ಸ್ಮರಣೆಯೊಂದೇ ಸಾಕೇ? ಸಾಕಾರವಾಗಬೇಕಿದೆ ಅವರ ಕನಸು

Date:

ದಲಿತ ಮಹಿಳೆ ತಯಾರಿಸಿದ ಬಿಸಿಯೂಟ ಉಣಲೊಲ್ಲೆ ಎನುವ ಮಕ್ಕಳನ್ನು ಮನವೊಲಿಸಿ ಜೊತೆಗೊಯ್ಯಬೇಕು. ಮಗುವೇ, ಅತ್ಯಾಚಾರದ ಭಯ ಬಿಟ್ಟು ನೀ ಕಲಿ ಎಂದು ಹೇಳುವಷ್ಟು ಶಾಲೆ ಸುರಕ್ಷಿತ ತಾಣವಾಗಬೇಕು. ಹುಟ್ಟು, ಮುಟ್ಟು, ಸಾವು, ಗ್ರಹಬಲ ಮತ್ತಿತರ ವಿಷಯಗಳ ಕುರಿತು ಇರುವ ಮೌಢ್ಯವನ್ನು ಕಾಯ್ದೆ ಬರಲಿ ಎಂದು ಕಾಯದೆ ತೊಲಗಿಸಬೇಕು

- Advertisement -

ಸಾವಿತ್ರಿ ಬಾಯಿ, ಜ್ಯೋತಿಬಾ ಫುಲೆಯವರು ಹೆಣ್ಣುಮಕ್ಕಳ ತಿಳುವಳಿಕೆ ಸುಧಾರಿಸಬೇಕೆಂದು, ಅದು ಶಿಕ್ಷಣದ ಮೂಲಕ ಸಾಧ್ಯವಾಗಬಹುದೆಂದು ಜೀವಮಾನ ಪರ್ಯಂತ ಹೋರಾಡಿದರು. ಹೆಣ್ಣುಮಕ್ಕಳು ಮತ್ತು ಶೂದ್ರಾತಿಶೂದ್ರರು ಅಕ್ಷರ ಕಲಿಯುವುದೇ ಅಪರಾಧವೆನಿಸಿಕೊಂಡಿದ್ದ ಕಾಲದಲ್ಲಿ ಶಾಲೆ ತೆರೆದು ಓದಲು ಸಹಾಯ ಮಾಡಿದರು. ಅಷ್ಟೇ ಅಲ್ಲ, ಜನರ ಬದುಕಿನಲ್ಲಿ ಬದಲಾಗಬೇಕಾದದ್ದು ಬಹಳಷ್ಟಿದೆಯೆಂದರಿತು ಸಮಾಜ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದರು. ಸತ್ಯಶೋಧಕ ಸಮಾಜವು ಸರಳವಾದ, ಆಚರಣೆ-ಆಡಂಬರಗಳಿರದ ಮದುವೆಗಳನ್ನು ಚಾಲ್ತಿಗೆ ತಂದಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಈಗ ಶಿಕ್ಷಣ ಮೂಲಭೂತ ಹಕ್ಕು; ಯಾರು ಬೇಕಾದರೂ ಶಾಲೆಗೆ ಹೋಗಿ ಅಕ್ಷರ ಕಲಿತು ಬರಬಹುದು. ಆದರೆ ಶಿಕ್ಷಣ ಸಮಾನಾವಕಾಶ ಒದಗಿಸುವಲ್ಲಿ ವಿಫಲವಾಗಿರುವುದೇ ಅಲ್ಲದೆ ವೈಚಾರಿಕತೆ ಬೆಳೆಸುವುದರಲ್ಲೂ ಸೋತಿದೆ. ಶಿಕ್ಷಣವೇ ಎಲ್ಲ ಸಾಮಾಜಿಕ ಅನಿಷ್ಟಗಳಿಗೆ ಮದ್ದಾಗಬಹುದೆಂಬ ನಮ್ಮ ತಿಳುವಳಿಕೆ ಎಲ್ಲೋ ತಪ್ಪಾಗಿದೆ. ಶಿಕ್ಷಿತರೆಲ್ಲ ವಿಚಾರವಂತರಾಗದೆ, ಸಮಾಜಮುಖಿಯಾಗದೇ ಸ್ವಾರ್ಥದ ನಡವಳಿಕೆಯಲ್ಲಿ, ಕಂದಾಚಾರದಲ್ಲಿ ಮುಳುಗಿರುವುದೇ ಹೆಚ್ಚಾಗಿದೆ.

