ಜಾರ್ಖಂಡ್‌ನಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ವರ್ಷಗಟ್ಟಲೆ ಕಾಯುತ್ತಿರುವ ಲಕ್ಷಾಂತರ ಯುವಜನರ ಆಕ್ರೋಶ ಭುಗಿಲೆದ್ದಿದೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಸಿಬ್ಬಂದಿ ಆಯ್ಕೆ ಆಯೋಗ (JSSC) ನಡೆಸಿರುವ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಕೋಟ್ಯಂತರ ರೂಪಾಯಿಗಳ ಹಣಕಾಸು ವ್ಯವಹಾರ ಹಾಗೂ ಸಾಲು ಸಾಲು ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸೋಮವಾರ, ರಾಂಚಿಯಲ್ಲಿ ನಡೆದ ‘ವಿಧಾನಸಭೆ ಚಲೋ’ ಮೆರವಣಿಗೆಯು ವಿದ್ಯಾರ್ಥಿ-ಯುವಜನರ ಆಕ್ರೋಶದ ತೀವ್ರತೆಗೆ ಸಾಕ್ಷಿಯಾಗಿದೆ. ಸಾವಿರಾರು ಉದ್ಯೋಗಾಕಾಂಕ್ಷಿಗಳು ವಿಧಾನಸಭೆಯತ್ತ ಮೆರವಣಿಗೆ ಹೊರಟಾಗ ಅವರನ್ನು ತಡೆಯಲು ಪೊಲೀಸರು ಭಾರೀ ಪ್ರಮಾಣದ ಬ್ಯಾರಿಕೇಡ್‌ಗಳು ಮತ್ತು ಮುಳ್ಳುತಂತಿ ಬೇಲಿಗಳನ್ನು ಅಳವಡಿಸಿದ್ದರು. ಆದರೆ, ತೀವ್ರ ಹತಾಶೆಗೆ ಒಳಗಾಗಿದ್ದ ಯುವಜನರು ಪೊಲೀಸರ ತಡೆಗೋಡೆಗಳನ್ನು ತಳ್ಳಿ, ಮುಳ್ಳುತಂತಿಗಳನ್ನೇ ಬದಿಗೆ ಸರಿಸಿ ಮುನ್ನುಗ್ಗಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಜಲಫಿರಂಗಿ, ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದರು. ಈ ಘರ್ಷಣೆಯಲ್ಲಿ ಹಲವು ವಿದ್ಯಾರ್ಥಿಗಳು ಮತ್ತು ಪೊಲೀಸರು ಗಾಯಗೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಸರ್ಕಾರಿ ನೇಮಕಾತಿ ವ್ಯವಸ್ಥೆಯ ಮೇಲೆಯೇ ಯುವಸಮೂಹ ನಂಬಿಕೆ ಕಳೆದುಕೊಳ್ಳುತ್ತಿರುವುದನ್ನು ಈ ಘಟನೆ ಎತ್ತಿ ತೋರಿಸಿದೆ.
13 ಪರೀಕ್ಷೆ ರದ್ದು ಕೇಳಿದರೆ ಸರ್ಕಾರ ರದ್ದು ಮಾಡಿದ್ದು ಮೂರು ಮಾತ್ರ!
