ಲೋಕದ ಜಂಜಾಟಗಳಿಗೆ ಕಾರಣಗಳನ್ನು ಹುಡುಕಲು ಹೊರಟ ಹಾದಿಯಲ್ಲಿ ಬುದ್ಧನಿಗೆ ಗೋಚರಿಸಿದ 'ಸತ್ಯ-ಶೀಲ-ಮಾರ್ಗ' ಎಂಬ ತ್ರಿವಳಿ ತತ್ವಗಳೇ ಅವನ ಒಟ್ಟಾರೆ ಸಂದೇಶಗಳಾಗಿದ್ದವು. ಈ ತ್ರಿವಳಿ ಅಂಶಗಳಾಚೆ ಬುದ್ಧ ಏನನ್ನೂ ಹೇಳಲಿಲ್ಲ. ಇಂದು ಸಂಜೆ 5ಕ್ಕೆ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಯಾಗುತ್ತಿರುವ 'ಇಂದಿನ ಜಗತ್ತಿಗೆ ಬೌದ್ಧಧರ್ಮ' ಕೃತಿಯಿಂದ ಆಯ್ದ ಒಂದು ಅದ್ಯಾಯ ಇಲ್ಲಿದೆ.
ಬುದ್ಧನೇ ಏಕೆ?
ಬುದ್ಧನು ಅನನ್ಯ. ತಾತ್ವಿಕ ಚಿಂತನೆಯಲ್ಲಿ ಅವನನ್ನು ಮೀರಿಸಿದವರು ಯಾರೂ ಇಲ್ಲ. ತನ್ನ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿ, ತಾನು ಹೇಳಿದ ವಿಷಯವನ್ನು ಅರ್ಥ ಮಾಡಿಕೊಳ್ಳುವಂತೆ ಮಾಡಿ, ವಿಶ್ವಾಸಾರ್ಹತೆ ಮೂಡಿಸಬಲ್ಲ ಅಂತಹ ವಕ್ತಾರರು ಮತ್ತೊಬ್ಬರು ಸಿಗುವುದಿಲ್ಲ. ಪವಿತ್ರರಲ್ಲಿ ಪವಿತ್ರ. ಎಲ್ಲಾ ಕಾಲಕ್ಕೂ ಹೊಂದಿಕೆಯಾಗುವ ಆದರ್ಶಗಳ ಮೂರ್ತರೂಪ ಅವನು. ಅವನ ಸಂಕಲ್ಪ, ಅನುಕಂಪ, ಸೇವೆ, ಪರಿತ್ಯಾಗ, ಆದರ್ಶಯುತ ವೈಯಕ್ತಿಕ ಜೀವನ, ಧರ್ಮವನ್ನು ಬೋಧಿಸುವಲ್ಲಿ ಅವನು ಅನುಸರಿಸಿದ ನಿರ್ದೋಷ ವಿಧಾನಗಳು, ಅವನ ಅಂತಿಮ ಗೆಲುವು- ಇವೆಲ್ಲವೂ ಅವನನ್ನು ಮಹಾನ್ ಧರ್ಮ ಪ್ರವಾದಿಯನ್ನಾಗಿ ಮಾಡಿವೆ.
ಧಮ್ಮದೂತವನ್ನು ನೆರವೇರಿಸುವುದರಲ್ಲಿ ಇಡೀ ಜಗತ್ತಿನಲ್ಲಿಯೇ ಮೊದಲಿಗ ಅವನು. ಉತ್ತರ ಭಾರತದಾದ್ಯಂತ ಕಾಲ್ನಡಿಗೆಯಲ್ಲಿ ನಲವತ್ತೈದು ವರ್ಷಗಳ ಕಾಲ ಸುತ್ತಿ ಧರ್ಮಬೋಧನೆ ಮಾಡಿದ. ಕೊನೆಯ ಉಸಿರು ಇರುವವರೆಗೂ ಮಾನವಕುಲಕ್ಕೆ ಆದರ್ಶಮೂರ್ತಿಯಾಗಿ ನಿಂತ. ಅಷ್ಟೇ ಅಲ್ಲದೆ ಸದ್ಗುಣಶೀಲನಾಗಿಯೂ ಇದ್ದ.
