ಹೊಸ ಓದು | ರಾಜಾರಾಂ ತಲ್ಲೂರು ಅವರ ‘ಮಮ ಡೇಟಾ’: ನಮಗೆ ಡೇಟಾ ಈಗ ಯಾಕೆ ಮುಖ್ಯ?

Date:

ದಿನದ 24 ಗಂಟೆಗಳಲ್ಲಿ ನಾವು ಮಾಡುವ ನಮ್ಮ ಪ್ರತಿಯೊಂದು ಸಾಮಾಜಿಕ-ಖಾಸಗಿ ಚಟುವಟಿಕೆಗಳು, ನಿರ್ಧಾರಗಳು, ಚಲನವಲನಗಳು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮತ್ತೊಬ್ಬ ವ್ಯಕ್ತಿಗೆ 'ಡೇಟಾ' ಆಗಿ ಒದಗಿಬರಬಹುದು. ವ್ಯಾವಹಾರಿಕವಾಗಿ ಅವು ಒಬ್ಬ ವ್ಯಕ್ತಿಗೆ ಲಾಭದಾಯಕ ಸರಕುಗಳು. ಹಾಗಾಗಿ ಅವನ್ನೀಗ 'ಡೇಟಾ ಎಂಬುದು ಎರಡನೇ ಚಿನ್ನ' ಎಂದೇ ಗುರುತಿಸಲಾಗುತ್ತಿದೆ.

2027ರ ಮಧ್ಯಭಾಗಕ್ಕೆ ಪ್ರವೇಶಿಸುವ ಹೊತ್ತಿಗೆ, ದೇಶದಲ್ಲಿ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣೆ ಕಾಯಿದೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿರುತ್ತದೆ. ದೇಶದಲ್ಲಿ ಕಂಪ್ಯೂಟರ್ ಮತ್ತಿತರ ಡಿಜಿಟಲ್ ಉಪಕರಣಗಳನ್ನು ಹೊಂದಿರುವ ಮತ್ತು ವ್ಯವಹಾರ ನಡೆಸುತ್ತಿರುವ ಪ್ರತಿಯೊಂದು ಸಂಸ್ಥೆಯು ಡೇಟಾ ಉಸ್ತುವಾರಿಯಾಗಿ ಹಾಗೂ ದೇಶದ ಪ್ರತಿಯೊಬ್ಬ ಪ್ರಜೆಯೂ ಡೇಟಾ ಮೂಲ ವ್ಯಕ್ತಿಯಾಗಿ, ಈ ಕಾಯಿದೆಯ ವ್ಯಾಪ್ತಿಯಡಿಯಲ್ಲಿ ಬರಲಿದ್ದಾರೆ. ಸರಳವಾದ ಮಾತುಗಳಲ್ಲಿ ಹೇಳಬೇಕೆಂದರೆ, ಈ ಕಾಯಿದೆಯು ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದ ದಿನದಿಂದ ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅಯ್ಯೋ… ನೂರಾರು ಕಾಯಿದೆಗಳು ಬರ್ತವೆ ಹೋಗ್ತವೆ… ನಮಗೇನು ಎಂದು ನಿರ್ಲಕ್ಷಿಸುವುದು, ಈ ಕಾಯಿದೆಯ ಮಟ್ಟಿಗೆ ಸ್ವಲ್ಪ ಅಪಾಯಕಾರಿ.

- Advertisement -

ದಿನದ 24 ಗಂಟೆಗಳಲ್ಲಿ ನಾವು ಮಾಡುವ ನಮ್ಮ ಪ್ರತಿಯೊಂದು ಸಾಮಾಜಿಕ-ಖಾಸಗಿ ಚಟುವಟಿಕೆಗಳು, ನಿರ್ಧಾರಗಳು, ಚಲನವಲನ, ವಿಶ್ರಾಂತಿ, ಹಸಿವು, ನಿದ್ದೆ, ಮೈಥುನ, ಆರೋಗ್ಯ, ಅನಾರೋಗ್ಯ… ಕಡೆಗೆ ಉಸಿರಾಟ, ಹುಟ್ಟು-ಸಾವು… ಹೀಗೆ ಪ್ರತಿಯೊಂದು ಕೂಡ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮತ್ತೊಬ್ಬ ವ್ಯಕ್ತಿಗೆ ‘ಡೇಟಾ’ ಆಗಿ ಒದಗಿಬರಬಹುದು. ಈ ಡೇಟಾಗಳಲ್ಲಿ, ನಮ್ಮನ್ನು ಗುರುತಿಸಬಹುದಾದ ಖಾಸಗಿ ಮಾಹಿತಿಗಳು (ಉದಾಹರಣೆಗೆ ಹೆಸರು, ದೂರವಾಣಿ ಸಂಖ್ಯೆ, ಇಮೇಲ್, PAN/ Aadhar ಇತ್ಯಾದಿ ನೋಂದಣಿ ಸಂಖ್ಯೆಗಳು) ಅಥವಾ ನಮ್ಮತ್ತ ನೇರವಾಗಿ ಇಲ್ಲವೇ ಪರೋಕ್ಷವಾಗಿ ಬೊಟ್ಟು ಮಾಡಬಲ್ಲ ವೈಯಕ್ತಿಕ ಮಾಹಿತಿಗಳು (ಉದಾಹರಣೆಗೆ ಐಪಿ ವಿಳಾಸ, ಮನೆ ವಿಳಾಸ, ಲೊಕೇಷನ್ ಇತ್ಯಾದಿ) ಅಥವಾ ನಮ್ಮ ಕುರಿತ ಸೂಕ್ಷ್ಮ ಮಾಹಿತಿಗಳು (ಆರೋಗ್ಯ ವಿವರಗಳು, ಬ್ಯಾಂಕ್ ವಿವರಗಳು, ವಿಮಾ ವಿವರಗಳು ಇತ್ಯಾದಿ) ಒಳಗೊಂಡಿರಬಹುದು. ಈ ಡೇಟಾಗಳೆಲ್ಲ ಈಗ ಕೇವಲ ಡೇಟಾಗಳಾಗಿ ಉಳಿದಿಲ್ಲ. ಅವು ಒಬ್ಬ ವ್ಯಕ್ತಿಗೆ/ವ್ಯವಸ್ಥೆಗೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಲಾಭ-ನಷ್ಟಗಳಿಗೂ ಕಾರಣ ಆಗಬಹುದು. ವ್ಯಾವಹಾರಿಕವಾಗಿ ಅವು ಇಂದು ಲಾಭದಾಯಕ ಸರಕುಗಳು. ಹಾಗಾಗಿ ಅವನ್ನೀಗ ‘ಡೇಟಾ ಎಂಬುದು ಎರಡನೇ ಚಿನ್ನ’ ಎಂದೇ ಗುರುತಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು DPDP ಕಾಯಿದೆಯನ್ನು ಗಮನಿಸಬೇಕಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...
images 2026 07 11T131415.818 1

