ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಚನ್ನಂಗಿದುರ್ಗ ಶಿವರಾತ್ರಿ ಹಬ್ಬಕ್ಕೆ ಸಿಂಗರಿಸಿಕೊಂಡು ಸಿದ್ಧವಾಗಿತ್ತು. ಜೋಳ ಅವಲಾಗಿ ಬೆಲ್ಲ ಪಾನಕವಾಗಿ; ನೆಂಟಸ್ಥನ ಬೆಳೆಸಿ ಹುರಿಟ್ಟಿನ ಉಂಡೆಗಳಾದವು. ಶಿವರಾತ್ರಿ ಒಂದತ್ತೆಂದು ಹಿಟ್ನೊತ್ತಾದರೂ ಹಸಿದೊಟ್ಟೆ ಉರಿಟ್ಟಿಗಾಗಿ ಕಾದಿತ್ತು. ಹೊತ್ತು ನೆತ್ತಿಗೇರಿ ಉರಿಟ್ಟಿನುಂಡೆ ಕಾದು ಕುಂತ ಹೊಟ್ಟೆ ಸೇರಿತು. ಅದರಿಂದ ಅಂಬರದಲ್ಲಿ ಹಾರಾಡುವ ಹಣ್ಣು ಅಂಗಿ ಬಿಚ್ಚಿಸಿಕೊಂಡು ಹೊರಟು ಹುರಿಟ್ಟಿನ ಜೊತೆ ಸೇರಿಕೊಂಡಿತು. ಒಂದತ್ತೆಂದ ಹೊಟ್ಟೆ ಪ್ರತಿದಿನಕ್ಕಿಂತ ಕೊಂಚ ಹೆಚ್ಚಿಗೆ ತೇಗಿತ್ತು. ಮದ್ದೆಮ್ಮ, ಈರಕ್ಯಾತರಾಯನ ಗುಟ್ಟೆ ಬೆಟ್ಟಗಳ ಮರದ ಮೈ ತುಂಬ ಅರಳಿ ನಿಂತಿದ್ದ ಜಾಲಗಿರಿ ಹೂ; ಪ್ರತಿ ಮನೆ ಮುಂದೆ ನಿಂತು ಮಾರಿಸಿಕೊಂಡು ಗಮಲು ಹರಡಿತು. ದಾಸೇಗೌಡರ ತೋಟದ ಅಗ್ರದೆಲೆಯುಳ್ಳ, ಬಾಳೆ ಕಂದು, ಚಿಕ್ಕಮ್ಮಜ್ಜಿ ಕಸಿ ಮಾವಿನ ಮರದಲ್ಲಿ ಚಿಗುರಿ ನಳ ನಳಿಸುತ್ತಿದ್ದ ಸೊಪ್ಪು; ಜೊತೆಯಾಗಿ ಆತು ನಿಂತ ಊರುಗೋಲಿಗೆ ನೆಲ್ಲುಲ್ಲಿನ ಹಗ್ಗದೊಂದಿಗೆ ಸುತ್ತಿಕೊಂಡು ಬೀದಿ ಅಲಂಕಾರಗೊಂಡಿತು. ವಯಸ್ಸಾಗಿ ನೆಲಕ್ಕುರುಳಿದ ನಾಲ್ಕು ಅಡಿಕೆ ಮರ ನಡು ರಸ್ತೆಯಲ್ಲಿ ಕತ್ತೆತ್ತಿ ನಿಂತು; ಅಡ್ಡ ಮಲಗಿದ ಬಿದ್ರ್ಗಳಿನ ಮೇಲೆ ತೆಂಗಿನ ಗರಿ ಎಳೆದುಕೊಂಡು ರಂಗಸ್ಥಲವಾಯಿತು. ಚನ್ನಂಗಿದುರ್ಗದ ದಕ್ಷಿಣಕ್ಕೆ ಕಮಲಪುರ ಮೂಲಕ ಬೆಟ್ಟಸಾಲು ದಾಟಿ ನಡೆದರೆ ಟುಮಕಿಪುರದ ಪೂರ್ವಕ್ಕೆ ಸಿದ್ದರು ಕಟ್ಟಿದ ಗಂಗಾಮಠವಿದೆ. ಮಠದ ಅಧಿಪತಿ ಭಕ್ತಿ ಭಂಡಾರಕ್ಕೆ ಹೆಸರುವಾಸಿ. ಹುಲುಮಾನವರ ಮೇಲೆ ಆರೋಪಗಳಿದ್ದಂತೆ ಅವರ ಮೇಲೂ ಆರೋಪಗಳಿವೆ. ಮಠಾಧಿಪತಿ ಆಪಾದನೆಗೆ ಅಂಜಿ ಕೂರದೆ ಟುಮಕಿಪುರದ ಮಂಡಿಪೇಟೆಯಲ್ಲಿ ಜೋಳಿಗೆಯೊಡ್ಡಿ ಭಿಕ್ಷೆ ಬೇಡಿ; ಜಾತಿ ಭೇದವೆಣಿಸದೆ ಬಡ ಮಕ್ಕಳ ಕೈ ಹಿಡಿದು ಕರೆ ತಂದು ಮಠಕ್ಕೆ ಸೇರಿಸಿ; ಹೊಟ್ಟೆ ತುಂಬ ತುತ್ತು, ಎದೆ ತುಂಬ ಅಕ್ಷರ ಬೀಜ ಬಿತ್ತಿ ಪುಣ್ಯಾತ್ಮರಾದವರು. ಊರು ಸಿಂಗರಿಸಿರುವುದು ಇಂದು ಆ ಪುಣ್ಯಾತರ ಬರಮಾಡಿಕೊಳ್ಳಲು, ಅವರ ಅಮೃತ ಹಸ್ತದಿಂದ ಊರಿಗೆ ಹೊಸದಾಗಿ ಮುಂಜೂರಾದ ಬೀದಿ ದೀಪ ಹಚ್ಚುವ ಕಾರ್ಯಕ್ರಮ ಉದ್ಘಾಟಿಸಲು, ಮೇಲು ಕೀಳೆನ್ನದೆ ಊರ ಜನ ಪುಣ್ಯಾತ್ಮರ ಎದುರುಗೊಂಡು; ಪುಣ್ಯ ಕಟ್ಟಿಕೊಳ್ಳಲು ಕಾತರದಿಂದ ಕಾದಿತ್ತು. ಹಳ್ಳ ಕೊಳ್ಳಗಳಲ್ಲಿ ಮೈತೊಳೆದು, ಹಣೆಗೆ ವಿಭೂತಿಯಿಟ್ಟು ಪುಣ್ಯಾತ್ಮರ ಪಾದ ಮುಟ್ಟಿ ಪಾವನರಾಗಲು ಸಾಲು ಸಾಲಾಗಿತ್ತು. ತರೂರಿಂದ ತರಿಸಿದ ಡ್ರಾಮಾ ಸೀನಿನ ಮುರಿದ ಗ್ರಾಮಾ ಫೋನಿನ ಮುಳ್ಳು ನಿಂತಲ್ಲೆ ನಿಂತು,
