ಬೆಂಗಳೂರು | ಫುಟ್‌ಪಾತ್ ತೆರವು ಕಾರ್ಯಾಚರಣೆ ಕುರಿತು ಎರಡು ಭಿನ್ನ ನಿಲುವುಗಳು

Date:

ಬೆಂಗಳೂರು ನಗರ ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು 'ಫುಟ್‌ಪಾತ್ ಇರುವುದು ಪಾದಚಾರಿಗಳಿಗೆ, ಅಕ್ರಮವಾಗಿ ಆಕ್ರಮಿಸಿಕೊಂಡಿರುವುದನ್ನು ಮುಲಾಜಿಲ್ಲದೆ ತೆರವು ಮಾಡಿ' ಎಂದು ಫರ್ಮಾನು ಹೊರಡಿಸಿದ್ದಾರೆ. ಸಚಿವರ ಆದೇಶದಂತೆ ಅಧಿಕಾರಿಗಳು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಆ ನಿಟ್ಟಿನಲ್ಲಿ ಫೇಸ್‌ಬುಕ್‌ನಲ್ಲಿ ಪ್ರಕಟವಾದ ಲೇಖಕ ಕುಂಟಾಡಿ ನಿತೇಶ್ ಮತ್ತು ಗೀತರಚನೆಕಾರ ಕವಿ ರಾಜ್ ಅವರ ಬರೆಹಗಳು ಚಿಂತನೆಗೆ ಯೋಗ್ಯವೆಂಬ ಕಾರಣಕ್ಕೆ ಇಲ್ಲಿ ಮರುಪ್ರಕಟಿಸುತ್ತಿದ್ದೇವೆ.

ತೆರವು ಕಾರ್ಯಾಚರಣೆ ಪರವಾದ ‘ಕವಿ ರಾಜ್’ ಅವರ ವಾದ:
ಪುಟ್‌ಪಾತ್ ಇರುವುದು ಪಾದಚಾರಿಗಳು ನಡೆಯುವುದಕ್ಕೆ. ಅದರಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡುವುದಕ್ಕಲ್ಲ. ಫುಟ್‌ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸುತ್ತಿರುರುವ ಸಚಿವ ಕೃಷ್ಣ ಬೈರೇಗೌಡ ಅವರ ದಿಟ್ಟ ಕ್ರಮ ಶ್ಲಾಘನೀಯ . ಫುಟ್‌ಪಾತ್ ಖಾಲಿ ಇಲ್ಲದೆ ಮಕ್ಕಳು, ವೃದ್ಧರು, ಹೆಂಗಸರು ಸೇರಿದಂತೆ ಎಲ್ಲರೂ ರಸ್ತೆಯಲ್ಲೇ ವಾಹನಗಳ ಭರಾಟೆಯ ನಡುವಲ್ಲೇ ಪ್ರಾಣ ಕೈಲಿ ಹಿಡಿದು ಭಯದಲ್ಲೇ ಓಡಾಡುವ ವಾತಾವರಣ ನಗರದ ಬಹುತೇಕ ಮುಖ್ಯ ರಸ್ತೆಗಳಲ್ಲಿತ್ತು. ಇದರಿಂದ ಹಲವು ಅಪಘಾತ, ಗಂಭೀರ ಗಾಯ, ಪ್ರಾಣಹಾನಿ ಎಲ್ಲವೂ ಆಗುತ್ತಿದೆ. ಅಂಕಿಅಂಶಗಳ ಪ್ರಕಾರ ಅಪಘಾತಗಳಲ್ಲಿ 30% ಸಾವು ಪಾದಚಾರಿಗಳದ್ದೇ. ಜೊತೆಗೆ ಫುಟ್‌ಪಾತ್‌ಗಳಲ್ಲಿ ವಸ್ತುಗಳನ್ನು ಗುಡ್ಡೆ ಹಾಕಿ, ಕಸ ಚೆಲ್ಲಿ ಗಲೀಜು ಮಾಡುವುದಲ್ಲದೇ, ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ, ಅವರ ಎದುರು ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ತಮ್ಮ ಅಂಗಡಿ ಕಾಣುವುದಿಲ್ಲ ಎಂದು ಜೋರು ಮಾಡಿ ವಾಹನ ತೆಗೆಸುವುದು ದಿನಾ ನಡೆಯುತ್ತಿತ್ತು.

