ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೊಳಿಸಿರುವುದನ್ನು ಸಹಿಸದ ಬಲಿಷ್ಠ ಮೇಲ್ಜಾತಿಗಳು ಪ್ರತಿಭಟನೆಗೆ ಇಳಿಯುತ್ತವೆ. ಅಷ್ಟೇ ಅಲ್ಲ ಅಮಾಯಕ ಹಿಂದುಳಿದ ಜಾತಿಗಳ ಯುವಕರನ್ನೂ ವರದಿ ಜಾರಿ ವಿರುದ್ಧ ಬಂಡೇಳುವಂತೆ ಪ್ರಚೋದಿಸಿ ಸುಮಾರು 200ಕ್ಕೂ ಹೆಚ್ಚು ಮಂದಿಯ ಆತ್ಮಾಹುತಿಗೂ ಕಾರಣರಾಗಿ ಕ್ರೌರ್ಯ ಮೆರೆಯುತ್ತಾರೆ.
ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವುದನ್ನು ಸಂವಿಧಾನದ ಆಶಯವಾಗಿದ್ದರೂ ಕೇಂದ್ರ ಸರ್ಕಾರದಲ್ಲಿ ಅದು ಜಾರಿಗೆ ಬಂದದ್ದು ಮಾತ್ರ 42 ವರ್ಷಗಳ ನಂತರವಷ್ಟೇ. ಮೂರು ವರ್ಷ ಹೊರತುಪಡಿಸಿ ಅಧಿಕಾರದಲ್ಲಿದ್ದ ಪಕ್ಷವೊಂದರ ಸರ್ಕಾರದ ಉದ್ದೇಶಿತ ಉಪೇಕ್ಷೆ ಹಾಗೂ ಪುರೋಹಿತಶಾಹಿಯ ನಾನಾ ತಂತ್ರಗಳು ಹಿಂದುಳಿದ ವರ್ಗಗಳ ಮೀಸಲಾತಿ ಅನುಷ್ಠಾನಕ್ಕೆ ದೊಡ್ಡ ಕಂದಕವನ್ನೇ ನಿರ್ಮಿಸಿಬಿಟ್ಟಿದ್ದವು.
ಅಂತೂ ಇಂತೂ 1977 ರಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷ ಸರ್ಕಾರದ ದಿಟ್ಟ ನಡೆಯ ಕಾರಣ ಎರಡನೇ ಹಿಂದುಳಿದ ರಾಷ್ಟ್ರೀಯ ಆಯೋಗವನ್ನು ಬಿ. ಪಿ. ಮಂಡಲ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನದ ವಿಧಿ 340ರ ಮೇರೆಗೆ ರಚಿಸಲಾಯಿತು. ಆಯೋಗ ಎರಡು ವರ್ಷದ ಅವಧಿಯಲ್ಲೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕೆಂಬ ಶಿಫಾರಸಿನೊಡನೆ ಶೇ.52 ರಷ್ಟಿರುವ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿ ಕೋಟಾ ನಿಗದಿ ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಅಷ್ಟರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದಿತು. ಹಾಗೇ, ಇಂದಿರಾ ಗಾಂಧಿ ಪ್ರಧಾನಮಂತ್ರಿ ಪದವಿಗೇರಿದರು. ಮಂಡಲ್ ವರದಿಯನ್ನು ಇಂದಿರಾಗಾಂಧಿ ಲೋಕಸಭೆಯಲ್ಲೇನೋ ಮಂಡಿಸಿದರು. ಲೋಕಸಭೆಯಲ್ಲಿ ಅದು ಅಂಗೀಕಾರವಾಗದೆ ಮೀಸಲಾತಿಯ ಅನುಷ್ಠಾನಕ್ಕೆ ಹಿನ್ನಡೆಯಾಯಿತು. ಲೋಕಸಭೆಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಸದಸ್ಯರಿದ್ದರೂ ಕೂಡ ಅಂಗೀಕಾರವಾಗದಿದ್ದದ್ದು, ಈ ವರ್ಗಗಳ ಸದಸ್ಯರು ಮೇಲ್ಜಾತಿಗಳ ಹಿಡಿತದಲ್ಲಿದ್ದರು ಅಥವಾ ಮೀಸಲಾತಿಯ ಮೂಲ ಕಲ್ಪನೆಯನ್ನೇ ಅರಿಯದವರಾಗಿದ್ದರು ಎಂಬುದು ಸೋಜಿಗದ ಸಂಗತಿ.