ಬುದ್ದನು ಹೇಳಿದ ಕೊನೆಯ ಮಾತುಗಳು- “ತಾಳ್ಮೆಯಿಂದ, ಶ್ರದ್ಧೆಯಿಂದ ಪ್ರಯತ್ನಿಸು. ನಿನ್ನ ಪ್ರಯತ್ನವೇ ನಿನ್ನನ್ನು ದಡ ಸೇರಿಸುತ್ತದೆ. ಮತ್ತಾರೂ ನಿನಗೆ ಏನೂ ಮಾಡಲಾರರು. ನೀನು ಪೂಜೆ, ಪುರಸ್ಕಾರ, ಪ್ರಾರ್ಥನೆಗಳನ್ನು ಮಾಡಬೇಕಾದ ಅಗತ್ಯವಿಲ್ಲ. ಅವುಗಳ ಬದಲಾಗಿ ನೀನು ವಿಪಶ್ಯನ ಧ್ಯಾನ ಮಾಡು. ಅದು ನಿನ್ನ ಆತ್ಮನಿಗ್ರಹಕ್ಕೆ, ಪರಿಶುದ್ಧವಾಗಲು, ಜ್ಞಾನೋದಯವಾಗಲು ದಾರಿ ಮಾಡಿಕೊಡುತ್ತದೆ.” ಬುದ್ದನ ದೌತ್ಯದ ಗುರಿ ಮಾನವರನ್ನು ದುಃಖದಿಂದ ಮುಕ್ತಗೊಳಿಸುವುದು, ದುಃಖದ ಕಾರಣವನ್ನು ತಿಳಿಸಿ, ಜನನ-ಮರಣಗಳಿಗೆ ಅಂತ್ಯ ಹಾಡುವುದು. ಅವನು ಕೇವಲ ಆಧ್ಯಾತ್ಮಿಕ ಪ್ರಗತಿಗೆ ಮಾತ್ರವಲ್ಲದೆ, ಭೌತಿಕ ಪ್ರಗತಿಗೂ ಪ್ರಾಮುಖ್ಯತೆ ನೀಡಿದ. ಎರಡೂ ಇದ್ದರೆ ಮಾತ್ರ ಯಾವುದೇ ಜನಾಂಗ ಅಥವಾ ದೇಶ ಪ್ರಗತಿ ಸಾಧಿಸುತ್ತದೆ.
ನೆಹರೂ ಅವರು ಬುದ್ಧನನ್ನು ಭಾರತದ ಪುತ್ರರಲ್ಲಿ ಅತ್ಯಂತ ಶ್ರೇಷ್ಠ ಎಂದು ಆಗಾಗ ಹೇಳುತ್ತಿದ್ದರು. ರಾಧಾಕೃಷ್ಣನ್ ಅವರು ಅವನ ಬಗ್ಗೆ ಹೀಗೆ ಹೇಳಿದರು- “ಮಾನವಕುಲದ ಜೀವನ, ಚಿಂತನೆಗಳ ಮೇಲೆ ಪ್ರಭಾವವನ್ನು ಪರಿಗಣಿಸಿದರೆ, ಬುದ್ಧನು ಯಾವಾಗಲೂ ಪ್ರಥಮ ಸ್ಥಾನವನ್ನೇ ಪಡೆಯುತ್ತಾನೆ. ಯಾವುದೇ ಧರ್ಮಕ್ಕಿಂತಲೂ ಅವನ ಧರ್ಮ ಮಾನವ ಕುಲದ ಮೇಲೆ ಅತ್ಯಂತ ಪ್ರಭಾವ ಬೀರಿದೆ. ಅವನು ಜಾಗತಿಕ ಚಿಂತನೆಯ ಇತಿಹಾಸಕ್ಕೆ ಸೇರಿದವನು. ಸಂಸ್ಕಾರಯುತ ಮಾನವಕುಲದ ವಾರಸುದಾರ. ಚರಿತ್ರೆಯಲ್ಲಿಯೇ ಅತ್ಯಂತ ಮಹಾನ್ ವ್ಯಕ್ತಿಗಳಲ್ಲಿ ಒಬ್ಬ.” ಎಚ್.ಜಿ. ವೆಲ್ಸ್ ಪ್ರಕಾರ ಮಾನವ ಚರಿತ್ರೆಯಲ್ಲಿ ಅತ್ಯಂತ ಶ್ರೇಷ್ಠರಾದ ಮೂವರಲ್ಲಿ ಒಬ್ಬ. ಬುದ್ದನು ಮಾನವ, ಸರಳ ಮಾನವ. ಕಟ್ಟುಕಥೆಗಳ ಪುರುಷನಲ್ಲ. ಮಾನವ ಕುಲಕ್ಕೆ ಬೆಳಕು ನೀಡಲು ಶ್ರಮಿಸಿದ. ಮಾನವಕುಲದ ಎಲ್ಲರಿಗೂ ಉಪಯುಕ್ತವಾದ ಸಾರ್ವತ್ರಿಕ ಸಂದೇಶವನ್ನು ನೀಡಿದ. ಇಂದಿನ ಅತ್ಯಂತ ಪ್ರಮುಖ ಭಾವನೆಗಳು ಅವನ ಸಂದೇಶಕ್ಕೆ ಹತ್ತಿರವಾಗಿವೆ. ಈ ಕಷ್ಟಗಳಿಗೆ, ಕಣ್ಣೀರಿಗೆ ಕಾರಣ ಮಾನವನ ಸ್ವಾರ್ಥ ಎಂದ. ಒಬ್ಬ ಮನುಷ್ಯ ಪವಿತ್ರನಾಗಬೇಕಾದರೆ ತನ್ನ ಸ್ವಾರ್ಥ, ತನ್ನ ಇಂದ್ರಿಯ ಸುಖಗಳಿಗಾಗಿ ಬದುಕುವುದನ್ನು ನಿಲ್ಲಿಸಬೇಕು. ಕ್ರಿ.