ಈ ಚಿನ್ನದಷ್ಟು ಅಮೂಲ್ಯವಾದ ಡೇಟಾಗಳನ್ನು ಜತನದಿಂದ ಇರಿಸಿಕೊಳ್ಳುವುದು ಡಿಜಿಟಲ್ ಯುಗದ ಬಹುದೊಡ್ಡ ಸವಾಲು. ಒಬ್ಬ ವ್ಯಕ್ತಿಯಾಗಿ ನಾವು ನಮ್ಮ ಡೇಟಾಗಳ ಖಾಸಗಿತನವನ್ನು ಕಾಪಾಡಿಕೊಳ್ಳುವುದು ನಮ್ಮ ಹೊಣೆ. ನಮ್ಮ ಡೇಟಾಗಳನ್ನು ಹೊರಗೆ ಒದಗಿಸಬೇಕಾದಾಗ ಅದರ ಉದ್ದೇಶಗಳನ್ನು ಅರಿತಿರುವುದು, ಅಗತ್ಯವಿರುವಷ್ಟೇ ಡೇಟಾ ಒದಗಿಸುವುದು ಮತ್ತು ಒದಗಿಸಿದ ಉದ್ದೇಶಕ್ಕಾಗಿ ಮಾತ್ರ ಆ ಡೇಟಾ ಬಳಕೆ ಆಗಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು, ಡೇಟಾ ಮೂಲ ವ್ಯಕ್ತಿಗಳಾಗಿ ನಮ್ಮ ಜವಾಬ್ದಾರಿ. ಈ ಜತನಕ್ಕೆ ಇನ್ನೊಂದು ಮಗ್ಗುಲು ಕೂಡ ಇದೆ. ನಮ್ಮ ಡೇಟಾಗಳನ್ನು ಸಂಗ್ರಹಿಸಿಕೊಂಡಿರುವವರು, ದಾಸ್ತಾನು ಇಟ್ಟುಕೊಂಡಿರುವವರು, ಸಂಸ್ಕರಿಸುತ್ತಿರುವವರು ಕೂಡ ತಮ್ಮಲ್ಲಿ ದಾಸ್ತಾನಿರುವ ಡೇಟಾ ಸೋರಿಹೋಗದಂತೆ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುವ, ಡೇಟಾ ಕೈಯಲ್ಲಿರುವಷ್ಟು ಕಾಲ ಅದನ್ನು ವೃತ್ತಿಪರವಾಗಿ ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾರೆ. ಅವರದು ಡೇಟಾ ಉಸ್ತುವಾರಿಗಳ, ಸಂಸ್ಕಾರಕರ ಪಾತ್ರ. ಈಗ ಡೇಟಾ ಸಂರಕ್ಷಣೆ ಕಾನೂನು ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ, ಇಲ್ಲಿಯ ತನಕ ಕೇವಲ ನೈತಿಕವಾಗಿದ್ದ ಈ ಜವಾಬ್ದಾರಿಗಳೆಲ್ಲ ಈಗ ಸಾಂವಿಧಾನಿಕ, ಕಾನೂನುಬದ್ದ ಜವಾಬ್ದಾರಿಗಳಾಗಿವೆ.

ಇದನ್ನು ಓದಿದ್ದೀರಾ?: FCRA ಅಸ್ತ್ರ ಬಳಸಿ NGOಗಳ ಕತ್ತು ಹಿಸುಕಿದ ಮೋದಿ ಆಡಳಿತ; ಆರೆಸ್ಸೆಸ್‌ ಸಂಸ್ಥೆಗಳಿಗೆ ಏಕಿಲ್ಲ ಕ್ರಮ?

ಡೇಟಾ ಬಳಕೆ ಎಷ್ಟು ಸಾಂದ್ರವಾಗಿದೆಯೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಸಾಂದ್ರವಾಗಿ ಡೇಟಾ ಅಕ್ರಮಗಳು, ಸೋರಿಕೆಯಂತಹ ಲೋಪಗಳು ಕೂಡ ನಡೆಯುತ್ತಿರುತ್ತವೆ. ವಿಶೇಷವಾಗಿ, ಈಗ ಕೋವಿಡೋತ್ತರ ಯುಗದಲ್ಲಿ ಡೇಟಾ ಬಳಸುವ ಮೂಲಕ ಅಥವಾ ವ್ಯಕ್ತಿಗಳ ಗುರುತು ಕಳ್ಳತನದ ಮೂಲಕ ವಂಚನೆ, ಅಪರಾಧ, ದುರ್ಬಳಕೆಗಳು ವ್ಯಾಪಕವಾಗಿ ಹೆಚ್ಚಿರುವುದು ಹೆಚ್ಚುಹೆಚ್ಚು ಗಮನಕ್ಕೆ ಬರತೊಡಗಿವೆ. ದೇಶದಲ್ಲಿಂದು 86% ಮನೆಗಳು ಇಂಟರ್ನೆಟ್ ಸಂಪರ್ಕ ಹೊಂದಿದ್ದು, ಡೇಟಾಗಳ ಮಹತ್ವದ ಅರಿವಿಲ್ಲದವರೆಲ್ಲರೂ ಈ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಿವೆ. ದುರದೃಷ್ಟವಶಾತ್ ಶಿಕ್ಷಿತರೇ ಈ ಅಪಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಲಿ ಆಗುತ್ತಿದ್ದಾರೆ. ಸಾಮಾಜಿಕ ಸಂಪರ್ಕಗಳೆಲ್ಲ ಡಿಜಿಟಲ್ ಆಗತೊಡಗಿದ ಮೇಲೆ, ಮನುಷ್ಯರು ಹೆಚ್ಚು ಹೆಚ್ಚು ವಲ್ನರಬಲ್ ಆಗತೊಡಗಿದ್ದಾರೆ. ಡಿಜಿಟಲ್ ಜಗತ್ತಿನಲ್ಲಿ ನಮ್ಮ ಚಲನವಲನಗಳೆಲ್ಲ ನಮ್ಮ ಹೆಜ್ಜೆ ಗುರುತುಗಳನ್ನು ಅಲ್ಲಲ್ಲಿ ಬಿಟ್ಟು ಮುಂದೆ ಸಾಗುವುದು ಇದಕ್ಕೆ ಬಲು ಮುಖ್ಯ ಕಾರಣ.

