ಹೊಸ ಓದು | ವಿಕಾಸ್ ಮೌರ್ಯರ ‘ನುಡಿ ಚಮ್ಮಾಳಿಗೆ’

Date:

ತೆಲುಗಿನ ಪ್ರಸಿದ್ಧ ಸಾಹಿತಿ ಎಂಡ್ಲೂರಿ ಸುಧಾಕರ್ ಅವರ ಅಪರೂಪದ ಕತೆಗಳನ್ನು ವಿಕಾಸ್ ಮೌರ್ಯ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿ ಮೇ 30ರಂದು ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಸಂಜೆ 5ಕ್ಕೆ ಬಿಡುಗಡೆಯಾಗಲಿದೆ. ಆ ಕೃತಿಗೆ ಯುವ ರಂಗಕರ್ಮಿ ಕೆ.ಪಿ. ಲಕ್ಷ್ಮಣ್ ಬರೆದ ಮುನ್ನುಡಿ ಇಲ್ಲಿದೆ…

- Advertisement -

ಮಲ್ಲಿಗೆ ಮೊಗ್ಗಿನ ಕೊಡೆ ತರಿದು ಹೋಗಿ ಬರಿಯ ಚಕ್ಕಳವಾದಾಗ….

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

90ರ ದಶಕದ ಆಂಧ್ರಪ್ರದೇಶದಲ್ಲಿ ‘ಮಾದಿಗ ರಿಸರ್ವೇಶನ್ ಪೋರಾಟ ಸಮಿತಿ’ಯ ಚಳವಳಿಗಳು ಕಾವು ಪಡೆದುಕೊಳ್ಳುತ್ತಿದ್ದ ಕಾಲ. ಚಳವಳಿ ಕಟ್ಟಿಕೊಳ್ಳುವ ಕಾಲದಲ್ಲಿ ಯಾವುದೇ ಸಮುದಾಯವು ತಾನು ನಡೆಯಬೇಕಾದ ದಾರಿಗೆ ಹತಾರಗಳನ್ನು ಪಡೆಯಲು, ತನ್ನ ನೆನಪುಗಳ ಹಗೇವುಗಳನ್ನು ಬಗೆಯುತ್ತದೆ. ವರ್ತಮಾನದ ಒತ್ತಡಗಳ ಜೊತೆಗೆ ನೆನಪಿನ ಗಣಿಯಿಂದ ತನ್ನ ರಾಜಕೀಯ ನಡೆಗೆ ಒಂದಷ್ಟು ಹೊಳಹುಗಳನ್ನು ಪಡೆದುಕೊಳ್ಳುತ್ತದೆ. ನೆನಪುಗಳ ಮೂಲಕವೇ ತನ್ನ ಘನತೆಯನ್ನು, ಜೀವ ಚಾಲಕ ಶಕ್ತಿಯನ್ನು, ಮುಂದಿನ ಬದುಕಿಗೆ ಬೇಕಾದ ಮಾದರಿಗಳನ್ನು ಸೃಜಿಸಿಕೊಳ್ಳುತ್ತದೆ. ಇದು ಇತಿಹಾಸದಲ್ಲಿ ನಾವು ಕಾಣುತ್ತಲೇ ಬಂದಿರುವ ಸಾಂಸ್ಕೃತಿಕ ರಾಜಕಾರಣದ ಒಂದು ಬಗೆಯ ಪ್ಯಾಟರ್ನ್. ಎಂಡ್ಲೂರಿ ಸುಧಾಕರ್ ಅವರ ಇಲ್ಲಿನ ಅನುಭವ ಕಥನದಂತಹ ಕತೆಗಳ ಕಟ್ಟು ಇದೇ ಕಾಲಘಟ್ಟದ ‘ಮಾದಿಗ ರಿಸರ್ವೇಶನ್ ಪೋರಾಟ ಸಮಿತಿ’ಯ ಚಳವಳಿಯ ಬೆನ್ನ ಭಿತ್ತಿಯಲ್ಲಿ ಮೂಡಿರುವ ಬರಹಗಳು. ಆದ್ದರಿಂದಲೇ ಏನೋ ಮಾದಿಗ ಸಮುದಾಯದ ಜನರನ್ನು,‌ ಅವರ ಬದುಕನ್ನು ಹೆಮ್ಮೆ ಮತ್ತು ಬೆರಗಿನಿಂದ ನೋಡುವ ಕಣ್ಣೋಟವು ಇಲ್ಲಿನ ಕಥನಗಳಲ್ಲಿದೆ.