ಪೂ. 500 ವರ್ಷಗಳ ಹಿಂದೆ. ಬುದ್ಧನು ಬೇರೆ ಭಾಷೆಯಲ್ಲಿ ತನ್ನನ್ನು ತಾನು ಮರೆತು ಹೋಗಬೇಕೆಂದು(ಸ್ವಾರ್ಥಕ್ಕಾಗಿ ಬದುಕಬಾರದು) ಬೋಧಿಸಿದನು. ಅನೇಕ ವಿಷಯಗಳಲ್ಲಿ ಬುದ್ಧನು, ಯಾವುದೇ ಪ್ರವಾದಿಗಿಂತಲೂ ಆಧುನಿಕ ಮಾನವನಿಗೆ ಹತ್ತಿರವಾಗಿದ್ದಾನೆ. ವ್ಯಕ್ತಿತ್ವಕ್ಕೆ, ತ್ಯಾಗಕ್ಕೆ, ಸೇವೆಗೆ ಅತ್ಯಂತ ಪ್ರಾಮುಖ್ಯತೆ ನೀಡಿದನು.
ಇದನ್ನು ಓದಿದ್ದೀರಾ?: ಹೊಸ ಓದು | ರಾಗಿತೆನೆ- ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ
ಬುದ್ಧನು ಕೇವಲ ಮಾನವನಲ್ಲ, ಅಸಾಧಾರಣ ಮಾನವ. ಅವನು ಹುಟ್ಟಿನಿಂದಲೇ ಬುದ್ಧನಾಗಿರಲಿಲ್ಲ. ತನ್ನನ್ನು ತಾನು ಬುದ್ಧನನ್ನಾಗಿ ಮಾಡಿಕೊಂಡ. ”ಸಿದ್ಧಾರ್ಥನು ತನ್ನನ್ನು ತಾನು ಬುದ್ಧನನ್ನಾಗಿ ಮಾಡಿಕೊಂಡ.” ಯಾವುದೇ ಮಾನವನು ತನ್ನನ್ನು, ತನಗೆ ಬೇಕಾದ ರೀತಿಯಲ್ಲಿ, ಬದಲಾಯಿಸಿಕೊಳ್ಳಲು ಅವನಿಗೆ ಅವಕಾಶ, ಸ್ವಾತಂತ್ರ್ಯ ಇವೆ ಎಂದ ಬುದ್ದ. ಅವನು ಹೇಗೆ ಯೋಚಿಸುತ್ತಾನೋ ಹಾಗೆಯೇ ಆಗುತ್ತಾನೆ. ಅದಕ್ಕೆ ಧಮ್ಮಪದದಲ್ಲಿ ”All that we are is the product of what we have thought is we are what we think” ಎಂದು ಹೇಳಲಾಗಿದೆ. ಸಿದ್ದಾರ್ಥನ ಚಿಂತನೆಯ ಫಲವೇ ಬುದ್ಧ.
ಬುದ್ಧನನ್ನು ಅವನ ಅನುಯಾಯಿಗಳು ಶ್ರೇಷ್ಠ ಗುರು ಎಂದು ಗೌರವಿಸಿದರೇ ಹೊರತು, ಎಂದಿಗೂ, ಯಾರೂ ಅವನನ್ನು ಪೂಜಿಸಲಿಲ್ಲ. ಇತರರು ದೇವರಿಗೆ ವರಗಳಿಗಾಗಿ ಬೇಡಿಕೊಂಡಂತೆ, ಪ್ರಾರ್ಥಿಸಿದಂತೆ. ಬುದ್ಧನನ್ನು ದೇವರನ್ನಾಗಿ ಮಾಡಿ. ಯಾರೂ ಆರಾಧಿಸಲಿಲ್ಲ. ಭೂಮಿಯ ಮೇಲೆ ಇಲ್ಲಿಯವರೆಗೆ ”ಬುದ್ಧನಂತೆ, ದೇವರಾಗದೆ ದೇವರಾದವನು” ಇನ್ನೊಬ್ಬನಿಲ್ಲ.