ಏಕೆ ಹೀಗಾಯಿತು? ಸುಧಾರಣೆಗಾಗಿ ನಿರಂತರ ಯತ್ನಿಸಿದ ಅಸಂಖ್ಯ ಚೇತನಗಳ ಪ್ರಯತ್ನದ ಹೊರತಾಗಿಯೂ ಏಕೆ ಕಾಲ ಸರಿದೇ ಇಲ್ಲವೇನೋ ಎನಿಸುವಂತೆ ಸಮಾಜ ನಿಂತಲ್ಲೆ ನಿಂತುಬಿಟ್ಟಿತು? ಇದಕ್ಕೆ ಕಾರಣ ನಾವು ಸಾವಿತ್ರಿಬಾಯಿ, ಜ್ಯೋತಿಬಾ ಫುಲೆ, ಅಂಬೇಡ್ಕರರಂಥ ಹಿರಿಯರು ತಮ್ಮ ಜೀವಿತ ಕಾಲದಲ್ಲಿ ಮಾಡಿದ ಕೆಲಸಗಳನ್ನು ಅವರೆಲ್ಲಿ ಬಿಟ್ಟರೋ ಅಲ್ಲೇ ನಿಲ್ಲಿಸಿರುವುದು.

ಹಾಗಾಗಬಾರದೆಂದರೆ ಫುಲೆಗಳ ಚಿಂತನೆ, ಕಾರ್ಯಗಳ ಚಾರಿತ್ರಿಕ ಮಹತ್ವವನ್ನು ನಾವು ಅರಿಯಬೇಕು. ಅವರ ವಿಚಾರಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಿ ಕಾರ್ಯಪ್ರವೃತ್ತರಾಗಬೇಕು. ಶಿಕ್ಷಣವನ್ನು ಸಮಾಜ ಬದಲಾವಣೆಯ ಭಾಗವಾಗಿ ನೋಡುತ್ತ ಅಂದು ಅವರು ಮಾಡಿದ ಕೆಲಸಗಳನ್ನು ಮತ್ತು ಚಿಂತನೆಗಳನ್ನು ಆಳವಾಗಿ ಗ್ರಹಿಸಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಯುವಜನರತ್ತ ನಮ್ಮ ನಡೆ ಸಾಗಬೇಕು.

ಇವತ್ತು ಭಾರತದ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲಾ ಹಂತಗಳ ಬೋಧಕ ಸಿಬ್ಬಂದಿಯನ್ನು ಗಮನಿಸಿದರೆ ಅವರಲ್ಲಿ ಮಹಿಳೆಯರೇ ಹೆಚ್ಚು ಕಂಡುಬರುತ್ತಾರೆ. ಅದರಲ್ಲೂ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕಿಯರೇ ಹೆಚ್ಚಿದ್ದಾರೆ. ಮಲಾಲಾ ಎಂಬ ದಿಟ್ಟ ಹುಡುಗಿ ಪಾಕಿಸ್ತಾನದಲ್ಲಿ ಅಕ್ಷರ ಕಲಿಯುವ ಹಕ್ಕಿಗಾಗಿ ನಡೆಸಿದ ಸಾವು ಬದುಕಿನ ಹೋರಾಟದ ಕತೆ ಕೇಳಿ ನಮ್ಮಲ್ಲೆಷ್ಟೋ ಜನ ಸದ್ಯ ನಾವು ಅಂತಹ ಸನ್ನಿವೇಶದಲ್ಲಿಲ್ಲ ಎಂದು ಸಮಾಧಾನದ ನಿಟ್ಟುಸಿರು ಬಿಡಬಹುದು. ಆದರೆ ಇವತ್ತಿನ ಈ ಕಾಲಕ್ಕೆ ಇನ್ನೊಂದು ಮುಖವೂ ಇದೆ ಎನ್ನುವುದನ್ನು ನಾವು ಮರೆಯಬಾರದು.