ಡೇಟಾ ಕುರಿತ ನಿರ್ಲಕ್ಷ್ಯ ಎಷ್ಟು ಅಪಾಯಕಾರಿ ಆಗಬಹುದು ಮತ್ತು ಈ ಅಪಾಯದ ಗಾತ್ರ ಯಾವ ಸ್ವರೂಪದ್ದು ಎಂಬ ಬಗ್ಗೆ ಸಣ್ಣ ತುಲನೆ ಬೇಕೆಂದರೆ, 2024ರಲ್ಲಿ, ದೇಶದ ಒಳಗೆ 36.90 ಕೋಟಿ ಡೇಟಾ ಕಳವಿನ ಪ್ರಯತ್ನಗಳನ್ನು ಗುರುತಿಸಲಾಗಿದೆ. ಅಂದರೆ ದೇಶದ ಒಳಗೆ ಪ್ರತೀ ನಿಮಿಷಕ್ಕೆ 702 (ಪ್ರತೀ ಸೆಕೆಂಡಿಗೆ ಅಂದಾಜು 11) ಡೇಟಾ ಭದ್ರತೆ ಸಂಬಂಧಿ ಅಪಾಯಗಳು ಕಾಣಿಸಿಕೊಳ್ಳುತ್ತಿವೆ1. ಈ ರೀತಿಯ ಡೇಟಾ ಕಳವು-ವಂಚನೆಯ ಪ್ರಕರಣಗಳೆಲ್ಲವೂ ಸರ್ಕಾರಕ್ಕೆ ವರದಿ ಆಗುವುದಿಲ್ಲ. ವರದಿ ಆಗಿರುವ ಗಂಭೀರ ಪ್ರಕರಣಗಳಲ್ಲಿ ಹೆಚ್ಚಿನವು ಆರ್ಥಿಕ ವಂಚನೆಗಳದು. 2024 ಒಂದೇ ವರ್ಷದಲ್ಲಿ NCRBಯು ಡೇಟಾ ಸಂಬಂಧಿ ಸೈಬರ್ ಅಪರಾಧಗಳ ಒಟ್ಟು 22,68,346 ಪ್ರಕರಣಗಳನ್ನು ವರದಿ ಮಾಡಿದೆ. ಅವುಗಳ ಪೈಕಿ, 19,18,865 ಆರ್ಥಿಕ ವಂಚನೆ ಆಗಿರುವ ಕುರಿತು ದೂರುಗಳಾಗಿದ್ದು, ಹಾಗೆ ನಷ್ಟವಾಗಿರುವ ಒಟ್ಟು ಮೊತ್ತ 22,845.73 ಕೋಟಿ ರೂ.ಗಳು2.

ಡೇಟಾ ಕುರಿತ ಆತಂಕಗಳಿಗೆ ಇನ್ನೊಂದು ಮುಖ ಕೂಡ ಇದೆ. ನಮ್ಮ ಡೇಟಾ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಇರುವುದು ನಮ್ಮನ್ನು ಆಳುವ ಸರ್ಕಾರಗಳ ಬಳಿ. ಯಾವುದೇ ಸವಲತ್ತು ಕೇಳಿ ಸರ್ಕಾರಕ್ಕೆ ನಾವು ಸಲ್ಲಿಸುವ ಅರ್ಜಿ ನಮೂನೆಗಳನ್ನು ಒಮ್ಮೆ ಗಮನಿಸಿ. ಅದರಲ್ಲಿ ನಮ್ಮ ಕುಲ-ಗೋತ್ರ, ಜಾತಿ, ಆದಾಯ, ಕುಟುಂಬ ಇತ್ಯಾದಿಗಳನ್ನೆಲ್ಲ ಜಾಲಾಡಿರುತ್ತಾರೆ. ಹಲವು ಬಾರಿ, ಯಾವುದೋ ಒಂದು ಸಣ್ಣ ಸವಲತ್ತಿಗೆ ಈ ಎಲ್ಲ ಸಂಬಂಧವೇ ಇಲ್ಲದ ಸಂಗತಿಗಳನ್ನು ಇವರು ಯಾಕಾದರೂ ಕೇಳುತ್ತಾರೋ ಅನ್ನಿಸಿದ್ದಿದೆ. ಇದು ಬಹುತೇಕ ಎಲ್ಲರ ಅಭಿಪ್ರಾಯ. ಕಂಪ್ಯೂಟರುಗಳು ಸರ್ಕಾರಿ ಕಚೇರಿಗಳನ್ನು ಪ್ರವೇಶಿಸುವ ತನಕ, ಈ ಅತಿ ಡೇಟಾದಿಂದ ಸ್ಥಳೀಯವಾದ ಕೆಲವು ಕಿರಿಕಿರಿಗಳು ಆಗಿದ್ದಿರಬಹುದೇ ಹೊರತು, ದೊಡ್ಡ ಸಮಸ್ಯೆಗಳೇನಾಗಿರಲಿಲ್ಲ. ಸರ್ಕಾರಿ ಕಚೇರಿಗಳು ಡಿಜಿಟೈಸ್ ಆಗಿ, ಇಂಟರ್ನೆಟ್ ಜಾಲದ ಮೂಲಕ ಪರಸ್ಪರ ಸಂಪರ್ಕಿತ ಆಗತೊಡಗಿದಂತೆಲ್ಲ, ಈ ಅತಿ ಡೇಟಾ ನಮ್ಮ ನಿಯಂತ್ರಣ ತಪ್ಪಿ ಬಳಕೆ ಆಗತೊಡಗಿರುವುದು ನಮ್ಮ ಗಮನಕ್ಕೆ ಬರತೊಡಗಿದೆ. ಅದರ ಫಲವಾಗಿಯೇ ದೇಶದಲ್ಲಿ ಡೇಟಾ ಕಾನೂನಿನ ಆವಶ್ಯಕತೆಯ ಬಗ್ಗೆ ಚರ್ಚೆ ಆರಂಭಗೊಂಡದ್ದು. ಡೇಟಾ ವಿಶ್ಲೇಷಣೆ, ಕೃತಕ ಬುದ್ಧಿಮತ್ತೆ (AI), ಇಂಟರ್ನೆಟ್ ಆಫ್ ಥಿಂಗ್ಸ್ (IoT), ಮುಖಗುರುತು ಪತ್ತೆ ತಂತ್ರಜ್ಞಾನ, ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಟರ್ (DPI) ಎಂದೆಲ್ಲ ಹೊಸಹೊಸ ಆವಿಷ್ಕಾರಗಳು ನಮ್ಮ ಸಾಮಾಜಿಕ ಬದುಕನ್ನು ಪ್ರವೇಶಿಸಿದ ಬಳಿಕವಂತೂ, ಸಾಮಾನ್ಯ ಪ್ರಜೆ ಎಂಬ ಡೇಟಾ ಮೂಲ ವ್ಯಕ್ತಿಯ ಖಾಸಗಿ ಡೇಟಾಗಳು ಎಲ್ಲೆಲ್ಲಿಗೆ ತಲುಪಿವೆ? ಏನಕ್ಕೆಲ್ಲ ಬಳಕೆ ಆಗುತ್ತಿವೆ? ಯಾರ್‍ಯಾರು ಈ ಡೇಟಾಗಳನ್ನು ಬಳಸಿ ನಮ್ಮ ದೈನಂದಿನ ಬದುಕನ್ನು ನಿಯಂತ್ರಿಸುತ್ತಿದ್ದಾರೆ? ಎಂಬುದನ್ನೆಲ್ಲ ಊಹಿಸುವುದೂ ಕಷ್ಟ ಇದೆ.