ಕರಾವಳಿ ಆಂಧ್ರದ ಪ್ರಕಾಶಮ್ ಜಿಲ್ಲೆಯ ಹಳ್ಳಿಗಳಲ್ಲಿ ಚದುರಿಕೊಂಡು ಬದುಕುತ್ತಿರುವ ಮಾದಿಗ ಸಮುದಾಯದ ಬದುಕಿನ ತುಣುಕುಗಳನ್ನು ಇಲ್ಲಿನ ಕಥನಗಳಲ್ಲಿ ಮಲ್ಲಿಗೆ ಮೊಗ್ಗಿನ ಕೊಡೆಯಂತೆಯೆ ಪೋಣಿಸಿ, ಆ ಘಮಲನ್ನು ಓದುಗರಿಗೆ ನೀಡಲು ಲೇಖಕರು ಪ್ರಯತ್ನಿಸಿದ್ದಾರೆ. ಮಾದಿಗ ಸಮುದಾಯಕ್ಕಿರುವ ಭಿನ್ನ ಮತ್ತು ವಿಶಿಷ್ಟ ಸೌಂದರ್ಯದ ಕಾಣ್ಕೆಯನ್ನು ಇಲ್ಲಿ ಹೆಚ್ಚು ಕಮ್ಮಿ ಎಲ್ಲ ಕಥನಗಳಲ್ಲಿಯೂ ಕಾಣಿಸುತ್ತಲೇ ಸಾಗುತ್ತಾರೆ. ಇಲ್ಲಿನ ಬರಹಗಳು ಪ್ರಾಣಿ, ಪಕ್ಷಿ, ಹೂವು, ಹಣ್ಣು, ಮಾಂಸ, ತೊಗಲು, ತಮಟೆ, ಪ್ರೇಮ, ಪ್ರತಿರೋಧ, ಹುಟ್ಟು, ಸಾವುಗಳ ವಿವರಗಳಿಂದ ತುಂಬಿಕೊಂಡು ದಟ್ಟವಾಗಿವೆ. ಆ ವಿವರಗಳೆಲ್ಲವು ಜನ ಸಮುದಾಯಗಳ ಬದುಕಿನ ತಡಿಕೆಗೆ ಹಬ್ಬಿಕೊಂಡ ತರಾವರಿ ಅಂಬುಗಳಂತೆ ಬೆಸೆದುಕೊಂಡಿವೆ.

ಇಲ್ಲಿನ ಪಾತ್ರಗಳು ಮತ್ತು ಅವುಗಳು ಎತ್ತುವ ಸುಡುಕೆಂಡದಂತಹ ಪ್ರಶ್ನೆಗಳು ಓದುಗರನ್ನು ಹತಾಶೆಗೆ ದೂಡುತ್ತವೆ, ಕೆಣಕುತ್ತವೆ, ಕೆಲವೊಮ್ಮೆ ಮರುಗುವಂತೆಯೂ, ಕೆಲವೊಮ್ಮೆ ಕೆರಳುವಂತೆಯೂ ಮಾಡುತ್ತವೆ. ಒಟ್ಟಿನಲ್ಲಿ ಎಲ್ಲ ಕಥನಗಳ ಆಳದ ಸ್ಥಾಯಿ ಎಂಬಂತೆ ಹತಾಶೆ ಮತ್ತು ಮಡುಗಟ್ಟಿದ ದುಗುಡವಿದೆ. ಬಿಡುಗಡೆ, ಸಮತೆ ಮತ್ತು ಜಾತಿಯಿಲ್ಲದ ‘ಬೇಗಂಪುರ’ದ ಕನಸಿದೆ. ಆ ಕನಸುಗಳು ಯಾವುದೋ ಅಕ್ಯಾಡೆಮಿಕ್ ಭಾಷೆಗೊ, ಶುದ್ದ ಸಾಹಿತ್ಯದ ಗತ್ತಿನೊಳಗೊ ಸಿಕ್ಕಿ ಬೀಳದೆ ತನ್ನದೆ ಒಡಲಿನ ‘ಕೇರಿ ಭಾಷೆ’ಯ ಬನಿಯಲ್ಲಿಯೆ ಅರಳಿ ನಿಂತಿವೆ. ಮೊಗೆದಷ್ಟು ಮುಗಿಯದ ಸಂಕಟಗಳನ್ನು ಹಟ್ಟಿ ಜೋಪಡಿಗಳು ಹಾಸುಹೊದ್ದು ಮಲಗಿಕೊಂಡಿವೆ. ಇಂತಹ ಹಟ್ಟಿಯೊಳಗೆ, ಸರೋಜಿನಿ ಅತ್ತಿ, ರೋಸಿ, ಗುರ್ರಯ್ಯ, ಬೆನ್ನಿ ಮಾವನಂತಹ ಬರಿಗಾಲ ದಾರ್ಶನಿಕರು ಅಡ್ಡಾಡಿಕೊಂಡಿದ್ದಾರೆ. ಸುತ್ತಲಿನ ಕೇಡಿಗೆ ತಮ್ಮದೆ ಮುಲಾಮುಗಳನ್ನು ಕಂಡುಕೊಂಡಿದ್ದಾರೆ. ಅದನ್ನು ಬದುಕಿನ ಕಣ್ಣೋಟವಾಗಿಸಿಕೊಂಡಿದ್ದಾರೆ. ಇಲ್ಲಿ ತಾವು ಆಡ ಬಯಸುವ ಎಲ್ಲ ನುಡಿಗಳನ್ನು ತಮಟೆ ಮೂಲಕವೇ ಆಡಿಸುವ ಕಲಾವಿದರು ಇದ್ದಾರೆ. ಅವರನ್ನು ನುಂಗಿಕೊಳ್ಳುವ ದಾರುಣ ವಿಷ ಸುಳಿಯೂ ಇದೆ. ಅವರ ವಿದ್ಯೆ ಮತ್ತು ಕಲೆಯನ್ನು, ಕಲೆಯಾಗಿ ಕಾಣದ ಅಹಂಕಾರವು ನಮ್ಮ ಕಣ್ಣ ಮುಂದೆ ಇನ್ನಿಲ್ಲದ ದವಲತ್ತಿನಿಂದ ಮೆರೆಯುತ್ತದೆ. ಇಲ್ಲಿನ ಹಾಡುಗಾರರು, ನುಡಿಕಾರರು, ಕಥನಕಾರರನ್ನು ಕಂಡಾಗಲೆಲ್ಲ ಇಂಡಿಯಾ ದೇಶದಲ್ಲಿ ತಳ ಸಮುದಾಯಗಳ ಈ ‘ಸಾಂಸ್ಕೃತಿಕ ಫಲವತ್ತತೆ’ ‘ಸಿರಿತನ’ ಯಾಕೆ ‘ಸಾಂಸ್ಕೃತಿಕ ಬಂಡವಾಳ’ವಾಗಿ ಬೆಳೆಯಲಿಲ್ಲ ಎನ್ನುವ ಪ್ರಶ್ನೆ ಎದುರಾಗುತ್ತದೆ. ಅದಕ್ಕೆ ಜಾತಿಯೇ ಕಾರಣ ಅನ್ನುವ ಉತ್ತರವನ್ನು ಇಲ್ಲಿನ ಪಾತ್ರಗಳೆ ಮುಖಕ್ಕೆ ರಾಚುವಂತೆ ನಮ್ಮ ಮುಂದಿಡುತ್ತವೆ.

ಇದನ್ನು ಓದಿದ್ದೀರಾ?: ಎನ್.ಎಸ್. ಶಂಕರ್ ಬರೆದ ‘ರಾಮಾ’ಯಣ!

ತಳಸಮುದಾಯಗಳಿಗೆ ವಿದ್ಯೆ ಹೊಸದಲ್ಲ, ಜ್ಞಾನ ಹೊಸದಲ್ಲ, ಕಲೆಯೂ ಹೊಸದಲ್ಲ. ಆದರೆ ಅದ್ಯಾವತ್ತಿಗೂ ಪ್ರದರ್ಶಿಸುವ ಸಂಗತಿಯಾಗಿರಲಿಲ್ಲ, ಬದಲಿಗೆ ಅದೆಲ್ಲವೂ ತನಗೂ ಮತ್ತು ಲೋಕಕ್ಕೂ ಅನುದಿನದ ಬದುಕನ್ನು ಸಹ್ಯಗೊಳಿಸುವ ಅರಿವಾಗಿತ್ತು. ಬದುಕಿನ ರೀತಿ ಮತ್ತು ವಿವೇಕವಾಗಿತ್ತು. ಸುಧಾಕರ್ ಅವರು, ಚಪ್ಪಲಿ ಹೊಲೆಯುವವರ, ಚರ್ಮ ಸುಲಿಯುವವರ, ತಮಟೆ ನುಡಿಕಾರರ, ಸೌದೆ ಆಯ್ದು ಬದುಕು ಸಾಗಿಸುವ ಹೆಂಗಸರ ಮೂಲಕ ನಮಗೆ ಕಟ್ಟಿಕೊಡುವುದು ಇಂತಹದೆ ಅಸ್ಪೃಶ್ಯ ಲೋಕದ ಅರಿವಿನ ಭಿತ್ತಿಯನ್ನು. ಆ ಅರಿವು ಬಹಳ ಸರಳವಾದ್ದು ಮತ್ತು ತಿಳಿನೀರಿನಷ್ಟು ತಿಳಿಯಾದ್ದು. ಇಂಡಿಯಾ ದೇಶದಲ್ಲಿ ಅಕ್ಷರದಲ್ಲಿ ವ್ಯಕ್ತವಾಗುವ ವಿದ್ಯೆ ಮತ್ತು ಜ್ಞಾನವೇ ಇತಿಹಾಸವನ್ನು ರೂಪಿಸುವ ಅಧಿಕೃತ ಸೋರ್ಸ್ ಎಂದು ಸೀಲ್ ಒತ್ತುವ ರಾಜಕಾರಣಕ್ಕೆ, ಈ ಬಗೆ ಜೀವಾನಾನುಭವದಿಂದ ಹುಟ್ಟಿದ ಅರಿವು ಮತ್ತು ವಿವೇಕವನ್ನು ಜ್ಞಾನ ಪರಂಪರೆಯಾಗಿ, ಕಲಾ ಪರಂಪರೆಯಾಗಿ ಕಾಣುವ ಕ‌ಣ್ಣಿಲ್ಲ. ಶತಮಾನಗಳಿಂದಲೂ ಅಕ್ಷರಲೋಕ ಇಂತಹ ಜ್ಞಾನ ಮತ್ತು ಬದುಕುಗಳನ್ನು ತಿರಸ್ಕರಿಸಿ ಅಥವಾ ‘ಅಪ್ರೋಪ್ರಿಯೇಟ್’ ಮಾಡಿ ‘ತಪ್ಪು ಇತಿಹಾಸ’ವನ್ನು ‘ತಪ್ಪು ಮೀಮಾಂಸೆʼಗಳನ್ನು ಕಟ್ಟುತ್ತಲೆ ಇರುವಾಗ, ಇತಿಹಾಸದ ಮತ್ತೊಂದು ಮಗ್ಗುಲು ಎಂಬಂತೆ ತಳ ಸಮುದಾಯದ ಮೈಯ್ಯೊಳಗೆ, ದನಿಯೊಳಗೆ, ನಾದ, ನುಡಿ-ನಾಡಿಯೊಳಗೆ ಅಡಗಿಕೊಂಡಿರುವ ‘ನೆನಪುಗಳನ್ನೆ’ ನಮ್ಮ ಇತಿಹಾಸವನ್ನು ಕಟ್ಟಿಕೊಳ್ಳುವ ಅಧಿಕೃತ ಆಕರಗಳನ್ನಾಗಿ ನೋಡುವುದು, ಈ ಕೃತಿ ನಮಗೆ ತೋರುವ ಒಂದು ದೊಡ್ಡ ರಾಜಕೀಯ ಪಾಠ. ಸಾಂಸ್ಕೃತಿಕ ಪಾಠ.

