ಪ್ರಯಾಗ್‌ರಾಜ್‌ನ ಛಾತ್ರೋಂ ಕೀ ಗೂಂಜ್: ಯುವಜನರ ಆಕ್ರೋಶಕ್ಕೆ ಹೊಸ ರಾಜಕೀಯ ಭಾಷ್ಯ ಬರೆದ ರಾಹುಲ್

Date:

ಶಿಕ್ಷಣ, ಉದ್ಯೋಗ, ಪ್ರಶ್ನೆಪತ್ರಿಕೆ ಸೋರಿಕೆ, ಪೊಲೀಸ್ ದಮನದಿಂದ ‘ಸಿಸ್ಟಮ್’ ಮೇಲಿನ ಪ್ರಶ್ನೆಯವರೆಗೆ; ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪುನಶ್ಚೇತನಕ್ಕೆ ಪ್ರಯಾಗ್‌ರಾಜ್ ಸಮಾವೇಶ ಹೊಸ ತಿರುವಾಗಬಹುದು!

ಆಗಸ್ಟ್ 8ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಕೆ.ಪಿ. ಮೈದಾನದಲ್ಲಿ ನಡೆದ ರಾಹುಲ್ ಗಾಂಧಿ ಅವರ ‘ಛಾತ್ರೋಂ ಕೀ ಗೂಂಜ್’ ಕಾರ್ಯಕ್ರಮ ಕೇವಲ ಕಾಂಗ್ರೆಸ್ ಪಕ್ಷದ ಮತ್ತೊಂದು ರಾಜಕೀಯ ಸಮಾವೇಶ ಮಾತ್ರವಲ್ಲ. ಅದು ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬ, ನಿರುದ್ಯೋಗ ಹಾಗೂ ವಿದ್ಯಾರ್ಥಿ ಪ್ರತಿಭಟನೆಗಳ ಮೇಲಿನ ಪೊಲೀಸ್ ಕ್ರಮಗಳು ದೇಶದ ಯುವಜನರ ನಡುವೆ ದೊಡ್ಡ ಅಸಮಾಧಾನ ಹುಟ್ಟಿಸಿರುವ ಹೊತ್ತಿನಲ್ಲಿ ಯುವ ರಾಜಕಾರಣದ ದಿಕ್ಕನ್ನು ಅಳೆಯುವ ವೇದಿಕೆಯಾಗಿಯೂ ಕಾಣಿಸಿದೆ. ಆ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿ-ಯುವಜನರು ಸೇರಿದ್ದು, ಅವರ ಉತ್ಸಾಹ ಮತ್ತು ಪ್ರತಿಕ್ರಿಯೆಯೇ ಜೀವಂತ ಸಾಕ್ಷಿಯೂ ಆಗಿದೆ. ಮಾತ್ರವಲ್ಲ, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಉತ್ತರ ಪ್ರದೇಶದಲ್ಲಿ ಭಾರೀ ರಾಜಕೀಯ ಸಂಚಲನವನ್ನೂ ಸೃಷ್ಟಿಸಿದೆ.

- Advertisement -

ಪ್ರಯಾಗ್‌ರಾಜ್ ಕಾಂಗ್ರೆಸ್‌ಗೆ ಸಾಮಾನ್ಯ ನಗರವಲ್ಲ. ಇದನ್ನು ತಮ್ಮ ಭಾಷಣದ ಆರಂಭದಲ್ಲೇ ರಾಹುಲ್‌ ಗಾಂಧಿ ಉಲ್ಲೇಖಿಸಿದರು. ಅಲಹಾಬಾದ್ ಎಂದು ಪರಿಚಿತವಾಗಿದ್ದ ಪ್ರಯಾಗ್‌ರಾಜ್ ಭಾರತದ ಸ್ವಾತಂತ್ರ್ಯ ಚಳವಳಿ, ಕಾಂಗ್ರೆಸ್ ಹಾಗೂ ನೆಹರೂ ಕುಟುಂಬದ ಇತಿಹಾಸದೊಂದಿಗೆ ಬೆಸೆದುಕೊಂಡಿದೆ. ಜವಾಹರಲಾಲ್ ನೆಹರೂ ಅವರ ಆನಂದ ಭವನವೂ ಇಲ್ಲಿಯೇ ಇದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ಗೆ ದೆಹಲಿಯ ಅಧಿಕಾರದ ದಾರಿ ತೆರೆದಿದ್ದ ಉತ್ತರ ಪ್ರದೇಶದಲ್ಲಿ, ದಶಕಗಳ ರಾಜಕೀಯ ಕುಸಿತದ ನಂತರ ಯುವಜನರ ಇಂತಹ ಸ್ಪಂದನೆ ಪಕ್ಷದ ಪುನಶ್ಚೇತನದ ಸಾಧ್ಯತೆಯ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ರಾಹುಲ್‌ ಗಾಂಧಿ ಅವರ ಈ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ತೊಡಕುಗಳನ್ನು ಎದುರಿಸಿತ್ತು. ಕೆ.ಪಿ. ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ನೀಡಿದ್ದ ಅನುಮತಿಯನ್ನು ಕಾರ್ಯಕ್ರಮದ ಹಿಂದಿನ ದಿನ ಯೋಗಿ ಸರ್ಕಾರ ಹಿಂಪಡೆದಿತ್ತು. ಬಳಿಕ ನಾನಾ ಷರತ್ತುಗಳನ್ನು ಹೇರಿ, ಕಾರ್ಯಕ್ರಮಕ್ಕೆ ಮತ್ತೆ ಅನುಮತಿ ನೀಡಲಾಯಿತು. ಆದಾಗ್ಯೂ, ಕಾರ್ಯಕ್ರಮದ ಸುತ್ತ ಹಾಕಲಾಗಿದ್ದ ಬ್ಯಾನರ್‌ಗಳು, ಕಟೌಟ್‌ಗಳನ್ನು ಬಿಜೆಪಿ ಪುಂಡರು ಕಿತ್ತೊಗೆದಿದ್ದರು. ಮೈದಾನದ ಸುತ್ತಲಿನ ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಹದಗೆಡಿಸಲಾಗಿತ್ತು. ಮೈದಾನಕ್ಕೆ ಜನರು ಪ್ರವೇಶಿಸಲಾಗದಂತೆ, ಕೊಳಚೆ ನೀರನ್ನು ಹರಿಬಿಡಲಾಗಿತ್ತು. ಇಷ್ಟೆಲ್ಲ ತೊಡಕುಗಳ ನಡುವೆಯೂ ಕಾರ್ಯಕ್ರಮ ಭಾರೀ ಜನಬೆಂಬಲದೊಂದಿಗೆ ನಡೆಯಿತು.

ಕಾರ್ಯಕ್ರಮಕ್ಕೆ ಯುವಜನರ ಬೃಹತ್ ದಂಡೇ ಭಾಗಿಯಾಗಿತ್ತು. ಸಂಜೆ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಮಧ್ಯಾಹ್ನದಿಂದಲೇ ವಿದ್ಯಾರ್ಥಿಗಳು ಮತ್ತು ಯುವಜನರು ಮೈದಾನದಲ್ಲಿ ನೆರೆದಿದ್ದರು. ರಾಹುಲ್ ಗಾಂಧಿ ಮಾತನಾಡುವಾಗ ಕೇಳಿಬಂದ ಘೋಷಣೆಗಳು ಮತ್ತು ಯುವಜನರ ಪ್ರತಿಕ್ರಿಯೆಗಳ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಭಾರೀ ಬೆಂಬಲವೂ ವ್ಯಕ್ತವಾಗುತ್ತಿದೆ.

ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ತಮ್ಮ ಸುಮಾರು 40 ನಿಮಿಷಗಳ ಭಾಷಣದಲ್ಲಿ ವಿದ್ಯಾರ್ಥಿಗಳ ತಕ್ಷಣದ ಸಮಸ್ಯೆಗಳಿಂದ ಆರಂಭಿಸಿ ದೇಶದ ರಾಜಕೀಯ, ಆರ್ಥಿಕ ಹಾಗೂ ಸಾಂಸ್ಥಿಕ ವ್ಯವಸ್ಥೆಯವರೆಗೆ ಪ್ರಶ್ನೆಗಳನ್ನು ವಿಸ್ತರಿಸಿದರು. ‘ವ್ಯವಸ್ಥೆ ಎಂದರೇನು? ಅದನ್ನು ಯಾರು ನಡೆಸುತ್ತಿದ್ದಾರೆ?’ ಎಂಬ ಪ್ರಶ್ನೆಯನ್ನು ಮುಂದಿಟ್ಟ ಅವರು, “ಸಾಮಾನ್ಯ ಜನರ ಬಳಿ ನೋವು ಮತ್ತು ಡೇಟಾ ಇದ್ದರೆ, ಆರ್ಥಿಕ ಸಂಪತ್ತು ಕೆಲವೇ ದೊಡ್ಡ ಉದ್ಯಮಿಗಳ ಬಳಿ ಕೇಂದ್ರೀಕೃತವಾಗಿದೆ” ಎಂದು ಆರೋಪಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪ್ರಜಾಪ್ರಭುತ್ವದ ಕಲ್ಪನೆಯನ್ನು ಉಲ್ಲೇಖಿಸಿದ ರಾಹುಲ್, “ದೇಶದಲ್ಲಿ ಆರ್ಥಿಕ ಅಧಿಕಾರ ದೊಡ್ಡ ಕಾರ್ಪೊರೇಟ್ ಗುಂಪುಗಳ ಬಳಿ, ರಾಜಕೀಯ ಅಧಿಕಾರ ಬಿಜೆಪಿ-ಆರ್‌ಎಸ್‌ಎಸ್‌ ನಾಯಕತ್ವದ ಬಳಿ ಹಾಗೂ ಜನರ ಆಲೋಚನೆಗಳನ್ನು ರೂಪಿಸುವ ಸಾಂಸ್ಥಿಕ ಅಧಿಕಾರ ನಿರ್ದಿಷ್ಟ ಸಿದ್ಧಾಂತದ ಹಿಡಿತಕ್ಕೆ ಹೋಗುತ್ತಿದೆ. ಮೋದಿ ಆಪ್ತಮಿತ್ರ ಗೌತಮ್ ಅದಾನಿಯ ಸಂಪತ್ತಿನ ಏರಿಕೆ, ಬಿಜೆಪಿಯ ಆರ್ಥಿಕ ಬಲ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವಾದಗಳು ಈ ‘ವ್ಯವಸ್ಥೆ’ಯ ಭಾಗವಾಗಿವೆ” ಎಂದು ವಿವರಿಸಿದರು.

“ವಿಶ್ವವಿದ್ಯಾಲಯಗಳು, ಕಾಲೇಜುಗಳು, ಆಡಳಿತ ವ್ಯವಸ್ಥೆ, ಮಾಧ್ಯಮ, ಭದ್ರತಾ ವ್ಯವಸ್ಥೆ ಹಾಗೂ ನ್ಯಾಯಾಂಗ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಮನೋಭಾವದ ವ್ಯಕ್ತಿಗಳನ್ನು ಕೂರಿಸಲಾಗುತ್ತಿದೆ. ಅಲಹಾಬಾದ್ ವಿಶ್ವವಿದ್ಯಾಲಯದ ಆಡಳಿತವನ್ನೇ ನೋಡಿ, ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ಎಸ್‌ನ ಪ್ರಚಾರಕರನ್ನು ವೈಸ್ ಚಾನ್ಸಲರ್‌ ಆಗಿ ನೇಮಿಸಲಾಗಿದೆ. ಇದೇ ರೀತಿ, ಪ್ರತಿಯೊಂದು ಸಂಸ್ಥೆಯಲ್ಲೂ ಆರ್‌ಎಸ್‌ಎಸ್‌ ಪ್ರಚಾರಕರಿದ್ದಾರೆ. ಅಧಿಕಾರಶಾಹಿಯಲ್ಲಿ ಪ್ರಚಾರಕರು, ಸೇನೆಯಲ್ಲಿ ಪ್ರಚಾರಕರು, ಮಾಧ್ಯಮಗಳಲ್ಲಿ ಪ್ರಚಾರಕರು, ನ್ಯಾಯಾಂಗದಲ್ಲಿ ಪ್ರಚಾರಕರು, ಪ್ಯಾರಾ ಮಿಲಿಟರಿಯಲ್ಲಿ ಪ್ರಚಾರಕರು, ಯೂನಿವರ್ಸಿಟಿ-ಕಾಲೇಜುಗಳಲ್ಲಿ ಪ್ರಚಾರಕರು! ಲೋಚನೆಯನ್ನು ನಿಯಂತ್ರಿಸುವ ವಿಧಾನ ಇದು” ಎಂದು ವಿವರಿಸಿದರು.