ಇದನ್ನು ಓದಿದ್ದೀರಾ? ದೇಶದ ರಿಯಲ್ ಎಸ್ಟೇಟ್ ಮೇಲೆ ಯುದ್ಧದ ಕಾರ್ಮೋಡ: 7 ನಗರಗಳಲ್ಲಿ ವಸತಿ ಮಾರಾಟ ಕುಸಿತ

ಸರ್ಕಾರಗಳು ತನ್ನ ಪ್ರಜೆಗಳ ಮೇಲೆ ಎಷ್ಟು ಹಿಡಿತ ಹೊಂದಿರಬೇಕು? ಎಂಬ ಪ್ರಶ್ನೆ ಈಗ ಹೊಸ ಆಯಾಮಗಳೊಂದಿಗೆ ಎದ್ದುನಿಂತಿದೆ. ಪ್ರಜೆಗಳ ಮೇಲೆ ಕಣ್ಗಾವಲು ಇರಿಸುವ, ಸರ್ಕಾರದ ನೀತಿಗಳನ್ನು ಟೀಕಿಸುವವರ, ವಿಮರ್ಶಿಸುವವರ ಬೆನ್ನು ಹತ್ತುವ, ಸವಲತ್ತುಗಳನ್ನು ನೀಡುವಲ್ಲಿ ತನ್ನ ಪರ-ವಿರುದ್ಧ ಇರುವವರ ನಡುವೆ ಭೇದಭಾವ ತೋರುವ, ಚುನಾವಣೆಗಳ ವೇಳೆ ಮತದಾರರ ಮೇಲೆ ನಿರ್ದಿಷ್ಟ ಗುರಿಯೊಂದಿಗೆ ವೈಯಕ್ತಿಕ ನೆಲೆಯಲ್ಲಿ, ಸಾಮ-ದಾನ-ಭೇದ-ದಂಡಗಳಂತಹ ಚತುರೋಪಾಯಗಳನ್ನು ಬಳಸಿ ಪ್ರಚಾರ ನಡೆಸುವ… ಹೀಗೆ ಅಸಂಖ್ಯ ಅವಕಾಶಗಳನ್ನು ಹೊಸ ಡೇಟಾ ತಂತ್ರಜ್ಞಾನಗಳು ತೆರೆದಿವೆ. ಇವೆಲ್ಲವೂ ಸಂವಿಧಾನಬಾಹಿರ, ಅನೈತಿಕ ಅವಕಾಶಗಳೇ. ಈ ಎಲ್ಲ ಅವಕಾಶಗಳನ್ನು ಒಂದು ಸರ್ಕಾರ ಎಷ್ಟರ ಮಟ್ಟಿಗೆ ತನ್ನ ಆಡಳಿತಕ್ಕೆ ಬಳಸಿಕೊಳ್ಳುತ್ತಿದೆ ಎಂಬುದು ಪಾರದರ್ಶಕವಾಗಿಲ್ಲದಿದ್ದರೆ, ದೇಶ ಪ್ರಜಾಪ್ರಭುತ್ವವಾಗಿ ಉಳಿಯುವುದು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಡೇಟಾಗಳ ಕುರಿತು ಅರಿವು ಬಹಳ ಮುಖ್ಯ.

data 0

ಸರ್ಕಾರಗಳು ಮಾತ್ರವಲ್ಲದೇ, ಖಾಸಗಿ ವಾಣಿಜ್ಯ ಸಂಸ್ಥೆಗಳೂ ಇದೇ ರೀತಿಯಲ್ಲಿ ತಮ್ಮ ಗ್ರಾಹಕರ ಪ್ರೊಫೈಲಿಂಗ್ ಮಾಡುವುದು, ಅವರನ್ನು ಗುರಿಯಾಗಿರಿಸಿಕೊಂಡು ಜಾಹೀರಾತುಗಳನ್ನು ಅವರ ಮುಂದಿಡುವುದು ಇತ್ಯಾದಿ ಅನೈತಿಕ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಸಾಧ್ಯ ಇದೆ. ಇಂತಹ ಒಂದು ಕಥೆಯನ್ನು ಈ ಲೇಖಕ 2017ರಲ್ಲಿ ಫೇಸ್‌ಬುಕ್ ಪೋಸ್ಟ್ ಒಂದರ ಮೂಲಕ ಹಂಚಿಕೊಂಡಿದ್ದು, ಅದನ್ನು ಕೆಳಗೆ ನೀಡಲಾಗಿದೆ.

  • ಡಿಜಿಟಲ್ ಜಗತ್ತಿನ ಭಯಾನಕ ಕಥೆಯೊಂದನ್ನು (ಮುಂದುವರಿದ ದೇಶವೊಂದರ) ಈಗಷ್ಟೇ ಕೇಳಿದೆ. ಹಂಚಿಕೊಳ್ಳುತ್ತಿದ್ದೇನೆ. ಇದು ಕಥೆಯೋ ಸತ್ಯ ಘಟನೆಯೋ ಗೊತ್ತಿಲ್ಲ. ಆದರೆ, ಸತ್ಯವಾಗುವ ಎಲ್ಲ ಸಾಧ್ಯತೆಗಳಿರುವ ಕಥೆ ಇದು: ತನ್ನ ಹೈಸ್ಕೂಲು ಪ್ರಾಯದ ಪುಟ್ಟ ಮಗಳ ಆನ್‌ಲೈನ್ ಡೆಬಿಟ್ ಕಾರ್ಡ್ ಅಕೌಂಟಿನಲ್ಲಿ ಗರ್ಭನಿರೋಧಕ ಮಾತ್ರೆಗಳ ಜಾಹೀರಾತು ಕಂಡು, ಆ ತಂದೆಗೆ ಅಚ್ಚರಿ, ಕಿರಿಕಿರಿ ಎರಡೂ ಆಗಿತ್ತು. ಯಾಕೆ ಎಂದು ಮೂಲಕ್ಕೆ ಹೋಗಿ ಹುಡುಕಿದಾಗ, ಆ ತಂದೆಗೆ ಆಘಾತ ಕಾದಿತ್ತು. ಅದೇನೆಂದರೆ, ಆತನ ಅಪ್ರಾಪ್ತ ವಯಸ್ಕ ಮಗಳು ಗರ್ಭಿಣಿ ಆಗಿದ್ದದ್ದು, ಆತನಿಗಿಂತ ಮೊದಲು ಆಕೆಯ ಡೆಬಿಟ್‌ ಕಾರ್ಡ್ ಅಕೌಂಟ್ ಹೊಂದಿರುವ ಕಂಪನಿಗೆ ಗೊತ್ತಾಗಿತ್ತು!
  • ಆ ಪುಟ್ಟ ಹುಡುಗಿಯ ಆನ್‌ಲೈನ್ ಖರೀದಿಗಳ ಟ್ರ್ಯಾಕ್ ಇಟ್ಟುಕೊಂಡಿದ್ದ ಡೆಬಿಟ್‌ ಕಾರ್ಡ್ ಕಂಪನಿ, ಆಕೆಯ ಖರೀದಿಗಳ ಆಧಾರದ ಮೇಲೆ, ಆಕೆ ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಿಣಿ ಆಗಿದ್ದಾಳೆಂದು ಕಂಡುಕೊಂಡಿತ್ತು; ಆಕೆಯ ಸಹಾಯಕ್ಕೆಂದು ಗರ್ಭನಿರೋಧಕ ಮಾತ್ರೆಗಳ ಜಾಹೀರಾತನ್ನು ಆಕೆಯ ಕಣ್ಣಿಗೆ ರಾಚುವಂತೆ ಆಕೆಯ ಅಕೌಂಟಿನ ಪುಟದಲ್ಲಿ ಝಳಪಿಸುತ್ತಿತ್ತು.

ಭಾರತದಲ್ಲೀಗ ಆಧಾರ್ ಸಂಖ್ಯೆಯನ್ನು ಕೇಂದ್ರಬಿಂದುವಾಗಿ ಇರಿಸಿಕೊಂಡು, ಡಿಜಿಟಲ್ ಇಂಡಿಯಾ ಎಂಬ ವಿಸ್ತೃತ ಆಡಳಿತ ವ್ಯವಸ್ಥೆಯನ್ನು ಹಂತಹಂತವಾಗಿ ಜಾರಿಗೆ ತರಲಾಗುತ್ತಿದೆ. 2015ರ ಜುಲೈ ಒಂದರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿರುವ ಈ ವ್ಯವಸ್ಥೆಯಡಿ, ಭಾರತ ಸರ್ಕಾರದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ನಾಗರಿಕರ ಜೀವನಮಟ್ಟ ಸುಧಾರಣೆಗಾಗಿ, ಡಿಜಿಟಲ್ ಆರ್ಥಿಕತೆಯ ವಿಸ್ತರಣೆಗಾಗಿ, ಹೂಡಿಕೆ ಮತ್ತು ಉದ್ಯೋಗದ ಅವಕಾಶಗಳನ್ನು ರೂಪಿಸುವುದಕ್ಕಾಗಿ ಮತ್ತು ಜಾಗತಿಕ ಮಟ್ಟದ ಡಿಜಿಟಲ್ ತಂತ್ರಜ್ಞಾನ ಸಾಮರ್ಥ್ಯಗಳನ್ನು ಹೊಂದುವುದಕ್ಕಾಗಿ ಪ್ರಯತ್ನಗಳನ್ನು ಆರಂಭಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನ ಸೇವಾ ಕೇಂದ್ರಗಳು (CSC), ಮೊಬೈಲ್ ಫೋನ್ ಮೂಲಕ ಸರ್ಕಾರಿ ಸೇವೆಗಳು (UMANG), MyGov ಇತ್ಯಾದಿ ಹತ್ತುಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಟರ್ (DPI) ಹೆಸರಿನಲ್ಲಿ ಇಂಡಿಯಾ ಸ್ಪಾಕ್ ಎಂಬ ಡೇಟಾಪದರಗಳನ್ನು ಎಲ್ಲ ರಂಗಗಳಲ್ಲಿ ರೂಪಿಸಲಾಗುತ್ತಿದೆ. ಒಟ್ಟಿನಲ್ಲಿ, ಒಬ್ಬ ವ್ಯಕ್ತಿಯ ಆಧಾರ್ ನಂಬರ್ ಬಳಸಿಕೊಂಡು, ಆ ವ್ಯಕ್ತಿಯ ಸಂಪೂರ್ಣ ಜಾತಕವನ್ನು ಕ್ಷಣಾರ್ಧದಲ್ಲಿ ಪಡೆಯಬಲ್ಲ ವ್ಯವಸ್ಥೆಯೊಂದು ರೂಪುಗೊಳ್ಳುತ್ತಿದೆ3.

ಇಂತಹದೊಂದು ವ್ಯವಸ್ಥೆ ಪಾರದರ್ಶಕವೂ, ಉತ್ತರದಾಯಿಯೂ ಆಗಿದ್ದು, ಸಾಂವಿಧಾನಿಕ ಆವಶ್ಯಕತೆಗಳನ್ನೆಲ್ಲ ಪೂರೈಸುವಂತಿದ್ದರೆ ಅದಕ್ಕೆ ಯಾರದೇ ತಕರಾರು ಇರಲಾರದು. ಸರ್ಕಾರವು ಡೇಟಾ ಖಾಸಗಿತನದ ನಿರ್ವಹಣೆಗೆಂದು ತಂದಿರುವ ಈ ವ್ಯವಸ್ಥೆ ಅಪಾರದರ್ಶಕವಾಗಿದ್ದು, ಸ್ವತಃ ಸರ್ಕಾರ ತನ್ನನ್ನು ತಾನೇ ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿರಿಸಿಕೊಂಡಾಗ ಅದು ಹಲವಾರು ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತುತ್ತದೆ. ಒಂದು ಸರ್ಕಾರಕ್ಕೆ ತನ್ನ ಪ್ರಜೆಗಳ ಬಗ್ಗೆ ಇಷ್ಟೆಲ್ಲ ಮಾಹಿತಿಗಳು ಯಾಕೆ ಬೇಕು? ಬೇಕೆಂದಾದರೆ ಅದಕ್ಕೆಂದು ಮಾಡಿಕೊಂಡಿರುವ ವ್ಯವಸ್ಥೆ ಯಾಕೆ ಅಪಾರದರ್ಶಕವಾಗಿರಬೇಕು? ಎಂಬ ಜಿಜ್ಞಾಸೆಗಳು ಮೂಡುತ್ತವೆ. ಪ್ರಜೆಗಳ ಮೇಲೆ ಅಗತ್ಯಕ್ಕಿಂತ ಹೆಚ್ಚು ಕಣ್ಗಾವಲು ಇರಿಸುವ ವ್ಯವಸ್ಥೆಯೊಂದು ಆರೋಗ್ಯಕರ ಪ್ರಜಾತಂತ್ರವಾಗಿ ಉಳಿಯುವುದು ಸಾಧ್ಯವಾಗದು. ಸರ್ಕಾರದಲ್ಲಿರುವ ಅಥವಾ ಸರ್ಕಾರದ ಚುಕ್ಕಾಣಿ ಹಿಡಿದಿರುವ ರಾಜಕೀಯ ಪಕ್ಷಗಳು, ಅಧಿಕಾರಶಾಹಿ ವ್ಯವಸ್ಥೆಗಳು ಈ ರೀತಿಯ ಖಾಸಗಿ ಡೇಟಾಗಳನ್ನು ಹೊಂದಿದಾಗ, ಅವುಗಳು ಬಳಕೆಯಷ್ಟೇ ದುರ್ಬಳಕೆ ಕೂಡ ಆಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

