‘ಇದು ಪ್ರತಿರೋಧವು ಹೌದು, ಅಸಹಾಯಕತೆಯೂ ಹೌದು’; ಗೋಹತ್ಯೆ ನಿರಾಕರಣೆ ಬಗ್ಗೆ ಮುಸ್ಲಿಮರ ಮನದ ಮಾತು

Date:

ಹಸುವನ್ನು ರಾಷ್ಟ್ರೀಯ ಪ್ರಾಣಿ ಮಾಡಿ ಎಂಬುದು ಒಂದು ವಿಡಂಬನೆ. ಆಗಲಾದರೂ ದೊಡ್ಡದೊಡ್ಡ ಗೋಮಾಂಸ ರಫ್ತು ಕಂಪನಿಗಳು ಮುಚ್ಚಬಹುದು, ಸರ್ಕಾರದ ಇಬ್ಬಂದಿ ನೀತಿ ಬಯಲಾಗಬಹುದು ಎಂಬುದು ಮುಸ್ಲಿಂ ಸಮುದಾಯದ ಒತ್ತಾಸೆ.  

“ಈ ಬಾರಿಯ ಬಕ್ರೀದ್ (ಈದ್ ಉಲ್ ಅದಾ) ಹಬ್ಬದಲ್ಲಿ ಗೋವುಗಳನ್ನು ಖರೀದಿಸುವುದಿಲ್ಲ ಎಂಬುದು ಮುಸ್ಲಿಮರ ಪ್ರತಿರೋಧವು ಹೌದು, ಅಸಹಾಯಕತೆಯೂ ಹೌದು. ಗೋವನ್ನು ರಾಷ್ಟ್ರೀಯ ಪ್ರಾಣಿ ಮಾಡಿ ಎನ್ನುತ್ತಿರುವಲ್ಲಿ ರಾಜಕೀಯ ವಿಡಂಬನೆಯೂ ಇದೆ” ಎನ್ನುತ್ತಾರೆ ರಾಯಚೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಜೀಶಾನ್ ಅಖಿಲ್ ಸಿದ್ದಿಕಿ.

- Advertisement -

ಗೋಹತ್ಯೆ ಹೆಸರಲ್ಲಿ ಮುಸ್ಲಿಮರ ಮೇಲಾಗುತ್ತಿರುವ ದಬ್ಬಾಳಿಕೆಗಳ ಕುರಿತು ಜಾಗೃತಿ ಮೂಡಿಸುತ್ತಿರುವ ಕೊಪ್ಪಳದ ಮುಸ್ಲಿಂ ಮುಖಂಡ, ಸಾಮಾಜಿಕ ಕಾರ್ಯಕರ್ತ ಸಲೀಮ್ ಮಹಮ್ಮದ್ ಹೀಗೆ ಹೇಳುತ್ತಾರೆ: “ಗೋಮಾಂಸವನ್ನು ನಾವು ಮಾತ್ರ ತಿನ್ನುತ್ತಿಲ್ಲ. ಆದರೆ ನಮ್ಮ ಮೇಲೆ ಮಾತ್ರ ಹಲ್ಲೆಗಳಾಗುತ್ತಿವೆ. ಗೋವನ್ನು ಮಾರಾಟ ಮಾಡಿದವನೇ ಹಿಂಬದಿಯಿಂದ ನಕಲಿ ಗೋರಕ್ಷಕರಿಗೆ ಮಾಹಿತಿ ನೀಡಿರುವ ಘಟನೆಗಳಾಗಿವೆ. ಗೋವಿನ ಹೆಸರಲ್ಲಿ ನಮ್ಮನ್ನು ದೂರುವುದು, ನಮ್ಮಿಂದ ಸಾಮರಸ್ಯ ಕೆಡುತ್ತಿದೆ ಎಂದು ಆರೋಪಿಸುವುದು ಮಾತ್ರ ನಿಂತಿಲ್ಲ. ನಮ್ಮಿಂದ ಸಾಮರಸ್ಯ ಕೆಡುತ್ತಿದೆ ಎನ್ನುವುದಾದರೆ ಒಂದು ವರ್ಷ ಗೋವುಗಳನ್ನು ಕಡಿಯುವುದನ್ನೇ ನಿಲ್ಲಿಸುತ್ತೇವೆ”.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇದು ಅಸಹಾಯಕ ಮುಸ್ಲಿಂ ಸಮುದಾಯ ಕಂಡುಕೊಂಡಿರುವ ಹೊಸ ಹಾದಿ!