ನಾಸ್ತಿಕವಾದವನ್ನು ಧರ್ಮರಹಿತ ಎಂದು ಪರಿಗಣಿಸಬಾರದು. ಮಾನವ ಕುಲದಲ್ಲಿ ಶಾಂತಿ ಮತ್ತು ಸೌಖ್ಯಗಳನ್ನು ಸ್ಥಾಪಿಸಬೇಕಾದರೆ, ಒಂದು ಪ್ರಾಮಾಣಿಕ ಧಾರ್ಮಿಕ ಜ್ಞಾನೋದಯ(ಇಲ್ಲಿ ದೇವರು ಇಲ್ಲದ ಧರ್ಮ) ನೈತಿಕವಾಗಿ ದಿವಾಳಿಯಾದ ಇಂದಿನ ಜಗತ್ತಿಗೆ ಅವಶ್ಯಕ. ಬೇಕಾಗಿರುವುದು ಕಟ್ಟುನಿಟ್ಟಿನ ಧರ್ಮಗಳಲ್ಲಿನ ಮೂಢನಂಬಿಕೆಯಲ್ಲ, ಕೇವಲ ಪೂಜೆ, ಕರ್ಮಕಾಂಡ, ಕ್ರಿಯೆಗಳಲ್ಲ(ಅವು ಸಾಮಾನ್ಯ ಜನರಿಗೆ ಜೋಗುಳ ಹಾಡಬಹುದು). ಪ್ರವಾದಿಗಳು ಹೇಳಿದ ಉದಾತ್ತ ಸೂತ್ರಗಳ ಮೇಲೆ ಆಧಾರಿತವಾದ ನ್ಯಾಯಬದ್ಧ, ಸರಳ ಮತ್ತು ತಾರ್ಕಿಕ ಪ್ರೇಮಮಯ ಜೀವನ ಬೇಕು. ಸಿ.ಇ.ಎಂ.ಜೋಡ್ ಹೀಗೆ ಹೇಳುತ್ತಾರೆ. “ಕ್ರಿ.ಪೂ. 6ನೇ ಶತಮಾನದಲ್ಲಿ ಭಾರತ ಮತ್ತು ಚೀನಾಗಳಲ್ಲಿ ಮೂವರು ಮಹಾಪ್ರವಕ್ತರು ಜನಿಸಿದರು. ಅವರು ದೇವರು ಇದ್ದಾನೋ ಇಲ್ಲವೋ ಎಂದು ಯೋಚಿಸದೆ, ಧರ್ಮವನ್ನು ಬೇರೆ ಯಾವುದೇ ಪ್ರಯೋಜನವನ್ನು ಆಶಿಸದೆ, ಕೇವಲ ಧರ್ಮಕ್ಕಾಗಿಯೇ ಅಂದರೆ ‘ಧರ್ಮಕ್ಕಾಗಿಯೇ ಧರ್ಮ’ವನ್ನು ಆಚರಿಸಬೇಕೆಂದು ಬೋಧಿಸಿದರು. ಆ ಮೂವರಲ್ಲಿ ಅತ್ಯಂತ ಪ್ರಮುಖ ಬುದ್ದ.”
ಬುದ್ಧ ನಿಸ್ವಾರ್ಥ ಸೇವೆಯನ್ನು, ಶೀಲವನ್ನು, ಮಿತಿಯಿಲ್ಲದ ಮೈತ್ರಿಯನ್ನು ರಾಜರು, ರಾಜಕುಮಾರರು, ಕುಲೀನರು, ಶ್ರೀಮಂತರು ಮಾತ್ರವಲ್ಲದೆ, ಬಡವರು, ಕೆಳವರ್ಗದ ಜನರಿಗೂ ಬೋಧಿಸಿದ. ತನ್ನ ಬೌದ್ಧಸಂಘಕ್ಕೆ ಸೇರುವ ಅವಕಾಶವನ್ನು ಎಲ್ಲರಿಗೂ ಕಲ್ಪಿಸಿದ. ಸಮಾನತೆಯನ್ನು ಪಾಲಿಸಿದ. ಇದರಿಂದ ಕೆಳವರ್ಗದವರ ಸ್ಥಾನಮಾನ ಹೆಚ್ಚುವ ಅವಕಾಶ ಸಿಕ್ಕಿತು. ಅವನು ಬೋಧಿಸುವ ಮೊದಲು ಹಸಿದವರಿಗೆ ಅನ್ನ ಹಾಕಿಸುತ್ತಿದ್ದ. ಮನಸ್ಸಿಗೆ ಆಹಾರ ಎಷ್ಟು ಅವಶ್ಯಕವೋ, ದೇಹಕ್ಕೂ ಆಹಾರ ಅಷ್ಟೇ ಅವಶ್ಯಕವೆಂದು ಭಾವಿಸಿದ್ದ.