ಇದನ್ನೂ ಓದಿ: ಮೊಟ್ಟ ಮೊದಲ ಮೀಸಲಾತಿ ಜನಕ: ಶಾಹು ಮಹಾರಾಜರ ಜನಪರ ಆಡಳಿತದ ಕುರಿತು ನಿಮಗೆಷ್ಟು ಗೊತ್ತು?
ಅದಾದ ಬಳಿಕ ಕೆಲ ದಿನಗಳಲ್ಲೇ ಇಂದಿರಾಗಾಂಧಿಯವರು ಹತ್ಯೆಗೀಡಾಗುತ್ತಾರೆ. ಜನತೆಯ ಅನುಕಂಪದ ಆಧಾರದ ಮೇಲೆ ರಾಜೀವ್ ಗಾಂಧಿ ಪ್ರಧಾನಮಂತ್ರಿ ಆಗುತ್ತಾರೆ. ಅವರ ಅವಧಿಯಲ್ಲಿ ಬೋಫೋರ್ಸ್ ಹಗರಣ ಭೂತದಂತೆ ಬೆಂಬತ್ತಿ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವರು. ವಿ ಪಿ ಸಿಂಗ್ ನೇತೃತ್ವದ ರಾಷ್ಟ್ರೀಯರಂಗ ಅಧಿಕಾರಕ್ಕೆ ಬರುತ್ತದೆ. ಕಾನ್ಷಿರಾಮ್ ಮತ್ತು ದ್ರಾವಿಡ ಪಕ್ಷಗಳ ಪ್ರಬಲ ಒತ್ತಾಯದ ಮೇರೆಗೆ ಪ್ರಧಾನಿ ವಿ ಪಿ ಸಿಂಗ್ ಮಂಡಲ್ ವರದಿಯನ್ನು ಜಾರಿಗೆ ತರಲು ಸಿದ್ದರಾಗಿ 1990ರಲ್ಲಿ ಹಿಂದುಳಿದ ವರ್ಗಗಳ ಶಿಕ್ಷಣ ಮತ್ತು ಉದ್ಯೋಗದ ಹಿತದೃಷ್ಟಿಯಿಂದ ಮೀಸಲಾತಿ ಜಾರಿಗೆ ಕೊಡುತ್ತಾರೆ.
ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೊಳಿಸಿರುವುದನ್ನು ಸಹಿಸದ ಬಲಿಷ್ಠ ಮೇಲ್ಜಾತಿಗಳು ಪ್ರತಿಭಟನೆಗೆ ಇಳಿಯುತ್ತವೆ. ಅಷ್ಟೇ ಅಲ್ಲ ಅಮಾಯಕ ಹಿಂದುಳಿದ ಜಾತಿಗಳ ಯುವಕರನ್ನೂ ವರದಿ ಜಾರಿ ವಿರುದ್ಧ ಬಂಡೇಳುವಂತೆ ಪ್ರಚೋದಿಸಿ ಸುಮಾರು 200ಕ್ಕೂ ಹೆಚ್ಚು ಮಂದಿಯ ಆತ್ಮಾಹುತಿಗೂ ಕಾರಣರಾಗಿ ಕ್ರೌರ್ಯ ಮೆರೆಯುತ್ತಾರೆ.