ಇಂಡಿಯಾದ ದೇಶದ ‘ನೆನಪಿನ ರಾಜಕಾರಣ’ ಅತಿ ಕೇಡಿನದ್ದು. ಬುದ್ದನಂತಹ ಬುದ್ದನನ್ನು ಇಲ್ಲಿಂದ ಮರೆಯಾಗಿಸಲು ಪ್ರಯತ್ನಿಸಿದ್ದು ಇಂತಹದ್ದೆ ರಾಜಕಾರಣ.

ಇಂದು ಅಳಿದುಳಿದ ತಳ ಸಮುದಾಯಗಳ ಘನತೆಯ ಇತಿಹಾಸದ ಚಹರೆಗಳನ್ನು ತೀವ್ರವಾಗಿ ‘ಎರೇಸ್’ ಮಾಡುತ್ತಿರುವ ಕಾಲದಲ್ಲಿ, ನಮ್ಮದೆ ನೆನಪಿನ ಹಗೇವುಗಳಿಂದ ನಮ್ಮ ಪೂರ್ವಿಕರ ಚಿತ್ರಗಳನ್ನು ಕಟ್ಟಿಕೊಳ್ಳುವುದು ಆ ತೆಳು, ಅಸ್ಪಷ್ಟ ನಕಾಶೆಯ ಮೂಲಕವೇ ಘನತೆಯ ಇತಿಹಾಸವನ್ನು ಕಟ್ಟಿಕೊಳ್ಳುವುದು ದಣಿಸುವ ಕೆಲಸವಾದರೂ, ಅದು ನಮ್ಮೆಲ್ಲರ ಮುಖ್ಯವಾದ ಸಾಂಸ್ಕೃತಿಕ, ರಾಜಕೀಯ ನಡೆಯೇ ಹೌದು.

ಇಂಡಿಯಾ ಮಾತ್ರವೇ ಅಲ್ಲದೆ ಜಗತ್ತಿನಾದ್ಯಂತ ತಳಾತಿತಳ ಸಮುದಾಯಗಳು ಕಾಲಾಂತರದಲ್ಲಿ ತಮ್ಮ ನುಡಿ ಮತ್ತು ನಾದ ಪರಂಪರೆಗಳ ಮೂಲಕ ಮಾಡುತ್ತ ಬಂದಿರುವುದು ಇದನ್ನೆ. ಆ‌‌ಫ್ರಿಕಾದ ಬುಡಕಟ್ಟಿನ ಹಾಡು- ಕಥನ ಪರಂಪರೆಗಳು, ಅರ್ಜೆಂಟಿನಾದ ‘ಕಪುವೆರಾ’ದಂತಹ ಸಮರ ಕಲೆಯ ಆಟಗಳು, ಆಸ್ಟ್ರೇಲಿಯಾದ ಆದಿವಾಸಿಗಳ ‘ಸಾಂಗ್ ಲೈನ್’ ಪರಂಪರೆ, ತಮಿಳುನಾಡಿನ ‘ಪರೆಯ’ ಸಮುದಾಯ ಸಾವಿನ ಆಚರಣೆಗಳ ಜೊತೆಗೆ ಹಾಡುವ- ನಟಿಸುವ ಕಥನಗಳು, ತೆಲಂಗಾಣದ ‘ಸಿಂದೋಳ್ಳು’ ಆಡುವ ‘ಚಿಂದಾಟ’, ನಮ್ಮದೇ ಮಂಟೆಸ್ವಾಮಿ ಕಾವ್ಯ, ಮಾದಪ್ಪನ ಕಾವ್ಯ, ಇಂತಹ ಹಲವು ‘ಆಡು ಪರಂಪರೆ’ ಮತ್ತು ‘ಹಾಡು ಪರಂಪರೆ’ಗಳನ್ನು ನಮ್ಮ ಪೂರ್ವಿಕರು ತಲೆಮಾರಿನಿಂದ ತಲೆಮಾರಿಗೆ ದಾಟಿಸುತ್ತ ಬಂದಿರುವುದನ್ನು, ಅವರು ಇತಿಹಾಸವನ್ನು ಕಾಪಿಡಲು, ಮುಂದಿನ ಪೀಳಿಗೆಗೆ ಹಬ್ಬಿಸಲು ಸೃಜಿಸಿಕೊಂಡಿರುವ ‘ಪರಾಗ’ ಪ್ರಕ್ರಿಯೆಯಾಗಿಯೇ ನೋಡಬೇಕು ಅನ್ನಿಸುತ್ತದೆ.

