ಟ್ರಂಪ್ ಅವರು ಭಾರತದ ವಿರುದ್ಧ ನೀಡಿದ ಅನೇಕ ಅಸಡ್ಡೆಯ ಹೇಳಿಕೆಗಳನ್ನು ಪ್ರಶ್ನಿಸುವ ದಿಟ್ಟತನವನ್ನು ಮೋದಿ ಸರ್ಕಾರ ಪ್ರದರ್ಶಿಸಲಿಲ್ಲ. ಈ ಮೌನವನ್ನು ರಾಜತಾಂತ್ರಿಕ ತಂತ್ರ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನಗಳು ನಡೆದರೂ, ವಾಸ್ತವದಲ್ಲಿ ಅದು ಭಾರತದ ಬಗೆಗಿನ ಅಸಡ್ಡೆಯನ್ನು ಮನ್ನಿಸಿದಂತೆಯೇ ಕಾಣಿಸುತ್ತದೆ.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿ ನಾಯಕನ ಪ್ರತಿಯೊಂದು ಹೇಳಿಕೆ, ಪ್ರತಿ ನಡೆಯೂ ಆ ದೇಶದ ಸಾರ್ವಭೌಮತ್ವವನ್ನು ಬಿಂಬಿಸುತ್ತವೆ. ಇತ್ತೀಚೆಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಕುರಿತು ನೀಡಿದ ಅವಮಾನಕಾರಿ ಹೇಳಿಕೆ ಮತ್ತು ಅದಕ್ಕೆ ಮೆಲೋನಿ ಅವರು ನೀಡಿದ ಖಡಕ್ ತಿರುಗೇಟು ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಇದೇ ಸಂದರ್ಭದಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅನುಸರಿಸುತ್ತಿರುವ ನಿರಂತರ ‘ಮೆಲೋಡಿ ರಾಜಕಾರಣʼವು, ಭಾರತದ ಜಾಗತಿಕ ನಾಯಕತ್ವದ ಮೇಲೆ ಪ್ರಶ್ನೆಗಳನ್ನು ಎತ್ತಿದೆ.
ಇಟಲಿಯ ಪ್ರಮುಖ ಮಾಧ್ಯಮ ಸಂಸ್ಥೆಯಾದ ‘La7 TV’ಗೆ ನೀಡಿದ ಸಂದರ್ಶನದಲ್ಲಿ, ಡೊನಾಲ್ಡ್ ಟ್ರಂಪ್ ಅವರು ಅತ್ಯಂತ ಅಪ್ರಸ್ತುತ ಹಾಗೂ ಆಧಾರರಹಿತ ಹೇಳಿಕೆಯೊಂದನ್ನು ನೀಡಿದ್ದರು. ಇತ್ತೀಚಿನ ಜಿ7 (G7) ಶೃಂಗಸಭೆಯಲ್ಲಿ ಜಾರ್ಜಿಯಾ ಮೆಲೋನಿ ಅವರು ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ತುಂಬಾ ಬೇಡಿಕೊಂಡರು ಎಂದು ಟ್ರಂಪ್ ಹೇಳಿದ್ದರು. “ಅವರು ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಹಳ ಬೇಡಿಕೊಂಡರು. ನಾನು ಅಷ್ಟೇನೂ ಇಷ್ಟಪಟ್ಟಿರಲಿಲ್ಲ, ಆದರೆ ಅವರ ಮೇಲೆ ಕರುಣೆ ತೋರಿ ಒಪ್ಪಿಕೊಂಡೆ” ಎಂದು ಟ್ರಂಪ್ ಹೀಯಾಳಿಸಿದ್ದರು.