ಪ್ರತಿಭಟನಾಕಾರರ ಹೇಳಿಕೆಗಳು-ಬೇಡಿಕೆಗಳು ಮತ್ತು ಸರ್ಕಾರದ ಪ್ರತಿಕ್ರಿಯೆಗಳ ನಡುವೆ ವ್ಯಾತ್ಯಾಸಗಳಿವೆ. ಇದೇ ವಿದ್ಯಾರ್ಥಿ ನಾಯಕರು ಮತ್ತು ಸರ್ಕಾರದ ನಡುವಿನ ಜಟಾಪಟಿಗೂ ಕಾರಣವಾಗಿದೆ. ಪ್ರತಿಭಟನಾಕಾರರೊಂದಿಗೆ ಆರು ಗಂಟೆಗಳ ಸುದೀರ್ಘ ಮಾತುಕತೆ ನಡೆಸಿದ ಸರ್ಕಾರವು, “ನಾವು ವಿದ್ಯಾರ್ಥಿಗಳ 98%ರಷ್ಟು ಬೇಡಿಕೆಗಳನ್ನು ಒಪ್ಪಿಕೊಂಡಿದ್ದೇವೆ. ಅವುಗಳನ್ನು ಈಡೇರಿಸುತ್ತೇವೆ” ಎಂದು ಹೇಳಿದೆ. ಆದರೆ, ಈ ಹೇಳಿಕೆಯನ್ನು ವಿದ್ಯಾರ್ಥಿ ಸಂಘಟನೆಗಳು ಸಂಪೂರ್ಣ ಸುಳ್ಳು ಮತ್ತು ಜನರನ್ನು ದಾರಿ ತಪ್ಪಿಸುವ ತಂತ್ರ ಎಂದು ಕಟುವಾಗಿ ತಳ್ಳಿಹಾಕಿವೆ.
This video cannot be played in your browser. Open the video directly
ಅಕ್ರಮಗಳ ಆರೋಪ ಎದುರಿಸುತ್ತಿರುವ ಒಟ್ಟು 13 ನೇಮಕಾತಿ ಪರೀಕ್ಷೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂಬುದು ತಮ್ಮ ಬೇಡಿಕೆಯೆಂದು ಉದ್ಯೋಗಾಕಾಂಕ್ಷಿಗಳು ಹೇಳಿದ್ದಾರೆ. ಆದರೆ, ಸರ್ಕಾರ 14ನೇ JPSC ನಾಗರಿಕ ಸೇವೆಗಳ ಪ್ರಿಲಿಮಿನರಿ ಪರೀಕ್ಷೆ ಮತ್ತು ಎರಡು ಬ್ಯಾಕ್‌ಲಾಗ್ ಪರೀಕ್ಷೆಗಳನ್ನು (2023 ಮತ್ತು 2025) ಸೇರಿ ಕೇವಲ ಮೂರು ಪರೀಕ್ಷೆಗಳನ್ನು ಮಾತ್ರ ರದ್ದುಗೊಳಿಸಲು ಒಪ್ಪಿದೆ. ಕೋಟ್ಯಂತರ ಯುವಕರ ಭವಿಷ್ಯ ನಿರ್ಧರಿಸುವ JSSC-CGL ಪರೀಕ್ಷೆಯ ಫಲಿತಾಂಶವನ್ನು ರದ್ದು ಮಾಡಲು ಸರ್ಕಾರ ನಿರಾಕರಿಸಿದೆ. ಈಗಾಗಲೇ ಆಯ್ಕೆಯಾದ ಅಭ್ಯರ್ಥಿಗಳು ಕೆಲಸಕ್ಕೆ ಸೇರಿಕೊಂಡಿರುವುದರಿಂದ ಮತ್ತು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ರದ್ದು ಮಾಡಲು ಸಾಧ್ಯವಿಲ್ಲ ಎಂಬುದು ಸರ್ಕಾರದ ಸಮಜಾಯಿಷಿ. ಹೀಗಿರುವಾಗ 98%ರಷ್ಟು ಬೇಡಿಕೆ ಈಡೇರಿದೆ ಎಂದು ಸರ್ಕಾರ ಹೇಗೆ ಹೇಳಿಕೊಳ್ಳುತ್ತದೆ ಎಂದು ಯುವಜನರು ಪ್ರಶ್ನಿಸಿದ್ದಾರೆ.
ಸಿಐಡಿ ತನಿಖೆಗೆ ಸರ್ಕಾರ ಆದೇಶ; ಸಿಬಿಐ ತನಿಖೆಗೆ ವಿದ್ಯಾರ್ಥಿಗಳ ಪಟ್ಟು
ಪರೀಕ್ಷಾ ಅಕ್ರಮಗಳು ಕೇವಲ ತಾಂತ್ರಿಕ ಲೋಪಗಳಲ್ಲ. ಇದರ ಹಿಂದೆ ಪರೀಕ್ಷಾ ಏಜೆನ್ಸಿಗಳು, ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎಂಬುದು ಪ್ರತಿಭಟನಾಕಾರರ ಗಂಭೀರ ಆರೋಪ. ಪ್ರಸ್ತುತ, ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇದರಿಂದ ಸತ್ಯ ಹೊರಬರಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳು ವಾದಿಸುತ್ತಿದ್ದಾರೆ.
ಈ ಲೇಖನ ಓದಿದ್ದೀರಾ?: ಪ್ರಯಾಗ್‌ರಾಜ್‌ನ ಛಾತ್ರೋಂ ಕೀ ಗೂಂಜ್: ಯುವಜನರ ಆಕ್ರೋಶಕ್ಕೆ ಹೊಸ ರಾಜಕೀಯ ಭಾಷ್ಯ ಬರೆದ ರಾಹುಲ್
ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ತನಿಖೆಗೆ ಸರ್ಕಾರ ಒಪ್ಪಿಗೆ ನೀಡಿದ್ದರೂ, ಇಡೀ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ನಿರಾಕರಿಸಿದೆ. ಇದೇ ವೇಳೆ, ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ JPSC ಮಂಡಳಿಯ ಮೂವರು ಸದಸ್ಯರಾದ ಅಜೀತಾ ಭಟ್ಟಾಚಾರ್ಯ, ಅನಿಮಾ ಹನ್ಸ್ಡಾ ಮತ್ತು ಜಮಾಲ್ ಅಹ್ಮದ್ ತಮ್ಮ ಸ್ಥಾನಗಳಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ತನಿಖಾ ಸಂಸ್ಥೆಗಳು ವಿಚಾರಣೆಗೆ ಕರೆಯುತ್ತಿದ್ದಂತೆಯೇ ಬಂದ ಈ ರಾಜೀನಾಮೆಗಳು ಆಯೋಗದ ಒಳಗಿನ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತಿವೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ವಿದ್ಯಾರ್ಥಿ ಹೋರಾಟದ ಸುತ್ತ ರಾಜಕೀಯ ರಣರಂಗ
ಉದ್ಯೋಗಾಕಾಂಕ್ಷಿಗಳ ಈ ಹೋರಾಟ ಈಗ ಜಾರ್ಖಂಡ್‌ನಲ್ಲಿ ದೊಡ್ಡ ರಾಜಕೀಯ ಸಂಘರ್ಷವಾಗಿ ಮಾರ್ಪಟ್ಟಿದೆ. ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಅದರ ವಿದ್ಯಾರ್ಥಿ ಘಟಕ ಎಬಿವಿಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ವಿಧಾನಸಭೆಯ ಅಧಿವೇಶನದ ಒಳಗೂ ಪ್ರತಿಪಕ್ಷಗಳ ಶಾಸಕರು ಗದ್ದಲು ಸೃಷ್ಟಿಸಿದ್ದು, ಕಲಾಪಕ್ಕೆ ತೀವ್ರ ಅಡ್ಡಿಪಡಿಸಿದ್ದಾರೆ. ಸತತ ಗದ್ದಲದ ಪರಿಣಾಮವಾಗಿ ವಿಧಾನಸಭೆಯನ್ನು ಮುಂದೂಡಲಾಗಿದೆ.
ಇನ್ನೊಂದೆಡೆ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ತಮ್ಮ ಆಡಳಿತದಲ್ಲಿ ನಡೆದ ನೇಮಕಾತಿಗಳಲ್ಲಿ 75ರಿಂದ 100%ರಷ್ಟು ಉದ್ಯೋಗಗಳನ್ನು ರಾಜ್ಯದ ಯುವಜನರಿಗೆ ನೀಡಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ಮತ್ತು ಉದ್ಯೋಗ ನೀತಿಗಳಿಂದಾಗಿ ದೇಶಾದ್ಯಂತ ಯುವಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧವೇ ಪ್ರತಿದಾಳಿ ನಡೆಸಿದ್ದಾರೆ.