ಮಾಯಾ ಮಯವೀ…,
ಮಾಯಾ ಮಯವೀ…,
ಮಾಯಾ ಮಯವೀ…,
ಎಂದು ಹಾಡಿದ್ದೆ ಹಾಡುತ್ತ ಕಿಸುಬಾಯಿ ದಾಸನಾಗಿತ್ತು. ಅದರ ವಾರಸುದಾರ ಸವೆದ ಮುಳ್ಳ ಎತ್ತಿ: ಮುಳ್ಳಿನ ದಾರಿಯಲ್ಲಿ ತುಂಬಿದ್ದ ದೂಳೂಬಿ; ಮುಳ್ಳು ಅಳ್ಳಾಡುತ್ತ ನಡೆದು ಕಿರುಗುಟ್ಟಿ ಜೀವನ… ಎಂದು ಏದುಸಿರು ಬಿಟ್ಟಿತ್ತು. ಮೈಕಾಸುರ ಪುಣ್ಯಾತ್ಮರ ನೋಡಿ ಪುಣ್ಯ ಕಟ್ಟಿಕೊಳ್ಳಲು ಸುತ್ತೇಳು ಹಳ್ಳಿಗಳ ಕೂಗಿ ಕರೆಯಿತು. ಪಡುವಲಿಗೆ ಹೊತ್ತಿಳಿದು ಬೈಗಾಗಿ ಮಕ್ಕತ್ತಲಾಯಿತು. ಗಿಜಿಗುಟ್ಟುತ್ತಿದ್ದ ಜನರ ಗೌಜು ಗದ್ದಲದಲ್ಲಿ ಬಿಗುಮಾನವಿಲ್ಲದೆ ಬಂದ ಪುಣ್ಯಾತ್ಮರು ಚಪ್ಪರದ ಮಧ್ಯೆ ಇದ್ದ ಗುಂಡಿಯೊತ್ತಿ ಊರಿಗೆಲ್ಲ ದೀಪ ಹಚ್ಚಿಟ್ಟರು. ಬುಡ್ಡಿಯ ಮಬ್ಬುಗತ್ತಲೆ ಮಾತ್ರ ಕಂಡಿದ್ದ ಇಡೀ ಊರು ಪುಣ್ಯಾತ್ಮರು ಹಚ್ಚಿಟ್ಟ ಬೆಳಕಲ್ಲಿ ಅವರ ಪಾದಕ್ಕೆ ಹಣೆಯೊತ್ತಿ ಪುಣ್ಯ ಕಟ್ಟಿಕೊಂಡರು. ಗಂಭೀರವದನರಾಗಿ ಎಲ್ಲರಿಗೆ ದರ್ಶನ ಕೊಟ್ಟ ಪುಣ್ಯಾತ್ಮರು ಮಠದ ದಾರಿ ಹಿಡಿದರು.
ಇದನ್ನು ಓದಿದ್ದೀರಾ?: ಅಗ್ರಹಾರ ಕೃಷ್ಣಮೂರ್ತಿ ಅವರ ಕತೆ | ಮನೋರಥ
ಊರಿಗೆ ಬೆಳಕು ಬಂದ ನೆನಪಲ್ಲಿ ಕುರುಕ್ಷೇತ್ರ ನಾಟಕವಾಡಲು ಆಂಜನೇಯ ಕೃಪಾಪೋಷಿತ ನಾಟಕ ಮಂಡಳಿ ಸದಸ್ಯರು ಸಜ್ಜಾಗಿರುವರು. ಚನ್ನಂಗಿದುರ್ಗದ ಕುರುಕ್ಷೇತ್ರ ನಾಟಕ ನೋಡಲು ಬಲು ಚಂದವೆಂದು ಸುತ್ತೇಳು ಹಳ್ಳಿ ಜನ ಜಾತ್ರೆಯಂತೆ ಸೇರಿದರು. ಚಿಕ್ಕೀರಪ್ಪನ ಬಣವೆ ಬೇಲಿ ಮರೆಯಲ್ಲಿ ಒಲೆ ಮೇಲೆ ಮೂರು ಮಡಕೆಯಲ್ಲಿ ಇಳಿದ ಕಳ್ಬಟ್ಟಿ; ಕಾಸ್ಕೊಟ್ಟು ಕದ್ದು ಕುಡಿಯುವ ಗಿರಾಕಿಗಳಿಗಾಗಿ ಕಾದಿತ್ತು. ತಿಂಗ್ಳಾನುಗಟ್ಟಲೆ ಊರಲ್ಲಿ ಠಿಕಾಣಿ ಹೂಡಿದ್ದ ನಾಟಕದ ಮೇಸ್ಟ್ರು; ಕಳ್ಬಟ್ಟಿ ಅಮಲಲ್ಲಿ ಕಣ್ಮುಚ್ಚಿ ಬಾರಿಸಿದ ಹಾರ್ಮನಿಯಿಂದ ಝೇಂಕಾರದ ಸಂಗೀತ ಹೊರಟಿತ್ತು. ಯುದ್ಧ ಗೆಲುವಿಗೆ ನೆರವು ಕೇಳಲು ದುರ್ಯೋಧನ ಕೃಷ್ಣನ ಸನ್ನಿಧಾನಕ್ಕೆ ಬಂದಿಳಿದ. ತಡವಾಗಿ ಬಂದರೂ ಕಾಲ್ದೆಸೆಯಲ್ಲಿ ಕುಂತ ಅರ್ಜುನ ಮೊದಲು ಕೃಷ್ಣನ ಕಣ್ಣಿಗೆ ಬಿದ್ದ. “ಪಾರ್ಥ ಪಾದದಡಿ ಏಕೆ ಕುಳಿತೆ ಪಾರ್ಶ್ವದಲ್ಲಿ ಪೀಠವಿರಲಿಲ್ಲವೇ?” ಎಂದು ಕೃಷ್ಣ ದುರ್ಯೋಧನ ಮೊದಲೇ ಬಂದ ವಿಚಾರ ತಿಳಿದರೂ ಕಪಟ ನಾಟಕವಾಡಿ, ಮುಂದುವರಿದು “ಇಬ್ಬರೂ ಸಹಾಯ ಕೋರಿ ಬಂದ ಕಾರಣ ನಾನು ಉಭಯ ಸಂಕಟಕ್ಕೆ ಸಿಲುಕಿದೆ. ಚಿಂತೆಯಿಲ್ಲ ಇಬ್ಬರಿಗೂ ಸಹಾಯ ಮಾಡುವೆ. ನಿರಾಯುಧನಾದ ನಾನೊಂದು ಕಡೆ, ಬಹು ಪರಾಕ್ರಮಿಗಳಾದ ಭೀಷ್ಮ, ದ್ರೋಣ, ಅಶ್ವತ್ಥಾಮರನ್ನು ಒಳಗೊಂಡ ಅಶೋಹಿಣಿ ಸೈನ್ಯ ಮತ್ತೊಂದು ಕಡೆ; ಇದರಲ್ಲಿ ನಿಮಗೆ ಯಾವುದು ಇಷ್ಟವೋ ಅದನ್ನು ಆರಿಸಿಕೊಳ್ಳಬಹುದು. ಮೊದಲು ಬಂದವರು ಆದ್ಯತೆ ಮೇಲೆ ಆರಿಸಿಕೊಳ್ಳುವ ಹಕ್ಕುಳ್ಳವರು” ಎಂದ. ತಾನು ನಿಷ್ಪಕ್ಷಪಾತಿ ಎನ್ನುತ್ತಲೇ ಕಪಟತನದಿಂದ ಪಾಂಡವರ ಪಕ್ಷ ವಹಿಸಿದ. ಅಶೋಹಿಣಿ ಸೈನವೇ ಸಾಕೆಂದ ದುರ್ಯೋಧನ ಮೊದಲ ಪಟ್ಟಲ್ಲೇ ಯುದ್ಧ ಸೋತಂತಾದ. ಕಾಡಾದಿಯ ಪರದೆಬಿದ್ದು;
