ಅಭಿವೃದ್ಧಿ ಹೆಸರಲ್ಲಿ ಬಡವರ ಹೊಟ್ಟೆಗೆ ಪೆಟ್ಟು; ‘ಫುಟ್‌ಪಾತ್‌ ತೆರವು ಅಭಿಯಾನ’ಕ್ಕೆ ಬೀದಿಬದಿ ವ್ಯಾಪಾರಿಗಳ ಬದುಕು ಬಲಿ

Date:

ನಗರದ ಸುಸ್ಥಿರ ಅಭಿವೃದ್ಧಿ ಮತ್ತು ಬಡವರ ಜೀವನೋಪಾಯ—ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಆದರೆ, ಬೆಂಗಳೂರಿನ ಸೌಂದರ್ಯೀಕರಣ ಮತ್ತು ಪಾದಚಾರಿಗಳ ಹಿತರಕ್ಷಣೆಯ ಹೆಸರಿನಲ್ಲಿ ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡರು ಕೈಗೆತ್ತಿಕೊಂಡಿರುವ ‘ಫುಟ್‌ಪಾತ್ ತೆರವು ಅಭಿಯಾನ’ ನಾಣ್ಯದ ಒಂದು ಮುಖವನ್ನು ಮಾತ್ರವೇ ನೋಡುತ್ತಿರುವಂತೆ ತೋರುತ್ತಿದೆ. ಅವರ ಕ್ರಮವು ಬೆವರಿನ ಹನಿಗಳನ್ನು ರಸ್ತೆಯ ಧೂಳಿಗೆ ಬಡಕಟ್ಟು ಮಾಡಿ, ದಿನವಿಡೀ ದುಡಿದು ಹೊಟ್ಟೆ ಹೊರೆಯುವ ಬೆಂಗಳೂರಿನ ಬೀದಿಬದಿ ವ್ಯಾಪಾರಿಗಳ ಪಾಲಿಗೆ ಯಮಪಾಶದಂತೆ ಭಾಸವಾಗುತ್ತಿದೆ. 

- Advertisement -

ಬೆಂಗಳೂರು ನಗರದ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳು ಸ್ವಚ್ಛವಾಗಿರಬೇಕು, ಪಾದಚಾರಿಗಳಿಗೆ ಸುರಕ್ಷಿತವಾಗಿರಬೇಕು ಎಂಬ ಸಚಿವ ಕೃಷ್ಣಬೈರೇಗೌಡ ಅವರ ಕಾಳಜಿ ಮೇಲ್ನೋಟಕ್ಕೆ ಶ್ಲಾಘನೀಯವಾಗಿ ಕಾಣುತ್ತದೆ. ಆದರೆ, ಈ ಕಾಳಜಿಯ ಮರೆಯಲ್ಲಿ ನಡೆಯುತ್ತಿರುವ ‘ಪಾದಚಾರಿ ಮಾರ್ಗ ತೆರವು ಅಭಿಯಾನ’ವು ನಗರದ ಬಡ ವರ್ಗವನ್ನು ಬೀದಿಪಾಲು ಮಾಡುತ್ತಿದೆ ಎಂಬುದು ಕಹಿ ವಾಸ್ತವ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಪ್ರಸ್ತುತ, ಬೆಂಗಳೂರಿನಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳಿದ್ದಾರೆ. ಇವರು ಬೀದಿಗಳಲ್ಲಿ ಹಣ್ಣು, ತರಕಾರಿಯಂತಹ ವಸ್ತುಗಳನ್ನು ಮಾರುತ್ತ, ಬಿಸಿಲು-ಮಳೆಯಲ್ಲಿ ನಲುಗುತ್ತಾ ದುಡಿದು ಜೀವನ ದೂಡುತ್ತಿದ್ದಾರೆ. ನಗರದ ಇಂದಿನ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ತೀವ್ರ ಹವಾಮಾನ ವೈಪರೀತ್ಯಗಳ ನಡುವೆ ರಸ್ತೆ ಬದಿಯಲ್ಲಿ ನಿಂತು ವ್ಯಾಪಾರ ಮಾಡುವುದು ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಒತ್ತಡದ ಕೆಲಸ. ಆದರೂ, ಬೀದಿಬದಿ ವ್ಯಾಪಾರಿಗಳು ಬೀದಿಗಳಲ್ಲಿ ನಿಂತು ವ್ಯಾಪಾರ ಮಾಡುತ್ತಿದ್ದಾರೆ. ಇದಕ್ಕೆ ಮೂಲ ಕಾರಣ, ಗಗನಕ್ಕೇರಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ. ಒಂದು ಸಣ್ಣ ಅಂಗಡಿಯನ್ನು ಬಾಡಿಗೆಗೆ ಪಡೆಯಲು ತಿಂಗಳಿಗೆ ಹತ್ತಾರು ಸಾವಿರ ರೂಪಾಯಿ ಬೇಕಾಗುತ್ತದೆ. ಇದು ಈ ಬಡ ವ್ಯಾಪಾರಿಗಳ ಇಡೀ ತಿಂಗಳ ಒಟ್ಟು ಆದಾಯಕ್ಕಿಂತಲೂ ಹೆಚ್ಚಾಗಿರುತ್ತದೆ.

