ಕ್ರಿಕೆಟ್ ವಿಶ್ವಕಪ್ ಪಂದ್ಯಗಳು, ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ವಿದೇಶಿ ರಾಷ್ಟ್ರಾಧ್ಯಕ್ಷರ ಭೇಟಿಯಂತಹ ಮಹತ್ವದ ಕಾರ್ಯಕ್ರಮಗಳನ್ನು ಉದ್ದೇಶಪೂರ್ವಕವಾಗಿ ಗುಜರಾತಿನಲ್ಲೇ ಆಯೋಜಿಸಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಇದೀಗ ಚಲನಚಿತ್ರೋದ್ಯಮದ ಪ್ರಮುಖ ಕೇಂದ್ರಗಳಾಗಿರುವ ಮುಂಬೈ, ಬೆಂಗಳೂರು, ಕೋಲ್ಕತ್ತಾ ಅಥವಾ ಕೇರಳವನ್ನು ಕಡೆಗಣಿಸಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏಕಾಏಕಿ ಗುಜರಾತಿಗೆ ಸ್ಥಳಾಂತರಿಸಲಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ದೇಶದ ಅತ್ಯುನ್ನತ ಗೌರವವಾದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೊದಲ ಬಾರಿಗೆ ನವದೆಹಲಿಯಿಂದ ಗುಜರಾತ್‌ಗೆ ಸ್ಥಳಾಂತರಿಸಲಾಗಿದೆ. ಸೆಪ್ಟೆಂಬರ್ 22ರಂದು ಏಕತಾ ನಗರದ ಸ್ಟ್ಯಾಚ್ಯೂ ಆಫ್ ಯೂನಿಟಿ ಬಳಿ ಈ ಅದ್ದೂರಿ ಸಮಾರಂಭ ಆಯೋಜನೆಯಾಗುತ್ತಿದೆ. ಆದರೆ, ಈ ನಿರ್ಧಾರವು ಕೇವಲ ಒಂದು ಕಾರ್ಯಕ್ರಮದ ಸ್ಥಳಾಂತರವಲ್ಲ, ಬದಲಾಗಿ ದೇಶದ ಇತರ ಪ್ರಮುಖ ನಗರಗಳ ಪ್ರಾಮುಖ್ಯತೆಯನ್ನು ಕುಗ್ಗಿಸುವ ವ್ಯವಸ್ಥಿತ ತಂತ್ರ ಎಂಬ ಟೀಕೆಗಳು ದೇಶಾದ್ಯಂತ ವ್ಯಕ್ತವಾಗಿವೆ.
ಕೇಂದ್ರದ ಈ ನಡೆಯ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕ್ರಿಕೆಟ್ ವಿಶ್ವಕಪ್ ಪಂದ್ಯಗಳು, ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ವಿದೇಶಿ ರಾಷ್ಟ್ರಾಧ್ಯಕ್ಷರ ಭೇಟಿಯಂತಹ ಮಹತ್ವದ ಕಾರ್ಯಕ್ರಮಗಳನ್ನು ಉದ್ದೇಶಪೂರ್ವಕವಾಗಿ ಗುಜರಾತಿನಲ್ಲೇ ಆಯೋಜಿಸಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಇದೀಗ ಚಲನಚಿತ್ರೋದ್ಯಮದ ಪ್ರಮುಖ ಕೇಂದ್ರಗಳಾಗಿರುವ ಮುಂಬೈ, ಬೆಂಗಳೂರು, ಕೋಲ್ಕತ್ತಾ ಅಥವಾ ಕೇರಳವನ್ನು ಕಡೆಗಣಿಸಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏಕಾಏಕಿ ಗುಜರಾತಿಗೆ ಸ್ಥಳಾಂತರಿಸಲಾಗಿದೆ. ದೆಹಲಿ ಮತ್ತು ಮುಂಬೈನಂತಹ ಐತಿಹಾಸಿಕ ಹಾಗೂ ಆರ್ಥಿಕ ರಾಜಧಾನಿಗಳ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವ ಮತ್ತು ಕೇವಲ ಒಂದು ರಾಜ್ಯಕ್ಕೆ ಮಾತ್ರ ಮನ್ನಣೆ ನೀಡುವ ತಾರತಮ್ಯದ ನೀತಿ ಇದಾಗಿದೆ ಎಂಬ ಅಸಮಾಧಾನ ಭುಗಿಲೆದ್ದಿದೆ. ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂಬ ಆಗ್ರಹಗಳೂ ಕೇಳಿಬಂದಿವೆ.