ಸುಧಾಕರ್ ಅವರ ಬರಹಗಳು ಇದೆ ಬಗೆಯ ಪರಂಪರೆಯ ಮುಂದುವರಿಕೆಯಂತೆ ಇರುವ ‘ಆಧುನಿಕ ಆಡು-ಪರಂಪರೆಯ’ ಕಥನಗಳಂತೆ ಕಾಣುತ್ತವೆ. ನೆನಪುಗಳೆ ಇಲ್ಲಿನ ಜೀವಾಳ. ಒಬ್ಬ ವ್ಯಕ್ತಿಯ ನೆನಪಿನೊಳಗಿಂದ ಇನ್ನೊಬ್ಬ ವ್ಯಕ್ತಿಯ ಚಿತ್ರವನ್ನು ನೂಲುವ ಪರಿಯಂತು ಸೋಜಿಗ ಹುಟ್ಟಿಸುವಂತದ್ದು. ನೆನಪಿನೊಳಗೆ ನದಿಯಂತೆ ಹರಿಯುವ, ಕುದುರೆಯಂತೆ ಕೆನೆಯುವ, ತಮಟೆಯ ನಾದ, ಸಾಯಿಸುವ ಬರಗಾಲ, ನೆನಪಿನೊಳಗಣ ಹಾಡು, ನೆನಪಿನೊಳಗಣ ಸಿಟ್ಟು, ನೆನಪಿನೊಳಗಣ ಮಾತನಾಡುವ ಮೆಟ್ಟು, ನೆನಪಿನೊಳಗಣ ಪ್ರತಿರೋಧ, ಆಯುಧಕ್ಕೊಂದು ನೆನಪು, ಗಿಡಕ್ಕೊಂದು ನೆನಪು, ತಮಟೆಯ ಗಸ್ತಿಗೊಂದು ನೆನಪು . ಇಲ್ಲಿನ ನೆನಪುಗಳು ಲೋಕಸೃಷ್ಟಿಯ ಜಾಂಬವ ತಾತನ ಕಾಲದಿಂದಲೂ, ಕುಲದ ಚೆಲುವೆ ಹೆಣ್ಣು ಆರಂಜ್ಯೋತಿಯ ಕಾಲದಿಂದಲೂ ಆರಂಭವಾಗಿ ಇತ್ತೀಚಿನ ಮತಾಂತರ, ಚುನಾವಣೆಯ ಜಗಳ, ಬಾಬಾ ಸಾಹೇಬರ ಅಕ್ಷರದ ಬೆಳಕು, ವಲಸೆ, ಬರಗಾಲ, ಯೇಸಪ್ಪನ ಕರುಣೆ, ರೆಡ್ಡಿಗಳ ದರ್ಪ, ಗಾಂಧಿವಾದಿಗಳ ಸೋಗಲಾಡಿತನದವರೆಗೂ ಬಂದು ನಿಲ್ಲುತ್ತವೆ. ಇಲ್ಲಿ ನೆನಪೆಂಬುದು ಬೀಜದೊಳಗಣ ವೃಕ್ಞವೇ ಹೌದು. ಇಲ್ಲಿಯ ನೆನಪುಗಳು ಓದುಗರ ಮುಂದೆ ತಂದು ನಿಲ್ಲಿಸುವ ಪ್ರಶ್ನೆಗಳನ್ನು ಎದುರುಗೊಳ್ಳುವುದು ಕಷ್ಟದ್ದು. ಧೈರ್ಯ ಬೇಡುವಂತದ್ದು.

ಇಲ್ಲಿನ ಕಥನಗಳಲ್ಲಿ ಒಂದಾದ ‘ಆರಂಜ್ಯೋತಿ’ ಭಾಗ ಯಾವುದೋ ಪುರಾತನ ‘ಮರ್ಯಾದೆ ಗೇಡು ಹತ್ಯೆ’ಯ ಕುರುಹಿನಂತೆ ಕಾಣಿಸುತ್ತದೆ. ಮಾದಿಗ ಕುಲದ ಚೆಲುವೆ ಎಂದು ವರ್ಣಿಸಲ್ಪಡುವ ಆರುಂಧತಿಯನ್ನು ವರಿಸಿಯೋ, ಮೋಸ ಮಾಡಿಯೋ ಮದುವೆಯಾದ ವಸಿಷ್ಠ, ತನ್ನ ಕುಲದವರು ತನ್ನ ಹೆಂಡತಿಯನ್ನು ಜಾತಿಯ ಕಾರಣಕ್ಕೆ ಅವಮಾನಿಸಿ, ತಿರಸ್ಕರಿಸಿ ಅದರಿಂದಾಗಿ ಸಾಯುವ ಹೆಂಡತಿಯನ್ನ ಕಣ್ಣೆದುರು ಕಂಡೂ ಸುಮ್ಮನೆ ಇರುತ್ತಾನೆ. ಆರಂಜ್ಯೋತಿ ಚುಕ್ಕೆಯಾದಳು ಎಂದು ಕತೆ ಕಟ್ಟಿ ಆದ ಸಾವನ್ನು ಮುಚ್ಚಿ ಹಾಕುತ್ತಾರೆ. ಇಂತಹ ಅನ್ಯಾಯವನ್ನು ಸಮುದಾಯ ತನ್ನ ನೆನಪಿನಲ್ಲಿ ಕತೆಯಾಗಿ ಕಾಪಿಟ್ಟು ಶತಮಾನಗಳ ಕಾಲ ಹೇಳುತ್ತಾ ಕೇಡಿನ ಕುರಿತು ಎಚ್ಚರಿಸುತ್ತಾ ಬಂದಿದೆ. ಯಾವುದೇ ಕುಲ ತನಗಾದ ದ್ರೋಹದಿಂದ ತನ್ನ ಕುಡಿಯನ್ನು ಕಳೆದುಕೊಂಡದ್ದನ್ನು ಹೇಗೆ ತಾನೆ ಮರೆಯಲು ಸಾಧ್ಯ? ಈ ನೆನಪು ನನಗೆ ‘ಮಾರಮ್ಮ’ನ ಮಿಥ್‌ಗಿಂತ ಮುಖ್ಯವಾದ ಮಿಥ್ ಆಗಿಯೂ ಪ್ರಜ್ಞಾಪೂರ್ವಕವಾಗಿ ‘ಮಾದಿಗ’ ಸಮುದಾಯದ ನೆನಪಿನಿಂದ ಅಳಿಸಲು ಪ್ರಯತ್ನಿಸಿರುವ ಮಿಥ್ ಆಗಿಯೂ ಕಾಣಿಸುತ್ತದೆ. ಬಹುಶಃ ಈ ಮಿಥ್ ಸುತ್ತ ಇರುವ ಕಥನಗಳನ್ನು ಕೆದಕುತ್ತಾ ಸಾಗಿದರೆ ‘ದಲಿತ ಮಹಿಳಾವಾದ’ಕ್ಕೆ ಹೊಸದೇ ಅನ್ನಿಸುವ ನುಡಿಗಟ್ಟು ಮತ್ತು ವಿಷನ್ ಒದಗಬಹುದೆಂದು ತೋರುತ್ತದೆ.