ಈ ಆರ್ಥಿಕ ಅಸಹಾಯಕತೆಯ ನಡುವೆ, ಅನೇಕ ಹಿರಿಯ ನಾಗರಿಕರು, ಒಬ್ಬಂಟಿ ಮಹಿಳೆಯರು ಹಾಗೂ ವಿಶೇಷ ಚೇತನರು ತಮ್ಮ ಕುಟುಂಬದ ಹೊಟ್ಟೆ ಹೊರೆಯಲು ಬೀದಿ ವ್ಯಾಪಾರವನ್ನೇ ಏಕೈಕ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ.

ಗಮನಾರ್ಹವಾಗಿ, ಇವರಲ್ಲಿ ಬಹುತೇಕರು ಮಹಾನಗರ ಪಾಲಿಕೆಗಳ ಅಧಿಕೃತ ಸಮೀಕ್ಷೆಗೆ ಒಳಪಟ್ಟಿದ್ದಾರೆ, ಸರ್ಕಾರದ ಪಿಎಂ-ಸ್ವನಿಧಿ ಯೋಜನೆಯಡಿ ಸಾಲ ಪಡೆದಿದ್ದಾರೆ, ಮಾನ್ಯತೆ ಪಡೆದ ಕಾರ್ಮಿಕ ಸಂಘಗಳ ನೋಂದಾಯಿತ ಸದಸ್ಯರೂ ಆಗಿದ್ದಾರೆ. ಮಾತ್ರವಲ್ಲ, ಈ ಬೀದಿಬದಿ ವ್ಯಾಪಾರಿಗಳೆಲ್ಲರೂ ಕೇಂದ್ರ ಸರ್ಕಾರದ ‘ಬೀದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಹಾಗೂ ನಿಯಂತ್ರಣ) ಕಾಯ್ದೆ-2014’ರ ಅಡಿಯಲ್ಲಿ ಸಾರ್ವಜನಿಕ ಸ್ಥಳದ ಕಾನೂನುಬದ್ಧ ಬಳಕೆದಾರರಾಗಿದ್ದಾರೆ.

ಆದರೂ, ಅವರನ್ನು ಕೇವಲ ‘ಒತ್ತುವರಿದಾರರು’ ಎಂದು ಸರ್ಕಾರ ಕರೆಯುತ್ತಿದೆ. ಅವರ ಮೇಲೆ ಪರಾಕ್ರಮ ತೋರುತ್ತಿದೆ. ಏಕಾಏಕಿ ಅವರ ಅಂಗಡಿ-ಮುಂಗಟ್ಟುಗಳನ್ನು ಧ್ವಂಸಗೊಳಿಸುತ್ತಿದೆ. ಸಚಿವರ ಹೇಳಿಕೆಗಳನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು ಯಾವುದೇ ಅಧಿಕೃತ ಲಿಖಿತ ಆದೇಶ ಹೊರಬೀಳುವ ಮುನ್ನವೇ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲು ಮುಂದಾಗಿದ್ದಾರೆ. ವ್ಯಾಪಾರಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ.

