ಪಕ್ಷದ ಹೊಸ ಐಟಿ ಸೆಲ್ ಮುಖ್ಯಸ್ಥರಾಗಿರುವ ದೀಪಕ್ ಮ್ಹಾಸ್ಕೆ ಅವರ ಅಧಿಕೃತ ಎಕ್ಸ್ ಖಾತೆಯಿಂದಲೂ ಏಕಾಏಕಿ ಸಾವಿರಾರು ಹಳೆಯ ಪೋಸ್ಟ್‌ಗಳು ಮರೆಯಾಗಿವೆ. ಛತ್ತೀಸ್‌ಗಢ ರಾಜ್ಯದಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಸಾಮಾಜಿಕ ಜಾಲತಾಣ ನಿರ್ವಹಿಸಿದ ಮತ್ತು ವಿವಿಧ ಚುನಾವಣೆಗಳಲ್ಲಿ ತಂತ್ರಗಾರಿಕೆ ರೂಪಿಸಿದ ಅನುಭವ ಹೊಂದಿರುವ ಇವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಧರ್ಮವನ್ನು ಪ್ರಶ್ನಿಸುವ ಹಾಗೂ ವಿಪಕ್ಷ ನಾಯಕರನ್ನು ಗುರಿಯಾಗಿಸಿ ಟೀಕಿಸಿದ್ದ ಹಳೆಯ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ
ಬಿಜೆಪಿ ತನ್ನ ರಾಷ್ಟ್ರೀಯ ಸಾಮಾಜಿಕ ಜಾಲತಾಣ ವಿಭಾಗ ಹಾಗೂ ನೂತನ ಪದಾಧಿಕಾರಿಗಳ ನೇಮಕವಾದ ನಂತರ ಹೊಸದಾಗಿ ಆಯ್ಕೆಯಾದ ನಾಯಕರು ತಮ್ಮ ವಿವಾದಾತ್ಮಕ ಪೋಸ್ಟ್‌ಗಳನ್ನು ದಿಡೀರ್ ಅಳಿಸಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದಲೂ ಪಕ್ಷದ ಡಿಜಿಟಲ್ ಪ್ರಚಾರ ಮತ್ತು ಐಟಿ ಸೆಲ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ಅಮಿತ್ ಮಾಳವೀಯ ಅವರನ್ನು ಆ ಸ್ಥಾನದಿಂದ ಬದಲಾಯಿಸಲಾಗಿದೆ. ಅವರ ಜಾಗಕ್ಕೆ ಛತ್ತೀಸ್‌ಗಢ ಮೂಲದ ದೀಪಕ್ ಮ್ಹಾಸ್ಕೆ ಅವರನ್ನು ನೂತನ ರಾಷ್ಟ್ರೀಯ ಸೋಶಿಯಲ್ ಮೀಡಿಯಾ ಸಂಚಾಲಕರನ್ನಾಗಿ ಪಕ್ಷದ ವರಿಷ್ಠರು ನೇಮಿಸಿದ್ದಾರೆ. ಇವರೊಂದಿಗೆ ಪ್ರೀತಿ ಗಾಂಧಿ, ಅಲೋಕ್ ಭಟ್, ಅರುಣ್ ಯಾದವ್ ಮತ್ತು ಶಿವಾನಂದ್ ದ್ವಿವೇದಿ ಅವರನ್ನು ಹೊಸ ಸಹ-ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಹೊಸ ತಲೆಮಾರಿನ ಯುವಜನರನ್ನು (Gen Z) ಡಿಜಿಟಲ್ ಮಾಧ್ಯಮದ ಮೂಲಕ ಪಕ್ಷದತ್ತ ಸೆಳೆಯುವ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಈ ನೂತನ ನೇಮಕಾತಿಗಳನ್ನು ಮಾಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಆದರೆ, ಕುತೂಹಲಕಾರಿ ಸಂಗತಿ ಎಂದರೆ, ಈ ಹೊಸ ಐಟಿ ತಂಡದ ನೇಮಕ ಅಧಿಕೃತವಾಗಿ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ನೂತನ ಪದಾಧಿಕಾರಿಗಳ ಎಕ್ಸ್ (ಹಳೆಯ ಟ್ವಿಟರ್) ಖಾತೆಗಳು ದಿಢೀರ್ ಆಗಿ ನಿಷ್ಕ್ರಿಯಗೊಂಡಿವೆ ಅಥವಾ ಯಾರಿಗೂ ಕಾಣದಂತೆ ಖಾಸಗಿಯಾಗಿ (Private) ಬದಲಾಗಿವೆ. ಈ ನಾಯಕರು ಈ ಹಿಂದೆ ಮಾಡಿದ್ದ ತೀವ್ರ ವಿವಾದಾತ್ಮಕ, ಪ್ರಚೋದನಾತ್ಮಕ, ಮಹಿಳಾ ವಿರೋಧಿ, ಜಾತಿವಾದಿ ಹಾಗೂ ಕೋಮುವಾದಿ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ವಿವಾದಗಳು ಮುನ್ನೆಲೆಗೆ ಬರುತ್ತಿದ್ದಂತೆಯೇ, ಸಾರ್ವಜನಿಕ ಮುಜುಗರದಿಂದ ತಪ್ಪಿಸಿಕೊಳ್ಳಲು ಮತ್ತು ತಮ್ಮ ಹಿಂದಿನ ವಿವಾದಾತ್ಮಕ ಡಿಜಿಟಲ್ ಹೆಜ್ಜೆಗುರುತುಗಳನ್ನು ಅಳಿಸಿಹಾಕುವ ಪ್ರಯತ್ನವನ್ನು ಈ ಹೊಸ ತಂಡ ಮಾಡಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಪಕ್ಷದ ಹೊಸ ಐಟಿ ಸೆಲ್ ಮುಖ್ಯಸ್ಥರಾಗಿರುವ ದೀಪಕ್ ಮ್ಹಾಸ್ಕೆ ಅವರ ಅಧಿಕೃತ ಎಕ್ಸ್ ಖಾತೆಯಿಂದಲೂ ಏಕಾಏಕಿ ಸಾವಿರಾರು ಹಳೆಯ ಪೋಸ್ಟ್‌ಗಳು ಮರೆಯಾಗಿವೆ. ಛತ್ತೀಸ್‌ಗಢ ರಾಜ್ಯದಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಸಾಮಾಜಿಕ ಜಾಲತಾಣ ನಿರ್ವಹಿಸಿದ ಮತ್ತು ವಿವಿಧ ಚುನಾವಣೆಗಳಲ್ಲಿ ತಂತ್ರಗಾರಿಕೆ ರೂಪಿಸಿದ ಅನುಭವ ಹೊಂದಿರುವ ಇವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಧರ್ಮವನ್ನು ಪ್ರಶ್ನಿಸುವ ಹಾಗೂ ವಿಪಕ್ಷ ನಾಯಕರನ್ನು ಗುರಿಯಾಗಿಸಿ ಟೀಕಿಸಿದ್ದ ಹಳೆಯ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಪ್ರಸ್ತುತ ಅವರ ಖಾತೆಯ ಟೈಮ್‌ಲೈನ್‌ನಲ್ಲಿ ಕೇವಲ ಅವರ ನೇಮಕಾತಿಗೆ ಸಂಬಂಧಿಸಿದ ಇತ್ತೀಚಿನ ಪೋಸ್ಟ್‌ಗಳು ಮಾತ್ರ ಸಾರ್ವಜನಿಕರಿಗೆ ಕಾಣುವಂತೆ ಲಭ್ಯವಿವೆ. ಹುದ್ದೆ ಸಿಕ್ಕ ಕೂಡಲೇ ತಮ್ಮ ಹಳೆಯ ಪೋಸ್ಟ್‌ಗಳನ್ನು ಡಿಲೀಟ್ ಮಾಡುವ ಮೂಲಕ ಅವರು ತೀವ್ರ ಮುನ್ನೆಚ್ಚರಿಕೆ ವಹಿಸಿದ್ದಾರೆ.

ಸಹ-ಸಂಚಾಲಕಿಯಾಗಿ ನೇಮಕಗೊಂಡಿರುವ ಪ್ರೀತಿ ಗಾಂಧಿ ಅವರ ಎಕ್ಸ್ ಖಾತೆ ಸಂಪೂರ್ಣವಾಗಿ ನಾಪತ್ತೆಯಾಗಿದ್ದು, “ಈ ಖಾತೆ ಅಸ್ತಿತ್ವದಲ್ಲಿಲ್ಲ” ಎಂಬ ಸಂದೇಶ ಬರುತ್ತಿದೆ. ಈ ಹಿಂದೆ ಅವರು ಮಾಡಿದ್ದ ಅನೇಕ ಪೋಸ್ಟ್‌ಗಳು ತೀವ್ರ ವಿವಾದ ಸೃಷ್ಟಿಸಿದ್ದವು. ಅದರಲ್ಲೂ ವಿಶೇಷವಾಗಿ ಮಹಾತ್ಮ ಗಾಂಧಿಯವರ ಹಂತಕ ನಾಥೂರಾಮ್ ಗೋಡ್ಸೆಯನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬೆಂಬಲಿಸಿ ಮಾಡಿದ್ದ ಪೋಸ್ಟ್‌ಗಳು ಈಗ ಮತ್ತೆ ಮುನ್ನೆಲೆಗೆ ಬಂದಿವೆ. ಆ ಪೋಸ್ಟ್‌ನಲ್ಲಿ ತಮಗೆ ‘ಗಾಂಧಿ’ ಎಂಬ ಸರ್ನೇಮ್ ಇರುವುದಕ್ಕೆ ನಾಚಿಕೆಯಾಗುತ್ತಿದೆ ಮತ್ತು ತಮ್ಮ ಹೆಸರು ‘ಗಾಂಧಿ’ ಬದಲು ‘ಗೋಡ್ಸೆ’ ಎಂದಿರಬೇಕಿತ್ತು ಎಂದು ಅವರು ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ, ಭಾರತೀಯ ಮಹಿಳಾ ಕ್ರಿಕೆಟರ್ ಜೆಮಿಮಾ ರಾಡ್ರಿಗಸ್ ಅವರ ಬಗ್ಗೆಯೂ ಇವರು ಈ ಹಿಂದೆ ವಿವಾದಾತ್ಮಕ ಟ್ವೀಟ್ ಮಾಡಿದ್ದರು.