ಪ್ರತಿಭಟನೆ ಕಾವು ಧಗಧಗಿಸುತ್ತಿರುವಾಗಲೇ, ಸರ್ವೋಚ್ಚ ನ್ಯಾಯಾಲಯದಲ್ಲಿ ಹಲವಾರು ವಿರೋಧಿಗಳು ರಿಟ್ ದಾಖಲಿಸುತ್ತಾರೆ. ಪ್ರಾರಂಭದಲ್ಲಿ ನ್ಯಾಯಾಲಯ ಮೀಸಲಾತಿ ಜಾರಿಗೆ ತಡೆಯಾಜ್ಞೆ ನೀಡುತ್ತದೆ. ಅಂತಿಮವಾಗಿ 9 ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠದಲ್ಲಿ ಆರು ಮಂದಿ ನ್ಯಾಯಾಧೀಶರು ಮೀಸಲಾತಿಯನ್ನು ಎತ್ತಿ ಹಿಡಿಯುತ್ತಾರೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಪ್ರಾಮುಖ್ಯತೆ ಪಡೆದ ಅಂಶವೊಂದು ನಕಾರಾತ್ಮಕವಾಗಿ ತೀರ್ಮಾನಿಸಲ್ಪಡುತ್ತದೆ. ಅದುವೇ, ಕೇವಲ ಆರ್ಥಿಕ ಹಿಂದುಳಿದಿರುವಿಕೆಯನ್ನು ಅನುಸರಿಸಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂಬುದು( ಇಂದಿರಾ ಸಹಾನಿ vs ಒಕ್ಕೂಟ ಸರ್ಕಾರ ,1992).
ನ್ಯಾಯಾಲಯದ ಈ ನಕಾರಾತ್ಮಕ ಆದೇಶದ ಹೊರತಾಗಿಯೂ ಮೀಸಲಾತಿ ನೀಡಲೇಬೇಕು ಎಂಬ ಪ್ರಯತ್ನ ಮಾತ್ರ ನಿಲ್ಲಲಿಲ್ಲ. ಸತ್ತಂತಿದ್ದ ಹಕ್ಕಿಯೊಂದರಲ್ಲಿ ಇನ್ನೂ ಜೀವದ ಉಸಿರಾಟ ಇರುವಂತೆ ಆ ಪ್ರಯತ್ನಗಳು ಮುಂದುವರಿದಿದ್ದವು.
2006ರಲ್ಲಿ, ಮುಂದುವರಿದ ಪ್ರಯತ್ನದ ಫಲವಾಗಿ ಅಂದಿನ ಮನಮೋಹನ ಸಿಂಗ್ ಸರ್ಕಾರ ಮೇಜರ್ ಜನರಲ್ ಎಸ್. ಆರ್. ಸಿನ್ಹಾ ಆಯೋಗ ರಚಿಸಿ ವರದಿ ಕೇಳಿತು. ಆಯೋಗ 2010ರಲ್ಲಿ ಆಯೋಗ ಸರ್ಕಾರಕ್ಕೆ ವರದಿಯನ್ನೇನೋ ಸಲ್ಲಿಸಿತು. ಆದರೆ ಸರ್ಕಾರದಿಂದ ವರದಿ ಬಿಡುಗಡೆಯೂ ಆಗಲಿಲ್ಲ; ಆ ಬಗ್ಗೆ ಬಹಿರಂಗ ಚರ್ಚೆಯೂ ಆಗಲಿಲ್ಲ. ವರದಿಯಲ್ಲಿ ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿ ಕುರಿತು ಏನೂ ಹೇಳದೆ ಮೇಲ್ಜಾತಿ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾತ್ರ ಹೇಳಲಾಗಿದೆ ಎಂಬುದಷ್ಟೇ ಬಹಿರಂಗಗೊಂಡಿತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಸೋಲಬೇಕಾಯಿತು. ಸೋಲಿನ ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ವಿಷಯವೂ ಕೂಡ ಮೂಲೆ ಸೇರಿತು ಎನ್ನಬಹುದು.