- Advertisement -

ಇಷ್ಟು ದಿನ ಅಲ್ಲಿ ವ್ಯಾಪಾರ ಮಾಡುತ್ತಿದ್ದರು ಎಂಬ ಕಾರಣಕ್ಕೆ ವ್ಯಾಪಾರಿಗಳು ಆ ಜಾಗ ತಮ್ಮದು ಎಂದು ಹಕ್ಕು ಸಾಧಿಸಲಾಗದು. ಅಲ್ಲಿ ಅಂಗಡಿ ಹಾಕಿದ್ದೇ ಕಾನೂನು ಬಾಹಿರ, ಇಷ್ಟು ದಿನ ವ್ಯಾಪಾರ ನಡೆಸಿದ್ದೇ ನಮ್ಮ ವ್ಯವಸ್ಥೆಯ ‘ಮಾಮೂಲಿ’ ದಂಧೆ ಮತ್ತು ಹೊಣೆಗೇಡಿತನದಿಂದ. ಇಷ್ಟಕ್ಕೂ ಫುಟ್‌ಪಾತ್ ವ್ಯಾಪಾರ ಕೇವಲ ಬಡವರ ಜೀವನೋಪಾಯ ಎಂದು ತಿಳಿದುಕೊಂಡಿದ್ದರೆ ಅದು ಅಮಾಯಕತನವಾದೀತು. ಬಡಬಗ್ಗರಿಗೆ ಪ್ರಮುಖ ರಸ್ತೆಯ ಫುಟ್‌ಪಾತ್‌ಗಳಲ್ಲಿ ಜಾಗ ಹಿಡಿದು ದಕ್ಕಿಸಿಕೊಳ್ಳುವ ತಾಕತ್ತು ನಮ್ಮ ವ್ಯವಸ್ಥೆಯಲ್ಲಿ ಇರಲು ಸಾಧ್ಯವೇ ???? ಭಿಕ್ಷಾಟನೆಯನ್ನೇ ಮಾಫಿಯಾ ಆಗಿಸಿದ ಅನೈತಿಕ ಜನ ಇಂತಾ ಅನಾಯಾಸ ಹಾಗೂ ಸಾಕಷ್ಟು ದಂಡಿಯಾಗಿ ಪುಕ್ಸಟ್ಟೆ ದುಡಿಮೆಯ ಅವಕಾಶವನ್ನು ಬಡವರಿಗೆ ಬಿಟ್ಟುಕೊಡುವರೇ?? ಬಹುತೇಕ ಪ್ರಮುಖ ರಸ್ತೆ/ತಾಣಗಳಲ್ಲಿ ಏರಿಯಾದ ಪ್ರಭಾವಿ ಪುಡಿ ರಾಜಕಾರಣಿಯೋ, ಪುಡಿ ರೌಡಿಯೋ ಆ ಜಾಗಕ್ಕೆ ಗೂಟ ನೆಟ್ಟು, ಒಂದು ಗಾಡಿ ನಿಲ್ಲಿಸಿ ನಂತರ ಯಾರಿಗೋ ಬಾಡಿಗೆಗೆ ನೀಡಿಯೋ ಅಥವಾ ಯಾರನ್ನೋ ಸಂಬಳಕ್ಕೆ ಇಟ್ಟು ಹಿಂದೆ ನಿಂತಿರುತ್ತಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಇದರ ಮೇಲೂ ಕೆಲವು ಸಾವಿರ ಬೀದಿ ವ್ಯಾಪಾರಿಗಳ ಕಾರಣಕ್ಕೆ ಇಡೀ ಸಮಾಜದ ಕೋಟ್ಯಾಂತರ ಜನರಿಗೆ ತೊಂದರೆ ಆಗುವುದು ಯಾವ ಕೋನದಲ್ಲೂ ಮಾನವೀಯತೆ, ನಾಗರೀಕತೆ ಅಡಿಯಲ್ಲಿ ಬರುವುದಿಲ್ಲ. ಈ ಕ್ರಮದಿಂದ ಬೀದಿ ವ್ಯಾಪಾರಿಗಳ ಬದುಕುವ ಹಕ್ಕು ಕಸಿದಂತೆ ಅನ್ನುವವರ ಪ್ರಕಾರ, ಫುಟ್ ಪಾತ್ ಖಾಲಿಯಿಲ್ಲದೆ ರಸ್ತೆಗಿಳಿದು ಅಪಘಾತವಾಗಿ ಸಾಯುವವರಿಗೆ, ಗಂಭೀರ ಹಾನಿ ಆಗೋರಿಗೆ ಬದುಕೋ ಹಕ್ಕಿಲ್ಲವೇ ?? ಇವರ ಅನ್ನಕ್ಕಾಗಿ ಅವರ ಜೀವಗಳನ್ನು ಅಪಾಯಕ್ಕೆ ಒಡ್ಡಬಹುದೇ??? ವ್ಯಾಪಾರಿಗಳು ಇದಲ್ಲವಾದರೆ ಇನ್ನೊಂದು ಕೆಲಸ ಮಾಡಿ ಬದುಕಬಹುದು , ಆದರೆ ಅಪಘಾತಕ್ಕೆ ಈಡಾದವರ ಬದುಕು ತಟ್ಟಂತ ಮುಗಿಯುವುದಲ್ಲ.. ಆದಕ್ಕೆ ಬೆಲೆಯಿಲ್ಲವೇ??