ಈ ವ್ಯಾಪಕ ಟೀಕೆಗಳು ಮತ್ತು ಆಕ್ರೋಶದ ನಡುವೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಯತ್ನ ಮಾಡಿದೆ. ಪ್ರಶಸ್ತಿ ಸಮಾರಂಭವನ್ನು ಕೇವಲ ದೆಹಲಿಗೆ ಸೀಮಿತಗೊಳಿಸದೆ, ದೆಹಲಿಯಾಚೆಗೂ ದೇಶದ ವಿವಿಧ ಭಾಗಗಳಲ್ಲಿ ನಡೆಸುವ ನೀತಿಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಲಾಗಿದೆ. ಆದರೆ, ಈ ‘ವಿವಿಧ ಭಾಗಗಳ’ ಆಯ್ಕೆಯಲ್ಲಿ ಕೇವಲ ಗುಜರಾತ್ ಮಾತ್ರ ಮುನ್ನೆಲೆಗೆ ಬರುತ್ತಿರುವುದು, ಸರ್ಕಾರದ ಒಲವು ಒಂದು ನಿರ್ದಿಷ್ಟ ರಾಜ್ಯದತ್ತ ಮಾತ್ರ ಸೀಮಿತವಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತದೆ.

ಕೇವಲ ಸಾಂಸ್ಕೃತಿಕ ಅಥವಾ ಕ್ರೀಡಾ ಕಾರ್ಯಕ್ರಮಗಳಷ್ಟೇ ಅಲ್ಲ, ಉದ್ಯಮ ಮತ್ತು ಆರ್ಥಿಕ ಹೂಡಿಕೆಗಳ ವಿಚಾರದಲ್ಲೂ ತೀವ್ರ ತಾರತಮ್ಯ ಎಸಗಲಾಗುತ್ತಿದೆ. ಇತರ ರಾಜ್ಯಗಳಿಗೆ ಬರಬೇಕಿದ್ದ ನ್ಯಾಯಸಮ್ಮತ ಹೂಡಿಕೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಗುಜರಾತಿನತ್ತ ಸೆಳೆಯಲಾಗುತ್ತಿದೆ ಎಂಬ ಆಘಾತಕಾರಿ ಅಂಶ ತನಿಖಾ ವರದಿಗಳಿಂದ ಬಹಿರಂಗವಾಗಿದೆ. ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕದಂತಹ ಅಭಿವೃದ್ಧಿಶೀಲ ರಾಜ್ಯಗಳಿಗೆ ಬರಬೇಕಿದ್ದ ಯೋಜನೆಗಳನ್ನು ಅಧಿಕಾರ ಮತ್ತು ಪ್ರಭಾವ ಬಳಸಿ ಹೈಜಾಕ್ ಮಾಡಲಾಗುತ್ತಿದೆ.
ಈ ಹೂಡಿಕೆಗಳ ಸ್ಥಳಾಂತರಕ್ಕೆ ವಿವಿಧ ಸರ್ಕಾರಿ ಆಮಿಷಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರದಿಂದ ನೀಡಲಾಗುವ ಭಾರಿ ಸಬ್ಸಿಡಿಗಳು, ಆಮದು ಸುಂಕದ ರಿಯಾಯಿತಿ ಭರವಸೆಗಳು ಮತ್ತು ಸರ್ಕಾರಿ ಖರೀದಿಯ ಖಾತ್ರಿಗಳನ್ನು ನೀಡಿ ಕಂಪನಿಗಳನ್ನು ಬಲವಂತವಾಗಿ ಗುಜರಾತ್‌ನತ್ತ ಆಕರ್ಷಿಸಲಾಗುತ್ತಿದೆ. ಇದಲ್ಲದೆ, ಗುಜರಾತಿನ ಧೋಲೆರಾ ಮತ್ತು ಗಿಫ್ಟ್ ಸಿಟಿ (GIFT City) ಯೋಜನೆಗಳಿಗೆ ಅತಿಯಾದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಾರ ನೀಡಿ, ಇತರ ರಾಜ್ಯಗಳ ಕೈಗಾರಿಕಾ ವಲಯಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ.