ನೆಲದ ಕಾನೂನಾಗಿರುವ ‘ಬೀದಿ ವ್ಯಾಪಾರಿಗಳ ಕಾಯ್ದೆ-2014’ಯ ಪ್ರಕಾರ; ರಸ್ತೆ, ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳು ಸೇರಿದಂತೆ ನಿಗದಿಪಡಿಸಿದ ಸ್ಥಳಗಳಲ್ಲಿ ಬೀದಿ ವ್ಯಾಪಾರ ಮಾಡಲು ಕಾನೂನುಬದ್ಧ ಅವಕಾಶವಿದೆ. ಕಾಯ್ದೆಯ ಕಲಂ 3(3) ಅಡಿಯಲ್ಲಿ, ನಗರದ ಎಲ್ಲ ಬೀದಿ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ಮತ್ತು ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ಯಾರನ್ನೂ ಒಕ್ಕಲೆಬ್ಬಿಸುವಂತಿಲ್ಲ. ಬೆಂಗಳೂರಿನಲ್ಲಿ ಈ ಸಮೀಕ್ಷೆ ಇನ್ನೂ ಅಪೂರ್ಣವಾಗಿದ್ದು, ಸಾವಿರಾರು ವ್ಯಾಪಾರಿಗಳು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ‘ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ’ ಹೇಳುತ್ತದೆ. ಆದರೂ, ಸಚಿವರ ಹೇಳಿಕೆ ಆಧರಿಸಿ ತೆರವು ಕಾರ್ಯಾಚರಣೆಗಳು ನಡೆಯುತ್ತಿದೆ. ಇದು ಕ್ರಮವು, ಕಾಯ್ದೆಯ ಕಲಂ 18ರ ಅಡಿಯಲ್ಲಿ ‘ಯಾವುದೇ ವ್ಯಾಪಾರಿಯನ್ನು ತೆರವುಗೊಳಿಸುವ ಮುನ್ನ 30 ದಿನಗಳ ಮುಂಚಿತವಾಗಿ ಲಿಖಿತ ನೋಟಿಸ್ ನೀಡುವುದು ಕಡ್ಡಾಯ’ ಎಂಬ ನಿಯಮವನ್ನು ಉಲ್ಲಂಘಿಸಿದೆ.

ಬೀದಿಬದಿ ವ್ಯಾಪಾರಿಗಳನ್ನು ನೇರವಾಗಿ ಶೋಷಿಸುವ ಈ ತೆರವು ಕಾರ್ಯಾಚರಣೆ ಕುರಿತು ‘ಈದಿನ.ಕಾಮ್‌‘ ಜೊತೆ ಮಾತನಾಡಿದ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ’ದ ಅಧ್ಯಕ್ಷ ವಿನಯ್ ಶ್ರೀನಿವಾಸ್, “ಬೀದಿಬದಿಯಲ್ಲಿ ವ್ಯಾಪಾರ ಮಾಡುವುದು ಯಾರದೇ ವೈಯಕ್ತಿಕ ಹವ್ಯಾಸ ಅಥವಾ ಇಷ್ಟದ ಆಯ್ಕೆಯಲ್ಲ, ಅದು ಅವರ ಬದುಕಿನ ಅನಿವಾರ್ಯತೆ. ಅವರನ್ನು ರಸ್ತೆಯಿಂದ ಬಲವಂತವಾಗಿ ಹೊರಹಾಕಿದರೆ ಅವರ ಕುಟುಂಬಗಳು ಬೀದಿಗೆ ಬೀಳುತ್ತವೆ ಎಂಬ ಕನಿಷ್ಠ ಮಾನವೀಯ ಆಲೋಚನೆಯೂ ಸರ್ಕಾರಕ್ಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

