ಮೋದಿ-ಶಾ ಚಕ್ರವ್ಯೂಹ | ಪ್ರಾದೇಶಿಕ ಪಕ್ಷಗಳ ಒಡೆದು, ಕಾಂಗ್ರೆಸ್‌ ಏಕಾಂಗಿ ಮಾಡುವುದೇ ಗುರಿ!

Date:

2022ರ ಜೂನ್‌ನಲ್ಲಿ ಶಿವಸೇನೆಯನ್ನು ಬಿಜೆಪಿ ಒಡೆದು ಇಬ್ಭಾಗ ಮಾಡಿತು. ಏಕನಾಥ್ ಶಿಂಧೆ ನೇತೃತ್ವದಲ್ಲಿ ಹಲವು ಶಾಸಕರು ಬಂಡಾಯ ಎದ್ದು, ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಕೆಡವಿದರು. ಬಳಿಕ, ಶಿಂಧೆ ಬಣ ಬಿಜೆಪಿ ಜೊತೆ ಸರ್ಕಾರ ರಚಿಸಿತು. ಶಿಂಧೆ ಮುಖ್ಯಮಂತ್ರಿಯೂ ಆದರು. ಆ ವಿಭಜನೆ ಕೇವಲ ವ್ಯಕ್ತಿಗತ ಘರ್ಷಣೆಯಲ್ಲ, ಬದಲಿಗೆ ಬಿಜೆಪಿಯ ದೀರ್ಘಕಾಲೀನ ಯೋಜನೆಯ ಭಾಗವಾಗಿತ್ತು.

- Advertisement -

 “ಈಗ ಯಾವುದೇ ಶಿವಸೇನೆಯ ಗುಂಪು ಉಳಿದಿಲ್ಲ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮಾತ್ರ ಒಂದೇ ಶಿವಸೇನೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ಹೇಳಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)ಗೆ ನೇರ ಸವಾಲಾಗಿಯೂ ಪರಿಣಮಿಸಿದೆ. ಅಮಿತ್ ಶಾ ಮಾತಿಗೆ ಪ್ರತಿಕ್ರಿಯಿಸಿರುವ ಉದ್ಧವ್ ಠಾಕ್ರೆ, “ನನ್ನ ನೇತೃತ್ವದ ಶಿವಸೇನೆ ಮಾತ್ರವೇ ನಿಜವಾದ ಶಿವಸೇನೆ. ಬಿಜೆಪಿ ನಮ್ಮ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿದೆ” ಎಂದು ಆಪಾದಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಈ ಬೆಳವಣಿಗೆ ಕೇವಲ ಶಿವಸೇನೆಯ ಒಳಗಿನ ವಿಭಜನೆಯಲ್ಲ, ಬದಲಿಗೆ ಮೋದಿ-ಶಾ ಜೋಡಿಯ ದೀರ್ಘಕಾಲೀನ ರಾಜಕೀಯ ಕುಂತ್ರದ ಭಾಗ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳಿಗೆ ಸೀಮಿತವಾಗಿ ಸರಳ ಬಹುಮತವನ್ನೂ ಗಳಿಸಲಾಗದ ಹೀನಾಯ ಸ್ಥಿತಿಗೆ ಬಂದಿತ್ತು. ಈ ಸೋಲಿನ ಭಯಯಿಂದ ಆತಂಕಿತರಾಗಿರುವ ಮೋದಿ-ಶಾ, ಮತ್ತೆ ಅಂತಹ ಪರಿಸ್ಥಿತಿ ಎದುರಾಗದಂತೆ, ತಾವು ಅಜೇಯರಾಗಿ ಉಳಿಯುವಂತೆ ನೋಡಿಕೊಳ್ಳಲು ಹವಣಿಸುತ್ತಿದ್ದಾರೆ. ತಂತ್ರ-ಕುತಂತ್ರ ಹೆಣೆಯುತ್ತಿದ್ದಾರೆ. ಆದ್ದರಿಂದಲೇ, ಪ್ರಾದೇಶಿಕ ಪಕ್ಷಗಳನ್ನು ಒಡೆದು, ಅವುಗಳ ಬಲವನ್ನು ದುರ್ಬಲಗೊಳಿಸಿ, ಅಂತಿಮವಾಗಿ ಕಾಂಗ್ರೆಸ್‌ಅನ್ನು ರಾಜಕೀಯವಾಗಿ ಏಕಾಂಗಿಗೊಳಿಸುವುದು ಮತ್ತು ತಮಗೆ ಪ್ರಬಲ ಪ್ರತಿಸ್ಪರ್ಧಿಗಳೇ ಇಲ್ಲವೆಂದು ಬಿಂಬಿಸಿಕೊಳ್ಳಲು ಕೊಳಕು ರಾಜಕಾರಣ ಮಾಡುತ್ತಿದ್ದಾರೆ.