ಗೋವಿನ ರಾಜಕಾರಣದಲ್ಲಿ ಸಿಲುಕಿ ದಶಕಗಳಿಂದಲೂ ನೊಂದಿರುವ ಮುಸ್ಲಿಮರು, ಗೋ ಹತ್ಯೆಯನ್ನೇ ಮಾಡುವುದಿಲ್ಲ, ಗೋವುಗಳನ್ನೇ ಖರೀದಿಸುವುದಿಲ್ಲ ಎನ್ನುತ್ತಿರುವುದು ಸರಳ ಸಂಗತಿಯಲ್ಲ. ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಪಲ್ಲಟಗಳನ್ನು ಸೂಚಿಸುವ ಮತ್ತು ಪ್ರಭುತ್ವದ ಬೂಟಾಟಿಕೆಯನ್ನು ಪ್ರಶ್ನಿಸುವ ವಿದ್ಯಮಾನವಾಗಿಯೂ ಇದು ದಾಖಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರಿದ ಬಿಜೆಪಿ, ಬಕ್ರೀದ್ ಹಬ್ಬದ ಹೊತ್ತಿನಲ್ಲೇ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕಠಿಣ ಗೋಹತ್ಯೆ ನಿಷೇಧ ನಿಯಮವನ್ನು ಜಾರಿಗೆ ತಂದಿತು. ಇದರ ಬೆನ್ನಲ್ಲೇ, “ನಾವು ಸರ್ಕಾರದ ನಿಲುವನ್ನು ಬೆಂಬಲಿಸುತ್ತೇವೆ. ಬಕ್ರೀದ್ ಹಬ್ಬದಲ್ಲಿ ಗೋವುಗಳನ್ನು ಖರೀದಿಸುವುದಿಲ್ಲ” ಎಂದು ಮುಸ್ಲಿಂ ನಾಯಕರು ಹೇಳಿಕೆ ನೀಡಿದರು. ಇದು ಅಲ್ಲಿನ ಹಿಂದೂ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನೊಂದೆಡೆ ಉತ್ತರ ಪ್ರದೇಶದ ಜಮೈತ್ ಉಲ್ಮಾ ಎ ಹಿಂದ್ ಸಂಘಟನೆ ‘ಗೋವನ್ನು ಭಾರತದ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು’ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ‘ಗೋವನ್ನು ರಾಷ್ಟ್ರೀಯ ಪ್ರಾಣಿ ಮಾಡಿ, ಮುಸ್ಲಿಮರು ಇನ್ನು ಮುಂದೆ ಗೋವುಗಳನ್ನು ಖರೀದಿಸುವುದಿಲ್ಲ’ ಎನ್ನುವುದು ಚಳವಳಿ ಸ್ವರೂಪ ಪಡೆದು ರಾಷ್ಟ್ರವ್ಯಾಪಿ ಹಬ್ಬುತ್ತಿರುವಂತೆಯೂ ಕಾಣುತ್ತಿದೆ. ಈ ಬೆಳವಣಿಗೆ ರಾಜ್ಯಕ್ಕೂ ಕಾಲಿಟ್ಟಿದ್ದು, ಹಾಸನ ಜಿಲ್ಲೆಯಲ್ಲಿ ಮುಸ್ಲಿಮರು ಗೋವುಗಳ ಖರೀದಿ ನಿರಾಕರಿಸಿರುವ ವಿಡಿಯೊ ವೈರಲ್ ಆಗಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ‘ಈದಿನ’ದ ಜೊತೆ ಮಾತನಾಡಿದ ಜೀಶಾನ್, “ಗೋಹತ್ಯೆ ನಿಷೇಧ ಕಾಯ್ದೆಯಿಂದ ಮುಸ್ಲಿಮರಿಗೆ ಮಾತ್ರ ತೊಂದರೆಯಾಗಿದೆ ಎಂಬಂತೆ ಸಂಘಪರಿವಾರ ಪ್ರಚಾರ ಮಾಡಿದೆ. ಗೋಹತ್ಯೆ ಎಂದ ತಕ್ಷಣ ಮುಸ್ಲಿಮರನ್ನು ಹೊಡೆಯುವುದು, ಅವರನ್ನು ಶೋಷಿಸುವುದೇ ಹೆಚ್ಚಾಗಿ ಕಂಡುಬರುತ್ತದೆ. ನಾವಿನ್ನು ಗೋವುಗಳನ್ನು ಖರೀದಿಸುವುದಿಲ್ಲ ಎಂದು ರಾಜ್ಯದ ಮುಸ್ಲಿಂ ಸಮುದಾಯದ ಮುಂಚೂಣಿ ಸಂಘಟನೆಗಳ್ಯಾವುವು ಘೋಷಿಸಿಲ್ಲ ನಿಜ. ಆದರೆ ಸಮುದಾಯದ ವ್ಯಕ್ತಿಗಳು ತಮ್ಮ ಪ್ರತಿರೋಧ ಹಾಗೂ ಅಸಹಾಯಕತೆಯನ್ನು ಹೊರಹಾಕಿದ್ದಾರೆ. ನಾವು ದುಡ್ಡು ಕೊಟ್ಟು ತೆಗೆದುಕೊಳ್ಳುತ್ತೇವೆ. ಆದರೆ ನಮ್ಮ ಬಳಿಯೇ ಆ ಗೋವುಗಳು ಇರುತ್ತವೆ ಎಂಬುದಕ್ಕೆ ಯಾವುದೇ ಖಾತ್ರಿ ಇರುವುದಿಲ್ಲ. ಮಧ್ಯದಲ್ಲಿ ನಕಲಿ ಗೋರಕ್ಷಕರು ಬಂದು ತೊಂದರೆ ಕೊಡುತ್ತಾರೆ. ಹಾಕಿದ ಬಂಡವಾಳಕ್ಕೂ ಮತ್ತು ನಮ್ಮ ಜೀವಕ್ಕೂ ಯಾವುದೇ ರಕ್ಷಣೆ ಇಲ್ಲದಿರುವುದರಿಂದ ಸಮುದಾಯ ಈ ಹೆಜ್ಜೆ ಇಟ್ಟಿರಬಹುದು” ಎನ್ನುತ್ತಾರೆ.