“ಮೋಹನ್ ಭಾಗವತ್, ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಅದಾನಿ ಇರುವ ಈ ಸಿಸ್ಟಮ್ ಉದ್ಯೋಗವನ್ನು ನಾಶಮಾಡಿದೆ, ವಿಶ್ವವಿದ್ಯಾಲಯಗಳನ್ನು ಕಬಳಿಸಿದೆ, ದೇಶದ ಜನರ ಮೇಲೆ ಆಕ್ರಮಣ ಮಾಡಿದೆ. ಆದರೆ ಈ ಕತ್ತಲೆಯಲ್ಲಿ, ಯುವಜನರು ಬೆಳಕನ್ನು ಹೊತ್ತಿಸಿದ್ದಾರೆ! ಇಗೋ ನೋಡಿ, ಹಿಂದಿನ ತಲೆಮಾರು ಮಾಡಲು ಸಾಧ್ಯವಾಗದ್ದನ್ನು ಯುವಜನರು ಮಾಡಿದ್ದಾರೆ. ಅವರು ತಮ್ಮ ಭಯವನ್ನು ಎದುರಿಸಲು ಸಾಧ್ಯವಾಗಲಿಲ್ಲ. ಆದರೆ, ಹಿಂದುಸ್ಥಾನದ ವಿದ್ಯಾರ್ಥಿಗಳು, ಹಿಂದುಸ್ಥಾನದ ಯುವಜನರು ತಮ್ಮ ಭಯವನ್ನು ಎದುರಿಸಿ ದೇಶವನ್ನು ಬದಲಾಯಿಸಿದ್ದಾರೆ” ಎಂದು ವಿವರಿಸಿದ್ದಾರೆ.

rahul 23

 ಈವರೆಗೆ ರಾಹುಲ್‌ ಗಾಂಧಿ ಅವರು ಅದಾನಿ-ಮೋದಿ ಸಂಬಂಧ, ಆರ್ಥಿಕ ಅಸಮಾನತೆ, ಜಾತಿಗಣತಿ, ಸಂವಿಧಾನ ಹಾಗೂ ಮತದಾನದ ಹಕ್ಕಿನಂತಹ ಪ್ರಶ್ನೆಗಳನ್ನು ನಿರಂತರವಾಗಿ ಎತ್ತುತ್ತಿದ್ದರು. ಪ್ರಯಾಗ್‌ರಾಜ್‌ನಲ್ಲಿ ಅದಕ್ಕೆ ‘ಸಾಂಸ್ಥಿಕ ನಿಯಂತ್ರಣ’ ಎಂಬ ಮತ್ತೊಂದು ಪದರವನ್ನು ಸೇರಿಸಿದ್ದಾರೆ. ಅಂದರೆ, ಸರ್ಕಾರವನ್ನು ಬದಲಾಯಿಸುವುದಷ್ಟೇ ಸಾಲದು; ಆಡಳಿತ, ಶಿಕ್ಷಣ ಹಾಗೂ ಇತರ ಪ್ರಜಾಸತ್ತಾತ್ಮಕ ಸಂಸ್ಥೆಗಳ ಸ್ವಾಯತ್ತತೆಯ ಪ್ರಶ್ನೆಯನ್ನೂ ಎದುರಿಸಬೇಕು ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ರಾಹುಲ್ ಗಾಂಧಿಯ ಪ್ರಯಾಗ್‌ರಾಜ್ ಕಾರ್ಯಕ್ರಮವನ್ನು ಇತ್ತೀಚಿನ ವಿದ್ಯಾರ್ಥಿ ಚಳವಳಿಯೊಂದಿಗೆ ಬೆಸೆದುಕೊಂಡೇ ನೋಡಲಾಗುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಪರೀಕ್ಷೆಗಳ ಅಕ್ರಮ ಹಾಗೂ ಉದ್ಯೋಗದ ಕೊರತೆಯ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಯುವಜನರು ಬೀದಿಗಿಳಿದಿದ್ದಾರೆ. ಜುಲೈ 20ರಂದು ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದರು. ಈ ಘಟನೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ರಾಹುಲ್ ತಮ್ಮ ಬರಹ ಮತ್ತು ಹೇಳಿಕೆಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಭಾರತದ ಶಾಂತಿಯುತ ಪ್ರತಿರೋಧದ ಪರಂಪರೆಯ ಮುಂದುವರಿಕೆಯೆಂದು ಬಣ್ಣಿಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ಲಾಠಿ, ಪೆಲೆಟ್ ಮತ್ತು ಇತರ ಬಲಪ್ರಯೋಗ ನಡೆದಿದ್ದು, ಪ್ರತಿಭಟಿಸಲು ಸಂವಿಧಾನದ 19ನೇ ವಿಧಿ ನೀಡಿರುವ ಹಕ್ಕಿನ ಉಲ್ಲಂಘನೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಬ್ರಿಜ್‌ ಭೂಷಣ್ ಖುಲಾಸೆ | ಬೂಟಿನ ಏಟು ತಿಂದು ಹೋರಾಡಿದ್ದಕ್ಕೆ ಸಿಕ್ಕ ʼಪದಕʼ!