ಈ ತಾರತಮ್ಯದ ನೀತಿಯ ನೇರ ಫಲವಾಗಿ ಗುಜರಾತ್‌ನಲ್ಲಿ ಬೃಹತ್ ಯೋಜನೆಗಳು ಏಕಾಏಕಿ ತಲೆ ಎತ್ತುತ್ತಿವೆ. ಚಿಪ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಹಸಿರು ಇಂಧನ ಕ್ಷೇತ್ರಗಳ ಮೇಲೆ ಗುಜರಾತ್ ಭಾರೀ ಹೂಡಿಕೆ ಪಡೆಯುತ್ತಿದೆ. ಧೋಲೆರಾದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್‌ನ ಬರೋಬ್ಬರಿ ₹91,000 ಕೋಟಿ ಮೌಲ್ಯದ ಸೆಮಿಕಂಡಕ್ಟರ್ ಫ್ಯಾಬ್, ಸಾಣಂದ್ ಕೈಗಾರಿಕಾ ವಲಯದ ಅಭಿವೃದ್ಧಿ, ಬೃಹತ್ ಡೇಟಾ ಸೆಂಟರ್‌ಗಳು ಮತ್ತು ಏರೋಸ್ಪೇಸ್ ಹಾಗೂ ಹಸಿರು ಹೈಡ್ರೋಜನ್ ಯೋಜನೆಗಳನ್ನು ಧಾರೆಯೆರೆಯಲಾಗಿದೆ. ಫೆಬ್ರವರಿ 2026ರಲ್ಲಿ ಸಾಣಂದ್‌ನಲ್ಲಿ ಮೈಕ್ರಾನ್ ಕಂಪನಿಯ ಸೆಮಿಕಂಡಕ್ಟರ್ ಅಸೆಂಬ್ಲಿ, ಪರೀಕ್ಷೆ ಮತ್ತು ಪ್ಯಾಕೇಜಿಂಗ್ ಘಟಕದ ಕಾರ್ಯಾರಂಭವು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಮೂಲಸೌಕರ್ಯ ಅಭಿವೃದ್ಧಿಯಲ್ಲೂ ಬೇರೆ ರಾಜ್ಯಗಳನ್ನು ನಿರ್ಲಕ್ಷಿಸಿ ಭರ್ಜರಿ ಕೊಡುಗೆಗಳನ್ನು ನೀಡಲಾಗಿದೆ. ಕೇವಲ ಗುಜರಾತ್‌ಗಾಗಿ ₹35,000 ಕೋಟಿಗೂ ಅಧಿಕ ಮೊತ್ತದ ರೈಲು, ಹೆದ್ದಾರಿ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಘೋಷಿಸಲಾಗಿದೆ. ಸರಕು ಸಾಗಣೆ ರೈಲು ಕಾರಿಡಾರ್, ಹೊಸ ರೈಲುಮಾರ್ಗಗಳು, ವಡೋದರಾ ರಿಂಗ್ ರೋಡ್ ಮತ್ತು ತೇಲುವ ಸೌರ ವಿದ್ಯುತ್ ಯೋಜನೆಗಳು ಇದರಲ್ಲಿ ಸೇರಿವೆ. ಜೊತೆಗೆ ನವೀಕರಿಸಬಹುದಾದ ಇಂಧನಕ್ಕಾಗಿ ಬರೋಬ್ಬರಿ ₹5,300 ಕೋಟಿ ವೆಚ್ಚದ ವಿದ್ಯುತ್ ಪ್ರಸರಣ ಯೋಜನೆಯನ್ನು ಮಂಜೂರು ಮಾಡಲಾಗಿದೆ. ಒಟ್ಟು 14 GW ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಲಕಡಿಯಾ, ಜಾಮ್ ಖಂಭಾಲಿಯಾ ಮತ್ತು ಜಾಮ್‌ನಗರ ಯೋಜನೆಗಳ ಮೂಲಕ ಗುಜರಾತ್‌ನಿಂದ ಮಹಾರಾಷ್ಟ್ರಕ್ಕೂ ವಿದ್ಯುತ್ ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ.
