ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ, ಮುಂದಿನ ಪ್ರಧಾನಿ ಯಾರು ಎಂಬ ಚರ್ಚೆ ತೀವ್ರಗೊಂಡಿದೆ. ಲೇಬರ್ ಪಾರ್ಟಿಯ ನಾಯಕತ್ವಕ್ಕಾಗಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಪಾಕಿಸ್ತಾನ ಮೂಲದ, ಹಾಲಿ ಗೃಹ ಕಾರ್ಯದರ್ಶಿ ಶಬಾನಾ ಮಹಮೂದ್ ಅವರ ಹೆಸರು ಮುಂಚೂಣಿಯಲ್ಲಿದೆ.
ಶಬಾನಾ ಮಹಮೂದ್ ಅವರ ಪೋಷಕರು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಮೀರ್‌ಪುರ್ ಜಿಲ್ಲೆಯ ಮೂಲದವರಾಗಿದ್ದಾರೆ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಜನಿಸಿದ ಶಬಾನಾ, ತಮ್ಮ ಬಾಲ್ಯದ ಕೆಲವು ವರ್ಷಗಳನ್ನು ಸೌದಿ ಅರೇಬಿಯಾದಲ್ಲಿ ಕಳೆದರು. ತದನಂತರ ಬ್ರಿಟನ್‌ನಲ್ಲಿ ನೆಲೆಸಿ, ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು ಬ್ಯಾರಿಸ್ಟರ್ ಆಗಿ ವೃತ್ತಿಜೀವನ ಆರಂಭಿಸಿದ್ದರು.
ಲೇಬರ್ ಪಕ್ಷದಲ್ಲಿ ಸುದೀರ್ಘ ಕಾಲದಿಂದ ಗುರುತಿಸಿಕೊಂಡಿರುವ ಶಬಾನಾ, 2010ರಲ್ಲಿ ಬರ್ಮಿಂಗ್‌ಹ್ಯಾಮ್ ಲೇಡಿವುಡ್ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾದರು. ಆ ಮೂಲಕ ಬ್ರಿಟನ್ ಸಂಸತ್ ಪ್ರವೇಶಿಸಿದ ಮೊದಲ ಮುಸ್ಲಿಂ ಮಹಿಳೆಯರ ಪೈಕಿ ಒಬ್ಬರು ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು.
ಅಪಾರ ರಾಜಕೀಯ ಹಾಗೂ ಆಡಳಿತಾತ್ಮಕ ಅನುಭವ ಹೊಂದಿರುವ ಶಬಾನಾ, 2024ರಲ್ಲಿ ಬ್ರಿಟನ್‌ನ ನ್ಯಾಯಾಂಗ ಕಾರ್ಯದರ್ಶಿ ಹಾಗೂ ಲಾರ್ಡ್ ಚಾನ್ಸೆಲರ್ ಆಗಿ ಸೇವೆ ಸಲ್ಲಿಸಿದ್ದರು. ಆನಂತರ 2025ರ ಸೆಪ್ಟೆಂಬರ್‌ನಲ್ಲಿ ಗೃಹ ಕಾರ್ಯದರ್ಶಿಯಾಗಿ (Home Secretary) ಬಡ್ತಿ ಪಡೆದರು. ತಮ್ಮ ಕಠಿಣ ವಲಸೆ ನೀತಿಗಳು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿನ ಬದ್ಧತೆಯಿಂದಾಗಿ ಅವರು ಪಕ್ಷದ ಪ್ರಭಾವಿ ನಾಯಕಿಯಾಗಿ ಬೆಳೆದಿದ್ದಾರೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಕಾಲಾಳು ಹರಿಪ್ರಸಾದ್ ಈಗ ಪಿಸಿಸಿ ತಲೆಯಾಳು; ಕುತೂಹಲ ಮೂಡಿಸಿದ ನೇಮಕ
ಪ್ರಸ್ತುತ ಕೀರ್ ಸ್ಟಾರ್ಮರ್ ಅವರ ನಿರ್ಗಮನದಿಂದ ತೆರವಾಗುತ್ತಿರುವ ಸ್ಥಾನಕ್ಕೆ ಶಬಾನಾ ಮಹಮೂದ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಲೇಬರ್ ಪಕ್ಷದ ಬಲಪಂಥೀಯ ಒಲವುಳ್ಳ ನಾಯಕರು ಹಾಗೂ ಪ್ರಭಾವಿ ಸಂಸದರ ಬೆಂಬಲ ಅವರಿಗಿದ್ದು, ಮುಂದಿನ ನಾಯಕತ್ವದ ರೇಸ್‌ನಲ್ಲಿ ಅವರು ಅತ್ಯಂತ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಶಬಾನಾ ಅವರ ಹೊರತಾಗಿ, ಗ್ರೇಟರ್ ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಆಂಡಿ ಬರ್ನ್‌ಹ್ಯಾಮ್ ಕೂಡ ಪ್ರಧಾನಿ ರೇಸ್‌ನಲ್ಲಿರುವ ಮತ್ತೊಬ್ಬ ಪ್ರಮುಖ ಅಭ್ಯರ್ಥಿ. ಇತ್ತೀಚಿನ ಉಪಚುನಾವಣೆಯಲ್ಲಿ ಗೆದ್ದು ಸಂಸತ್ತಿಗೆ ಮರಳಿರುವ ಇವರು, ಕಾರ್ಮಿಕ ವರ್ಗದ ಮತದಾರರನ್ನು ಮತ್ತೆ ಪಕ್ಷದತ್ತ ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ ಎನ್ನಲಾಗಿದೆ. ಹಾಗೆಯೇ, ಪಕ್ಷದ ಪ್ರಬಲ ಸಂವಹನಕಾರರಾಗಿರುವ ಮಾಜಿ ಆರೋಗ್ಯ ಕಾರ್ಯದರ್ಶಿ ವೆಸ್ ಸ್ಟ್ರೀಟಿಂಗ್ ಅವರೂ ಪ್ರಬಲ ಪೈಪೋಟಿಯಲ್ಲಿದ್ದಾರೆ.
ಇವರಲ್ಲದೆ, ಪಕ್ಷದ ಪ್ರಭಾವಿ ನಾಯಕಿ ಏಂಜೆಲಾ ರೇನರ್ ಮತ್ತು ಸೇನಾ ಅನುಭವಿ ಅಲ್ ಕಾರ್ನ್ಸ್ ಅವರ ಹೆಸರುಗಳು ಸಹ ಸಂಭಾವ್ಯರ ಪಟ್ಟಿಯಲ್ಲಿವೆ. ಇತ್ತೀಚಿನ ಚುನಾವಣೆಗಳಲ್ಲಿನ ಕಳಪೆ ಪ್ರದರ್ಶನ ಹಾಗೂ ಪಕ್ಷದ ಆಂತರಿಕ ಭಿನ್ನಮತದಿಂದಾಗಿ ಕೀರ್ ಸ್ಟಾರ್ಮರ್ ರಾಜೀನಾಮೆ ನೀಡಿದ್ದು, ಮುಂಬರುವ ಸೆಪ್ಟೆಂಬರ್ ವೇಳೆಗೆ ಹೊಸ ಪ್ರಧಾನಿಯ ಆಯ್ಕೆ ಪ್ರಕ್ರಿಯೆ ಸಂಪೂರ್ಣಗೊಳ್ಳುವ ಸಾಧ್ಯತೆಯಿದೆ.