2022ರ ಜೂನ್‌ನಲ್ಲಿ ಶಿವಸೇನೆಯನ್ನು ಬಿಜೆಪಿ ಒಡೆದು ಇಬ್ಭಾಗ ಮಾಡಿತು. ಏಕನಾಥ್ ಶಿಂಧೆ ನೇತೃತ್ವದಲ್ಲಿ ಹಲವು ಶಾಸಕರು ಬಂಡಾಯ ಎದ್ದು, ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಕೆಡವಿದರು. ಬಳಿಕ, ಶಿಂಧೆ ಬಣ ಬಿಜೆಪಿ ಜೊತೆ ಸರ್ಕಾರ ರಚಿಸಿತು. ಶಿಂಧೆ ಮುಖ್ಯಮಂತ್ರಿಯೂ ಆದರು. ಆ ವಿಭಜನೆ ಕೇವಲ ವ್ಯಕ್ತಿಗತ ಘರ್ಷಣೆಯಲ್ಲ, ಬದಲಿಗೆ ಬಿಜೆಪಿಯ ದೀರ್ಘಕಾಲೀನ ಯೋಜನೆಯ ಭಾಗವಾಗಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ವಿಸ್ತರಿಸಲು ಮೂಲತಃ ಹಿಂದುತ್ವದ ಆಧಾರದ ಮೇಲೆ ರೂಪುಗೊಂಡಿದ್ದ ಶಿವಸೇನೆಯನ್ನು ಒಡೆಯುವುದು ಅಗತ್ಯವಾಗಿತ್ತು. ಅದರ ಬಲವನ್ನು ತನ್ನ ಪರವಾಗಿ ತಿರುಗಿಸಿಕೊಳ್ಳಲು ಶಿವಸೇನೆಯನ್ನು ಚದುರಿಸಿತು. ಆದರೆ, ಉದ್ಧವ್ ಠಾಕ್ರೆ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿಗೆ ಸವಾಲಾಗಿ ನಿಂತರು. 2024ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗಿಂತ ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಅತ್ಯುತ್ತಮ ಪ್ರದರ್ಶನ ನೀಡಿತು. ಇದು ಮೋದಿ-ಶಾ ಜೋಡಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿತು.

ಮಹಾರಾಷ್ಟ್ರದಲ್ಲಿನ ಹೀನಾಯ ಸೋಲಿನಿಂದ ತತ್ತರಿಸಿದ ಬಿಜೆಪಿ, ವಿಧಾನಸಭೆ ಚುನಾವಣೆಯ ವೇಳೆಗೆ ಆರೋಪಿತ ಅಡ್ಡಹಾದಿಯಲ್ಲಿ ಚುನಾವಣೆಯನ್ನು ಎದುರಿಸಿ, ಮತಗಳನ್ನು ತಿರುಗಿಸಿ ಅಧಿಕಾರ ಉಳಿಸಿಕೊಂಡಿತು. ಇದೀಗ, ಮತ್ತೆ, ಶಿವಸೇನೆಯನ್ನು ನುಚ್ಚುನೂರು ಮಾಡುವ ಕೃತ್ಯಕ್ಕೆ ಕೈಹಾಕಿದೆ.