bengaluru rss schools
ವಿನಯ್‌ ಶ್ರೀನಿವಾಸ್‌

“ಬಡವರ ಸಂಕಷ್ಟಗಳನ್ನು ಮತ್ತು ನಾಡಿನ ಕಾನೂನನ್ನು ಸಂಪೂರ್ಣವಾಗಿ ಬದಿಗೊತ್ತಿ ನಡೆಸಲಾಗುತ್ತಿರುವ ಈ ಅಭಿಯಾನವು ನಿಜವಾದ ಅರ್ಥದಲ್ಲಿ ಕಾನೂನಾತ್ಮಕ ಅಭಿಯಾನವಲ್ಲ. ಬದಲಿಗೆ, ಇದು ಕಾನೂನಿನ ಮುಖವಾಡ ತೊಟ್ಟು ಅತ್ಯಂತ ದುರ್ಬಲ ಆರ್ಥಿಕ ವರ್ಗಕ್ಕೆ ನೀಡಲಾಗುತ್ತಿರುವ ವ್ಯವಸ್ಥಿತ ಕಿರುಕುಳ. ಉತ್ತಮ ನಗರ ವಿನ್ಯಾಸ ಮತ್ತು ರಾಜಕೀಯ ಇಚ್ಛಾಶಕ್ತಿ ಇದ್ದಲ್ಲಿ ಬೀದಿ ವ್ಯಾಪಾರಿಗಳು ಮತ್ತು ಪಾದಚಾರಿಗಳು ಇಬ್ಬರಿಗೂ ಪೂರಕವಾಗುವಂತಹ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೂ, ಸರ್ಕಾರ ಮಾತ್ರ ಕೇವಲ ಒಕ್ಕಲೆಬ್ಬಿಸುವ ಸುಲಭದ ಹಾದಿ ಹಿಡಿದಿರುವುದು ಖಂಡನೀಯ” ಎಂದಿದ್ದಾರೆ.