ನಿಜಾ.. ಇಲ್ಲಿ ತೆರವಾಗುವ ನಿಜವಾದ ಅಸಹಾಯಕ ವ್ಯಾಪಾರಿಗಳಿಗೆ ಸರ್ಕಾರ ಅನುಕಂಪದಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡುವುದು ಅಪೇಕ್ಷಣೀಯ ಮಾನವೀಯತೆ. ನಾನು ಗಮನಿಸಿರುವಂತೆ ಶಿವಮೊಗ್ಗ ನಗರದಲ್ಲಿ ಬೀದಿ ಬದಿ ಆಹಾರ ವ್ಯಾಪಾರಿಗಳ ವಿಚಾರದಲ್ಲಿ ಇದೇ ರೀತಿಯ ಸಮಸ್ಯೆ ಆದಾಗ ಆಡಳಿತ ವ್ಯವಸ್ಥೆ ಮಲ್ಲಿಕಾರ್ಜುನ ಟಾಕೀಸ್ ಬಳಿ ಒಂದು ಅದ್ಭುತ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದನ್ನು ಮಾದರಿಯಾಗಿ ತೆಗೆದುಕೊಳ್ಳಬಹುದು.

ಈ ಒಟ್ಟಾರೆ ತೆರವು ಕ್ರಮವೇ ಸುಪ್ರೀಂ ಕೋರ್ಟ್ ಹೇಳಿರುವಂತೆ ನಡೆದಾಡಲು ದಾರಿ ಪಡೆಯುವ ಸಾರ್ವಜನಿಕರ ಮೂಲಭೂತ ಹಕ್ಕನ್ನು ಮರುಸ್ಥಾಪಿಸಿವುದು. ಇದನ್ನು ವಿರೋಧಿಸುತ್ತಿರುವ ಕೆಲವರು, ತಮ್ಮ ಅಂತರಂಗದ ಸ್ವಜನಪಕ್ಷಪಾತಕ್ಕೆ ಮಾನವೀಯತೆಯ ಹೊರಲೇಪನ ಮಾಡಿರುವಂತೆ ಕಾಣಿಸುತ್ತಿದೆ. ವಾಸ್ತವದಲ್ಲಿ ಇದು ಸಮಾಜಮುಖಿ, ಜೀವಪರ, ಪ್ರಗತಿಪರ ಪ್ರಜ್ಞಾವಂತರೆಲ್ಲ ಬೆಂಬಲಿಸಬೇಕಾದ ವಿಚಾರ.