ಇವತ್ತಿಗೂ ನಮ್ಮ ದೇಶದ ಜನಸಂಖ್ಯೆಯ ಕಾಲುಭಾಗಕ್ಕಿಂತ ಹೆಚ್ಚು ಜನರಿಗೆ ಇನ್ನೂ ಅಕ್ಷರದ ಬೆಳಕು ಸಿಕ್ಕಿಲ್ಲ. ಶಾಲಾಕಾಲೇಜಿಗೆ ಹೋಗಬೇಕಾದ ಮಕ್ಕಳ ಸಂಖ್ಯೆ ಜನಸಂಖ್ಯೆಯ ಶೇ. 30 ಇದೆ. ಅವರಲ್ಲಿ ನಾಲ್ಕೂವರೆ ಕೋಟಿ ಮಕ್ಕಳು ಎಳೆತನದಲ್ಲೇ ದುಡಿಮೆಗಿಳಿಯುತ್ತಿದ್ದಾರೆ. ಪ್ರಾಥಮಿಕ ಶಾಲೆಗೆ ಹೋಗಬೇಕಾದ 20 ಕೋಟಿ ಮಕ್ಕಳಲ್ಲಿ 5 ಕೋಟಿ ಮಕ್ಕಳು ಶಾಲೆ ಮುಖ ಕಾಣದೇ ಉಳಿಯುತ್ತಿದ್ದಾರೆ. ಶಾಲೆಗೆ ಬರದ ಮಕ್ಕಳೇ ಅಪೌಷ್ಟಿಕತೆ ಎದುರಿಸುವ ಮಕ್ಕಳೂ ಆಗಿದ್ದಾರೆ. ಅಂಥವರನ್ನು ಹೇಗಾದರೂ ಶಾಲೆಗೆ ಸೆಳೆಯಲು ಬಿಸಿಯೂಟ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಅದು 1995ರಿಂದಲೇ ಜಾರಿಯಲ್ಲಿದೆ. ಆದರೂ ಕಲಿಯುವ ಅವಕಾಶ ಸಿಕ್ಕಿದ ಎಲ್ಲರಿಗೂ ವಿದ್ಯೆ ಅನ್ನ ನೀಡುವ-ಅರಿವಿನ ಬೆಳಕಾಗುವ ಮಾರ್ಗ ತೋರಿಸುತ್ತಿಲ್ಲ.

ಇವತ್ತಿಗೂ ಹುಡುಗಿಯರು, ಅದರಲ್ಲೂ ಬಡ ಹಳ್ಳಿಗಾಡಿನ ಮಕ್ಕಳು ಮೈಲುಗಟ್ಟಲೆ ನಡೆದು ಶಾಲೆಗೆ ಹೋಗಬೇಕು. ಅಂಥವರೇನಾದರೂ ಹಾಸ್ಟೆಲಿನಲ್ಲಿ ಉಳಿದು ಕಲಿಯಬಯಸಿದರೆ ಹಾಸ್ಟೆಲುಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಅಲ್ಲಿನ ಸುರಕ್ಷೆ, ಸೌಲಭ್ಯಗಳು ಹೇಗಿವೆ ಎಂದರೆ ಪಾಲಕರು ತಮ್ಮ ಮಗಳನ್ನು ಮನೆಯಿಂದ ದೂರ ಬಿಡಲು ಹೆದರಬೇಕಾಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾದಕ ವಸ್ತು ಉತ್ಪಾದನೆಗಿಳಿದ ಹೊರರಾಜ್ಯ ಮಾಫಿಯಾ ಗ್ಯಾಂಗ್‌; ಕರ್ನಾಟಕದ ಕಳಂಕ!