ಕಳೆದ ವಾರ, ಉದ್ಧವ್ ಠಾಕ್ರೆಯ ಶಿವಸೇನೆ (ಯುಬಿಟಿ)ಯ 9 ಲೋಕಸಭಾ ಸದಸ್ಯರಲ್ಲಿ 6 ಮಂದಿ ಶಿಂಧೆ ಗುಂಪಿಗೆ ಸೇರಿದ್ದಾರೆ. ಇದರಿಂದ ಶಿಂಧೆ ಶಿವಸೇನೆಯ ಲೋಕಸಭಾ ಬಲ ಗಣನೀಯವಾಗಿ ಹೆಚ್ಚಾಗಿದೆ. ಲಜ್ಜೆಗೆಟ್ಟ ಬಿಜೆಪಿ, ತನ್ನ ಈ ಕೃತ್ಯಕ್ಕೆ ‘ಆಪರೇಷನ್ ಟೈಗರ್’ ಎಂಬ ಹೆಸರಿಟ್ಟುಕೊಂಡಿದೆ.

ಅಮಿತ್ ಶಾ ಅವರು ಶಿಂಧೆ ಗುಂಪನ್ನು ಅಧಿಕೃತ ಶಿವಸೇನೆ ಎಂದು ಘೋಷಿಸುವ ಮೂಲಕ ಬಿಜೆಪಿ ತನ್ನ ಮೈತ್ರಿಕೂಟದಲ್ಲಿ ಶಿಂಧೆಯನ್ನು ಮುಖ್ಯವಾಗಿ ಸ್ಥಾಪಿಸಲು ಬಯಸುತ್ತಿದೆ. ಆದರೆ, ಮಹಾರಾಷ್ಟ್ರಕ್ಕೆ ಮಾತ್ರವೇ ಸೀಮಿತವಾಗಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸುವ ವ್ಯಾಪಕ ತಂತ್ರದ ಭಾಗವೂ ಆಗಿದೆ.

ಮೋದಿ-ಶಾಗಳ ಎರಡು ಮುಖ್ಯ ಗುರಿ

ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಸ್ಥಳೀಯ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತವೆ. ಅವು ಕಾಂಗ್ರೆಸ್ ಅಥವಾ ಇತರ ವಿರೋಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿಗೆ ಸವಾಲು ನೀಡುತ್ತಿವೆ. 2014 ಮತ್ತು 2019ರಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆದರೂ, 2024ರಲ್ಲಿ ಈ ಸ್ಥಿತಿ ಬದಲಾಯಿತು. ಬಿಜೆಪಿ 240 ಸ್ಥಾನಗಳಿಗೆ ಸೀಮಿತವಾಯಿತು. ಎನ್‌ಡಿಎ ಮೈತ್ರಿಕೂಟದ ಬೆಂಬಲದೊಂದಿಗೆ ಸರ್ಕಾರ ರಚಿಸುವ ದರ್ದಿಗೆ ಕುಸಿದುಬಿದ್ದಿತು. ಇದು ಬಿಜೆಪಿಗೆ ಎಚ್ಚರಿಕೆಯ ಸಂದೇಶವೂ ಆಗಿತ್ತು.

240 ಸ್ಥಾನಗಳಿಗೆ ಬಿಜೆಪಿ ಕುಸಿದಿರುವುದು ಕೇವಲ ಅಂಕಿ-ಅಂಶಗಳ ಕುಸಿತವಲ್ಲ, ಅದು ಮೋದಿಯವರ ಜನಪ್ರಿಯತೆ ಮತ್ತು ಶಕ್ತಿಯ ಮೇಲಾದ ಆಘಾತವೂ ಆಗಿತ್ತು. ಇದೇ ಸಯದಲ್ಲಿ, ಕಳೆದ ಅಧಿವೇಶನದಲ್ಲಿ ತಮ್ಮ ಅಜೆಂಡಾಗಳನ್ನು ಪೂರೈಸಬಹುದಾದ ‘ಡಿಲಿಮಿಟೇಷನ್’ ಮತ್ತು ‘ಸಂವಿಧಾನ ತಿದ್ದುಪಡಿ ಮಸೂದೆ’ಗಳು ಸದನದಲ್ಲಿ ಬಿದ್ದುಹೋದ ಬಳಿಕ, ಈ ಜೋಡಿಗೆ ಹತಾಶೆ ಹೆಚ್ಚಾಗಿದೆ.

