ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿಯ ಕವಿತೆ ಒಡಿಯಾ ಮೂಲದ ಪ್ರವಾಸಿನಿ ಮಹಾಕೂಡ್ ಅವರ ʼಅವಳುʼ. ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್ ಭಾಗ್ಯ
ಅವಳು
ಅವಳಿಗೆ ನಕ್ಷತ್ರ ಬೇಕಿತ್ತು
ಕಿಟಕಿ ತೆರೆದಳು
ಪಾರಿಜಾತವು ಪಟಪಟನೆ ನಕ್ಷತ್ರ ಸುರಿಸಿತು.
ಅವಳಿಗೊಂದು ಹೂ ಬೇಕಿತ್ತು
ಬಾಗಿಲು ತೆರೆದಳು
ಕೊಳದಲ್ಲಿ ಲಕ್ಷಾಂತರ ತಾವರೆಗಳು ಅರಳಿದ್ದವು.
ಅವಳು ಹಕ್ಕಿಯೊಡನೆ ಮಾತಾಡ ಬಯಸಿದಳು
ನೀಲಿ ಬಿಳಿ ಹಕ್ಕಿಗಳು ಹಿಂಡು ಹಿಂಡೇ
ಆಗಸದುದ್ದಕ್ಕೂ ಹಾರಿದವು.
ಕಾಲ ಸರಿದಂತೆ
ಅವಳೇ ಗತಃಕಾಲವಾದಳು
ಪ್ರಮುಖ ಸುದ್ದಿಪತ್ರಿಕೆಯ ತಲೆಬರಹವಾದಳು.
ಒಂದು ದಿನ ಅವಳು
ಮೋಡವಾಗ ಬಯಸಿದಳು
ಬೂರುಗ ಜಾಲಾರಿ ಮುತ್ತುಗ ಗುಲ್ ಮೊಹರ್ ಗಳು
ಅಸಂಖ್ಯ ದೀವಟಿಗೆ ಬೆಳಗಿದವು.
ಒಂದು ದಿನ
ಭೂಮಿಯೇ ತಲ್ಲಣಿಸುವಂತಹ ತನ್ನೊಳಗಿನ
ಸುಪ್ತನೋವಿನ ಪರೆ ಕಳಚಲೆತ್ನಿಸಿದಳು
ಆದರೆ-
ನಕ್ಷತ್ರಗಳು ತಾವರೆಗಳು ಹಕ್ಕಿಗಳು
ಕಾಲ ಪತ್ರಿಕೆ ಮೋಡ ಹಾಗೂ ದೀವಟಿಗೆಗಳು
ಅವಳ ಸುತ್ತಲ ಜಗತ್ತನ್ನು ಮುಚ್ಚಿಬಿಟ್ಟವು.
ಆಗ ಅವಳಿಗೆ ಅರಿವಾಯಿತು
ಅವಳು ಇತಿಹಾಸವಾಗಿ
ದೇಗುಲದಾಚೆಯ ಒಂದು ಕಲ್ಲಿನ ಮೇಲೆ
ಗೋರಿಬರಹವಾಗಿಬಿಟ್ಟಿದ್ದಾಳೆ ಎಂದು.




