SIR ನಡೆಸುವ ನಿರ್ಧಾರ ಸರ್ವಾನುಮತದಿಂದ ಕೂಡಿತ್ತು ಎಂದು ಜನ ನಂಬಬೇಕಾದರೆ, ಆಯೋಗವು ಸಂಬಂಧಿಸಿದ ಸಭೆಯ ಅಧಿಕೃತ ನಡಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ಆ ಮೂಲಕ ಚುನಾವಣಾ ಆಯೋಗವು ತಾನೇ ಸೃಷ್ಟಿಸಿಕೊಂಡಿರುವ ಗೋಜಲುಗಳಿಂದ ಬಿಡಿಸಿಕೊಳ್ಳಬೇಕು.
ಭಾರತೀಯ ಚುನಾವಣಾ ಆಯೋಗ ಹಿಂದೆಂದೂ ಕಾಣದಂತಹ ಸಂಕಷ್ಟಕ್ಕೆ ಸಿಲುಕಿದೆ. ಆಯೋಗವು ತಾನಾಗಿಯೇ ಇಂತಹ ಸ್ಥಿತಿಗೆ ಬಂದು ತಲುಪಿರುವುದು ನಿಜಕ್ಕೂ ವಿಷಾದನೀಯ. ಇಷ್ಟು ವರ್ಷಗಳಲ್ಲಿ ತನ್ನ ಜನಸ್ನೇಹಿ ನಿಲುವಿನಿಂದ ಎಲ್ಲರ ಪ್ರೀತಿ ಗಳಿಸಿದ್ದ ಸಂಸ್ಥೆಯೊಂದು, ಇಂದು ಯಾರೊಬ್ಬ ಮಿತ್ರನೂ ಇಲ್ಲದ ಒಂಟಿ ಸ್ಥಿತಿಯಲ್ಲಿದೆ. ಅದಕ್ಕಿರುವ ಏಕೈಕ ಮಿತ್ರ ಅಂದರೆ ಆಡಳಿತ ಪಕ್ಷ ಮಾತ್ರ. ಆದರೆ ಆಡಳಿತ ಪಕ್ಷವು ಆಯೋಗದ ಪರವಾಗಿ ಸಮರ್ಥನೆಗೆ ಬಂದಾಗಲೆಲ್ಲಾ, ಆಯೋಗವು ಇನ್ನಷ್ಟು ಮೂಲೆಗುಂಪಾಗುತ್ತಿದೆ.
ಸಾಮಾನ್ಯ ಜನರು, ನಾಗರಿಕ ಸಮಾಜ ಸಂಸ್ಥೆಗಳು, ನಿವೃತ್ತ ಐಎಎಸ್ ಅಧಿಕಾರಿಗಳು, ಮಾಜಿ ನ್ಯಾಯಾಧೀಶರು, ವಕೀಲರು ಹಾಗೂ ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲ ಕಡೆಯಿಂದಲೂ ಈಗ ಆಯೋಗದ ಮೇಲೆ ಟೀಕೆಗಳ ಮಳೆ ಸುರಿಯುತ್ತಿದೆ. ಪತ್ರಿಕೆಗಳು ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ವಿರುದ್ಧ ಕಟುವಾದ ಸಂಪಾದಕೀಯಗಳನ್ನು ಬರೆದಿವೆ; ಇನ್ನು ಯೂಟ್ಯೂಬರ್‌ಗಳಿಗಂತೂ ತಾನೇ ಸೃಷ್ಟಿಸಿಕೊಂಡ ಈ ಕೆಸರಿನಲ್ಲಿ ಸಿಲುಕಿರುವ ಆಯೋಗದ ವಿರುದ್ಧ ಮಾತನಾಡಲು ಹೇರಳವಾಗಿ ರೆಡಿಮೇಡ್ ವಿಷಯಗಳು ಸಿಕ್ಕಿವೆ. ಚುನಾವಣಾ ಆಯೋಗದ ‘ಒಳಗಿನ ಯುದ್ಧ’ ಈಗ ಬೀದಿಗೆ ಬಂದಿದೆ. ಜನರ ನಂಬಿಕೆ ಕಳೆದುಕೊಳ್ಳುತ್ತಿರುವ ಈ ಸಂಸ್ಥೆಯೊಳಗಿನ ಬಿರುಕುಗಳನ್ನು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಬಯಲಿಗೆಳೆದಿದೆ. ಇಬ್ಬರು ಚುನಾವಣಾ ಆಯುಕ್ತರು ಬರೆದ 14 ಪತ್ರಗಳು, ಮುಖ್ಯ ಚುನಾವಣಾ ಆಯುಕ್ತರನ್ನು ಈ ವಿವಾದದ ಕೇಂದ್ರಬಿಂದುವನ್ನಾಗಿಸಿವೆ- ಆ ಬಿರುಗಾಳಿ ಅವರ ದೋಣಿಯನ್ನೂ ಅಲುಗಾಡಿಸಲೂಬಹುದು. ಈ ವಿವಾದದಿಂದ ಪಾರಾಗಲು ಆಯೋಗ ನೀಡುತ್ತಿರುವ ಪ್ರತಿಯೊಂದು ಸಮರ್ಥನೆಯೂ ಅದನ್ನು ಇನ್ನಷ್ಟು ಆಳವಾದ ಸುಳಿಗೆ ಸಿಲುಕಿಸುತ್ತಿದೆ.
ಹೈಕೋರ್ಟ್‌ಗಳು ಅದರ ಕೆಲವು ನಿರ್ಧಾರಗಳನ್ನು ಪ್ರಶ್ನಿಸುತ್ತಿವೆ; ಸೇವೆಯಲ್ಲಿರುವ ನ್ಯಾಯಾಧೀಶರು ಮತದಾರರನ್ನು ಸಾಮೂಹಿಕವಾಗಿ ಪಟ್ಟಿಯಿಂದ ಕೈಬಿಡುವುದರ ವಿರುದ್ಧ ಎಚ್ಚರಿಸುತ್ತಿದ್ದಾರೆ; ಮಾಜಿ ಆಯುಕ್ತರುಗಳೇ ಇಂದಿನ ನಡವಳಿಕೆಯನ್ನು ಪ್ರಶ್ನಿಸುತ್ತಿದ್ದಾರೆ. ಇದರಿಂದಾಗಿ ಆಯೋಗದ ಸುತ್ತಲಿನ ಕಾರ್ಮೋಡಗಳು ಇನ್ನಷ್ಟು ದಟ್ಟವಾಗಿವೆ. “ಕಷ್ಟಗಳು ಬಂದಾಗ ಒಂಟಿಯಾಗಿ ಬರುವುದಿಲ್ಲ, ಸೈನ್ಯದಂತೆ ಹಿಂಡು ಹಿಂಡಾಗಿ ಬರುತ್ತವೆ” ಎಂಬ ಷೇಕ್ಸ್‌ಪಿಯರ್‌ನ ಮಾತು ಇಲ್ಲಿ ನಿಜವಾಗುತ್ತಿರುವಂತಿದೆ. ಮುಖ್ಯ ಚುನಾವಣಾ ಆಯುಕ್ತರ ಸರ್ವಾಧಿಕಾರಿ ಧೋರಣೆಯ ಕಾರಣಕ್ಕೆ ಅವರನ್ನು ಅಮಾನತುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ.