ಈ ಸೋಲಿನ ಆತಂಕವು ಹಲ್ಲುಕಿತ್ತ ಹಾವಿನಂತಾಗಿ ಹತಾಶೆಗೊಂಡಿರುವ ಮೋದಿ-ಶಾ ಜೋಡಿಯನ್ನು ಮತ್ತಷ್ಟು ಆಕ್ರಮಣಕಾರಿಯಾಗುವಂತೆ ಮಾಡಿದೆ. ವಿಪಕ್ಷಗಳನ್ನು ಒಡೆಯಲು ಪ್ರೇರಕ ಶಕ್ತಿಯೂ ಆಗಿದೆ. ಬಿಜೆಪಿ ತನ್ನ ಸಾಂಪ್ರದಾಯಿಕ ಬಲವನ್ನು ಉತ್ತರ ಭಾರತದಲ್ಲಿ ಕಾಯ್ದುಕೊಂಡಿದ್ದರೂ, ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಬಲವಾಗಿ ನಿಂತಿವೆ. ಆದ್ದರಿಂದ ಅವುಗಳನ್ನು ಒಡೆಯುವುದು ಅಥವಾ ಎನ್‌ಡಿಎಗೆ ಸೇರಿಸುವುದು ಬಿಜೆಪಿಗೆ ಅಗತ್ಯವಾಗಿದೆ.

ಭವಿಷ್ಯದಲ್ಲಿ ಸೋಲು ಅಥವಾ ಬಹುಮತದ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಮೋದಿ-ಶಾ ಜೋಡಿ ಹವಣಿಸುತ್ತಿದೆ. ಅದಕ್ಕೆ, ಪ್ರಾದೇಶಿಕ ಪಕ್ಷಗಳನ್ನು ಒಡೆಯುವುದು ಸುಲಭವಾದ ಮಾರ್ಗವೆಂದು ಕಂಡುಕೊಂಡಿದೆ. ಅದರ ಹಿಂದೆ ಎರಡು ಗುರಿಗಳನ್ನು ಹೊಂದಿದೆ. ಮೊದಲನೆಯದು, ಪ್ರಾದೇಶಿಕ ಪಕ್ಷಗಳನ್ನು ಒಡೆದು ಅವುಗಳ ಸ್ವಾಯತ್ತತೆಯನ್ನು ನಾಶಪಡಿಸುವುದು. ಎರಡನೆಯದು. ಕಾಂಗ್ರೆಸ್‌ಅನ್ನು ರಾಜಕೀಯವಾಗಿ ಏಕಾಂಗಿಯಾಗಿಸುವುದು.

ಇತ್ತೀಚಿನ ದಿನಗಳಲ್ಲಿ ಟಿಎಂಸಿ, ಎಎಪಿ ಮುಂತಾದ ಪಕ್ಷಗಳನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಬಂಗಾಳದಲ್ಲಿ ಸರಾಸಗಟಾಗಿ ಟಿಎಂಸಿಯ ಶಾಸಕರು ಮತ್ತು ಸಂಸದರನ್ನು ಒತ್ತೊಯ್ಯುತ್ತಿರುವ ಬಿಜೆಪಿ, ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ ಎಎಪಿ ಮತ್ತು ಶಿವಸೇನೆ (ಯುಬಿಟಿ) ಸಂಸದರನ್ನು ಹೆದರಿಸಿ, ಬೆದರಿಸಿ, ಕುದುರೆ ವ್ಯಾಪಾರ ಮಾಡಿ ಅಪಹರಿಸಿದೆ.