ಹಣಕಾಸು ವಲಯದಲ್ಲಿ ದೇಶದ ಆರ್ಥಿಕ ರಾಜಧಾನಿ ಮುಂಬೈಗೆ ಪರ್ಯಾಯವಾಗಿ ಗುಜರಾತ್‌ನ ಗಿಫ್ಟ್ ಸಿಟಿಯನ್ನು ಕೃತಕವಾಗಿ ಬೆಳೆಸುವ ಹುನ್ನಾರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಗಿಫ್ಟ್ ಸಿಟಿಯಲ್ಲಿರುವ ಉದ್ಯಮಗಳಿಗೆ ತೆರಿಗೆ ರಜೆಯನ್ನು ಬರೋಬ್ಬರಿ 20 ವರ್ಷಗಳಿಗೆ ವಿಸ್ತರಿಸುವ ಮೂಲಕ ಬ್ಯಾಂಕಿಂಗ್ ಮತ್ತು ಹಣಕಾಸು ಉದ್ಯಮಗಳನ್ನು ಸೆಳೆಯಲಾಗುತ್ತಿದೆ. ಸ್ಟ್ಯಾಂಡರ್ಡ್ ಚಾರ್ಟರ್ಡ್ ನಂತಹ ಪ್ರತಿಷ್ಠಿತ ಬ್ಯಾಂಕ್‌ಗೆ ಸಂಪತ್ತು ನಿರ್ವಹಣಾ ಸೇವೆ ಆರಂಭಿಸಲು ತ್ವರಿತಗತಿಯಲ್ಲಿ ಪ್ರಾಥಮಿಕ ಅನುಮತಿ ನೀಡಲಾಗಿದೆ ಹಾಗೂ ಎಚ್‌ಎಸ್‌ಬಿಸಿ ಯಂತಹ ಸಂಸ್ಥೆಗಳು ಇಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸುತ್ತಿವೆ. ಇಂತಹ ಅಸಮತೋಲಿತ ಪ್ರೋತ್ಸಾಹಕಗಳು ಮುಂಬೈನಂತಹ ಸಾಂಪ್ರದಾಯಿಕ ಆರ್ಥಿಕ ಕೇಂದ್ರಗಳಿಗೆ ಭಾರಿ ಹೊಡೆತ ನೀಡುತ್ತಿವೆ.
ಇದನ್ನೂ ಓದಿ ಹಿಂಸೆ, ಅಹಂಕಾರ ಪ್ರದರ್ಶನ ಇತ್ತೀಚೆಗೆ ಫ್ಯಾಷನ್ ಆಗಿದೆ: ಮಣಿಪುರ ಸಂಗೀತಗಾರನ ಕೊಲೆ ಖಂಡಿಸಿ ರಾಹುಲ್ ಗಾಂಧಿ
ಆಕ್ರೋಶ
ಈ ಅಂಧ ಗುಜರಾತ್ ಪರ ನಿಲುವು ದೇಶದಲ್ಲೇ ಹೆಚ್ಚು ತೆರಿಗೆ ನೀಡುವ ಕರ್ನಾಟಕ, ಮಹಾರಾಷ್ಟ್ರದಂತಹ ರಾಜ್ಯಗಳಿಗೆ ತುಂಬಲಾರದ ನಷ್ಟ ಉಂಟುಮಾಡಿದೆ. ವೇದಾಂತ–ಫಾಕ್ಸ್‌ಕಾನ್, ಟಾಟಾ–ಏರ್‌ಬಸ್ ಮತ್ತು ಬಲ್ಕ್ ಡ್ರಗ್ ಪಾರ್ಕ್‌ನಂತಹ ಬೃಹತ್ ಯೋಜನೆಗಳು ಮಹಾರಾಷ್ಟ್ರ ಕೈತಪ್ಪಿ ಗುಜರಾತ್ ಪಾಲಾಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಕೈಗಾರಿಕೆಗಳು ತಮ್ಮ ರಾಜ್ಯದಿಂದ ಹೊರಹೋಗಿವೆ ಎಂಬ ಆರೋಪಗಳ ಬಗ್ಗೆ ಸಮಜಾಯಿಷಿ ನೀಡಲು ರಾಜ್ಯ ಸರ್ಕಾರವು ಶ್ವೇತಪತ್ರ ಹೊರಡಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ವೇದಾಂತ-ಫಾಕ್ಸ್‌ಕಾನ್ ಜಂಟಿ ಯೋಜನೆಯು ಅಂತಿಮವಾಗಿ ಮುರಿದುಬಿದ್ದರೂ, ಅದನ್ನು ಗುಜರಾತ್‌ಗೆ ಎಳೆದುಕೊಂಡು ಹೋಗುವ ಯತ್ನವಂತೂ ನಡೆದಿತ್ತು. ದೇಶದ ಸಮಗ್ರ ಅಭಿವೃದ್ಧಿಯನ್ನು ಕಡೆಗಣಿಸಿ, ಕೇವಲ ಒಂದು ರಾಜ್ಯಕ್ಕೆ ಮಾತ್ರ ಒಲವು ತೋರುವ ನೀತಿಯು ದೇಶದ ಒಕ್ಕೂಟ ವ್ಯವಸ್ಥೆಯ ಮೇಲೆಯೇ ಗಂಭೀರ ಪರಿಣಾಮ ಬೀರುತ್ತಿದೆ.