ಈ ಲೇಖನ ಓದಿದ್ದೀರಾ?: ಬೆಂಗಳೂರಿಗೆ ಇನ್ನೊಂದು ಫ್ಲೈಓವರ್ ಬೇಡ; ಸಮಗ್ರ ಪುನರ್‌ಅಭಿವೃದ್ಧಿ ಬೇಕು

“ಪಾದಚಾರಿ ಮಾರ್ಗಗಳ ನಿಜವಾದ ಒತ್ತುವರಿದಾರರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲು ಸರ್ಕಾರ ಮತ್ತು ಅಧಿಕಾರಿಗಳು ಸದಾ ಹಿಂಜರಿಯುತ್ತಾರೆ. ನಗರದ ಪಾದಚಾರಿ ಮಾರ್ಗಗಳನ್ನು ನಿಜವಾಗಿಯೂ ಅತಿಕ್ರಮಿಸಿರುವುದು ಬಡ ವ್ಯಾಪಾರಿಗಳಲ್ಲ, ಬದಲಿಗೆ ಪ್ರಭಾವಶಾಲಿಗಳು ಮತ್ತು ಶ್ರೀಮಂತ ಹಿತಾಸಕ್ತಿಗಳು. ಪಾದಚಾರಿ ಮಾರ್ಗಗಳ ಮೇಲೆ ರಾಜಾರೋಷವಾಗಿ ನಿಲ್ಲಿಸಲಾಗುವ ಐಷಾರಾಮಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳು, ಇಲಾಖೆಗಳೇ ಅಳವಡಿಸಿರುವ ಬೃಹತ್ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಯುಟಿಲಿಟಿ ಪೆಟ್ಟಿಗೆಗಳು, ಶ್ರೀಮಂತ ನಿವಾಸಿಗಳು ಹಾಗೂ ದೊಡ್ಡ ವಾಣಿಜ್ಯ ಸಂಸ್ಥೆಗಳು. ಅಲ್ಲದೆ, ಹಲವರು ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿ ಖಾಸಗಿ ತೋಟಗಳು, ದೊಡ್ಡ ರೆಸ್ಟೋರೆಂಟ್‌ಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ. ಇವೆಲ್ಲವೂ ಪಾದಚಾರಿಗಳ ಮುಕ್ತ ಸಂಚಾರಕ್ಕೆ ಅಸಲಿ ಅಡೆತಡೆಗಳಾಗಿವೆ. ಆದರೆ, ಈ ಶಕ್ತಿಶಾಲಿಗಳ ವಿರುದ್ಧ ಕ್ರಮ ಕೈಗೊಳ್ಳಲು ಧೈರ್ಯವಿಲ್ಲದ ಅಧಿಕಾರಿಗಳು, ಅತ್ಯಂತ ಸೀಮಿತ ಜಾಗದಲ್ಲಿ ವ್ಯಾಪಾರ ಮಾಡುವ ದುರ್ಬಲ ಬೀದಿ ವ್ಯಾಪಾರಿಗಳನ್ನು ಸುಲಭದ ಗುರಿಯಾಗಿಸಿಕೊಂಡು ತಮ್ಮ ಪ್ರತಾಪ ತೋರುತ್ತಿದ್ದಾರೆ” ಎಂದು ವಿನಯ್ ಕಿಡಿಕಾರಿದ್ದಾರೆ.

“ಸರ್ಕಾರದ ಈ ಕ್ರಮವು ಆಡಳಿತಾರೂಢ ಕಾಂಗ್ರೆಸ್‌ನ ನೈತಿಕತೆಯನ್ನು ಪ್ರಶ್ನಿಸುತ್ತದೆ. ಇಡೀ ದೇಶದ ಬೀದಿ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಿಸುವ 2014ರ ಐತಿಹಾಸಿಕ ಕಾಯ್ದೆಯನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ನೇತೃತ್ವದ ಅಂದಿನ ಕೇಂದ್ರ ಸರ್ಕಾರ. ಅಷ್ಟೇ ಅಲ್ಲದೆ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸ್ವತಃ ಬೆಂಗಳೂರಿನ ಬೀದಿ ವ್ಯಾಪಾರಿಗಳನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿ, ಅವರ ಹಕ್ಕುಗಳಿಗಾಗಿ ಸದಾ ಬೆಂಬಲವಾಗಿ ನಿಲ್ಲುವ ಭರವಸೆ ನೀಡಿದ್ದರು. ಚುನಾವಣೆ ಮುಗಿದು ಅಧಿಕಾರಕ್ಕೆ ಬಂದ ನಂತರ ಆ ಎಲ್ಲ ಭರವಸೆಗಳನ್ನು ಮರೆತು, ಇಂದು ಅವರದ್ದೇ ಪಕ್ಷದ ಸಚಿವರು ಬಡವರ ಜೀವನೋಪಾಯದ ಮೇಲೆ ದಾಳಿ ಮಾಡುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದು ಪಕ್ಷದ ಸ್ಥಾಪಿತ ಬದ್ಧತೆ ಹಾಗೂ ಸ್ವಂತ ಮೌಲ್ಯಗಳಿಗೆ ಬಗೆಯುತ್ತಿರುವ ದ್ರೋಹದಂತೆ ಕಾಣುತ್ತಿದೆ” ಎಂದು ಹೇಳಿದ್ದಾರೆ.