2014ರ ಸಾರ್ವತ್ರಿಕ ಚುನಾವಣೆಯಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಣಾಳಿಕೆಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದವು. ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಸ್ವಭಾವತಃ ಮೇಲ್ಜಾತಿ- ವರ್ಗಗಳ ಹಿತ ಕಾಯುವ ಪಕ್ಷವೆಂದೇ ಆರೋಪ ಹೊತ್ತಿರುವ ಬಿಜೆಪಿ ಅಧಿಕಾರ ಹಿಡಿದದ್ದು ಆ ವರ್ಗಗಳ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಯಿತು. ಸಂಕ್ರಮಣ ಕಾಲಕ್ಕಾಗಿ ಕಾಯುತ್ತಿದ್ದ ಮೇಲ್ಜಾತಿಯ ಜನರಲ್ಲಿ ಸುಪ್ತವಾಗಿದ್ದ ಬಯಕೆ ಚಿಗುರೊಡೆಯುವುದು ಕಷ್ಟವೇನಾಗಲಿಲ್ಲ. ಯುಕ್ತ ಸಮಯಕ್ಕಾಗಿ ಕಾದು ಕುಳಿತಿದ್ದ ಬಿಜೆಪಿ ಸರ್ಕಾರಕ್ಕೆ 2019ರ ಚುನಾವಣೆಯ ಮುನ್ನಾ ದಿನಗಳು ಪ್ರಸಕ್ತವಾಗಿ ಕಂಡವು. ಆ ವರ್ಷದ ಜನವರಿ ತಿಂಗಳಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ವಿಧೇಯಕ ಮಂಡಿಸಿ ಸಂವಿಧಾನದ 103ನೇ ತಿದ್ದುಪಡಿಯನ್ನು ಅತ್ಯಾತುರವಾಗಿ ಸರ್ಕಾರ ಅನುಮೋದನೆ ಪಡೆದುಕೊಂಡು ಬಿಟ್ಟಿತು. ಇತರ ಹಿಂದುಳಿದವರಿಗೆ ಮೀಸಲಾತಿ ಜಾರಿಗೊಳ್ಳಲು 42 ವರ್ಷಗಳೇ ಬೇಕಾದರೂ, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ ಜಾರಿ ಕೇವಲ ಕೆಲವೇ ಗಂಟೆಗಳಲ್ಲಿ ಆಗಿ ಹೋಯಿತು! ತಿದ್ದುಪಡಿಗೆ ಡಿಎಂಕೆ ಮತ್ತು ಆರ್ ಜೆ ಡಿ ಪಕ್ಷಗಳ ಹೊರತಾಗಿ ಉಳಿದೆಲ್ಲಾ ಪಕ್ಷಗಳು ತುದಿಗಾಲಲ್ಲಿ ನಿಂತು ಒಪ್ಪಿಗೆ ಸೂಚಿಸಿದವು. ಕಾಂಗ್ರೆಸ್‌ನ ಇಬ್ಬಂದಿತನದ ಬಗ್ಗೆ ಬೇರೇನೂ ಹೇಳಬೇಕಾಗಿಲ್ಲ. ಸಂಸತ್ತಿನ ಅನುಮೋದನೆಯಿಂದಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ದಕ್ಕಿತು. ಆರ್ಥಿಕ ದುರ್ಬಲ ವರ್ಗದವರಿಗೆ ಮೀಸಲಾತಿ ಜಾರಿಯಾದದ್ದನ್ನು ಪ್ರತಿಭಟನಾರ್ಥ ಯಾವ ಒಬ್ಬ ಹಿಂದುಳಿದ ವರ್ಗದ ವ್ಯಕ್ತಿ ಧ್ವನಿಯೆತ್ತಲಿಲ್ಲ. ಬಾಯಿ ಮುಚ್ಚಿಕೊಂಡು ತೆಪ್ಪಗಾದರು. ಈ ನಿಷ್ಕ್ರಿಯತೆ ಅವರ ಅಮಾಯಕತನವೋ ಅಥವಾ ಕೈಲಾಗದ ರಣ ಹೇಡಿತನವೋ ಏನೊಂದೂ ತಿಳಿಯಲಿಲ್ಲ.103 ನೇ ತಿದ್ದುಪಡಿಯಂತೆ ಆರ್ಥಿಕ ದುರ್ಬಲರಿಗೆ ಮೀಸಲಾತಿ ಸೌಲಭ್ಯ ಪಡೆಯುವ ಉದ್ದೇಶಕ್ಕಾಗಿ ವಿಧಿ15(6) ಮತ್ತು ವಿಧಿ16(6) ಅನ್ನು ಹೊಸದಾಗಿ ಸಂವಿಧಾನದಲ್ಲಿ ಸೇರಿಸಲಾಯಿತು.