ಜೀಶಾನ್ ಅಖಿಲ್ ಸಿದ್ದಿಕಿ
ಜೀಶಾನ್ ಅಖಿಲ್ ಸಿದ್ದಿಕಿ

ಮುಂದುವರಿದು, ಗೋಮಾಂಸದ ಸುತ್ತಲಿನ ವ್ಯವಹಾರವನ್ನು ವಿವರಿಸುವ ಅವರು, “ಗೋಮಾಂಸ ಉದ್ಯಮದಲ್ಲಿ ಮುಖ್ಯವಾಗಿ ತೊಡಗಿಸಿಕೊಂಡಿರುವ ಮುಸ್ಲಿಮರ ಪ್ರಮಾಣ ತೀರಾ ಚಿಕ್ಕದು. ಅವರನ್ನು ಸಾಮಾನ್ಯವಾಗಿ ಖುರೇಷಿಗಳು ಎಂದು ಕರೆಯುತ್ತೇವೆ. ಅವರ ಪ್ರಮಾಣ ಮುಸ್ಲಿಂ ಜನಸಂಖ್ಯೆಯೊಳಗೆ ಶೇ. 5ರಷ್ಟು ಇರಬಹುದು. ಗೋವುಗಳ ಖರೀದಿ ನಿರಾಕರಣೆ ಮಾಡಿದರೆ  ಅವರಿಗೆ ಆರ್ಥಿಕ ನಷ್ಟ ಆಗುತ್ತಿದೆ. ವಾಸ್ತವದಲ್ಲಿ ಈಗಾಗಲೇ ಖುರೇಷಿಗಳು ನಷ್ಟದಲ್ಲಿದ್ದಾರೆ. ಮೋದಿ ಅಧಿಕಾರಕ್ಕೆ ಬರುವ ಮುಂಚೆ ತಮಿಳುನಾಡು ಭಾಗದಲ್ಲಿ ನೂರಾರು ಚರ್ಮದ ಫ್ಯಾಕ್ಟರಿಗಳಿದ್ದವು. ಈ ಚರ್ಮೋದ್ಯಮಗಳೆಲ್ಲ ಮುಸ್ಲಿಮರ ಕೈಯಲ್ಲಿದ್ದವು. ಹಳ್ಳಿಗಳಲ್ಲಿ ಗೋವುಗಳನ್ನು ವಧೆ ಮಾಡುತ್ತಿದ್ದ ವ್ಯಾಪಾರಿಗಳಿಗೆ ಕನಿಷ್ಠ ಚರ್ಮದಿಂದಲಾದರೂ ಬಂಡವಾಳ ವಾಪಸ್ ಬರುತ್ತಿತ್ತು. ಆದರೆ ಕಾರ್ಖಾನೆಗಳಲ್ಲಿ ಚರ್ಮದ ಸಂಸ್ಕರಣೆಗೆ ಬಳಸುತ್ತಿದ್ದ ಉಪ್ಪಿನ ಮೇಲೆ (ಅಂದರೆ ಸಾಮಾನ್ಯ ಉಪ್ಪು ಮತ್ತು ಕೈಗಾರಿಕಾ ದರ್ಜೆಯ ಸೋಡಿಯಂ ಕ್ಲೋರೈಡ್ ಮೇಲೆ) ಹೆಚ್ಚಿನ ಬೆಲೆಯನ್ನು ವಿಧಿಸಿದ ಸರ್ಕಾರ, ಉದ್ಯಮವನ್ನು ಕತ್ತು ಹಿಸುಕಿ ಕೊಂದಿತು. ಈಗ ಚರ್ಮದ ಬೆಲೆ 250- 400 ರೂಪಾಯಿಗೆ ಬಂದಿದೆ. ಇದೆಲ್ಲವನ್ನೂ ನೋಡಿದರೆ ಈಗಾಗಲೇ ಗೋಮಾಂಸ ಉದ್ಯಮ ಕುಸಿತ ಕಂಡಿದೆ. ಮುಸ್ಲಿಮರು ಈ ಉದ್ಯಮದಿಂದ ಹಿಂದೆ ಸರಿದರೆ, ಇದರಿಂದ ವ್ಯತಿರಿಕ್ತ ಪರಿಣಾಮ ರೈತರ ಮೇಲಾಗುತ್ತದೆ. ಗೋವುಗಳನ್ನು ಸಾಕಿ, ಮಾರುವವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಗೋಮಾಂಸವನ್ನು ಅವಲಂಬಿಸಿದ್ದ ಹೋಟೆಲ್ ಉದ್ಯಮಿಗಳು ಪರ್ಯಾಯಗಳನ್ನು ಕಂಡುಕೊಳ್ಳಬಹುದು. ಬೀಫ್ ಸಿಗದಿದ್ದರೆ ಚಿಕನ್‌ಗೆ ಶಿಫ್ಟ್ ಆಗಬಹುದು. ಆದರೆ ರೈತರಿಗೆ ಪರ್ಯಾಯವಿಲ್ಲ” ಎಂದು ಎಚ್ಚರಿಸುತ್ತಾರೆ.