ಈಗಲೂ ಇವತ್ತೂ ಮೌಢ್ಯಾಚರಣೆಗಳು ಢಾಳಾಗಿವೆ. ಅವೇ ಧಾರ್ಮಿಕ ಆಚರಣೆಗಳೆನಿಸಿಕೊಂಡಿವೆ. ಜಾತಿಪದ್ಧತಿಯು ಎಲ್ಲೆಲ್ಲೋ ತನ್ನ ಪಟ್ಟುಗಳ ಬಿಗಿಗೊಳಿಸುತ್ತಿದೆ. ಶಾಲೆಯೇ ಜಾತೀಯತೆಯ ಒಳಸುಳಿಗಳನ್ನು ಮಕ್ಕಳಿಗೆ ಪರಿಚಯಿಸುವ ತಾಣವಾಗುತ್ತಿದೆ. ಶಾಲಾ ಪಠ್ಯ ಮತ್ತು ಎಳೆಯರಿಗೆ ಬೋಧಿಸುವ ಇತಿಹಾಸವೇ ರಾಜಕೀಯಕರಣಗೊಳ್ಳುತ್ತಿದೆ. ಇಂಗ್ಲಿಷ್ ಎಂಬ ಜಾಗತಿಕ ಸರ್ವಾಧಿಕಾರಿ ಭಾಷೆಯೆದುರು ಸಣ್ಣಪುಟ್ಟ ಭಾಷೆಗಳು ಸೊರಗಿ ಕಣ್ಮುಚ್ಚುತ್ತಿವೆ. ಇಂಗ್ಲಿಷ್ ಬರದ ದೇಶೀ ಭಾಷೆಯ ಜ್ಞಾನಿ ಅನಕ್ಷರಸ್ಥ ಎನಿಸಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಯೇ ಧರ್ಮವಾಗಿರುವ ಕಾಲದಲ್ಲಿ ಹಣ ಮೌಲ್ಯವಾಗಿದೆ. ಯಂತ್ರಗಳೊಡನೆ ಬದುಕು ನಿಕಟವಾಗುತ್ತ ಹೋದಂತೆ ಮಾನವ ವೇದನೆಗಳು ಸಿಟ್ಟು, ಹೋರಾಟ ಹುಟ್ಟಿಸಲು ವಿಫಲವಾಗುತ್ತಿವೆ. ಧರ್ಮಾಧಾರಿತ ರಾಜಕಾರಣ ತಲೆಯೆತ್ತುತ್ತ ಮಹಿಳೆಯನ್ನು ದ್ವೇಷ ರಾಜಕಾರಣದ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಜಾತಿ ವೈಷಮ್ಯದ ಗಲಭೆಗಳಲ್ಲಿ; ಕೋಮುಗಲಭೆಗಳಲ್ಲಿ ಒಂದು ಜಾತಿ/ಕೋಮಿನ ಮಹಿಳೆಯರೂ ಸಕ್ರಿಯವಾಗಿ ಪಾಲ್ಗೊಂಡು ಪುರುಷರಿಗಿಂತ ತಾವೇನು ಕಡಿಮೆಯಿಲ್ಲ ಎಂದು ಹಿಂಸೆ ಮೆರೆದಿದ್ದಾರೆ. ಇದರ ನಡುವೆ ಅವರಿಗೆ ಲಿಂಗನ್ಯಾಯ, ಲಿಂಗ ಸಮಾನತೆ ಎಲ್ಲವೂ ಮರೆತುಹೋದ ಪದಗಳಾಗತೊಡಗಿವೆ.