ಅರ್ಥಾತ್ ಇತರ ಹಿಂದುಳಿದ ವರ್ಗಗಳಿಗೆ ಒಂದು ನ್ಯಾಯ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಒಂದು ನ್ಯಾಯ ಎಂಬಂತಿತ್ತು ಈ ಸಂವಿಧಾನ ತಿದ್ದುಪಡಿ.
ಇದನ್ನೂ ಓದಿ: ಲೋಕಸಭೆ ಸದಸ್ಯರ ಸಂಖ್ಯೆ 850ಕ್ಕೆ ಏರಿಕೆ ಪ್ರಸ್ತಾವ: ಬೊಕ್ಕಸದ ಮೇಲಾಗುವ ಆರ್ಥಿಕ ಹೊರೆ ಎಷ್ಟು?
ಏಕೆಂದರೆ -ಇತರ ಹಿಂದುಳಿದ ವರ್ಗಗಳನ್ನು ಗುರುತಿಸಲು ಸಂವಿಧಾನಬದ್ಧವಾಗಿ ಅನೇಕ ಪ್ರಕ್ರಿಯೆಗಳಿವೆ. ಮೊದಲನೆಯದಾಗಿ ಇತರ ಹಿಂದುಳಿದ ವರ್ಗಗಳನ್ನು ಗುರುತಿಸಲು ಅನುವಾಗುವಂತೆ ಆಯೋಗವೊಂದರ ರಚನೆ ಅವಶ್ಯಕವಿದೆ. ರಾಷ್ಟ್ರಪತಿಗಳು ಸಂವಿಧಾನದ ವಿಧಿ 340ರ ಅಡಿಯಲ್ಲಿ ಆಯೋಗ ರಚಿಸುವರು. ಆಯೋಗ ಸಂವಿಧಾನದ ವಿಧಿಗಳಾದ 15(4) ಮತ್ತು ವಿಧಿ16(4)ಅನ್ನು ಕಡ್ಡಾಯವಾಗಿ ಅನುಸರಿಸಿ ಹಿಂದುಳಿದ ವರ್ಗಗಳ ಪಟ್ಟಿ ಮಾಡಬೇಕು.
ಆ ಪ್ರಕಾರ, ವಿಧಿ15(4) ರನ್ವಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ನಾಗರಿಕರನ್ನು ಅವಶ್ಯ ಗುರುತಿಸಬೇಕು. ವಿಧಿ 16 (4)ರಂತೆ ಯಾವುದೇ ಹಿಂದುಳಿದ ವರ್ಗದ ನಾಗರಿಕರು ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ “ಸಾಕಷ್ಟು ಪ್ರಾತಿನಿಧ್ಯ”ವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಿಲ್ಲಿ ಮಾತ್ರ ಅಂತವರಿಗಾಗಿ ನೇಮಕಗಳನ್ನು ಅಥವಾ ಹುದ್ದೆಗಳನ್ನು ಮೀಸಲಿಡಬಹುದು. ಅದೇ ಮಾದರಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಕಾರ್ಯವನ್ನು ಆಯೋಗವೊಂದರ ಮೂಲಕ ಕಡಾ ಖಂಡಿತವಾಗಿ ಕಂಡುಕೊಳ್ಳಬೇಕಾಗಿತ್ತು. ಅದೂ, ಅಲ್ಲದೆ ಹಾಗೆ ಗುರುತಿಸಿರುವ ಆರ್ಥಿಕವಾಗಿ ಹಿಂದುಳಿದ ವರ್ಗಗಗಳಿಗೆ ಸರ್ಕಾರದ ಹುದ್ದೆ ಮತ್ತು ನೇಮಕಾತಿಯಲ್ಲಿ “ಸಾಕಷ್ಟು ಪ್ರಾತಿನಿಧ್ಯ” ಇಲ್ಲ ಎಂಬುದನ್ನೂ ಖಚಿತಪಡಿಸಿಕೊಳ್ಳಬೇಕಾದ ಅಗತ್ಯವಿತ್ತು. ಸಂವಿಧಾನದ ಈ ಎರಡೂ ವಿಧಿಗಳನ್ನು ಪಾಲಿಸದಿರುವುದು ಘನ ಘೋರ ತಾರತಮ್ಯ ಮತ್ತು ಮಹಾ ಮೋಸ.