ಮನಸ್ಸಿನ ಕ್ಲೇಶವ ಹರಿಸೊ ಮಹಾನುಭಾವ,
ಮನದಲಿ ನೊಂದೆನು ದೇವ ದೇವ ದೇವ,
ಸೂತ ಪುತ್ರಾನೆಂದು ಕರೆಯುವರೆನ್ನನು ಜಾತಿ
ಭೇದಾದಿಂದ ಮನದಿ ನೊಂದೆನು ದೇವ, ದೇವ,
ಎಂದು ಹಾಡುತ್ತ ಕರ್ಣ ಏಕಾಂಗಿಯಾಗಿ ರಂಗಸ್ಥಲ ಪ್ರವೇಶ ಮಾಡಿದ. ಮಾಯಾವಿಯಾಗಿ ಬಂದ ಕೃಷ್ಣ ಅವನ ಬೆನ್ನು ತಟ್ಟಿ ಸೋಜಿಗಪಡಿಸಿದ. ಕರ್ಣ, ಕೃಷ್ಣನ ಮಾಯಾವಿತನಕ್ಕೆ ತನ್ನನ್ನೇ ನಂಬದಾದ. ಕುಂತಿ ನಿನ್ನ ಹೆತ್ತಮ್ಮನೆಂಬ ಗುಟ್ಟು ಬಿಚ್ಚಿಟ್ಟು; ಕೃಷ್ಣ ಕರ್ಣನ ಮತ್ತಷ್ಟು ವಿಚಲಿತಗೊಳಿಸಿದ. ಹೆತ್ತಮ್ಮ ನಿನ್ನ ನೋಡಲು ಇತ್ತಲೇ ಬರುತ್ತಿರುವಳೆಂದು ಬಂದಂತೆ ಮಾಯವಾದ. ಕುಂತಿ ಪಾತ್ರದಾರಿ ನಿಂಗಪ್ಪ ಹೆಂಡತಿ ರೇಷ್ಮೆ ಸೀರೆಯುಟ್ಟು ಹದಿಹರೆಯದ ಹೆಣ್ಣಂತೆ ಕಂಡ. ತಾಯಿ ಮಗನ ಪಾತ್ರಧಾರಿಗಳು ಅಪರೂಪದ ಸಂಗಮದಿಂದ ಕಣ್ಣೀರ ಕೋಡಿಯಾದರು. ಇಬ್ಬರ ನಟನೆಯಿಂದ ನಾಟಕವೆಂಬುದ ಮರೆತು ಊರ ಹೆಂಗರುಳಗಳು ಶೋಕ ಸಾಗರದಲ್ಲಿ ಮುಳುಗಿದರು. ”ನಿನ್ನ ಪಾಲಿಗೆ ಸಾವಾಗಿ ಬಂದಿರುವ ತಾಯಿ ಮಾತಿಗೆ ಬೆಲೆಕೊಡಬೇಡ; ಕೊಟ್ಟೆಯೆಂದರೆ ನಿನ್ನ ತಲೆ ದಂಡ ನಿಶ್ಚಿತ” ಎಂದು ಅಶರೀರವಾಣಿಯಾಯಿತು. ಎಂದೂ ಕಾಣದ ತಾಯಿ ಸ್ಪರ್ಶದಿಂದ ಕರ್ಣ ಮೈ ಮರೆತು “ತೊಟ್ಟ ಬಾಣ ತೊಡಲಾರೆ” ಎಂದು ಭಾಷೆ ಕೊಟ್ಟು ಅಮ್ಮನ ಸಂತೃಪ್ತಿಗೊಳಿಸಿದ. ಭಾಷೆ ಪಡೆದು ಅರ್ಜುನನ ತಲೆ ಕಾಯ್ವ ತೃಪ್ತಿಯಲ್ಲಿ ಕುಂತಿ ಪರದೆ ಹಿಂದೆ ಸರಿದಳು. ಅಮ್ಮನ ಅಪ್ಪುಗೆಯಿಂದ ಹೊರ ಬಂದ ಕರ್ಣ ಎಚ್ಚೆತ್ತು, ತಾನು ಕೊಟ್ಟ ಭಾಷೆ ಪರಿಣಾಮ ನೆನೆದು “ದುರ್ಯೋಧನ ಈಗಲೀಗ ನೀನು ಕೆಟ್ಟೆ” ಎಂದ. ಪರದೆ ಮೇಲೆದ್ದು ಕರ್ಣಾರ್ಜುನರ ಯುದ್ಧಕ್ಕೆ ಭೂಮಿ ಸಿದ್ಧವಾಗಿ ಇಬ್ಬರ ರಥಗಳು ಎದುರಾಗಿ ಅರ್ಜುನ ರೋಷಾವೇಶದಿಂದ;
“ಕುಲವನರಿಯದೆ ಅತಿ ಮಧದಿಂದಲೀ
ಏಕಿಂತು ಮೆರೆವೆ ಅಧಮ ಅಧಮ”
ಮದಾಂಧ… ಏನು ಬೊಗಳಿದೆ… ಆಂ… ಹೂಂಕರಿಸಿದ ಕರ್ಣ
“ಕುಲವನಿಂದಿಸಿದ ಅತಿ ಮದಾಂಧನ
ಬಲವ ಮುರಿವೆನೀಗ ಛಲದೀ ಬಲದೀ”
(ಕಾಕತಾಳೀಯ ಎಂಬಂತೆ ಇಬ್ಬರೂ ಪಾತ್ರಧಾರಿಗಳ ಹುಟ್ಟಿನ ರಹಸ್ಯ ತಿಳಿದಿದ್ದ ಕೆಲ ಪ್ರೇಕ್ಷಕ ಗಣ್ಯರು ಮುಸಿನಕ್ಕದ್ದು ಯಾರ ಗಮನಕ್ಕೂ ಬರಲಿಲ್ಲ)
ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ
ಕರ್ಣಾರ್ಜುನ ಇಬ್ಬರೂ ದೇವರ ವರಪ್ರಸಾದದಿಂದ ಹುಟ್ಟಿದವರು ಎಂಬ ಗುಟ್ಟು ತಿಳಿಯದ ಪಾತ್ರಧಾರಿಗಳು ಒಬ್ಬರನ್ನೊಬ್ಬರು ಹೀಗಳೆದು ವಾದ ಮಾಡಿದರು. ತನ್ನ ಕುಲದ ಬುಡಕ್ಕೆ ಕೈ ಹಾಕಿ ಮಾತಾಡಿದ ಅರ್ಜುನನ ಮೇಲೆ ಕರ್ಣ ಕಡು ಕೋಪಗೊಂಡ. ಕೋಪ ತಣಿಸಲು ಬತ್ತಳಿಕೆಯಲ್ಲಿದ್ದ ಮುಖ್ಯ ಬಾಣ ಹೂಡಿದ. ಕರ್ಣ ಹೂಡಿದ ಬಾಣ ಹುಸಿಯಾಗದೆಂಬ ರಹಸ್ಯ ತಿಳಿದಿದ್ದ ಕೃಷ್ಣ; ತನ್ನ ಮಾಮೂಲಿ ಕಪಟ ಬುದ್ಧಿ ಬಳಸಿದ. ಭೂಮಂಡಲ ಕ್ಷಣ ಕಾಲ ತನ್ನ ಕಾಲಲ್ಲಿ ಅದುಮಿಡಿದು, ಕರ್ಣನ ಗುರಿ ತಪ್ಪುವಂತೆ ಮಾಡಿದ. ಎಂದೂ ಹುಸಿಯಾಗದ ಕರ್ಣನ ಗುರಿ ಅರ್ಜುನನ ಶಿರಸ್ಸಿಗೆ ಬದಲು ಕಿರೀಟ ಎಗರಿಸಿತು. ತನ್ನ ಕಣ್ಣೆದುರೇ ನಡೆದ ಕುಯುಕ್ತಿ ಕಂಡ ಕರ್ಣನ ಸಾರಥಿ ಶಲ್ಯ ಉರಿಗಣ್ಣಾದ. ತೊಟ್ಟ ಬಾಣ ಮತ್ತೆ ತೊಡಲು ಕರ್ಣನಿಗೆ ಆಜ್ಞಾಪಿಸಿದ. ಯುದ್ಧ ಭೂಮಿಯಲ್ಲಿ ಹೆತ್ತಮ್ಮನಿಗೆ ಕೊಟ್ಟ ಭಾಷೆ ಕರ್ಣನ ಕಣ್ಮುಂದೆ ಬಂತು.
“ತೊಟ್ಟ ಬಾಣ ತೊಡಲಾರೆ ಕೊಟ್ಟ ಭಾಷೆ ತಪ್ಪಲಾರೆ” ಎಂದ. ಕರ್ಣನ ಮಾತಿಂದ ಕೆರಳಿದ ಶಲ್ಯ ರಥ ಬಿಟ್ಟಿಳಿದ. ಯುದ್ಧ ಭೂಮಿಯಲ್ಲಿ ಕರ್ಣ ಏಕಾಂಗಿಯಾದ. ಅದೆ ಸಮಯಕ್ಕೆ ಕರ್ಣನ ರಥದ ಚಕ್ರ ಭೂಮಿಗಿಳಿಯಿತು. ರಥದ ಚಕ್ರ ಮೇಲೆತ್ತುವರೆಗೆ ಬಾಣ ಹೂಡ ಬೇಡ ಎಂದ ಕರ್ಣ ರಥದ ಚಕ್ರ ಎತ್ತತೊಡಗಿದ. ತನ್ನ ವರಪ್ರಸಾದದಿಂದ ಹುಟ್ಟಿದ ಮಗ ಅರ್ಜುನನ ಶಿರ ಕಾಯಲು ದೇವೇಂದ್ರ ಸಮಯ ಸಾಧಿಸಿ ಸನ್ಯಾಸಿಯಾಗಿ ರಣರಂಗದಲ್ಲಿ ಕರ್ಣನ ಮುಂದೆ ಪ್ರತ್ಯಕ್ಷನಾದ. ‘ದಾನಶೂರ ಕರ್ಣ’ ಎಂದು ಹಾಡಿ ಹೊಗಳಿದ. ಬಿರುದಿಗೆ ತಕ್ಕ ದಾನ ಕೊಡಬೇಕೆಂದ. “ಯುದ್ಧ ಭೂಮಿಯಲ್ಲಿ ಯಾವ ದಾನ ಕೊಡಲಿ” ಎಂದ ಕರ್ಣನ ಮಾತಿಗೆ; ಅವನಲ್ಲಿ ಕರ್ಣಕುಂಡಲ ಇರುವಷ್ಟು ಸಮಯ ಸಾವು ಸಂಭವಿಸದೆಂಬ ರಹಸ್ಯ ಅರಿತಿದ್ದ ಸನ್ಯಾಸಿ ವೇಷಧಾರಿ ದೇವೇಂದ್ರ ”ನಿನ್ನ ಬಳಿಯಿರುವುದನ್ನೇ ಬೇಡುವೆ” ಎಂದ. ಕರ್ಣನಿಂದ ತಾನು ಬೇಡಿದ್ದು ಇಲ್ಲವೆನ್ನದೆ ನೀಡುವ ಭಾಷೆ ಪಡೆದ. ಕರ್ಣಕುಂಡಲ ಬೇಡಿ ಪಡೆದು ಮಾಯವಾದ. ರಥದ ಚಕ್ರ ಎತ್ತುತ್ತಲೇ ಕರ್ಣ ಅರ್ಜುನನ ಬಾಣಗಳಿಗೆ ತಕ್ಕ ಉತ್ತರ ನೀಡಿದ. ಮತ್ತೆ ಬಾಣ ಹೂಡಲು ಕರ್ಣ ಮಂತ್ರ ಜಪಿಸಿ ಧ್ಯಾನಸ್ಥನಾದ. ಧ್ಯಾನಸ್ಥ ಕರ್ಣನ ಶಿರ ಛೇದಿಸಲು ಇದೇ ಸರಿಯಾದ ಸಮಯ ಎಂದ ಕೃಷ್ಣ ಬಾಣ ಹೂಡಲು ಅರ್ಜುನನ ಒತ್ತಾಯಿಸಿದ. ಅರ್ಜುನ ಹೂಡಿದ ಬಾಣ ಕರ್ಣನ ತಲೆ ಕಡಿದು ನೆಲಕ್ಕುರುಳಿಸಿತು. ‘ಕುಲವ ನಿಂದಿಸಿದವನ ಬಲವ ಮುರಿವ’ ಕರ್ಣನ ಶಪಥ ಮಾತ್ರ ಈಡೇರದಾಯಿತು. ಬೆಳಕರಿದು ಬಂದರೂ ನಾಟಕ ಮುಗಿಯದೆ ಹೂ ಬಿಸಿಲಲ್ಲೇ ಭೀಮ ದುರ್ಯೋಧನನ ತೊಡೆ ಮುರಿದು ದ್ರೌಪದಿಯ ಮುಡಿ ಕಟ್ಟಿ ನಾಟಕ ಮುಗಿಯಿತು.
ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ
*
ರಂಗಸ್ಥಳದಲ್ಲಿ ನಾಟಕ ಮುಗಿದರೂ! ಅಭಿಮನ್ಯು ಪಾತ್ರಧಾರಿ ತಳವಾರ ರೊಡ್ಡಯ್ಯನ ಮನೆ ಮುಂದೆ ಜಾತ್ರೆಯಂತೆ ಜನ ಸೇರಿ ನಿಜ ನಾಟಕವೇ ನಡೆದಿತ್ತು. ಕುರುಕ್ಷೇತ್ರ ನಾಟಕ ಕಳೆಗಟ್ಟಲೆಂದು ರೊಡ್ಡಯ್ಯ ಉತ್ತರೆ ಪಾತ್ರಕ್ಕೆ ಟುಮಕಿಪುರದ ಉಳ್ಳು ಬೆಳ್ಳಗಿನ ವೈಯಾರದ ಹೆಣ್ಣು ಪಾತ್ರಧಾರಿ ಕರೆಸಿದ್ದ. ರೊಡ್ಡಯ್ಯನಂತೆ ನಟಿಸುವಾತ ಸುತ್ತೇಳು ಹಳ್ಳಿಯಲ್ಲೇ ಇಲ್ಲ; ಎಂದು ಜನರ ಮೆಚ್ಚುಗೆ ಪಡೆಯುವ ಮನದಾಸೆ ಅವನದಾಗಿತ್ತು. ಆಸೆ ಈಡೇರಿಸಿಕೊಳ್ಳಲು ಮನೆಯಲ್ಲಿದ್ದ ಮೇಕೆ ಸಂತೆಗೊಯ್ದು ಮಾರಿದ್ದ. ಪೇಟೆಯಿಂದ ರಾಜಾರೋಷವಾಗಿ ಬಂದು ನಾಟಕದಲ್ಲಿ ಹೆಂಡತಿ ಪಾರ್ಟು ಮಾಡುವ ಹೆಣ್ಣು ಎಂತವಳಿರಬೇಕು? ಎಂಬ ಪ್ರಶ್ನೆ ರೊಡ್ಡಯ್ಯನ ಹೆಂಡತಿ ಪಿಳ್ಳಮ್ಮನ ಕಾಡಿತು. ತೌರಿಂದ ಬಳುವಳಿಯಾಗಿ ಬಂದ ಮೇಕೆ ಗಂಡ ಮಾರಿದ್ದು ಅವಳ ಮತಿಗೆಡಿಸಿತು. ಮೇಕೆ ಮಾರಿ ಸಂತೆಯಿಂದ ಮಕ್ಕಳ ಕೈಗಿಷ್ಟು ತಿನ್ನಲು ತರದೋದ ಗಂಡನ ಮೇಲೆ ಸಿಟ್ಟು ಎರಡು ಪಟ್ಟಾಯಿತು. ಎಲ್ಲ ಒಟ್ಟಾಗಿ ಸೇರಿ ಪಿಳ್ಳಮ್ಮನ ತಲೆ ಮೊಸರು ಗಡಿಗೆಯಂತಾಗಿ ಭ್ರಾಂತಿಗೊಂಡಳು. ನಾಟಕದಲ್ಲಿ ಅಭಿಮನ್ಯು ಪಾತ್ರ ಬರುವುದು ಮಧ್ಯರಾತ್ರಿಯಾದರೂ!! ಪಿಳ್ಳಮ್ಮನ ತಲೆ ತುಂಬಿದ್ದ ಆತಂಕ ಕಣ್ಮುಚ್ಚಿ ಬಂದ ನಿದ್ದೆ ಹಿಂದಕ್ಕೆ ತಳ್ಳಿ; ಗಂಡನ ವೈವಾಟ ನೋಡಲೇಬೇಕೆಂದು ಕಾದಿದ್ದಳು. “ಬಿಡೈ ಚಿಂತೆಯನು, ಬಿಡೈ ಚಿಂತೆಯನು, ತಡವ ಮಾಡದೆನಗೆ… ಕೊಡುನೀ ಅಭಯ…” ಎಂದು ಅಭಿಮನ್ಯು ಪಾತ್ರ ರಂಗದ ಮೇಲೆ ಬಂದೇ ಬಿಟ್ಟಿತು. ಅಭಿಮನ್ಯು ಪಾತ್ರಧಾರಿ ರೊಡ್ಡಯ್ಯ, ದೊಡ್ಡಪ್ಪ ಧರ್ಮರಾಯನಿಂದ ಯುದ್ಧದಲ್ಲಿ ದ್ರೋಣನ ಚಕ್ರವ್ಯೂಹ ಭೇದಿಸಲು ಬಲವಂತವಾಗಿ ಅಪ್ಪಣೆ ಪಡೆದ. ಯುದ್ಧಕ್ಕೆ ತೆರಳುವ ವಿಷಯ ಹೆಂಡತಿ ಉತ್ತರೆಗೆ ತಿಳಿಸಲು ಅಂತಃಪುರ ಪ್ರವೇಶ ಮಾಡಿದ. ಪಿಳ್ಳಮ್ಮನ ಎರಡು ಕಣ್ಣು ಒಂದಾಗಿ ರಂಗಸ್ಥಳದಲ್ಲೇ ನೆಟ್ಟವು. ತನ್ನ ಕಣ್ಮುಂದೆಯೇ ನಾಟಕದ ಪಾತ್ರದಾರಿ ಗಂಡನ ಕೈ ಹಿಡಿದು ಮೈ ಮುಟ್ಟುವಂತೆ ಪಕ್ಕ ಸರಿದಿದ್ದು ಪಿಳ್ಳಮ್ಮನ ಹೊಟ್ಟೆಗೆ ಕಿಚ್ಚಿಟ್ಟಂತಾಯಿತು. ಮನಸ್ಸು ತಡೆಯದೆ ನಾಟಕ ನೋಡುವುದ ಬಿಟ್ಟು; ಮಬ್ಬುಗತ್ತಲಲ್ಲೇ ಒಂಟಿಯಾಗಿ ಮನೆ ಸೇರಿದಳು. ಯುದ್ಧದಲ್ಲಿ ಹತನಾದ ಅಭಿಮನ್ಯು ಮೃತದೇಹದ ಮುಂದೆ ಉತ್ತರೆ ಪಾತ್ರದಾರಿ ಹಾಡಿದ ಶೋಕ ಗೀತೆ; ಮೈಕಿನ ಮೂಲಕ ಗಾಳಿಯಲ್ಲಿ ತೇಲಿ ಬಂದು ರಂಗಸ್ಥಲದ ಕಡೆಯೇ ಕಿವಿಯಾಗಿದ್ದ ಪಿಳ್ಳಮ್ಮಗೆ ಕೂರ್ದಸಿಯಾಯಿತು. ಪಾತ್ರದೆಣ್ಣು ಗಂಡನ ಮೈಮೇಲೆ ಬಿದ್ದು ಒರಳಾಡುವ ದೃಶ್ಯ ಮನದಲ್ಲಿ ಮೂಡಿ ಮನೆಯೆಲ್ಲ ಬಾರಾಡಿದಳು. ಗಂಡ ತನ್ನ ಕೈಬಿಟ್ಟೇ ಹೋದನೆಂದು ಪಿಳ್ಳಮ್ಮ ಹತಾಶಳಾದಳು. ಬೆಳಕರಿಯುತ್ತಿದ್ದಂತೆ ರೊಚ್ಚಿಗೆದ್ದು ತಲೆ ಕೆದರಿ ಮನೆ ಮುಂದೆ ಗದ್ದುಗೆ ಹಾಕಿ ಎರಡೂ ಕೈಯಿಂದ ನೆಲ ಸಾರಿಸಿದಳು. ಅದು ನಾಟಕವೆಂದು ಊರೆಲ್ಲ ಹೇಳಿದರು; ನಾಟಕ ನೋಡಲು ಬಂದಿದ್ದ ನೆಂಟರೆಲ್ಲ ಸಮಾಧಾನಪಡಿಸಿದರು; ಹೆತ್ತಮ್ಮನೇ ಮಗಳ ತಲೆ ಸವರಿ ಸಂತೈಸಿದರೂ ಕಣ್ಣೀರಾದ ಪಿಳ್ಳಮ್ಮನ ಸಿಟ್ಟಿಳಿಯದಾಗಿತ್ತು. “ನನ್ ಸಂಕ್ಟ ನಿಮ್ಗೆಂಗ್ ಅರ್ಥಾಗ್ಬೇಕು, ಅನ್ಬವ್ಸೋಳ್ ನಾನು” ಎಂದು ಸಮಾಧಾನ ಹೇಳಲು ಬಂದವರನ್ನೇ ತೆಪ್ಪಗಿರಿಸಿದಳು. ಎಡಗೈಲಿ ಕನ್ನಡಿ ಹಿಡಿದು ಬಲಗೈಲಿ ಮುಖದ ಬಣ್ಣ ತೆಗೆಯುತ್ತಿದ್ದ ರೊಡ್ಡಯ್ಯನ ಕಡೆ ತಿರುಗಿದಳು. “ಮೂಗ್ಗೊಂದ್ ನತ್ತಿಲ್ಲ ಅಂತ ಎಳ್ಡೊರ್ಸದಿಂದ ಇನ್ಕಿಲ್ದಂಗ್ ಕೇಳ್ದೆ. ವರ್ಷ್ಕೊಂ ಉಗಾದಿ ಹಬ್ದಾಗ್ ಹರ್ದಿರ ಕುಬ್ಸುಕ್ ತ್ಯಾಪೆ ಹಾಕ್ ಮಾನ ಕಾಪಾಡ್ಕಂಡೆ. ಹಾಳಾಗೋಗಿ ಹೊಟ್ಟ್ಯಾಗ್ ಹುಟ್ಟಿದ್ ಹೆಣ್ಣಗ ಒಂದ್ ಮಳ್ದುದ್ದ ಲಂಗ ತಂದ್ಕೊಡಂತ ಅಂಗ್ಲಾಚ್ ಕೇಳ್ತು… ತಂದ್ಕೊಟ್ನ?… ಇಲ್ಲ. ನಮ್ಗ್ಯಾಕ್ ತಂದ್ಕೊಟ್ಟೆಯೇಳು? ನಾನೇನ್ ಕೈಗ್ ನೀರ್ಕೊಟ್ ಮಾಡುಂಭಕಿಕ್ಕೋಳ? ದುಡ್ದಿದೆಲ್ಲ ಅದುಕ್ ಖರ್ಚಾತು ಇದುಕ್ ಖರ್ಚಾತಂತ ನೂರೆಂಟ್ ಸುಳ್ಳೇಳ್ದೆ. ಯಾಕೇಳು… ನಾನೇನ್ ನಾಕ್ ಜನ್ರ್, ಮುಂದೆ ತಾಳಿ ಕಟ್ಸ್ಕಂಡೋಳ; ಮೂರು ಬಿಟ್ ಕದ್ದೋಡ್ ಬಂದಳಲ್ವ? ನಿನ್ ಮಖನೆ ಕಿತ್ತಿಟ್ಟಂಗಿರ ಆ ಮಗ ಕಂಡೋರ್ಗ್ ಹುಟ್ಸ್ಕಂಡಿದ್ದೆ ಅಲ್ವ? ಕಟ್ಕಂಡೋಳ್ಗೆ, ಹುಟ್ಸಿದ್ ಮಗಿಗೆ ಕೇಳಿದ್ ತಂದ್ಕೊಡಾಕ್ ನಿಂಗ್ ಮನ್ಸೆಲ್ ಬತ್ತದೇಳು? ಬಳ್ಕೋಳ್ ಮೈ ಮುಟ್ಟಾಕ್ ಇದ್ದೊಂದ್ ಮೇಕೆ ನಿನ್ ಬಾಯ್ಗ್ಕಿಂಡ್. ನೀನ್ ರಾತ್ರೆ ಆಡ್ದ್ ಆಟನೆಲ್ಲ ಈ ಹಾಳಾದ್ ಕಣ್ಣಗ್ ಕಂಡ್ರೂ ನನ್ನೊಟ್ಟೆ ಉರ್ಸ್ಕಂಡ್ ಸುಮ್ನಿರ್ಲ? ನಾನೂ ಮನುಸ್ತಲ್ವ” ಎಂದು ಅತ್ತು ಕರೆದು ಸಾಕಾಗಿ; ಎರಡು ಕಣ್ಣು ಸಾಲದೆ ಮೂಗಿಂದ ಬಂದ ನೀರ ಎಡಕ್ಕೂ ಬಲಕ್ಕೂ ಸಿರ ಸಿರನೆ ಸೀದಿ ಮತ್ತೆ ರಾಂಗಾಗಿ ”ಆಹಹಾ… ಆಂ… ನಾಸ್ಕಿಲ್ಗೆ ನನ್ ಆಟ್ಗಳ್ಳಾ ಅಷ್ಟನ್ರ್ ಮಂದೆ ಮಾಟ್ದೋಳಿಗ್ ಮುತ್ಕೊಡಾಕ್ ಹೋಗದ? ಅವ್ಳಿಂದ್ ಓಡಕೂ ಏಸ್ದನಲ್ಲ ಮಾನ್ಗೆಟ್ಟೋನು. ಎಲಲಾ ಬಂತ್ನೋಡ್ ನನ್ ಒಗ್ತನ. ನಮ್ ಸಂಸಾರ ನೋಡಿ ಊರೆಲ್ಲ ತಿಕ ಬಡ್ಕಂಡ್ ನಗಂಗಾತು” ಎಂದು; ಮನೆಯಲ್ಲಿ ಇಲ್ಲದ ಮಂಚದ ಬದಲು ಮಾಸಿದ ಆಪಿನ (ಜೊಂಡುಲ್ಲಿನ) ಚಾಪೆಗೆ ಮಕಾಡೆ ಮಲಗಿದಳು.