ಸದ್ಯಕ್ಕೆ, ಎಎಪಿ ಮತ್ತು ಶಿವಸೇನೆ (ಯುಬಿಟಿ) ಸಂಸದರ ಅಪಹರಣವು ಲೋಕಸಭೆಯಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ತಕ್ಷಣದ ತಂತ್ರವಾಗಿ ಕಂಡರೂ, ಇದರ ಹಿಂದೆ ದೀರ್ಘಕಾಲದ ಕುತಂತ್ರವೂ ಇದೆ. ಅದು, ವಿಪಕ್ಷಗಳನ್ನು ಚೂರು-ಚೂರು ಮಾಡುತ್ತಲೇ ರಾಜಕಾರಣದಲ್ಲಿ ಕಾಂಗ್ರೆಸ್‌ಅನ್ನು ಏಕಾಂಗಿಯಾಗಿಸುವುದು. ಕಾಂಗ್ರೆಸ್ ಐತಿಹಾಸಿಕವಾಗಿ ರಾಷ್ಟ್ರೀಯ ಪಕ್ಷವಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಅದು ಪ್ರಾದೇಶಿಕ ಪಕ್ಷಗಳ ಬೆಂಬಲದ ಮೇಲೆ ಅವಲಂಬಿತವಾಗಿದೆ. ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸುತ್ತದೆ.

ಈ ಲೇಖನ ಓದಿದ್ದೀರಾ?: ಕಾಂಗ್ರೆಸ್ ಕಾಲಾಳು ಹರಿಪ್ರಸಾದ್ ಈಗ ಪಿಸಿಸಿ ತಲೆಯಾಳು; ಕುತೂಹಲ ಮೂಡಿಸಿದ ನೇಮಕ

2024ರ ಚುನಾವಣೆಯಲ್ಲಿ ಎನ್‌ಡಿಎ ಸುಮಾರು 44% ಮತಗಳನ್ನು ಪಡೆದರೆ, ವಿರೋಧ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಸುಮಾರು 66% ಮತಗಳನ್ನು ಹಂಚಿಕೊಂಡಿದ್ದವು. ಇದು ಬಿಜೆಪಿಗೆ ಭಾರೀ ಹೊಡೆತ ನೀಡಿತು. ವಿಪಕ್ಷಗಳ ಮತಗಳನ್ನು ಕ್ರೂಢೀಕರಿಸುವಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರ ಬಹುದೊಡ್ಡದು. ಸದ್ಯದ ಪರಿಸ್ಥಿತಿಯಲ್ಲಿ, ದೇಶಾದ್ಯಂತ ಕಾಂಗ್ರೆಸ್‌ಗೆ ತನ್ನ ಪ್ರಾಬಲ್ಯವನ್ನು ಮರಳಿ ಕಟ್ಟಿಕೊಳ್ಳಲು, ಉತ್ತರ ಭಾರತದಲ್ಲಿ ಸಮಾಜವಾದಿ ಪಕ್ಷ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್‌ಸಿಪಿ, ದಕ್ಷಿಣದಲ್ಲಿ ಡಿಎಂಕೆ — ಹೀಗೆ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ಅನಿವಾರ್ಯ. ಆ ಮೈತ್ರಿಕೂಟ ಸಾಧ್ಯವಾಗದಂತೆ ಮತ್ತು ವಿಪಕ್ಷಗಳು ಒಗ್ಗಟ್ಟಾಗಿ ಇರದಂತೆ ನೋಡಿಕೊಳ್ಳಬೇಕೆಂಬ ಧಾವಂತಕ್ಕೆ ಬಿಜೆಪಿ ಬಿದ್ದಿದೆ.

ಪ್ರಾದೇಶಿಕ ಪಕ್ಷಗಳನ್ನೇ ನಿರ್ನಾಮ ಮಾಡಿಬಿಟ್ಟರೆ, ಮತಗಳು ತಮಗೆ ಬರುತ್ತವೆ ಅಥವಾ ಚದುರಿಹೋಗುತ್ತವೆ. ಕಾಂಗ್ರೆಸ್ ಏಕಾಂಗಿಯಾಗಿ ಉಳಿಯಬೇಕಾಗುತ್ತದೆ. ಹಾಗೆ ಚದುರುವ ಮತಗಳನ್ನು ಹೇಗಾದರೂ ತಾವು ಸೆಳೆದುಕೊಳ್ಳಬಹುದು ಮತ್ತು ಬಿಜೆಪಿ ತನ್ನ ವಿರೋಧಿಗಳನ್ನು ವಿಭಜಿಸಿ ಆಳಬಹುದು. 2029ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ ಎಂಬುದು ಮೋದಿ-ಶಾ ಜೋಡಿಯ ಮಸಲತ್ತು.