“ಈಗಾಗಲೇ ಬೆಂಗಳೂರಿನ ಬೀದಿ ವ್ಯಾಪಾರಿಗಳು ಆನ್‌ಲೈನ್ ಮಾರುಕಟ್ಟೆಗಳ ಭರಾಟೆ, ತೀವ್ರ ಬೆಲೆ ಏರಿಕೆ, ಅನಿರೀಕ್ಷಿತ ಹವಾಮಾನ ವೈಪರೀತ್ಯಗಳು ಹಾಗೂ ಅಧಿಕಾರಿಗಳ ಮಾಮೂಲಿ ಕಿರುಕುಳದಿಂದಾಗಿ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಮಹಿಳಾ ವ್ಯಾಪಾರಿಗಳ ಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಅವರಿಗೆ ರಸ್ತೆ ಬದಿಯಲ್ಲಿ ಕನಿಷ್ಠ ಶೌಚಾಲಯದ ಸೌಲಭ್ಯವಾಗಲಿ ಅಥವಾ ನೆರಳಿನ ವ್ಯವಸ್ಥೆಯಾಗಲಿ ಇಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಅಥವಾ ಪುನರ್ವಸತಿ ಯೋಜನೆಯನ್ನು ರೂಪಿಸದೆ, ಕಾನೂನು ಪ್ರಕ್ರಿಯೆಗಳನ್ನು ಗಾಳಿಗೆ ತೂರಿ ಏಕಾಏಕಿ ಇವರನ್ನು ಒಕ್ಕಲೆಬ್ಬಿಸಿದರೆ ಸಾವಿರಾರು ಕುಟುಂಬಗಳ ಭವಿಷ್ಯ ಅಂಧಕಾರಕ್ಕೆ ತಳ್ಳಲ್ಪಡುತ್ತದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಸರ್ಕಾರವು ತಕ್ಷಣವೇ ಈ ಕಾನೂನುಬಾಹಿರ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಬೇಕು. ಪಾದಚಾರಿ ಮಾರ್ಗಗಳನ್ನು ಕಿರಿದುಗೊಳಿಸುವ ಬದಲು ಉತ್ತಮ ನಗರ ವಿನ್ಯಾಸದ ಮೂಲಕ ಅವುಗಳನ್ನು ಮತ್ತಷ್ಟು ಅಗಲಗೊಳಿಸಿ, ಪಾದಚಾರಿಗಳಿಗೂ ಮತ್ತು ವ್ಯಾಪಾರಿಗಳಿಗೂ ಸಮಾನವಾಗಿ ಜಾಗ ಕಲ್ಪಿಸಿಕೊಡಬೇಕು. ಸಚಿವ ಕೃಷ್ಣಬೈರೇಗೌಡ ಅವರು ಯಾವುದೇ ಆತುರದ ತೀರ್ಮಾನ ಕೈಗೊಳ್ಳುವ ಮುನ್ನ ಬೀದಿ ವ್ಯಾಪಾರಿ ಸಂಘಗಳ ಪ್ರತಿನಿಧಿಗಳೊಂದಿಗೆ ಮುಖಾಮುಖಿ ಚರ್ಚೆ ನಡೆಸಿ, ಮಾನವೀಯ ಮತ್ತು ನ್ಯಾಯಯುತವಾದ ಪರಿಹಾರ ಕಂಡುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KPSC ನೇಮಕಾತಿ ಹಗರಣ: SIT ರಚನೆಗೆ ಸುಪ್ರೀಂ ತಡೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....

ನಾಳೆ ‘ಕೊಂದವರು ಯಾರು?’ ರಾಷ್ಟ್ರೀಯ ವಿಚಾರ ಸಂಕಿರಣ: ಪಿತೃಪ್ರಧಾನತೆ, ಹೊಣೆಗಾರಿಕೆ ಕುರಿತು ಚರ್ಚೆಗೆ ವೇದಿಕೆ

ಕರ್ನಾಟಕದ ‘ನಾವೆದ್ದು ನಿಲ್ಲದಿದ್ದರೆ' ಸಂಘಟನೆಯು ಆರಂಭಿಸಿರುವ 'ಕೊಂದವರು ಯಾರು? Who Killed...