“ರಾಷ್ಟ್ರೀಯ ಪ್ರಾಣಿ ಮಾಡಿ ಎಂಬುದು ಒಂದು ವಿಡಂಬನೆ ಅನಿಸುತ್ತದೆ. ಆಗಲಾದರೂ ದೊಡ್ಡದೊಡ್ಡ ಗೋಮಾಂಸ ರಫ್ತು ಕಂಪನಿಗಳು ಮುಚ್ಚಬಹುದು, ಸರ್ಕಾರದ ಇಬ್ಬಂದಿನೀತಿ ಬಯಲಾಗಬಹುದು ಎಂಬುದು ಮುಸ್ಲಿಂ ಸಮುದಾಯದ ಒತ್ತಾಸೆ.  ಗೋಮಾಂಸ ರಫ್ತಿನ ಅಸಲಿ ಜಾಲದ ಬಗ್ಗೆ ತಿಳಿಸುವುದು, ಗೋಹತ್ಯೆ ಹೆಸರಲ್ಲಿ ನಡೆಯುತ್ತಿರುವ ರಾಜಕೀಯವನ್ನು ಮುನ್ನಲೆಗೆ ತರುವುದು, ಕೋಮುಘರ್ಷಣೆಯನ್ನು ಗೋವಿನ ಹೆಸರಲ್ಲಿ ಸೃಷ್ಟಿಸುತ್ತಿರುವುದು, ಗೋರಕ್ಷಕ ಎಂಬ ಸೋಗಿನಲ್ಲಿ ರಾಜಕೀಯ ಪ್ರವೇಶಿಸುತ್ತಿರುವವರ ಉದ್ದೇಶ ಪ್ರಶ್ನಿಸುವುದು, ಗೋಹತ್ಯೆ ವಿಚಾರದಲ್ಲಿ ಗೋವಾ, ಸಿಕ್ಕಿಂನಂತಹ ರಾಜ್ಯಗಳಲ್ಲಿ ಬಿಜೆಪಿಯ ಇಬ್ಬಂದಿ ನೀತಿ ಇರುವುದನ್ನು ತೋರಿಸುವುದು- ಇವೆಲ್ಲವನ್ನೂ ಈ ದೇಶದ ಜನರಿಗೆ ಅರ್ಥ ಮಾಡಿಸುವ ಉದ್ದೇಶ ಈ ವಿಡಂಬನೆ ಹಿಂದೆ ಇದ್ದಂತೆ ತೋರುತ್ತದೆ” ಎನ್ನುತ್ತಾರೆ ಜೀಶಾನ್.

ಈಗ ಬಕ್ರೀದ್ ಸೀಸನ್. ಗೋಮಾಂಸ ನಿರಾಕರಣೆಯಿಂದ ಆಗುವ ಪರಿಣಾಮಗಳ ಕುರಿತು ಮತ್ತು ಸಮುದಾಯದ ಒಳಗೆ ಆಗಿರುವ ಚರ್ಚೆಗಳ ಸಂಬಂಧ ಸಲೀಮ್ ಮಹಮ್ಮದ್ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. “ಗೋವುಗಳ ಖರೀದಿ ನಿಲ್ಲಿಸಿದ ಮೇಲೆ ಅನೇಕ ರೈತರು ಕರೆ ಮಾಡುತ್ತಿದ್ದಾರೆ. ನಮ್ಮಲ್ಲಿ ಇರುವ ರಾಸುಗಳನ್ನು ನಾವೇ ತಂದು ಬಿಡುತ್ತೇವೆ ಎನ್ನುವವರೂ ಇದ್ದಾರೆ. ನಾವು ಒಪ್ಪುತ್ತಿಲ್ಲ. ಎಲ್ಲ ಕಡೆ ಬಂದ್ ಮಾಡಿದ್ದೇವೆ. ಅದನ್ನು ತಿಂದೇ ಬದುಕಬೇಕೆಂದು ನಮಗೇನೂ ಇಲ್ಲ. ಅದನ್ನೇ ಮಾರಿ ಬದುಕುವ ಅನಿವಾರ್ಯತೆಯೂ ನಮಗೆ ಇಲ್ಲ. ನಾವು ಏನು ತಿನ್ನಬೇಕು ಎಂದು ಇನ್ನೊಬ್ಬರು ನಿರ್ಧರಿಸುತ್ತಿರುವುದಕ್ಕೆ ಮಾತ್ರ ನಮ್ಮ ಆಕ್ರೋಶವಿದೆ” ಎನ್ನುತ್ತಾರೆ ಸಲೀಮ್.