ಬೀದಿಬದಿ ವ್ಯಾಪಾರಿಗಳ ಬದುಕು ದುಸ್ತರಗೊಳಿಸುತ್ತಿರುವ ಈ ಕಾರ್ಯಾಚರಣೆಯನ್ನು ಖಂಡಿಸುವ ಲೇಖಕ ಕುಂಟಾಡಿ ನಿತೇಶ್ ಅವರ ನಿಲುವು:
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ತಂದಿರೋ ಈ ‘Safe Footpath Campaign’ ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ನೋಡಿದ್ರೆ ಒಳ್ಳೆಯದು ಅಂತ ಕಂಡರೂ ಅದರ ಪರಿಣಾಮ ಅಶ್ಟಕ್ಕೇ ಸೀಮಿತವಾಗಿಲ್ಲ. ವರ್ಷಾನುಗಟ್ಟಲೆಯಿಂದ ಅದೇ ಫುಟ್‌ಪಾತ್‌ ನಂಬಿ ಬದುಕುತ್ತಿರೋ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡದೆ, ದಿಢೀರ್ ಅಂತ ಅವರನ್ನ ಒಕ್ಕಲೆಬ್ಬಿಸೋದು ಆ ಕುಟುಂಬಗಳ ಹೊಟ್ಟೆಮೇಲೆ ಹೊಡೆದ ಹಾಗೆ. ನಮ್ಮ ನಗರದ ರಸ್ತೆಗಳು ಬರೀ ಸಿಂಗಾರಕ್ಕಷ್ಟೇ ಅಲ್ಲ, ಇಲ್ಲಿರೋ ಪ್ರತಿಯೊಬ್ಬ ನಾಗರಿಕನ ಬದುಕಿಗೂ ಆಸರೆಯಾಗಬೇಕು.

ತಲೆಮಾರುಗಳಿಂದ ವ್ಯಾಪಾರ ಮಾಡ್ಕೊಂಡು ಸ್ವಾವಲಂಬಿಯಾಗಿ ಬದುಕುತ್ತಿರೋ ಇಂಥ ಬಡ ಜನರನ್ನು ಯಾವುದೇ ಪ್ಲಾನ್ ಇಲ್ಲದೆ ರಸ್ತೆಯಿಂದ ಎತ್ತಿಹಾಕಿದ್ರೆ, ಸಾವಿರಾರು ಕುಟುಂಬಗಳು ಬೀದಿಗೆ ಬರುತ್ತವೆ. ನಮ್ಮ ವ್ಯವಸ್ಥೆಯಲ್ಲಿ ಅವರಿಗೆ ಬೇರೆ ಉದ್ಯೋಗ ಸಿಗೋದು ಸುಲಭದ ಮಾತಲ್ಲ. ಹೀಗಿದ್ದಾಗ, ಪರ್ಯಾಯ ಜಾಗ ಕೊಡದೆ ಇವರನ್ನ ಓಡಿಸೋದು ಎಷ್ಟು ಮಟ್ಟಿಗೆ ನ್ಯಾಯ?

