17 ಜನ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾದರಲ್ಲ, ಅವರು ಬಿಜೆಪಿಗೆ ಸೇರಿದ ಮೇಲೆ ತಾಯಿಯ ಮಕ್ಕಳಾದರೋ, ಮಲತಾಯಿಯ ಮಕ್ಕಳಾದರೋ?
“ಪಕ್ಷಕ್ಕೆ ದ್ರೋಹ ಬಗೆಯುವುದೆಂದರೆ, ಹೆತ್ತ ತಾಯಿಗೆ ದ್ರೋಹ ಬಗೆದಂತೆ”- ಇದು ಬಿಜೆಪಿಯ ಶಾಸಕರು ಮತ್ತು ನಾಯಕರು ಆಡುತ್ತಿರುವ ಮಾತು. ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ, ಸ್ವಪಕ್ಷಕ್ಕೆ ಮುಜುಗರ, ಮುಖಭಂಗ ಉಂಟು ಮಾಡಿರುವ ಬಿಜೆಪಿ ಶಾಸಕರನ್ನು ತೀವ್ರವಾಗಿ ಪರಿಶೀಲನೆಗೆ ಒಳಪಡಿಸಲು ರಾಜ್ಯದ ಬಿಜೆಪಿ ನಾಯಕರು ಹೊರಟಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ನಾಯಕತ್ವದ ಮೇಲೆ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಭುಗಲೆದ್ದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇತ್ತ, ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ವಿಜಯೇಂದ್ರ ತೀರ್ಮಾನಿಸಿದ್ದಾರೆ. “ಪಕ್ಷ ವಿರೋಧಿ ಚಟುವಟಿಕೆಗಳನ್ನು ದೇವರು, ಧರ್ಮದ ಮೇಲಿನ ಭಾವನೆಗಳ ಮುಖಾಂತರ ಬಯಲಿಗೆಳೆಯುತ್ತೇನೆ” ಎಂಬ ನಿರ್ಧಾರಕ್ಕೆ ಅವರು ಬಂದಂತೆ ಕಾಣುತ್ತಿದೆ. ಒಟ್ಟಾರೆ ತಾಯಿಗೆ ದ್ರೋಹ ಬಗೆದವರನ್ನು ಹೊರಗೆಳೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಇದು ಬಿಜೆಪಿಯವರ ನೈತಿಕತೆಯಲ್ಲಿನ ಬೂಟಾಟಿಕೆಗೆ ಕನ್ನಡಿ ಹಿಡಿಯುತ್ತಿದೆ. ಬಿಜೆಪಿಯವರು, ತಮ್ಮ ತಾಯಿಗೆ ದ್ರೋಹಬಗೆದರೆ ತಪ್ಪು, ಆದರೆ ಬೇರೆ ಪಕ್ಷದವರು ಅವರ ತಾಯಿಗೆ ದ್ರೋಹ ಎಸಗಿ, ಬಿಜೆಪಿಗೆ ಸೇರಿದರೆ ತಪ್ಪಲ್ಲ ಎಂಬಂತಿದೆ ಇವರ ವಾದ!
2008ರಲ್ಲಿ 110 ಸ್ಥಾನಗಳನ್ನು ಪಡೆದು ಬಹುಮತದ ಹೊಸ್ತಿಲಲ್ಲಿ ಬಂದು ನಿಂತ ಬಿಜೆಪಿ, ಆಪರೇಷನ್ ಕಮಲ ಎಂಬ ಅಸಹ್ಯ ರಾಜಕಾರಣಕ್ಕೆ ನಾಂದಿ ಹಾಡಿತು. ಪ್ರತಿಪಕ್ಷಗಳ ಶಾಸಕರನ್ನು ಪಕ್ಷಾಂತರ ಮಾಡಿಸಿ, ಬಿ.ಎಸ್. ಯಡಿಯೂರಪ್ಪ ಅಧಿಕ್ಕಾರಕ್ಕೇರಿದರು. ಬೇರೆಯವರ ತಾಯಿಗೆ ದ್ರೋಹ ಬಗೆಯುವ ರಾಜಕೀಯಕ್ಕೆ ಭದ್ರಬುನಾದಿ ಹಾಕಿದ್ದೇ ಬಿಜೆಪಿ ಅಲ್ಲವೇ? 2018ರಲ್ಲಿ 104 ಸ್ಥಾನಗಳನ್ನು ಪಡೆದ ಬಿಜೆಪಿ, ಗೌರವಯುತವಾಗಿ ವಿರೋಧಪಕ್ಷದಲ್ಲಿರಲು ಒಪ್ಪಿಕೊಳ್ಳಬಹುದಿತ್ತು. ರಾಜ್ಯಪಾಲರು ಕೊಟ್ಟ ಅವಕಾಶವನ್ನು ಬಳಸಿಕೊಂಡು, ಕುದುರೆ ವ್ಯಾಪಾರ ಮಾಡಲು ಯತ್ನಿಸಿದ್ದ ಯಡಿಯೂರಪ್ಪ ಅವರು, ಬಹುಮತ ಸಾಬೀತು ಮಾಡಲಾಗದೆ ಮೂರೇ ದಿನಕ್ಕೆ ರಾಜೀನಾಮೆ ಕೊಟ್ಟರು. 