ಈ ತಂತ್ರದಲ್ಲಿ ತನಿಖಾ ಸಂಸ್ಥೆಗಳ ಪಾತ್ರ ಅತ್ಯಂತ ನಿರ್ಣಾಯಕ. ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ — ಈ ಮೂರೂ ಸಂಸ್ಥೆಗಳು ವಿಪಕ್ಷ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಅಕ್ಷರಶಃ ಮೂಲೆಗುಂಪು ಮಾಡುವ ಅಥವಾ ಬಿಜೆಪಿ ತೆಕ್ಕೆಗೆ ಸೆಳೆದುಕೊಳ್ಳುವ ಅಸ್ತ್ರಗಳಾಗಿ ಬಳಸಲ್ಪಡುತ್ತಿವೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ. ಅಜಿತ್ ಪವಾರ್ ವಿರುದ್ಧ ಇದ್ದ ಭ್ರಷ್ಟಾಚಾರ ಪ್ರಕರಣಗಳು ಅವರು ಮಹಾಯುತಿ ಮೈತ್ರಿ ಸೇರಿದ ನಂತರ ಮಂಕಾದವು ಎಂಬುದು ಸ್ಪಷ್ಟ ಉದಾಹರಣೆ. ಆದ್ದರಿಂದಲೇ ‘ವಾಶಿಂಗ್ ಮಷಿನ್ ರಾಜಕೀಯ’ ಎಂಬ ಪದಗುಚ್ಛ ಭಾರತದ ರಾಜಕೀಯ ಶಬ್ದಕೋಶಕ್ಕೆ ಸೇರಿಕೊಂಡಿದೆ.

ಪ್ರಸ್ತುತ ಸಂದರ್ಭದಲ್ಲಿ ಮೋದಿ-ಶಾ ತಂತ್ರ ಯಶಸ್ವಿಯಾಗುತ್ತಿದೆ ಎಂಬುದು ಸ್ಪಷ್ಟ. ಶಿವಸೇನೆಯನ್ನು ನುಚ್ಚುನೂರು ಮಾಡುವ ಮೂಲಕ ಮಹಾರಾಷ್ಟ್ರದಲ್ಲಿ ಬಿಜೆಪಿ ತನ್ನ ರಾಜಕೀಯ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ.

ಪ್ರಾದೇಶಿಕ ಪಕ್ಷಗಳನ್ನು ಒಡೆಯುವ ಈ ತಂತ್ರವು ಅಲ್ಪಾವಧಿಯ ಲಾಭ ತಂದುಕೊಟ್ಟರೂ, ದೀರ್ಘಕಾಲೀನವಾಗಿ ವಿರೋಧಿ ಶಕ್ತಿಗಳ ಏಕೀಕರಣಕ್ಕೆ ಕಾರಣವಾಗಬಹುದು. ಏಕೆಂದರೆ, ಪ್ರಾದೇಶಿಕ ಪಕ್ಷಗಳ ಮತದಾರರು ಚದುರಿದಾಗ ಅವರು ಕಾಂಗ್ರೆಸ್ ಅಥವಾ ಇತರ ವಿರೋಧಿ ಪಕ್ಷಗಳತ್ತ ಒಲವು ತೋರಿಸಬಹುದು. ಅಥವಾ ಮೋದಿ-ಶಾ ಜೋಡಿಯ ಸರ್ವಾಧಿಕಾರಿ ಧೋರಣೆಯ ವಿರುದ್ಧ ಜನರು ಒಗ್ಗೂಡಿ, ವಿಪಕ್ಷಗಳತ್ತ ತಿರುಗಬಹುದು.