ಸದ್ಯಕ್ಕೆ, ರಾಹುಲ್‌ ಗಾಂಧಿ ಅವರ ಪ್ರಯಾಗರಾಜ್ ಕಾರ್ಯಕ್ರಮವು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಹೊಸ ಹುರುಪು ತಂದಿದೆ. ಒಂದು ಕಾಲದಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್‌ನ ರಾಷ್ಟ್ರೀಯ ಅಧಿಕಾರದ ಕೇಂದ್ರವಾಗಿತ್ತು. ಆದರೆ ಕಳೆದ ಮೂರು ದಶಕಗಳಲ್ಲಿ ಪಕ್ಷದ ಸಂಘಟನೆ ಬಹುತೇಕ ಕುಸಿದಿದೆ. ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ಕಾಂಗ್ರೆಸ್ ತನ್ನ ರಾಜಕೀಯ ನೆಲೆಯನ್ನು ಕಳೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಯುವಜನರ ಪ್ರಶ್ನೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಾಂಗ್ರೆಸ್ ಪುನಃ ನೆಲಮಟ್ಟದಲ್ಲಿ ಚಲನೆ ಆರಂಭಿಸಿದೆ. ಇದು ಪಕ್ಷಕ್ಕೆ ಹೊಸ ಸಾಮಾಜಿಕ ನೆಲೆ ಒದಗಿಸುವ ನಿರೀಕ್ಷೆ ಇದೆ.

ಆದಾಗ್ಯೂ, ಪ್ರಯಾಗ್‌ರಾಜ್‌ನ ಜನಸ್ತೋಮವನ್ನು ಮತಗಳಾಗಿ ಪರಿವರ್ತಿಸುವುದು ಸುಲಭವಲ್ಲ. ದೊಡ್ಡ ಸಭೆ ಮತ್ತು ಜನ ಬೆಂಬಲವು ರಾಜಕೀಯ ವಾತಾವರಣವನ್ನು ನಿರ್ಮಿಸಬಹುದು; ಆದರೆ ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಚುನಾವಣಾ ಯಶಸ್ಸಿಗೆ ಬೂತ್ ಮಟ್ಟದ ಸಂಘಟನೆ, ಸ್ಥಳೀಯ ನಾಯಕತ್ವ, ಸಾಮಾಜಿಕ ಮೈತ್ರಿ ಹಾಗೂ ದೀರ್ಘಕಾಲದ ಜನಸಂಪರ್ಕ ಅಗತ್ಯ. ರಾಹುಲ್ ಗಾಂಧಿ ಅವರಿಗೆ ಸಿಕ್ಕ ಯುವಜನರ ಸ್ಪಂದನೆಯ ನಿಜವಾದ ಪರೀಕ್ಷೆ ಇದೇ ಆಗಿದೆ. ಇದನ್ನು ಕಾಂಗ್ರೆಸ್‌ ಯಶಸ್ವಿಯಾಗಿ ನಿಭಾಯಿಸಿದರೆ, ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಮತ್ತೆ ಪ್ರಾಬಲ್ಯತೆ ದೊರೆಯುತ್ತದೆ.

ಅದೇನೇ ಇರಲಿ, ‘ಛಾತ್ರೋಂ ಕೀ ಗೂಂಜ್’ ಒಂದು ಮಹತ್ವದ ಸಂದೇಶ ನೀಡಿದೆ. ಯುವಜನರ ರಾಜಕೀಯವನ್ನು ಕೇವಲ ಜಾತಿ, ಧರ್ಮ ಅಥವಾ ರಾಷ್ಟ್ರವಾದದ ಚೌಕಟ್ಟಿನಲ್ಲೇ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಶಿಕ್ಷಣ ಮತ್ತು ನಿರುದ್ಯೋಗದ ವಿಚಾರಗಳು ಯುವಜನರ ರಾಜಕೀಯದ ಕೇಂದ್ರಕ್ಕೆ ಬರುತ್ತಿವೆ. ಅದನ್ನು ರಾಹುಲ್‌ ಗಾಂಧಿ ಅರಿತಿದ್ದಾರೆ. ಅದಕ್ಕೆ ತಕ್ಕಂತೆ ತಮ್ಮ ಚಟುವಟಿಕೆಗಳನ್ನು ರೂಪಿಸುತ್ತಿದ್ದಾರೆ. ರಾಹುಲ್ ಹಾದಿಯಲ್ಲಿಯೇ ಇಡೀ ಪಕ್ಷ ಸಾಗಿದರೆ, ಕಾಂಗ್ರೆಸ್‌ಗೆ ಪುಟಿದೇಳುವ ಅವಕಾಶಗಳೂ ದೊರೆಯಲಿವೆ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...

ಬೀದರ್ | ಬರ ಪರಿಸ್ಥಿತಿ : ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆ...