ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಸರಣಿ ಆರ್ಥಿಕ ಬಿಕ್ಕಟ್ಟು ಮತ್ತು ಕಾರ್ಯಾಚರಣೆ ವೆಚ್ಚಗಳ ಹೆಚ್ಚಳದಿಂದ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದು ಕರ್ನಾಟಕ ಸಾರಿಗೆ ಸಂಸ್ಥೆಗಳು ಹೇಳಿಕೊಂಡಿವೆ. ಈ ಹಿನ್ನೆಲೆ, ಬಸ್ ಪ್ರಯಾಣ ದರವನ್ನು ಮತ್ತೊಮ್ಮೆ ಪರಿಷ್ಕರಿಸಲು ಗಂಭೀರ ಚಿಂತನೆ ನಡೆಸಿವೆ ಎಂದು ವರದಿಯಾಗಿದೆ.
ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆಗಳು ಪ್ರಸ್ತುತ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ದರ ಏರಿಕೆಯ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿವೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.
ಇತ್ತೀಚೆಗೆ, ಸಾರಿಗೆ ನೌಕರರ ವೇತನದಲ್ಲಿ 12.5%ರಷ್ಟು ಹೆಚ್ಚಳ ಮಾಡಲಾಗಿತ್ತು. ಇದರಿಂದ, ಸಾರಿಗೆ ಸಂಸ್ಥೆಗಳ ಮೇಲೆ ವಾರ್ಷಿಕ 873.64 ಕೋಟಿ ರೂ. ಹೆಚ್ಚುವರಿ ಹೊರೆಯಾಗಿದೆ. ಜೊತೆಗೆ, ಇಂಧನ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 7.81 ರೂ. ಏರಿಕೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾರ್ಯಾಚರಣೆ ವೆಚ್ಚದಲ್ಲಿ ಹೆಚ್ಚುವರಿಯಾಗಿ 395 ಕೋಟಿ ರೂ. ಹೆಚ್ಚಳವಾಗಿದೆ ಎಂದು ಸಾರಿಗೆ ನಿಗಮಗಳು ಹೇಳಿಕೊಂಡಿವೆ.
ನೌಕರರ ಹಳೇ ಬಾಕಿ ವೇತನ ಪಾವತಿಗೆ ಒಟ್ಟು 1,271 ಕೋಟಿ ರೂ.ಗಳ ಅಗತ್ಯವಿದ್ದು, ಸದ್ಯಕ್ಕೆ ಕೇವಲ 450 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದೆ. ಇನ್ನುಳಿದ 821 ಕೋಟಿ ರೂ. ಬಾಕಿ ಉಳಿದಿರುವುದು ಸಂಸ್ಥೆಗಳಿಗೆ ತೀವ್ರ ಆರ್ಥಿಕ ಒತ್ತಡ ತಂದಿದೆ ಎಂದು ವರದಿಯಾಗಿದೆ.
ಪ್ರಸ್ತುತ, ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳು ಭವಿಷ್ಯ ನಿಧಿ (PF), ಗ್ರಾಚ್ಯುಟಿ, ಡೀಸೆಲ್ ಬಾಕಿ ಹಾಗೂ ನಿವೃತ್ತ ನೌಕರರ ಸೆಟಲ್‌ಮೆಂಟ್ ಸೇರಿದಂತೆ ಒಟ್ಟಾರೆಯಾಗಿ ಸುಮಾರು 6,000 ಕೋಟಿ ರೂ.ಗಳ ಬೃಹತ್ ಹೊಣೆಗಾರಿಕೆ ಮತ್ತು ಸಾಲವನ್ನು ಹೊಂದಿವೆ ಎಂದು ಸಾರಿಗೆ ಸಂಸ್ಥೆಗಳ ಮೂಲಗಳು ತಿಳಿಸಿವೆ.
ಈ ಲೇಖನ ಓದಿದ್ದೀರಾ?: ಟೆಲಿಗ್ರಾಂ – ಅಪರಾಧಿಗಳ ‘ಡಾರ್ಕ್ ವೆಬ್’ ಎಂದು ಕೇಂದ್ರ ಸರ್ಕಾರ ಹಣೆಪಟ್ಟಿ ಕಟ್ಟುತ್ತಿದೆ ಯಾಕೆ?.
ಕಳೆದ ವರ್ಷ ಜನವರಿ 5ರಂದು ಸರ್ಕಾರಿ ಬಸ್ ದರಗಳನ್ನು ಒಮ್ಮೆ ಪರಿಷ್ಕರಿಸಲಾಗಿತ್ತು. ಆ ಬಳಿಕ ಉಂಟಾಗಿರುವ ಡೀಸೆಲ್ ಮತ್ತು ವೇತನ ವೆಚ್ಚಗಳ ತೀವ್ರ ಏರಿಕೆಯನ್ನು ಸರಿದೂಗಿಸಲು ಮತ್ತೊಮ್ಮೆ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ಹೇಳುತ್ತಿದ್ದಾರೆ. ದರ ಏರಿಕೆಯ ಪ್ರಸ್ತಾವನೆಯನ್ನು ನಿಗಮಗಳು ರಾಜ್ಯ ಸರ್ಕಾರದ ಮುಂದಿಟ್ಟಿವೆ. ಪ್ರಸ್ತಾವನೆಗೆ ಸರ್ಕಾರವು ಅಂತಿಮ ಮುದ್ರೆ ಒತ್ತಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.



