ಬಾದಾಮಿ ತಾಲೂಕಿನ ರೈತರಿಗೆ ಈ ಬಾರಿಯ ಮುಂಗಾರು ಆರಂಭದಲ್ಲೇ ನಿರಾಸೆ ಮೂಡಿಸಿದೆ. ಜೂನ್ ಮೊದಲ ವಾರದಲ್ಲಿ ನಿರೀಕ್ಷೆಯೊಂದಿಗೆ ಬಿತ್ತನೆ ಮಾಡಿದ್ದ ಬೆಳೆಗಳು ಮಳೆ ಕೊರತೆ ಮತ್ತು ತೀವ್ರ ಬಿಸಿಲಿನ ಹೊಡೆತಕ್ಕೆ ಬಾಡತೊಡಗಿದ್ದು, ಬರದ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಆರಂಭದಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಯಿಂದ ರೈತರು ಹೆಸರು, ಸಜ್ಜೆ, ಮೆಕ್ಕೆಜೋಳ, ತೊಗರಿ, ಅಲಸಂದೆ, ಶೇಂಗಾ ಹಾಗೂ ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ನಂತರ ಮೂರು ವಾರಗಳ ಕಾಲ ಸಮರ್ಪಕ ಮಳೆಯಾಗದೇ, ಪ್ರತಿದಿನದ ತೀವ್ರ ಬಿಸಿಲಿನಿಂದ ಬೆಳೆಗಳು ಒಣಗಿ ಹೋಗುತ್ತಿವೆ. ಮೊಳಕೆಯೊಡೆದ ಸಸಿಗಳು ಬೆಳವಣಿಗೆ ಕಾಣದೆ ಬಾಡುತ್ತಿದ್ದು, ಕೆಲವೆಡೆ ಗಾಳಿಯ ಹೊಡೆತಕ್ಕೆ ಹಾನಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರು ಭೂಮಿಯನ್ನು ಹಸನುಗೊಳಿಸಿ, ದುಬಾರಿ ಬೆಲೆಗೆ ಬೀಜ ಹಾಗೂ ಗೊಬ್ಬರ ಖರೀದಿಸಿ ಬಿತ್ತನೆ ಮಾಡಿ ಮಳೆಯ ನಿರೀಕ್ಷೆಯಲ್ಲಿ ಕೈಕಟ್ಟಿ ಕೂರುವಂತಾಗಿದೆ. ಹೊಲಗಳಿಗೆ ತೆರಳಿ ಬೆಳೆಗಳ ದುಸ್ಥಿತಿ ನೋಡುವುದಕ್ಕೂ ಮನಸ್ಸಾಗದ ಸ್ಥಿತಿಯಲ್ಲಿದ್ದು, ಸಾಲ ಮಾಡಿ ಕೃಷಿ ಮಾಡಿದವರಿಗೆ ಆರ್ಥಿಕ ಸಂಕಷ್ಟದ ಭೀತಿ ಎದುರಾಗಿದೆ.
ಕಳೆದ ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದರೂ ಮಳೆ ಮಾತ್ರ ಸುರಿಯುತ್ತಿಲ್ಲ. ಮೋಡಗಳು ಗಾಳಿಗೆ ತೇಲಿ ಹೋಗುತ್ತಿದ್ದು, ಅಲ್ಲಲ್ಲಿ ಕೆಲವೇ ನಿಮಿಷ ಜಿಟಿಜಿಟಿ ಮಳೆಯಾದರೂ ಬೆಳೆಗಳಿಗೆ ಅಗತ್ಯವಾದ ತೇವಾಂಶ ದೊರೆಯುತ್ತಿಲ್ಲ. “ಒಂದು ಉತ್ತಮ ಮಳೆ ಬಂದರೆ ಮಾತ್ರ ಬೆಳೆಗಳು ಉಳಿಯುತ್ತವೆ” ಎಂಬ ಆಶಯದಲ್ಲಿ ರೈತರು ಮಳೆರಾಯನನ್ನು ಪ್ರಾರ್ಥಿಸುತ್ತಿದ್ದಾರೆ.
ತಾಲೂಕಿನ ಬೇಲೂರು, ಹೊಸೂರು, ಢಾಣಕಶಿರೂರ, ಮಣ್ಣೇರಿ, ನಸುಗುನ್ನಿ, ಗಿಡ್ಡನಾಯಕನಾಳ, ಅನಂತಗಿರಿ, ಗುಡ್ಡದ ಮಲ್ಲಾಪುರ, ಜಾಲಿಹಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗಲು ಆರಂಭಿಸಿವೆ. ಕೆಲವೆಡೆ ರೈತರು ಮತ್ತೆ ಬಿತ್ತನೆ ಮಾಡಬೇಕೇ ಎಂಬ ಗೊಂದಲದಲ್ಲಿದ್ದಾರೆ.