ಈ ಹೇಳಿಕೆಗೆ ಮೆಲೋನಿ ಅವರು ಸಾಮಾಜಿಕ ಜಾಲತಾಣ ‘X’ ಮೂಲಕ ಪ್ರತಿಕ್ರಿಯಿಸಿ ಅಮೆರಿಕ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. “ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಸಂಪೂರ್ಣ ಸುಳ್ಳು ಮತ್ತು ಕಟ್ಟುಕಥೆ. ಅಮೆರಿಕದಂತಹ ಮಿತ್ರರಾಷ್ಟ್ರದ ಅಧ್ಯಕ್ಷರು ತನ್ನದೇ ಮಿತ್ರರಾಷ್ಟ್ರದ ನಾಯಕರೊಂದಿಗೆ ಈ ರೀತಿಯಾಗಿ ವರ್ತಿಸುವುದು ಏಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ಮೊದಲ ಬಾರಿಯೂ ಅಲ್ಲ” ಎಂದು ಮೆಲೋನಿ ಖಾರವಾಗಿ ಉತ್ತರಿಸಿದರು. ಅಲ್ಲದೆ, “ಒಂದು ವಿಷಯವನ್ನು ನೆನಪಿಟ್ಟುಕೊಳ್ಳಿ, ಇಟಲಿ ಮತ್ತು ನಾನು ಯಾರ ಮುಂದೆಯೂ ಎಂದಿಗೂ ಬೇಡಿಕೊಳ್ಳುವುದಿಲ್ಲ” ಎಂದು ಘೋಷಿಸುವ ಮೂಲಕ ಇಟಲಿಯ ಸ್ವಾಭಿಮಾನವನ್ನು ಎತ್ತಿ ಹಿಡಿದರು.
ಈ ಘಟನೆಯು ಇಟಲಿಯ ಆಡಳಿತ ವಲಯದಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿತು. ಇಟಲಿಯ ವಿದೇಶಾಂಗ ಸಚಿವ ಆಂಟೊನಿಯೊ ತಾಜನಿ ಅವರು ಟ್ರಂಪ್ ಅವರ ಈ ವರ್ತನೆಯನ್ನು “ಅವಮಾನಕಾರಿ” ಎಂದು ಕರೆದು, ಮಿಯಾಮಿಯಲ್ಲಿ ನಡೆಯಬೇಕಿದ್ದ ಪ್ರಮುಖ ವ್ಯಾಪಾರ ಮತ್ತು ಹೂಡಿಕೆ ಸಮಾವೇಶಕ್ಕಾಗಿ ನಿಗದಿಯಾಗಿದ್ದ ತಮ್ಮ ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದರು. ಇದು ಮೆಲೋನಿ ಸರ್ಕಾರವು ರಾಜತಾಂತ್ರಿಕ ಸಂಬಂಧಕ್ಕಿಂತ ರಾಷ್ಟ್ರದ ಗೌರವಕ್ಕೆ ಎಷ್ಟು ಆದ್ಯತೆ ನೀಡುತ್ತದೆ ಎಂಬುದನ್ನು ತೋರಿಸಿಕೊಟ್ಟಿತು.
ಇತ್ತ ಭಾರತದ ವಿಷಯಕ್ಕೆ ಬಂದರೆ, ಪರಿಸ್ಥಿತಿ ಸಂಪೂರ್ಣ ಭಿನ್ನ. ಡೊನಾಲ್ಡ್ ಟ್ರಂಪ್ ಪದೇಪದೇ ಭಾರತವನ್ನು ಎರಡನೇ ದರ್ಜೆಯ ದೇಶದ ರೀತಿ ಬಿಂಬಿಸುವುದು, ಟೀಕಿಸುವುದು ಮಾಡುತ್ತಲೇ ಇರುತ್ತಾರೆ. H-1B ವೀಸಾ ನೀತಿಗಳ ಮೂಲಕ ಭಾರತೀಯ ವೃತ್ತಿಪರರ ಮೇಲೆ ಕಠಿಣ ಕ್ರಮಗಳನ್ನು ಹೇರಿದಾಗವಾಗಲೀ ಅಥವಾ ಭಾರತದ ಆಂತರಿಕ ವಿಚಾರಗಳ ಬಗ್ಗೆ ಪದೇ ಪದೇ ಮೂಗು ತೂರಿಸಿದಾಗ ಆಗಲೀ ಮೋದಿ ಸರ್ಕಾರದ ಪ್ರತಿಕ್ರಿಯೆ ಮಾತ್ರ ಶೂನ್ಯ.