ಇದು ಸಾಲದೆಂಬಂತೆ, ಅಕ್ಟೋಬರ್ 5ರಂದು ಈ ಅರ್ಜಿಗಳ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿಗಳು, “ಬದಲಾವಣೆ ಮಾಡಲಾದ ಯಾವುದೇ ನಮೂನೆ 6ಕ್ಕೆ ನಾವು ಅನುಮೋದನೆ ನೀಡಿಲ್ಲ” ಎಂದು ಮೌಖಿಕವಾಗಿ ಹೇಳಿದ್ದಾರೆ. ಆಗಸ್ಟ್ 14ರ ಪತ್ರದಲ್ಲಿ ಒಬ್ಬ ಚುನಾವಣಾ ಆಯುಕ್ತರು ಇದೇ ನಮೂನೆ 6ರಲ್ಲಿ ಮಾಡಲಾದ ಬದಲಾವಣೆಗಳನ್ನು. “ಕಾನೂನುಬಾಹಿರ ಮತ್ತು ಅನಧಿಕೃತ” ಎಂದು ಕರೆದಿದ್ದರು.
ಇದನ್ನು ಓದಿದ್ದೀರಾ?: ಹೆದರಿದ ಗ್ಯಾನೇಶ್ ಕುಮಾರ್: ಛತ್ತೀಸ್‌ಗಢ ಭೇಟಿ ದಿಢೀರ್ ಮುಂದೂಡಿಕೆ; ಸಿಇಸಿ ಸುತ್ತ ರಾಜಕೀಯ ಬಿರುಗಾಳಿ
‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಗೆ ಆಯೋಗ ನೀಡಿದ ಪ್ರತಿಕ್ರಿಯೆಗಳು ಅದರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದವು. ಸೆಪ್ಟೆಂಬರ್ 23ರ ಮೊದಲ ಪ್ರತಿಕ್ರಿಯೆಯಲ್ಲಿ, “ನಮ್ಮದೇನೂ ತಪ್ಪಿಲ್ಲ, ಎಲ್ಲಾ ನಿರ್ಧಾರಗಳನ್ನೂ ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ” ಎಂದು ಆಯೋಗ ಹೇಳಿಕೊಂಡಿತು. ಸೆಪ್ಟೆಂಬರ್ 26ರ ಎರಡನೇ ಪ್ರತಿಕ್ರಿಯೆಯಲ್ಲಿ, ಆಯೋಗವು ತನ್ನ ಬಿಗಿ ನಿಲುವಿನಿಂದ ಸ್ವಲ್ಪ ಹಿಂದೆ ಸರಿಯಿತು. ಆದರೆ ಗೊಂದಲ ಸೃಷ್ಟಿಸಿತು. SIRಗಾಗಿ ಮತ್ತು SIR ಅಲ್ಲದ ಉದ್ದೇಶಗಳಿಗಾಗಿ ಎಂದು ತಾನು ಎರಡು ಬಗೆಯ ನಮೂನೆ 6ಗಳನ್ನು ಬಳಸಿದ್ದಾಗಿ ಒಪ್ಪಿಕೊಂಡಿತಲ್ಲದೆ, ಈ ಬದಲಾವಣೆಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದೂ ವಾದಿಸಿತು. ಆದರೆ ಕೆಲವೇ ದಿನಗಳಲ್ಲಿ ಆಯೋಗ ಮಣಿಯಿತು; ಅಪರಾಧಕ್ಕೆ ಬಳಸಿದ ಆಯುಧವನ್ನು ಬಚ್ಚಿಡುವಂತೆ, ನಮೂನೆ 6ಕ್ಕೆ ಸೇರಿಸಲಾಗಿದ್ದ ಸ್ವಯಂಘೋಷಣಾ ಪತ್ರವನ್ನೇ ವಾಪಸ್ ಪಡೆಯಿತು.
