಯವಸ್ಥೆ ಕಾಪಾಡಬೇಕು ಹಾಗೂ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಂತಾಮಣಿ ತಾಲೂಕು ಘಟಕ ವತಿಯಿಂದ ತಾಲೂಕು ದಂಡಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷರಾದ ಹೆಚ್ಎನ್ ಕದಿರೇಗೌಡ ಸಚಿವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವವರು ಒಂದೆಡೆ ಕೈಗಾರಿಕೆ ಬೇಡ ಎನ್ನುತ್ತಾರೆ,ಇನ್ನೊಂದೆಡೆ ಅಭಿವೃದ್ಧಿ ಬೇಕು ಎನ್ನುತ್ತಾರೆ.ಇಂತಹ ದ್ವಂದ್ವ ನಿಲುವುಗಳ ಮೂಲಕ ಸಾರ್ವಜನಿಕರನ್ನು ಹಾದಿ ತಪ್ಪಿಸಲಾಗುತ್ತಿದೆ.
ಜಂಗಮಕೋಟೆ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಗುರುತಿಸಲಾಗಿದ್ದ 2,823 ಎಕರೆ ಭೂಮಿಯಲ್ಲಿ, ಸುಮಾರು 550 ಎಕರೆ ಕೃಷಿ ಭೂಮಿಯನ್ನು ಕೈಬಿಡುವಂತೆ ರೈತರು ಮನವಿ ಮಾಡಿದ್ದರು.ರೈತರ ಹಿತದೃಷ್ಟಿಯಿಂದ ಸಚಿವರಾದ ಸುಧಾಕರ್ ಕೈಗಾರಿಕಾ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ 550 ಎಕರೆ ಕೃಷಿ ಭೂಮಿಯನ್ನು ಕೈಬಿಟ್ಟು ಆದೇಶಿಸಿದ್ದಾರೆ ಎಂದು ಹೇಳಿದ ಅವರು ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯಲ್ಲಿ ಒಟ್ಟು 2823 ಎಕರೆ ಪ್ರದೇಶವನ್ನು ಕೈಗಾರಿಕಾ ಅಭಿವೃದ್ಧಿಗಾಗಿ ಗುರುತಿಸಲಾಗಿತ್ತು.ಈ ಪೈಕಿ 550 ಎಕರೆ ನೀರಾವರಿ ಪ್ರದೇಶವನ್ನು ಕೈಬಿಟ್ಟು,ಉಳಿದ 2270 ಎಕರೆ ಭೂಮಿಯನ್ನು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಕಳೆದ ಏಪ್ರಿಲ್ 29ರಂದು ನಡೆದ ಪ್ರತಿಭಟನೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಬಣದವರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಂಘಟನೆಯು ತೀವ್ರವಾಗಿ ಖಂಡಿಸಿದೆ.
ಭೂ ಮಾಫಿಯಾದವರು ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಶಾಂತಿಯುತ ವಾತಾವರಣವನ್ನು ಕೆಡಿಸುತ್ತಿದ್ದು,ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು ಸರ್ಕಾರಕ್ಕೆ ಜಮೀನು ನೀಡುವ ರೈತರಿಗೆ ಸೂಕ್ತ ಮಾರುಕಟ್ಟೆ ದರದ ಭೂ ಪರಿಹಾರ,ಕುಟುಂಬದ ಒಬ್ಬರಿಗೆ ಕಾಯಂ ಉದ್ಯೋಗ ಹಾಗೂ ಜಮೀನು ನೀಡಲು ಇಚ್ಛಿಸದ ರೈತರಿಗೆ ಬದಲಿ ಜಮೀನು ನೀಡಬೇಕು ಎಂದು ರೈತ ಸಂಘ ಒತ್ತಾಯಿಸಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಚಿಕ್ಕಬಳ್ಳಾಪುರ | ದ್ರಾಕ್ಷಿಗೆ ಬಂಪರ್ ಬೆಲೆ-ರೈತರ ಮೊಗದಲ್ಲಿ ಹರ್ಷ – ಈ ದಿನ.ಕಾಮ್
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಏ ಪ್ರತೀಶ್,ಜಿಲ್ಲಾ ಸಂಚಾಲಕರಾದ ಹುಸೇನ್ ಸಾಬಿ,ರಾಜ್ಯ ಉಪಾಧ್ಯಕ್ಷರಾದ ಬಿ ಕೆ ಮುನಿಕೆಂಪಣ್ಣ,ರಾಜ್ಯ ವಲಯ ಅಧ್ಯಕ್ಷರಾದ ರಘುನಾಥರೆಡ್ಡಿ,ವೆಂಕಟೇಶಪ್ಪ, ನಾರಾಯಣಮೂರ್ತಿ,ಅಂಜನಪ್ಪ,ರಮೇಶ್,ನರಸಿಂಹಮೂರ್ತಿ,ಶ್ರೀರಾಮರೆಡ್ಡಿ,ನಾಗರಾಜ್,ರಾಮಚಂದ್ರರೆಡ್ಡಿ,ನಾರಾಯಣಸ್ವಾಮಿ ಎಂವಿ,ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.