ಮಹಮ್ಮದ್ ಸಲೀಮ್
ಮಹಮ್ಮದ್ ಸಲೀಮ್

ಕೊಪ್ಪಳದ ಗೋಮಾಂಸ ವ್ಯಾಪಾರಿಗಳ ಕುರಿತು ಉಲ್ಲೇಖಿಸಿದ ಅವರು, “ಆರ್ಥಿಕವಾಗಿ ನೋಡಿದರೂ ಮುಸ್ಲಿಮರು ಇದರಲ್ಲಿ ತೊಡಗಿಸಿಕೊಂಡಿರುವುದು ಬಹಳ ವಿರಳ. ಕೊಪ್ಪಳದಲ್ಲಿ 60,000 ಮುಸ್ಲಿಮರಿದ್ದೇವೆ. ಗೋಮಾಂಸ ಉದ್ಯಮದಲ್ಲಿ ಭಾಗಿಯಾಗಿರುವುದು ಕೇವಲ 500 ಮುಸ್ಲಿಮರಷ್ಟೇ. ಬಕ್ರೀದ್‌ನಲ್ಲಿ ಗೋವು ಎರಡನೇ ಆಯ್ಕೆ. ಮೊದಲ ಆಯ್ಕೆಯೇ ಕುರಿ. ಬಡವರು ಕುರಿ ಖರೀದಿ ಮಾಡುವುದು ಕಷ್ಟವೆಂಬ ಕಾರಣಕ್ಕೆ ಗೋಮಾಂಸದ ಮೊರೆ ಹೋಗಿದ್ದರಷ್ಟೇ. ಗೋವಿನ ಬಲಿದಾನ ಕೊಡಲೇಬೇಕೆಂಬ ನಿಯಮವೇನೂ ಇಲ್ಲ. ಒಂದು ವರ್ಷ ಕೊಡದಿದ್ದರೂ ನಡೆಯುತ್ತದೆ ಎಂಬ ನಿರ್ಧಾರಕ್ಕೆ ಸಮುದಾಯ ಬಂದಿದೆ. ಆಂತರಿಕವಾಗಿಯೂ ನಾವು ಈ ಬಗ್ಗೆ ಗಂಭೀರ ಚರ್ಚೆಗಳನ್ನು ನಡೆಸಿದ್ದೇವೆ. ಒಂದು ವರ್ಷ ಬಿಟ್ಟರೆ ಯಾರಿಗೆ ನಷ್ಟ? ನಮ್ಮಲ್ಲಿ ಐದು ನೂರು ಜನಕ್ಕೆ ಲುಕ್ಸಾನು ಆಗಬಹುದು. ಅವರು ಪರ್ಯಾಯ ಉದ್ಯೋಗಗಳನ್ನು ನೋಡಿಕೊಳ್ಳುತ್ತಾರೆ. ಪ್ರತಿ ವರ್ಷ ನೂರು ಗೋವುಗಳನ್ನು ಕಡಿಯುತ್ತಿದ್ದರು. ಈ ವರ್ಷ ಅದರ ಪ್ರಮಾಣ 25ಕ್ಕೆ ಇಳಿಯಬಹುದು. ಎಲ್ಲ ಕಡೆಯೂ ನಾವು ಬಂದ್ ಮಾಡಿಸಿದ್ದೇವೆ” ಎಂದು ತಿಳಿಸಿದರು.