ಸುಧಾಕರ್ ಅವರ ಕಥನಗಳ ನಿರೂಪಕ ನಗರದಲ್ಲಿ ಕೆಲಸ ಮಾಡುತ್ತಿರುವವನು. ಕವಿ, ಕತೆಗಾರ. ಹಾಗಾಗಿ ಅವರು ತನ್ನ ಜಾತಿಯ ಜನಗಳೊಂದಿಗೆ ಏಕಕಾಲಕ್ಕೆ ಒಳಗಿವನಾಗಿಯೂ ಹೊರಗಿನವನಾಗಿಯೂ ಕಥನಗಳನ್ನು ನಿರೂಪಿಸಿದ್ದಾರೆ. ಆದ್ದರಿಂದಲೇ ಇಲ್ಲಿನ ಪಾತ್ರಗಳ ತೀರ ವೈಯಕ್ತಿಕ ಅನ್ನಿಸುವ ವಿವರಗಳು ಓದುಗರಿಗೆ ಎದುರಾಗುತ್ತವೆ. ಇಲ್ಲಿ ನಿರೂಪಕ ಮತ್ತು ಪಾತ್ರಗಳ ನಡುವೆ, ಒಂದು ಪಾತ್ರ ಮತ್ತು ಇನ್ನೊಂದು ಪಾತ್ರದ ನಡುವೆ ಇರುವ ಸಲುಗೆ, ಪ್ರೀತಿ, ಬಾವುಣಿಕೆ ತೀರ ಅಪರೂಪದ್ದು. ಅದು ಈ ಸಮುದಾಯದ ಸಹಜ ಸ್ವಭಾವವೇನೊ ಅನ್ನುವಷ್ಟು ಗಾಢವಾಗಿದೆ. ಇವರೆಲ್ಲ ಲೇಖಕರು ಸೃಜಿಸಿದ ಪಾತ್ರಗಳೋ, ನಿಜಕ್ಕೂ ವಾಸ್ತವದ ಮನುಷ್ಯರೋ ಎನ್ನುವ ಗೆರೆ ತೀರ ತೆಳುವಾದ್ದು. ಇಲ್ಲಿ ಎಲ್ಲ ಬಗೆಯ ಮನುಷ್ಯರನ್ನು ಅಪಾರ ಕರುಣೆಯಿಂದ ನೋಡುವ ನಿರೂಪಕನಿಗೆ ಎಲ್ಲರನ್ನು ಸಂತರನ್ನಾಗಿ ಕಾಣಿಸುವ ಖಯಾಲಿ ಇದ್ದಂತೆಯೂ ಕಾಣುತ್ತದೆ. ಅವರೊಳಗಿನ ಕೇಡನ್ನು ಕಾಣಿಸಲು ಯಾಕೋ ಹಿಂಜರಿಯುತ್ತಾರೆ. ಅದು ಆ ಕಾಲದ ಜರೂರು ಆಗಿರಲಿಲ್ಲವೇನೋ, ಆದರೆ ಈ ಬಗೆಯ ನೋಟ ಕೊಂಚ ಅಪಾಯಕಾರಿಯಾದ್ದು. ತನ್ನ ಸಮುದಾಯದ ಜನಗಳ ಎಲ್ಲ ಮಗ್ಗುಲುಗಳನ್ನು ಕಾಣಿಸುವುದು ಲೇಖಕನೊಬ್ಬನ ಜವಾಬ್ದಾರಿಯೆಂದೆ ನನಗೆ ಅನ್ನಿಸುತ್ತದೆ.