ಬುದ್ಧ ವರ್ಗರಹಿತ ಸಮಾಜವನ್ನು ಸೃಷ್ಟಿಸಿದ. ದೊಡ್ಡ-ಚಿಕ್ಕ, ಹೆಚ್ಚು-ಕಡಿಮೆ ಎಂಬ ಭೇದವಿಲ್ಲದೆ ಎಲ್ಲರಿಗೂ ಅದರಲ್ಲಿ ಪ್ರವೇಶ ಕಲ್ಪಿಸಿದ. ಈ ಸಂದರ್ಭದಲ್ಲಿ ಲಾರ್ಡ್ ಜೆಟ್ ಲ್ಯಾಂಡ್ ಹೇಳಿದ್ದನ್ನು ಉಲ್ಲೇಖಿಸೋಣ: “2000 ವರ್ಷಗಳ ಹಿಂದೆ ಅಥವಾ ಅದಕ್ಕೂ ಮೊದಲು, ಭಾರತದಲ್ಲಿ ಬೌದ್ಧ ಅಸೆಂಬ್ಲಿಗಳು, ಇಂದಿನ ಸಂಸದೀಯ ಪ್ರಜಾಪ್ರಭುತ್ವದ ಮೂಲಭೂತ ಭಾವನೆಗಳನ್ನು ಹೊಂದಿದ್ದವು ಎಂದು ನೋಡಿದರೆ ಆಶ್ಚರ್ಯವಾಗುತ್ತದೆ.” ಬೌದ್ಧಧರ್ಮ ಅಂದಿಗೂ, ಇಂದಿಗೂ ನಿರಂತರವಾಗಿ ಹರಡುತ್ತಿದೆ. ಈಗ ಅದು ಮುಖ್ಯವಾಗಿ ಪಾಶ್ಚಾತ್ಯ ದೇಶಗಳಿಗೆ, ಅದರ ತರ್ಕಬದ್ಧತೆ, ಪ್ರಾಯೋಗಿಕತೆ, ಸಮರ್ಥತೆ, ಅಹಿಂಸೆ, ಸಹನೆ, ಸಾರ್ವತ್ರಿಕತೆಗಳ ಕಾರಣದಿಂದ ಹರಡುತ್ತಿದೆ. ಬೌದ್ಧಧರ್ಮ ಏಷ್ಯಾ ದೇಶಗಳು ಸಾಂಸ್ಕೃತಿಕ ವಿಕಾಸಕ್ಕೆ ಬಹಳಷ್ಟು ಸಹಾಯ ಮಾಡಿದೆ. ವಾಸ್ತವವಾಗಿ ಏಷ್ಯಾ ದೇಶಗಳೆಲ್ಲವೂ ಬೌದ್ದರ ಜೋಗುಳ ಹಾಡಿನಿಂದಲೇ ಬೆಳೆದು ದೊಡ್ಡದಾಗಿವೆ. ರಾಷ್ಟ್ರಗಳು ಬಂದವು, ಹೋದವು. ಬಲದ ಮೇಲೆ ಆಧಾರಿತವಾದ ಮಹಾ ಸಾಮ್ರಾಜ್ಯಗಳು ಬೆಳಗಿದವು. ಮಣ್ಣು ಸೇರಿ ಹೋದವು. ಆದರೆ ಪ್ರೀತಿ, ಅನುಕಂಪ, ತರ್ಕಗಳ ಮೇಲೆ ಬುದ್ದ ಸ್ಥಾಪಿಸಿದ ಸಾಮ್ರಾಜ್ಯ ಬೆಳಗುತ್ತಲೇ ಇದೆ. ಹಾಗೆ ಮುಂದೆಯೂ ಬೆಳಗುತ್ತಲೇ ಇರುತ್ತದೆ.