ಅಮೆರಿಕ, ಯುರೋಪ್ ತರಹದ ಶ್ರೀಮಂತ ದೇಶಗಳ “ಕ್ಲೀನ್ ಸ್ಟ್ರೀಟ್ಸ್” ಮಾಡೆಲ್ ಅನ್ನು ತಂದು ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಮತ್ತು ಬಡತನ ಇರೋ ದೇಶಕ್ಕೆ ಹಾಗೇ ಅಪ್ಲೈ ಮಾಡೋಕೆ ಆಗಲ್ಲ. ಆ ದೇಶಗಳಲ್ಲಿ ಕೆಲಸ ಇಲ್ಲದವರಿಗೆ ಸರ್ಕಾರದಿಂದ ನಿರುದ್ಯೋಗ ಭತ್ಯೆ, ಸೋಶಿಯಲ್ ಸೆಕ್ಯೂರಿಟಿ ತರಹದ ಸೌಲಭ್ಯಗಳಿರುತ್ತವೆ. ಆದ್ರೆ ನಮ್ಮ ಭಾರತದಲ್ಲಿ ಪರಿಸ್ಥಿತಿಯೇ ಬೇರೆ. ಇಲ್ಲಿರೋ ಕೋಟ್ಯಂತರ ಜನ ಬಡತನದಿಂದ ಬದುಕಲು ಕಂಡುಕೊಂಡಿರೋ ಏಕೈಕ ದಾರಿ ಅಂದ್ರೆ ಈ ಇನ್‌ಫಾರ್ಮಲ್ ಸೆಕ್ಟರ್ ಅಥವಾ ಬೀದಿ ಬದಿ ವ್ಯಾಪಾರ. ಇವರ್ಯಾರೂ ರಸ್ತೆ ಬ್ಲಾಕ್ ಮಾಡಬೇಕು ಅನ್ನೋ ಹಠಕ್ಕೆ ಇಲ್ಲಿ ಕೂತಿಲ್ಲ, ಬದುಕೋಕೆ ಬೇರೆ ದಾರಿ ಇಲ್ಲದೆ ಕೂತಿದ್ದಾರೆ.

ನಮ್ಮ ಸಿಟಿ ಪ್ಲಾನಿಂಗ್ ಮಾಡುವಾಗಲೇ ಈ ಬಡ ಕಾರ್ಮಿಕರನ್ನು ಗಣನೆಗೆ ತಗೊಳ್ಳದೆ ಇರೋದು ಇಷ್ಟೆಲ್ಲಾ ಸಮಸ್ಯೆಗೆ ಕಾರಣ. ಅದಕ್ಕೆ ಒಕ್ಕಲೆಬ್ಬಿಸಲು ಬಂದಿರೋ ಸರ್ಕಾರದ ಪ್ರತಿನಿಧಿ ಕೃಷ್ಣೇ ಬೈರೇಗೌಡರನ್ನ ನಾವು ತರಾಟೆಗೆ ತೆಗೆದುಕೊಳ್ಳಬೇಕು. ಸರ್ಕಾರವನ್ನು ಅಕೌಂಟೆಬಲ್ ಮಾಡಬೇಕು. (Street vendors do not occupy sidewalks with the intention of causing inconvenience, they do so because city planning has historically failed to integrate informal labor into the urban fabric.) ಇವರಿಗೆ ಒಂದು ಸರಿಯಾದ “ವೆಂಡಿಂಗ್ ಝೋನ್” ಮಾಡಿಕೊಡದೆ ಇವರ ಹೊಟ್ಟೆಪಾಡನ್ನ ಕಿತ್ಕೊಂಡ್ರೆ, ಅದು ಬಡವರ ಶ್ರಮಕ್ಕೆ ಮಾಡೋ ಅಪಮಾನ. ಅಷ್ಟೇ ಅಲ್ಲ, ಇವರಿಂದಾಗಿ ಸಿಟಿಯಲ್ಲಿರೋ ಸಾಮಾನ್ಯ ಜನರಿಗೂ ಕಡಿಮೆ ಬೆಲೆಯಲ್ಲಿ ದಿನಸಿ, ತರಕಾರಿ ಸಿಗ್ತಿದೆ ಅನ್ನೋದನ್ನ ನಾವು ಮರೆಯಬಾರದು.