‘ಹೌಡಿ ಮೋದಿ’ ಮತ್ತು ‘ನಮಸ್ತೆ ಟ್ರಂಪ್’ನಂತಹ ಅದ್ದೂರಿ ವೈಯಕ್ತಿಕ ಕಾರ್ಯಕ್ರಮಗಳ ಮೂಲಕ ಮೋದಿ- ಟ್ರಂಪ್ ಭಾರೀ ಭಾರೀ ಸ್ನೇಹಿತರು ಎಂದು ಬಿಂಬಿಸಲು ಪ್ರಯತ್ನಿಸಲಾಯಿತು. ಆದರೆ, ಟ್ರಂಪ್ ಎಂದಿಗೂ ಭಾರತವನ್ನು ತನ್ನ ಸರಿ ಸಮನಾಗಿ ನೋಡಲಿಲ್ಲ. ಇದು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳ ರಕ್ಷಣೆಗೆ ಎಷ್ಟರಮಟ್ಟಿಗೆ ನೆರವಾಯಿತು ಎಂಬುದು ಇಂದಿಗೂ ಚರ್ಚಾಸ್ಪದವಾಗಿದೆ. ಟ್ರಂಪ್ ಅವರು ಭಾರತದ ವಿರುದ್ಧ ನೀಡಿದ ಅನೇಕ ಅಸಡ್ಡೆಯ ಹೇಳಿಕೆಗಳನ್ನು ಪ್ರಶ್ನಿಸುವ ದಿಟ್ಟತನವನ್ನು ಮೋದಿ ಸರ್ಕಾರ ಪ್ರದರ್ಶಿಸಲಿಲ್ಲ. ಈ ಮೌನವನ್ನು ರಾಜತಾಂತ್ರಿಕ ತಂತ್ರ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನಗಳು ನಡೆದರೂ, ವಾಸ್ತವದಲ್ಲಿ ಅದು ಭಾರತದ ಬಗೆಗಿನ ಅಸಡ್ಡೆಯನ್ನು ಮನ್ನಿಸಿದಂತೆಯೇ ಕಾಣಿಸುತ್ತದೆ.
ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಸೌಹಾರ್ದಯುತವಾಗಿ ಬೆರೆತು, ಅವರಿಗೆ ‘ಮೆಲೋಡಿ’ ಚಾಕ್ಲೇಟ್ ನೀಡಿದ್ದನ್ನು ದೇಶ ಕಂಡಿದೆ. ಆದರೆ, ಇಂದಿನ ಜಗತ್ತಿಗೆ ಬೇಕಾಗಿರುವುದು ಚಾಕ್ಲೇಟ್ ನೀಡುವ ಸ್ನೇಹವಲ್ಲ; ಅಗತ್ಯ ಬಿದ್ದಾಗ ತಮ್ಮ ಬಗ್ಗೆ ಸುಳ್ಳಾಡುವವರನ್ನ ಸಾರ್ವಜನಿಕವಾಗಿ ಪ್ರಶ್ನಿಸುವ ನೈತಿಕ ಧೈರ್ಯ. ಮೆಲೋನಿ ಅವರು ಟ್ರಂಪ್ ಅವರ ಸುಳ್ಳನ್ನು ನೇರವಾಗಿ ಖಂಡಿಸಿದ ರೀತಿ ನೋಡಿದಾಗ, ಮೋದಿಯವರಲ್ಲಿ ಅಂತಹ ನೈತಿಕ ಧೈರ್ಯದ ಕೊರತೆ ಎದ್ದು ಕಾಣುತ್ತದೆ. ಜಗತ್ತಿನ ಎದುರು ಭಾರತದ ಘನತೆಯನ್ನು ಎತ್ತಿ ಹಿಡಿಯಲು ಮೋದಿಯವರು ಮೆಲೋನಿಯವರಿಂದ ರಾಜತಾಂತ್ರಿಕ ದಿಟ್ಟತನವನ್ನು ಕಲಿಯಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ ಎನ್ನುವುದು ಪ್ರತಿಪಕ್ಷಗಳ ನಿಲುವು, ಅದು ನಿಜವೂ.