ಮತ್ತೊಬ್ಬ ಸಹ-ಸಂಚಾಲಕ ಅಲೋಕ್ ಭಟ್ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿದ್ದಾರೆ (Deactivate). ಇವರು ಮಹಿಳಾ ರಾಜಕಾರಣಿಗಳು ಹಾಗೂ ಪತ್ರಕರ್ತೆಯರ ವಿರುದ್ಧ ಅತ್ಯಂತ ಕೀಳು ಮಟ್ಟದ, ಮಹಿಳಾ ವಿರೋಧಿ ಭಾಷೆ ಬಳಸಿದ್ದರು. ಇದಲ್ಲದೆ, ಮುಸ್ಲಿಂ ಮತಬ್ಯಾಂಕ್ ಮತ್ತು ಮತದಾನದ ಹಕ್ಕೇ ನಮ್ಮೆಲ್ಲ ಸಮಸ್ಯೆಗಳ ಮೂಲ ಎಂದು ಅವರು ಹೇಳಿದ್ದರು. ಇನ್ನೊಂದು ಪೋಸ್ಟ್‌ನಲ್ಲಿ, “ಭಾರತದಲ್ಲಿ ಜಿಹಾದ್ ನಂತರ ದೇಶವನ್ನು ಕಾಡುತ್ತಿರುವ ಎರಡನೇ ಅತಿದೊಡ್ಡ ಕ್ಯಾನ್ಸರ್ ಎಂದರೆ ಅದು ಮೀಸಲಾತಿ ವ್ಯವಸ್ಥೆ” ಎಂದು ಮೀಸಲಾತಿ ವಿರುದ್ಧ ಅತ್ಯಂತ ಪ್ರಚೋದನಾತ್ಮಕವಾಗಿ ಅಲೋಕ್ ಭಟ್ ಟ್ವೀಟ್ ಮಾಡಿದ್ದು ಭಾರಿ ಆಕ್ರೋಶಕ್ಕೆ ಮತ್ತು ಟೀಕೆಗೆ ಗುರಿಯಾಗಿದೆ.

ಇನ್ನುಳಿದ ಸಹ-ಸಂಚಾಲಕರಾದ ಅರುಣ್ ಯಾದವ್ ಮತ್ತು ಶಿವಾನಂದ್ ದ್ವಿವೇದಿ ಅವರುಗಳು ಸಾರ್ವಜನಿಕ ಟೀಕೆಗೆ ಹೆದರಿ ತಮ್ಮ ಎಕ್ಸ್ ಖಾತೆಗಳನ್ನು ಪ್ರೈವೇಟ್ (ಖಾಸಗಿ) ಮಾಡಿದ್ದಾರೆ. ಈ ಪೈಕಿ ಅರುಣ್ ಯಾದವ್ ಅವರು 2022ರಲ್ಲಿ ಹರಿಯಾಣ ರಾಜ್ಯದ ಐಟಿ ಸೆಲ್ ಮುಖ್ಯಸ್ಥರಾಗಿದ್ದಾಗ ಇಸ್ಲಾಂ ವಿರೋಧಿ ಮತ್ತು ಕೋಮುವಾದಿ ಪೋಸ್ಟ್‌ಗಳನ್ನು ಮಾಡಿದ್ದಕ್ಕಾಗಿ ತೀವ್ರ ವಿರೋಧ ಎದುರಿಸಿದ್ದರು. ಆಗಿನ ಜನಾಕ್ರೋಶಕ್ಕೆ ಮಣಿದು ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಇದೀಗ ಅಂತಹುದೇ ಹಿನ್ನೆಲೆ ಹೊಂದಿರುವ ವ್ಯಕ್ತಿಗೆ ಮತ್ತೆ ರಾಷ್ಟ್ರೀಯ ಮಟ್ಟದ ಮಹತ್ವದ ಜವಾಬ್ದಾರಿ ನೀಡಿರುವುದು ವಿಪಕ್ಷಗಳ ಚರ್ಚೆಗೆ ಗ್ರಾಸವಾಗಿದೆ. ಈ ಹಳೆಯ ವಿವಾದಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಅವರು ಖಾತೆಗಳನ್ನು ಲಾಕ್ ಮಾಡಿಕೊಂಡಿದ್ದಾರೆ.