ಇವತ್ತು ವಿಧವಾ ಪದ್ಧತಿ ಇಲ್ಲ. ಹೆಣ್ಣಿಗೆ ಆಸ್ತಿ ಹಕ್ಕು ದೊರೆತಿದೆ. ಸಮಾನ ನಾಗರಿಕ ಹಕ್ಕುಗಳಿವೆ. ಶಿಕ್ಷಣದಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸವಲತ್ತುಗಳಿವೆ. ಅಷ್ಟೇ ಅಲ್ಲ, ಉಳಿದ ಕ್ಷೇತ್ರಗಳಲ್ಲಿಯೂ ಮಹಿಳೆಯರ ಭಾಗೀದಾರಿಕೆಯನ್ನು ಉತ್ತೇಜಿಸುವಂತಹ ಹಲವು ಕಾರ್ಯಕ್ರಮಗಳಿವೆ. ಆದರೆ ಬಹುಪಾಲು ಕ್ರಮಗಳು ಕಾಗದದ ಮೇಲೆ ಉಳಿದವೇ ಹೊರತು ಸಮಾಜದ ನರನಾಡಿಗಳಲ್ಲಿ ಹರಿಯಲಿಲ್ಲ. ಎಂದೇ ಹೆಣ್ಣು ‘ಅಬಲೆ ಹೆಣ್ಣಾ’ಗಿಯೇ ಪರಿಗಣಿಸಲ್ಪಟ್ಟಿದ್ದಾಳೆ.

ಇಂಥ ಸಂಕಟಕಾಲದಲ್ಲಿ ಮಕ್ಕಳಲ್ಲಿ ವೈಚಾರಿಕ ಮನೋಭಾವ ಬೆಳೆಸುವ, ಜಾತ್ಯತೀತ ಮೌಲ್ಯ ತುಂಬುವ ಅವಶ್ಯಕತೆಯಿದೆ. ನೆಲದಾಳದಲ್ಲಿ ಇಂದಿಗೂ ಅಲ್ಲೆಲ್ಲೋ ಅಡಗಿರುವ ಶುದ್ಧಜಲವನ್ನು, ಜಲದ ಕಣ್ಣನ್ನು ಅರಸಬೇಕಿದೆ. ಜಲಸೂಚಿಯ ಕೆಲಸವನ್ನು ಶಿಕ್ಷಕ ಬಂಧುಗಳು ನಿಭಾಯಿಸಬೇಕಾಗಿದೆ. ದಿಕ್ಸೂಚಿಯಾಗಬಲ್ಲ, ಸತ್ಯದರ್ಶಿಯಾಗಬಲ್ಲ ಶಿಕ್ಷಣ ನೀಡುವಂಥ ಅತಿ ಮಹತ್ತರ ಜವಾಬ್ದಾರಿ ಅವರ ಮೇಲಿದೆ.

ದಲಿತ ಮಹಿಳೆ ತಯಾರಿಸಿದ ಬಿಸಿಯೂಟ ಉಣಲೊಲ್ಲೆ ಎನುವ ಮಕ್ಕಳನ್ನು ಮನವೊಲಿಸಿ ಜೊತೆಗೊಯ್ಯಬೇಕು. ಮಗುವೇ, ಅತ್ಯಾಚಾರದ ಭಯ ಬಿಟ್ಟು ನೀ ಕಲಿ ಎಂದು ಹೇಳುವಷ್ಟು ಶಾಲೆ ಸುರಕ್ಷಿತ ತಾಣವಾಗಬೇಕು. ಹುಟ್ಟು, ಮುಟ್ಟು, ಸಾವು, ಗ್ರಹಬಲ ಮತ್ತಿತರ ವಿಷಯಗಳ ಕುರಿತು ಇರುವ ಮೌಢ್ಯವನ್ನು ಕಾಯ್ದೆ ಬರಲಿ ಎಂದು ಕಾಯದೆ ತೊಲಗಿಸಬೇಕು. ‘ನಾವೊಬ್ರು ಪ್ರಯತ್ನ ಮಾಡಿದರೆ ಏನಾದೀತು?’ ಎಂಬ ಸಿನಿಕತನವನ್ನು ಶಿಕ್ಷಕವರ್ಗವೂ ಸೇರಿದಂತೆ ಎಲ್ಲರೂ ಬಿಡಬೇಕು. ನಮ್ಮ ಆತ್ಮಪ್ರಜ್ಞೆಯನ್ನು ಬಡಿದೆಬ್ಬಿಸುವ ಸಾವಿತ್ರಿಬಾಯಿಯಂತಹ ಶಿಕ್ಷಕಿ, ಜ್ಯೋತಿಬಾರಂತಹ ಹೋರಾಟಗಾರರನ್ನು ನಮ್ಮ ಕಣ್ಣಗೊಂಬೆಯಲ್ಲಿಟ್ಟುಕೊಂಡು ಪ್ರತಿ ಮಗುವಿಗೂ ಅರ್ಹ ಶಿಕ್ಷಣ, ಸಮಾನ ಶಿಕ್ಷಣ ನೀಡಬೇಕೆಂಬ ಪ್ರತಿಜ್ಞೆ ಮಾಡಬೇಕು.

