ಮಹಾರಾಷ್ಟ್ರ ವಿಧಾನ ಪರಿಷತ್‌ನ 17 ಸ್ಥಾನಗಳಿಗೆ ಚುನಾವಣೆ ನಡೆದಿದೆ. 16 ಸ್ಥಾನಗಳನ್ನು ಎನ್‌ಡಿಎ ಮೈತ್ರಿಕೂಟ ಗೆದ್ದಿಕೊಂಡಿದೆ. ಆದಾಗ್ಯೂ, ನಾಸಿಕ್ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆಯ ಅಧಿಕೃತ ಅಭ್ಯರ್ಥಿ ನರೇಂದ್ರ ದರಡೆ ಅವರನ್ನು ಬಿಜೆಪಿಯ ಬಂಡಾಯ ಅಭ್ಯರ್ಥಿ ಗೋಕುಲ್ ಗೀತೆ ಸೋಲಿಸಿದ್ದಾರೆ.
ಒಂದು ಉಪಚುನಾವಣೆ ಸೇರಿದಂತೆ ಒಟ್ಟು 17 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ, ಬಿಜೆಪಿ, ಶಿವಸೇನೆ (ಶಿಂಧೆ) ಹಾಗೂ ಎನ್‌ಪಿಸಿ (ಸುನೇತ್ರಾ ಪವಾರ್) ಒಳಗೊಂಡ ಮಹಾಯುತಿ ಮೈತ್ರಿಕೂಟದ ಅಭ್ಯರ್ಥಿಗಳು 6 ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದ್ದರಿಂದ, ಉಳಿದ 11 ಸ್ಥಾನಗಳಿಗೆ ಜೂನ್ 18ರಂದು ಮತದಾನ ನಡೆದಿತ್ತು. ಸ್ಥಳೀಯ ಸಂಸ್ಥೆಗಳ ಜನಪ್ರತಿಧಿಗಳು ಮತದಾನ ಮಾಡಿದ್ದರು. ಸೋಮವಾರ (ಜೂನ್ 22) ಮತ ಎಣಿಕೆ ನಡೆದಿದೆ.
ಒಟ್ಟು ಸ್ಥಾನಗಳಲ್ಲಿ ಬರೋಬ್ಬರಿ 16 ಸ್ಥಾನಗಳನ್ನು ಮಹಾಯುತಿ ಗೆದ್ದುಕೊಂಡಿದೆ. ಆದಾಗ್ಯೂ, ಮೈತ್ರಿಯೊಳಗಿನ ಬಂಡಾಯದಿಂದಾಗಿ ಶಿವಸೇನಾ (ಶಿಂಧೆ) ಒಂದು ಸ್ಥಾನವನ್ನು ಕಳೆದುಕೊಂಡಿದೆ.
ಚುನಾವಣಾ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಬಂಡಾಯ ಅಭ್ಯರ್ಥಿ ಗೋಕುಲ್ ಗೀತೆ ಅವರು 357 ಮತಗಳನ್ನು ಪಡೆದರೆ, ಶಿವಸೇನೆಯ ಅಧಿಕೃತ ಅಭ್ಯರ್ಥಿ ನರೇಂದ್ರ ದರಡೆ 248 ಮತಗಳನ್ನು ಮಾತ್ರ ಗಳಿಸಲು ಶಕ್ತರಾಗಿದ್ದಾರೆ. ಗೋಕುಲ್ ಗೀತೆ ಅವರು 109 ಮತಗಳ ಅಂತರದಿಂದ ವಿಜಯಶಾಲಿಯಾಗಿಯಾಗಿದ್ದಾರೆ.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್ ಕಾಲಾಳು ಹರಿಪ್ರಸಾದ್ ಈಗ ಪಿಸಿಸಿ ತಲೆಯಾಳು; ಕುತೂಹಲ ಮೂಡಿಸಿದ ನೇಮಕ
ಗೋಕುಲ್ ಗೀತೆ ಅವರು ದರಡೆ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದ ದಿನದಿಂದಲೇ ನಾಸಿಕ್ ಕ್ಷೇತ್ರದಲ್ಲಿ ರಾಜಕೀಯ ಮೇಲಾಟ ಸೃಷ್ಟಿಯಾಗಿತ್ತು. ಪ್ರಚಾರದ ವೇಳೆ ದರಡೆ ಅವರು ತಮ್ಮ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದು ಗೋಕುಲ್ ಗೀತೆ ಆರೋಪಿಸಿದ್ದರು.
ಮೈತ್ರಿಕೂಟದ ಒಳಗಿನ ಈ ಬಿಕ್ಕಟ್ಟನ್ನು ಬಗೆಹರಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ, ಬಿಜೆಪಿ ಸಚಿವ ಗಿರೀಶ್ ಮಹಾಜನ್ ಹಾಗೂ ಶಿವಸೇನೆ ಸಚಿವ ಉದಯ್ ಸಾಮಂತ್ ಸೇರಿದಂತೆ ಹಿರಿಯ ನಾಯಕರು ಸರಣಿ ಸಭೆ ನಡೆಸಿದ್ದರು. ನಾಮಪತ್ರ ಹಿಂಪಡೆಯುವ ಗಡುವು ಮುಗಿದ್ದಿದ್ದರಿಂದ, ಗೋಕುಲ್ ಗೀತೆ ತಮ್ಮ ಪ್ರಚಾರ ನಡೆಸದಂತೆ ತಡೆಯಲಾಗಿತ್ತು. ಆದಾಗ್ಯೂ, ಚುನಾವಣೆಯಲ್ಲಿ ಗೋಕುಲ್ ಗೀತೆ ಗೆಲುವು ಸಾಧಿಸಿದ್ದಾರೆ.
ಗೆಲುವಿನ ಬಳಿಕ, ಮಾಧ್ಯಮಗಳೊಂದಿಗೆ ಮಾತನಾಡಿದ ಗೋಕುಲ್ ಗೀತೆ, “ನಾಯಕರ ಮಾತಿಗೆ ಗೌರವ ಕೊಟ್ಟು ನಾನು ಪ್ರಚಾರ ನಿಲ್ಲಿಸಿದ್ದೆ ನಿಜ. ಆದರೆ, ನನ್ನ ಬೆಂಬಲಿಗರು ನನಗಾಗಿ ತೆರೆಮರೆಯಲ್ಲಿ ಮತಯಾಚನೆ ಮುಂದುವರಿಸಿದ್ದರು” ಎಂದು ಸ್ಪಷ್ಟಪಡಿಸಿದ್ದಾರೆ.