ಈ ಲೇಖನ ಓದಿದ್ದೀರಾ?: ಅಭಿವೃದ್ಧಿ ಹೆಸರಲ್ಲಿ ಬಡವರ ಹೊಟ್ಟೆಗೆ ಪೆಟ್ಟು; ‘ಫುಟ್‌ಪಾತ್‌ ತೆರವು ಅಭಿಯಾನ’ಕ್ಕೆ ಬೀದಿಬದಿ ವ್ಯಾಪಾರಿಗಳ ಬದುಕು ಬಲಿ

ಇಂತಹ ಡ್ರೈವ್‌ಗಳು ಬಡವರ ಕಲ್ಯಾಣಕ್ಕಿಂತ ಹೆಚ್ಚಾಗಿ, ಶ್ರೀಮಂತ ಮತ್ತು ಮೇಲ್ ಮಧ್ಯಮ ವರ್ಗದವರನ್ನು ಖುಷಿಪಡಿಸೋ ಪ್ರದರ್ಶನಾತ್ಮಕ ರಾಜಕಾರಣದ ಭಾಗ ಅಷ್ಟೇ. ನಗರದ ನಿಜವಾದ ಟ್ರಾಫಿಕ್ ಸಮಸ್ಯೆಗಳಾದ ಅವೈಜ್ಞಾನಿಕ ರಸ್ತೆ ವಿನ್ಯಾಸಗಳು, ಬಿಲ್ಡರ್‌ಗಳು ಮತ್ತು ದೊಡ್ಡ ಕಾರ್ಪೊರೇಟ್‌ಗಳು ಮಾಡಿರುವ ಬೃಹತ್ ಒತ್ತುವರಿಗಳು ಹಾಗೂ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದನ್ನು ಮುಟ್ಟೋಕೆ ಹೋದ್ರೆ ಸರ್ಕಾರ ಹಿಂದೆ ಮುಂದೆ ಯೋಚನೆ ಮಾಡುತ್ತೆ. ಯಾಕಂದ್ರೆ ಆ ಹೈಫೈ ವರ್ಗವನ್ನು ಎದುರು ಹಾಕಿಕೊಳ್ಳುವುದು ರಾಜಕೀಯವಾಗಿ ಕಷ್ಟ. ಆದ್ರೆ, ತಮಗೆ ಯಾವುದೇ ಧ್ವನಿ ಇಲ್ಲದ, ಕಾನೂನು ಹೋರಾಟ ಮಾಡಲು ಶಕ್ತಿ ಇಲ್ಲದ ಬೀದಿ ಬದಿ ವ್ಯಾಪಾರಿಗಳನ್ನ ಟಾರ್ಗೆಟ್ ಮಾಡೋದು ಸರ್ಕಾರಕ್ಕೆ ತುಂಬಾ ಈಸಿ. ನಗರವು ಕಣ್ಣಿಗೆ “ಕ್ಲೀನ್” ಆಗಿ ಕಾಣಬೇಕು, ದೊಡ್ಡ ಕಾರುಗಳಲ್ಲಿ ಓಡಾಡುವವರಿಗೆ ರಸ್ತೆಗಳು ಫ್ಯಾನ್ಸಿಯಾಗಿ ಕಾಣಿಸಬೇಕು ಅನ್ನೋ ಒಂದೇ ಕಾರಣಕ್ಕೆ ಇಂತಹ ಕ್ರಮಗಳನ್ನು ನಾವು ಸಮರ್ಥಿಸಿಕೊಂಡು ಇರೋದು ನನಗೆ ಅಸಹ್ಹ್ಯ ಅನ್ನಿಸುತ್ತೆ. ಇಂತಹ ತೋರ್ಪಡಿಕೆಯ ನಿರ್ಧಾರಗಳು ಪ್ರಜಾಪ್ರಭುತ್ವಕ್ಕೆ ಮಾರಕ ಮತ್ತು ಅದರಿಂದ ಯಾವುದೇ ರೀತಿಯ constructive ಬದಲಾವಣೆ ಕೂಡ ಸಾಧ್ಯವಿಲ್ಲ.