ಈದಿನ.ಕಾಮ್ ಜೊತೆ ರೈತ ಢಾಣಕಶಿರೂರ ಗ್ರಾಮದ ರೈತ ಉಮೇಶ ವಾಲಿಕಾರ ಮಾತನಾಡಿ, “ಮೂರು ವಾರಗಳಿಂದ ಮಳೆಯೇ ಇಲ್ಲ. ಹೆಸರು, ಗೋಂಜಾಳ ಹಾಗೂ ಸೂರ್ಯಕಾಂತಿ ಬೆಳೆಗಳು ಬಿಸಿಲಿಗೆ ಸುಟ್ಟು ಹೋಗುತ್ತಿವೆ. ಮುಂದೆ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ. ರೈತರ ಬದುಕು ಅತಂತ್ರವಾಗಿದೆ” ಎಂದು ತಮ್ಮ ಅಳಲು ತೋಡಿಕೊಂಡರು.
ಇನ್ನೊಂದೆಡೆ ನಂದಿಕೇಶ್ವರ, ಬಾಚಿನಗುಡ್ಡ, ಪಟ್ಟದಕಲ್ಲು ಹಾಗೂ ಬಿಎಸ್ ಜಾಲಿಹಾಳ ಗ್ರಾಮಗಳ ಸುತ್ತಮುತ್ತ ಉಳ್ಳಾಗಡ್ಡಿ ಬಿತ್ತನೆ ಮಾಡಿದ ರೈತರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಸರಿಯಾಗಿ ಮೊಳಕೆಯೊಡೆಯದ ಕಾರಣ ಅನೇಕರು ಬೆಳೆಯನ್ನು ಹರಗಿದ್ದು, ಕಳಪೆ ಗುಣಮಟ್ಟದ ಬೀಜ ಪೂರೈಕೆಯಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ರೈತ ಸಿದ್ದಪ್ಪ ತೆಲಿ ಆರೋಪಿಸಿದರು.
ಕೃಷಿ ಇಲಾಖೆಯ ಮಾಹಿತಿ ಪ್ರಕಾರ, ಮುಂಗಾರು ಹಂಗಾಮಿನಲ್ಲಿ ಒಟ್ಟು 55,102 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಇದುವರೆಗೆ ಕೇವಲ 37,651 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಇದು ಶೇ.67.47ರಷ್ಟು ಮಾತ್ರವಾಗಿದೆ. ಸಮರ್ಪಕ ಮಳೆಯಾಗದ ಕಾರಣ ಇನ್ನೂ ಸಾಕಷ್ಟು ಪ್ರದೇಶದಲ್ಲಿ ಬಿತ್ತನೆ ಬಾಕಿಯಿದೆ.
ಈ ಕುರಿತು ಸಹಾಯಕ ಕೃಷಿ ನಿರ್ದೇಶಕ ಅಶೋಕ ತಿರ್ಕಣ್ಣವರ ಪ್ರತಿಕ್ರಿಯಿಸಿ, “ಮುಂಗಾರು ಬಿತ್ತನೆಯಾದ ಬಳಿಕ ಸಮರ್ಪಕ ಮಳೆಯಾಗದ ಕಾರಣ ಮಣ್ಣಿನ ತೇವಾಂಶ ಕಡಿಮೆಯಾಗಿದೆ. ಅದರ ಪರಿಣಾಮವಾಗಿ ಬೆಳೆಗಳು ಬಾಡಲು ಆರಂಭಿಸಿವೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಕೆಲವು ಬೆಳೆಗಳು ಚೇತರಿಸಿಕೊಳ್ಳುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.
ಮಳೆಯ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿರುವ ಬಾದಾಮಿ ಭಾಗದ ರೈತರು, ಶೀಘ್ರವೇ ಉತ್ತಮ ಮಳೆಯಾಗಿ ಬೆಳೆಗಳು ಉಳಿಯಲಿ ಎಂಬ ಆಶಯದೊಂದಿಗೆ ಆಕಾಶದತ್ತ ಚಿತ್ತ ನೆಟ್ಟಿದ್ದಾರೆ. ಮಳೆ ಮತ್ತಷ್ಟು ವಿಳಂಬವಾದರೆ ಭಾರಿ ನಷ್ಟ ಅನುಭವಿಸುವ ಆತಂಕ ರೈತರಲ್ಲಿ ಮನೆಮಾಡಿದೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು



