ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದು ಹೋದರು ಮುಸ್ಲಿಂ ಸಮುದಾಯಕ್ಕೆ 2ಬಿ ಕೋಟಾವನ್ನು ಶಾಸನಾತ್ಮಕವಾಗಿ ಅಥವಾ ಸ್ಪಷ್ಟ ಕ್ಯಾಬಿನೆಟ್ ಆದೇಶದ ಮೂಲಕ ಗಟ್ಟಿಯಾಗಿ ಮರುಸ್ಥಾಪಿಸುವ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಸುಪ್ರೀಂ ಕೋರ್ಟ್ ತಡೆಯಾಜ್ಞೆ ಬಲದ ಮೇಲೆಯೇ ಸದ್ಯಕ್ಕೆ ಪ್ರವೇಶಾತಿಗಳು ಮತ್ತು ನೇಮಕಗಳು ನಡೆಯುತ್ತಿವೆಯೇ ಹೊರತು ಸರ್ಕಾರದ ಕಡೆಯಿಂದ ದೃಢವಾದ ಕಾನೂನು ರಕ್ಷಣೆ ಸಿಕ್ಕಿಲ್ಲ. ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಳಿಕ ಕಾನೂನಾತ್ಮಕ ಹೋರಾಟಕ್ಕೆ ಬೆನ್ನು ತೋರಿಸುವುದು ಪ್ರಜಾಪ್ರಭುತ್ವಕ್ಕೆ ಶ್ರೇಯಸ್ಕರವಲ್ಲ.
“ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು ಎಂದ ಮಾತ್ರಕ್ಕೆ ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡಲು ಯಾವುದೇ ಆಧಾರವಿಲ್ಲ. ನಮ್ಮ ಅಭಿಪ್ರಾಯದಲ್ಲಿ ಮುಸ್ಲಿಂ ಸಮೂಹಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಿರುವ ಸರ್ಕಾರದ ನಿಲುವು ನಿರ್ದಿಷ್ಟವಾಗಿ ಸಮರ್ಥನೀಯ” -ಕರ್ನಾಟಕ ಉಚ್ಚ ನ್ಯಾಯಾಲಯ (ಎಸ್.ಸಿ. ಸೋಮಶೇಖರಪ್ಪ vs ಕರ್ನಾಟಕ).
ಎಲ್.ಜಿ. ಹಾವನೂರ್ ಆಯೋಗ ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿರದಿದ್ದರೂ 1977ರಲ್ಲಿ ದೇವರಾಜ ಅರಸು ಸರ್ಕಾರ ಮುಸ್ಲಿಮರನ್ನು ಹಿಂದುಳಿದ ಪಟ್ಟಿಯಲ್ಲಿ ಸೇರಿಸಲು ತೆಗೆದುಕೊಂಡ ನಿರ್ಧಾರವನ್ನು ನ್ಯಾಯಾಲಯ ಎತ್ತಿ ಹಿಡಿದು ನೀಡಿರುವ ಅಭಿಪ್ರಾಯವಿದು. ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರನ್ನು ಹಿಂದುಳಿದ ವರ್ಗಗಳೆಂದು ಪರಿಗಣಿಸಿ ಮೀಸಲಾತಿ ನೀಡುವುದು ಸಂವಿಧಾನ ವಿರೋಧಿ ಎಂಬ ಅಭಿಪ್ರಾಯ ಇತ್ತೀಚೆಗೆ ಚಾಲನೆಗೆ ಬಂದು ಜಿಜ್ಞಾಸೆ ಉಂಟಾಗಿರುವುದರಿಂದ ಉಚ್ಚ ನ್ಯಾಯಾಲಯದ ಈ ಅಭಿಪ್ರಾಯ ಮಹತ್ವದ್ದಾಗಿದೆ.
ಪ್ರಸ್ತುತ ಅನುಷ್ಠಾನದಲ್ಲಿರುವ ಹಿಂದುಳಿದ ವರ್ಗಗಳಿಗೆ ಅನ್ವಯಿಸುವ ಮೀಸಲಾತಿಯು ನ್ಯಾ. ಒ. ಚಿನ್ನಪ್ಪ ರೆಡ್ಡಿ ವರದಿ ಆಧಾರಿತವಾಗಿದೆ. ಮೀಸಲಾತಿ ಪಟ್ಟಿಯಲ್ಲಿ ಪ್ರವರ್ಗ -2ಬಿಯಲ್ಲಿ ಮುಸ್ಲಿಂ ಸಮುದಾಯವನ್ನು ಸೇರಿಸಲಾಗಿದೆ. ಅನುಚಾನವಾಗಿ 1994ರಿಂದಲೂ ಮೀಸಲಾತಿ ಸವಲತ್ತನ್ನು ಆ ಸಮುದಾಯ ಪಡೆದುಕೊಂಡು ಬರುತ್ತಿದೆ. ಯಾವ ಒಬ್ಬ ನಾಗರಿಕರೂ ಕೂಡ ಮುಸ್ಲಿಮರಿಗೆ ಸಂಬಂಧಿಸಿದ ಈ ಮೀಸಲಾತಿ ಕೋಟಾವನ್ನು ಯಾವ ವೇದಿಕೆಯಲ್ಲೂ ಪ್ರಶ್ನಿಸಿರುವುದಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ದಾಖಲಿಸಬೇಕಾಗುತ್ತದೆ.
ಇಂಥ ಅಸಂದಿಗ್ಧ ಪರಿಸ್ಥಿತಿಯಲ್ಲಿ 2023ರ ಮಾರ್ಚ್ ತಿಂಗಳಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ 2ಬಿಯಲ್ಲಿದ್ದ ಮುಸ್ಲಿಂ ಸಮುದಾಯವನ್ನು ಏಕಾಏಕಿ ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದು ಹಾಕಲಾಯಿತು. ಆ ಸಮುದಾಯಕ್ಕೆ ನಿಗದಿ ಪಡಿಸಿದ್ದ ಮೀಸಲಾತಿ ಕೋಟಾ 4 ಅನ್ನು ಪ್ರವರ್ಗ- 3ಎ ಮತ್ತು ಪ್ರವರ್ಗ- 3ಬಿಯಲ್ಲಿದ್ದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳನ್ನು ಪ್ರವರ್ಗ- 2ಬಿಗೆ ವರ್ಗಾಯಿಸಿ ಅವುಗಳಿಗೆ ತಲಾ ಶೇಕಡ 2ರಷ್ಟು ಕೋಟಾವನ್ನು ಹಂಚಿಕೆ ಮಾಡಲಾಯಿತು.
ಇದನ್ನು ಓದಿದ್ದೀರಾ?: ನ್ಯಾ.ರೋಹಿಣಿ ವರದಿ: ಜಾರಿಗೆ ನಿಧಾನ ದ್ರೋಹ…
ಹೀಗೆ, ನ್ಯಾಯೋಚಿತವಲ್ಲದ ತೀರ್ಮಾನವನ್ನು ಭಾಜಪ ಸರ್ಕಾರ ತೆಗೆದುಕೊಳ್ಳಲು ಇರುವ ಕಾರಣವೆಂದರೆ ಅದು ಪಕ್ಕಾ ಕ್ಷುದ್ರ ರಾಜಕೀಯ. ಭಾಜಪವು ಮುಸ್ಲಿಮರ ಮೇಲೆ ಅವಕಾಶ ಸಿಕ್ಕಾಗಲೆಲ್ಲಾ ಅಸಂವಿಧಾನಿಕ ಕೃತ್ಯ ನಡೆಸುವುದು ಅದರ ಚಾಳಿಯಾಗಿಬಿಟ್ಟಿದೆ. ಪ್ರಬಲ ಗುರಿ ಎಂದರೆ ಧರ್ಮವೊಂದರ ಮತ ಬ್ಯಾಂಕ್ ಅನ್ನು ಗಟ್ಟಿಗೊಳಿಸಿ ಅಡಕವಾಗಿರುವ ಕಾರ್ಯಸೂಚಿಯನ್ನು ಕಾರ್ಯಸಾಧ್ಯವಾಗಿಸಿಕೊಳ್ಳುವುದು. ಇಂಥ ಅನಿಷ್ಟ ಜನವಿರೋಧಿ ಕೃತ್ಯಗಳು ಕಾಲದ ನಡುವೆ ನಡೆಯುತ್ತಲೇ ಇರುತ್ತವೆ.
ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿರುವ ಯಾವುದೇ ಜಾತಿಯನ್ನು ಹೊರಗೆ ಹಾಕಬೇಕಾದರೂ ಅಥವಾ ಪಟ್ಟಿಗೆ ಸೇರಿಸಬೇಕಾದರೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಭಿಪ್ರಾಯವಿಲ್ಲದಿದ್ದಲ್ಲಿ ಸರ್ಕಾರ ಇಂಥ ಪ್ರಕ್ರಿಯೆಯನ್ನು ಕೈಗೊಳ್ಳುವುದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಾಯ್ದೆ, 1995ರ ಉಲ್ಲಂಘನೆಯಾಗುತ್ತದೆ. ಹಿಂದುಳಿದ ವರ್ಗಗಳ ಆಯೋಗವು ಕೂಡ ಪ್ರತಿ 10 ವರ್ಷಕ್ಕೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ (ಕಾಯ್ದೆ ಕಲಂ 9/2) ಸಮೀಕ್ಷೆಯ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು (ಕಾಯ್ದೆ ಕಲಂ 11) ಯಾವುದೇ ಹಿಂದುಳಿದ ಜಾತಿ ಅಥವಾ ವರ್ಗ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ(ಅನುಚ್ಛೇದ 15 /4) ಹಿಂದುಳಿದಿವೆ ಮತ್ತು ಸರ್ಕಾರದ ಹುದ್ದೆ ಮತ್ತು ನೇಮಕಾತಿಯಲ್ಲಿ ಸಾಕಷ್ಟು ಪ್ರಾತಿನಿಧ್ಯ(ಅನುಚ್ಛೇದ 16 /4) ಪಡೆದಿವೆ ಎಂಬ ಅಂಶಗಳು ದೃಢಪಟ್ಟಲ್ಲಿ ಮಾತ್ರ ಅಂಥವುಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗಿಡಲು ಸಾಧ್ಯ. ಸರ್ಕಾರವು ಮುಸ್ಲಿಂ ಸಮುದಾಯವನ್ನು ಮೀಸಲಾತಿ ಪಟ್ಟಿಯಿಂದ ಹೊರಗಿಡಲು ಆದೇಶಿಸುವ ಮುನ್ನ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಅಥವಾ ಸಲಹೆ ಪಡೆದಿದೆಯೇ ಎಂಬುದು ಮಾತ್ರ ನಿಗೂಢ.

ಬಿಜೆಪಿ ಸರ್ಕಾರದ ವಾದ ಏನಿತ್ತು?
“ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ ಮುಸ್ಲಿಮರನ್ನು ಹಿಂದುಳಿದ ವರ್ಗ ಎಂದು ಪರಿಗಣಿಸಲು ವೈಜ್ಞಾನಿಕ ದತ್ತಾಂಶಗಳಿಲ್ಲ ಎಂಬ ವಾದವನ್ನು ಮುಂದಿಟ್ಟಿತ್ತು”. ಆದರೆ ಕೇಂದ್ರ ಸರ್ಕಾರವೇ ಮಂಡಲ್ ವರದಿ ಆಧಾರಿತ ಮೀಸಲಾತಿ ಅನುಷ್ಠಾನದಲ್ಲಿ ಮುಸ್ಲಿಮರಿಗೂ ಮೀಸಲಾತಿಯನ್ನು ನೀಡಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಸುಪ್ರೀಂ ಕೋರ್ಟ್ ತಡೆ:
ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ರದ್ದುಗೊಳಿಸಿರುವ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಸರ್ವೋಚ್ಚ ನ್ಯಾಯಾಲಯವು ಸರ್ಕಾರದ ಈ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಅಂದರೆ ಕಾನೂನಾತ್ಮಕವಾಗಿ ಪ್ರವರ್ಗ-2ಬಿ ಮೀಸಲಾತಿ ವ್ಯವಸ್ಥೆಯೇ ಮುಂದುವರಿಯಲಿ ಎಂದಿತು. ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಮುಸ್ಲಿಂ ಸಮುದಾಯ ಪ್ರವರ್ಗ-2ಬಿ ಕೋಟಾದಲ್ಲಿಯೇ ಮೀಸಲಾತಿ ಪಡೆಯುತ್ತಿದೆ.
ಕಾಂಗ್ರೆಸ್ ಪಕ್ಷದ ವಾಗ್ದಾನ:
2023ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಮತ್ತು ಪ್ರಚಾರದ ವೇಳೆ ಕಾಂಗ್ರೆಸ್ ನಾಯಕರು “ತಾವು ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲಿಯೇ ಮುಸ್ಲಿಮರಿಗೆ ಮೀಸಲಾತಿ ಪಟ್ಟಿಯ ಪ್ರವರ್ಗ- 2ಬಿಯಲ್ಲಿಯೇ ಕಾನೂನುಬದ್ಧವಾಗಿ ಮರುಸ್ಥಾಪಿಸುತ್ತೇವೆ” ಎಂದು ಭರವಸೆ ನೀಡಿದ್ದರು.
ಮೂರು ವರ್ಷಗಳ ನಂತರದ ಸ್ಥಿತಿ (2026):
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದು ಹೋದರು ಮುಸ್ಲಿಂ ಸಮುದಾಯಕ್ಕೆ ಈ ಕೋಟಾವನ್ನು ಶಾಸನಾತ್ಮಕವಾಗಿ ಅಥವಾ ಸ್ಪಷ್ಟ ಕ್ಯಾಬಿನೆಟ್ ಆದೇಶದ ಮೂಲಕ ಗಟ್ಟಿಯಾಗಿ ಮರುಸ್ಥಾಪಿಸುವ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಸುಪ್ರೀಂ ಕೋರ್ಟ್ ತಡೆಯಾಜ್ಞೆ ಬಲದ ಮೇಲೆಯೇ ಸದ್ಯಕ್ಕೆ ಪ್ರವೇಶಾತಿಗಳು ಮತ್ತು ನೇಮಕಗಳು ನಡೆಯುತ್ತಿವೆಯೇ ಹೊರತು ಸರ್ಕಾರದ ಕಡೆಯಿಂದ ದೃಢವಾದ ಕಾನೂನು ರಕ್ಷಣೆ ಸಿಕ್ಕಿಲ್ಲ. ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಳಿಕ ಕಾನೂನಾತ್ಮಕ ಹೋರಾಟಕ್ಕೆ ಬೆನ್ನು ತೋರಿಸುವುದು ಪ್ರಜಾಪ್ರಭುತ್ವಕ್ಕೆ ಶ್ರೇಯಸ್ಕರವಲ್ಲ. ಸರ್ಕಾರ ತಕ್ಷಣವೇ ಶಾಸನಾತ್ಮಕ ಆದೇಶ ಹೊರಡಿಸಬೇಕಿದೆ.
ಮುಸ್ಲಿಂ ಸಂಘಟನೆಗಳ ಅಸಮಾಧಾನ:
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಮುಸ್ಲಿಂ ಸಮಾವೇಶದಲ್ಲಿ ಸುಮಾರು 40ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳ ಒಕ್ಕೂಟವು ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದೆ. ಸಮಾವೇಶದಲ್ಲಿ ಬಿಡುಗಡೆಯಾದ 76 ಪುಟಗಳ ‘ಹೊಣೆಗಾರಿಕೆ ವರದಿ’ಯಲ್ಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ನೀಡಿದ ಭರವಸೆಗಳನ್ನು ಈಡೇರಿಸದೆ ‘ನಿಧಾನ ದ್ರೋಹ’ ಅಥವಾ ‘ಮೃದು ಹಿಂದುತ್ವ’ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ?: ಕವಲುದಾರಿಯಲ್ಲಿ ಮುಸ್ಲಿಮರು: ಕಾಂಗ್ರೆಸ್ ಬಾಣಲೆಗೋ, ಜೆಡಿಎಸ್ ಬೆಂಕಿಗೋ?
ಸಮುದಾಯದ ಆಕ್ರೋಶ ಮತ್ತು ಎಚ್ಚರಿಕೆ:
ಇತ್ತೀಚಿನ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಗೆಲುವಿನ ಅಂತರ ಭಾರಿ ಕುಸಿದಿರುವುದು ಮತ್ತು ಮುಸ್ಲಿಂ ಸಂಘಟನೆಗಳು “ನಮಗೆ ರಾಜಕೀಯ ಪರ್ಯಾಯಗಳಿವೆ” ಎಂದು ಎಚ್ಚರಿಕೆ ನೀಡಿರುವುದನ್ನು ತೀವ್ರವಾಗಿ ಸರ್ಕಾರ ಗಮನಿಸಬೇಕಾಗಿದೆ. ಪಾರಂಪರಿಕವಾಗಿ ಮುಸ್ಲಿಂ ಸಮುದಾಯವು ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾ ಬಂದಿರುವುದು ಸರ್ವ ವೇದ್ಯವಾಗಿದೆ.
ಈಗಾಗಲೇ ಹತ್ತು ಬೇಡಿಕೆಗಳನ್ನು ಸರ್ಕಾರಕ್ಕೆ ಮುಸ್ಲಿಂ ಸಮುದಾಯ ಮಂಡಿಸಿದೆ. ಕೇವಲ ಚುನಾವಣೆಗಳಿಗಾಗಿ ಮುಸ್ಲಿಂ ಸಮುದಾಯವನ್ನು ಬಳಸಿಕೊಂಡು ಹಕ್ಕುಗಳ ಮರುಸ್ಥಾಪನೆಯ ಸರದಿ ಬಂದಾಗ ಜಾಣ ಮೌನವಹಿಸುವುದು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯಲ್ಲವೇ?
(ಲೇಖಕರು ಮಾಜಿ ಸದಸ್ಯರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ)

ಕೆ.ಎನ್. ಲಿಂಗಪ್ಪ
ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.