ಇಲ್ಲಿನ ಕತನಗಳು ನಡೆಯುತ್ತಿರುವ ಕಾಲಘಟ್ಟ 90ರ ದಶಕವೇ ಆದರೂ, ಇಂದಿಗೂ ಓದು ಬರಹ ಕಲಿತು ನಗರದಲ್ಲಿ ಬಾಳುವೆ ಕಟ್ಟಿಕೊಂಡ ತಳ ಸಮುದಾಯದ ಯಾವುದೇ ಯುವಕ-ಯುವತಿಯೂ ತನ್ನ ಹುಟ್ಟೂರಿಗೆ ಭೇಟಿ ಕೊಟ್ಟರೆ ಪರಿಸ್ಥಿತಿ ಈ ಕೃತಿ ಕಾಣಿಸುವ ದುರಂತಗಳಿಗಿಂತ ತೀರ ಭಿನ್ನವಾಗಿರುವುದಿಲ್ಲ. ಕಾಲದ ಚಲನೆಯಲ್ಲಿ, ಬಾಬಾ ಸಾಹೇಬರ ಕಾಣ್ಕೆಯ ಕಾರಣಕ್ಕೆ ಆಗಿರುವ ಕೊಂಚ ಮಟ್ಟಿನ ಬದಲಾವಣೆಯನ್ನು ಅಲ್ಲಗಳೆಯಲು ಆಗುವುದಿಲ್ಲವಾದರೂ, ಈ ಸಮುದಾಯದ ಬದುಕಿನ ಸ್ಥಿತಿ-ಗತಿಯಲ್ಲಾಗಿರುವ ಪಲ್ಲಟ ತೀರ ಸಣ್ಣದು. ಅದು ದೊಡ್ಡ ಹತಾಶೆಯನ್ನು ನನ್ನೊಳಗೆ ಮೂಡಿಸುತ್ತದೆ. ನಮ್ಮ ಪೂರ್ವಿಕರ ‘ಸಾಂಸ್ಕೃತಿಕ ಸಿರಿತನ’ಕ್ಕೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಏನಾದರು ಬೆಲೆಯಿದೆಯೇ ಅನ್ನುವ ಪ್ರಶ್ನೆ ಎದುರಾಗುತ್ತದೆ. ಯಾವ ನೆನಪನ್ನು ನಿರಾಕರಿಸಬೇಕು ಯಾವ ನೆನಪನ್ನು ಅಪ್ಪಿ ಮುಂದುವರಿಸಬೇಕು ಎನ್ನುವ ಗೊಂದಲವೂ ಎದುರಾಗುತ್ತದೆ. ನೆನಪೆಂಬುದು ಹರಿದು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ, ಚಕ್ಕಳವಾಗಿರುವ ಮಲ್ಲೆ ಮೊಗ್ಗಿನ ಕೊಡೆಯ ಅಸ್ಥಿಪಂಜರದಂತೆ ಕಾಣುತ್ತದೆ. ಈ ಚಕ್ಕಳದಂತ ಮೈಯ್ಯೊಳಗೆ ನಾವು ಚೆಲುವನ್ನು ಎಲ್ಲಿ ಹುಡುಕುವುದು? ಅದರ ಘಮಲಿಗೆ ಎಲ್ಲಿ ತಡಕುವುದು?

ಇದನ್ನು ಓದಿದ್ದೀರಾ?: ಜಾಹ್ನವಿಯವರ ‘ಸೆಕ್ಸಿ ದುರಗ’, ವಾಣಿಯವರ ಅದ್ಭುತ ಅಭಿನಯ- ನಾಡಿನಾದ್ಯಂತ ನಡೆದಾಡಲಿ

ನಾರುವ ಬಗ್ಗುಡದಂತಹ ಈ ಕಾಲದಲ್ಲಿ ತಳ ಸಮುದಾಯದ ಯಾವುದೇ ಅಕ್ಷರಸ್ಥ, ಕಲಾವಿದ, ಬರಹಗಾರ ಎದುರಿಸಿರಲೇಬೇಕಾದ ಸಂದಿಗ್ಧವಿದು. ಇಂದು ನೆನಪನ್ನು ಸ್ವೀಕರಿಸುವ ಮತ್ತು ನಿರಾಕರಿಸುವ ದೊಡ್ಡ ಎಚ್ಚರವನ್ನು ತಳಸಮುದಾಯಗಳ ಕಲಾವಿದರು ಬರಹಗಾರರು ರೂಪಿಸಿಕೊಳ್ಳಲೇಬೇಕಾಗಿದೆ. ನಾವು ಮುಂದಿನ ಕಾಲಕ್ಕೆ ಒಂದಷ್ಟಾದರೂ ಗಾಯಗಳಿಲ್ಲದಂತಹ, ಕಹಿ ಇಲ್ಲದಂತಹ ನೆನಪುಗಳನ್ನು ನೀಡಬೇಕಾದ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಅದಕ್ಕಾಗಿ ಬಾಬಾ ಸಾಹೇಬರ ಭಾಷೆಯಲ್ಲಿ, ನುಡಿಗಟ್ಟಿನಲ್ಲಿ, ಕಾಣ್ಕೆಯಲ್ಲಿ, ಘಮಲಿನ ಮಲ್ಲಿಗೆ ಮೊಗ್ಗಿನ ಕೊಡೆಯನ್ನು ಪೋಣಿಸಿಕೊಳ್ಳಬೇಕೇನೋ? ಅದರಿಂದಲೇ ಒಂದು ಹೊಸ ಬಗೆಯ ಸಾಂಸ್ಕೃತಿಕ ಸಿರಿತನವನ್ನು ರೂಪಿಸಿಕೊಳ್ಳಬೇಕೇನೋ? ಆ ಕುಸುರಿ ಇಂದು ಚದುರಿ ಬಿದ್ದಿರುವ ‘ದಲಿತ’ ಚಪ್ಪರದಲ್ಲಿ ಸಾಧ್ಯವೆ? ಅನ್ನುವುದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಒಳಗಿನ ಘಮಲನ್ನು, ಚೆಲುವನ್ನು ಕಳೆದುಕೊಂಡು ಬದುಕುವುದಾದರು ಹೇಗೆ? ಇಂತಹ ತಲ್ಲಣಿಸುವ ಪ್ರಶ್ನೆಗಳನ್ನು ಈ ಕೃತಿ ನನ್ನೊಳಗೆ ಹುಟ್ಟಿಸಿದೆ.