2019ರಲ್ಲಿ ಆಪರೇಷನ್ ಕಮಲವನ್ನು ಯಶಸ್ವಿಯಾಗಿ ಮಾಡಿ, ವಾಮಮಾರ್ಗದಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಕೊಟ್ಟ ಸಂದೇಶವೇನು? ನೀವು ದ್ರೋಹ ಮಾಡಿದರೆ ಅದು ತಾಯಿಗೆ ಬಗೆದ ದ್ರೋಹ, ಬೇರೆಯವರಿಂದ ಅವರ ತಾಯಿಗೆ ದ್ರೋಹ ಬಗೆಯುವಂತೆ ಆಮಿಷ ಒಡ್ಡುವುದು ನೈತಿಕವಾಗಿ ಸರಿಯೇ? 17 ಜನ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾದರಲ್ಲ, ಅವರು ಬಿಜೆಪಿಗೆ ಸೇರಿದ ಮೇಲೆ ತಾಯಿಯ ಮಕ್ಕಳಾದರೋ, ಮಲತಾಯಿಯ ಮಕ್ಕಳಾದರೋ?
ಇದು ರಾಜ್ಯದ ಕತೆಯಾಯಿತು. ಇಡೀ ದೇಶದಲ್ಲಿ ಬಿಜೆಪಿ ಮಾಡುತ್ತಿರುವ ಕೆಟ್ಟ ರಾಜಕಾರಣ, ಗರಿಷ್ಠ ಮಟ್ಟವನ್ನು ಮುಟ್ಟಿರುವುದನ್ನು ಕಾಣುತ್ತಿದ್ದೇವೆ. ಈಗ ಬಿಜೆಪಿ ಮಾಡುತ್ತಿರುವುದು ಕೇವಲ ಆಪರೇಷನ್ ಕಮಲವನ್ನಲ್ಲ, ವಿರೋಧ ಪಕ್ಷಗಳನ್ನೇ ಸಂಪೂರ್ಣ ಇಲ್ಲವಾಗಿಸುವ ಕುತಂತ್ರ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ, ಸಿಬಿಐ ಅಧಿಕಾರಿಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳಲ್ಲಿ ಇದ್ದವರನ್ನು ಬೆದರಿಸಿ, ಅವರ ಮೂಲಕ ಪಕ್ಷಗಳನ್ನೇ ಒಡೆದು ಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿರುವುದು ಕಣ್ಣಿಗೆ ರಾಚುತ್ತಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಇಬ್ಭಾಗ ಮಾಡಲಾಯಿತು. ಏಕನಾಥ ಶಿಂಧೆಯವರನ್ನು ಮುಂದೆ ಇಟ್ಟುಕೊಂಡು ಶಿವಸೇನೆಯ ಬಲವನ್ನು ಛಿದ್ರಗೊಳಿಸಿ, ಅದರ ಮೇಲೆ ತಮ್ಮ ಸಾಮ್ರಾಜ್ಯ ಕಟ್ಟಲಾಯಿತು. ಅಜಿತ್ ಪವಾರ್, ಪ್ರಫುಲ್ ಪಟೇಲ್ ಸೇರಿದಂತೆ ಎನ್ಸಿಪಿಯ ಹಲವು ನಾಯಕರ ಮೇಲೆ ಇ.ಡಿ ಮತ್ತು ಸಿ.ಬಿ.ಐನಂತಹ ಕೇಂದ್ರ ತನಿಖಾ ಸಂಸ್ಥೆಗಳನ್ನು ಛೂ ಬಿಡಲಾಯಿತು. ಈ ಒತ್ತಡದಿಂದ ಪಾರಾಗಲು ಅವರು ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸೇರಿದರು. ಹೀಗೆ ಎನ್ಸಿಪಿಯನ್ನೂ ಒಡೆಯಲಾಯಿತು. ತಾನು ಅಸ್ತಿತ್ವದಲ್ಲಿರಬೇಕೆಂದು ಇನ್ನೊಬ್ಬರ ಮನೆಯನ್ನು ಒಡೆದು ಹಾಕುವ ಬಿಜೆಪಿ, ಎದುರಾಳಿಯ ತಾಯಿಗೆ ಕಿರುಕುಳ ನೀಡುವ ಬಿಜೆಪಿ, ಪಕ್ಷ ದ್ರೋಹದ ಬಗ್ಗೆ ಮಾತನಾಡುವುದೇ ಬಹುದೊಡ್ಡ ಜೋಕ್!
