ಬಂಗಾಳದ ಪ್ರಸಿದ್ಧ ವಾರದ ಜಾನುವಾರು ಮಾರುಕಟ್ಟೆಗಳಾದ ಸುನುಕ್‌ಪಹಾರಿ, ಮಾಯಾಪುರ, ಧೋಲಾ ಹಾಗೂ ಪನ್ಸ್‌ಕುರಾ ಮಾರುಕಟ್ಟೆಗಳು ಇಂದು ಸಂಪೂರ್ಣವಾಗಿ ಸ್ಮಶಾನ ಸದೃಶ್ಯ ಮೌನಕ್ಕೆ ಶರಣಾಗಿವೆ. ಕೋಟ್ಯಂತರ ರೂಪಾಯಿ ಬ್ಯಾಂಕ್ ಸಾಲ ಮತ್ತು ಕೈಗಡ ತಂದು ಹಸುಗಳನ್ನು ಸಾಕಿದ್ದ ಹೈನುಗಾರರು ಗ್ರಾಹಕರಿಲ್ಲದೇ ಕಣ್ಣೀರು ಹಾಕುತ್ತಿದ್ದಾರೆ. ಕೋಟಿಗಟ್ಟಲೆ ಸಾಲ ಹೊಂದಿರುವ ದೊಡ್ಡ ಹೈನುಗಾರರಿಂದ ಹಿಡಿದು ಜಾನುವಾರುಗಳನ್ನೇ ತುರ್ತು ಉಳಿತಾಯದ ನಿಧಿಯನ್ನಾಗಿ ನಂಬಿಕೊಂಡಿದ್ದ ಸಣ್ಣ ಕೃಷಿಕರವರೆಗೆ ಎಲ್ಲರೂ ಇಂದು ಸಂಕಷ್ಟದ ಭೀತಿಯಲ್ಲಿದ್ದಾರೆ.
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಅಭೂತಪೂರ್ವ ಎನ್ನಬಹುದಾದ ಸೈದ್ಧಾಂತಿಕ ಪಲ್ಲಟವೊಂದು ಜರುಗುತ್ತಿದೆ. ಅದು ಸಾಮಾಜಿಕ ಮತ್ತು ಆರ್ಥಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ತಲೆಮಾರುಗಳಿಂದ ನಡೆದುಬಂದಿದ್ದ ಧಾರ್ಮಿಕ ಮತ್ತು ಸಾಮಾಜಿಕ ನಂಬಿಕೆಗಳನ್ನು ಸಂಪೂರ್ಣವಾಗಿ ತಿರುಗುಮುರುಗು ಮಾಡಿದಂತೆ ಕಾಣಿಸುತ್ತಿವೆ. ಈವರೆಗೆ, ಗೋರಕ್ಷಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಬಿಜೆಪಿ ಗುರಿಮಾಡಿಕೊಂಡು ರಾಜಕಾರಣ ಮಾಡುತ್ತಿತ್ತು. ಈಗ, ಬಂಗಾಳದಲ್ಲಿ ಮುಸ್ಲಿಂ ಯುವಕರೇ ಗೋರಕ್ಷಣೆಗೆ ಇಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿನ ಮುಸ್ಲಿಂ ಯುವಕರು ಹಿಂದು ರೈತ/ವ್ಯಾಪಾರಿಗಳನ್ನು ತಡೆದು ಗೋವುಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್‌ನ ಗೋರಕ್ಷಣಾ ದ್ವೇಷ ರಾಜಕಾರಣಕ್ಕೆ ತಿರುಗೇಟು ನೀಡುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಹಿಂದು ರೈತ-ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಿಂದು ವ್ಯಾಪಾರಿಗಳು ಹಸುಗಳನ್ನು ಸಾಗಿಸುತ್ತಿರುವ ವಾಹನಗಳನ್ನು ತಡೆಯುತ್ತಿರುವ ಮುಸ್ಲಿಂ ಯುವಕರು, “ನಿಮ್ಮ ತಾಯಿಯಂತಿರುವ ಹಸುವನ್ನು ಏಕೆ ಮಾರುತ್ತಿದ್ದೀರಿ? ಮನೆಗೆ ಕರೆದೊಯ್ದು ಸಾಕಿರಿ, ನಾವು ಜೈಲಿಗೆ ಹೋಗಲು ಸಿದ್ಧರಿಲ್ಲ” ಎನ್ನುತ್ತಿದ್ದಾರೆ. ಅದೂ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವುಗಳ ಖರೀದಿಯನ್ನು ಬಹಿಷ್ಕರಿಸುವಂತೆ ಮುಸ್ಲಿಂ ನಾಯಕರು ನೀಡುತ್ತಿರುವ ಕರೆಗಳು ಬಂಗಾಳದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬನ್ನೇ ಮುರಿದಿವೆ. ಯುವ ಪೀಳಿಗೆ ಇದನ್ನು ರಾಜಕೀಯದ ‘ಯುನೊ ರಿವರ್ಸ್’ ಅಥವಾ ‘ಕರ್ಮ ರಿಟರ್ನ್ಸ್’ ಕ್ಷಣ ಎಂದು ಕರೆಯುತ್ತಿದ್ದರೆ, ಇದರ ಆಳದಲ್ಲಿರುವ ಆರ್ಥಿಕ ದುರಂತ ಮಾತ್ರ ಅತ್ಯಂತ ಭೀಕರವಾಗಿದೆ.
West Bengal: In #Magrahat, a Hindu youth came to the cattle market to sell a cow, but some local #Muslims asked him to leave, questioning, “You consider the cow your mother, so why have you brought it here to be sold for sacrifice?
— MuslimMirror.com (@MuslimMirror) May 18, 2026
We will not buy #cows since the administration… pic.twitter.com/KFyGIeDoPp
ಈ ಇಡೀ ಬಿಕ್ಕಟ್ಟಿನ ಉಗಮಕ್ಕೆ ಕಾರಣವಾಗಿದ್ದು, ಮೇ 13 ರಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಹೊರಡಿಸಿದ ಕಠಿಣ ಆದೇಶ. ‘ಪಶ್ಚಿಮ ಬಂಗಾಳ ಪ್ರಾಣಿ ಹತ್ಯೆ ನಿಯಂತ್ರಣ ಕಾಯ್ದೆ-1950’ಅನ್ನು ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ಸರ್ಕಾರ ಘೋಷಿಸಿತು. ಈ ನಿಯಮದ ಪ್ರಕಾರ, 14 ವರ್ಷ ಮೇಲ್ಪಟ್ಟ ಅಥವಾ ಸಂಪೂರ್ಣವಾಗಿ ಕೆಲಸಕ್ಕೆ ಬಾರದ ಪ್ರಾಣಿಗಳನ್ನು ಮಾತ್ರ ಅಧಿಕೃತ ಪಶುವೈದ್ಯಕೀಯ ಪ್ರಮಾಣಪತ್ರದೊಂದಿಗೆ, ಸರ್ಕಾರಿ ಅಂಗೀಕೃತ ಕಸಾಯಿಖಾನೆಗಳಲ್ಲಿ ಮಾತ್ರ ಕಡಿಯಲು ಅವಕಾಶ ನೀಡಲಾಗಿದೆ. ಸಾರ್ವಜನಿಕವಾಗಿ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ, ಆರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಕಠಿಣ ನೀತಿಯನ್ನೂ ತರಲಾಗಿದೆ. ಈ ಆದೇಶ ಹೊರಬಿದ್ದ ತಕ್ಷಣವೇ ತಳಮಟ್ಟದಲ್ಲಿ ಹಿಂದು ರಾಷ್ಟ್ರವಾದಿ ಗುಂಪುಗಳು ಮತ್ತು ಪೊಲೀಸರು ರಸ್ತೆಗಳಲ್ಲಿ ಜಾನುವಾರು ಸಾಗಿಸುವ ವಾಹನಗಳನ್ನು ತಡೆದು ಕಿರುಕುಳ ನೀಡಲು ಆರಂಭಿಸಿದರು. ಹಸುವಿನ ‘ಜನನ ಪ್ರಮಾಣಪತ್ರ’ ಕೇಳುವ ಮಟ್ಟಿಗೆ ಈ ಪರಾಕಾಷ್ಠೆ ತಲುಪಿದಾಗ, ಮುಸ್ಲಿಂ ಸಮುದಾಯವು ಬಂಗಾಳದಾದ್ಯಂತ ಗೋವುಗಳ ಖರೀದಿಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿತು.