ಹಿಂದುಳಿದ ವರ್ಗಗಳನ್ನು ಗುರುತಿಸಲು ಹಾವನೂರು ಆಯೋಗ ಅಳವಡಿಸಿಕೊಂಡ ನ್ಯಾಯ ವಿಧಾನವನ್ನು ಈ ಸಂದರ್ಭದಲ್ಲಿ ಉದಾಹರಣೆ ಸಹಿತ ಪ್ರಸ್ತುತಪಡಿಸುವ ಅವಶ್ಯಕತೆ ಇದೆ. ಅರಸು, ಬಲಿಜ, ದೇವಾಡಿಗ, ಗಾಣಿಗ, ನಾಯಿಂದ, ರಜಪುತ್, ಸತಾನಿ ಇತ್ಯಾದಿ ಸಮುದಾಯಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವು (15/4) ಎಂದು ಪರಿಗಣಿತವಾಗಿದ್ದರೂ, ಅವು ಸರ್ಕಾರಿ ಸೇವೆಯಲ್ಲಿ “ಸಾಕಷ್ಟು ಪ್ರಾತಿನಿಧ್ಯ” ಪಡೆದುಕೊಂಡಿದ್ದ ಕಾರಣ ಆ ಸಮುದಾಯಗಳನ್ನು ಆಯೋಗ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿರಲಿಲ್ಲ. ಹಾವನೂರು ಆಯೋಗ ಅಷ್ಟರಮಟ್ಟಿಗೆ ಕಠಿಣ ನಿಲುವು ತಾಳಿತ್ತು.
ಸಂವಿಧಾನದ 103ನೇ ತಿದ್ದುಪಡಿ, ಆರ್ಥಿಕ ದುರ್ಬಲ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೊಡುವುದಾಗಿದೆ. ಈ ತಿದ್ದುಪಡಿಯ ಕಾರಣ ಖಂಡ 15(6) ಮತ್ತು 16(6)ಅನ್ನು ಹೊಸದಾಗಿ ಸೇರಿಸಲಾಗಿದೆ ಎಂಬುದನ್ನು ಈಗಾಗಲೇ ಹೇಳಲಾಗಿದೆ. ಖಂಡ 16(6) ಹೀಗಿದೆ- ” ಈ ಅನುಚ್ಛೇದದಲ್ಲಿ ಇರುವುದು ಯಾವುದೂ ಅಸ್ತಿತ್ವದಲ್ಲಿರುವ ಮೀಸಲಾತಿಗೆ ಹೆಚ್ಚುವರಿಯಾಗಿ ಆದರೆ ಪ್ರತಿಯೊಂದು ಪ್ರವರ್ಗದಲ್ಲಿನ ಹುದ್ದೆಗಳಲ್ಲಿ ಗರಿಷ್ಠ ಶೇ.10ರಷ್ಟಕ್ಕೆ ಒಳಪಟ್ಟು, (4) ನೇ ಖಂಡದಲ್ಲಿ ಉಲ್ಲೇಖಿಸಿರುವ ವರ್ಗಗಳಲ್ಲದ ಆರ್ಥಿಕವಾಗಿ ದುರ್ಬಲರಾದ ನಾಗರಿಕರ ವರ್ಗಗಳಿಗೆ ನೇಮಕಗಳಲ್ಲಿ ಅಥವಾ ಹುದ್ದೆಗಳಲ್ಲಿ ಯಾವುದೇ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿ ಬಂಧಿಸತಕ್ಕದ್ದಲ್ಲ”. ಸಂವಿಧಾನದ ಈ ಖಂಡದಲ್ಲಿ ಸಾರ್ವಜನಿಕ ಸೇವೆಯಲ್ಲಿ “ಸಾಕಷ್ಟು ಪ್ರಾತಿನಿಧ್ಯ ಹೊಂದಿಲ್ಲ”ದ ಎಂಬ ಅಂಶ ಇರುವ ನುಡಿಗಟ್ಟನ್ನು