ರಾಜಕೀಯ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಅತಿಯಾದ ಅಧಿಕಾರ ಕೇಂದ್ರಿಕರಣದ ಪ್ರಯತ್ನಗಳು ನಡೆದಾಗಲೆಲ್ಲ ಪ್ರಾದೇಶಿಕ ಶಕ್ತಿಗಳು ಮತ್ತು ಜನಸಾಮಾನ್ಯರು ಒಟ್ಟಾಗಿ ಬಂಡೆದ್ದ ಉದಾಹರಣೆಗಳಿವೆ. ಮೋದಿ-ಶಾ ಜೋಡಿಯು ಹೆಣೆಯುತ್ತಿರುವ ಈ ಚಕ್ರವ್ಯೂಹವನ್ನು ಭೇದಿಸಲು ಪ್ರಾದೇಶಿಕ ಪಕ್ಷಗಳು ಮತ್ತು ಕಾಂಗ್ರೆಸ್ ಎಷ್ಟರ ಮಟ್ಟಿಗೆ ಒಗ್ಗಟ್ಟಿನಿಂದ ಮತ್ತು ಜನಪರ ಕಾರ್ಯಸೂಚಿಯೊಂದಿಗೆ ಮುನ್ನಡೆಯುತ್ತವೆ ಎಂಬುದರ ಮೇಲೆ ಭಾರತದ ಭವಿಷ್ಯದ ರಾಜಕಾರಣ ನಿರ್ಧಾರವಾಗಲಿದೆ. ಅಧಿಕಾರದ ಹಪಾಹಪಿ ಮತ್ತು ಅಸ್ತಿತ್ವದ ಹೋರಾಟದ ನಡುವೆ, ಅಂತಿಮ ತೀರ್ಪು ನೀಡುವ ಜನಸಾಮಾನ್ಯರ ವಿವೇಚನೆಯೇ ನಿರ್ಣಾಯಕ ಶಕ್ತಿಯಾಗಿದೆ. ಆದರೆ, ಜನಸಾಮಾನ್ಯರ ಮತಗಳನ್ನೂ ಕಸಿದುಕೊಳ್ಳಲು ಎಸ್‌ಐಆರ್‌ ಎಂಬ ಪೆಡಂಭೂತ ದೇಶವನ್ನು ಆವರಿಸಿದೆ. ಮತದಾರರು ತಮ್ಮ ಮತಗಳನ್ನು ಉಳಿಸಿಕೊಳ್ಳಲು ಒಗ್ಗಟ್ಟಿನಿಂದ ಗಟ್ಟಿದನಿಯಲ್ಲಿ ನಿಲ್ಲಬೇಕಾದ್ದು ಅನಿವಾರ್ಯ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ ಸಾಕೇ, ಇನ್ನಷ್ಟು ಬೇಕೇ?

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು....

ಕೇರಳದಲ್ಲಿ ಮತ್ತೆ ಭೂಕುಸಿತ; 9 ಮಂದಿ ಸಾವು, ಹಲವರು ನಾಪತ್ತೆ

ಕೇರಳ ರಾಜ್ಯದಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದ...

ವಿಧಾನ ಮಂಡಲದಲ್ಲಿ ಕಸ್ತೂರಿರಂಗನ್ ವರದಿ ಕುರಿತು ಗಂಭೀರ ಚರ್ಚೆ; ಕಾಡಂಚಿನ ಜನರ ಹಿತ ಕಾಯಲು ಶಾಸಕರ ಒಕ್ಕೊರಲ ಆಗ್ರಹ

ಸದನದಲ್ಲಿ ಮಾತನಾಡಿದ ಈ ಎಲ್ಲಾ ನಾಯಕರು, ಕಸ್ತೂರಿರಂಗನ್ ವರದಿಯನ್ನು ಅರಣ್ಯದ ಸಮೀಪ...

ಜಾರ್ಖಂಡ್ ಸಿಎಂ ಸೊರೇನ್ ವಿರುದ್ಧ ಹೇಳಿಕೆ: ಮಾಜಿ ಸಚಿವ ಯೋಗೇಂದ್ರ ಸಾವ್‌ಗೆ ಕಾಂಗ್ರೆಸ್‌ ಶೋಕಾಸ್ ನೋಟಿಸ್

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ಮಾಜಿ ಸಚಿವ ಹಾಗೂ ಹಿರಿಯ...