ಇತ್ತೀಚೆಗೆ ಬಿಡುಗಡೆಯಾದ ಹಿರಿಯ ಲೇಖಕ ಶೂದ್ರ ಶ್ರೀನಿವಾಸ ಅವರ 'ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ' ಕೃತಿಯಿಂದ ಆಯ್ದ ಭಾಗ... ಈದಿನ ಓದುಗರಿಗಾಗಿ.
ಒಂದು ದಿನವಾದರೂ ಗೌಡರು ಮುಖ್ಯಮಂತ್ರಿಯಾಗಬೇಕು
1972ರ ಕಾಲಘಟ್ಟ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿಚಾರ ಸಂಕಿರಣಗಳು ಸುದ್ದಿಯಾಗಿದ್ದ ಸಮಯ. ಮೂರು ದಿವಸ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್‌ನಲ್ಲಿ ನಡೆಯುತ್ತಿತ್ತು. ಕನ್ನಡದ ಬಹುಮುಖ್ಯ ಲೇಖಕರೆಲ್ಲ ಭಾಗವಹಿಸಿದ್ದರು. ಆಗ ನಾಡಿನ ರಾಜಕಾರಣದಲ್ಲಿ ನಾನಾ ಪಲ್ಲಟಗಳು ನಡೆಯುತ್ತಿದ್ದ ಕಾಲ. ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲರನ್ನು ಬದಲಾಯಿಸಿ ಬೇರೊಬ್ಬರನ್ನು ಅಲ್ಲಿ ಕೂರಿಸುವ ಸುದ್ದಿ ಗಾಢವಾಗಿ ಹರಡಿತ್ತು. ಇದೇ ಸಮಯದಲ್ಲಿ ಗೋಪಾಲಕೃಷ್ಣ ಅಡಿಗರು, ಲಂಕೇಶ್, ಯು.ಆರ್. ಅನಂತಮೂರ್ತಿ ಮುಂತಾದವರೆಲ್ಲ ವಿರೋಧ ಪಕ್ಷದ ಹಾಗೂ ಕಾಂಗ್ರೆಸ್ಸಿನ ಭಿನ್ನಮತೀಯರ ಸಹಕಾರ ಪಡೆದು ಶಾಂತವೇರಿ ಗೋಪಾಲಗೌಡರನ್ನು ಯಾಕೆ ಮುಖ್ಯಮಂತ್ರಿ ಮಾಡಬಾರದು ಎಂಬ ವಿಷಯ ದೀರ್ಘ ಚರ್ಚೆಗೆ ಒಳಗಾಯಿತು. ಇದನ್ನು ಮುಖ್ಯವಾಗಿ ಸುದ್ದಿ ಮಾಡಿದವರು ಅಡಿಗರ ಮುಂದಾಳತ್ವದ ಲೇಖಕರು. ಹಾಗೆ ನೋಡಿದರೆ ಆ ಸಮಯದಲ್ಲಿ ಗೋಪಾಲಗೌಡರ ಆರೋಗ್ಯ ಅಷ್ಟು ಚೆನ್ನಾಗಿರಲಿಲ್ಲ. ಬಹುಪಾಲು ಲೇಖಕರ ವಸತಿ ವ್ಯವಸ್ಥೆಯನ್ನು ಬೆಂಗಳೂರು ಕೆಂಪೇಗೌಡ ರಸ್ತೆಯ ಎನ್.ಎಂ.ಸಿ. ಹೋಟೆಲ್‌ನಲ್ಲಿ ಮಾಡಲಾಗಿತ್ತು. ಅವರನ್ನು ನೋಡಿಕೊಳ್ಳುವುದಕ್ಕೆ ಪ್ರೊ.ಜಿ.ಎಸ್. ಶಿವರುದ್ರಪ್ಪನವರು ನನ್ನನ್ನು ನೇಮಿಸಿದ್ದರು. ಆ ಹೋಟೆಲ್‌ನಲ್ಲಿ ಅಡಿಗರ ಅಧ್ಯಕ್ಷತೆಯಲ್ಲಿ ಲೇಖಕರ ಒಂದು ಚರ್ಚೆ ನಡೆಯಿತು. ಇದಾದ ನಂತರ ಗೋಪಾಲಗೌಡರ ಜೊತೆ ಮಾತುಕತೆ ನಡೆಸಲು ಕೆಲವರು ಮುಂದಾದರು. ಅದರ ಪ್ರಕಾರ ಗೌಡರನ್ನು ಭೇಟಿಯಾಗಿ ದೀರ್ಘ ಚರ್ಚೆ ನಡೆಸಿದರು. ಆಗ ಗೌಡರು ‘ದಯವಿಟ್ಟು ಅದಕ್ಕೆ ಪ್ರಯತ್ನಿಸಬೇಡಿ ಅದು ಆಗದ ಕೆಲಸ. ಜೊತೆಗೆ ನನಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ’ ಎಂದರು. ಆದರೂ ಅವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಅಡಿಗರು ಇರಲಿಲ್ಲ. ಹಾಗೆ ನೋಡಿದರೆ ಆ ಸಮಯದಲ್ಲಿ ಹೆಚ್ಚು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದವರು, ಶಂಕರ ಮೊಕಾಶಿ ಪುಣೇಕರ್. ಅವರು, ‘ಇಷ್ಟು ರೊಮ್ಯಾಂಟಿಕ್ ಆಗಿ ಯೋಚಿಸಬಾರದು. ಅದು ಯಾವ ರೀತಿಯಲ್ಲೂ ಆಗಲು ಸಾಧ್ಯವಿಲ್ಲ. ರಾಜಕೀಯಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಮಾತಾಡುವ ನೀವು ಹೀಗೆ ಯೋಚಿಸಿದರೆ ಹೇಗೆ’ ಎಂದು ವ್ಯಂಗ್ಯವಾಗಿ ಮಾತನಾಡಿದರು. ಅದಕ್ಕೆ, ಗೋಪಾಲಕೃಷ್ಣ ಅಡಿಗರ ಮಾತಿಗೆ ಭಿನ್ನಮತ ವ್ಯಕ್ತಪಡಿಸಲು ಬಯಸದ ಲೇಖಕರು, ‘ಯಾಕೆ ಆಗೋದಿಲ್ಲ ನೋಡೋಣ. ಎಲ್ಲಾ ಹಂತಗಳಲ್ಲೂ ಪ್ರಯತ್ನಿಸೋಣ’ ಎಂದು ದೃಢವಾಗಿ ಹೇಳತೊಡಗಿದ್ದರು.
ಇದಕ್ಕೆ ಸಂಬಂಧಿಸಿದಂತೆ ಮೊದಲು ನೇರವಾಗಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರನ್ನು ಕಾಣಲು ನಿಶ್ಚಯಿಸಿದರು. ಆ ತಂಡದಲ್ಲಿ ಗೋಪಾಲಕೃಷ್ಣ ಅಡಿಗರು, ಲಂಕೇಶ್, ಅನಂತಮೂರ್ತಿ, ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜ ಮುಂತಾದವರಿದ್ದು, ನೋಡಲು ಹೋದರು. ವೀರೇಂದ್ರ ಪಾಟೀಲರು ಇವರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಚರ್ಚಿಸಿದರು. ಅವರಿಗೆ ಗೊತ್ತಿತ್ತು, ಇದು ಆಗುವುದಿಲ್ಲ ಎಂದು. ಆದರೂ ಇವರ ಉತ್ಸಾಹಕ್ಕೆ ಧಕ್ಕೆ ತರಬಾರದೆಂದು ಅತ್ಯಂತ ಸಂಯಮದಿಂದಲೇ, ‘ಇದು ಆಗಲು ಕಷ್ಟವಿದೆ. ನಾನು ಕಾಂಗ್ರೆಸ್ ಪಕ್ಷದಲ್ಲಿದೇನೆ. ಯಾರೋ ಕೆಲವರು ಕೇಂದ್ರ ಸರ್ಕಾರದ ಮುಖಂಡರನ್ನು ಕಂಡು ನನ್ನನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿರಬಹುದು. ಆದರೆ ಅಷ್ಟಕ್ಕೇ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಬಾರದು ಅಲ್ಲವೇ?’ ಎಂದು ಕೇಳಿದರು. ಜೊತೆಗೆ ‘ನಿಮ್ಮ ಪ್ರಯತ್ನದಿಂದ ಹಿಂದೆ ಸರಿಯಬೇಡಿ. ಪ್ರಯತ್ನ ಮುಂದುವರೆಸಿ’ ಎಂದು ಹೇಳಿ ಗೌರವದಿಂದಲೇ ಕಳಿಸಿದರು. ನಂತರ ಕಡಿದಾಳ್ ಮಂಜಪ್ಪ ಅವರನ್ನು ಭೇಟಿಯಾದರು. ಅವರು ಗೌರವದಿಂದಲೇ ಬರಮಾಡಿಕೊಂಡು ಚರ್ಚಿಸಿದರು. ‘ನನಗೆ ಗೋಪಾಲಗೌಡರ ಬಗ್ಗೆ ಗೌರವವಿದೆ, ಆತ ಅತ್ಯಂತ ಗೌರವಾನ್ವಿತ ಶಾಸಕ. ಇಲ್ಲಿಯವರೆಗೂ ಶಾಸನಸಭೆಯಲ್ಲಿ ಹಾಗೂ ಜನರ ಮಧ್ಯೆ ನಾಯಕತ್ವದ ಹೆಚ್ಚುಗಾರಿಕೆಯನ್ನು ಅತ್ಯಂತ ಪ್ರಜಾಪ್ರಭುತ್ವವಾದಿಯಾಗಿ ಸಾಬೀತು ಪಡಿಸಿದ್ದಾರೆ. ಆದರೆ ನಾವು ಪಕ್ಷ ರಾಜಕಾರಣದ ಸಂದರ್ಭದಲ್ಲಿ ಬದುಕುತ್ತಿರುವುದರಿಂದ ಸಾಕಷ್ಟು ರಾಜಕೀಯ ಮಿತಿಗಳಿರುತ್ತವೆ’ ಎಂದು ಹೇಳಿ ಕಳಿಸಿದರು. ಆದರೂ, ಇನ್ನೂ ಒಂದಷ್ಟು ಮಂದಿಯನ್ನು ಭೇಟಿಯಾಗಿ ಚರ್ಚಿಸಿದರು. ಯಾರೂ ಇವರ ಉತ್ಸಾಹಕ್ಕೆ ಭಂಗ ತರಲಿಲ್ಲ. ಒಂದು ರೀತಿಯಲ್ಲಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿ ಕಳಿಸಿದರು. ಮತ್ತೊಮ್ಮೆ ಗೋಪಾಲಗೌಡರ ಬಳಿ ಮಾತಾಡಿದಾಗ, ‘ದಯವಿಟ್ಟು ಪ್ರಯತ್ನಿಸಬೇಡಿ ಎಂದು ಹೇಳಿದೆನಲ್ಲ. ನನ್ನ ಬಳಿಯೂ ಕೆಲವು ಶಾಸಕರು ಚರ್ಚಿಸಿದರು. ಹಾಗೂ ನಾನು ಯಾವ ರೀತಿಯಲ್ಲೂ ಸಿದ್ಧನಿಲ್ಲ ಎಂದು ಹೇಳಿರುವೆ. ಆದರೆ ಇವರೆಲ್ಲ ಪ್ರಜಾಪ್ರಭುತ್ವದ ಬಗ್ಗೆ ಗೌರವವಿರುವ ಲೇಖಕರು. ರಾಜಕೀಯದಲ್ಲಿ ಆರೋಗ್ಯಪೂರ್ಣತೆಯನ್ನು ಬಯಸುವ ದೊಡ್ಡ ಲೇಖಕರು ಮತ್ತು ಕವಿಗಳು ಎಂದು ಹೇಳಿದೆ. ನೀವು ನನ್ನ ಮೇಲಿನ ಅಭಿಮಾನಕ್ಕೆ ಪ್ರಯತ್ನಿಸುತ್ತಿರುವುದಕ್ಕೆ ಋಣಿಯಾಗಿರುವೆ. ನಮ್ಮ ಸಮಾಜವಾದಿ ಪಕ್ಷ ಆ ಹಂತವನ್ನು ತಲುಪಲು ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲವನ್ನು ನಿರೀಕ್ಷಿಸುತ್ತೇವೆ’ ಎಂದು ಹೇಳಿ ಕಳಿಸಿದರು. ಎಲ್ಲರೂ ಸೇರಿ ಏನು ಮಾಡುವುದೆಂದು ದೀರ್ಘವಾಗಿ ಚರ್ಚಿಸಿ, ಕೊನೆಗೆ ಒಂದು ಹಂತದಲ್ಲಿ ಹಿಂದೆ ಸರಿಯತೊಡಗಿದರು.