ಇಲ್ಲಿನ ಕಥನಗಳು ಮಾದಿಗ ಜನರ ಬದುಕು ಬಾಳುವೆಯ ಕಥನಗಳೆ ಆದರೂ ಭಾಗಶಃ ಎಲ್ಲ ಅಸೃಶ್ಯ ಜಾತಿಗಳ ನೆನಪಿನ ಕಥನಗಳು ಇವುಗಳೊಂದಿಗೆ ಅನುರಣಿಸದೆ ಇರವು. ಪ್ರತಿ ಸಮುದಾಯದ ಭಿನ್ನತೆಯೆ ಅಪರಿಮಿತವಾದ ಭೇದಕ್ಕೂ ಕಾರಣವಾಗುತ್ತಿರುವ ಈ ಕಾಲದಲ್ಲಿ, ಅಸೃಶ್ಯ ಸಮುದಾಯಗಳು ತಮ್ಮ ಅನುಭವಗಳಲ್ಲಿ, ಅವಮಾನಗಳಲ್ಲಿ ಇರುವ ಸಾಮ್ಯತೆಗಳನ್ನು ಕಂಡುಕೊಳ್ಳುವುದು, ಅವುಗಳನ್ನು ತಮ್ಮ ಒಗ್ಗಟ್ಟಿಗೆ, ಹೋರಾಟಕ್ಕೆ ದಾರಿ ದೀಪವಾಗಿಸಿಕೊಳ್ಳುವುದು ಮುಖ್ಯವೆಂದು ನನಗೆ ಅನ್ನಿಸುತ್ತದೆ. ಈ ಕೃತಿ ಅಂತಹ ಸಾಮ್ಯತೆಗಳನ್ನು ಕಂಡುಕೊಳ್ಳುವ ತೋರು ಹಣತೆ ಆಗಬಹುದು. ಹಣತೆಯ ಮಾತು ಬಂದದ್ದರಿಂದ ನಾನು ಹಿಂದೆ ‘ಆದಿಮ ಲಿವಿಂಗ್ ಟೈಮ್ಸ್’ನಲ್ಲಿ ಓದಿದ ಹೈಕು ಈ ಮುನ್ನುಡಿಯ ಕೊನೆಯ ಭಾಗಕ್ಕೆ ಸೂಕ್ತ ಅನ್ನಿಸುತ್ತದೆ. ಆ ಹೈಕು ಹೀಗಿದೆ:

ಹೌದು;
ನಾವು ಕೆಳಗಿನವರು
ಆದರೆ
ಒಳಗಿನ ಹಣತೆ
ಹಚ್ಚಿದ್ದೇವೆ!

ಇಂತಹ ಒಳಗಿನ ಹಣತೆಯನ್ನು ಓದುಗರೊಳಗೂ ಹಚ್ಚುವ ಕೆಲಸವನ್ನು ಈ ಕೃತಿ ಮಾಡಬಹುದು ಎಂದು ನನಗೆ ಅನ್ನಿಸುತ್ತದೆ. ಯಾರ ಕೈಗೂ ಸಿಗದೇ ಗೆಳೆಯರಿಂದ ಇನ್ನಿಲ್ಲದಂತೆ ಬೈಸಿಕೊಂಡು, ಛೇಡಿಸಿಕೊಂಡು ಅನುವಾದವನ್ನು ಇನ್ನಿಲ್ಲದ ಶ್ರದ್ಧೆಯಿಂದ ಮಾಡುತ್ತಾ, ಕನ್ನಡಕ್ಕೆ ಇಂತಹ ಸಾಲು ಸಾಲು ಹಣತೆಗಳನ್ನು ನೀಡುತ್ತಿರುವ ವಿಕಾಸಣ್ಣನಿಗೆ ಅಭಿನಂದನೆಗಳು.

Vikas Mourya2
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಂತರ್ ಮಂತರ್ ಧರಣಿ ಸ್ಥಳ ರದ್ದತಿ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನಾ ಮೆರವಣಿಗೆ: ಹಲವು ನಾಯಕರು ಪೊಲೀಸ್ ವಶಕ್ಕೆ

ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರಜಾಸತ್ತಾತ್ಮಕ ಪ್ರತಿಭಟನಾ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಓವೈಸಿ: ಅರ್ಜಿಯ ತುರ್ತು ವಿಚಾರಣೆಗೆ ಮನವಿ

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ನಡೆಸುತ್ತಿರುವ ಚುನಾವಣಾ ಆಯೋಗದ...

ಪೊಲೀಸರು ಇಷ್ಟೊಂದು ಭೀಕರ ಮತ್ತು ಕ್ರೂರವಾಗಿ ವರ್ತಿಸುವುದೇಕೆ?

ಸ್ವತಂತ್ರ ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಶಾಂತಿಯುತವಾಗಿ ಬೀದಿಗಿಳಿದ ಯುವಕ-ಯುವತಿಯರು,...