ಬಂಗಾಳದ ಹೈನುಗಾರಿಕೆ ಆರ್ಥಿಕತೆಯು ಒಂದು ವಿಶಿಷ್ಟವಾದ ಸಾಮಾಜಿಕ ಪರಸ್ಪರ ಅವಲಂಬನೆಯ ಮೇಲೆ ನಿಂತಿತ್ತು. ಇಲ್ಲಿ ಮುಸ್ಲಿಮರು ಮಾಂಸದ ವ್ಯಾಪಾರ ಮತ್ತು ಸೇವನೆ ಮಾಡುತ್ತಿದ್ದರೆ, ಹಸುಗಳನ್ನು ಸಾಕುವ ಮತ್ತು ಮಾರಾಟ ಮಾಡುವ ಬಹುಸಂಖ್ಯಾತರು ಹಿಂದು ಜಾತಿಯಾದ ‘ಘೋಷ್’ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವಿಡಂಬನೆಯ ಸಂಗತಿಯೆಂದರೆ, ಬಂಗಾಳದಲ್ಲಿ ದಶಕಗಳಿಂದ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಗಟ್ಟಿಯಾದ ವೋಟ್ ಬ್ಯಾಂಕ್ ಆಗಿದ್ದ ಮತ್ತು ಮುಸ್ಲಿಂ ವಿರೋಧಿ ಧ್ರುವೀಕರಣದಲ್ಲಿ ಮುಂಚೂಣಿಯಲ್ಲಿದ್ದೂ ಇದೇ ಘೋಷ್ ಸಮುದಾಯ. ಈಗ, ಈ ಸಮುದಾಯವು ಸರ್ಕಾರದ ಹೊಸ ನೀತಿಯಿಂದಾಗಿ ಸಂಪೂರ್ಣವಾಗಿ ಬೀದಿಗೆ ಬಿದ್ದಿದೆ.
In West Bengal, #Hindus are saying, “We Hindu cattle traders were called friends before elections but after #BJP came to power, Hindus like us are suffering the most.
— MuslimMirror.com (@MuslimMirror) May 19, 2026
A Hindu man also said, “You call the cow ‘#Gomata,’ but first serve and care for the mother who gave birth to… pic.twitter.com/FO3fXvkVue
ಹಸುಗಳು ಏಳು ಅಥವಾ ಎಂಟು ವರ್ಷಗಳ ನಂತರ ಹಾಲು ಕೊಡುವುದನ್ನು ನಿಲ್ಲಿಸುತ್ತವೆ. ಒಂದು ಹಸುವನ್ನು ಪ್ರತಿದಿನ ನಿರ್ವಹಿಸಲು ಕನಿಷ್ಠ 300 ರೂ.ಗಳಿಂದ 500 ರೂ. ವೆಚ್ಚವಾಗುತ್ತದೆ. ಹಾಲು ಕೊಡದ ಹಸುವನ್ನು 14 ವರ್ಷ ತುಂಬುವವರೆಗೆ ಸಾಕಬೇಕೆಂದರೆ ಹೈನುಗಾರರು ಲಕ್ಷಾಂತರ ರೂ. ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಎತ್ತುಗಳನ್ನು ಕೃಷಿಗೆ ಬಳಸುವುದು ನಿಂತುಹೋಗಿರುವುದರಿಂದ, ಹಾಲು ಕೊಡದ ಹಸು ಮತ್ತು ಹೋರಿಗಳ ಏಕೈಕ ಆರ್ಥಿಕ ಮೌಲ್ಯ ಎಂದರೆ, ಅದು ಮಾಂಸದ ಮಾರುಕಟ್ಟೆ ಮಾತ್ರ ಆಗಿತ್ತು. ಆದರೆ, ಸರ್ಕಾರದ ಹೊಸ ನಿಯಮ ಈ ಕೊಂಡಿಯನ್ನೇ ಕತ್ತರಿಸಿದೆ.
