ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ನ್ಯಾಯಾಲಯ ಸಂಕೀರ್ಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಪೊಲೀಸರು ನಡೆಸಿದ ಸಮಗ್ರ ತಪಾಸಣೆಯ ಬಳಿಕ ಇದು ಹುಸಿ ಬೆದರಿಕೆ ಎಂದು ದೃಢಪಟ್ಟಿದೆ.
ಮುಖ್ಯ ನಿರ್ವಾಹಣಾಧಿಕಾರಿಯವರು ಇಂದು ಬೆಳಿಗ್ಗೆ ಕಚೇರಿಗೆ ಆಗಮಿಸಿ ಇ-ಮೇಲ್ ಪರಿಶೀಲಿಸಿದ ವೇಳೆ, ಜೂನ್ 21ರಂದು (ನಿನ್ನೆ) ಸಂಜೆ 6.33ಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಇ-ಮೇಲ್ ವಿಳಾಸಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಬಾಂಬ್ ಇರಿಸಿರುವುದಾಗಿ ಸಂದೇಶ ಬಂದಿರುವುದು ಪತ್ತೆಯಾಯಿತು. ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ, ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಹಾಗೂ ಪೊಲೀಸ್ ಉಪನಿರೀಕ್ಷಕ ಭರತೇಶ್ ಕಂಕಣವಾಡಿ ನೇತೃತ್ವದಲ್ಲಿ ಪೊಲೀಸರು ನ್ಯಾಯಾಲಯ ಸಂಕೀರ್ಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ನ್ಯಾಯಾಲಯದ ಎಲ್ಲಾ ಕೊಠಡಿಗಳು, ಸಭಾಂಗಣಗಳು, ಶೌಚಾಲಯಗಳು ಹಾಗೂ ಹೊರ ಆವರಣವನ್ನು ತಪಾಸಣೆಗೊಳಪಡಿಸಲಾಯಿತು.
ತಪಾಸಣೆಯ ವೇಳೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ನಿರ್ಧರಿಸಿದ್ದು, ನ್ಯಾಯಾಲಯದ ಕಲಾಪವನ್ನು ಮುಂದುವರಿಸಲು ಅವಕಾಶ ನೀಡಲಾಯಿತು.
ಈ ಸಂಬಂಧ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ ವ್ಯಕ್ತಿಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 76/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 351(4) ಹಾಗೂ 353(1)(b) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