ಮೆಲೋನಿ ಮತ್ತು ಟ್ರಂಪ್ ಅವರ ಸಂಬಂಧವು ಒಂದು ಕಾಲದಲ್ಲಿ ಆಪ್ತವಾಗಿತ್ತು. ಇರಾನ್ ಯುದ್ಧದ ವಿಚಾರದಲ್ಲಿ ಪೋಪ್ ಫ್ರಾನ್ಸಿಸ್ ಅವರ ಹೇಳಿಕೆಯನ್ನು ಟ್ರಂಪ್ ಟೀಕಿಸಿದಾಗ ಮೆಲೋನಿ ಅದನ್ನು ಖಂಡಿಸಿದ್ದರು. ಅಂದಿನಿಂದಲೇ ಇಬ್ಬರ ನಡುವೆ ಬಿರುಕು ಮೂಡಿತ್ತು. ಮೆಲೋನಿ ಪಶ್ಚಿಮ ಯುರೋಪಿನಲ್ಲಿ ಟ್ರಂಪ್ ಅವರ ನಿಕಟ ಮಿತ್ರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರೂ, ರಾಷ್ಟ್ರೀಯ ಹಿತಾಸಕ್ತಿಯ ಪ್ರಶ್ನೆ ಬಂದಾಗ ಅವರು ಟ್ರಂಪ್ ವಿರುದ್ಧ ನಿಲ್ಲಲು ಹಿಂದೆ ಮುಂದೆ ನೋಡಲಿಲ್ಲ. ಟ್ರಂಪ್ ಅವರ ಎರಡನೇ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ಏಕೈಕ ಯುರೋಪಿಯನ್ ನಾಯಕಿ ಮೆಲೋನಿ ಆಗಿದ್ದರೂ, ಅವರು ವ್ಯಕ್ತಿಗತ ನಿಷ್ಠೆಗಿಂತ ದೇಶದ ಸ್ವಾಭಿಮಾನಕ್ಕೆ ಹೆಚ್ಚಿನ ಮಣೆ ಹಾಕಿದರು. ಸ್ನೇಹ ಬೇಕು, ಆದರೆ ಅದು ಆತ್ಮಗೌರವದ ಬಲಿಪೀಠದ ಮೇಲಿರಬಾರದು. ಸತ್ಯವನ್ನು ಬಲಿಗೊಟ್ಟು ಕಟ್ಟಿದ ರಾಜತಂತ್ರ ಅಲ್ಪಾಯುಷಿ.
ಮೆಲೋನಿ ಅವರು ತೋರಿಸಿದ ದಿಟ್ಟತನ ಮೋದಿಯವರ ರಾಜತಾಂತ್ರಿಕ ವೈಖರಿಗೆ ಒಂದು ಎಚ್ಚರಿಕೆಯ ಗಂಟೆ. ಅವರು ತೋರಿಸಿಕೊಟ್ಟಿರುವಂತೆ, ಜಾಗತಿಕ ವೇದಿಕೆಯಲ್ಲಿ ಕೆಲವೊಮ್ಮೆ ದೃಢವಾಗಿ ನಿಲ್ಲುವುದೇ ಅತ್ಯುತ್ತಮ ರಾಜತಂತ್ರ. ಸಾರ್ವಜನಿಕವಾಗಿ ಅವಮಾನಿಸುವ ಅಥವಾ ಸುಳ್ಳು ಹೇಳುವ ಯಾವುದೇ ನಾಯಕನಿಗೆ, ಅವರು ಎಷ್ಟೇ ದೊಡ್ಡ ಶಕ್ತಿಶಾಲಿ ದೇಶದ ನಾಯಕರಾಗಿದ್ದರೂ, ತಿರುಗೇಟು ನೀಡುವ ಸಾಮರ್ಥ್ಯವು ಭಾರತದಂತಹ ದೇಶದ ನಾಯಕನಿಗೆ ಇರಬೇಕು. ಈ ಮೌನವು ಮುಂದೊಂದು ದಿನ ನಮ್ಮ ದುರ್ಬಲತೆಯ ಸಾಕ್ಷಿಯಾಗಿ ದಾಖಲಾಗುವ ಮೊದಲು, ಮೋದಿ ಸರ್ಕಾರವು ಆತ್ಮಪರಿಶೀಲನೆ ಮಾಡಿಕೊಳ್ಳಬೇಕಿದೆ. ಸ್ನೇಹ ಮತ್ತು ರಾಜತಾಂತ್ರಿಕತೆಯ ನಡುವೆ ಸಮತೋಲನ ಸಾಧಿಸುವಾಗ, ‘ಸ್ವಾಭಿಮಾನ’ವನ್ನು ಎಂದಿಗೂ ಒತ್ತೆ ಇಡಬಾರದು.
ಇದನ್ನೂ ಓದಿ: ಕಾಲದ ಕನ್ನಡಿ ಮತ್ತು ನೈತಿಕತೆಯ ಮೂರು ಮುಖಗಳು
1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ತೋರಿದ ರಾಜತಾಂತ್ರಿಕ ಚಾತುರ್ಯ ಜಗತ್ತನ್ನೇ ಬೆರಗುಗೊಳಿಸಿತ್ತು. ಅಮೆರಿಕದಂತಹ ಬಲಿಷ್ಠ ರಾಷ್ಟ್ರಗಳು ಪಾಕಿಸ್ತಾನದ ಪರವಾಗಿ ಬೆದರಿಕೆ ಹಾಕಿದಾಗ, ಅವರು ಕಿಂಚಿತ್ತೂ ವಿಚಲಿತರಾಗಲಿಲ್ಲ. ರಷ್ಯಾದೊಂದಿಗೆ ಸ್ನೇಹ ಒಪ್ಪಂದ ಮಾಡಿಕೊಳ್ಳುವ ಮೂಲಕ ಜಾಗತಿಕ ರಾಜಕೀಯದ ಸಮೀಕರಣವನ್ನೇ ಬದಲಾಯಿಸಿದರು. ಅಮೆರಿಕದ ‘ಸೆವೆಂತ್ ಫ್ಲೀಟ್’ (Seventh Fleet) ಯುದ್ಧನೌಕೆಗಳು ಬಂಗಾಳ ಕೊಲ್ಲಿಗೆ ಬಂದು ಭಾರತವನ್ನು ಬೆದರಿಸಲು ಯತ್ನಿಸಿದಾಗಲೂ, ಇಂದಿರಾ ತೋರಿದ ಸ್ಥೈರ್ಯ ಇಡೀ ದೇಶಕ್ಕೆ ಸ್ಫೂರ್ತಿಯಾಗಿತ್ತು. ಇದು ಕೇವಲ ಯುದ್ಧವಾಗಿರಲಿಲ್ಲ, ಭಾರತದ ಸಾರ್ವಭೌಮತ್ವದ ಮೇಲೆ ದಾಳಿ ಮಾಡಲು ಬಂದವರಿಗೆ ಕೊಟ್ಟ ಎಚ್ಚರಿಕೆಯಾಗಿತ್ತು. ರಿಚರ್ಡ್ ನಿಕ್ಸನ್ ಮತ್ತು ಹೆನ್ರಿ ಕಿಸ್ಸಿಂಜರ್ ಅವರಂತಹ ಪ್ರಭಾವಶಾಲಿ ನಾಯಕರು ಕೂಡ ಇಂದಿರಾ ಅವರನ್ನು ಎದುರಿಸಲು ಅಂಜುತ್ತಿದ್ದರು. ಅವರ ರಾಜತಾಂತ್ರಿಕ ನಡೆಗಳಲ್ಲ ರಾಷ್ಟ್ರದ ಶಕ್ತಿಯ ಪ್ರದರ್ಶನವಿರುತ್ತಿತ್ತು. ಇಂದಿನ ನಾಯಕರು, ವಿಶೇಷವಾಗಿ ಪ್ರಧಾನಿ ಮೋದಿಯವರು ‘ರಾಜತಂತ್ರ’ದ ಹೆಸರಿನಲ್ಲಿ ಎದುರಾಳಿಗಳು ಸಲೀಸಾಗಿ ಸುಳ್ಳು ಹೇಳುತ್ತಿದ್ದರೂ ಮೌನವಾಗಿ ಬೆಂಬಲ ಸೂಚಿಸುತ್ತಿದ್ದಾರೆ.
ಜಾಗತಿಕ ರಾಜಕಾರಣದಲ್ಲಿ, ರಾಷ್ಟ್ರವೊಂದರ ನಾಯಕನ ಧ್ವನಿ ಆ ದೇಶದ ಆತ್ಮಗೌರವದ ಸಂಕೇತ. ಸದ್ಯ ಮೆಲೋನಿ ಅವರು ತೋರಿಸಿದ ದಿಟ್ಟತನವು ಮೋದಿಯವರಿಗೆ ಒಂದು ಪಾಠವಾಗಬೇಕಿದೆ. ಕೇವಲ ಸ್ನೇಹದಿಂದ ರಾಜತಂತ್ರವನ್ನು ನಡೆಸಲಾಗುವುದಿಲ್ಲ ಎಂಬುದನ್ನು ಮೋದಿಯವರು ಮನಗಾಣಬೇಕಿದೆ.