ಈ ಲೇಖನ ಓದಿದ್ದೀರಾ?: ಜನತಂತ್ರದ ಹತ್ಯೆ: ಮತದಾನದ ಹಕ್ಕು ಮತ್ತು ಸ್ಥಳೀಯ ಪ್ರಾತಿನಿಧ್ಯದ ಮೇಲೆ ದಾಳಿ
ಬಂಗಾಳದ ಪ್ರಸಿದ್ಧ ವಾರದ ಜಾನುವಾರು ಮಾರುಕಟ್ಟೆಗಳಾದ ಸುನುಕ್‌ಪಹಾರಿ, ಮಾಯಾಪುರ, ಧೋಲಾ ಹಾಗೂ ಪನ್ಸ್‌ಕುರಾ ಮಾರುಕಟ್ಟೆಗಳು ಇಂದು ಸಂಪೂರ್ಣವಾಗಿ ಸ್ಮಶಾನ ಸದೃಶ್ಯ ಮೌನಕ್ಕೆ ಶರಣಾಗಿವೆ. ಕೋಟ್ಯಂತರ ರೂಪಾಯಿ ಬ್ಯಾಂಕ್ ಸಾಲ ಮತ್ತು ಕೈಗಡ ತಂದು ಹಸುಗಳನ್ನು ಸಾಕಿದ್ದ ಹೈನುಗಾರರು ಗ್ರಾಹಕರಿಲ್ಲದೇ ಕಣ್ಣೀರು ಹಾಕುತ್ತಿದ್ದಾರೆ. ಕೋಟಿಗಟ್ಟಲೆ ಸಾಲ ಹೊಂದಿರುವ ದೊಡ್ಡ ಹೈನುಗಾರರಿಂದ ಹಿಡಿದು ಜಾನುವಾರುಗಳನ್ನೇ ತುರ್ತು ಉಳಿತಾಯದ ನಿಧಿಯನ್ನಾಗಿ ನಂಬಿಕೊಂಡಿದ್ದ ಸಣ್ಣ ಕೃಷಿಕರವರೆಗೆ ಎಲ್ಲರೂ ಇಂದು ಸಂಕಷ್ಟದ ಭೀತಿಯಲ್ಲಿದ್ದಾರೆ.
ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ಮಾಂಸ ರಫ್ತುದಾರ ರಾಷ್ಟ್ರವಾಗಿರುವ ಭಾರತದ ಆರ್ಥಿಕತೆಯಲ್ಲಿ ಬಂಗಾಳದ ಕೊಡುಗೆ ದೊಡ್ಡದಾಗಿತ್ತು. ಆದರೆ, ಈ ಹಠಾತ್ ನಿರ್ಧಾರದಿಂದಾಗಿ ಕೇವಲ ಮಾಂಸದ ಮಾರುಕಟ್ಟೆಯಷ್ಟೇ ಅಲ್ಲದೇ ಚರ್ಮದ ಉದ್ಯಮ, ಪಶು ಆಹಾರ ಸರಬರಾಜು, ಪಶು ವೈದ್ಯಕೀಯ ವಲಯ ಹಾಗೂ ಸಾರಿಗೆ ಉದ್ಯಮ ಹೀಗೆ ಇಡೀ ಗ್ರಾಮೀಣ ಆರ್ಥಿಕ ವ್ಯವಸ್ಥೆಯೇ ಪತನದ ಅಂಚಿಗೆ ಬಂದು ನಿಂತಿದೆ. ಇಷ್ಟೇ ಅಲ್ಲದೆ, 27%ರಷ್ಟಿರುವ ಮುಸ್ಲಿಂ ಜನಸಂಖ್ಯೆಯು ದನದ ಮಾಂಸದ ಬಳಕೆಯನ್ನು ಕಡಿಮೆ ಮಾಡಿದರೆ, ಮಾರುಕಟ್ಟೆಯಲ್ಲಿ ಕೋಳಿ, ಕುರಿ ಹಾಗೂ ಮೀನಿನ ಬೆಲೆ ಗಗನಕ್ಕೇರಿ ಸಾಮಾನ್ಯ ಜನರ ತಟ್ಟೆಗೂ ಬೆಂಕಿಯಿಡುವ ಸಾಧ್ಯತೆಯಿದೆ.
ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 14 ದಿನಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಕೇವಲ ಗೋ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಇದು 15 ವರ್ಷಗಳ ಟಿಎಂಸಿಯ ಸಾಮರಸ್ಯದ ರಾಜಕಾರಣಕ್ಕೆ ನೀಡಿದ ತೀವ್ರ ಸಿದ್ಧಾಂತಿಕ ಹೊಡೆತವೂ ಆಗಿದೆ. ಪ್ರಾಣಿ ಹತ್ಯೆ ನಿಷೇಧದ ಜೊತೆಗೆ, ಸಾರ್ವಜನಿಕ ರಸ್ತೆಗಳಲ್ಲಿ ನಮಾಜ್ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಮಾಡಲಾಗುತ್ತಿದೆ. ಜೊತೆಗೆ, ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳು ಮಾತ್ರವಲ್ಲದೆ ಸಾಂವಿಧಾನಿಕ ಹಕ್ಕುಗಳನ್ನು ಹೊಂದಿರುವ ಇಸ್ಲಾಮಿಕ್ ಮದರಸಾಗಳಲ್ಲೂ ‘ವಂದೇ ಮಾತರಂ’ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕೆಂಬ ಆದೇಶ ಹೊರಡಿಸಿದೆ. ಇದನ್ನು ರಾಷ್ಟ್ರೀಯತೆಯ ಮರುಸ್ಥಾಪನೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ, ಅಲ್ಪಸಂಖ್ಯಾತ ಸಂಸ್ಥೆಗಳ ಮೇಲೆ ಸಿದ್ಧಾಂತಿಕ ಏಕರೂಪತೆಯನ್ನು ಹೇರುವ ಕುತಂತ್ರವೆಂದು ವಿರೋಧ ಪಕ್ಷಗಳು ಖಂಡಿಸುತ್ತಿವೆ.
ಸುವೇಂದು ಸರ್ಕಾರದ ಮತ್ತೊಂದು ವಿವಾದಾತ್ಮಕ ಹೆಜ್ಜೆ ಎಂದರೆ, ಒಬಿಸಿ ಮೀಸಲಾತಿಯ ಮರುರಚನೆ. ಕಲ್ಕತ್ತಾ ಹೈಕೋರ್ಟ್‌ನ ತೀರ್ಪನ್ನು ಅನ್ವಯಿಸಿ, 2010ರ ನಂತರ ಸೇರಿಸಲಾಗಿದ್ದ ಹಲವಾರು ಮುಸ್ಲಿಂ ಉಪಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ಕೈಬಿಟ್ಟು, ಕೇವಲ 7%ರಷ್ಟು ಫ್ಲಾಟ್ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಸಚ್ಚಾರ್ ಸಮಿತಿಯ ವರದಿಯ ಆಧಾರದ ಮೇಲೆ 2010ರಲ್ಲಿ ಬುದ್ಧದೇವ್ ಭಟ್ಟಾಚಾರ್ಯ ನೇತೃತ್ವದ ಎಡರಂಗ ಸರ್ಕಾರವು ಹಿಂದುಳಿದ ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿತ್ತು. ಈಗ, ಈ ಸಮುದಾಯಕ್ಕಿದ್ದ ಏಕೈಕ ಆಸರೆಯನ್ನು ಬಿಜೆಪಿ ಸರ್ಕಾರ ಕಿತ್ತುಕೊಂಡಿದೆ.
ತಪ್ಪು ಜಾತಿ ಪ್ರಮಾಣಪತ್ರ ನೀಡಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುವ ಮೂಲಕ ಸರ್ಕಾರ ಇಡೀ ಆಡಳಿತ ಶಾಹಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಸರ್ಕಾರಿ ನೌಕರರು, ಶಿಕ್ಷಕರು ಹಾಗೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮಾಧ್ಯಮಗಳೊಂದಿಗೆ ಮಾತನಾಡುವುದನ್ನು ಅಥವಾ ಸರ್ಕಾರದ ನೀತಿಗಳನ್ನು ಟೀಕಿಸುವುದನ್ನು ನಿರ್ಬಂಧಿಸಲಾಗಿದೆ. ಇದು ಆಡಳಿತದ ಒಳಗಿನ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆ ಎಂದು ಟಿಎಂಸಿ ನಾಯಕರು ಬಣ್ಣಿಸುತ್ತಿದ್ದಾರೆ.
ಈ ಲೇಖನ ಓದಿದ್ದೀರಾ?: ಉತ್ತರ ಭಾರತದಲ್ಲಿ ಮೊಳಗುತ್ತಿದೆ ಕಾರ್ಮಿಕ ಘೋಷ; ಮಾರ್ಚ್, ಏಪ್ರಿಲ್, ಮೇ ದಂಗೆಯ ಮಾಸಗಳು
ಬಾಂಗ್ಲಾದೇಶದೊಂದಿಗೆ ಸುದೀರ್ಘವಾದ ಮತ್ತು ಸೂಕ್ಷ್ಮವಾದ ಗಡಿಯನ್ನು ಹಂಚಿಕೊಂಡಿರುವ ಬಂಗಾಳದಲ್ಲಿ, ನೂತನ ಸರ್ಕಾರವು ಗಡಿ ಭದ್ರತೆಯನ್ನು ತೀವ್ರಗೊಳಿಸುವ ಮತ್ತು ಅಕ್ರಮ ನುಸುಳುಕೋರರ ವಿರುದ್ಧ ‘ಡಿಟೆಕ್ಟ್, ಡಿಲೀಟ್, ಡಿಪೋರ್ಟ್’ (ಪತ್ತೆ ಹಚ್ಚಿ, ಅಳಿಸಿ, ಗಡೀಪಾರು ಮಾಡಿ) ಎಂಬ ಕಠಿಣ ನೀತಿಯನ್ನು ತಂದಿದೆ. ಹಿಂದಿನ ಟಿಎಂಸಿ ಸರ್ಕಾರವು ಬಿಎಸ್‌ಎಫ್‌ಗೆ ಭೂಮಿ ನೀಡಲು ನಿರಾಕರಿಸಿದ್ದ ಜಾಗವನ್ನು ತಕ್ಷಣವೇ ಹಸ್ತಾಂತರಿಸಲು ಸುವೇಂದು ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯ ಪೊಲೀಸರು ಬಂಧಿಸುವ ಯಾವುದೇ ಅಕ್ರಮ ನುಸುಳುಕೋರರನ್ನು ದೀರ್ಘ ನ್ಯಾಯಾಂಗ ಬಂಧನದಲ್ಲಿಡುವ ಬದಲು ನೇರವಾಗಿ ಬಿಎಸ್‌ಎಫ್‌ಗೆ ಹಸ್ತಾಂತರಿಸುವ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಈ ಇಡೀ ಪ್ರಕ್ರಿಯೆಯನ್ನು ಪೌರತ್ವ ತಿದ್ದುಪಡಿ ಕಾಯ್ದೆ (CAA) ಜೊತೆಗೆ ಜೋಡಿಸಲಾಗಿದೆ.
ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರದ ಮೊದಲ ಎರಡು ವಾರಗಳ ಆಡಳಿತವು ಬಂಗಾಳದಲ್ಲಿ ‘ಆಘಾತ ಮತ್ತು ದಿಗಿಲು’ (Shock-and-Awe) ಹುಟ್ಟಿಸುವುದೊಂದಿಗೆ ಆರಂಭವಾಗಿದೆ. ಸೈದ್ಧಾಂತಿಕ ಹೇರಿಕೆ, ಆಡಳಿತಾತ್ಮಕ ಬಿಗಿ ಹಾಗೂ ಗಡಿ ಭದ್ರತೆಯ ಹೆಸರಿನಲ್ಲಿ ತರಲಾದ ಬದಲಾವಣೆಗಳು ಬಂಗಾಳವನ್ನು ಮತ್ತಷ್ಟು ಕಂದಕಕ್ಕೆ ತಳ್ಳುತ್ತಿವೆ. ಗೋರಕ್ಷಣೆಯ ಹೆಸರಿನಲ್ಲಿ ತರಲಾದ ಕಾನೂನು ತನ್ನದೇ ಆದ ಸಾಂಪ್ರದಾಯಿಕ ಮತದಾರರ ಬದುಕನ್ನು ಹೇಗೆ ಕಸಿದುಕೊಂಡಿದೆ ಎಂಬುದು ಹಿಂದುತ್ವದ ರಾಜಕಾರಣದ ಒಳಗಿರುವ ಆರ್ಥಿಕ ಅಜ್ಞಾನಕ್ಕೆ ಅತ್ಯುತ್ತಮ ಉದಾಹರಣೆಯೂ ಆಗಿದೆ.
ಕೇವಲ ರಾಜಕೀಯ ಧ್ರುವೀಕರಣದ ಮೂಲಕ ಆಡಳಿತ ನಡೆಸಲು ಹೊರಟರೆ, ಅದು ಅಲ್ಪಸಂಖ್ಯಾತರು ಮಾತ್ರವಲ್ಲದೆ ಬಹುಸಂಖ್ಯಾತ ಬಡವರು ಮತ್ತು ರೈತರ ಬದುಕನ್ನೂ ಬಲಿಪೀಠಕ್ಕೆ ತಳ್ಳುತ್ತದೆ ಎಂಬುದನ್ನು ಬಂಗಾಳದ ಇಂದಿನ ಜಾನುವಾರು ಮಾರುಕಟ್ಟೆಗಳ ಮೌನವು ದೇಶಕ್ಕೆ ಸಾರುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮಿತಿಗಳನ್ನು ಮೀರಿದ ಹಿಂದುತ್ವದ ಹಠ ಬಂಗಾಳವನ್ನು ಆಂತರಿಕ ನಾಗರಿಕ ಸಂಘರ್ಷ ಮತ್ತು ಆರ್ಥಿಕ ದಿವಾಳಿತನದತ್ತ ತಳ್ಳುತ್ತಿದೆ. ಇದು ಹೀಗೆಯೇ ಮುಂದುವರೆದರೆ, ಬಂಗಾಳದಲ್ಲಿ ಬೃಹತ್ ಹೋರಾಟಗಳು ಭುಗಿಲೇಳಲು ಹೆಚ್ಚು ದಿನಗಳು ಬೇಕಾಗಿಲ್ಲ!