DPDP ಕಾಯಿದೆಯ ಪರಿಣಾಮಗಳು

ಭಾರತದ ರಾಷ್ಟ್ರಪತಿಗಳು 2023ರ ಆಗಸ್ಟ್ 11ರಂದು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣೆ ಕಾಯಿದೆ (DPDP Act) 2023ಕ್ಕೆ ಅಂಕಿತ ಹಾಕುವ ಮೂಲಕ ಅದನ್ನು ಜಾರಿಗೊಳಿಸಿದ್ದಾರೆ. ಅದಾಗಿ 27 ತಿಂಗಳುಗಳ ಬಳಿಕ ಭಾರತ ಸರ್ಕಾರವು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣೆ (DPDP) ನಿಯಮಗಳು 2025ನ್ನು ನವೆಂಬರ್ 14, 2025ರಂದು ಪ್ರಕಟಿಸಿದೆ. ಈ ನಿಯಮಗಳ ಅನುಷ್ಠಾನಕ್ಕಾಗಿ ಒಟ್ಟು 18 ತಿಂಗಳ ಅವಧಿ ನೀಡಲಾಗಿದ್ದು, 2027 ಮೇ ಹೊತ್ತಿಗೆ, ಕಾಯಿದೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ.

DPDP ಕಾಯಿದೆ ಇಂದಿನ ಡಿಜಿಟಲ್ ಯುಗದಲ್ಲಿ, ಪ್ರತಿಯೊಬ್ಬ ಪ್ರಜೆಯ ಮೇಲೂ ಪರಿಣಾಮ ಬೀರಲಿರುವ ಕಾಯಿದೆ ಆಗಲಿದೆ ಎಂಬುದರಲ್ಲಿ ಯಾವುದೇ ಸಂಶಯ ಬೇಡ. ವಿಶೇಷವಾಗಿ ಡೇಟಾಗಳನ್ನು ಸಂಗ್ರಹಿಸುವ ಎಲ್ಲ ಬಗೆಯ ಸಂಸ್ಥೆಗಳು, ತಮ್ಮ ಡೇಟಾ ನಿರ್ವಹಣೆ ವ್ಯವಸ್ಥೆಯನ್ನು DPDP ಕಾಯಿದೆಗೆ ಅನುಗುಣವಾಗಿ ಪರಿವರ್ತಿಸಿಕೊಳ್ಳುವುದು ಸದ್ಯಕ್ಕಿರುವ ಬಲುದೊಡ್ಡ ಸವಾಲು. ಕಂಪ್ಯೂಟರ್ ಹೊಂದಿರುವ, ಸಾರ್ವಜನಿಕವಾಗಿ ವ್ಯವಹಾರ ನಡೆಸುತ್ತಿರುವ ಪ್ರತಿಯೊಂದು ಸಂಸ್ಥೆ, ವ್ಯಕ್ತಿ ಕೂಡ ಒಂದಲ್ಲ ಒಂದು ರೀತಿಯಲ್ಲಿ ತನ್ನದಲ್ಲದ, ಪರರ ವೈಯಕ್ತಿಕ ಡೇಟಾ ಹೊಂದಿರುತ್ತಾರೆ. ಆ ಡೇಟಾಗಳನ್ನು ಅವರು ಇನ್ನು ಮುಂದೆ DPDP ಕಾಯಿದೆಯ ಅಡಿಯಲ್ಲಿ ಬಳಸಿಕೊಳ್ಳಬೇಕಾಗುತ್ತದೆ. ವ್ಯಾವಹಾರಿಕ ವಲಯದಲ್ಲಿ ಇದು ಎಷ್ಟು ಸಂಕೀರ್ಣವಾದ ಮಗ್ಗುಲು ಬದಲಾಯಿಸುವಿಕೆ ಆಗಲಿದೆ ಎಂಬುದಕ್ಕೆ ಒಂದು ನಿದರ್ಶನ ನೀಡುತ್ತೇನೆ.