ಗೋವನ್ನು ರಾಷ್ಟ್ರೀಯ ಪ್ರಾಣಿ ಮಾಡಿಬಿಟ್ಟರೆ?

“ಗೋವುಗಳ ಖರೀದಿ ನಿರಾಕರಿಸಿ ಮತ್ತು ಗೋವನ್ನು ರಾಷ್ಟ್ರೀಯ ಪ್ರಾಣಿ ಮಾಡಿ” ಎಂಬ ನಿಲುವುಗಳನ್ನು ತಪ್ಪೆಂದು ಗುರುತಿಸುವ ಹಿರಿಯ ಹೋರಾಟಗಾರ, ಡಿವೈಎಫ್‌ಐನ ಮುನೀರ್ ಕಾಟಿಪಳ್ಳ ಅವರು ಸೆಕ್ಯುಲರ್‌ ಶಕ್ತಿಗಳ ವೈಫಲ್ಯವನ್ನು ಎತ್ತಿಹಿಡಿಯುತ್ತಾರೆ. “ಏಳೆಂಟು ವರ್ಷಗಳ ಹಿಂದೆ ಗೋಹತ್ಯೆ ನಿಷೇಧದ ಪ್ರಸ್ತಾಪ ಬಂದಿದ್ದಾಗ ಡಿವೈಎಫ್ಐನಿಂದ ಬೀಫ್ ಫೆಸ್ಟಿವಲ್ ಆಯೋಜನೆ ಮಾಡಿ, ಟೌನ್‌ ಹಾಲ್‌ನಲ್ಲೇ ಗೋಮಾಂಸ ಹಂಚಿದ್ದೆವು. ಗಿರೀಶ್ ಕಾರ್ನಾಡ್ ಸೇರಿದಂತೆ ದೊಡ್ಡದೊಡ್ಡ ಬರಹಗಾರರು ಆ ಫೆಸ್ಟಿವಲ್‌ಗೆ ಬಂದಿದ್ದರು. ಅಂತಹದೊಂದು ಕಾರ್ಯಕ್ರಮ ಮಾಡಲಾಗದಂತಹ ಸ್ಥಿತಿ ಕರ್ನಾಟಕದಲ್ಲಿ ಈಗ ನಿರ್ಮಾಣ ಆಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಚುನಾವಣಾ ಪ್ರಾಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನೇ ಕಾಂಗ್ರೆಸ್‌ನವರು ಈವರೆಗೆ ಜಾರಿಗೆ ತಂದಿಲ್ಲ. ಇಂತಹ ಸ್ಥಿತಿಯಲ್ಲಿ ಮುಸ್ಲಿಮರು ಏನು ಮಾಡಬೇಕು? ಅಸಹಾಯಕತೆಯಲ್ಲಿ ತಮಗೆ ತೋಚಿದ್ದನ್ನು ಮುಸ್ಲಿಮರು ಮಾಡುತ್ತಿದ್ದಾರಷ್ಟೇ” ಎಂದರು.

ಮುನೀರ್ ಕಾಟಿಪಳ್ಳ
ಮುನೀರ್ ಕಾಟಿಪಳ್ಳ

“ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡುವ ಸಾಮರ್ಥ್ಯ ಆರ್‌ಎಸ್‌ಎಸ್‌ಗೆ ಖಂಡಿತ ಇದೆ ಎಂಬುದನ್ನು ಮರೆಯಬಾರದು. ಮುಸ್ಲಿಮರ ಅಸಹಾಯಕತೆಗೆ ಚಳವಳಿಗಳ ಸೋಲೂ ಕಾರಣ” ಎಂದು ವಿಷಾದಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...