ಎಸ್ಐಆರ್ ಮೂಲಕ 90 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊರಗಿಟ್ಟು, ಪಶ್ಚಿಮ ಬಂಗಾಳದಲ್ಲಿ ಗೆದ್ದು ಬೀಗಿದ ಬಿಜೆಪಿ, ಈಗ ಅಲ್ಲಿನ ಪ್ರಾದೇಶಿಕ ಪಕ್ಷವನ್ನು ಒಡೆದು ಹಾಕಿಲ್ಲವೇ? ಟಿಎಂಸಿಯ ಬಿಕ್ಕಟ್ಟಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ರಾಜಕೀಯ ಹೇಳಿಕೆಗಳಷ್ಟೇ. ಮಹಾರಾಷ್ಟ್ರದಲ್ಲಿ ಶಿವಸೇನೆ ಹೇಗೆ ಒಡೆದು ಹೋಯಿತೋ, ಹಾಗೆಯೇ ಟಿಎಂಸಿ ಕೂಡ ಛಿದ್ರವಾಯಿತು. ಟಿಎಂಸಿಯ ಬಂಡಾಯಗಾರರು ಮಾಡಿದ ಎಲ್ಲ ಕಸರತ್ತುಗಳಿಗೆ ಬಿಜೆಪಿ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಅಷ್ಟೇ ಅಲ್ಲ ಲೋಕಸಭೆಯ 28 ಟಿಎಂಸಿ ಸದಸ್ಯರ ಪೈಕಿ 20 ಮಂದಿ ಬಂಡಾಯವೆದ್ದರು. ಇವರೆಲ್ಲರೂ ಬಿಜೆಪಿ ನಾಯಕ ಭೂಪೇಂದ್ರ ಯಾದವ್ ನಿವಾಸದಲ್ಲಿ ಸಭೆ ನಡೆಸಿದರು. ನಂತರ ಟಿಎಂಸಿಯಿಂದ ಬೇರ್ಪಟ್ಟು ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಎಂಬ ರಾಜಕೀಯ ಪಕ್ಷದೊಂದಿಗೆ ವಿಲೀನವಾಗುವ ನಿರ್ಧಾರ ಪ್ರಕಟಿಸಿದರು. ಇದೆಲ್ಲದರ ಹಿಂದೆ ಬಿಜೆಪಿ ಇಲ್ಲ ಎಂದು ಭಾವಿಸುವವರು ರಾಜಕೀಯ ಅನಕ್ಷರಸ್ಥರಷ್ಟೇ!