ಇದನ್ನು ಓದಿದ್ದೀರಾ?: ಕೃತಕ ಬುದ್ಧಿಮತ್ತೆಯೆಂಬ ಹೊಸ ಗುಲಾಮಗಿರಿ: ‘ಎಐ’ಗೆ ಬೇಕು ಸಾಂವಿಧಾನಿಕ ಬಲ

ದೇಶದ ಒಳಗಿನ ವ್ಯವಹಾರ ಸಂಸ್ಥೆಗಳನ್ನು ತೆಗೆದುಕೊಳ್ಳಿ. ಇಲ್ಲಿರುವ ಪ್ರತೀ 100 ಕಂಪನಿಗಳಲ್ಲಿ, 95 ಕಂಪನಿಗಳು ಅತಿಸಣ್ಣ (ಮೈಕ್ರೋ) ಕಂಪನಿ ವರ್ಗಕ್ಕೆ ಸೇರಿದವು. ಉಳಿದ 4 ಕಂಪನಿಗಳು MSME ವರ್ಗಕ್ಕೆ ಸೇರಿದರೆ, ಒಂದು ಕಂಪನಿ ಮಾತ್ರ ಬೃಹತ್ ಕಂಪನಿ ಆಗಿರುತ್ತದೆ. ಈ ಪ್ರತಿಯೊಂದು ಕಂಪನಿ ಕೂಡ, ತಾನು ಸಂಗ್ರಹಿಸುವ ಪ್ರತಿಯೊಂದು ವೈಯಕ್ತಿಕ ಸ್ವರೂಪದ ಡೇಟಾಕ್ಕೆ, ಡೇಟಾ ಮೂಲ ವ್ಯಕ್ತಿಯ ಒಪ್ಪಿಗೆಯನ್ನು ಪಡೆಯಬೇಕು. ಒಪ್ಪಿಗೆ ಪಡೆಯುವಾಗ ತನ್ನ ಉದ್ದೇಶವನ್ನು ವಿವರಿಸಬೇಕು. ಹಾಗೆ ಒಪ್ಪಿಗೆ ಪಡೆದಿರುವುದಕ್ಕೆ ದಾಖಲೆಗಳನ್ನು ಹೊಂದಿರಬೇಕು. ತಾನು ಪಡೆದ ಡೇಟಾ ಸೋರಿ ಹೋಗದಂತೆ, ಕದ್ದು ಹೋಗದಂತೆ, ದುರ್ಬಳಕೆ ಆಗದಂತೆ ನಿರ್ವಹಿಸಬೇಕು. ಅಕಸ್ಮಾತ್ ಡೇಟಾ ಸೋರಿಕೆ ಆದರೆ, ಅದನ್ನು ಡೇಟಾ ಮಂಡಳಿಯ ಗಮನಕ್ಕೆ ತರಬೇಕು. ಯಾವುದೇ ಹಂತದಲ್ಲಿ ಡೇಟಾ ಮೂಲ ವ್ಯಕ್ತಿ ತನ್ನ ಡೇಟಾವನ್ನು ಬಳಸುವುದಕ್ಕೆ ನೀಡಿದ ಒಪ್ಪಿಗೆಯನ್ನು ಹಿಂದೆಪಡೆದರೆ, ಆ ವ್ಯಕ್ತಿಯ ಡೇಟಾ ಬಳಕೆಯನ್ನು ನಿಲ್ಲಿಸಬೇಕು. ತನ್ನ ಉದ್ದೇಶ ಪೂರ್ತಿ ಆದ ಬಳಿಕ, ಬಳಸಿದ ಡೇಟಾವನ್ನು ಅಳಿಸಿಹಾಕಬೇಕು. ಈ ಎಲ್ಲ ದಾಖಲೆಗಳನ್ನು ಕಾನೂನು ಸೂಚಿಸಿದಷ್ಟು ಕಾಲ ಕಾಯ್ದಿಟ್ಟುಕೊಳ್ಳಬೇಕು. ಮಾತ್ರವಲ್ಲದೇ, ಈ ಪ್ರತಿಯೊಂದು ಹಂತವನ್ನು ಸಮರ್ಪಕವಾಗಿ ನಿರ್ವಹಿಸಿರುವ ಬಗ್ಗೆ ದಾಖಲೆಗಳನ್ನು ಹೊಂದಿರಬೇಕು. ತನ್ನ ಡೇಟಾ ನಿರ್ವಹಣೆ, ದಾಸ್ತಾನು ವ್ಯವಸ್ಥೆ ಸಮರ್ಪಕವಾಗಿದೆ ಎಂಬ ಬಗ್ಗೆ ಸಂಸ್ಥೆಯು ಕಾಲಕಾಲಕ್ಕೆ ವಿಶ್ಲೇಷಣೆ ನಡೆಸಿಕೊಳ್ಳಬೇಕು… ಇವೆಲ್ಲ DPDP ಕಾಯಿದೆಯ ಪಾಲನೆಗೆ ಇರುವ ಮೂಲ ತತ್ವಗಳು.

ಭಾರತದಲ್ಲಿರುವ ಅಗಾಧ ಸಂಖ್ಯೆಯ ಅತಿಸಣ್ಣ, ಸಣ್ಣ, ಮಧ್ಯಮ ಗಾತ್ರದ ಕಂಪನಿಗಳು ಡೇಟಾ ನಿರ್ವಹಣೆಗೆ ಸಮಗ್ರ ವ್ಯವಸ್ಥೆಯನ್ನು ಹೊಂದುವುದಕ್ಕೆ ಹಲವು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ, ಡೇಟಾ ನಿರ್ವಹಣೆಗೆ ಸಿಬ್ಬಂದಿ ನೇಮಿಸಬೇಕಾಗುತ್ತದೆ, ವ್ಯವಸ್ಥೆಗೆಂದು ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ, ಕಾನೂನು-ಐಟಿ ಪರಿಣತರ ಸೇವೆಗಳನ್ನು ಪಡೆಯಬೇಕಾಗುತ್ತದೆ. ಇವಕ್ಕೆಲ್ಲ ತಗಲುವ ವೆಚ್ಚಗಳು ದೊಡ್ಡ ಸವಾಲಾಗಲಿವೆ. ಈ ನಿಯಮಗಳ ಉಲ್ಲಂಘನೆಗೆ ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸಲು ಅವಕಾಶಗಳಿರುವುದರಿಂದ, ಇವನ್ನು ನಿರ್ಲಕ್ಷಿಸುವಂತೆಯೂ ಇಲ್ಲ. ಡೇಟಾ ಸಂಗ್ರಹಗಳು ಪ್ರತೀ ವ್ಯವಹಾರಕ್ಕೆ ವಿಭಿನ್ನ ಸ್ವರೂಪದ್ದಾಗಿರುವುದರಿಂದ, ಅವುಗಳ ನಿರ್ವಹಣೆಗೆ ದಾಖಲೆಗಳನ್ನು ಸಿದ್ಧಪಡಿಸುವುದು, ವ್ಯವಸ್ಥಿತಗೊಳಿಸುವುದು, ಮ್ಯಾಪಿಂಗ್‌ ಮಾಡಿಕೊಳ್ಳುವುದು… ಎಲ್ಲವೂ ಕೂಡ ಸವಾಲಿನ ಸಂಗತಿಗಳೇ ಆಗಲಿವೆ. ಅದಕ್ಕಾಗಿ ಹೊರಗಿನ ಪರಿಣತರ ಸೇವೆಗಳನ್ನು ಪಡೆಯುವುದು, ಕಾಲಕಾಲಕ್ಕೆ ತಮ್ಮ ವ್ಯವಸ್ಥೆಗಳು ಸಮರ್ಪಕವಾಗಿವೆ ಮತ್ತು ಅಪ್-ಟು-ಡೇಟ್ ಆಗಿವೆ ಎಂದು ಖಚಿತಪಡಿಸಿಕೊಳ್ಳಲು ಆಡಿಟ್‌ಗೆ ಒಳಗಾಗುವುದು… ಎಲ್ಲವೂ ಸಾಕಷ್ಟು ಶ್ರಮ ಹಾಗೂ ವೆಚ್ಚವನ್ನು ಬೇಡುವ ಸಂಗತಿಗಳೇ ಆಗಿವೆ. ಈ ಎಲ್ಲ ವ್ಯವಸ್ಥೆಗಳನ್ನು ಮುಂದಿನ 18 ತಿಂಗಳುಗಳ ಒಳಗೆ ಪೂರೈಸಿಕೊಳ್ಳುವ ಸವಾಲು ಎಲ್ಲ ವ್ಯವಹಾರಗಳಿಗೂ ಇವೆ. ಇದಲ್ಲದೇ, ಜೊತೆಜೊತೆಗೇ ಕಾರ್ಮಿಕ ಕಾನೂನುಗಳೂ ಬದಲಾಗಿರುವುದರಿಂದ ಆ ಕಾನೂನಿನ ಪಾಲನೆಯ ಹೊರೆ ಕೂಡ ಎಲ್ಲ ವ್ಯವಹಾರಗಳ ಮೇಲೆ ಇದೆ.