ಮುಖ್ಯ ನ್ಯಾಯಮೂರ್ತಿಗಳ ಮಾತು ಈ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಮುಖ್ಯ ಆಯುಕ್ತರ ನಿರಂಕುಶ ಮತ್ತು ಕಾನೂನುಬಾಹಿರ ನಡವಳಿಕೆಗೆ ಇದುವೇ ಸಾಕ್ಷಿ ಎಂದು ಟೀಕಾಕಾರರು ಹೇಳುತ್ತಿದ್ದಾರೆ. ಆದರೆ, ಆಯೋಗದ ಬೆಂಬಲಿಗರು ಮೇ 27ರ ಸುಪ್ರೀಂ ಕೋರ್ಟ್ ತೀರ್ಪಿನ 152 ನೇ ಪ್ಯಾರಾವನ್ನು ತಮ್ಮ ರಕ್ಷಣೆಗೆ ಬಳಸಿಕೊಂಡಿದ್ದಾರೆ. ಆ ತೀರ್ಪಿನಲ್ಲಿ ಕೋರ್ಟ್ ಹೀಗೆ ಹೇಳಿತ್ತು: “ಯಾವ ದಾಖಲೆ ಕೊಡಬೇಕು ಅನ್ನೋದನ್ನ ನಮೂನೆ 6 ಹೇಳುತ್ತೆ ನಿಜ. ಆದ್ರೆ ಅದನ್ನ ಮಾಡಿರುವುದು ಕೇವಲ ಸಾಮಾನ್ಯ ಪರಿಷ್ಕರಣೆಗಾಗಿ; ಹಾಗಾಗಿ ಈಗಿನ ವಿಶೇಷ ಸಂದರ್ಭಕ್ಕೆ ಅದು ಅಷ್ಟಾಗಿ ಸರಿಹೊಂದದಿರಬಹುದು. ಹೀಗಾಗಿ, ಈ ವಿಶೇಷ ಸಮಗ್ರ ಪರಿಷ್ಕರಣೆಯ ತುರ್ತು ಅಗತ್ಯಕ್ಕೆ ತಕ್ಕಂತೆ ಹೊಸದೊಂದು ದಾಖಲಾತಿ ನಿಯಮ ರೂಪಿಸಿಕೊಳ್ಳುವುದಕ್ಕೆ ಸ್ವಲ್ಪಮಟ್ಟಿನ ಅಧಿಕಾರ ಆಯೋಗಕ್ಕೆ ಇದ್ದೇ ಇರುತ್ತದೆ. ಆದರೆ, ಈ ಅಧಿಕಾರಕ್ಕೆ ಮಿತಿ ಇರುತ್ತದೆ. ಅಂತಹ ನಿಯಮಗಳನ್ನು ರೂಪಿಸುವಾಗ, ಆಯೋಗವು ಕಾನೂನಿನ ಚೌಕಟ್ಟನ್ನು ಮೀರಬಾರದು; ನಿಯಮಗಳಲ್ಲಿ ಏನೇ ಬದಲಾವಣೆ ಮಾಡಿದರೂ, ಮಾಡಿರುವ ಬದಲಾವಣೆಗೂ ಸಾಧಿಸಬೇಕಾದ ಗುರಿಗೂ ನೇರವಾದ ತಾರ್ಕಿಕ ಸಂಬಂಧವಿರಬೇಕು. ಮತದಾರರ ಪಟ್ಟಿಯ ನಿಖರತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶವನ್ನು ಈ ನಿಯಮಗಳು ಹದವಾಗಿ, ಸಮತೋಲನದಿಂದ ಕಾಪಾಡಿಕೊಂಡು ಹೋಗಬೇಕು.”