ಸೇರಿಸಿಲ್ಲ ಎಂಬುದು ಅತಿ ಮುಖ್ಯ. ಹಾಗೊಂದು ವೇಳೆ ಈ ಅಂಶದ ನುಡಿಗಟ್ಟನ್ನು ಸೇರ್ಪಡೆ ಮಾಡಿದ್ದಲ್ಲಿ, ಆರ್ಥಿಕ ದುರ್ಬಲ ವರ್ಗಗಳಲ್ಲಿರುವ ಸಮುದಾಯಗಳಲ್ಲಿ ಯಾವುದೇ ಸಮುದಾಯ ಸಾರ್ವಜನಿಕ ಸೇವೆಯಲ್ಲಿ “ಸಾಕಷ್ಟು ಪ್ರಾತಿನಿಧ್ಯ ಪಡೆದಿದ್ದ” ಪಕ್ಷದಲ್ಲಿ ಅಂಥಾ ಸಮುದಾಯ ಈ ಕೋಟಾದಲ್ಲಿ ಮೀಸಲಾತಿ ಪಡೆಯಲು ಅರ್ಹತೆ ಗಳಿಸುತ್ತಿರಲಿಲ್ಲ ಎಂಬುದನ್ನು ಗಮನಿಸಬೇಕು. ಅಷ್ಟೇ ಅಲ್ಲ, ಅವುಗಳನ್ನು ಗುರುತಿಸಲು ಆಯೋಗವನ್ನು ರಚಿಸಬೇಕಾದ ಅವಶ್ಯಕತೆ ಕೂಡ ಇರುತ್ತಿತ್ತು. ಈ ಸೂಕ್ಷ್ಮತೆಯ ಒಳಸುಳಿಗಳನ್ನು ಗಮನಿಸಿಯೇ ಬಹು ಚಾಣಾಕ್ಷತನದಿಂದ ಈ ಅಂಶವನ್ನು ತಿದ್ದುಪಡಿ ವಿಧಿ (16/6)ಯಲ್ಲಿ ಸೇರ್ಪಡೆ ಮಾಡಿಲ್ಲ ಎಂಬುದು ಸರ್ವ ವಿಧಿತ. ಮೇಲ್ಜಾತಿ- ವರ್ಗಗಳು ಸಾಮಾನ್ಯ ವರ್ಗದಲ್ಲಿ( general category) ಸ್ಪರ್ಧಿಸಿ ಸೇವೆಯಲ್ಲಿ “ಸಾಕಷ್ಟು ಪ್ರಾತಿನಿಧ್ಯ” ಪಡೆದುಕೊಂಡಿರುವ ವಿಷಯ ಸರ್ಕಾರದ ಗಮನದಲ್ಲಿ ಇದ್ದಿರಬೇಕು ಎಂದೆನ್ನಿಸದಿರದು.
103ನೇ ತಿದ್ದುಪಡಿಯನ್ನು ವಿರೋಧಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ರಿಟ್ ಗಳು ದಾಖಲಾದವು ಎಂಬುದು ಸರಿ. ಆದರೆ ನ್ಯಾಯಾಲಯ ಸಂವಿಧಾನ ತಿದ್ದುಪಡಿಯನ್ನು 3-2 ರ ಬಹುಮತದೊಡನೆ ಎತ್ತಿಹಿಡಿಯಿತು. ನ್ಯಾಯಾಲಯದ ತೀರ್ಪುನಿಂದಾಗಿ ಸದ್ಯ ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿಗೆ ಯಾವ ಬಾಧಕವೂ ಇಲ್ಲ. ತೀರ್ಪಿನಿಂದಾಗಿ ದೇಶದಲ್ಲಿ ಶೇ.100ರಷ್ಟು ಜನಸಮುದಾಯಗಳು ಒಂದಲ್ಲಾ ಒಂದು ರೀತಿಯಲ್ಲಿ ಮೀಸಲಾತಿಗೆ ಒಳಪಡುವಂತಾಯಿತು. ಸರ್ವೇ ಜನ ಸುಖಿನೋ ಭವಂತು!!

ಕೆ.ಎನ್. ಲಿಂಗಪ್ಪ
ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.