data1

ಸಾಮಾನ್ಯವಾಗಿ ದೊಡ್ಡ ಗಾತ್ರದ ಕಂಪನಿಗಳು, ಅದರಲ್ಲೂ ಟೆಕ್ ಕಂಪನಿಗಳು, ಐರೋಪ್ಯ ರಾಷ್ಟ್ರಗಳಿಗೆ ರಫ್ತು ಮಾಡುವ ಕಂಪನಿಗಳು, ಈಗಾಗಲೇ GDPR ನಿಯಮಗಳ ಪಾಲನೆ ಮಾಡುತ್ತಿರುವುದರಿಂದ, ಅವರಿಗೆ ಈ ಕಾನೂನು ಪಾಲನೆ ಹೆಚ್ಚು ಸಮಸ್ಯೆ ಉಂಟುಮಾಡದು. ಆದರೆ ಆ ಸವಲತ್ತು ಇಲ್ಲದ ಸಣ್ಣ ಕಂಪನಿಗಳನ್ನು ಈ ಹೊಸ ನಿಯಮಗಳು ಕಂಗೆಡಿಸಲಿವೆ. ದೊಡ್ಡ-ಸಣ್ಣ ಎರಡೂ ಗಾತ್ರದ ಕಂಪನಿಗಳಿಗೆ, ವ್ಯಕ್ತಿಗಳಿಗೆ- ಎಲ್ಲರಿಗೂ 18 ತಿಂಗಳ ಅವಕಾಶ ನೀಡಿ, ಕಾನೂನು ಪಾಲಿಸುವ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹೇಳಲಾಗಿದೆ. ಇದರ ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜೆ ಕೂಡ ಡೇಟಾ ಮೂಲ ವ್ಯಕ್ತಿಯಾಗಿ, ತನ್ನ ಡೇಟಾಗಳನ್ನು ತಾನು ಯಾರಿಗೆ ನೀಡಿದ್ದೇನೆ? ಅವರು ಅದನ್ನು ಬಳಸುವುದಕ್ಕೆ ತನ್ನ ಒಪ್ಪಿಗೆ ಪಡೆದಿದ್ದಾರೆಯೇ? ಒಪ್ಪಿಗೆಯ ವ್ಯಾಪ್ತಿ ಮೀರಿ ತನ್ನ ಡೇಟಾ ಬಳಕೆ ಆಗಿದೆಯೆ? ತಾನು ಡೇಟಾ ಬಳಕೆಗೆ ಒಪ್ಪಿಗೆ ಹಿಂದೆಗೆದುಕೊಂಡಿದ್ದೇನೆಯೆ? ಹಿಂದೆಗೆದುಕೊಂಡ ಬಳಿಕವೂ ತನ್ನ ಡೇಟಾ ಬಳಕೆ ಆಗಿದೆಯೆ? ತನ್ನ ಡೇಟಾ ಒಪ್ಪಿಗೆ ಪಡೆದಿರುವ ಮಧ್ಯಂತರಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಯೆ? ಇಲ್ಲ ಎಂದಾದರೆ ಬೇರೆ ಯಾವ ಮಧ್ಯಂತರಿಗೆ ತನ್ನ ಡೇಟಾ ನಿರ್ವಹಣೆಯನ್ನು ವರ್ಗಾಯಿಸಬೇಕು? ಅದಕ್ಕೆ ತನಗೆ ತಗಲುವ ವೆಚ್ಚ ಎಷ್ಟು?… ಹೀಗೆ ಹಲವಾರು ಪ್ರಶ್ನೆಗಳನ್ನು ಉತ್ತರಿಸಿಕೊಳ್ಳಬೇಕಾಗುತ್ತದೆ.

ಇದನ್ನು ಓದಿದ್ದೀರಾ?: ಮೈಂಡ್‌ ಬ್ಲೋಯಿಂಗ್‌! ಇಡೀ ಜಗತ್ತಿನ ಜನ 1 ವರ್ಷ ಮಾಡುವ ಲೆಕ್ಕ ಈ ʼಮಹಾಯಂತ್ರʼಕ್ಕೆ 1 ಸೆಕೆಂಡಿನ ಕೆಲಸ

ಒಟ್ಟಿನಲ್ಲಿ, DPDP ಕಾಯಿದೆ ಜಾರಿಗೆ ಬಂದಿದೆ; ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಪ್ರಕಟಿಸಲಾಗಿದೆ. ಈಗ ಅನುಷ್ಠಾನ ಆಗುವುದು ಬಾಕಿ ಇದೆ. ಪಾರದರ್ಶಕತೆ, ಸೃಜನಶೀಲತೆ ಹಾಗೂ ಉತ್ತರದಾಯಿತ್ವಗಳು ಮೇಲೈಸಿದಾಗ ಮಾತ್ರ ಈ ಕಾಯಿದೆಯ ಉದ್ದೇಶ ಸಾಧನೆ ಆಗಲಿದೆ. ಪ್ರತಿದಿನವೂ ಬದಲಾಗುತ್ತಿರುವ ತಂತ್ರಜ್ಞಾನ ವಲಯದ ಜೊತೆ ಸಮದಂಡಿಯಾಗಿ ವೈಯಕ್ತಿಕ ಹಿತಾಸಕ್ತಿಗಳನ್ನೂ ಕಾಪಾಡಿಕೊಂಡು ಹೋಗುವ ಸವಾಲು ಈಗ ಸರ್ಕಾರ ಮತ್ತು ಪ್ರಜೆ ಇಬ್ಬರ ಮೇಲೂ ಇದೆ.

1 India Cyber Threat report 2025 (Data Security Council of India)
2 ಲೋಕಸಭೆಯ ಚುಕ್ಕೆರಹಿತ ಪ್ರಶ್ನೆ ಸಂಖ್ಯೆ 344 (22, ಜುಲೈ, 2025)
3 PIB Release ID: 1847837

(ರಾಜಾರಾಂ ತಲ್ಲೂರು ಅವರ ‘ಮಮ ಡೇಟಾ’ ಕೃತಿಯಿಂದ ಆಯ್ದ ಭಾಗ)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ ಬಿದ್ದ ಸಮುದಾಯ ಭವನ

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ...

‌ಬೀದರ್‌ | ಮತದಾನ ಹಕ್ಕು ಕಸಿಯುವ ʼಎಸ್‌ಐಆರ್ʼ ಪ್ರಕ್ರಿಯೆ ವಿರೋಧಿಸಿ ಅ.12ರಂದು ಪ್ರತಿಭಟನೆ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ,...

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ʼವೋಟ್‌ ಚೋರಿʼ ಆರೋಪಕ್ಕೆ ಪುರಾವೆ ಅಗತ್ಯʼ: ಚುನಾವಣಾ ಆಯೋಗದ ಪರ 124 ನಿವೃತ್ತ ಅಧಿಕಾರಿಗಳ ಪತ್ರ

ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳು ಅಗತ್ಯ ಎಂದು ಪ್ರತಿಪಾದಿಸಿರುವ 124...