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ರೊಡ್ಡಯ್ಯನ ಹೆಂಡತಿ ಪಿಳ್ಳಮ್ಮ ಸ್ವಂತ ಸೋದರ ಮಾವನ ಮಗಳು. ತೌರು ತಪ್ಪುತ್ತದೆಂಬ ಅವನ ಹೆತ್ತ ತಾಯಿ ಹಂಬಲದಂತೆ ಹಿರಿಯರು ಒಪ್ಪಿ ಮದುವೆ ಆದವಳು. ತನಗುಟ್ಟಿದ ಮಗು ಪರರಿಗೆ ಹುಟ್ಟಿಸಿಕೊಂಡೆ ಎಂಬ ಹೀನಾಮಾನದ ಮಾತಾಡಿದರೂ ರೊಡ್ಡಯ್ಯ ಸಮಾಧಾನದಿಂದ ಇರುವುದು ಎಲ್ಲರಿಗೂ ಅಚ್ಚರಿ ತಂದಿತ್ತು. ಮನೆಗೆ ಬಂದ ತಕ್ಷಣ ಕೈ, ಕಾಲಿಗೆ ನೀರು ಕೊಡಲಿಲ್ಲ. ಉಂಡ ತಣಿಗೆ ಎತ್ತುವಾಗ ಎಂಜಲು ಸಿಡಿಸಿದಳು ಎಂಬ ಕ್ಷುಲ್ಲಕ ಕಾರಣಗಳಿಗೆ ಆಗಾಗ ಹೆಂಡತಿ ಮೈ ಮೇಲೆ ಗಳ ಆಡಿಸುತ್ತಿದ್ದ ರೊಡ್ಡಯ್ಯ ಇಂದು ಕಲ್ಲಾಗಿ ಕುಂತಿದ್ದ. ಅವನ ಮನಸ್ಸು ಕಲ್ಲಾಗಲು ತಾನು ಮಾಡಿದ ತಪ್ಪು ತಲೆಗೆ ಹತ್ತಿದ್ದು ಕಾರಣವಾಗಿತ್ತು. ತಾನು ಕೊಟ್ಟ ಕ್ವಾಟ್ಳೆಯನ್ನು ನಾಲ್ಕು ಗೋಡೆಯಾಚೆ ತರದ ಹೆಂಡತಿ ಬೀದಿಗೆ ಬಂದು ಹಾರಾಡಿದರೂ; ಹಲ್ಲಮ್ಮಡು ಕಚ್ಚಿ ತೆಪ್ಪಗೆ ಎಲ್ಲ ಸಹಿಸಿಕೊಂಡಿದ್ದ. ಇಲ್ಲದೋಗಿದ್ದರೆ ಈ ಹೊತ್ತಿಗೆ ಸಿಕ್ಕಿದ್ದು ಕೈಗೆ ಬಂದು ಹೆಂಡತಿಗೆ ಹಿಡಿದ ಗಾಳಿ ಬಿಡಿಸುತ್ತಿತ್ತು. ಗಂಟಲು ಕೆಡದಿರಲೆಂದು ಏನೂ ತಿನ್ನದೆ ರಾತ್ರಿ ಒಂದಿಷ್ಟು ಭಟ್ಟಿ ಸಾರಾಯಿ ಬಾಯಿಗೆ ಬಿಟ್ಕಂಡಿದ್ದ. ಈಗ ಅದು ತನ್ನ ಪ್ರತಾಪ ತೋರಿ ಕಳ್ಡಿ ಹುತ್ತ ಕೆರದಂತೆ ಅವನ ಹೊಟ್ಟೆ ಗಬ್ಬರಿಸತೊಡಗಿತು. ಮುಖಕ್ಕೆ ಹಚ್ಚಿದ್ದ ಬಣ್ಣ ಸೀಮೆಎಣ್ಣೆ, ಕೊಬರಿ ಎಣ್ಣೆ ಎರಡೂ ಹಚ್ಚಿ ಎಷ್ಟು ತಿಕ್ಕಿದರೂ ಮುಖಬಿಟ್ಟೋಗದೆ ಕಿರಿ ಕಿರಿ ಮಾಡತೊಡಗಿತು. ಮೇಕೆ ಮಾರಿದ ಅಷ್ಟೂ ಹಣ ಪಾತ್ರದಾರಿ ಕೈ ಸೇರಿ ಜೋಬೆಲ್ಲ ಬರಿದಾಗಿತ್ತು. ಎರಡು ತಿಂಗಳಿಂದ ಪಾತ್ರದೆಣ್ಣ ಮೈ ಮುಟ್ಟಲು ಪಕ್ಷಿಯಂತೆ ಕಾದಿದ್ದ. ಸಂತೆಯಲ್ಲಿ ಮೇಕೆ ಮಾರಿ ಕೊಂಡವನಿಗೆ ಹಗ್ಗ ಕೈಗಿಡುವಾಗ; ಮೇಕೆ ಮೈ ಸವರಿ ಪಾತ್ರದೆಣ್ಣಿನ ಬೆನ್ನೆಂದು ಭ್ರಮಿಸಿದ್ದ. ಬೇಕಂತಲೇ ಪಾತ್ರದೆಣ್ಣು ಉಟ್ಟಿದ್ದ ಮೇಕಪ್ಪಿನ ಬಟ್ಟೆ ಅಡ್ಡ ಬಂದು ಮೈ ಮುಟ್ಟುವ ಆಸೆ ಈಡೇರದಾಗಿ; ಕೊಟ್ಟ ಕಾಸು ”ಹರಿವ ನೀರಲ್ಲಿ ಹುಣುಸೆ ಹಣ್ಣು ತೊಳೆದಂತೆ” ಆಯಿತು. ತಾನು ನಾಟಕದಲ್ಲಿ ಸತ್ತಂತೆ ಮಲಗಿರುವಾಗ ಪಾತ್ರದೆಣ್ಣು ಮೈ ಮುಟ್ಟುವಳೆಂಬ ದೂರದಾಸೆಯಿತ್ತು. ”ಓ ಪ್ರಿಯಾ ಪ್ರಶಾಂತ ಹೃದಯ ಹಾನಿ ಹೊಂದಿದೆಯಾ…” ಎಂದು ನೋಡುಗರ ಮನಕರಗುವಂತೆ ಹಾಡಿದ ಪಾತ್ರದೆಣ್ಣು; ದೂರದಲ್ಲೇ ನೆಲ ಮುಟ್ಟಿ ರೊಡ್ಡಯ್ಯನ ಉಳಿದೊಂದು ಆಸೆಯೂ ಕಮರಿ ಹೋಯಿತು. ರಾತ್ರಿಯೆಲ್ಲ ಎರಡು ರೆಪ್ಪೆ ಒಂದು ಮಾಡದೆ ಕಣ್ಣು ನಿದ್ದೆಗೆ ಎಳೆಯುತ್ತಿದ್ದರೆ; ಹೆಂಡತಿ ಕಟು ಮಾತು ಕಣ್ಣೀರು; ನಾಟಕ ನೋಡಲು ಬಂದ ನೆಂಟರಿಷ್ಟರ ಮುಂದೆ ಮಾನ ಕಳೆದು; ಕ್ಷಣ ಕ್ಷಣವೂ ರೊಡ್ಡಯ್ಯನ ಭೂಮಿಗಿಳಿಸಿತು. ಪಿಳ್ಳಮ್ಮನ ರೌದ್ರಾವತಾರಕ್ಕೆ ಮಕ್ಕಳು ಬೆದರಿ ನಿಂತಿದ್ದವು. ಒಂದು ಪಾವಲಿ ಮಾತ್ರ ಅದೆಂಗೋ ತಪ್ಪಿಸಿಕೊಂಡು ರೊಡ್ಡಯ್ಯನ ನಿಕ್ಕರ್ ಜೋಬಲ್ಲಿ ಮರೆತು ಮಲಗಿತ್ತು. ತಡಕಿ ತೆಗೆದ ರೊಡ್ಡಯ್ಯ ಮಕ್ಕಳ ಕೈಗಿತ್ತು ಕಡ್ಲೆ ಬುರುಗು ತಿನ್ನಲು ಮೌನವಾಗೇ ಕೈ ಸನ್ನೆ ಮಾಡಿದ. ಪಾವಲಿ ಕೈ ಸೇರಿದ್ದೇ ತಡ ಮಕ್ಕಳ ಮುಖದಲ್ಲಿ ಗೆಲುವು ಮೂಡಿ ಅಂಗಡಿ ಕಡೆ ಓಡಿದವು. ರೊಡ್ಡಯ್ಯ ತುಟಿ ಬಿಚ್ಚದೆ ಬಂಡೆಗಲ್ಲಂತೆ ಮೌನ ಮೈವೆತ್ತಂತೆ ಕುಂತಲ್ಲೆ ಕುಂತಿದ್ದ.
(ಕೃಪೆ: ತುಂಬೆ ಹೂವು, ಸಂ: ಡಾ. ಕರೀಗೌಡ ಬೀಚನಹಳ್ಳಿ, ಪ್ರ: ಕಿರಂ ಪ್ರಕಾಶನ, ಬೆಂಗಳೂರು)

ತುಂಬಾಡಿ ರಾಮಯ್ಯ(1954): ತುಂಬಾಡಿ ಗೊಲ್ಲಹಳ್ಳಿ ಗ್ರಾಮದಲ್ಲಿ ಜೂನ್ 1, 1954ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ತುಂಬಾಡಿ ಗೊಲ್ಲಹಳ್ಳಿ, ವಡ್ಡಗೆರೆಯಲ್ಲಿ. ಪ್ರೌಢ ಶಿಕ್ಷಣ ಕೊರಟಗೆರೆಯಲ್ಲಿ. ಬಿಎ ಪದವಿ ಪಡೆದದ್ದು ತುಮಕೂರು ಪ್ರಥಮದರ್ಜೆ ಕಾಲೇಜಿನಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿಯನ್ನು ಹಾಗೂ ತುಮಕೂರು ವಿದ್ಯೋದಯ ಕಾಲೇಜಿನಿಂದ ಕಾನೂನು ಪದವಿಯನ್ನು ಪಡೆದಿದ್ದಾರೆ. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತರಾದ ನಂತರ ವಕೀಲ ವೃತ್ತಿ ಆರಂಭಿಸಿ, ದೀನದಲಿತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿರತರಾಗಿದ್ದಾರೆ. ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡ ಇವರು, ಕನ್ನಡ – ರೈತ ಹೋರಾಟಗಳಲ್ಲಿ ಪಾಲ್ಗೊಂಡವರು. ಬೌದ್ಧ ತತ್ವಗಳ ಮತ್ತು ದಲಿತ ಆತ್ಮಚರಿತ್ರೆಗಳ ಗಂಭೀರ ಓದುಗರು. ಪ್ರಕಟಿತ ಕೃತಿಗಳು: ಮಣೆಗಾರ, ಮುತ್ತಿನಜೋಳ(ಆತ್ಮಕಥನ); ಓದೋ ರಂಗ, ಜಾಲ್ಗಿರಿ(ಕಾದಂಬರಿ); ದಲಿತ ಕಾರಣ(ಲೇಖನಗಳ ಸಂಗ್ರಹ); ಸ್ಪರ್ಶ(ವ್ಯಕ್ತಿ ಚಿತ್ರಗಳು); ಈ ನಾಡ ಮಣ್ಣಿನಲ್ಲಿ(ಕಿರು ಕಾದಂಬರಿ-ಅಚ್ಚಿನಲ್ಲಿ). ಮಣೆಗಾರ ಕೃತಿ ಅವರ ಬದುಕಿನ ಹಾದಿ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಬಿಂಬಿಸುವ ಪ್ರಮುಖ ಕೃತಿಯಾಗಿದೆ. ಅತ್ಯಂತ ಜನಪ್ರಿಯ ಹಾಗೂ ವಿಶಿಷ್ಟವಾದ ಆತ್ಮಕಥನವೆಂದು ಕನ್ನಡ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದೆ. ಇಂಗ್ಲಿಷಿಗೆ ಅನುವಾದಗೊಂಡಿದೆ. ಇವರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವಿಶೇಷ ಗೌರವ ಪ್ರಶಸ್ತಿ, ಡಾ. ಬಿ.ಆರ್. ಅಂಬೇಡ್ಕರ್ ಫಲೋಶಿಪ್, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಂಡಾರ್ಕರ್ಸ್ ಕಾಲೇಜಿನ ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.