ಇದು ಕಾನೂನು ಭಾಷೆಯ ಗರಿಷ್ಠ ಮಟ್ಟದ ದ್ವಂದ್ವವಾಗಿದೆ. ಸುಪ್ರೀಂ ಕೋರ್ಟ್ ಇಲ್ಲಿ ಕೇವಲ SIRಗಾಗಿ ಸೂಕ್ತ ದಾಖಲಾತಿ ಚೌಕಟ್ಟನ್ನು “ರೂಪಿಸುವ” ಆಯೋಗದ ಅಧಿಕಾರವನ್ನು ಗುರುತಿಸಿದೆಯೇ ಹೊರತು ಅದನ್ನು ಅಧಿಕೃತವಾಗಿ ಅನುಮೋದಿಸಿದೆಯೇ? ಅದೇ ವೇಳೆ, ಅಂತಹ ಅಧಿಕಾರ “ಅಪರಿಮಿತವಲ್ಲ” ಎಂದು ಹೇಳುವ ಮೂಲಕ ಮತ್ತು “ಅಸ್ತಿತ್ವದಲ್ಲಿರುವ ಕಾನೂನನ್ನು” ನೆನಪಿಸುವ ಮೂಲಕ ಅದು ಮಿತಿಗಳನ್ನು ಹೇರಿಲ್ಲವೇ? ತಾನು ಏಕಪಕ್ಷೀಯವಾಗಿ ಮಾಡಿದ ನಮೂನೆ 6ರ ಬದಲಾವಣೆಗಳಿಗೆ ಆಯೋಗವು ಸುಪ್ರೀಂ ಕೋರ್ಟ್ ಆದೇಶವನ್ನೇ ಆಧಾರವಾಗಿಟ್ಟುಕೊಂಡಿದ್ದರೆ, ಆ ಆದೇಶ ಬಂದ ಸುಮಾರು ಮೂರು ತಿಂಗಳ ನಂತರ ಒಬ್ಬ ಚುನಾವಣಾ ಆಯುಕ್ತರು ಅದನ್ನು ಕಾನೂನುಬಾಹಿರ ಮತ್ತು ಅನಧಿಕೃತ ಎಂದು ಕರೆದಿದ್ದೇಕೆ? ಅವರ ಆಕ್ಷೇಪಗಳನ್ನು ಆಯೋಗ ಪರಿಶೀಲಿಸಿತ್ತೇ ಮತ್ತು ಆ ಬದಲಾವಣೆಗಳಿಗೆ ಸುಪ್ರೀಂ ಕೋರ್ಟ್ ಮಾನ್ಯತೆ ನೀಡಿದೆ ಎಂಬ ತನ್ನ ನಂಬಿಕೆಯನ್ನು ಮರುದೃಢೀಕರಿಸಿಕೊಂಡಿತ್ತೇ?
ಚುನಾವಣಾ ಆಯೋಗವು ತಾನೇ ಸೃಷ್ಟಿಸಿಕೊಂಡಿರುವ ಗೋಜಲುಗಳನ್ನು ಬಿಡಿಸಿಕೊಳ್ಳಬೇಕಾಗಿದೆ. ಜೊತೆಗೆ ತನ್ನ 75 ವರ್ಷಗಳ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ನಿರ್ಧಾರವಾದ ವಿಶೇಷ ಸಮಗ್ರ ಪರಿಷ್ಕರಣೆ ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಿದೆ. ಇದು ಹಠಾತ್, ತೀರಾ ಆಕ್ರಮಣಕಾರಿ ಮತ್ತು ದುರಾಸೆಯ ನಿರ್ಧಾರ. ಇದೊಂದು ಅನ್ಯಾಯದ, ಜನರನ್ನು ಹೊರಗಿಡುವ ಮತ್ತು ನಿರಂಕುಶ ನಡವಳಿಕೆ ಎಂದೇ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ.