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್ ಕಾಲಾಳು ಹರಿಪ್ರಸಾದ್ ಈಗ ಪಿಸಿಸಿ ತಲೆಯಾಳು; ಕುತೂಹಲ ಮೂಡಿಸಿದ ನೇಮಕ
2019ನೇ ಇಸವಿ, ಗೋವಾ ರಾಜಕಾರಣದಲ್ಲಿ ಹಿಂದೆಂದೂ ಕಾಣದಿದ್ದ ದೊಡ್ಡ ಮಟ್ಟದ ಪಕ್ಷಾಂತರ ನಡೆಯಿತು. ಕಾಂಗ್ರೆಸ್ನ 15 ಶಾಸಕರ ಪೈಕಿ 10 ಮಂದಿ ಒಟ್ಟಾಗಿ ಬಿಜೆಪಿಗೆ ಸೇರ್ಪಡೆಗೊಂಡರು. ವಿರೋಧ ಪಕ್ಷದ ನಾಯಕ ಎಂದೇ ಗುರುತಿಸಲಾಗಿದ್ದ ಚಂದ್ರಕಾಂತ್ ಕವ್ಲೆಕರ್ ನೇತೃತ್ವದಲ್ಲಿ ನಡೆದ ಈ ಮಹಾವಲಸೆಯನ್ನು ‘ಸಗಟು ಪಕ್ಷಾಂತರ’ ಎಂದು ಗುರುತಿಸಲಾಗುತ್ತದೆ. 2022ರಲ್ಲೂ ಇದು ಗೋವಾದಲ್ಲಿ ಪುನರಾವರ್ತನೆಯಾಯಿತು. ಕಾಂಗ್ರೆಸ್ನ ಒಟ್ಟು 11 ಶಾಸಕರ ಪೈಕಿ 8 ಮಂದಿ ಬಿಜೆಪಿಗೆ ಹೋದರು. ಮಧ್ಯಪ್ರದೇಶದಲ್ಲೂ ಇದೇ ನಡೆಯಿತು. ಕಾಂಗ್ರೆಸ್ನ ಯುವ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪಕ್ಷದ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯದಿಂದ 2020ರ ಮಾರ್ಚ್ನಲ್ಲಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದರು. ಸಿಂಧಿಯಾ ಅವರ ಬೆಂಬಲಿಗರಾಗಿದ್ದ 22 ಶಾಸಕರು ತಮ್ಮ ಶಾಸಕ ಸ್ಥಾನಗಳನ್ನು ತ್ಯಜಿಸಿದರು. ಈ ಬೆಳವಣಿಗೆಯಿಂದಾಗಿ ಕಮಲ್ ನಾಥ್ ಸರ್ಕಾರವು ವಿಧಾನಸಭೆಯಲ್ಲಿ ಬಹುಮತವನ್ನು ಕಳೆದುಕೊಂಡಿತು. ಬಿಜೆಪಿಯು 107 ಶಾಸಕರೊಂದಿಗೆ ಅತಿ ದೊಡ್ಡ ಪಕ್ಷವಾಗಿತ್ತು. ರಾಜೀನಾಮೆ ನೀಡಿದ್ದ ಶಾಸಕರ ಬೆಂಬಲದೊಂದಿಗೆ ಶಿವರಾಜ್ ಸಿಂಗ್ ಚೌಹಾಣ್ ಅವರು 2020ರ ಮಾರ್ಚ್ 23ರಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಂಡಾಯವೆದ್ದು ಬಿಜೆಪಿಗೆ ಬಂದಿದ್ದ ಶಾಸಕರ ಪೈಕಿ 18 ಮಂದಿ ಮರುಚುನಾಯಿತರಾದರು. ಇದರೊಂದಿಗೆ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ತನ್ನ ಬಹುಮತವನ್ನು ಸಂಪೂರ್ಣವಾಗಿ ಮರುಸ್ಥಾಪಿಸಿಕೊಂಡಿತು.
ಪಕ್ಷದ್ರೋಹದ ಬಗ್ಗೆ ಮಾತನಾಡುವ ಬಿಜೆಪಿ, ಭ್ರಷ್ಟರನ್ನು, ಇನ್ನೊಂದು ಪಕ್ಷಕ್ಕೆ ಮೋಸ ಮಾಡಿದವರನ್ನು ತನ್ನೊಳಗೆ ಸೇರಿಸಿಕೊಂಡು ಸರ್ಕಾರಗಳನ್ನು ನಡೆಸುವಾಗ, ಈ ‘ಮದರ್ ಸೆಂಟಿಮೆಂಟ್’ ಎಲ್ಲಿ ಹೋಗಿತ್ತು ಎಂದು ಕೇಳಬೇಕಾಗುತ್ತದೆ. ಆಯ್ಕೆ ಮಾಡಿ ಕಳುಹಿಸಿದ ಜನರ ವಿಶ್ವಾಸವೇ ನಿಜವಾದ ತಾಯಿ. ಅದಕ್ಕೆ ದ್ರೋಹ ಬಗೆದು ಬಂದವರನ್ನು ಜೊತೆಯಲ್ಲಿಟ್ಟುಕೊಂಡು ಸರ್ಕಾರ ನಡೆಸಿದ ಬಿಜೆಪಿಯವರು, ನಿಜವಾದ ಮಾತೃ ದ್ರೋಹಿಗಳಲ್ಲವೇ?