ಖಾಸಗಿ ಶಾಲೆಗಳು ನಿಮ್ಮ ಬಳಿ ಇರುವ ಕಾಸಿಗೆ ತಕ್ಕ ‘ಎಜುಕೇಷನ್’ ಅನ್ನು ಮಕ್ಕಳಿಗೆ ಕೊಟ್ಟು ಸೇವೆ ಮಾಡಲು ತುದಿಗಾಲಲ್ಲಿ ನಿಂತಿರುವಾಗ ಸಮಾನ ಶಿಕ್ಷಣದ ಕೂಗೆದ್ದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಸಮಾನ ಮನಸ್ಕ ಸಂಗಾತಿಗಳು ದೇಶಾದ್ಯಂತ ಸಮಾನ ಶಿಕ್ಷಣ ಆಂದೋಲನ ಶುರುಮಾಡಿದ್ದಾರೆ. ಕರ್ನಾಟಕದಲ್ಲೂ ಸಂಘಟನೆಗಳು ಸಮಾನ ಶಿಕ್ಷಣಕ್ಕಾಗಿ ಅರ್ಥಪೂರ್ಣ ಹೋರಾಟ ನಡೆಸುತ್ತಿವೆ. ದೇವನೂರ ಮಹಾದೇವರೂ ಸೇರಿದಂತೆ ಹಲವರು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಬೇಡಿಕೆಯನ್ನು ಆಂದೋಲನವಾಗಿ ರೂಪಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ.

ಈ ಹೊತ್ತಿನಲ್ಲಿ ಸಾವಿತ್ರಿಬಾಯಿ-ಜ್ಯೋತಿಬಾರಂತಹ ಮಹಾನ್ ಚೇತನಗಳನ್ನು ಜಾತಿಧರ್ಮಗಳ, ಊರುಭಾಷೆಗಳ ಚೌಕಟ್ಟಿನಲ್ಲಿ ಗುರುತಿಸದೇ ಎಲ್ಲರೂ ಅವರ ಹೋರಾಟ ಚೈತನ್ಯವನ್ನು, ಮನೋಭೂಮಿಕೆಯನ್ನು ಗ್ರಹಿಸಿ ತಮ್ಮದಾಗಿಸಿಕೊಳ್ಳಲೇಬೇಕು. ಸತ್ಯಶೋಧಕ ಮತ್ತೆ ನಮ್ಮ ನಡುವೆ ತಲೆಯೆತ್ತಬೇಕು.

(ನನ್ನ ‘ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ’ ಪುಸ್ತಕದಿಂದ.)

?s=150&d=mp&r=g
ಎಚ್ ಎಸ್‌ ಅನುಪಮ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು ಸಾಧ್ಯವಲ್ಲವೇ?

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...

‘ಗೋಧ್ರಾ’ದಿಂದ ‘SIR’ ವರೆಗೆ: ಮೋದಿ ಆಡಳಿತದ 25 ವರ್ಷಗಳಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಕಮರಿದ ಕನಸುಗಳು!

​ಅಧಿಕಾರದ ಉತ್ತುಂಗದ ಸಂಭ್ರಮದ ನಡುವೆ, ಜನಸಾಮಾನ್ಯರ ಕಮರಿದ ಕನಸುಗಳ ಕಥೆಯೊಂದು ಮರೆಯಾಗುತ್ತಿದೆ....