SIR ನಡೆಸುವ ನಿರ್ಧಾರ ಸರ್ವಾನುಮತದಿಂದ ಕೂಡಿತ್ತು ಎಂದು ಜನ ನಂಬಬೇಕಾದರೆ, ಆಯೋಗವು ಸಂಬಂಧಿಸಿದ ಸಭೆಯ ಅಧಿಕೃತ ನಡಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ಆ ಪತ್ರಗಳು ಹೊರಬಿದ್ದ ತಕ್ಷಣ ಆಯುಕ್ತರು SIR ಅನ್ನೇ ವಿರೋಧಿಸುತ್ತಿದ್ದಾರೆ ಎಂದೇನೂ ಅಲ್ಲ. ಆಯುಕ್ತರು ಮುಖ್ಯವಾಗಿ ಎರಡು ವಿಷಯಗಳನ್ನು ಮುನ್ನೆಲೆಗೆ ತಂದರು. ಒಂದು, ನಮೂನೆ 6ರಲ್ಲಿ ಮಾಡಲಾದ ನಿಯಮಬಾಹಿರ ಬದಲಾವಣೆಗಳು; ಇನ್ನೊಂದು, ನೋಂದಣಿ ಅಧಿಕಾರಿಗಳಿಗೆ (ERO) ಇಸಿಐ-ನೆಟ್ ಬಳಸಲು ಬಿಡದೆ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು. ಪ್ರಮುಖ ನಿರ್ಧಾರಗಳಿಂದ ತಮ್ಮನ್ನು ದೂರವೇ ಇಟ್ಟಿದ್ದಾರೆ ಎಂಬ ಅಸಮಾಧಾನ ಅವರಿಗೆ ಮೊದಲಿನಿಂದಲೂ ಇತ್ತು. ಆಯೋಗವು ನಾಲ್ಕು ತಿಂಗಳಿಂದ ಸಭೆಯನ್ನೇ ಕರೆದಿರಲಿಲ್ಲ, ಒಂದು ವರ್ಷದಿಂದ ಸಭೆಯ ವಿವರಗಳನ್ನೂ ಹಂಚಿಕೊಂಡಿರಲಿಲ್ಲ. ಇದರ ನಡುವೆ, ತಮ್ಮ ಗಮನಕ್ಕೇ ಬಾರದಂತೆ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗೆ ಸಂಬಂಧಿಸಿ ಬರೋಬ್ಬರಿ 16 ಲಕ್ಷ ಅರ್ಜಿಗಳು ಮೇಲ್ಮನವಿ ಮಂಡಳಿಗೆ ಹೋಗಿದ್ದು ಅವರ ಆತಂಕವನ್ನು ಇನ್ನಷ್ಟು ಹೆಚ್ಚಿಸಿತು. ಇವೆಲ್ಲವೂ ಆಯೋಗ ಕೆಲಸ ಮಾಡುವ ರೀತಿಯ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದವು.
ಇದನ್ನು ಓದಿದ್ದೀರಾ?: ಮೋಶಾ ಆಡಳಿತ ಬಿತ್ತಿದ ಭಯ ತೊಲಗಿದ್ದು ಒಂದು ಅದ್ಭುತ: ನೇಹಾ ಬೋರಾ