ಇದನ್ನು ಓದಿದ್ದೀರಾ?: ವಿಕಾಸ್ ಮೌರ್ಯರ ‘ನುಡಿ ಚಮ್ಮಾಳಿಗೆ’
This video cannot be played in your browser. Open the video directly
ಇದೇ ಸಮಯದಲ್ಲಿ ಸೆನೆಟ್ ಹಾಲ್‌ನಲ್ಲಿ ವಿಚಾರ ಸಂಕಿರಣ ನಡೆಯುತ್ತಿದ್ದರೆ ಗೋಪಾಲಗೌಡರು ನಿಧಾನವಾಗಿ ಸೆನೆಟ್ ಹಾಲ್‌ನ ಮೆಟ್ಟಿಲುಗಳನ್ನು ದಾಟಿಬರುವಾಗ ಎಲ್ಲರೂ ನೋಡಿದರು. ಇಡೀ ಸಭೆ ಎದ್ದುನಿಂತು ಅವರನ್ನು ಗಂಭೀರವಾಗಿ ಸ್ವಾಗತಿಸಿದರು. ಅದರಲ್ಲೂ ಗೌಡರು ಸಾಹಿತ್ಯ ಮತ್ತು ಸಂಸ್ಕೃತಿ ಎಂದರೆ ಒಂದು ವಿಧದ ಗೌರವವನ್ನು ಬೆಳೆಸಿಕೊಂಡವರು. ಕನ್ನಡದ ಕೆಲವು ಉತ್ತಮ ಕೃತಿಗಳನ್ನು ಓದುತ್ತಾ ಬಂದವರು. ಸಭೆಯಲ್ಲಿ ಸ್ವಲ್ಪ ಸಮಯ ಅವರ ಆಗಮನದ ಬಗ್ಗೆಯೇ ಸ್ವಾಗತಿಸಿ ಒಂದಷ್ಟು ಗೌರವದ ನುಡಿಗಳನ್ನು ನುಡಿದರು. ಅದಕ್ಕೆ ಎದ್ದು ನಿಂತು ಎಲ್ಲರಿಗೂ ನಮಸ್ಕರಿಸಿ ಕೂತುಕೊಂಡರು. ಆ ಗೋಷ್ಠಿ ಮುಗಿಯುವವರೆಗೂ ಗೌಡರು ಕೂತಿದ್ದು ನಂತರ ಗಂಭೀರವಾಗಿ ಹೊರ ನಡೆದರು. ಆಗ ಎಲ್ಲರೂ ಎದ್ದುನಿಂತು ಗೌರವಪೂರ್ವಕವಾಗಿ ಬೀಳ್ಕೊಟ್ಟರು. ಇದು ಮಾರನೆಯ ದಿನ ಪತ್ರಿಕೆಗಳಲ್ಲೂ ಸುದ್ದಿಯಾಯಿತು. ಜೊತೆಗೆ ಕನ್ನಡದ ಬಹುಮುಖ್ಯ ಲೇಖಕರೆಲ್ಲ ಸೇರಿ ಯಾರಾರೋ ಶಾಸಕರನ್ನು ಕಂಡು ಗೌಡರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಚರ್ಚಿಸಿದರು ಎಂಬ ಸುದ್ದಿಯೂ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಶಂಕರ ಮೊಕಾಶಿ ಪುಣೇಕರ್ ಅವರು ಸ್ವಲ್ಪ ತುಂಟತನದ ನಗುವಿನಲ್ಲಿ ಕೆಲವು ಲೇಖಕರನ್ನು ನೋಡಿದ್ದರು. ಅದು ಏನೇ ಆಗಿರಲಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಸಂದರ್ಭದಲ್ಲಿ ಇದು ಒಂದು ಚಾರಿತ್ರಿಕ ಘಟನೆ ಎಂಬುದನ್ನು ಮರೆಯುವಂತಿಲ್ಲ.
(ಕೃತಿ : ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ, ಲೇ: ಶೂದ್ರ ಶ್ರೀನಿವಾಸ್, ಪ್ರ: ಶಾಂತವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನ, ಪುಟಗಳು: 112, ಬೆಲೆ: 120, ಸಂಪರ್ಕ: 78998 96744)