ನಿಜವಾದ ಪ್ರಗತಿಪರ ಸಿಟಿ ಪ್ಲಾನಿಂಗ್ ಅಂದ್ರೆ ಪಾದಚಾರಿಗಳ ರಕ್ಷಣೆ ಹೆಸರಲ್ಲಿ ವ್ಯಾಪಾರಿಗಳ ಬದುಕನ್ನು ನಾಶ ಮಾಡೋದಲ್ಲ, ಎರಡನ್ನೂ ಬ್ಯಾಲೆನ್ಸ್ ಮಾಡೋದು. ನಮಗೆ ವಾಕಿಂಗ್ ಮಾಡೋಕೆ ಜಾಗನೂ ಬೇಕು, ಬಡವರು ಬದುಕೋಕೆ ದಾರಿನೂ ಬೇಕು. ದಿಢೀರ್ ಅಂತ ಕ್ಲಿಯರ್ ಮಾಡೋ ಬದಲು, ಸರ್ಕಾರ 2014ರ “ಬೀದಿ ಬದಿ ವ್ಯಾಪಾರಿಗಳ ಕಾಯ್ದೆ”ಯನ್ನು ಸರಿಯಾಗಿ ಜಾರಿಗೆ ತರಬೇಕು. ಮೊದಲು ಎಲ್ಲರ ಸರ್ವೆ ನಡೆಸಿ, ಅವರಿಗೆ ವೆಂಡಿಂಗ್ ಸರ್ಟಿಫಿಕೇಟ್ ಕೊಟ್ಟು, “ಟೌನ್ ವೆಂಡಿಂಗ್ ಕಮಿಟಿ”ಗಳ ಮೂಲಕ ವ್ಯವಸ್ಥಿತವಾದ ಜಾಗ ಮಾಡಿಕೊಡಬೇಕು. ಬಡವರನ್ನು ಸೈಡಿಗೆ ತಳ್ಳಿ ರೋಡ್ ಕ್ಲೀನ್ ಮಾಡೋದ್ರಲ್ಲಿ ಏನ್ನನ್ನೂ ಸಾಧಿಸಿದಂತಲ್ಲ. ಬದಲಾಗಿ, ಪಾದಚಾರಿಗಳಿಗೂ ತೊಂದರೆಯಾಗದಂತೆ, ವ್ಯಾಪಾರಿಗಳಿಗೂ ಜಾಗ ಸಿಗುವಂತೆ ಫುಟ್‌ಪಾತ್‌ಗಳನ್ನು ಅಗಲಗೊಳಿಸಿ ಮ್ಯಾನೇಜ್ ಮಾಡೋದೇ ನಿಜವಾದ ಪರಿಹಾರ. ಬೆಂಗಳೂರು ಎಷ್ಟು ಸುಂದರವಾಗಿದೆ ಅನ್ನೋದರ ಜೊತೆಗೆ, ಇಲ್ಲಿನ ಅತ್ಯಂತ ಬಡ ಪ್ರಜೆ ಎಷ್ಟು ನೆಮ್ಮದಿಯಿಂದ ಬದುಕುತ್ತಿದ್ದಾನೆ ಅನ್ನೋದರ ಮೇಲೆ ನಮ್ಮ ಸಿಟಿಯ ಯೋಗ್ಯತೆ ನಿರ್ಧಾರ ಆಗುತ್ತೆ ಅಲ್ಲವಾ?

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಲಸೂರ | ಗಡಿಭಾಗದ ಸರ್ಕಾರಿ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಕಸಾಪ ಮನವಿ

ಮಹಾರಾಷ್ಟ್ರದ ಗಡಿಯೊಂದಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಉರ್ದು ಹಾಗೂ...

ಬೀದರ್‌ | ಅ.24ರಿಂದ ಕಲ್ಯಾಣ ಪರ್ವ: ಭಿತ್ತಿ ಪತ್ರ ಬಿಡುಗಡೆ

ಬಸವಕಲ್ಯಾಣದ ಮಹಾ ಮಠದ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದ ವತಿಯಿಂದ...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್ ದೀಪ್ಕೆ ಕುರಿತು ನಡೆದಿದೆ ಚರ್ಚೆ!

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...