ಈ ಪ್ರಸ್ತುತ ನಾಟಕ ಹೇಗೆ ಕೊನೆಗೊಳ್ಳುತ್ತದೆ ಎಂದು ಊಹಿಸುವುದು ಕಷ್ಟ; ಆದರೆ ಇದು ಭಾರತೀಯ ಪ್ರಜಾಪ್ರಭುತ್ವದ ಪಾಲಿಗೆ ದೊಡ್ಡ ದುರಂತ ಎಂಬುದರಲ್ಲಿ ಸಂಶಯವಿಲ್ಲ. ತನ್ನ ಗತವೈಭವವನ್ನು ಕಳೆದುಕೊಂಡು ಸೊರಗುತ್ತಿರುವ ಇಂದಿನ ಚುನಾವಣಾ ಆಯೋಗವು ಜಾನ್ ಮಿಲ್ಟನ್ ಕಾವ್ಯದ ‘ಪತನಗೊಂಡ ದೇವದೂತರನ್ನು’ ನೆನಪಿಸುತ್ತದೆ. ತನ್ನ ಇಂದಿನ ಶೋಚನೀಯ ಸ್ಥಿತಿಗೆ ಮತ್ತು ತನ್ನ ಮೇಲೆ ಹರಿದುಬರುತ್ತಿರುವ ಧಿಕ್ಕಾರಕ್ಕೆ ಆಯೋಗವೇ ಹೊಣೆ. ಒಂದು ವೇಳೆ ಆಯೋಗದ ನಿರ್ಧಾರಗಳು ಕಾನೂನುಬಾಹಿರ ಎಂದು ಕಂಡುಬಂದರೆ ಸುಪ್ರೀಂ ಕೋರ್ಟ್ ಅವುಗಳನ್ನು ರದ್ದುಗೊಳಿಸಬಹುದು; ಆದರೆ, ಪ್ರಜಾಪ್ರಭುತ್ವಕ್ಕೇ ಬಗೆದ ದ್ರೋಹಕ್ಕೆ ನಮ್ಮ ನ್ಯಾಯವ್ಯವಸ್ಥೆಯಲ್ಲಿ ಶಿಕ್ಷೆ ಸಿಗಲು ಸಾಧ್ಯವೇ ಎಂಬುದರ ಮೇಲೆಯೇ ಚುನಾವಣಾ ಆಯುಕ್ತರ ಅಧಿಕಾರದ ಉಳಿವು ನಿಂತಿದೆ. ರಾಜಕೀಯ ಲೆಕ್ಕಾಚಾರಗಳ ನಡುವೆ ಸಂಸತ್ತಿನಲ್ಲಿ ಮಹಾಭಿಯೋಗ ತರುವುದು ಅಷ್ಟು ಸುಲಭವಲ್ಲ; ಇನ್ನು ಅವರೇ ಆತ್ಮಸಾಕ್ಷಿಗೆ ಬೆಲೆ ಕೊಟ್ಟು ತಾವಾಗಿಯೇ ಕೆಳಗಿಳಿಯುತ್ತಾರೆ ಎಂದುಕೊಳ್ಳುವುದು ತೀರಾ ದೂರದ ಮಾತು.
”ನಿಜವಾಗಿ ಹಿರಿಮೆ ಇರುವುದು ಬೀಳದೇ ಇರುವುದರಲ್ಲಲ್ಲ, ಬಿದ್ದಾಗಲೆಲ್ಲ ಎದ್ದು ನಿಲ್ಲುವುದರಲ್ಲಿ”- ನನ್ನ ಶಾಲೆಯ ಗೋಡೆಯ ಮೇಲೆ ಈ ಸುಭಾಷಿತವಿತ್ತು. ಇದು ಆಲಿವರ್ ಗೋಲ್ಡ್‌ಸ್ಮಿತ್ ಅವರ ನುಡಿ ಎಂದು ಇತ್ತೀಚೆಗೆ ತಿಳಿಯಿತು. ವ್ಯಕ್ತಿಗಳಿಗೆ ಮಾತ್ರವಲ್ಲ, ದೊಡ್ಡ ಸಂಸ್ಥೆಗಳಿಗೂ ಇದು ಅಷ್ಟೇ ನಿಜವೆನಿಸುತ್ತದೆ. ನಮ್ಮ ಎಷ್ಟೋ ಸಾಂವಿಧಾನಿಕ ಸಂಸ್ಥೆಗಳ ಗೋಡೆಗಳ ಮೇಲೆ ಈ ಮಾತನ್ನು ಕೆತ್ತಿಸಬೇಕಿದೆ. ಅದಕ್ಕೆ ಚುನಾವಣಾ ಆಯೋಗದ ‘ನಿರ್ವಾಚನ ಸದನ’ವೇ ಮೊದಲಾಗಲಿ.
(ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್, ಲೇಖಕರು: ಅಶೋಕ್ ಲಾವಾಸಾ, ಮಾಜಿ ಚುನಾವಣಾ ಆಯುಕ್ತರು, ಕನ್ನಡಕ್ಕೆ: ಟಿ.ಎಸ್. ವೇಣುಗೋಪಾಲ್)




